ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕ್ರತ ಶ್ರೇಷ್ಠ ವಿಮರ್ಶಕ ಡಾ| ಎಂ. ಪ್ರಭಾಕರ ಜೋಷಿ

ಲೇಖಕರು :
ಎಂ. ಶಾಂತಾರಾಮ ಕುಡ್ವ
ಶನಿವಾರ, ನವ೦ಬರ್ 26 , 2016

ಈ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಡಾ.ಎಂ.ಪ್ರಭಾಕರ ಜೋಷಿ ಆಯ್ಕೆಯಾಗಿದ್ದಾರೆ. ಎಂದೋ ಸಿಗಬೇಕಿದ್ದ ಪ್ರಶಸ್ತಿ ತಡವಾಗಿಯಾದರೂ ದೊರೆತುದು ಸಂತೋಷದ ವಿಷಯ. ಜೋಷಿಯವರು ಲಾಬಿ ಮಾಡುವ ಮನೋಭಾವದವರಲ್ಲದ ಕಾರಣ, ಅದೆಷ್ಟೋ ಪ್ರಶಸ್ತಿ ಪುರಸ್ಕಾರಗಳಿಂದ ವಂಚಿತರಾದುದು ಸತ್ಯ.

ಶೇಣಿ ಹಾಗೂ ಪ್ರಚಲಿತ ಯುಗಗಳ ಕೊಂಡಿ

ಇಂದಿನ ಸಮಕಾಲೀನ ತಾಳಮದ್ದಳೆ ಅರ್ಥಧಾರಿಗಳಲ್ಲಿ ಅಗ್ರಪಂಕ್ತಿಯಲ್ಲಿ ಕಾಣಿಸಿಕೊಳ್ಳುವವರು ಡಾ ‌.ಎಂ.ಪ್ರಭಾಕರ ಜೋಷಿಯವರು. ಹಿಂದಿನ ತಾಳಮದ್ದಳೆ ಕ್ಷೇತ್ರದ ಶೇಣಿಯುಗ ಹಾಗೂ ಈಗಿನ ಪ್ರಚಲಿತ ಯುಗಗಳೆರಡರ ನಡುವಿನ ಕೊಂಡಿ.

ಡಾ.ಜೋಷಿಯವರ ವಿದ್ವತ್ತಿನ ಬಗ್ಗೆ ಬರೆಯಲು ಹೊರಟರೆ ಎಲ್ಲಿಂದ ಪ್ರಾರಂಭಿಸಿ ಎಲ್ಲಿಗೆ ಮುಗಿಸುವುದು ? ಎಂದೇ ತಿಳಿಯದು. ಅಷ್ಟು ವಿಶಾಲ ಹಾಗೂ ಧೃಢವಾದ ಪಾಂಡಿತ್ಯದ ಆಗರ ಜೋಷಿಯವರು. ಯಕ್ಷಗಾನದ ಅರ್ಥಧಾರಿ, ವಿಮರ್ಶಕ, ಚಿಂತಕ, ಉತ್ತಮ ಭಾಷಣಕಾರ, ಮೌಲಿಕ ಬರಹಗಳ ಲೇಖಕ, ರಾಮಾಯಣ, ಮಹಾಭಾರತ, ಪುರಾಣ, ಧರ್ಮಶಾಸ್ತ್ರಗಳ ಮೇಲಿರುವಷ್ಟೇ ಸಮಕಾಲೀನ ಸಾಹಿತ್ಯದ ಮೇಲಿನ ಅಪಾರ ಜ್ಞಾನಗಳ ಸಂತುಲಿತ ಕಲಾವಿದರು ಜೋಷಿಯವರು. ಎಲ್ಲಾ ಬಗೆಯ ಯಕ್ಷಗಾನ ಪಾತ್ರಗಳ ನಿರ್ವಹಣೆ, ಚಿಂತನಶೀಲ ಅರ್ಥ, ಸಂವಾದವನ್ನು ಬೆಳೆಸುವ ಶೈಲಿ, ಭಾವ - ವಿಚಾರಯುಕ್ತ ಪಾತ್ರಗಳ ಚಿತ್ರಣ ಡಾ.ಜೋಷಿಯವರ ವಿಶೇಷ ಗುಣಗಳು ಯಾವುದೇ ಪಾತ್ರದಲ್ಲೂ ತನ್ನದೇ ಛಾಪನ್ನು ಸೃಷ್ಠಿಸಬಲ್ಲ ಸೃಜನಶೀಲ ಕಲಾವಿದರು.

