ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಕಾಲಾಧೀನರಾದ ಚತುರ ಕಲಾಸಂಘಟಕ ಇ. ಶ್ರೀನಿವಾಸ ಭಟ್ಟರು

ಲೇಖಕರು :
ತಾರಾನಾಥ ವರ್ಕಾಡಿ
ಗುರುವಾರ, ಸೆಪ್ಟೆ೦ಬರ್ 24 , 2015

ಮೊನ್ನೆ ಮೊನ್ನೆಯವರೆಗೆ ನಮ್ಮೊಂದಿಗಿದ್ದ ಇ. ಶ್ರೀನಿವಾಸ ಭಟ್ಟರು ಇನ್ನಿಲ್ಲ. ಆಕಾಶದಲ್ಲಿ ಶೋಭಿಸುವ ತಾರೆಯೊಂದು ಉಲ್ಕೆಯಾಗಿ ಉರುಳಿದಂತೆ! ಇದ್ದಕ್ಕಿದ್ದ ಹಾಗೆ ಎದ್ದು ಹೋದಂತೆ! ಸಾವು ಸಹಜ ದಿಟ. ಆದರೆ ಇ. ಭಟ್ಟರ ಈ ನಿರ್ಗಮನ ಅಸಹನೀಯ. ವೇದನೀಯ.

ಕಿನ್ನಿಗೋಳಿಯ ಶಾಂತಾರಾಮರಾಯರ ಅಂಗಡಿಯ ಜಗಲಿಯಲ್ಲಿ ಎಣ್ಣೆಯ ದೀಪದ ಬೆಳಕಿನಲ್ಲಿ ನಡೆಯುತ್ತಿದ್ದ ತಾಳಮದ್ದಳೆ ನಿಂತು ಹೋದಾಗ ಕೊಡೆತ್ತೂರು ಅನಂತಪದ್ಮನಾಭ ಉಡುಪರ ಸಹಕಾರದಿಂದ ಯುಗಪುರುಷ ಸಭಾಭವನದಲ್ಲಿ ಇವರು ಸ್ಥಾಪಿಸಿದ ಯಕ್ಷಲಹರಿ ಇತ್ತೀಚೆಗೆ ತನ್ನ ಬೆಳ್ಳಿಹಬ್ಬವನ್ನು ಆಚರಿಸಿತು. ಹೊಸಹೊಸ ಮಾತುಗಾರರನ್ನು ನುಡಿಮೇಳಕ್ಕೆ ಪರಿಚಯಿಸಿದ ಯಕ್ಷಲಹರಿ ಅನೇಕ ಹವ್ಯಾಸಿ ಅರ್ಥಧಾರಿಗಳಿಗೆ ವೇದಿಕೆ ಒದಗಿಸಿದೆ. ಇಪ್ಪತ್ತೈದು ವರುಷಗಳ ಕಾಲ ತಾಳಮದ್ದಳೆಗಳನ್ನು ನಡೆಸಿಕೊಂಡು ಬಂದ ಸಂಸ್ಥೆ ಮಾತಿನ ಕಲಾಪ್ರಕಾರವೊಂದರ ಇತಿಹಾಸದಲ್ಲೇ ಹೊಸ ಅಧ್ಯಾಯ ಬರೆದಿದೆ.

ಸುದೀರ್ಘ‌ ಕಾಲಪ್ರವಾಹದಲ್ಲಿ ಈ ಕಾಲಖಂಡ ತೀರಾ ಚಿಕ್ಕದಿರಬಹುದು. ಆದರೆ ಇ. ಶ್ರೀನಿವಾಸ ಭಟ್ಟರ ಸಾಧನೆ ಮಾತ್ರ ದೊಡ್ಡದು. ತಾಳಮದ್ದಳೆ ಸ್ಪರ್ಧೆ, ಕಾಲಮಿತಿ ತಾಳಮದ್ದಳೆ, ಮನೆಮನೆಗಳಲ್ಲಿ ತಾಳಮದ್ದಳೆ, ದೇವಸ್ಥಾನಗಳಲ್ಲಿ ತಾಳಮದ್ದಳೆ, ಕಲಾವಿದರಿಗೆ, ಕಲಾಪೋಷಕರಿಗೆ, ಯಕ್ಷಕವಿಗಳಿಗೆ ಸಮ್ಮಾನ ಮತ್ತು ಕಲಾವಿದರ ಮಕ್ಕಳ ವಿದ್ಯಾಭ್ಯಾಸಕ್ಕೆ ಧನಸಹಾಯ... ಹೀಗೆ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ನಡೆಸಿದ ಇ. ಭಟ್ಟರು ಚತುರ ಸಂಘಟಕರು.

