ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ವರ್ತಮಾನಕ್ಕೆ ಸ್ಪಂದಿಸಿದ ಯಕ್ಷಗಾನದ ಅಭಿಮನ್ಯು

ಲೇಖಕರು :
ಜಿ. ಎನ್‌. ಅಶೋಕವರ್ಧನ
ಗುರುವಾರ, ಫೆಬ್ರವರಿ 4 , 2016

ಗುರು ಬನ್ನಂಜೆ ಸಂಜೀವ ಸುವರ್ಣರು ಈಚೆಗೆ ದೆಹಲಿ ನ್ಯಾಶನಲ… ಸ್ಕೂಲ… ಆಫ್ ಡ್ರಾಮಾದ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸುತ್ತಿದ್ದಾರೆಂದು ಕೇಳಿದ್ದೆ. ನನಗೇನೂ ಆಶ್ಚರ್ಯವಾಗಿರಲಿಲ್ಲ. ವಾರದ ಯಾವುದೇ ದಿನ, ದಿನದ ಯಾವುದೇ ಸಮಯದಲ್ಲೂ ಯಕ್ಷಗಾನ ಬಯಸಿ ಬರುವ ಜೀವದ ಕುಲ, ಶೀಲ, ವಿತ್ತ, ವಿದ್ಯಾ, ವಯೋ, ವಿಕ್ರಮಂಗಳನ್ನು ನೋಡುತ್ತಿರದೆ ತನಗೊಲಿದ ಯಕ್ಷ-ಚಿರ-ಕನ್ನಿಕೆಯನ್ನು ಧಾರೆಯೆರೆವ ಜೀವ ಈ ಸಂಜೀವ. ಅವರು ಇತ್ತೀಚೆಗೆ ಚರವಾಣಿಸಿ, ಜನವರಿ 21 ಮತ್ತು 23ರಂದು ಹೊಸ ನಮೂನೆಯ ಅಭಿಮನ್ಯು ವಧೆಯ ಪ್ರದರ್ಶನ ಇದೆ ಎಂದದ್ದೇ ನನಗೆ ಸಾಕಾಯ್ತು.

ಈ ಪ್ರದರ್ಶನ ತರಬೇತಿಗಾಗಿ ಸಂಜೀವರು ಇಡೀ ತಂಡವನ್ನು ಉಡುಪಿಗೇ ಕರೆಸಿಕೊಂಡು ತರಬೇತಿ ನೀಡಿದ್ದರು. ಉಡುಪಿ ಯಕ್ಷಗಾನ ಕೇಂದ್ರ ಬರಿಯ ಯಕ್ಷಗಾನಕ್ಕಲ್ಲ, ಆಧುನಿಕ ಗುರುಕುಲವೇ ಆಗಿದೆ. ಊಟ-ವಸತಿಯೊಡನೆ ಲೋಕವಿದ್ಯೆ ಹಾಗೂ ಯಕ್ಷವಿದ್ಯೆಯನ್ನೂ ಇದು ಕೊಡುತ್ತಿದೆ. ಉಡುಪಿಯಲ್ಲಿ ಎನ್‌ಎಸ್‌ಡಿ ತಂಡವನ್ನು ಸಂಜೀವರು ದಿನದ ಹದಿಮೂರು ಗಂಟೆ ದುಡಿಸಿದರೂ ತಾವು ದಣಿಯದೇ ಪ್ರದರ್ಶನದ ಆಯೋಜನೆ ನಡೆಸಿದ್ದರು. ಅದು, ಸುಮಾರು ಎರಡೂವರೆ ಗಂಟೆಯ ಪ್ರದರ್ಶನದ ಕೊನೆಯಲ್ಲಿ ಸಾರ್ಥಕ, ಅದ್ಭುತ, ಇಂಥದ್ದು ಈವರೆಗೆ ನೋಡಿಲ್ಲ ಎನ್ನುವ ಅನುಭವವನ್ನು ಪ್ರೇಕ್ಷಕರಲ್ಲಿ ಮೂಡಿಸಿತು.

