ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಪತಂಗ ಚಲನೆಯ ರಜತ ಚಂದ್ರ

ಲೇಖಕರು :
ರಾಜ್ ಕುಮಾರ್
ಮ೦ಗಳವಾರ, ಫೆಬ್ರವರಿ 9 , 2016

ವಾರಿಜಗಂಧಿನಿ ಕೀರಭಾಷಿಣಿ ಮುದ್ದು ನೀರೆ ನೀ ಬಾಗಿಲ ತೆರೆಯೆ ……………ಶೃಂಗಾರ ರಸದ ಪದ ಮಧುರವಾದ ಅಲಾಪನೆಯೊಂದಿಗೆ ಬರುತ್ತಿದ್ದರೆ ಅದಕ್ಕೊಪ್ಪುವ ಸಹಜವಾದ ಹೆಜ್ಜೆಗಾರಿಕೆಯ ನೃತ್ಯಾಭಿನಯ ರಂಗದಲ್ಲಿ ಮೈದಳೆಯುತ್ತಿತ್ತು. ಶ್ರೀಕೃಷ್ಣ ಪಾರಿಜಾತ ಪ್ರಸಂಗದ ಶೃಂಗಾರ, ಮತ್ಸರ, ಹಾಸ್ಯ, ಲಾಸ್ಯಗಳಿಂದ ಕೂಡಿದ ಒಂದು ಸನ್ನಿವೇಶವದು. ನಾರದ ತಂದಿತ್ತ ಪಾರಿಜಾತ ಪುಷ್ಪವನ್ನು ಶ್ರೀಕೃಷ್ಣ ರುಕ್ಮಿಣಿಗೆ ತೊಡಿಸುತ್ತಾನೆ. ಆಲ್ಲಿಂದ ಸಮಸ್ಯೆಯ ಆರಂಭವಾಗುತ್ತದೆ. ಈ ಸಮಾಚಾರವನ್ನು ಬಣ್ಣಗಟ್ಟಿ ಸಖಿ ತನ್ನೊಡತಿ ಸತ್ಯಭಾಮೆಗೆ ವರದಿಯೊಪ್ಪಿಸುತ್ತಾಳೆ. ಸತ್ಯಭಾಮೆ ಸವತಿ ಮಾತ್ಸರ್ಯದಿಂದ ಅಂತಃ ಪುರದ ಬಾಗಿಲು ಭದ್ರ ಪಡಿಸಿ ಮುನಿಸಿನಿಂದ ಇರುವಾಗ ಶ್ರೀಕೃಷ್ಣ ರಮಿಸುತ್ತಿರುವ ದೃಶ್ಯ. ಸತ್ಯಭಾಮೆಗಾಗಿ ಎಲ್ಲವೂ ಆಗುವ ಶ್ರೀಕೃಷ್ಣ ಪರಿಪರಿಯಾಗಿ ಮನವೊಲಿಸುವ ಸಂದರ್ಭದಲ್ಲಿ ಶ್ರೀಕೃಷ್ಣ ಪಾತ್ರಧಾರಿಯ ಉತ್ಕೃಷ್ಟ ಅಭಿನಯ ಮಾತುಗಾರಿಕೆ ಎಲ್ಲಕ್ಕಿಂತ ಮಿಗಿಲಾಗಿ ಮೋಹಕವಾದ ಅಪ್ಪಟ ಯಕ್ಷಗಾನದ ನರ್ತನ ಮನಸೆಳೆಯುತ್ತದೆ.

