ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ
Share
ಯಕ್ಷಗಾನ ಸಂಗೀತ

ಲೇಖಕರು :
ಈಶ್ವರಯ್ಯ
ಸೋಮವಾರ, ಜುಲೈ 22 , 2013

`
ಪ್ರತಿಯೊಂದು ಕಲೆಯೂ ರೂಪುಗೊಳ್ಳುವಾಗ ಒಂದು ನಿರ್ದಿಷ್ಟ ಉದ್ದೇಶವನ್ನು ಹೊಂದಿರುತ್ತದೆ, ಒಂದು ಗುರಿ ಇರಿಸಿಕೊಳ್ಳುತ್ತದೆ, ಒಂದು ನಿರ್ದಿಷ್ಟ ರಸಿಕ ವರ್ಗವನ್ನು ಗಮನದಲ್ಲಿರಿಸಿಕೊಳ್ಳುತ್ತದೆ. ಇದಕ್ಕೆ ಅನುಗುಣವಾಗಿ ಅದರ ಎಲ್ಲ ಅಂಗಗಳು ಕಾರ್ಯ ನಿರ್ವಹಿಸುತ್ತವೆ. ಆ ಕಾಲದ ಲಭ್ಯ ಪರಿಕರಗಳನ್ನು, ಕಲಾಸೂತ್ರಗಳನ್ನು ಅಳವಡಿಸಿಕೊಂಡು ಅದು ಒಂದು ಖಚಿತ ರೂಪವನ್ನು ಪಡೆಯುತ್ತದೆ. ಇದು ಕಲೆಯ ಮೂಲಸ್ವರೂಪವಾಗಿರುತ್ತದೆ.

ಧಾರ್ಮಿಕ ಚೌಕಟ್ಟು

ಯಕ್ಷಗಾನ ಕಲೆ ಹುಟ್ಟಿಕೊಂಡದ್ದು ಒಂದು ಧಾರ್ಮಿಕ ಚೌಕಟ್ಟಿನಲ್ಲಿ. ಮಹಾಭಾರತ, ರಾಮಾಯಣ, ಭಾಗವತದ ಕತೆಗಳನ್ನು ನಿರೂಪಿಸುವ ಮೂಲಕ ನೈತಿಕ ಮೌಲ್ಯಗಳನ್ನು ಹರಡುವುದು ಅದರ ಮುಖ್ಯ ಉದ್ದೇಶ. ಅದರ ಆಶಯ .didactic-ನೀತಿಬೋಧೆ. ಇದು ಅಭಿವ್ಯಕ್ತಿಗೊಳ್ಳುವುದು ನಾಟ್ಯದ (ಸಂಗೀತ, ನೃತ್ಯ, ಮಾತು) ಮೂಲಕ. ಈ ಮುರೂ ಅಂಗಗಳನ್ನು ಸಮಪ್ರಮಾಣದಲ್ಲಿರಿಸಿಕೊಂಡು ಯಕ್ಷಗಾನ ಬೆಳೆದು ಬಂತು. ಈ ಕಲಾಪ್ರಕಾರಕ್ಕೆ ಸಂಗೀತ ಬಳಕೆಯಾದಾಗ ಅದು ಯಾವ ಕಾಲಘಟ್ಟ, ಯಾವ ಸ್ವರೂಪದಲ್ಲಿತ್ತು ಎಂದು ಗಮನಿಸಬೇಕಾಗಿದೆ. ಸುಮಾರು ನಾಲ್ಕು ಶತಮಾನಗಳ ಹಿಂದೆ ಯಕ್ಷಗಾನದ ಸಂಗೀತ ರೂಪುಗೊಂಡಾಗ ನಮ್ಮ ಶಾಸ್ತ್ರೀಯ ಸಂಗೀತ ಹೊಸದಾರಿಗಳನ್ನು ಕಂಡುಕೊಳ್ಳುತ್ತಿದ್ದ ಕಾಲ. ವೆಂಕಟಮಖಿಯ 'ಚತುರ್ದಂಡಿ ಪ್ರಕಾಶಿಕೆ'ಗಿಂತಲೂ ನೂರು ವರ್ಷ ಮೊದಲು. ಕರ್ನಾಟಕ ಸಂಗೀತದ ಕೃತಿ ಅನ್ನುವ ಪ್ರಕಾರ ಇನ್ನೂ ಕಾಣಿಸಿಕೊಂಡಿರಲಿಲ್ಲ. ಆಗ ಪ್ರಚಲಿತವಿದ್ದ ಸಂಗೀತವನ್ನು ಸಂಪ್ರದಾಯ ಸಂಗೀತ ಎಂದು ಗುರುತಿಸಲಾಗುತ್ತದೆ. ಸಂಪ್ರದಾಯವೆಂದರೆ ನಮ್ಮ ಹಿಂದಿನವರು ನಮ್ಮ ಹಿತಕ್ಕೆಂದು ಕೊಟ್ಟದ್ದು, ನಾವು ಅದನ್ನು ಸ್ವೀಕರಿಸಿ ಉಳಿಸಿಕೊಂಡದ್ದು. ಭರತಮುನಿ ಅದನ್ನು ಗುರು ಪರಂಪರೆಯಿಂದ ಬಂದ ಸದುಪದೇಶ, ಶಿಷ್ಯ ಪರಂಪರೆಯಿಂದ ಇಳಿದು ಬಂದ ಉಪದೇಶ ಎಂದು ವ್ಯಾಖಾನಿಸುತ್ತಾರೆ.

