ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
`ರಘುರಾಮಾಭಿನಂದನ` : ``ಕರಾವಳಿಯ ಯಕ್ಷಗಾನ ಕಲಾಭಿಮಾನಿ ಸ್ವಾಭಿಮಾನಿ`` - ಪ್ರೊ.ಎಂ.ಎಲ್ ಸಾಮಗ

ಲೇಖಕರು : ಪ್ರಜಾವಾಣಿ
ಶನಿವಾರ, ಜುಲೈ 6 , 2013
ಮಂಗಳೂರು: `ಯಕ್ಷಗಾನ ಕಲಾಭಿಮಾನಿಗಳು ಸ್ವಾಭಿಮಾನಿಗಳೂ ಹೌದು. ಕರಾವಳಿಯಲ್ಲಿ ಯಕ್ಷಗಾನ ಕಲೆ ಬೆಳೆದಿರುವುದು ಕಲಾಭಿಮಾನಿಗಳ ಪ್ರೋತ್ಸಾಹದಿಂದ. ಇಲ್ಲಿನ ಜನ ಇಷ್ಟದ ಕಲೆಯನ್ನು ಪೋಷಿಸಲು ಸರ್ಕಾರದ ಬಿಡಿಗಾಸಿಗೆ ಕೈಚಾಚುವುದಿಲ್ಲ` ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಪ್ರೊ.ಎಂ.ಎಲ್ ಸಾಮಗ ಅವರು ಅಭಿಪ್ರಾಯಪಟ್ಟರು.

ಇಲ್ಲಿನ ಪುರಭವನದಲ್ಲಿ ಶುಕ್ರವಾರ ಆರಂಭವಾದ ತೆಂಕುತಿಟ್ಟಿನ ಭಾಗವತ ಪುತ್ತಿಗೆ ರಘುರಾಮ ಹೊಳ್ಳ ಅವರ ಮೂರು ದಿನಗಳ ಅಭಿನಂದನಾ ಕಾರ್ಯಕ್ರಮ `ರಘುರಾಮಾಭಿನಂದನ' ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಂಗಳೂರಿನ ಪುರಭವನದಲ್ಲಿ ಶುಕ್ರವಾರ `ರಘುರಾಮಾಭಿನಂದನ' ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿದರು. ಭಾಗವತ ಪುತ್ತಿಗೆ ರಘುರಾಮ ಹೊಳ್ಳ, ಎಂ.ಮೋಹನ ಆಳ್ವ, ಪ್ರೊ.ಎಂ.ಎಲ್.ಸಾಮಗ, ಎಡನೀರು ಮಠದ ಕೇಶವಾನಂದ ಭಾರತಿ ಸ್ವಾಮೀಜಿ, ಶರವು ರಾಘವೇಂದ್ರ ಶಾಸ್ತ್ರಿ, ಹರಿಕೃಷ್ಣ ಪುನರೂರು ಉಪಸ್ಥಿತರಿದ್ದರು
`ನಮ್ಮದು ಪ್ರಜಾಪ್ರಭುತ್ವ. ಹಾಗಾಗಿ ಪ್ರೇಕ್ಷಕರೇ ಕಲಾಪ್ರಕಾರಗಳಿಗೆ ರಾಜಾಶ್ರಯ ಕೊಟ್ಟು ಪೋಷಿಸಬೇಕು. ರಾಜ್ಯದ ಇತರೆಡೆಯ ಮೂಡಲಪಾಯ, ದೊಡ್ಡಾಟದಂತಹ ಕಲಾಪ್ರಕಾರಗಳು ಸರ್ಕಾರದ ಧನಸಹಾಯವನ್ನೇ ನೆಚ್ಚಿಕೊಂಡಿವೆ. ಆದರೆ, ಕರಾವಳಿಯ ಜನರು, ಸರ್ಕಾರ ದುಡ್ಡು ಕೊಡಲಿ; ಕೊಡದಿರಲಿ ತಮ್ಮಿಷ್ಟದ ಕಲೆಯ ಬೆಳವಣಿಗೆಗಾಗಿ ಕಿಸೆಯಿಂದ ಖರ್ಚು ಮಾಡಲು ಹಿಂದೇಟು ಹಾಕುವುದಿಲ್ಲ' ಎಂದರು.

`ಯಕ್ಷಗಾನವು ಮೂಲತಃ ಸಂಗೀತ ಪ್ರಧಾನವಾದ ಕಲೆ. ವಿಕಾಸದ ಹಾದಿಯಲ್ಲಿ ಅರ್ಥಗಾರಿಕೆ ಪ್ರಾಧಾನ್ಯತೆ ಪಡೆಯಿತು. ಯಕ್ಷಗಾನದಲ್ಲಿ ಮತ್ತೆ ಸ್ಥಿತ್ಯಂತರವಾಗಿ ಅದು ಸಂಗೀತ ಪ್ರಧಾನ ಪ್ರಕಾರವಾಗುವಂತಾಗಲು ಉಪ್ಪೂರು, ಕಡತೋಕ ಹಾಗೂ ಅವರದೇ ಹಾದಿಯಲ್ಲಿ ಸಾಗಿದ ರಘುರಾಮ ಹೊಳ್ಳರಂತಹ ಭಾಗವತರು ಶ್ರಮಿಸಿದ್ದಾರೆ. ಅರ್ಥಗಾರಿಕೆಯ ಜಾಣ್ಮೆ ಆಸ್ವಾದಿಸಲು ಜನ ಆಟ ನೋಡಲು ಬರುತ್ತಿದ್ದ ಕಾಲ ಬದಲಾಗಿದೆ. ಈಗ ಭಾಗವತಿಕೆ ಆಲಿಸಲೆಂದೇ ಜನ ಬರುತ್ತಾರೆ. ಭಾಗವತಿಕೆಗೆ ಸಿಗುವ ಕರತಾಡನ ಈಗ ಅರ್ಥಗಾರಿಕೆಗೆ ಸಿಗುವುದಿಲ್ಲ' ಎಂದರು.