ಭಾಗವತರ ಪದಕ್ಕೆ ಲಯಬದ್ಧ ಮದ್ದಲೆವಾದನ ಹೇಗಿರಬೇಕು ಎಂದು ಸೂಚಿಸುವಂತಹ ಹೆಜ್ಜೆಕಾರಿಕೆ. ಆ ಹೆಜ್ಜೆಗಾರಿಕೆಯ ಮೆಲುವಾದ ಸದ್ದಿನಲ್ಲಿ ಮದ್ದಲೆಯ ನಾದ ಹೊರಹೊಮ್ಮಿದ ಹಾಗೆ ಭಾಸವಾಗುತ್ತಿತ್ತು. ಅಷ್ಟಾಂಗನೆಯರ ಮಡಿಲಿನಿಂದ ಮಡಿಲಿಗೆ ಹೃದಯದಿಂದ ಹೃದಯಕ್ಕೆ ಹಾರುವಂತೆ ಸೌಮ್ಯನರ್ತನ. ಪರಿಪೂರ್ಣ ಹಸ್ತಮುದ್ರೆಯ ಸಂಕೇತ, ಭುಜದೆತ್ತರಕ್ಕೆ ಹಿಡಿದ ಕೈಯಲ್ಲಿ ಸುಲಲಿತವಾದ ವಿನ್ಯಾಸದ ಅಂಗಭಂಗಿ, ರಂಗಸ್ಥಳದ ಸುತ್ತಗಲಕ್ಕೂ ಚಲಿಸುವ ರಂಗ ತುಂಬುವ ನಾಟ್ಯ, ಅತ್ತಿಂದಿತ್ತ ಇತ್ತಿಂದತ್ತ ಹೀಗೆ ರಸಭರಿತ ನಾಟ್ಯಾಭಿನಯವನ್ನು ಕಂಡಾಗ ಯಾರೀತ ನುರಿತ ಕಲಾವಿದ? ಅಚ್ಚರಿ ಪ್ರಶ್ನೆಗೆ ಸಹ ವೀಕ್ಷಕನ ಉತ್ತರ ಬೇರೆ ಆತ ಯಾರೂ ಅಲ್ಲ.... ಅದು ನಮ್ಮ ಚಂದ್ರಶೇಖರ ಧರ್ಮಸ್ಥಳ.

ರಂಗದ ಮೇಲಿನ ಜೀವನಕ್ಕೆ ರಜತಪರ್ವವನ್ನು ಆಚರಿಸುವ ಚಂದ್ರಶೇಖರರ ವೇಷ ಕಾಣುವಾಗ ಅದಾಗಲೇ ಇಪ್ಪತ್ತೈದು ಕಳೆಯಿತೆ ? ಎಂಬ ಅನುಮಾನ ಬರುವುದು ಸಹಜ. ದಣಿವರಿಯದ ಸುಂದರ ನಾಟ್ಯ ನೋವರಿಯದ ನಗುಮುಖ, ಪಾತ್ರಕ್ಕೆ ಒಪ್ಪುವ ಹಿತಮಿತವಾದ ಪರಿಶುದ್ದ ಮಾತುಗಾರಿಕೆ. ಎಲ್ಲವನ್ನು ಮೀರಿ ನಿಲ್ಲುವ ಸರಳ ಹಾಗು ವಿನಮ್ರ ನಡತೆ ಹೀಗೆ ಓರ್ವ ಪುಂಡುವೇಷಧಾರಿಯಾಗಿಯೋ ಕಲಾವಿದನಾಗಿಯೋ ಯೋಗ್ಯತೆಗಳು ಏನಿರಬೇಕೋ ಅದೆಲ್ಲವನ್ನು ಹೊಂದಿಕೊಂಡ ರಂಗದ ಪಾದರಸ ಚಲನೆಗೆ ಇಪ್ಪತೈದರ ರಂಗಾನುಭವ ಎಂದರೆ ಅಚ್ಚರಿಯಾಗುತ್ತದೆ.

