ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಅಭಿಮಾನಿಗಳ ಕಣ್ಣಲ್ಲಿ ಶಾಶ್ವತವಾಗಿ ಅಶ್ರುವಿಳಿಸಿದ ಯಕ್ಷ ಕಣ್ಮಣಿ

ಲೇಖಕರು :
ರವೀಂದ್ರ ಭಟ್ಟ
ಭಾನುವಾರ, ಫೆಬ್ರವರಿ 21 , 2016

ಕಣ್ಣಿ. ಅವರನ್ನು ಯಕ್ಷಲೋಕ ಕರೆಯುತ್ತಿದ್ದುದೇ ಹಾಗೆ. ಯಕ್ಷಗಾನ ಕರಪತ್ರದಲ್ಲಿಯೂ ಅಷ್ಟೆ. ಕಣ್ಣಿ ಅವರ ಕೃಷ್ಣ, ಕಣ್ಣಿ ಅವರ ಅಭಿಮನ್ಯು, ಕಣ್ಣಿ ಚಂದ್ರಹಾಸ, ಕಣ್ಣಿ ಲವ ಹೀಗೆ ಪ್ರಚಾರ ಮಾಡಲಾಗುತ್ತಿತ್ತು. ಕಣ್ಣಿ ಸಾಲ್ವ ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ ಎಂದೇ ಅವರ ಅಭಿಮಾನಿಗಳು ಹೇಳುತ್ತಿದ್ದರು.

ಕಣ್ಣಿ ಅವರ ಮನ್ಮಥ, ಲಕ್ಷ್ಮಣ, ದೇವವ್ರತ, ಕೀಚಕ ಮುಂತಾದ ಪಾತ್ರಗಳಿಗೂ ಇದೇ ರೀತಿಯ ಪ್ರಚಾರ ಇತ್ತು. ಯಕ್ಷಲೋಕದ ಪಾಲಿಗೆ ಅವರು ಯಾವಾಗಲೂ ಕಣ್ಣಿ ಅಷ್ಟೆ. ಆದರೆ ಇನ್ನು ಮುಂದೆ ರಂಗದಲ್ಲಿ ಅವರ ಪಾತ್ರವನ್ನು ಕಣ್ ತುಂಬಿಕೊಳ್ಳುವ ಯೋಗ ಅಭಿಮಾನಿಗಳಿಗೆ ಇಲ್ಲ. ಇತ್ತೀಚೆಗೆ ನಿಧನರಾದ ಅವರು ಯಕ್ಷರಂಗದಲ್ಲಿ ಮಿಂಚಿ ಮರೆಯಾದ ಮಹನೀಯ.

‘ಕಣ್ಣಿಮನೆ ಗಣಪತಿ ಭಟ್‌ ನಿಧನದಿಂದ ಯಕ್ಷಗಾನದ ಲಯ ಮರೆಯಾಗಿದೆ’ ಎಂದು ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ಕಣ್ಣೀರು ಹಾಕಿದ್ದು ಕಣ್ಣಿ ಭಟ್ಟರ ಜನಪ್ರಿಯತೆಗೆ ಸಾಕ್ಷಿ. ಯಕ್ಷಗಾನ ಗೊತ್ತಿಲ್ಲದ ಮಂದಿಗೆ ಮಾತ್ರ ಅವರನ್ನು ಕಣ್ಣಿಮನೆ ಗಣಪತಿ ಭಟ್ ಎಂದು ಪರಿಚಯಿಸಲಾಗುತ್ತಿತ್ತು. ಯಕ್ಷಗಾನ ಗೊತ್ತಿಲ್ಲದವರೂ ಕಣ್ಣಿ ಅವರ ಪಾತ್ರವನ್ನು ನೋಡಿದರೆ ಯಕ್ಷಗಾನವನ್ನು ಪ್ರೀತಿಸುತ್ತಿದ್ದರು. ಅದೇ ಕಣ್ಣಿ ಅವರ ಸಾಮರ್ಥ್ಯ. ಅದೇ ಅವರ ಯಶಸ್ಸಿನ ಗುಟ್ಟು.