ಯಕ್ಷಗಾನಕ್ಕೆ ರಾತ್ರಿಯೇ ಸೂಕ್ತ. ಅದು ನೆಳಲು-ಬೆಳಕುಗಳ ಆಟ ಎನ್ನುವ ಕಲ್ಪನೆಯ ಮುನ್ನೆಲೆಯಲ್ಲಿ ಮೊದಲು ನನಗೆ ಕಂಡ ಒಂದು ವೈಫ‌ಲ್ಯ ವನ್ನು ಹೇಳಿಬಿಡುತ್ತೇನೆ. ಈ ಪ್ರಯೋಗ ನಾಟಕ ಶಾಲೆಯ ಪರಿಣಿತರ ಸಂಗದ್ದೂ ಹೌದು. ಸಹಜವಾಗಿ ಅವರಿಂದ ಪ್ರದರ್ಶನಕ್ಕೆ ವಿಶಿಷ್ಟ ಬೆಳಕಿನ ಸಂಯೋಜನೆಯೂ ಆಗಿತ್ತು. ಆದರೆ ಯಕ್ಷಗಾನದ ಆಹಾರ್ಯವನ್ನು ಗಮನದಲ್ಲಿಟ್ಟುಕೊಂಡು ಕೇವಲ ನಾಟಕದ ಗ್ರಹಿಕೆಯಲ್ಲಿ ಪ್ರಯೋಗಿಸಿದ್ದು ಅಷ್ಟಾಗಿ ಸರಿ ಹೊಂದಲಿಲ್ಲ ಎಂದೇ ನನಗನ್ನಿಸಿತು. ಯಕ್ಷಗಾನದ ಜನಪದ ಹಿನ್ನೆಲೆಯನ್ನು ಯಾರೂ ಪೂರ್ಣವಾಗಿ ಅಲ್ಲಗಳೆಯರು. ಅದು ಸಹಜವಾಗಿ ಮಂಕುದೀಪದಲ್ಲೂ (ದೀವಟಿಗೆ ಅನ್ನಿ) ಉಜ್ವಲ ರಾಗರಂಗುಗಳನ್ನು ಉದ್ದೀಪಿಸುವ ಪ್ರಕಾರ. ಅದಕ್ಕೆ ಇಲ್ಲಿ ಅಳವಡಿಸಿದ ದೀಪಗಳು ತುಸು ಅದ್ದೂರಿಯವೆನ್ನಿಸಿ ಕಣ್ಣು ಕೋರೈಸುತ್ತಿತ್ತು, ರಸ ಪ್ರಚೋದಕವಾಗಬೇಕಾದ ಬಣ್ಣಗಳು ಬೆಳ್ಕರಿಸುವುದೂ ಇತ್ತು.