ಯಾವುದೇ ವೇಷವಿತ್ತರೂ ಅದನ್ನು ನಿಭಾಯಿಸುವ ಆತ್ಮ ವಿಶ್ವಾಸ ಕಲಾವಿದನನ್ನು ಪರಿಪೂರ್ಣವಾಗಿಸುತ್ತದೆ. ಪ್ರಸಂಗ ಮತ್ತು ಹಿಮ್ಮೇಳಕ್ಕೆ ಕಲಾವಿದನಾದವನು ಭಾರವಾಗಬಾರದು. ಆವಾಗ ಸ್ವ ಅಸ್ತಿತ್ವಕ್ಕೆ ಅಭದ್ರತೆಯ ವಾಸನೆ ಬಡಿಯುತ್ತದೆ. ಇದು ಮೊದಲು ಪ್ರಕಟಗೊಳ್ಳೂವುದು ಒಬ್ಬ ಪುಂಡುವೇಷಧಾರಿಯ ಪಾತ್ರಗಳಲ್ಲಿ. ಪುಂಡುವೇಷವೆಂದರೆ ಮೇಳದ ಪ್ರಧಾನ ಆಕರ್ಷಣೆಯ ಕೇಂದ್ರ ಬಿಂದು. ಅದೆಷ್ಟೇ ಹಿರಿಯ ಕಲಾವಿದರು ರಂಗದಲ್ಲಿದ್ದರೂ ಪುಂಡುವೇಷದ ಪ್ರವೇಶವೆಂದರೆ ಪ್ರೇಕ್ಷಕರ ಮೈಛಳಿ ದೂರವಾದಂತೆ. ಆತ ಕುಣಿಯುತ್ತಿದ್ದರೆ ಉತ್ಸಾಹಿಗಳ ಕೈ ಕಾಲು ಅರಿವಿಲ್ಲದೇ ನೆಲದ ಪರಿವೆಯನ್ನು ಕಳೆದುಕೊಂಡು ಬಿಟ್ಟಿರುತ್ತದೆ. ಇಲ್ಲಿ ಪ್ರಮುಖ ಅಂಶವೆಂದರೆ ಅಸಂಖ್ಯ ದಿಗಿಣ ಗಿರಕಿಯಿದ್ದರೆ ಪುಂಡುವೇಷವಾಗುವುದಿಲ್ಲ. ಶುದ್ದ ಕರಾರುವಕ್ಕಾದ ಹೆಜ್ಜೆಗಾರಿಕೆಯ ನಾಟ್ಯಾಭಿನಯ ಇದು ಮಿತಿಯೊಳಗಿರಬೇಕು. ಜತೆಯಲ್ಲಿ ಸ್ಪಷ್ಟ ಉಚ್ಚಾರದ ನಿರರ್ಗಳ ಸಂದರ್ಭೋಚಿತ ಮಾತುಗಾರಿಕೆಯೂ ಇರಬೇಕು. ಸಹಕಲಾವಿದರ ನಿರ್ವಹಣೆಗೆ ಚೈತನ್ಯವನ್ನು ತುಂಬುತ್ತಾ ಪ್ರಸಂಗದ ಜೀವನಾಡಿಯಾಗಿರಬೇಕು. ಈ ಎಲ್ಲಾ ಸರ್ವಾಂಗ ಗುಣಗಳು ಚಂದ್ರಶೇಖರರಲ್ಲಿ ಅಡಕವಾಗಿದೆ ಎಂದರೆ ಅದು ಅತಿಶಯವಲ್ಲ. ಆದರೆ ಈ ಎಲ್ಲವನ್ನು ಮೀರಿದ ಗುಣವೊಂದು ಚಂದ್ರಣ್ಣನಲ್ಲಿದ್ದರೆ ಅದು ಬಿಗುಮಾನವಿಲ್ಲದ ಸರಳ ನಡತೆ. ಸಹಕಲಾವಿದರಿಗೆ ಮತ್ತು ಪ್ರೇಕ್ಷಕರಿಗೆ ಹತ್ತಿರವಾಗುವುದು ಇದರಿಂದಲೇ.

