ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಬಂಟ ಪ್ರತಿಷ್ಠಾನ ಪ್ರಶಸ್ತಿ ಪುರಸ್ಕೃತ, ಬಡಗಿನ ಯಕ್ಷ ಮಂಜುನಾಥ ಕೊಠಾರಿ

ಲೇಖಕರು :
ಭಾಸ್ಕರ ರೈ ಕುಕ್ಕುವಳ್ಳಿ
ಶುಕ್ರವಾರ, ಒಕ್ಟೋಬರ್ 23 , 2015

ಕಲೆಗೆ ಜಾತಿಯಿಲ್ಲ; ಜಾತಿಯ ಮಾನದಂಡವನ್ನಿಟ್ಟು ಕಲಾವಿದನನ್ನು ಅಳೆಯುವುದೂ ಸರಿಯಲ್ಲ. ಕಲಾವಿದರಿಗಾಗಿ ಕೊಡ ಮಾಡುವ ಪ್ರಶಸ್ತಿ-ಪುರಸ್ಕಾರಗಳಲ್ಲಿ ಗುಣಾತ್ಮಕತೆ ಮತ್ತು ಅರ್ಹತೆ ಗಳನ್ನೇ ಪರಿಗಣಿಸಿದಾಗ ಅವುಗಳ ಘನತೆ- ಮೌಲ್ಯ ತಾನಾಗಿ ವೃದ್ಧಿಯಾಗುತ್ತದೆ. ಅದರಲ್ಲಿಯೂ ನಗದು ಪುರಸ್ಕಾರಗಳ ಸಂದರ್ಭದಲ್ಲಿ ಅರ್ಹತೆಯ ಜತೆಗೆ ಆವಶ್ಯಕತೆಯನ್ನೂ ಲೆಕ್ಕ ಹಾಕಬೇಕಾಗುತ್ತದೆ.

ಈ ನಿಟ್ಟಿನಲ್ಲಿ ಮಂಗಳೂರಿನ ಜಾಗತಿಕ ಬಂಟ ಪ್ರತಿಷ್ಠಾನವು ಡಾ| ಡಿ.ಕೆ. ಚೌಟ ದತ್ತಿ ನಿಧಿಯ ಮೂಲಕ ಯಕ್ಷಗಾನಕ್ಕಾಗಿ ಮೀಸಲಿರಿಸಿದ ವಾರ್ಷಿಕ ಪ್ರಶಸ್ತಿಯು ಕಳೆದ ಏಳೆಂಟು ವರ್ಷಗಳಿಂದ ಯೋಗ್ಯ ಕಲಾವಿದರಿಗೇ ತಲುಪುತ್ತಿದೆ ಎನ್ನಬಹುದು. ಇದೀಗ ಈ ಪ್ರಶಸ್ತಿಗೆ ಆಯ್ಕೆಯಾಗಿರುವವರು ಬಡಗುತಿಟ್ಟಿನ ಹಾಲಾಡಿ ಮೇಳದ ಪ್ರಮುಖ ವೇಷಧಾರಿ ಮಂಜುನಾಥ ಕೊಠಾರಿ.