ಎಳತ್ತೂರು ನಾರಾಯಣ ಭಟ್‌-ಕಮಲಮ್ಮ ದಂಪತಿಯ ಪುತ್ರ ಇ. ಶ್ರೀನಿವಾಸ ಭಟ್ಟರು ಭಾಗವತಿಕೆಯಿಂದ ಹಿಡಿದು ವೇಷದ ತನಕ ಎಲ್ಲಾ ಅಂಗಗಳನ್ನು ಅಭ್ಯಾಸ ಮಾಡಿದ ಸರ್ವಾಂಗ ಸಾಧಕ. ಅರ್ಥಗಾರಿಕೆಯಲ್ಲೂ ಪಳಗಿದವರು. ಕಿನ್ನಿಗೋಳಿಯ ದಾಮೋದರ ಶೆಟ್ಟಿಗಾರರಿಂದ ಯಕ್ಷಗಾನದ ಕುಣಿತ ಕಲಿತ ಭಟ್ಟರು 5ನೇ ತರಗತಿಯಲ್ಲಿರುವಾಗ "ಸೀತಾಪಹಾರ'ದ ಸೀತೆಯಾಗಿ ಮೊದಲ ಬಾರಿಗೆ ರಂಗವೇರಿದರು. ಅಂದು ಹಚ್ಚಿದ ಬಣ್ಣ ಇವರ ಮನವನ್ನೇ ಅಪಹರಿಸಿಬಿಟ್ಟಿತು. ಮುಂಡ್ಕೂರು ಮೇಳದ ಖಾಯಂ ಕಲಾವಿದರಾಗಿದ್ದ ಇವರಿಗೆ ಅಗರಿ ಯಕ್ಷಬ್ರಹ್ಮ ಪ್ರಶಸ್ತಿ, ಯಕ್ಷಪ್ರಭಾ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಸಮ್ಮೇಳನದ ಸಮ್ಮಾನ ಮುಂತಾದ ಪ್ರತಿಷ್ಠಿತ ಪ್ರಶಸ್ತಿ-ಸಮ್ಮಾನಗಳು ಸಂದಿವೆ.

ತಾಳಮದ್ದಳೆಯೆಂಬ ಮಾತಿನ ಕಲೆ ಒಂದು ಅದ್ಭುತ ರಂಗಸಾಹಿತ್ಯ. ಇದನ್ನು ಉಳಿಸಿ ಪೋಷಿಸಬೇಕಾದುದು ನಮ್ಮ ಕರ್ತವ್ಯ. ಈ ಕಲೆ ಆಧುನಿಕರಿಗೆ ಪ್ರಿಯವಾಗಬೇಕಾದರೆ ಇಲ್ಲಿ ಶಿಸ್ತು, ಸಮಯಪಾಲನೆ, ಕಾಲಮಿತಿ ಬೇಕಾಗುತ್ತದೆ ಎಂದು ಹೇಳುತ್ತಲೇ ಯಕ್ಷಲಹರಿ ಸಂಸ್ಥೆಯನ್ನು ತಾಳಮದ್ದಳೆಯ ಅನನ್ಯ ಕಲಾಪೋಷಕ ಸಂಸ್ಥೆಯಾಗಿ ರೂಪಿಸಿದ ಇ. ಭಟ್ಟರು ಎಲ್ಲವನ್ನೂ ದೇವರು ಮಾಡಿಸಿದ ಎಂದು ವಿನಮ್ರವಾಗಿ ಬಾಗುವ ನಿಗರ್ವಿ.