ಪುಂಡುವೇಷವಾಗಲೀ, ರಾಜವೇಷವಾಗಲೀ , ಬೊಬ್ಬಿರಿಯುವ ಬಣ್ಣದವೇಷವೇ ಆಗಲಿ ಅಥವಾ ಸ್ತ್ರೀವೇಷವೇ ಆಗಲಿ ಭೇದವಿಲ್ಲ. ಅದನ್ನು ಆತ್ಮ ವಿಶ್ವಾಸದಿಂದ ಸ್ವೀಕರಿಸಿ ಅಷ್ಟೇ ಯಶಸ್ವಿಯಾಗಿ ರಂಗದಲ್ಲಿ ಸಾಕ್ಷಾತ್ಕರಿಸಿಬಿಡುತ್ತಾರೆ. ಇದು ಕಲಾವಿದನಾಗಿ ಇರಬೇಕಾದ ಹಿರಿಯ ಆದ್ಯತೆ. ವೇಷ ಒಪ್ಪಿದ ಮೇಲೆ ಹಿಮ್ಮೇಳದ ಬಗ್ಗೆ ತಲೆಕೆಡಿಸಿಕೊಳ್ಳುವ ಜಾಯಮಾನವಿಲ್ಲ. ಸ್ವ ಸಾಮಾರ್ಥ್ಯಕ್ಕೆ ಅನುಗುಣವಾಗಿ ರಂಗ ಮೇಲಿನ ನಿರ್ವಹಣೆಗೆ ಪ್ರಾಮಾಣಿಕರಾಗಿರುತ್ತಾರೆ. ಹೀಗಾಗಿ ಯಾವುದೇ ಕೂಟಗಳಿಗೂ ಇವರ ಆಯ್ಕೆ ಸುಲಭವಾದರೂ ಇವರ ಲಭ್ಯತೆಯೇ ಇತ್ತೀಚೆಗೆ ಕಠಿಣವಾಗಿಬಿಟ್ಟಿದೆ.

ಪುಂಡುವೇಷವೆಂದರೆ ಆರಂಭದ ಮಿಂಚಿನ ಪ್ರವೇಶದಿಂದ ತೊಡಗಿ ಪಾತ್ರ ನಿರ್ವಹಣೆ ಸಮಾಪ್ತಿಯ ವರೆಗೂ ಚಿಗರೆಯ ಚಲನೆಯಿರಬೇಕು. ಅದರಲ್ಲೂ ಪ್ರವೇಶ, ಅದು ಮಿಂಚಿನ ವಿದ್ಯುತ್ ಸಂಚಾರವನ್ನುಂಟು ಮಾಡಬೇಕು. ಚಕ್ರವ್ಯೂಹದ ಅಭಿಮನ್ಯುವಿನಂತ ಪಾತ್ರಗಳು ಆಕರ್ಷಣೆಯನ್ನು ಗಳಿಸುವುದು ಇಂಥವುಗಳಿಂದ. ಹಿಂದೆ ಜೋಡಾಟವೊಂದರಲ್ಲಿ ಶ್ರೀ ಕೋಳ್ಯೂರು ರಾಮಚಂದ್ರ ರಾಯರು ಅಭಿಮನ್ಯು ಮಾಡಿದಾಗ ಅಭಿಮನ್ಯುವಿನ ಮಿಂಚಿನ ಪ್ರವೇಶದಿಂದಲೇ ಆ ಪ್ರಸಂಗ ಅರ್ಧದಷ್ಟು ಜನಾಕರ್ಷಣೆಯನ್ನು ಪಡೆದುಕೊಂಡಿತ್ತು. ಪ್ರಸಂಗ ಮುಕ್ತಾಯದವರೆಗೂ ಪ್ರೇಕ್ಷಕನ ಕದಲದ ನೋಟ ಈ ರಂಗಸ್ಥಳದತ್ತ ನೆಟ್ಟಿತ್ತು. ಇದನ್ನು ಹಲವು ಹಿರಿಯ ಭಾಗವತರಾದಿ ಕಲಾವಿದರೂ ಇಂದಿಗೂ ನೆನಪಿಸುತ್ತಾರೆ. ಇಂತಹ ಪ್ರಸಿದ್ದ ಕಲಾವಿದರ ಶಿಷ್ಯತ್ವದ ಗರಡಿಯಲ್ಲಿ ಪಳಗಿದ ಮೇಲೆ, ಇವರನ್ನು ಕಂಡಾಗ ಆಲದ ಮರದ ಬಳ್ಳಿಯೊಂದು ಇಳಿದು ನಂತರ ಬೃಹತ್ ಮರವಾಗಿ ಬೆಳೆದಂತೆ ಭಾಸವಾಗುತ್ತದೆ. ಸಮರ್ಥಗುರುವಿಗೆ ಅತಿ ಸಮರ್ಥ ಶಿಷ್ಯ ಎನ್ನಬಹುದು.