ನೀತಿ ಬೋಧನೆ ಆಶಯ

ನಮ್ಮ ಶಾಸ್ತ್ರೀಯ ಸಂಗೀತವೂ ಗುರುಪರಂಪರೆಯಿಂದಲೇ ಬಂದಿರುವುದಾದರೂ ಅದನ್ನು ಸಂಪ್ರದಾಯ ಸಂಗೀತವೆನ್ನುವುದಿಲ್ಲ. ವ್ಯತ್ಯಾಸವಿರುವುದು ಕಲೆಯ ಹಿಂದಿರುವ ಮನೋಧರ್ಮದಲ್ಲಿ. ಅರ್ಥಶಾಸ್ತ್ರ, ರಾಜ್ಯಶಾಸ್ತ್ರಗಳಂತೆ ಸಂಗೀತ ಶಾಸ್ತ್ರವೂ ಸಂಗೀತದ ಪ್ರಕಾರಗಳನ್ನು, ಪರಿಕರಗಳನ್ನು, ಉಪಕರಣಗಳನ್ನು, ಪ್ರಯೋಗಗಳನ್ನು ವಿವೇಚನೆ ಮಾಡುತ್ತದೆ. ಅದರ ಹಿಂದಿರುವ ಮನೋಸಿದ್ದತೆಯಾಗಲೀ, ಅದು ಹೊಂದಿರಬೇಕಾದ ಉದ್ದೇಶವನ್ನಾಗಲೀ ಅದು ಚರ್ಚೆಗೆ ಎತ್ತಿಕೊಳ್ಳುವುದಿಲ್ಲ(ಸಾಕೃರಾ). ಶಾಸ್ತ್ರೀಯ ಸಂಗೀತದ ನೆಲೆಯೇ ಬೇರೆ ಸಂಪ್ರದಾಯ ಸಂಗೀತದ ನೆಲೆಯೇ ಬೇರೆ. ಶಾಸ್ತ್ರೀಯ ಸಂಗೀತ ವೇದಿಕೆಯಲ್ಲಿ ಒಂದು ರಾಗ ಕೇವಲ ಕಲೆಯಾಗಿ ಎಲ್ಲ ಅಲಂಕಾರಗಳಿಂದ ವಿಸ್ತಾರಗೊಳ್ಳುತ್ತದೆ. ರಸಿಕರಿಗೆ 'ಆನಂದ'ವನ್ನುಂಟು ಮಾಡುವುದಕ್ಕಿಂತ ಹೆಚ್ಚಿನ ಉದ್ದೇಶ ಅದಕ್ಕಿರುವುದಿಲ್ಲ. ಆದರೆ ಸಂಪ್ರದಾಯ ಸಂಗೀತದ ಗುರಿ ಲೌಕಿಕ ಸಂತೋಷವಲ್ಲ, ನೀತಿ ಬೋಧನೆ. ಕರ್ನಾಟಕದಲ್ಲಿ ಸಂಪ್ರದಾಯ ಸಂಗೀತವನ್ನು ಬೆಳೆಸಿದವರು ನರಹರಿತೀರ್ಥರು, ವ್ಯಾಸತೀರ್ಥರು, ವಾದಿರಾಜರು, ಪುರಂದರದಾಸರು ಮೊದಲಾದ ದಾಸಶ್ರೇಷ್ಠರು. ಇವರ ಕೀರ್ತನೆಗಳೇ ಮುಂದಿನ ವಾಗ್ಗೇಯಕರರಿಗೆ ದಾರಿದೀಪವೆನಿಸಿ ಕೃತಿ ಎನ್ನುವ ಶಾಸ್ತ್ರೀಯ ಸಂಗೀತದ ಸಾಹಿತ್ಯ ರಚನೆಗೆ ಕಾರಣವಾಯಿತು. ಒಂದು ಕಡೆಯಿಂದ ಸಂಪ್ರದಾಯ ಸಂಗೀತ ಶಾಸ್ತ್ರೀಯ ಸಂಗೀತದ ಬೆಳವಣಿಗೆಗೆ ದಾರಿ ಕೊರೆದು ಕೊಟ್ಟರೆ ಇನ್ನೊಂದು ಕಡೆಯಿಂದ ಯಕ್ಷಗಾನ ಸಂಗೀತಕ್ಕೂ ಬುನಾದಿ ಎನಿಸಿಕೊಂಡಿತು.

