ಕುಂಬ್ಳೆ ಸುಂದರ ರಾವ್‌ಗೆ ಉಡುಪಿ ತೆಂಕುತಿಟ್ಟು ವೇದಿಕೆ ಪ್ರಶಸ್ತಿ ಪ್ರದಾನ
ಲೇಖಕರು : ಉದಯವಾಣಿ
ಬುಧವಾರ, ಜೂನ್ 22 , 2016
|
ಜೂನ್ 22 , 2016
|
ಕುಂಬ್ಳೆ ಸುಂದರ ರಾವ್‌ಗೆ ಉಡುಪಿ ತೆಂಕುತಿಟ್ಟು ವೇದಿಕೆ ಪ್ರಶಸ್ತಿ ಪ್ರದಾನ
ಉಡುಪಿ :
ತೆಂಕುತಿಟ್ಟು ಯಕ್ಷಗಾನದ ಪ್ರದೇಶದವನಾದ ನಾನು ಅರಿತಂತೆ ಈ ಹಿಂದೆ ತೆಂಕು-ಬಡಗುತಿಟ್ಟುಗಳು ಒಂದನ್ನೊಂದು ಸಂಧಿಸುತ್ತಿರಲಿಲ್ಲ. ಅನಂತರದ ದಿನಗಳಲ್ಲಿ ಈ ಎರಡೂ ಪ್ರಭೇದಗಳ ಶ್ರೇಷ್ಠತೆ, ಕಲಾವಿದರ ಸಾಮರ್ಥ್ಯ ಎಲ್ಲ ಪ್ರದೇಶದವರಿಗಲ್ಲದೇ ದೇಶ-ವಿದೇಶಗಳಲ್ಲೂ ತಿಳಿಯುವಂತಾಯಿತು ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ನುಡಿದರು.
ರಾಜಾಂಗಣದಲ್ಲಿ ಶನಿವಾರ ನಡೆದ "ರಾತ್ರಿ ಆಟ'ದಲ್ಲಿ ಅವರು, ಸುಧಾಕರ ಆಚಾರ್ಯರಂಥವರು ಕಲಾಪ್ರಸಾರಕ್ಕೆ "ತೆಂಕುತಿಟ್ಟು ವೇದಿಕೆ' ಸ್ಥಾಪಿಸಿ ಪ್ರತಿ ವರ್ಷ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನ ಏರ್ಪಡಿಸುವ ಮೂಲಕ ಕಲಾ ಪೋಷಕರಾಗಿದ್ದಾರೆ ಎಂದರು.
ತಮ್ಮ ಪರ್ಯಾಯ ಅವಧಿಯಲ್ಲಿ ಕುಂಬ್ಳೆ ಸುಂದರ ರಾವ್ ಅವರ ಎಲ್ಲ ಪಾತ್ರ ನಿರ್ವಹಣೆ ಬಹು ಖುಷಿಕೊಟ್ಟಿದೆ ಎಂದು ಅವರಿಗೆ 10,000 ರೂ. ಗೌರವನಿಧಿಯೊಂದಿಗೆ "ತೆಂಕುತಿಟ್ಟು ವೇದಿಕೆ ಪ್ರಶಸ್ತಿ' ಪ್ರದಾನಿಸಿ ಆಶೀರ್ವಚನಗೈದರು.
ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚಿಸಿದರು. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ| ಎಂ.ಎಲ್. ಸಾಮಗ ಅಭಿನಂದನ ಭಾಷಣ ಮಾಡಿ, ಕುಂಬ್ಳೆ ಅವರ ಅಭಿನಂದನ ಗ್ರಂಥ "ಸುಂದರ ಕಾಂಡ'ದಲ್ಲಿ ಅವರ ಇಡೀ ವ್ಯಕ್ತಿ ಚಿತ್ರಣ ಅದ್ಭುತವಾಗಿ ಮೂಡಿಬಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಸುರೇಶ ಶೆಟ್ಟಿ ಗುರ್ಮೆ ಮಾತನಾಡಿ, ಭಾರತೀಯ ಸನಾತನ ಸಂಸ್ಕೃತಿಯ ಶ್ರೇಷ್ಠತೆ, ಆಧ್ಯಾತ್ಮಿಕ ಮೌಲ್ಯಗಳು ಪ್ರಪಂಚದೆಲ್ಲೆಡೆ ಹಾಸುಹೊಕ್ಕಾಗಿವೆ. ಅವುಗಳಲ್ಲೊಂದಾದ ಯಕ್ಷಗಾನ ಸಂಸ್ಕೃತಿಯ ಶ್ರೇಷ್ಠತೆ, ಆಧ್ಯಾತ್ಮಿಕ ವಿಚಾರಧಾರೆ, ಜೀವನದ ಮೌಲ್ಯಗಳನ್ನು ಸದಾ ಪ್ರೇರೇಪಿಸುತ್ತ ಜನರನ್ನು ಸುಸಂಸ್ಕೃತರನ್ನಾಗಿಸುವ ಕಾರ್ಯವನ್ನು ನಿರಂತರ ಮಾಡುತ್ತಿದೆ ಎಂದರು.
ಶ್ರೀ ಕ್ಷೇತ್ರ ಕಟೀಲಿನ ಅನಂತಪದ್ಮನಾಭ ಆಸ್ರಣ್ಣ, ತಲ್ಲೂರ್ ಫ್ಯಾಮಿಲಿ ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ತಲ್ಲೂರು ಶಿವರಾಮ ಶೆಟ್ಟಿ ಶುಭ ಹಾರೈಸಿದರು. ಸುಧಾಕರ ಆಚಾರ್ಯ ಅವರ ಸಂಕಲ್ಪ-ಸಂಯೋಜನೆಯಲ್ಲಿ ಆ. 14ರಂದು ಜರಗಲಿರುವ ಹಿರಿಯ ಪತ್ರಕರ್ತ ಎಂ.ವಿ. ಹೆಗ್ಡೆ ವಿರಚಿತ "ಸ್ವರಾಜ್ಯ ವಿಜಯ' ತಾಳಮದ್ದಲೆಯ ಮಾಹಿತಿ ಪತ್ರವನ್ನು ಶ್ರೀವಿಶ್ವೇಶತೀರ್ಥ ಶ್ರೀಪಾದರು ಬಿಡುಗಡೆ ಗೊಳಿಸಿದರು.
ಎಂಜಿನಿಯರ್ ಎಂ.ಡಿ. ಗಣೇಶ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಸುಧೀರ್ ಕೊಡವೂರು ಕಾರ್ಯಕ್ರಮ ನಿರೂಪಿಸಿ, ಎಂ.ಎಸ್. ವಿಷ್ಣು ವಂದಿಸಿದರು.
ಕೃಪೆ :
udayavani
|
|
|