ಬಾಲ್ಯ, ಶಿಕ್ಷಣ ಹಾಗೂ ವೃತ್ತಿ ಜೀವನ

1946ರಲ್ಲಿ ಕಾರ್ಕಳ ತಾಲೂಕಿನ ಮಾಳದಲ್ಲಿ ಜನಿಸಿದ ಜೋಷಿಯವರು ಸಾಹಿತ್ಯದ ಹಿನ್ನೆಲೆ ಇರುವ ಕುಟುಂಬದವರು. ಇವರ ತಂದೆಯವರಾದ ನಾರಾಯಣ ಜೋಷಿಯವರು ಪ್ರಸಿಧ್ಧ ವಿಧ್ವಾಂಸ ಹಾಗೂ ವಾಗ್ಮಿಗಳು. ಮಾತಾಮಹರಾದ ಅನಿರುಧ್ದ ಭಟ್ಟರು ಯಕ್ಷಗಾನದ ಅರ್ಥಧಾರಿಗಳು. ಜೋಷಿಯವರು ಅನಿರುಧ್ಧ ಭಟ್ಟರಲ್ಲೇ ಯಕ್ಷಗಾನವನ್ನು ಕಲಿತರು. ಎಂ.ಕಾಂ.ಪದವೀಧರರಾದ ಜೋಷಿಯವರು ಹಿಂದಿ ಸಾಹಿತ್ಯ ರತ್ನ ಹಾಗೂ ಯಕ್ಷಗಾನದಲ್ಲಿ ``ಕೃಷ್ಣ ಸಂಧಾನ`` ಪ್ರಸಂಗದ ಮೇಲಿನ ಸಂಶೋಧನೆಯಿಂದ ಡಾಕ್ಟರೇಟ್ ಪಡೆದವರು. ತಮ್ಮ ವಿಧ್ಯಾರ್ಥಿ ದೆಸೆಯಲ್ಲಿ ವಿಶ್ವವಿದ್ಯಾಲಯಗಳಲ್ಲಿ ಸಾಹಿತ್ಯದಲ್ಲಿ ಚಾಂಪಿಯನ್ ಶಿಪ್ ಪಡೆದಿದ್ದರು.

ಸಾಹಿತ್ಯದಲ್ಲಿ ಅಪಾರ ಒಲವುಳ್ಳವರಾಗಿದ್ದು, ನೂರಾರು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕೃಷ್ಣ ಸಂಧಾನ: ಪ್ರಸಂಗ ಮತ್ತು ಪ್ರಯೋಗ, ಜಾಗರ, ಕೇದಗೆ ಮಾರುಮಾಲೆ, ಪ್ರಸ್ತುತ, ವಾಗಾರ್ಥ ಪದಕೋಶ, ವಾಗಾರ್ಥ ಯಕ್ಷಗಾನ ಪದಕೋಶ, ಮುಡಿ, ತಾಳಮದ್ದಳೆ ಪ್ರಮುಖವಾದುವು. ಉದಯವಾಣಿ, ಹೊಸದಿಗಂತ, ಜನವಾಹಿನಿ, ಕರಾವಳಿ ಅಲೆ ಬಲ್ಲಿರೇನಯ್ಯಾ ಮುಂತಾದ ಪತ್ರಿಕೆಗಳಲ್ಲಿ ಅಂಕಣಗಾರರಾಗಿ ಪ್ರಸಿದ್ಧರಾಗಿದ್ದಾರೆ. ಫ್ರೊ.ಎಂ.ಎ.ಹೆಗ್ಡೆ, ಗುರುರಾಜ ಮಾರ್ಪಳ್ಳಿಯವರೊಂದಿಗೆ ಅಮೂಲ್ಯ ಕೃತಿಗಳ ರಚನೆಯಲ್ಲಿ ಗುರುತಿಸಿಕೊಂಡಿದ್ದಾರೆ.