ಬಾಲಗೋಪಾಲರ ಕಲಾಪಗಳಿಗೆ ತಾಳ ಹಿಡಿದು ಯಕ್ಷ-ಗಾಯನ ನಡೆಸಿದ್ದು ಎನ್‌ಎಸ್‌ಡಿಯ ಓರ್ವ ವಿದ್ಯಾರ್ಥಿನಿ. ಆ ಎರಡು ಮತ್ತು ಇಡೀ ಪ್ರಸಂಗದ ಪದ್ಯ ಹಾಗೂ ಸಭಾವಂದನವೂ ಸೇರಿದಂತೆ ಸಂಭಾಷಣೆಯ ಗದ್ಯವೆಲ್ಲ ಚೊಕ್ಕ ಹಿಂದಿಯವೇ ಆಗಿದ್ದುವು. ಅನಂತರ ಭಾಗವತಿಕೆ ನಡೆಸಿದ ವಿದ್ಯಾರ್ಥಿನಿ ಇನ್ನೊಬ್ಟಾಕೆಯೊಡನೆ ಸೇರಿದಂತೆ ಬಂದ "ಚಂದಭಾಮಾ' ಮಾತ್ರ ಕನ್ನಡೇತರರಿಗೆ ಯಕ್ಷಗಾನದ ಮೂಲಭಾಷೆಯನ್ನು ನೆನಪಿಸುವ ಮಾದರಿಯಂತೆ ಕನ್ನಡದಲ್ಲೇ ಇತ್ತು. ಸಾಂಪ್ರದಾಯಿಕ ಪೂರ್ವ ರಂಗಗಳಲ್ಲಿ ಕಲಾವಿದರ ಅಪರಿಣತಿ ಜನಪದದ ಸೋಗಿನಲ್ಲಿ ಮುಖ ಮುಚ್ಚಿಕೊಳ್ಳುವು ದಿದೆ. ಆದರೆ ಇಲ್ಲಿ ಅವುಗಳ ಮುಖಮಾರ್ಜನ ನಡೆಸಿ, ಗುರುಬಲದಲ್ಲಿ ನಿಜ ಪ್ರಸಂಗದ ನಡೆ, ನುಡಿ ಮತ್ತು ಗಾಯನದ ಮಾದರಿಯೇ ಆಗಿ ಕಂಗೊಳಿಸಿತ್ತು.

ಪ್ರಸಂಗದ ನಡೆಯಲ್ಲಿ ಗಾಯನ ಮರುಕಳಿಸುತ್ತ ಭಜನೆಯಾಗಲಿಲ್ಲ. ಕಥನ ಭಾಗದಲ್ಲಿ ಗಾಯನ, ಸಾಹಿತ್ಯ ಸು#ಟವಾಗುವಂತೆ ಸ್ಪಷ್ಟ ಮತ್ತು ವಿರಳವಾಗಿರುತ್ತಿದ್ದುವು. ಭಾಷೆ ಹಿಂದಿಯಾದರೂ ಮೂಲ ಯಕ್ಷ-ಭಾವಪೋಷಕ ಮಟ್ಟುಗಳಲ್ಲೇ ವಿಳಂಬಿತ ಗತಿಯಲ್ಲಿ ವಿಸ್ತರಿಸುತ್ತಿದ್ದುದರಿಂದ ಅಭಿನಯದ ಕಲಾಕುಸುಮ ಕಮನೀಯವಾಗಿ ಅರಳುತ್ತಿತ್ತು. ಹಾಗೆ ಅಮೂರ್ತಕ್ಕೆ ಎಟುಕದ ಕಥಾ ನಿರೂಪಣೆಯ ಜವಾಬ್ದಾರಿಯನ್ನಷ್ಟೇ ಗದ್ಯ ಸಂಭಾಷಣೆಗಳು ನಿರ್ವಹಿಸುತ್ತಿದ್ದುವು. ಇಲ್ಲಿ ಮೂಲ ಬಯಲಾಟಗಳಲ್ಲಿ ಆಶು ಸಾಹಿತ್ಯದ ಹೆಸರಿನಲ್ಲಿ ಎಷ್ಟೋ ಬಾರಿ ವಿಜೃಂಭಿಸುವ ಅಸಂಬದ್ಧಗಳಿಗೆ ಅವಕಾಶವೇ ಇರಲಿಲ್ಲ. ಮಾತಿನ ಸಾಹಿತ್ಯ ಅನ್ಯವಿರಬಹುದು, ಆದರೆ, ನಾಟಕ ವಿದ್ಯಾರ್ಥಿಗಳೇ ಆದ್ದರಿಂದ ಆವೇಶ ಪಾತ್ರದವೇ ಆಗುವಂತೆ ಒಪ್ಪಿಸುತ್ತಿದ್ದದ್ದು ಹೃದ್ಯವೇ ಆಗುತ್ತಿತ್ತು.