ಇತ್ತೀಚೆಗೆ ಪುಂಡುವೇಷದ ಕಲ್ಪನೇಯೇ ರೂಪಾಂತರ ಹೊಂದಿದೆ. ಗಿರಕಿ ದಿಗಿಣದ ಯೋಗ್ಯತೆಯೊಂದೇ ಮಾನದಂಡವಾಗುತ್ತದೆ. ಕನಿಷ್ಠವಾಗುವ ರಂಗ ಪ್ರಜ್ಞೆ, ಉಚ್ಚಾರ ಶುದ್ಧಿಯಿಲ್ಲದ ಕೇವಲ ಏದುಸಿರಲ್ಲಿ ಸಿಕ್ಕಿಕೊಳ್ಳುವ ಮಾತುಗಾರಿಕೆ ಒಟ್ಟು ಪುಂಡುವೇಷದ ಕಲ್ಪನೆಯನ್ನೇ ಬದಲಿಸಿಬಿಟ್ಟಿದೆ. ಹದಿನೈದು ನಿಮಿಷ ಕುಣಿಯುವಾಗ ಒಂದು ನಿಮಿಷ ಮಾತನಾಡುವ ಚೈತನ್ಯವಾಗಲೀ ಸಾಮಾರ್ಥ್ಯ ವಾಗಲೀ ಇರುವುದಿಲ್ಲ. ಚಂದ್ರಶೇಖರರ ಪಾತ್ರನಿರ್ವಹಣೆ ಇವುಗಳನ್ನೆಲ್ಲ ಮೀರಿ ನಿಂತುಬಿಡುತ್ತದೆ.

ಪುಂಡುವೇಷವೆಂದರೆ ಯಕ್ಷಗಾನದಲ್ಲಿ ಮಾದರಿಯಾಗುವುದು ಹಿಂದಿನ ಶ್ರೇಷ್ಠ ದಂತ ಕಥೆ ಕಿಶ್ಚನ್ ಬಾಬು ಅವರ ಪಾತ್ರಗಳು. ಬಾಲ್ಯದಲ್ಲಿ ಇವರ ಒಂದೆರಡು ವೇಷನೋಡಿದ ಭಾಗ್ಯ ನನಗೂ ಇತ್ತು. ಆನಂತರ ಅದೇ ಪರಂಪರೆಯಲ್ಲಿ ಶಿವರಾಮ ಜೋಗಿ, ಶ್ರೀಧರ ಭಂಡಾರಿ ಹೀಗೆ ಹಲವರು ಬೆಳೆದು ಬಂದರು. ಶ್ರೀಧರ ಭಂಡಾರಿ ತನ್ನ ಮಿಂಚಿನ ನಿರ್ವಹಣೆಯಿಂದ ಇಂದಿಗೂ ಚಲಾವಣೆಯ ನಾಣ್ಯವಾಗಿಯೇ ಗುರುತಿಸಲ್ಪಟ್ಟರೆ, ಜೋಗಿಯವರ ಹಳೆಯ ಪಾತ್ರಗಳು ಇಂದಿಗೂ ಕಣ್ಣಿಗೆ ಕಟ್ಟುತ್ತಿವೆ. ಇವರ ವೇಷ ಕಂಡಾಗ ಕೇವಲ ದಿಗಿಣಹಾಕುವುದೊಂದೇ ಪುಂಡುವೇಷದ ಮಾನದಂಡವಲ್ಲ ಎಂಬುದನ್ನು ಕಾಣಬಹುದು. ರಂಗದ ನಿಲುಮೆ, ಲಯಬದ್ದ ಆಕರ್ಷಕ ಹಿತಮಿತವಾದ ಕುಣಿತ ಮತ್ತು ನಿರರ್ಗಳ ಮಾತುಗಾರಿಕೆ ಸಂದರ್ಭೋಚಿತ ನಿರ್ವಹಣೆ ಇಲ್ಲಿ ಅತೀ ಅಗತ್ಯವಾಗುತ್ತದೆ. ಈ ಗುಣಗಳಿಂದ ಜನಾಕರ್ಷಣೆಯನ್ನು ಗಳಿಸಿದವರು. ಇವುಗಳೆಲ್ಲವನ್ನು ಪ್ರೇಕ್ಷಕ ಚಂದ್ರಶೇಖರರವಲ್ಲಿ ಕಾಣುವ ಪ್ರಯತ್ನವನ್ನು ಮಾಡುತ್ತಿರುತ್ತಾನೆ.