ಹಲವಾರು ಪ್ರತಿಷ್ಠಿತ ಸಂಘಗಳಲ್ಲಿ ಹಲವಾರು ಹುದ್ದೆಗಳಲ್ಲಿದ್ದು ಯಕ್ಷರಂಗದ ಹಿತಕ್ಕಾಗಿ ದುಡಿಯುತ್ತಿದ್ದಾರೆ. ಯಕ್ಷಗಾನದ ಪ್ರಥಮ ವೆಬ್ ಸೈಟ್ www.yakshagana.com ನ ಸ್ಥಾಪಕರು ಡಾ.ಜೋಷಿಯವರೇ. ಜೋಷಿಯವರು ಉತ್ತಮ ಕ್ರೀಡಾಪಟುಗಳೂ ಹೌದು. ಕ್ರಿಕೆಟ್ ಮತ್ತು ಬ್ಯಾಡ್ಮಿಂಟನ್ ಗಳಲ್ಲಿ ಜೋಷಿಯವರು ಪರಿಣತರು. ಮಂಗಳೂರಿನ ಬೆಸೆಂಟ್ ಪ.ಪೂ.ಕಾಲೇಜಿನಲ್ಲಿ ಮೂವತ್ತು ವರ್ಷಗಳ ಕಾಲ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕರಾಗಿ ದುಡಿದು, ಕೊನೆಯ ಎರಡು ವರ್ಷಗಳ ಕಾಲ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದರು.

ತಾಳಮದ್ದಳೆಯ ಅಸಾಧಾರಣೆ ಪ್ರತಿಭೆ, ಸು೦ದರ ಅರ್ಥಗಾರಿಕೆ

ಡಾ‌.ಜೋಷಿಯವರ ಅರ್ಥಗಾರಿಕೆ ಸುಂದರ ಹಾಗೂ ಆಕರ್ಷಕ. ಗೌರವರ್ಣದ, ಶುಭ್ರ ಫೈರಾನ್, ಕಾಶ್ಮೀರಿ ಶಾಲು ಧರಿಸಿ, ಕನ್ನಡಕಧಾರಿಯಾಗಿ ವೇದಿಕೆಯಲ್ಲಿ ಅರ್ಥಕ್ಕೆ ಕುಳಿತರೆಂದರೆ, ಅಂದು ಪ್ರೇಕ್ಷಕರಿಗೆ ಸಾಹಿತ್ಯದ ರಸದೌತಣ. ಯಾವದೇ ಪಾತ್ರಗಳನ್ನಾದರೂ ಸಮರ್ಥವಾಗಿ ನಿರ್ವಹಿಸಬಲ್ಲ ಜೋಷಿಯವರ ಅರ್ಥದಲ್ಲಿ ಬಾರದ ವಿಷಯವಿಲ್ಲ. ಸಂದರ್ಭೋಚಿತವಾಗಿ ಗಾದೆ, ಒಗಟು, ಮಂಡಿಗೆ ಗಾದೆ, ಸುಭಾಷಿತ, ಸಮಕಾಲೀನ ಸಾಹಿತ್ಯಗಳ ಬಳಕೆ, ಸಂಸ್ಕ್ರತ ಶ್ಲೋಕಗಳನ್ನು ತಮ್ಮ ಅರ್ಥಗಾರಿಕೆಯಲ್ಲಿ ಅಳವಡಿಸಿ, ಪಾತ್ರ ಪೋಷಣೆ ಮಾಡುವುದರಲ್ಲಿ ಜೋಷಿಯವರಿಗೆ ಸಮಾನ ಯಾರೂ ಇಲ್ಲ ಎಂದರೆ, ಅದು ಉತ್ಪ್ರೇಕ್ಷೆಯ ಮಾತಾಗದು.