ರಂಗದ ಎಡ ಪಾರ್ಶ್ವದ ನೆಲದಲ್ಲಿ ಸಾಂಪ್ರದಾಯಿಕ ಶಿಸ್ತಿನ ಹಿಮ್ಮೇಳ ಕುಳಿತಿತ್ತು. ಇವರಲ್ಲಿ ಪರಂಪರೆಯನ್ನು ಮೀರಿದ ಯಾವುದೇ ಹೆಚ್ಚಿನ ವಾದ್ಯಗಳಿರಲಿಲ್ಲ. ಭಾಗವತರು ಮಾತ್ರ ಇಬ್ಬರಿದ್ದರು. ಆದರೆ ವೃತ್ತಿಪರ ಮೇಳಗಳು ಪ್ರಸ್ತುತಪಡಿಸುವಂತೆ ಎಲ್ಲೂ ದ್ವಂದ್ವಗಳಿಲ್ಲದೆ, ರಸಪೋಷಕ ಎತ್ತುಗಡೆ, ಮುಂದುವರಿಕೆ ಮಾತ್ರ ಕಾಣುತ್ತಿತ್ತು. ನರ್ತನ ಮತ್ತು ರಂಗ ಚಲನೆಯ ವೈವಿಧ್ಯಮಯ ಪ್ರದರ್ಶನಾಂಗಣದಂತೇ ಇಡಿಯ ಪ್ರದರ್ಶನ ನಡೆಯಿತು. ಪ್ರಾರ್ಥನಾಪದ್ಯ, ಚೌಕಿಪೂಜೆ, ಶಿಸ್ತುಬದ್ಧ ನಾಟಕರಂಗಗಳು ಅಳವಡಿಸಿಕೊಂಡಿರುವ ನಿಯತಾಂತರದ ಮೂರು ಗಂಟೆಗಳಂತೇ ಮೂರು ಕೇಳೀ ಬಡಿತಗಳು ನೇರ ರಂಗ ಕ್ರಿಯೆಯನ್ನು ತೋರಲಿಲ್ಲವಾದರೂ ಪ್ರೇಕ್ಷಕ ಮನೋಭೂಮಿಕೆಯನ್ನು ಯಶಸ್ವಿಯಾಗಿ ಸಜ್ಜುಗೊಳಿಸಿದ್ದುವು. ಇದರ ಮುಂದುವರಿಕೆಯಾಗಿಯೇ ವೇಷಧಾರಿಗಳ ಪ್ರವೇಶ, ಕಲಾಪ ಹಾಗೂ ನಿರ್ಗಮನಗಳು ರೂಪಿತವಾಗಿದ್ದುವು. ಕೇವಲ ತೆರೆ ಹಿಡಿಯುವವರಿಗೂ ಇಲ್ಲಿ ಸಂದಭೋìಚಿತವಾಗಿ ಲಘು ನರ್ತನ, ಖಚಿತ ನಡೆಗಳು ಇದ್ದದ್ದು ಗಮನಾರ್ಹ. ಇಷ್ಟು ವಿವರಗಳ ಚಿಂತನೆಯ ಫ‌ಲವಾಗಿಯೇ ಪ್ರತಿ ಪಾತ್ರ ಅಥವಾ ಸಮೂಹದ ರಂಗಪ್ರವೇಶ, ಅವು ಕಥಾ ನಿರೂಪಣೆಯ ಅವಿಭಾಜ್ಯ ಅಂಗವಾಗಿ ತೋರ್ಪಡಿಸಿದ ರಂಗ ವಿನ್ಯಾಸಗಳು ಮತ್ತು ಪೂರ್ಣ ಕಣ್ಮರೆಯಾಗುವವರೆಗೂ ನಿರ್ಗಮನ ನಡೆಗಳು ಪ್ರತಿ ಬಾರಿಯೂ ವಿಶಿಷ್ಟವಾಗಿರುತ್ತಿದ್ದುವು. ಯಕ್ಷಇತಿಹಾಸದ ಪುಟ ಮಗುಚದವರು ಕ್ಷಣಿಕ ರೋಮಾಂಚನದಲ್ಲಿ ಈ ಕುರಿತು ಸಂಜೀವ ಸುವರ್ಣರನ್ನು ಪ್ರಶಂಸೆಯ ಕೊಳದಲ್ಲಿ ಮುಳುಗಿಸುವುದಿದೆ. ಆದರೆ, "ಇದನ್ನು ವೃತ್ತಿ ಮೇಳದ ಕಲಾವಿದರು ನೋಡಬೇಕು ಸಾರ್‌. ಹಿಂದಿನವರು ರೂಢಿಸಿದ್ದ ಈ ಕಲಾರತ್ನಗಳು ಅಗ್ಗದ ಜನಪ್ರಿಯತೆಯ ಓಟದಲ್ಲಿ ಕಳೆದು ಹೋಗಿವೆ. ನಾನು ಹೆಕ್ಕಿ ತಂದು ಕೊಳೆ ತೊಳೆದು ಯುಕ್ತ ಸ್ಥಾನಗಳಲ್ಲಿ ಅಳವಡಿಸಿದ್ದು ಮಾತ್ರ' ಎನ್ನುತ್ತಾರೆ ಸಂಜೀವ ಸುವರ್ಣ. ವಾಸ್ತವವಾಗಿ ಈ ಕೆಲಸಕ್ಕೆ ಅವರನ್ನು ಪ್ರಶಂಸಿಸಬೇಕು.