ಇ. ಶ್ರೀನಿವಾಸ ಭಟ್
ಜನನ ಸ್ಥಳ : ಎಳತ್ತೂರು ಗ್ರಾಮ, ಕಿನ್ನಿಗೋಳಿ
ಮೂಡಬಿದ್ರೆ, ಮ೦ಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ:
ಯಕ್ಷಲಹರಿ ಸ೦ಸ್ಥೆಯ ಮೂಲಕ ಕಳೆದ ೨೫ ವರುಷಗಲಿ೦ದ ನೂರಾರು ಹೊಸ್ ಮಾತುಗಾರರನ್ನು ಯಕ್ಷಗಾನಕ್ಕೆ ಪರಿಚಯಿಸಿದ ಮಹಾನ್ ಕಲಾ ಸ೦ಘಟಕ, ಮುಂಡ್ಕೂರು ಮೇಳ ಮತ್ತು ಇನ್ನಿತರ ಸಂಘ ಸಂಸ್ಥೆಗಳಲ್ಲಿ ಯಕ್ಷಗಾನ ಸ್ರೀ ಮತ್ತು ಪುರುಷ ಪಾತ್ರಧಾರಿಯಾಗಿ ಸಾಕಷ್ಟು ಪ್ರಸಿದ್ದಿಯನ್ನು ಪಡೆದಿದ್ದರು,
ಮರಣ ದಿನಾ೦ಕ : ಆಗಸ್ಟ್ 20, 2015
ನಿಷ್ಠುರವಾದಿಗಳಾಗಿದ್ದ ಇವರು ಮೃದುಭಾಷಿಯೂ ಆಗಿದ್ದರು. ಸಮಯಪಾಲನೆ ಮತ್ತು ಶಿಸ್ತು ಇವರ ಬದುಕಿನ ಮೂಲಮಂತ್ರ. ಮೂವತ್ತೇಳು ವರುಷಗಳ ಕಾಲ ಮಣಿಪಾಲ ಸಮೂಹ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದ ಇವರು ಯಕ್ಷಲಹರಿಯಲ್ಲಿ ತಮ್ಮ ಪ್ರಾಣವನ್ನೇ ಇರಿಸಿದ್ದರು. "ನನ್ನ ಅನಂತರವೂ ಯಕ್ಷಲಹರಿ ಉಳಿಯಬೇಕು' ಎಂಬುದು ಇವರ ಮಹದಾಸೆಯಾಗಿತ್ತು.

ಹಿರಿ-ಕಿರಿ-ಮರಿ ಅರ್ಥಧಾರಿಗಳನ್ನೆಲ್ಲ ಒಂದುಗೂಡಿಸಿ ತಾಳಮದ್ದಳೆಗಳನ್ನು ಸಂಯೋಜಿಸುತ್ತಿದ್ದ ಇ. ಶ್ರೀನಿವಾಸ ಭಟ್ಟರು ನೂರ್ಕಾಲ ಬಾಳಬೇಕಿತ್ತು. ಆದರೆ ಅವರ ಬದುಕಿನ ಉದ್ದೇಶ ಇಷ್ಟೇ ಆಗಿತ್ತು ಎಂಬುದು ಭಗವತ್ಸಂಕಲ್ಪ. ಸಾವೆಂಬುದು ಬದುಕಿನ ಕ್ರೂರಸತ್ಯ. ಒಂದಲ್ಲ ಒಂದು ದಿನ ಕಾಲಪುರುಷ ಎಲ್ಲರನ್ನೂ ಎಲ್ಲವನ್ನೂ ನುಂಗಿನೊಣೆಯುತ್ತಾನೆ. ಕಾಲಪುರುಷಂಗೆ ಗುಣಮನಮಿಲ್ಲಂಗಡಾ -ಕವಿ ಮುದ್ದಣನ ಮಾತಿದು.