ಡಾ| ಎಂ.ಪ್ರಭಾಕರ ಜೋಷಿ
ಜನನ : 1946
ಜನನ ಸ್ಥಳ : ಮಾಳ, ಕಾರ್ಕಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ
ನಿವೃತ್ತ ಪ್ರಾ೦ಶುಪಾಲಕ, ಪ್ರಸಿಧ್ಧ ಅರ್ಥಧಾರಿ, ಸೊಗಸಿನ ಭಾಷಣಗಾರರಾದ ಶ್ರೀಯುತ ಡಾ| ಎ೦.ಪ್ರಭಾಕರ ಜೋಷಿಯವರು ಯಕ್ಷಗಾನ ಪ್ರಸ೦ಗವೊ೦ದರ ಪ್ರಭ೦ದಕ್ಕೆ ಗೌರವ ಡಾಕ್ಟರೇಟ್ ಪಡೆದ ಹಿರಿಯ ವಿಧ್ವಾ೦ಸರು. ಯಕ್ಷಗಾನದ ಪರಂಪರೆ, ಅದು ನಡೆದು ಬಂದ ದಾರಿ,ಇತ್ತೀಚೆಗೆ ಬದಲಾವಣೆಗೊಂಡಿರುವ ಕೆಲವು ಸಂಪ್ರದಾಯಗಳ ಸಾಧಕ-ಬಾಧಕಗಳ ಅಪಾರ ಜ್ಞಾನ ಹೊದಿರುವ ಜೋಷಿಯವರು ಶ್ರೇಷ್ಠ ವಿಮರ್ಶಕರು. ದೇಶ - ವಿದೇಶಗಳಲ್ಲಿ ನೂರಾರು ಯಕ್ಷಗಾನ ಕಮ್ಮಟಗಳಲ್ಲಿ ಭಾಗವಸಿದ ಜೋಷಿಯವರ ಯಕ್ಷಗಾನದ ನಡೆದಾಡುವ ವಿಶ್ವಕೋಶವೆ೦ದರೆ ಉತ್ಪ್ರೇಕ್ಷೆಯಾಗಲಾರದು.

ಪ್ರಶಸ್ತಿಗಳು:
  • 2016ರ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಪಾರ್ತಿಸುಬ್ಬ ಪ್ರಶಸ್ತಿ
  • ಶೇಣಿ ಪ್ರಶಸ್ತಿ
  • ಅಗರಿ ಪ್ರಶಸ್ತಿ
  • ಕುಬೆವೂರು ಪ್ರಶಸ್ತಿ
  • ಕುರಿಯ ಪ್ರಶಸ್ತಿ
  • ಯಕ್ಷಸಂಗಮ ಮೂಡಬಿದ್ರಿ ಪ್ರಶಸ್ತಿ
  • ದುಬೈ - ಬೆಹ್ರೈನ್ ನಂಥಹ ವಿದೇಶಗಳಲ್ಲಿ ಸಹಿತ ನೂರಾರು ಸಂಮಾನ