ಈ ಹಲವು ಭಾವಗಳ ಶೃಂಗಮೇಳದಲ್ಲಿ ಪ್ರತಿ ಸನ್ನಿವೇಶದ ಕೊನೆಯಲ್ಲೂ ಚದುರಿದಂತೆ ಪ್ರೇಕ್ಷಕರ ಕರತಾಡನವಿರುತ್ತಿತ್ತು. ಅದು ಪ್ರಸಂಗದ ಕೊನೆಯಲ್ಲಿ ಅಭಿಮನ್ಯುವಿನ ದಾರುಣ ವಧೆಯಾಗುವಾಗ ಉತ್ತುಂಗಕ್ಕೇರಿದ್ದು ನಿಸ್ಸಂದೇಹವಾಗಿ ಪ್ರದರ್ಶನದ ಯಶಸ್ಸಿಗೆ, ಬನ್ನಂಜೆ ಸಂಜೀವ ಸುವರ್ಣರ ಸಾಧನೆಗೆ.

ಅಭಿಮನ್ಯು ವಧೆಯ ಯಕ್ಷಕಥನವನ್ನು ಶಿವರಾಮ ಕಾರಂತರು ರಂಗದ ಮೇಲೆ ಬ್ಯಾಲೆಯಾಗಿ ಅದ್ಭುತವಾಗಿ ತಂದಿದ್ದರು. ಕಾರಂತರು ಯಕ್ಷಗಾನದ ಎಷ್ಟೊಂದು ಸಾಧ್ಯತೆಗಳನ್ನು ಬಳಸಿದ್ದರು ಎಂದು ಬೆರಗಿನಿಂದ ಹೇಳಿಕೊಳ್ಳುವ ಬನ್ನಂಜೆ ಸಂಜೀವ ಸುವರ್ಣರು, ಆ ರಂಗರೂಪ ವನ್ನು ನೇರವಾಗಿ ಅನುಸರಿಸುವುದರಿಂದ ಏನೂ ಸಾಧಿಸಲಾಗದು, ಅದನ್ನು ಭಿನ್ನವಾಗಿ ಮರುರೂಪಿಸುವುದು ಮತ್ತು ರಂಗಸಾಧ್ಯತೆಗಳನ್ನು ವಿಸ್ತರಿಸುವುದೇ ಕಾರಂತರಿಗೆ ಸಲ್ಲಿಸಬಹುದಾದ ನಿಜವಾದ ಗೌರವ ಎಂದು ಭಾವಿಸಿದವರು. ಹಾಗಾಗಿ, ಹೊಸದಾದ "ಚಕ್ರವ್ಯೂಹ'ವನ್ನು ಕಟ್ಟಬೇಕೆಂದು ಕನಸು ಕಾಣುತ್ತಲೇ ಇದ್ದರು. ತಮ್ಮ ಸಂಸ್ಥೆಯ "ಯಕ್ಷರಂಗ'ದ ಕಲಾವಿದ ರಿಗೂ ಈ ಕನಸಿನ ಕಥನವನ್ನು ನಿರ್ದೇಶಿಸುವುದು ಸಂಜೀವರಿಗೆ ಸಾಧ್ಯ ವಾಗಿರಲಿಲ್ಲ. ಈಗ, ದಿಲ್ಲಿಯ ಎನ್‌ಎಸ್‌ಡಿ ವಿದ್ಯಾರ್ಥಿಗಳಿಂದ ವಿಶಿಷ್ಟವಾದ "ಅಭಿಮನ್ಯು ಕಾಳಗ'ವನ್ನು ಪ್ರಸ್ತುತಪಡಿಸುವಲ್ಲಿ ಸಫ‌ಲರಾಗಿದ್ದಾರೆ.