ಬಡಗುತಿಟ್ಟಿನ ಯಕ್ಷಗಾನದ ನೃತ್ಯಕ್ಕೆ ಹೊಸರೂಪವನ್ನು ಕೊಟ್ಟ ಅವರು ಕಣ್ಣಿಮನೆ ಶೈಲಿಯನ್ನೇ ಚಾಲ್ತಿಗೆ ತಂದಿದ್ದರು. ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ನಂತರ ಬಡಗುತಿಟ್ಟಿನ ಯಕ್ಷಗಾನ ನೃತ್ಯದಲ್ಲಿ ಹೊಸ ಛಾಪು ಮೂಡಿಸಿದವರು ಅವರು. ನೃತ್ಯದಲ್ಲಿ ಇಡೀ ದೇಹವನ್ನು ಬಗ್ಗಿಸುವುದು, ಕೇದಗೆ ಮುಂದಲೆಯನ್ನು ನೆಲಕ್ಕೆ ಮುಟ್ಟಿಸುವುದು ಮುಂತಾದ ಕಸರತ್ತು ಮಾಡುತ್ತಿದ್ದರಿಂದ ಇದು ಯಕ್ಷಗಾನ ಅಲ್ಲ, ಸರ್ಕಸ್‌ ಎಂದು ಟೀಕಿಸುತ್ತಿದ್ದವರೂ ರಂಗದಲ್ಲಿ ಕಣ್ಣಿ ನೃತ್ಯ ಮಾಡುತ್ತಿದ್ದಾಗ ಬಿಟ್ಟ ಕಣ್ಣು ಬಿಟ್ಟಂತೆಯೇ ನೋಡಿ ಖುಷಿಯಾಗುತ್ತಿದ್ದರು.

ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಿದ್ದರು. ಟೀಕೆ ಟಿಪ್ಪಣಿಯೆಲ್ಲ ಆಮೇಲೆ. ರಂಗದಲ್ಲಿ ಕಣ್ಣಿ ಕುಣಿಯುವಾಗ ಎಲ್ಲರ ಕಣ್ಣೂ ರಂಗದ ಮೇಲೇ ನೆಟ್ಟಿರುತ್ತಿತ್ತು. ಯಕ್ಷಗಾನ ನೃತ್ಯಕ್ಕೆ ಹೊಸ ರೂಪ ಕೊಟ್ಟ ಕಣ್ಣಿ ಯಕ್ಷಗಾನದ ಲಯ, ಲಾಲಿತ್ಯವನ್ನು ಬಿಟ್ಟಿರಲಿಲ್ಲ. ನೃತ್ಯದಲ್ಲಿ ಚುರುಕು ಅವರ ವಿಶೇಷತೆ. ಮಾತಿನಲ್ಲಿಯೂ ಅವರು ಚುರುಕು. ಅನಗತ್ಯ ಮಾತಿಲ್ಲ. ಅಗತ್ಯಕ್ಕೆ ಕಡಿಮೆ ಮಾತೂ ಇಲ್ಲ. ಜಗಳಕ್ಕೆ ನಿಲ್ಲುತ್ತಿರಲಿಲ್ಲ.

ರಂಗದಲ್ಲಿಯೂ ಅವರು ಸ್ನೇಹಪರ. ರಂಗದ ಆಚೆಗೂ ಅವರು ಸ್ನೇಹ ಜೀವಿಯೇ ಆಗಿದ್ದರು. ಆ ಪಾತ್ರ ಈ ಪಾತ್ರ ಎಂಬ ಬೇಡಿಕೆ ಇಲ್ಲ. ಕೊಟ್ಟ ಪಾತ್ರಕ್ಕೆ ಜೀವ ತುಂಬಿ ಆ ದಿನದ ಮಟ್ಟಿಗೆ ಕಣ್ಣಿ ಭಟ್ಟರ ಕುಣಿತ ಸೈ ಎನಿಸಿ ಬಿಡುತ್ತಿದ್ದರು. ‘ಕಣ್ಣಿ ಭಾವ ಇವತ್ತೊಂದು ದಿನ ಹೆಣ್ಣು ಪಾತ್ರ ಮಾಡಬೇಕಲ್ಲ’ ಎಂದರೆ ಅವರು ಅದಕ್ಕೂ ಸೈ.