`ಯಕ್ಷಗಾನದಲ್ಲಿ ನಾಟಕೀಯ ಗುಣವೂ ಅಡಕವಾಗಿದೆ. ದೃಶ್ಯರಚನೆಯ ಜತೆ ಹಾಡುಗಾರಿಕೆಯಲ್ಲೂ ನಾಟಕೀಯ ಅಂಶವನ್ನು ಸ್ಫುಟಗೊಳಿಸುವಲ್ಲಿ ಪುತ್ತಿಗೆ ಅವರ ಕೊಡುಗೆ ಮಹತ್ತರವಾದುದು' ಎಂದರು.

ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥರು ಮಾತನಾಡಿ, `ಹಿಂದುಸ್ತಾನಿ ಹಾಗೂ ಕರ್ಣಾಟಕ ಶಾಸ್ತ್ರೀಯ ಸಂಗೀತ ಪ್ರಕಾರಗಳಲ್ಲಿ ಪಾಂಡಿತ್ಯಕ್ಕೆ ಹೆಚ್ಚು ಒತ್ತು. ಅಲ್ಲಿ ಭಾವೋದ್ದೀಪನಕ್ಕೆ ಅವಕಾಶ ಕಡಿಮೆ. ಆದರೆ, ಲಘುಸಂಗೀತ ಭಾವೋದ್ದೀಪನದ ಮೂಲಕ ಮನಸ್ಸಿಗೆ ಮುಟ್ಟುತ್ತದೆ. ಸಂಗೀತ ಕ್ಷೇತ್ರಕ್ಕೆ ಯಕ್ಷಗಾನದ ಕೊಡುಗೆ ಪ್ರಮುಖವಾದುದು' ಎಂದರು.

ಎಡನೀರು ಮಠದ ಕೇಶವಾನಂದ ಭಾರತಿ ಸ್ವಾಮೀಜಿ ಮಾತನಾಡಿ, `ಹಿಂದೆ ಆಟ ಆಡಿಸುವಾಗ ಯಾವ ದೇವರ ಪ್ರಸಂಗ ಎಂಬುದನ್ನು ಮಾತ್ರ ಮೊದಲು ಹೇಳುತ್ತಿದ್ದರು. ಪ್ರಸಂಗ ನಿರ್ಧಾರವಾಗುತ್ತಿದ್ದುದು ಆಟ ಆರಂಭವಾಗುವುದಕ್ಕೆ ಸ್ವಲ್ಪಹೊತ್ತು ಮುಂಚೆ. ಆಗ ಬಹುತೇಕ ಪಾತ್ರಧಾರಿಗಳಿಗೆ ಅಕ್ಷರಾಭ್ಯಾಸ ಇರುತ್ತಿರಲಿಲ್ಲ. ಭಾಗವತರೂ ಕಂಠಪಾಠದ ಮೂಲಕವೇ ಹಾಡುಗಳನ್ನು ಕಲಿಯಬೇಕಿತ್ತು. ಆದರೂ ತಪ್ಪುಗಳಾಗುತ್ತಿರಲಿಲ್ಲ. ಈಗ ಕಲಿತವರು, ವಿದ್ವಾಂಸರೂ ಅರ್ಥ ಹೇಳುವಾಗಲೂ ತಪ್ಪುಗಳು ಘಟಿಸುತ್ತಿವೆ' ಎಂದರು.

ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ.ಮೋಹನ ಆಳ್ವ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿದರು. ಶರವು ದೇವಸ್ಥಾನದ ರಾಘವೇಂದ್ರ ಶಾಸ್ತ್ರಿ ಅವರು ಸನ್ಮಾನ ಸಂಪುಟ ಬಿಡುಗಡೆಗೊಳಿಸಿದರು. ಉಜಿರೆ ಅಶೋಕ ಭಟ್ಟ ಅವರು ಅಭಿನಂದನಾ ಗ್ರಂಥದ ಬಗ್ಗೆ, ಸರವು ಕೃಷ್ಣ ಭಟ್ಟ ಅವರು ಸನ್ಮಾನ ಸಂಪುಟದ ಬಗ್ಗೆ ಮಾತನಾಡಿದರು. ಪುತ್ತಿಗೆ ರಘುರಾಮ ಹೊಳ್ಳ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಉಪಸ್ಥಿತರಿದ್ದರು. ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ರವಿ ಅಲೆವೂರಾಯ ವಂದಿಸಿದರು. ಹಿರಣ್ಯ ವೆಂಕಟೇಶ್ವರ ಭಟ್ಟ ನಿರೂಪಿಸಿದರು.

ಬಳಿಕ ಪುತ್ತಿಗೆ ರಘುರಾಮ ಹೊಳ್ಳ ನಿರ್ದೇಶನದಲ್ಲಿ ಆಯ್ದ ಸನ್ನಿವೇಶಗಳನ್ನು ಪ್ರಸ್ತುತಪಡಿಸಲಾಯಿತು.

ಕೃಪೆ : http://www.prajavani.net/


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