ಎದುರಾಳಿ ಯಾವುದೇ ವಾದ, ವಿವಾದ ಮಾಡಿದರೂ, ಜೋಷಿಯವರ ಬತ್ತಳಿಕೆಯಿಂದ ಕೂಡಲೇ ಉತ್ತರ ಬರುತ್ತದೆ. ಅದೂ ಸಕಾರಣ, ಸಾಧಾರವಾಗಿ. ನಗುನಗುತ್ತಾ ಅರ್ಥ ಹೇಳುವ ಡಾ.‌ಜೋಷಿಯವರು, ಎದುರು ಅರ್ಥಧಾರಿಗಳು ಅಬಧ್ಧ ಮಂಡನೆ, ಕುತರ್ಕ, ಪ್ರಸಂಗ ಮೀರಿದ ವಾದ ಮಾಡಿದರೆ, ಅಲ್ಲೇ ಅವರನ್ನು ತಿದ್ದುವ ಶೈಲಿ ಅನುಕರಣೀಯ. ಜೋಷಿಯವರ ಅರ್ಥದಲ್ಲಿ ನವರಸಗಳ ಪ್ರಸ್ತುತಿಯಿದ್ದರೂ, ಹಾಸ್ಯರಸವೇ ಪ್ರೇಕ್ಷಕರನ್ನು ಅಪಾರವಾಗಿ ರಂಜಿಸುವುದು. ಸಮಯಪಾಲನೆ ಜೋಷಿಯವರಲ್ಲಿ ಕಾಣಬೇಕು. ಪ್ರಸಂಗದಲ್ಲಿ ಬರುವ ಎಲ್ಲಾ ಕಲಾವಿದರಿಗೂ ಅವಕಾಶ ದೊರಕಬೇಕು ಎಂಬ ಆಶಯ ಜೋಷಿಯವರ ಅರ್ಥದಲ್ಲಿ ಕಾಣಬಹುದು. ಸಂಘಟಕರಿಗೂ, ತಪ್ಪಿದರೆ, ಕೂಡಲೇ ತಿಳಿಸುವುದು ಡಾ. ಜೋಷಿಯವರ ಕ್ರಮ.

ಪ್ರಸಂಗದ ನಡೆ, ಪದ್ಯಕ್ಕೆ ಸರಿಯಾಗಿ ಪಾತ್ರಗಳ ಒಳಗು ಹೇಗಿರಬೇಕು ಎಂಬುದನ್ನು ಅರಿತಿರುವುದು ಮಾತ್ರವಲ್ಲ, ಅದು ಹೀಗೆಯೇ ಎಂದು ಹೇಳಬಲ್ಲ ಸಾಮರ್ಥ್ಯ ಜೋಷಿಯವರಲ್ಲಿದೆ. ಯಕ್ಷಗಾನಕ್ಕೆ ಸಂಬಂಧಪಟ್ಟ ಯಾವುದೇ ಜಿಜ್ಞಾಸೆಗಳಿಗೆ ಇದಮಿತ್ಥಂ ಎಂದು ಜೋಷಿಯವರ ಅಂಕಿತ ಬಿದ್ದರೆ ಅದೇ ಸಿಧ್ಧಾಂತವೆಂದು ಸ್ವೀಕರಿಸಬಹುದಾದ ಜ್ಞಾನ ಜೋಷಿಯವರದು. ಹಿಂದೆ ಉದಯವಾಣಿ ಪತ್ರಿಕೆಯಲ್ಲಿ ಯಕ್ಷಗಾನಕ್ಕೆ ಸಂಬಂಧ ಪಟ್ಟ ಪ್ರಶ್ನೆಗಳಿಗೆ ಜೋಷಿಯವರು ಉತ್ತರ ಕೊಡುವ ಅಂಕಣವಿತ್ತು. ಈಗ ಬಲ್ಲಿರೇನಯ್ಯಾ ಪತ್ರಿಕೆಯಲ್ಲಿ ಅದೇ ರೀತಿಯ ಅಂಕಣ ಪ್ರಾರಂಭಿಸಿ, ಕಲಾಭಿಮಾನಿಗಳ ಪ್ರಶ್ನೆ, ಜಿಜ್ಞಾಸೆಗಳಿಗೆ ಉತ್ತರ ನೀಡುತ್ತಿದ್ದಾರೆ.