ಸಂಪ್ರದಾಯ ಸಂಗೀತದಿಂದ ತನ್ನದೇ ಆದ ಒಂದು ವಿಶಿಷ್ಟ ರೂಪವನ್ನು .ನಿರ್ಮಿಸಿಕೊಂಡು ಬೆಳೆದ ಯಕ್ಷಗಾನ ಸಂಗೀತದ ಹಿಂದೆ ಮೂರು ನಿರ್ದಿಷ್ಟ ಆಯಾಮಗಳನ್ನು ಗುರುತಿಸಬಹುದು.

  1. ಅದು ಬಯಲು ರಂಗಮಂಟಪದಲ್ಲಿ ಗಡುಸು ಹಿಮ್ಮೇಳದೊಂದಿಗೆ ಅಭಿವ್ಯಕ್ತವಾಗಬೇಕು
  2. ಅದು ಕತೆಯನ್ನು ಮುಂದಕ್ಕೆ ಕೊಂಡೊಯ್ಯಬೇಕು, ವೇಷಧಾರಿಯ ಮಾತಿಗೆ ಆಧಾರವಾಗಿ ನಿಲ್ಲಬೇಕು
  3. ಅದು ವೇಷಧಾರಿಯ ನೃತ್ತ ಮತ್ತು ಭಾವ ನಿರೂಪಣೆಗ ಪೋಷಕವಾಗಿರಬೇಕು
ಈಗ ಈ ಮೂರು ಪ್ಯಾರಾಮೀಟರುಗಳು ಯಕ್ಷಗಾನ ಸಂಗೀತವನ್ನು ಹೇಗೆ ರೂಪಿಸಿವೆ ಎಂಬುದನ್ನು ಗಮನಿಸಬೇಕು.