ಬಾಲ್ಯ, ಶಿಕ್ಷಣ ಹಾಗೂ ಕಲಾಸೇವೆ

ಉಡುಪಿ ಜಿಲ್ಲೆಯ ಬಾಕೂರು ಮುತ್ತ ಕೊಠಾರಿ ಮತ್ತು ಗಿರಿಜಾ ಕೊಠಾರಿಯವರ ಪುತ್ರ ಮಂಜುನಾಥ ಕೊಠಾರಿ ಜನಿಸಿದ್ದು 1967ರಲ್ಲಿ. ತನ್ನ ತಂದೆಯ ಮನೆ ಕುಂದಾಪುರದ ನಾಯ್ಕನಕಟ್ಟೆಯಲ್ಲಿ ಪಿಯುಸಿ ವರೆಗಿನ ವ್ಯಾಸಂಗ ಪೂರೈಸಿ, ಬಳಿಕ ಅವರು ಯಕ್ಷಗಾನದತ್ತ ಹೊರಳಿದರು. 1992ರಲ್ಲಿ ಗುರು ಹೆರಂಜಾಲು ವೆಂಕಟರಮಣ ಗಾಣಿಗರಲ್ಲಿ ನಾಟ್ಯಾಭ್ಯಾಸ ಮಾಡಿ ಯಕ್ಷಗಾನ ವ್ಯವಸಾಯದಲ್ಲಿ ತೊಡಗಿಕೊಂಡರು. ಅವರು ಪ್ರಥಮವಾಗಿ ಗೆಜ್ಜೆಕಟ್ಟಿದ್ದು ಬಡಗಿನ ಕಳುವಾಡಿ ಮೇಳದಲ್ಲಿ. ಆಮೇಲೆ ಬಗ್ವಾಡಿ, ಗೋಳಿಗರಡಿ, ಸೌಕೂರು ಮೇಳಗಳಲ್ಲಿ ತಿರುಗಾಟ ನಡೆಸಿ ಖ್ಯಾತಿ ಗಳಿಸಿದರು. ಕಳೆದ ಹನ್ನೆರಡು ವರ್ಷಗಳಿಂದ ಪಳ್ಳಿ ಕಿಶನ್‌ ಹೆಗ್ಡೆಯವರ ಯಜಮಾನಿಕೆಯ ಹಾಲಾಡಿ ಮೇಳದಲ್ಲಿ ಪ್ರಮುಖ ಕಲಾವಿದರಾಗಿ ಜನಪ್ರಿಯರಾದರು. ಅಲ್ಲದೇ ಅದೇ ಮೇಳದಲ್ಲಿ ಎಂಟು ವರ್ಷ ಪ್ರಬಂಧಕರಾಗಿ ಯಜಮಾನರ ಪ್ರತಿನಿಧಿಯಾಗಿಯೂ ದುಡಿದ ವಿಶಾಲವಾದ ಅನುಭವ ಅವರದು.

ಸ್ತ್ರೀ-ಪುರುಷ ಪಾತ್ರಗಳ ಪ್ರಸಿದ್ಧಿ

ಮಂಜುನಾಥ ಕೊಠಾರಿ ಯವರು ಬಡಗು ತಿಟ್ಟು ಯಕ್ಷಗಾನದ ಸ್ತ್ರೀ-ಪುರುಷ ಪಾತ್ರಗಳೆರಡಲ್ಲೂ ಪ್ರಸಿದ್ಧರು. ಅವರ ಮೀನಾಕ್ಷಿ, ಚಿತ್ರಾಂಗದೆ, ದ್ರೌಪದಿ, ದೇವಿ, ದಾಕ್ಷಾಯಿಣಿ, ದಮಯಂತಿ ಮುಂತಾದ ಸ್ತ್ರೀ ಭೂಮಿಕೆಗಳು ಜನಾಕರ್ಷಣೆ ಗಳಿಸಿದ್ದವು. ವೀರರಸ ಪ್ರಧಾನವಾದ ಕಸೆ ಸ್ತ್ರೀ ವೇಷಗಳಲ್ಲಿ ಅವರಿಗೆ ಭಾರೀ ಯಶಸ್ಸು ಲಭಿಸಿದೆ.
ಮಂಜುನಾಥ ಕೊಠಾರಿ
ಜನನ : 1967
ಜನನ ಸ್ಥಳ : ಬಾಕೂರು, ನಾಯ್ಕನಕಟ್ಟೆ
ಕುಂದಾಪುರ ತಾಲೂಕು
ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ:
ಕಳುವಾಡಿ, ಬಗ್ವಾಡಿ, ಗೋಳಿಗರಡಿ, ಸೌಕೂರು ಹಾಗೂ ಕಳೆದ ಹನ್ನೆರಡು ವರ್ಷಗಳಿಂದ ಹಾಲಾಡಿ ಮೇಳದಲ್ಲಿ ಪ್ರಮುಖ ಕಲಾವಿದರಾಗಿ ಸ್ತ್ರೀ-ಪುರುಷ ಪಾತ್ರಗಳೆರಡಲ್ಲೂ ಕಲಾಸೇವೆ.
ಪೀಠಿಕೆ ಹಾಗೂ ಇದಿರು ವೇಷಗಳಲ್ಲೂ ಮಂಜುನಾಥ ಕೊಠಾರಿ ಪಳಗಿದ್ದಾರೆ. ದೇವೇಂದ್ರ, ಅರ್ಜುನ, ಭೀಮ, ಶಲ್ಯ ಇತ್ಯಾದಿ ಪುರುಷ ಪಾತ್ರಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿದ ಖ್ಯಾತಿ ಅವರಿಗಿದೆ. ತಿದ್ದಿದ ನಾಟ್ಯ, ಧ್ವನಿಪೂರ್ಣ ಮಾತು, ಹಿತವಾದ ಅಭಿನಯ ಕೌಶಲಗಳಿಂದ ಕೊಠಾರಿಯವರು ಗಮನ ಸೆಳೆಯುತ್ತಾರೆ. ಪ್ರತೀ ಪಾತ್ರದಲ್ಲೂ ಸ್ವಂತಿಕೆಯ ಛಾಪು ರಂಗದಲ್ಲಿ ವೇಷಧಾರಿಯಾಗಿ ಅವರನ್ನು ಗೆಲ್ಲಿಸಿದೆ.

ಅನಾರೋಗ್ಯ ಬಾಧಿಸಿತು

ಪತ್ನಿ ಲತಾ ಹಾಗೂ ನಮಿತಾ, ನಮ್ರತಾ ಎಂಬ ಇಬ್ಬರು ಹೆಣ್ಮಕ್ಕಳಿರುವ ಪುಟ್ಟ ಸಂಸಾರ ಕೊಠಾರಿಯವರದು. ಆದರೆ ಕಾಲಪುರುಷಂಗೆ ಗುಣಮನಮಿಲ್ಲಂಗಡಾ ಎಂಬ ಮುದ್ದಣನ ಮಾತಿನಂತೆ ಇನ್ನೂ ಐವತ್ತರ ಗಡಿದಾಟದ ಮಂಜುನಾಥ ಕೊಠಾರಿಯವರಿಗೆ ತೀವ್ರತರ ಅನಾರೋಗ್ಯ ಬಾಧಿಸತೊಡಗಿದೆ. ಪಾದರಸದಂತೆ ರಂಗಸ್ಥಳದಲ್ಲಿ ಪುಟಿಯುತ್ತಿದ್ದ ಪ್ರತಿಭಾವಂತ ಕಲಾವಿದ ಕಳೆದ ತಿರುಗಾಟವನ್ನೂ ಪೂರ್ತಿಗೊಳಿಸಲಾರದೆ ನೇಪಥ್ಯಕ್ಕೆ ಸರಿದಿದ್ದಾರೆ. ಬಡಕುಟುಂಬದವರಾದ ಅವರಿಗೆ ಚಿಕಿತ್ಸೆಗಾಗಿ ಕಲಾಭಿಮಾನಿಗಳ ನೆರವಿನ ಅಗತ್ಯವಿದೆ.

ಈ ಹಿನ್ನೆಲೆಯಲ್ಲೇ ಜಾಗತಿಕ ಬಂಟ ಪ್ರತಿಷ್ಠಾನವು ಅವರನ್ನು ಪ್ರಶಸ್ತಿಗೆ ಆರಿಸಿದೆ. ಪ್ರಶಸ್ತಿಯು ರೂ. 15,000 ನಗದು ಮತ್ತು ಫ‌ಲಕ- ಸ್ಮರಣಿಕೆಗಳನ್ನೊಳಗೊಂಡಿದೆ.

****************


ಕೃಪೆ : udayavani


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
     ತಾಜಾ ಲೇಖನಗಳು
   
  ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
  ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
  ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
   
  © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