ಪುಂಡು ವೇಷಧಾರಿ ಸಕಾಲಿಕವಾಗಿ ಪಾತ್ರದ ಸ್ಥಿತ್ಯಂತರಗಳನ್ನು ಪಾಲಿಸಿಕೊಳ್ಳಬೇಕು. ಕೇವಲ ಪುಂಡುವೇಷಕ್ಕಷ್ಟೇ ಸೀಮಿತವಾದರೆ ನಂತರ ಆ ದೈಹಿಕ ಕ್ಷಮತೆಯನ್ನು ಉಳಿಸಿಕೊಳ್ಳುವುದಕ್ಕೆ ಹೆಣಗಾಡಬೇಕಾಗುತ್ತದೆ. ಇದು ಒಟ್ಟು ನಿರ್ವಹಣೆಯಲ್ಲಿ ಪ್ರಭಾವವನ್ನು ಬೀರುತ್ತದೆ. ಹಾಗಾಗಿ ರಾಜವೇಷವೋ ಮತ್ತೋಂದೋ ಬದಲಾವಣೆಯನ್ನು ಸಕಾಲಿಕವಾಗಿ ತಂದುಕೊಳ್ಳುವ ಅನಿವಾರ್ಯತೆ ಇದೆ. ಇಂದು ಪುಂಡುವೇಷದಷ್ಟೇ ರಾಜವೇಷದಂತಹ ಕಿರೀಟವೇಷಗಳನ್ನು ಚಂದ್ರಶೇಖರರು ಸುಲಭದಲ್ಲೇ ನಿರ್ವಹಿಸುತ್ತಾರೆ. ಇದು ಪರಿಪೂರ್ಣತೆಯ ಸಂಕೇತವೆನ್ನಬೇಕು. ಹಾಗೇನೆ ಇವರ ಗಾಳಿಯಲ್ಲಿ ತೇಲುವಂತಹ ನೃತ್ಯ ಶೈಲಿ ಬಹಳ ಆಕರ್ಷಣೀಯ. ನೃತ್ಯದಿಂದ ರಂಗದ ಪತಂಗವಾಗುವ ಈ ಚಂದ್ರನ ರಜತ ಪ್ರಭೆ ಸದಾ ಪ್ರಖರವಾಗಿ ಬೆಳಗಲೆಂಬ ಆಶಯಗಳೊಂದಿಗೆ ಓರ್ವ ಕಲಾವಿದನ ಉತ್ತುಂಗತೆಯನ್ನು ತಲುಪುವಲ್ಲಿ ಈ ರಜತ ಸಂಭ್ರಮವು ಸೋಪಾನವವಾಗಿ ಆ ಭವ್ಯತೆಯನ್ನು ಒದಗಿಸಲಿ ಎಂದು ಹಾರೈಸುವ.ಕೃಪೆ : http://yakshachintana.blogspot.in

ಛಾಯಾ ಚಿತ್ರಗಳ ಕೃಪೆ : ನಾಗೇಶ್ ಕೆ ಎಸ್ ಆಚಾರ್ಯ, ರಾಮ್ ನರೇಶ್ ಮ೦ಚಿ ಮತ್ತು ಅ೦ತರ್ಜಾಲದ ಅನಾಮಿಕ ಮಿತ್ರರು


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