ದಿಗ್ಗಜರ ಒಡನಾಟ

ದೊಡ್ಡ ಸಾಮಗರು, ಶೇಣಿ,ಪೆರ್ಲ, ರಾ.ಸಾಮಗ ‌, ತೆಕ್ಕಟ್ಟೆ, ಕುಂಬ್ಳೆ, ಮಾರೂರು, ಉಡುವೆಕೋಡಿ, ದೇರಾಜೆ, ಪೊಳಲಿ ಶಾಸ್ತ್ರಿ, ಕುಬಣೂರು ಬಾಲಕೃಷ್ಣ ರಾವ್, ಮಟ್ಟಿ, ಅರ್ಕುಳರಂಥಹ ಮಹಾನ್ ಕಲಾವಿದರ ಒಡನಾಟ ಹೊಂದಿ, ಅವರೊಂದಿಗೆ ಅರ್ಥ ಹೇಳಿ ಮಿಂಚಿದ ಹಿರಿಮೆ ಜೋಷಿಯವರದ್ದು. ಆಗಿನ ಕಲಾವಿದರ ಪಟ್ಟಿಯಲ್ಲಿ ಜೋಷಿಯವರು, ಶೇಣಿ,ಪೆರ್ಲ, ಸಾಮಗರೊಂದಿಗೆ ಕೂಟಗಳಲ್ಲಿ ಅನಿವಾರ್ಯ ಕಲಾವಿದರಾಗಿದ್ದರು. ಶೇಣಿ × ಜೋಷಿ, ಪೆರ್ಲ ×ಜೋಷಿ, ಸಾಮಗ × ಜೋಷಿ, ತೆಕ್ಕಟ್ಟೆ × ಜೋಷಿ ಜೋಡಿ ಸಂಭಾಷಣೆ ಈಗಲೂ ನೆನಪಲ್ಲುಳಿಯಂಥಹುದು.

ಈಗಲೂ ತಾಳಮದ್ದಳೆ ಕೂಟಗಳಲ್ಲಿ ಪ್ರಧಾನ ಅರ್ಥಧಾರಿಗಳಾಗಿ ಭಾಗವಹಿಸಿ, ಕಿರಿಯ ಕಲಾವಿದರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಹಿಂದಿನ ಕೂಟಗಳನ್ನು ನೆನಪಿಸುವಂತೆ ಮಾಡುತ್ತಿದ್ದಾರೆ. ವಾಲಿ, ಸುಗ್ರೀವ, ಶ್ರೀರಾಮ, ಧರ್ಮರಾಯ, ಭೀಮ ರಾವಣ, ಕೌರವ, ಶ್ರೀಕೃಷ್ಣ, ತಾಮ್ರಧ್ವಜ, ಅತಿಕಾಯ, ಅರ್ಜುನ, ಭರತ ಭೀಷ್ಮ,ಶೂರ್ಪಣಖೀ, ಪರಶುರಾಮ, ವಿಶ್ವಾಮಿತ್ರ, ಬೃಹನ್ನಳೆ, ಮಂಡನಮಿಶ್ರ, ಮುಂತಾದ ಪಾತ್ರಗಳು ಜೋಷಿಯವರಿಗೇ ಮೀಸಲಿಟ್ಟದೋ ಎಂಬಂಥಹ ಉತ್ತಮ ಪ್ರಸ್ತುತಿ ಜೋಷಿಯವರದ್ದು.

