ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ವಾಚಿಕವಾಗಿಯೂ ಗೆದ್ದ ಕಾಳಗ ಪ್ರಸಂಗಗಳು

ಲೇಖಕರು : ಉದಯವಾಣಿ
ಶನಿವಾರ, ಜೂನ್ 29 , 2013
"ಕೆಲವು ಕಾಳಗ ಪ್ರಸಂಗಗಳು ರಂಗಾಭಿನಯಕ್ಕೇ ಹೊರತು ಮಾತೇ ಪ್ರಧಾನವಾದ ತಾಳಮದ್ದಲೆಗೆ ಸಲ್ಲ' ಎಂಬ ಅಭಿಪ್ರಾಯವು ಸಮರ್ಥನೀಯವಲ್ಲ ಎಂಬುದನ್ನು ರುಜುವಾತುಪಡಿಸಿದ "ಕಾಳಗ ಸಪ್ತಕ' ಉಡುಪಿಯ ಕಲಾರಂಗದವರು ಆಯೋಜಿಸಿದ ಒಂದು ಯಶಸ್ವೀ ತಾಳಮದ್ದಲೆ ಸಪ್ತಾಹ. ಉಡುಪಿ ರಾಜಾಂಗಣದಲ್ಲಿ ಮೇ 20ರಿಂದ 26ರವರೆಗೆ ನಡೆದ ಈ ಸಪ್ತಾಹದ ಆರಂಭ ಕಾರ್ತವೀರ್ಯಾರ್ಜುನ ಕಾಳಗದಿಂದ. ಕಾರ್ತವೀರ್ಯ ನಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ಟರದು ಯಶಸ್ವೀ ಪಾತ್ರ ಚಿತ್ರಣ. ವಿವಿಧ ಪಾತ್ರಗಳೊಂದಿಗೆ ವಿವಿಧ ಸ್ತರ, ಶೈಲಿಗಳಲ್ಲಿ ನಡೆಸಿದ ಸಂವಾದ ಅಮೋಘ. ವೀರರಸ ಪರಿಪುತವಾದ ಅವರ ಮಾತುಗಳಲ್ಲಿ ಕಾರ್ತವೀರ್ಯಾರ್ಜುನನ ಸಮಗ್ರ ಚಿತ್ರಣವಿತ್ತು.

ರಾವಣನಾಗಿ ವಾಸುದೇವ ಸಾಮಗರು ಪಾತ್ರಕ್ಕೆ ನ್ಯಾಯ ಒದಗಿಸಿದರು. ರಾವಣನ ಹಿನ್ನೆಲೆ, ಬಂಧಿತ ರಾವಣನ ಅಸಹಾಯಕತೆ, ಆಕ್ರೋಶ, ಬಂಧಮುಕ್ತ ರಾವಣನ ಉಗ್ರ ಪ್ರತಿಕ್ರಿಯೆಗಳ ಅಭಿವ್ಯಕ್ತಿ ರಾಕ್ಷಸ ಸಹಜವಾಗಿತ್ತು. ಜಮದಗ್ನಿಯಾಗಿ ಬರೆ ಕೇಶವ ಭಟ್ಟರ ಪಾತ್ರ ಚಿತ್ರಣಕ್ಕೆ ಸಮಯಾವಕಾಶದ ಅಗತ್ಯವಿತ್ತು. ಪ್ರೌಢ ಭಾಷೆಯಲ್ಲಿ ಋಷಿಜೀವನ ಮತ್ತು ಆಶ್ರಮ ವಾಸಿಗಳ ಜೀವನ ಚಿತ್ರಣವನ್ನು ಅವರು ಪುರಾಣದ ಪರಿಭಾಷೆಯಲ್ಲಿಯೇ ಕಟ್ಟಿಕೊಟ್ಟರು. ಹರೀಶ ಜೋಷಿಯವರ ದೂತನ ಪಾತ್ರ ಹಾಸ್ಯರಸವನ್ನು ಉಕ್ಕಿಸಿತು. ಪರಶುರಾಮ ಪಾತ್ರದ ವಿಷ್ಣು ಶರ್ಮ ಅರ್ಥಧಾರಿಗಿಂತ ವೇಷಧಾರಿಯಾಗಿಯೇ ಕಾಣಿಸಿಕೊಂಡರು.