ಚಿಟ್ಟಾಣಿಯವರೊ೦ದಿಗೆ ಕಣ್ಣಿಯವರ ವಿನಯಕ್ಕೊ೦ದು ನಿದರ್ಶನ
ಬಡಗುತಿಟ್ಟಿನ ಯಕ್ಷಗಾನ ಲೋಕದಲ್ಲಿ ಕಣ್ಣಿಮನೆ ಗಣಪತಿ ಭಟ್ಟ ಒಂದು ಕೋಲ್ಮಿಂಚು. ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ದಾಂಡಿಗನೊಬ್ಬ 4 ಸಿಕ್ಸರ್‌, 5 ಬೌಂಡರಿ ಬಾರಿಸಿ ಔಟಾಗಿ ಹೋದರೂ ಅಭಿಮಾನಿಗಳ ಪಾಲಿಗೆ ಅವನೇ ಹೀರೊ ಆಗುವಂತೆ ಯಕ್ಷಲೋಕದಲ್ಲಿ ಕಣ್ಣಿ ಕೂಡ ಇದ್ದಷ್ಟು ದಿನ ಅಭಿಮಾನಿಗಳ ಪಾಲಿನ ಹೀರೊ. ರಂಗಕ್ಕೆ ಬಂದರೆಂದರೆ ಮನೋರಂಜನೆಗೆ ಮೋಸ ಇಲ್ಲ. ಆಲಸ್ಯ ಇಲ್ಲ. ಚಂಡೆ ಮದ್ದಳೆಗೆ ಎಲ್ಲಿಲ್ಲದ ಕೆಲಸ. ಇದಕ್ಕೆ ಭೀಷ್ಮ ಪರ್ವದ ಅಭಿಮನ್ಯು ಒಂದು ಉದಾಹರಣೆ. ಮೂರೇ ಮೂರು ಪದ್ಯ ಇದ್ದರೂ ಅದಕ್ಕಾಗಿಯೇ ಅಭಿಮಾನಿಗಳು ಕಾಯುವಂತೆ ಮಾಡಿಬಿಡುತ್ತಿದ್ದರು.

ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಕಣ್ಣಿಮೆಯವರಾದ ಗಣಪತಿ ಭಟ್ ಗುರು ಮುಖದಿಂದ ಯಕ್ಷಗಾನ ನೃತ್ಯ ಕಲಿಯಲಿಲ್ಲ. ಕೆರೆಮನೆ ಮಹಾಬಲ ಹೆಗಡೆ ಮಾನಸ ಗುರು. ಆ ಮಟ್ಟಿಗೆ ಅವರೊಬ್ಬ ಏಕಲವ್ಯ ಪ್ರತಿಭೆ. ಗುಂಡಬಾಳ ಮೇಳದಲ್ಲಿ ನೇರವಾಗಿ ರಂಗಕ್ಕೆ ಧುಮುಕಿ ಅಲ್ಲಿನ ಎಲ್ಲ ಕಸರತ್ತುಗಳನ್ನೂ ಮೈಗೂಡಿಸಿಕೊಂಡಿದ್ದ ಕಣ್ಣಿಮನೆ ಗಣಪತಿ ಭಟ್ ನಂತರ ಹಲವಾರು ಮೇಳಗಳಲ್ಲಿ ವೃತ್ತಿ ಕಲಾವಿದರಾಗಿದ್ದರು.

ಮಂದಾರ್ತಿ, ಅಮೃತೇಶ್ವರಿ, ಸಾಲಿಗ್ರಾಮ, ಪೆರ್ಡೂರು ಮುಂತಾದ ಮೇಳಗಳಲ್ಲಿ ಪ್ರಮುಖ ಕಲಾವಿದರಾಗಿದ್ದರು. ಇತ್ತೀಚೆಗೆ ಕೆಲವು ವರ್ಷಗಳಿಂದ ಯಾವ ಮೇಳದಲ್ಲಿಯೂ ಕಾಯಂ ನಟರಾಗಿರಲಿಲ್ಲ. ಅತಿಥಿ ಕಲಾವಿದರಾಗಿ ಎಲ್ಲ ಮೇಳಗಳಿಗೂ ಹೋಗುತ್ತಿದ್ದರು. ಅವರ ಬೇಡಿಕೆ ಯಾವಾಗಲೂ ಕಡಿಮೆಯಾಗಿರಲಿಲ್ಲ.

ಯಕ್ಷಗಾನದ ಪುಂಡು ವೇಷಗಳಿಗೆ ಪ್ರಸಿದ್ಧರಾಗಿದ್ದ ಅವರು ಕಳೆದ 25 ವರ್ಷಗಳಲ್ಲಿ ಬೆಳೆದ ಪರಿ ಅಚ್ಚರಿಯನ್ನುಂಟು ಮಾಡುತ್ತದೆ. ಸುಧನ್ವ, ಕೃಷ್ಣ, ಸಾಲ್ವ, ಅಭಿಮನ್ಯು, ಬಬ್ರುವಾಹನ, ರುದ್ರಕೋಪ, ಅಪರೂಪಕ್ಕೆ ಎನ್ನುವಂತೆ ಕಾರ್ತವೀರ್ಯ ಮುಂತಾದ ಪಾತ್ರಗಳಲ್ಲಿಯೇ ಹೆಸರು ಮಾಡಿದ್ದ ಅವರು ಹೊಸ ಪ್ರಸಂಗಗಳಲ್ಲಿ ಶೃಂಗಾರ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡಿದ್ದರು.