ವ್ಯಕ್ತಿ ಎಷ್ಟು ಕಾಲ ಬದುಕಿದ್ದಾನೆ ಎಂಬುದು ಮುಖ್ಯವಲ್ಲ. ಬದುಕಿದ್ದಷ್ಟು ಕಾಲ ಏನು ಮಾಡಿದ್ದಾನೆ ಎಂಬುವುದೇ ಮುಖ್ಯ. ಶ್ರೀನಿವಾಸ ಭಟ್ಟರು ಬಹಳ ಕಾಲ ಬದುಕಲಿಲ್ಲ. ಆದರೆ ಬಹಳ ಕೆಲಸ ಮಾಡಿದ್ದಾರೆ. ಯಕ್ಷಲಹರಿಯಲ್ಲಿ ಅನೇಕ ಹೊಸ ಪ್ರತಿಭೆಗಳ ಪರಿಚಯವಾಗಿದೆ. ತಾಳಮದ್ದಳೆಯೆಂಬ ಮಾತಿನ ಕಲೆಯ ವ್ಯಾಪಕ ಪ್ರಚಾರವಾಗಿದೆ. ಇಂದು ಎಲ್ಲೆಂದರಲ್ಲಿ ನಡೆಯುತ್ತಿರುವ ತಾಳಮದ್ದಳೆಗೆ ಸ್ಫೂರ್ತಿ ಪ್ರಾಯಃ ಕಿನ್ನಿಗೋಳಿಯ ಯಕ್ಷಲಹರಿಯೆಂದರೆ ತುಟಿಮೀರಿದ ಮಾತಾಗದು. ಆಶುಸಂವಾದ, ವಿದ್ವದ್ವಲಯದ ಸಮಾಗಮ, ಸಾಮಾಜಿಕ ಸಂದೇಶ ನೀಡುವ ರಂಗಸಾಹಿತ್ಯವೆನಿಸಿದ ತಾಳಮದ್ದಳೆಯೆಂಬ ಮಾತಿನಕಲೆಯ ಪೋಷಣೆಗಾಗಿ ಇಪ್ಪತ್ತೈದು ವರುಷಗಳು ದುಡಿದ ಇ. ಶ್ರೀನಿವಾಸ ಭಟ್ಟರು ಸದಾ ಸ್ಮರಣೀಯರು.

ಕಿನ್ನಿಗೋಳಿ ಲಯನ್ಸ್ ಕ್ಲಬ್, ಮಣಿಪಾಲ ಸಮೂಹ ಸಂಸ್ಥ್ಜೆಗಳ ಮಣಿಪಾಲ್ ಪೈನೆನ್ಸ್ ನಲ್ಲಿ ಪ್ರಬಂಧಕರಾಗಿ ದುಡಿದಿದ್ದರು, ಮುಂಡ್ಕೂರು ಮೇಳ ಮತ್ತು ಇನ್ನಿತರ ಸಂಘ ಸಂಸ್ಥೆಗಳಲ್ಲಿ ಯಕ್ಷಗಾನ ಸ್ರೀ ಮತ್ತು ಪುರುಷ ಪಾತ್ರಧಾರಿಯಾಗಿ ಸಾಕಷ್ಟು ಪ್ರಸಿದ್ದಿಯನ್ನು ಪಡೆದಿದ್ದರು, ಇವರು ಮಗಳು ಟಿವಿ ನಿರೂಪಕಿ ದೀಪ್ತಿ ಬಾಲಕೃಷ್ಣ ಭಟ್ , ಪತ್ನಿ ಪದ್ಮಾವತಿ ಶಿಕ್ಷಕಿ ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ,

ತುಸುಬೇಗನೆ ಕಾಲನ ಕೈಗೆ ಸಿಕ್ಕಿಬಿಟ್ಟರೆಂದು ಭಾಸವಾಗುವಂತೆ ತಮ್ಮ 62ನೇ ವಯಸ್ಸಿನಲ್ಲಿ ಅನೂಹ್ಯಲೋಕ ಸೇರಿದ ಇ. ಭಟ್ಟರು ಬಾಳಿನ ಅನಿಶ್ಚಿತತೆಗೆ ಜ್ವಲಂತ ನಿದರ್ಶನವಾದರು. ಕಾಲನನ್ನು ಎದುರಿಸಲು ಅಸಹಾಯಕರಾದ ನಮ್ಮ ಮುಂದಿರುವ ದಾರಿ ಕಂಬನಿ ಸುರಿಸುವುದು ಮಾತ್ರ.

****************
ಕೃಪೆ : udayavani


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
     ತಾಜಾ ಲೇಖನಗಳು
   
  ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
  ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
  ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
   
  © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