ಎರಡನೆಯ ದಿನದ ಇಂದ್ರಜಿತು ಕಾಳಗದ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿಯವರ ರಾಮನ ಪಾತ್ರದಲ್ಲಿ ರಾಮನ ಗಂಭೀರತೆಯನ್ನು ತುಂಬಿದರೂ ಮಾಯಾ ಸೀತಾ ವಧೆಯ ಸನ್ನಿವೇಶದಲ್ಲಿ ಕರುಣ ರಸ ವ್ಯಕ್ತವಾಗಲಿಲ್ಲ. ಭಾಸ್ಕರ ರೈ ಕುಕ್ಕುವಳ್ಳಿಯವರ ವಿಭೀಷಣ ಮಿತಿಯನ್ನು ಮೀರದ ಪಾತ್ರ. ಪಶುಪತಿ ಶಾಸ್ತ್ರಿಯವರ ಜಾಂಬವಂತ ನಾಟಕೀಯ ವಾಗಿ ನೈಜವಾಗಿತ್ತಾದರೂ ಹಾಸ್ಯ ಸನ್ನಿವೇಶಕ್ಕೆ ಪೂರಕವಾಗಿರಲಿಲ್ಲ. ಲಕ್ಷ್ಮಣನ ಪಾತ್ರವನ್ನು ಡಾ| ಎಂ. ರಾಧಾಕೃಷ್ಣ ಭಟ್ಟರು ಯಶಸ್ವಿಯಾಗಿಯೇ ನಿರ್ವಹಿಸಿದರು. ಆದರೆ ವೀರರಸ ಇನ್ನಷ್ಟು ಉತ್ತುಂಗಕ್ಕೆ ಏರಬೇಕಿತ್ತು. ಇಂದ್ರಜಿತುವಿನ ಪಾತ್ರವನ್ನು ಉಜಿರೆ ಅಶೋಕ ಭಟ್ಟರು ಚಿತ್ರವತ್ತಾಗಿಯೇ ನೀಡಿದರು. ಪಾತ್ರಕ್ಕೆ ಅನಿವಾರ್ಯವಾದ ಕಂಠ, ಸಮರ್ಥನೆಗಳು, ರಾಕ್ಷಸ ಮಾಯೆಗಳ ವಿಶ್ಲೇಷಣೆಗಳಿಂದ ಪಾತ್ರ ಪರಿಣಾಮಕಾರಿಯಾಗಿ ಮೂಡಿ ಬಂದಿತು.

ವಿಟ್ಲ ಶಂಭು ಶರ್ಮರ ಆಂಜನೇಯನ ಪಾತ್ರ ಶ್ರೋತೃಗಳ ನೆನಪಿನಲ್ಲಿ ಉಳಿಯುವಂತಹುದು. ವೀರ ಮತ್ತು ಕರುಣಾರಸಗಳ ಚಿತ್ರಣ ಯಾವುದೇ ಅತಿರೇಕಗಳಿಲ್ಲದೆ ನಿರೂಪಿಸಿದರು. ಮಾಯಾ ಸೀತಾ ವಧೆಯ ಸನ್ನಿವೇಶದಲ್ಲಿ ಶೋಕಿಸುವ ಆಂಜನೇಯನ ಭಕ್ತಿ - ಶೋಕಗಳನ್ನು ಮಿತ ವಾಕ್ಯಗಳಲ್ಲಿ ಗಂಭೀರ ಪರಿಣಾಮವನ್ನುಂಟು ಮಾಡಿತು. ಸ್ತ್ರೀ ಪಾತ್ರಧಾರಿಯಾದ ಕಾರಣ ಮಾಯಾ ಸೀತೆಯ ಶೋಕಾಭಿಭೂತ ಪಾತ್ರವನ್ನು ಚಿತ್ರಿಸಲು ರವಿ ಅಲೆವೂರಾಯರಿಗೆ ಕಷ್ಟವಾಗಲಿಲ್ಲ.

ಮೂರನೆಯ ಪ್ರಸಂಗವಾಗಿ ತರಣಿಸೇನ ಕಾಳಗದ ಸಫ‌ಲತೆಗೆ ಹಲವು ಕಾರಣಗಳು. ವಾಲ್ಮೀಕಿ ರಾಮಾಯಣದಲ್ಲಿ ಕಾಣಸಿಗದ, ಬೆಂಗಾಲೀ ರಾಮಾಯಣದಿಂದ ಕರ್ನಾಟಕ ಯಕ್ಷಕಲಾ ರಂಗಕ್ಕೆ ಕಾಲಿಕ್ಕಿದ ಈ ಪ್ರಸಂಗ ಹಲವರಿಗೆ ಅಪರಿಚಿತ. ಇಂಥ ವಿರಳ ಪರಿಚಿತ ಪ್ರಸಂಗ ವನ್ನು ತಾಳಮದ್ದಲೆಯ ಮೂಲಕ ಪರಿಚಯಿಸಿದ ಕಲಾರಂಗ ಅಭಿನಂದನೀಯ.