ತಮ್ಮ ಯಕ್ಷ ಜೀವನವನ್ನು ಕೇದಗೆ ಮುಂದಲೆ ಪಾತ್ರಗಳಿಂದಲೇ ಮುಗಿಸಿದ ಅವರು ಕಿರೀಟದ ವೇಷಕ್ಕೆ ಏರಲೇ ಇಲ್ಲ. ವರ್ಷ 47 ಆಗಿದ್ದರೂ ಬಣ್ಣ ಹಚ್ಚಿ ಬಂದರೆ ಇನ್ನೂ 16ರ ಯುವಕನಂತೆಯೇ ಕಾಣುತ್ತಿದ್ದ ಕಣ್ಣಿ ಪುಂಡು ಪಾತ್ರಗಳಿಗೆ ಲಾಯಕ್ಕಾದ ವ್ಯಕ್ತಿಯಾಗಿದ್ದರು. ಅದಕ್ಕೇ ಅವರು ಶೃಂಗಾರ ಪಾತ್ರಗಳಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದರು. ಜನ ಕೂಡ ಅದನ್ನೇ ಮೆಚ್ಚುತ್ತಿದ್ದರು.

ಅವರ ಅಭಿಮಾನಿ ಬಳಗ ಎಷ್ಟು ದೊಡ್ಡದಿತ್ತು ಎಂದರೆ ಅನಾರೋಗ್ಯದಿಂದ ಅವರು ಆಸ್ಪತ್ರೆ ಸೇರಿದಾಗ ಅವರ ಕೈ ಬಿಡಲಿಲ್ಲ. ಅವರ ಆರೋಗ್ಯ ತೀರಾ ಹದಗೆಟ್ಟು ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದು ತಂದಾಗ ವೈದ್ಯರು ‘ಇಲ್ಲ, ಅವರ ಕರುಳು ಸಂಪೂರ್ಣ ಕೆಟ್ಟು ಹೋಗಿದೆ. ಇನ್ನು ದುರಸ್ತಿ ಸಾಧ್ಯವೇ ಇಲ್ಲ’ ಎಂದರು. ಆಗ ಅಭಿಮಾನಿಗಳು ‘ಹಣ ಎಷ್ಟು ಖರ್ಚಾದರೂ ಪರವಾಗಿಲ್ಲ.

ಅದು 20 ಲಕ್ಷ ಆಗಲಿ, 30 ಲಕ್ಷ ಆಗಲಿ. ನಾವು ಕೊಡುತ್ತೇವೆ. ನೀವು ಲಿವರ್‌ ಟ್ರಾನ್ಸ್‌ಪ್ಲಾಂಟ್‌ ಮಾಡಿ’ ಎಂದು ವೈದ್ಯರ ಬೆನ್ನು ಬಿದ್ದರು. ಆದರೆ ವಿಧಿ ಲಿಖಿತ ಬೇರೆ ಇತ್ತು. ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈಗ ಅಭಿಮಾನಿಗಳ ಬೆಂಬಲ ಅವರ ಕುಟುಂಬಕ್ಕೆ ಬೇಕಾಗಿದೆ.

ಯಕ್ಷಗಾನ ರಂಗದಲ್ಲಿ ಕಣ್ಣಿಮನೆ ಗಣಪತಿ ಭಟ್‌ ಒಬ್ಬ ಅಜಾತ ಶತ್ರು. ಯಾರ ಜೊತೆಯೂ ಪಾತ್ರ ಮಾಡುವುದಿಲ್ಲ ಎಂಬ ಮಾತೇ ಇರಲಿಲ್ಲ. ಅವರಿಗೆ ಅವರೇ ಶತ್ರುವಾಗಿದ್ದರು. ಜೀವನದಲ್ಲಿ ಒಂದಿಷ್ಟು ಶಿಸ್ತು ರೂಢಿಸಿಕೊಂಡಿದ್ದರೆ ಅವರು ಕಿರೀಟ ವೇಷಕ್ಕೂ ಏರುತ್ತಿದ್ದರು. ಅವರ ಕೀರ್ತಿ ಕಿರೀಟ ಇನ್ನಷ್ಟು ಹೆಚ್ಚುತ್ತಿತ್ತು. ಅಂತಹ ಕಲಾವಿದನೊಬ್ಬ ಅಭಿಮಾನಿಗಳ ಕಣ್ಣಲ್ಲಿ ನೀರನ್ನು ಶಾಶ್ವತವಾಗಿ ಇರಿಸಿ ಇಹಲೋಕ ತ್ಯಜಿಸಿ ಬಿಟ್ಟರು.

***********


ಕೃಪೆ : prajavani


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