ಶ್ರೇಷ್ಠ ವಿಮರ್ಶಕ, ಸೊಗಸಿನ ಭಾಷಣಕಾರ

ಉತ್ತಮ ಭಾಷಣಕಾರರೂ ಆಗಿರುವ ಜೋಷಿಯವರ ಭಾಷಣ ಆಲಿಸುವುದೇ ಒಂದು ಸೊಗಸು ‌. ಯಾವುದೇ ವಿಷಯದ ಮೇಲೆಯೂ ಭಾಷಣ ಮಾಡುವ, ಆ ಮೂಲಕ, ಪ್ರೇಕ್ಷಕರನ್ನು ಸೆಳೆಯುವ ಅಧ್ಭುತ ಕಲೆ ಜೋಷಿಯವರಿಗೆ ಸಿಧ್ಧಿಸಿದೆ. ಪ್ರಸಿಧ್ಧ ವಿಮರ್ಶಕ ರಾಗಿಯೂ ಗುರುತಿಸಿಕೊಂಡಿರುವ ಜೋಷಿಯವರ ವಿಮರ್ಶೆ ವಸ್ತುನಿಷ್ಠ. ಅಪ್ರಿಯವಾದರೂ ಸತ್ಯವನ್ನೇ ಹೇಳಿ ವಿಮರ್ಶಿಸುವವರು. ಇದ್ದ ವಿಷಯ ನೇರವಾಗಿ ಹೇಳುವಲ್ಲಿ ಯಾವುದೇ ಕಾಂಪ್ರಮೈಸ್ ಇಲ್ಲದಿರುವುದೇ ಜೋಷಿಯವರ ವಿಮರ್ಶೆಯ ವೈಶಿಷ್ಟ್ಯ ಡಾ.ಶಿವರಾಮ ಕಾರಂತರ ನಂತರದ ಶ್ರೇಷ್ಠ ವಿಮರ್ಶಕರೆಂದರೆ ಜೋಷಿಯವರು.

ಯಕ್ಷಗಾನ ಕಮ್ಮಟಗಳಲ್ಲಿ ಪ್ರಾಮುಖ್ಯ ಸಂಪನ್ಮೂಲ ವ್ಯಕ್ಯಿಯಾಗಿರುವ ಜೋಷಿಯವರಿಗೆ ಯಕ್ಷಗಾನದ ಪರಂಪರೆ, ಅದು ನಡೆದು ಬಂದ ದಾರಿ,ಇತ್ತೀಚೆಗೆ ಬದಲಾವಣೆಗೊಂಡಿರುವ ಕೆಲವು ಸಂಪ್ರದಾಯಗಳ ಸಾಧಕ - ಬಾಧಕ ಗಳಲ್ಲಿ ಇರುವ ಜ್ಞಾನ ಅಪಾರ. ಕಮ್ಮಟಗಳಲ್ಲಿ, ಹಿಂದಿನ ಹಾಗೂ ಈಗಿನ ಬೇಧಗಳ ಕುರಿತು ಯಾವುದೇ ಪ್ರಶ್ನೆ ಎದುರಾದರೆ, ತಕ್ಷಣ ಉತ್ತರಿಸಬಲ್ಲ ಪಾಂಡಿತ್ಯ ಜೋಷಿಯವರಲ್ಲಿದೆ. ಸರಿ - ತಪ್ಪುಗಳ ವಿಮರ್ಶೆಯನ್ನು ಜೋಷಿಯವರಷ್ಟು ಸಮರ್ಥವಾಗಿ ಮಾಡುವವರು ವಿರಳ.ಯಕ್ಷಗಾನದಲ್ಲಿ ಸುಧಾರಣೆಯ ಹೆಸರಲ್ಲಿ ಮೂಲಸ್ವರೂಪಕ್ಕೆ ಧಕ್ಕೆಯಾದ ಸಂದರ್ಭಗಳಲೆಲ್ಲಾ, ಅದನ್ನು ವಿರೋಧಿಸಿದವರು ಜೋಷಿಯವರು. ಕೆಲವೊಮ್ಮೆ ಖಾರವಾಗಿ ಮಾತಾಡಿದರೂ, ಕೂಡಲೇ ಸೌಮ್ಯವಾಗಿ ವರ್ತಿಸಿ, ಯಾರೊಂದಿಗೂ ವಿರೋಧ ಹೊಂದಿಲ್ಲದ ಜೋಷಿಯವರು ಕೂಟದಲ್ಲಿದ್ದರೆ ಸಹಕಲಾವಿದರಿಗೆ ಉತ್ಸಾಹ.