ರಾವಣನಾಗಿ ಜಬ್ಟಾರ್‌ ಸಮೋ ಅವರು ರಾವಣನ ಪುತ್ರಶೋಕ - ಭಾತೃ ಪ್ರೇಮ, ವಿಭೀಷಣ - ರಾಮನ ಬಗ್ಗೆ ಗೌರವಾದರಗಳನ್ನು ಪ್ರಕಟಿಸುತ್ತಾ, ಅವನ ಅಂತರಂಗ ದಲ್ಲಿದ್ದ ರಾಕ್ಷಸೀ ಸಹಜ ವೈರವನ್ನು ಸೊಗಸಾಗಿ ಪ್ರಕಟಿಸಿದರು. ತರಣಿಸೇನನ ಬಗ್ಗೆ ರಾವಣನಿಗಿರುವ ಪುತ್ರವಾತ್ಸಲ್ಯ, ಯುದ್ಧಕ್ಕೆ ಅನುಮತಿ ಬೇಡುವ ತರಣಿಸೇನನನ್ನು ಕುರಿತು ಆಡುವ ಮಾತುಗಳಲ್ಲಿ ಕರುಣಾರಸದ ಅಭಿವ್ಯಕ್ತಿ ಪರಿಣಾಮಕಾರಿಯಾಗಿತ್ತು. ಆದರೆ ಸುದೀರ್ಘ‌ವಾದ ಸಂಯುಕ್ತ ವಾಕ್ಯಗಳು ಮತ್ತು ಭಾವಾಭಿವ್ಯಕ್ತಿಯ ವಿಸ್ತಾರ ಸ್ಮರಣೆಯಲ್ಲಿ ಹಿಡಿದಿಟ್ಟುಕೊಳ್ಳಲು ಶ್ರೋತೃಗಳಿಗೆ ತ್ರಾಸದಾಯಕವೆನಿಸಿತು.

ತರಣಿಸೇನನ ಪಾತ್ರದಲ್ಲಿ ಸಂಕದಗುಂಡಿ ಗಣಪತಿ ಭಟ್ಟರು ರಾಜಾಂಗಣಕ್ಕೆ ಪ್ರಥಮ ಪ್ರವೇಶ ಪಡೆದವರು. ತರಣಿಸೇನನ ದ್ವಂದ್ವವನ್ನೂ ಅಂತಿಮ ತೀರ್ಮಾನವನ್ನೂ ಪ್ರೌಢಭಾಷೆಯಲ್ಲಿ ಪಡಿಮೂಡಿಸಿದರು, ಒಳ್ಳೆಯ ಅರ್ಥಧಾರಿಯಾಗುವ ಲಕ್ಷಣವುಳ್ಳವರು.

ರಾಮನ ಪಾತ್ರದಲ್ಲಿ ಹರಿನಾರಾಯಣ ದಾಸ ಆಸ್ರಣ್ಣನವರು ತುಂಬು ಗಾಂಭೀರ್ಯ ದಿಂದಲೇ ಪಾತ್ರ ಚಿತ್ರಣ ಮಾಡಿದರು. ಪ್ರಸಂಗದ ಮಕುಟಸದೃಶ ಪಾತ್ರ ಚಿತ್ರಣ ಪ್ರೊ| ಎಂ. ಎಲ್‌. ಸಾಮಗರ ವಿಭೀಷಣ. ಆದಿಯಿಂದ ಅಂತ್ಯದವರೆಗೆ ಶೋಕದ ಸ್ಥಾಯಿಯಲ್ಲಿಯೇ ಸಂಚರಿಸುವ ಇಂಥ ಪಾತ್ರ ಚಿತ್ರಣ ಕಷ್ಟಕರ. ಸಾಮಗರು ಇದನ್ನು ಯಶಸ್ವಿಯಾಗಿ ನಿರ್ವಹಿಸಿದರು. ಸುರೇಶ ಕುದುರೆಂತಾಯರ ಸುಪಾರ್ಶ್ವಕ ಪ್ರಸಂಗದ ಪರಿಮಿತಿಯಲ್ಲಿ ಸಫ‌ಲವಾಗಿತ್ತು.

ಕೃಪೆ : http://www.udayavani.com


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