"ಚಕ್ರವ್ಯೂಹ' ಪ್ರಸಂಗವನ್ನು ಬರೆದವರು ದೇವಿದಾಸ ಕವಿಗಳು. ಅದೇ ಕವಿಗಳ ಪದ್ಯಸಾಹಿತ್ಯವನ್ನು ಕಾರಂತರು ಕೂಡ ತಮ್ಮ ರಂಗಪ್ರಯೋಗಕ್ಕೆ ಬಳಸಿದ್ದರು. ದೇವಿದಾಸ ಕವಿಯ ಪದ್ಯಸಾಹಿತ್ಯವನ್ನು ಮತ್ತು ಅದನ್ನು ಅನುಸರಿಸಿ ನಿರೂಪಿಸಲಾದ ಅರ್ಥಸಾಹಿತ್ಯವನ್ನು ಕವಯಿತ್ರಿ ಮಾಧವಿ ಭಂಡಾರಿಯವರು ಸುಲಲಿತವಾಗಿ ಹಿಂದಿಗೆ ಅನುವಾದಿಸಿದ್ದಾರೆ. ಭಾರತದ ಹಲವೆಡೆ ಈ ಯಕ್ಷಗಾನ ಪ್ರದರ್ಶನಗಳನ್ನು ನೀಡಬೇಕಾಗಿರುವುದರಿಂದ ಹಿಂದಿಯಲ್ಲಿ ಅಳವಡಿಸುವುದು ಅನಿವಾರ್ಯವಾಗಿದೆ. ಕಾರಂತರ ಪ್ರಯೋಗದಲ್ಲಿ ನೀಲಾವರ ರಾಮಕೃಷ್ಣಯ್ಯ ಅವರ ಭಾಗವತಿಕೆಗೆ ಸ್ವತಃ ಬನ್ನಂಜೆ ಸಂಜೀವರು ಅಭಿಮನ್ಯು ಪಾತ್ರವನ್ನು ಮಾಡಿದ್ದರು. ಹಾಗಾಗಿ, ಇಡೀ ರಂಗಪ್ರದರ್ಶನದ ನಡೆಯ ಸೂಕ್ಷ್ಮಗಳನ್ನು ಬಲ್ಲವರಾಗಿ, ಕಾರಂತರು "ಸಂಪ್ರದಾಯವನ್ನು ಸಮಕಾಲೀನ ದೃಷ್ಟಿಯಲ್ಲಿ ' ನೋಡುವ ಬಗೆಯನ್ನು ಅವರು ಹತ್ತಿರದಿಂದ ಕಂಡಿ ದ್ದರು. ಉದಾಹರಣೆಗೆ, ತ್ರಿವುಡೆ ತಾಳವನ್ನು "ತಾ ತೈ ತಕ ಧಿತ್ತ ದಧಿ ಗಿಣ ತೊ... ತ್ತ ತ್ತ ತ್ತ' ಎಂಬ ಬಾಯಿತಾಳದಲ್ಲಿ ಹೊಂದಿಸಿ ಅದಕ್ಕೆ ಹೆಜ್ಜೆಗಾರಿಕೆಯನ್ನು ರೂಪಿಸಿದ ರೀತಿಯನ್ನು ನೆನಪಿಸಿಕೊಳ್ಳುತ್ತ ಸಂಜೀವ ಸುವರ್ಣರು, ಪ್ರತಿತಾಳದಲ್ಲಿಯೂ ಇಂಥ ಸಾಧ್ಯತೆಗಳನ್ನು ಕಾಣಿಸುವ ಪ್ರಯತ್ನವನ್ನು ಈ ಪ್ರದರ್ಶನದಲ್ಲಿ ಮಾಡಿದ್ದಾರೆ. ಜತೆಗೆ, ತೆರೆ ಎಂಬ ನಿರ್ಜೀವ ಪರಿಕರವನ್ನು ಲಯಬದ್ಧವಾಗಿ ಬಳಸಿ ದೃಶ್ಯಕ್ಕೆ ಜೀವಂತಿಕೆ ತುಂಬುವ ಪ್ರಯತ್ನ ಮಾಡಿದ್ದಾರೆ. ಯಕ್ಷಗಾನದಲ್ಲಿ ಶಬ್ದಗಳಂತೆಯೇ ಮೌನವನ್ನು ಪರಿಣಾಮಕಾರಿಯಾಗಿ ಬಳಸಬೇಕು ಎಂಬ ತಮ್ಮ ನಿಲುವಿಗೆ ಅನುಗುಣವಾಗಿ ಈ ರಂಗರೂಪವನ್ನು ನಿರ್ದೇಶಿಸಿದ್ದಾರೆ. ಮಂದಗತಿಯ ಅಂದವನ್ನು ಕಾಣಿಸಿದ್ದಾರೆ. ಯಕ್ಷಗಾನದ ಬಗ್ಗೆ ಪೂರ್ವಾನುಭವವೇ ಇಲ್ಲದ ತಾಜಾ ವಿದ್ಯಾರ್ಥಿಗಳು ಸಿಕ್ಕಿದ ಕಾರಣ ಈ ಪ್ರದರ್ಶನವನ್ನು ಹೊಸದಾಗಿ ರೂಪಿಸುವುದು ಸಾಧ್ಯವಾಗಿದೆ ಎನ್ನುತ್ತಾರೆ ಬನ್ನಂಜೆ ಸಂಜೀವ ಸುವರ್ಣ.

ಅನ್ಯ ಭಾಷೆಗೆ ಯಕ್ಷಗಾನವನ್ನು ಹೊಂದಿಸುವ ಸಮಸ್ಯೆ, ಪ್ರಯೋಗಾ ತ್ಮಕ ಅಂಶಗಳ ಅಳವಡಿಕೆ, ಕರಾವಳಿಯ ಮಣ್ಣಿನ ಕಲೆಯ "ಸ್ವ'ಭಾವ ಮತ್ತು ಉತ್ತರಭಾರತೀಯ ವಿದ್ಯಾರ್ಥಿಗಳ ಮನೋಧರ್ಮದ ಅಂತರ- ಇಂಥ ಕಾರಣಗಳಿಗಾಗಿ ಈ ಪ್ರದರ್ಶನವನ್ನು ಯಕ್ಷನಾಟಕವೆಂದೇ ಕರೆಯಲಾಗಿದೆ.
***********


ಕೃಪೆ : udayavani


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