ಪ್ರಶಸ್ತಿ - ಪುರಸ್ಕಾರಗಳು

ಶೇಣಿ ಪ್ರಶಸ್ತಿ, ಅಗರಿ ಪ್ರಶಸ್ತಿ, ಕುಬೆವೂರು ಪ್ರಶಸ್ತಿ, ಕುರಿಯ ಪ್ರಶಸ್ತಿ, ಯಕ್ಷಸಂಗಮ ಮೂಡಬಿದ್ರಿ ಪ್ರಶಸ್ತಿ, ದುಬೈ,ಬೆಹ್ರೈನ್ ನಂಥಹ ವಿದೇಶಗಳಲ್ಲಿ ಸಹಿತ ನೂರಾರು ಸಂಮಾನಕ್ಕೆ ಭಾಜನರಾದ ಜೋಷಿಯವರ ಕೀರ್ತಿ ಎಂಬ ತುರಾಯಿಗೆ ಹೊನ್ನಗರಿ ಪಾರ್ತಿಸುಬ್ಬ ಪ್ರಶಸ್ತಿ. ಹಲವಾರು ಯಕ್ಷಗಾನ ಸಮ್ಮೇಳನಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ನೂರಾರು ಆಡಿಯೋಗಳಲ್ಲಿ ಪಾತ್ರ ವಹಿಸಿದ್ದಲ್ಲದೇ, ಯಕ್ಷಗಾನದ ಪ್ರಪ್ರಥಮ ಆಡಿಯೋ ಸಿ.ಡಿ.ಗೆ ನಿರ್ದೇಶನ ಮಾಡಿದ ಜೋಷಿಯವರು ನೂರು ವರ್ಷಗಳ ಕಾಲ ಬದುಕಿ, ಇನ್ನಷ್ಟು ಪ್ರಶಸ್ತಿಗಳಿಗೆ ಭಾಜನರಾಗಲಿ, ಇನ್ನಷ್ಟು ಯಕ್ಷಕಲಾಮಾತೆಯ ಸೇವೆ ಮಾಡಲಿ ಎಂದು ಹಾರೈಕೆ.

******************

ಡಾ| ಎಂ.ಪ್ರಭಾಕರ ಜೋಷಿಯವರ ಕೆಲವು ದೃಶ್ಯಾವಳಿಗಳು







ಯಕ್ಷಗಾನ ಕಲಾಭಿಮಾನಿ ರಾಘು ಕುಟ್ಟಿನಕೆರೆ ನಡೆಸಿಕೊಟ್ಟ ಅಪೂರ್ವ ಸ೦ದರ್ಶನ










ಯಕ್ಷಗಾನ ಕಲಾಭಿಮಾನಿ ಕಟೀಲು ಸಿತ್ಲ ರ೦ಗನಾಥ ರಾವ್ ನಡೆಸಿಕೊಟ್ಟ ಅಪೂರ್ವ ಸ೦ದರ್ಶನ




ಡಾ| ಎಂ.ಪ್ರಭಾಕರ ಜೋಷಿಯವರ ಕೆಲವು ಛಾಯಾ ಚಿತ್ರಗಳು

( ಕೃಪೆ : ರಾಮ್ ನರೇಶ್ ಮ೦ಚಿ ಹಾಗೂ ಅ೦ತರ್ಜಾಲದ ಅನಾಮಿಕ ಯಕ್ಷಗಾನಾಭಿಮಾನಿಗಳು )











ಕೃಪೆ : facebook


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