ಬಹಿರ್ಮುಖಿ ಸಂಗೀತ

ಗಡುಸು ಹಿಮ್ಮೇಳದೊಂದಿಗೆ ಭಾಗವತರ ಹಾಡು ವೇಷಧಾರಿಗಳನ್ನು ಮಾತ್ರವಲ್ಲ ನೂರಾರು ಮಂದಿ ಹೊರಾಂಗಣದಲ್ಲಿ ಕುಳಿತಿರುವ ಪ್ರೇಕ್ಚಕರನ್ನು ತಲುಪಬೇಕು ಎನ್ನುವ ಅನಿವಾರ್ಯತೆ ಯಕ್ಷಗಾನ ಸಂಗೀತವನ್ನು ಬಹಿರ್ಮುಖವಾಗಿಸಿದೆ. ಶಾಸ್ತ್ರೀಯ ಸಂಗೀತ ಒಂದು ನಾದಾನುಸಂಧಾನ. ಗಾಯಕ ಮತ್ತು ಶ್ರೋತೃ ನಡುವಿನ ಒಂದು ಅಲಿಖಿತ ಒಪ್ಪಂದದಂತೆ ಗಾಯಕ ತನ್ಮಯನಾಗಿ ರಾಗವೀಥಿಯಲ್ಲಿ ಪಯಣಿಸುತ್ತಾನೆ. ಜೊತೆಯಲ್ಲಿ ಶ್ರೋತೃವನ್ನೂ ಕರೆದೊಯ್ಯುತ್ತಾನೆ. ಅಲ್ಲಿ ಒಂದು ಸಾಮೂಹಿಕ ಏಕಾಗ್ರತೆ ನೆಲೆಸಿರುತ್ತದೆ. ಯಾವುದೇ ಗಳಿಗೆಯಲ್ಲಿ ಒಂದು ಪ್ರತಿಭೆಯ ಸೆಳೆಮಿಂಚು ಅಲ್ಲಿ ಮೂಡಿ ಮರೆಯಾಗಬಹುದು. ಆದರೆ ಯಕ್ಷಗಾನದ ಹಾಡುಗಾರಿಕೆಯಲ್ಲಿ ಇದು ಸಾಧ್ಯವೂ ಅಲ್ಲ ಅದರ ಅಗತ್ಯವೂ ಇಲ್ಲ. ಸಂವಹನಸಾಧ್ಯತೆಗಾಗಿ ಅದು ಒಂದು .ನಿರ್ದಿಷ್ಟ ಸ್ಥಾಯಿಯಲ್ಲಿ-ಸಮಾನ್ಯವಾಗಿ ಮಧ್ಯ ಪಂಚಮದಿಂದ ತಾರ ಪಂಚಮದ ವರೆಗೆ-ಸಂಚರಿಸುತ್ತದೆ. ಇದಕ್ಕಾಗಿ ರಾಗಗಳ ಕೆಲವೊಂದು ಸ್ವರ. ಸಂಚಾರಗಳನ್ನಷ್ಟೇ ಆಯ್ದುಕೊಂಡು, ನಿರ್ದಿಷ್ಟ , ತಾಳ, ಛಂದಸ್ಸಿನೊಂದಿಗೆ ಬೆಸೆದು ರೂಪುಗೊಂಡ ವಿನ್ಯಾಸವನ್ನೇ ನಾವು 'ಮಟ್ಟು' ಎಂದು ಕರೆಯುತ್ತೇವೆ.

ಮಟ್ಟು

ತೆಂಕು ಮತ್ತು ಬಡಗು ಎರಡೂ ಶೈಲಿಗಳಲ್ಲಿ ಗಾಯನದ ಮಟ್ಟುಗಳಿವೆ. ಪ್ರಾಚೀನ ರಾಗಗಳ ಸ್ಚರಮೇಳಗಳನ್ನು ಆಯ್ದುಕೊಂಡು ಅದನ್ನು ಪದ್ಯದ ಛಂದಸ್ಸಿಗೆ ಅನುಗುಣವಾಗಿ ತಾಳದೊಂದಿಗೆ ಸಮನ್ವಯಗೊಳಿಸಿದಾಗ ದೊರೆಯುವ ಒಂದು ಧಾಟಿಯನ್ನು ಮಟ್ಟು ಎನ್ನಲಾಗುತ್ತದೆ. ಕಲ್ಯಾಣಿ, ಕಾಂಬೋಜಿ, ಮಧ್ಯಮಾವತಿ, ಭೈರವಿ, ಸೌರಾಷ್ಟ್ರ, ಸಾವೇರಿ ಮೊದಲಾದ ರಾಗಗಳಲ್ಲಿ ಹಲವಾರು ಮಟ್ಟುಗಳು ನಮಗೆ ಕಾಣಸಿಗುತ್ತವೆ. ಈ ಮಟ್ಟುಗಳಲ್ಲಿ .ಕರ್ನಾಟಕ ಸಂಗೀತದಲ್ಲಿ ನಾವು ಗುರುತಿಸುವಂತೆ ರಾಗಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. .ಕರ್ನಾಟಕ ಸಂಗೀತದಲ್ಲಿ ರಾಗಗಳ ಸಿಗ್ನೇಚರ್ ಅನ್ನುವಂಥ ಪ್ರಯೋಗಗಳು (ಉದಾ: ಮಧ್ಯಮಾವತಿಯ ಪಪರಿಸರೀ.. ಪ್ರಯೋಗ) ಮಟ್ಟುಗಳಲ್ಲಿ ಇರುವುದಿಲ್ಲ. ಅವು ರಾಗದ ಸ್ವರಗಳನ್ನು ತನ್ನ ಅಗತ್ಯಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಬಳಸಿಕೊಂಡು ರಾಗದ ಸ್ಥೂಲ ರೂಪವನ್ನು ಒದಗಿಸುತ್ತದೆ . ಸಾಮಾನ್ಯವಾಗಿ ಮಟ್ಟುಗಳಲ್ಲಿ ಮಧ್ಯ ಪಂಚಮದಿಂದ ತಾರ ಪಂಚಮದ ವರೆಗಿನ ಸ್ಚರಗಳು ಬಳಕೆಯಾಗುವುದರಿಂದ .ಪೂರ್ವಾಂಗ ಪ್ರಧಾನವಾದ ರಾಗಗಳ ಸ್ಟಷ್ಟ ಅನಾವರಣ ಇವುಗಳಲ್ಲಿ ನಡೆಯುವುದಿಲ್ಲ. ಆದರೆ ಮಟ್ಟು ಅನ್ನುವ ಈ ಸ್ಚತಂತ್ರ ಘಟಕಗಳಿಗೆ ತಮ್ಮದೇ ಆದ ಅನನ್ಯತೆ ಇದೆ, ಚೆಲುವಿದೆ. ಯಕ್ಷಗಾನ ಸಂಗೀತವನ್ನು ಇತರ ಸಂಗೀತ ಪದ್ದತಿಗಳಿಂದ ಪ್ರತ್ಯೇಕಿಸುವುದು ಈ ಮಟ್ಟುಗಳಾಗಿವೆ.

ಆದರೆ ಇತ್ತೀಚಿನ ದಿನಗಳಲ್ಲಿ ಯಕ್ಷಗಾನ ಭಾಗವತಿಕೆಯಲ್ಲಿ ಪರಂಪರೆಯ ಮಟ್ಟುಗಳು ಬಳಕೆಯಾಗುವುದು ವಿರಳವಾಗತೊಡಗಿದೆ. ಹಿಂದಿನ ಕಾಲದಲ್ಲೇ ತೆಂಕುತಿಟ್ಟಿನ ಭಾಗವತಿಗೆಗೆ ಕರ್ನಾಟಕ ಸಂಗೀತದತ್ತ ವಾಲುವ ಧೋರಣೆ ಇತ್ತು. ಹಿರಿಯ ಬಲಿಪ ನಾರಾಯಣ ಭಾಗತರು ದಕ್ಷಿಣಾದಿ ಸಂಗೀತವನ್ನು ಅಭ್ಯಾಸ ಮಾಡಿದ್ದರೂ ಅದನ್ನು ಹೊಸ ಮಟ್ಟುಗಳ ರೂಪಣೆಗಾಗಿ ಬಳಸಿಕೊಂಡು ಭಾಗವತಿಕೆಯನ್ನು ಕರ್ನಾಟಕ ಶೈಲಿಯಿಂದ ದೂರವಿರಿಸಿದ್ದರು. ಮೈಂದಪ್ಪ ರೈ, ಮಹಾಬಲ ನೋಂಡ ಮೊದಲಾದವರು ಶಾಸ್ರೀಯ ಸಂಗೀತದ ಅಂಶಗಳನ್ನು ತುಸು ಹೆಚ್ಚಾಗಿಯೇ ಬಳಸಿಕೊಂಡರು. 70ರ ದಶಕದಲ್ಲಿ ದಾಮೋದರ ಮಂಡೆಚ್ಚರು ಶುದ್ಧ ಕರ್ನಾಟಕ ಶೈಲಿಯಲ್ಲೇ ಯಕ್ಷಗಾನದ ಹಾಡುಗಳನ್ನು ಹಾಡತೊಡಗಿದರು. ಈಗ ಅನೇಕ ಹೊಸ ಭಾಗವತರು ಮಂಡೆಚ್ಚರ ಶೈಲಿಯಲ್ಲೇ ಹಾಡುವುದನ್ನು ಕಾಣಬಹುದಾಗಿದೆ. ಇನ್ನೊಂದೆಡೆಯಿಂದ ಸಿನಿಮಾ ಹಾಡುಗಳ ಧಾಟಿಗಳೂ ಯಕ್ಷಗಾನದಲ್ಲಿ ನುಸುಳಿಕೊಂಡು ಪರಂಪರೆಯ ಭಾಗವತಿಕೆಯನ್ನು ಕಲುಷಿತಗೊಳಿಸುವಲ್ಲಿ ಯಶಸ್ವಿಯಾಗಿವೆ.

ನಿರೂಪಣಾ ವಿಧಾನ

ಯಕ್ಷಗಾನ ಭಾಗವತಿಕೆಯ ಪ್ರಮುಖ ಲಕ್ಷ್ಯ ಕತೆಯನ್ನು ಮುಂದಕ್ಕೆ ಒಯ್ಯವುದು, ಮುಂದಿನ ಭಾಗವನ್ನು ನಿರೂಪಿಸಲು ವೇಷಧಾರಿಗೆ ಸಾಮಗ್ರಿಯನ್ನು ಒದಗಿಸುವುದು. ಹಾಗಾಗಿ ಭಾಗವತಿಕೆಯದ್ದು narrative style-ನಿರೂಪಣಾತ್ಮಕ ಶೈಲಿ, ಶಾಸ್ತ್ರೀಯ ಗಾಯನ ವಿವರಣಾತ್ಮಕ-descriptive style. ಶಾಸ್ತ್ರೀಯ ಸಂಗೀತ ರಾಗದ ಒಂದು ಕೇಂದ್ರಬಿಂದುವನ್ನೆತ್ತಕೊಂಡು ವಿಸ್ತಾರಗೊಳ್ಳುತ್ತ ಹೋಗುತ್ತದೆ. ಸೂಕ್ಷಾತಿಸೂಕ್ಷಮವಾಗಿ ವ್ಯವಹರಿಸುತ್ತದೆ. ಶಿಸ್ತುಬಧ್ದವಾಗಿ ರಾಗದ ಒಂದು ಸಮಗ್ರ ಚಿತ್ರವನ್ನು ನಮ್ಮೆದುರು ಬಿಚ್ಚಿಡುತ್ತದೆ. ಇದಕ್ಕಿಂತ ಹೊರತಾದ ಇನ್ನೊಂದು ಕೆಲಸ ಅದಕ್ಕಿಲ್ಲ. ಆದರೆ ಯಕ್ಷಗಾನ ರಾಗದ ಅಂತಸ್ಸತ್ವವನ್ನು ಮಾತ್ರ ಎತ್ತಿಕೊಂಡು ತನ್ನ ಅವಶ್ಯಕತೆಗೆ ತಕ್ಕಷ್ಟೇ ಅದನ್ನು ದುಡಿಸಿಕೊಳ್ಳುತ್ತದೆ. ಎಲ್ಲವೂ ವ್ಯಕ್ತವಾಗುವುದು ದೃಢವಾದ ದಪ್ಪ ರೇಖೆಗಳಲ್ಲಿ. ಗಮಕಗಳು ಅತ್ಯಲ್ಪ, ಬಿರ್ಕಾಗಳು ಇಲ್ಲ. ರಾಗ ಚಿತ್ರಣ ಭಾಗವತಿಕೆಯ ಉದ್ದೇಶವಲ್ಲದ ಕಾರಣ ವಿಸ್ತಾರವಾದ ರಾಗಲಾಪನೆ ಅಲ್ಲಿ ಅಪ್ರಸ್ತುತ. ಈ ಬಗೆಯ ಗಾಯನಕ್ಕೆ ಹೊಂದಿಕೊಳ್ಳುವಂಥ ರಾಗಗಳಲ್ಲೇ ಯಕ್ಷಗಾನದ ಮಟ್ಟುಗಳು ರೂಪುಗೊಂಡಿರುವುದನ್ನು ನಾವು ಕಾಣಬಹುದು. ಸಾಹಿತ್ಯದ ಭಾವ, ಛಂದಸ್ಸನ್ನು ಗಮನಿಸಿ ಒಂದೇ ರಾಗದ ಹಲವು ಮಟ್ಟುಗಳು ಯಕ್ಷಗಾನದಲ್ಲಿ ಹುಟ್ಟಿಕೊಂಡಿವೆ.

ಗಾಯನ ಸ್ವತಂತ್ರವಲ್ಲ

ಯಕ್ಷಗಾನದಲ್ಲಿ ಸಂಗೀತ ಎಂದೂ ಒಂಟಿಯಾಗಿರುವುದಿಲ್ಲ. ಅದಕ್ಕೆ ಸ್ವತಂತ್ರ ಅಸ್ತಿತ್ವ ಇಲ್ಲವೆಂದರೂ ಸರಿಯೇ. ಅದು ತನ್ನ ಎದುರು ಒಬ್ಬ ವೇಷಧಾರಿಯನ್ನು, ಅರ್ಥದಾರಿಯನ್ನು ಇರಿಸಿಕೊಂಡೇ ವ್ಯವಹರಿಸುತ್ತದೆ. ಹಾಗಾಗಿ ಅದರ ನಡೆ ಪೂರ್ವ ನಿರ್ಧರಿತ. ಗಾಯನದೊಂದಿಗೆ ಕುಣಿತವೂ ನಡೆಯುವುದರಿಂದ ಹಾಡಿನ ಯಾವುದೇ ಒಂದು ಭಾಗವನ್ನು ಮನೋಧರ್ಮದಿಂದ ಭಾಗವತ ನಡೆಸುವಂತಿಲ್ಲ. ತಾಳದ ಆವರ್ತ ಭಾವತನನ್ನೂ ವೇಷಧಾರಿಯನ್ನೂ ನಿಯಂತ್ರಿಸುತ್ತದೆ. ಸಾಹಿತ್ಯದ ಕೊನೆಯಲ್ಲಿ ಸಂಗೀತ ಲಂಬಿಸಿದರೆ ಅದನ್ನ ಸಂಗೀತದ ಪರಿಭಾಷೆಯಲ್ಲಿ ಬಾಲ ಎನ್ನಬೇಕಾಗುತ್ತದೆ. ಒಟ್ಟಂದವನ್ನು ಹೆಚ್ಚಿಸದ, ಸಾಹಿತ್ಯಭಾವವನ್ನು ಎತ್ತಿ ತೋರದ ಅನಗತ್ಯ appendage.

ಬೆಳವಣಿಗೆ

ಎಲ್ಲ ಕಲಾ ಪ್ರಕಾರಗಳಂತೆ ಯಕ್ಷಗಾನ ಸಂಗೀತವೂ ಬಹಳಷ್ಟು ಬದಲಾವಣೆಗಳ್ನನು ಕಂಡಿದೆ. ಕಲೆ ಕಾಲದ ಕೈಗೂಸಾದ ಕಾರಣ ಅದು ಸಮಕಾಲೀನ ಸಂವೇದನೆಗಳಿಗೆ ಸ್ಪಂದಿಸುತ್ತ ಹೋಗುವುದು ಸಹಜವೂ ಅನಿವಾರ್ಯವೂ ಆಗಿದೆ. ಆದರೆ ಎಲ್ಲ ರೀತಿಯ ಬದಲಾವಣೆಗಳನ್ನು ಸಾಧು ಅನ್ನುವಂತಿಲ್ಲ. ಯಾವುದೇ ಪ್ರಯೋಗ ನಡೆಸುವಾಗಲೂ ಅದರ ಹಿಂದೆ ಒಂದು ತಾತ್ವಿಕ ದೃಷ್ಟಿ ಇರಬೇಕು, ಔಚಿತ್ಯಪ್ರಜ್ಞೆ ಇರಬೇಕು, ಕಲಾ ಸೌಂದರ್ಯದ ಅರಿವಿರಬೇಕು.

ಒಂದು ಕಾಲಘಟ್ಟದಲ್ಲಿ ಯಕ್ಷಗಾನದ ಭಾಗವತಿಕೆ ಒಂದು ಸುಂದರ ಶೈಲಿಯ ಸಂಗೀತ ಪ್ರಕಾರವಾಗಿ ರೂಪುಗೊಂಡಿತು. ಈ ಮೂಲ ರೂಪದಿಂದ ಅದನ್ನು ನಾವು ಯಕ್ಷಗಾನ ಸಂಗೀತ ಎಂದು ಗುರುತಿಸುತ್ತೇವೆ. ತೆಂಕು ತಿಟ್ಟಿನ ಭಾಗವತಿಕೆಯಲ್ಲಿ ಹಿರಿಯ ಬಲಿಪರು, ಜೋಯಿಸರು, ಅಗರಿಯವರು ಮೂಲ ರೂಪವನ್ನು ಉಳಿಸಿಕೊಂಡು ತಮ್ಮದೇ ವಿಶಿಷ್ಟ ಶೈಲಿಯನ್ನು ರೂಪಿಸಿಕೊಂಡರು. ಇತ್ತೀಚೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತದ ದಟ್ಟ ಪ್ರಭಾವವನ್ನು ಯಕ್ಷಗಾನ ಭಾಗವತಿಕೆಯಲ್ಲಿ ಕಾಣಬಹುದು. ಯಕ್ಷಗಾನ ಭಾಗವತಿಕೆಯನ್ನು ಶುದ್ಧಾಂಗ ಶಾಸ್ತ್ರೀಯ ಸಂಗೀತವನ್ನಾಗಿಸುವುದು ಒಳ್ಳೆಯ ಬೆಳವಣಿಗೆಯಲ್ಲ. ಇದರಿಂದ ಕ್ರಮೇಣ ಯಕ್ಷಗಾನದ ಅನನ್ಯತೆಯ ಚಿಹ್ನೆಯಾಗಿರುವ ಮಟ್ಟು ಸಂಪೂರ್ಣ ಕಣ್ಮರೆಯಾಗಿ ಅದು ಕರ್ನಾಟಕ ಸಂಗೀತವಾಗಿಯೇ ಗುರುತಿಸಲ್ಪಡುವ ಅಪಾಯವಿದೆ.

ಯಕ್ಷಗಾನ ಭಾಗವತರು ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡುವುದು ಉಚಿತವೇ ಹೌದು. ಇದರಿಂದ ಸ್ವರಸ್ಥಾನಗಳ, ರಾಗಸ್ವರೂಪದ ಖಚಿತ ಪರಿಚಯವಾಗುತ್ತದೆ. ಮಧ್ಯಮಾವತಿ ಶ್ರೀರಾಗವಾಗಿಯೋ, ಮುಖಾರಿ ಭೈರವಿಯಾಗಿಯೋ ಜಾರಿಹೋಗುವುದನ್ನು ಇದು ತಡೆಯಬಲ್ಲುದು. ಆದರೆ ಯಕ್ಷಗಾನ ರಂಗಸ್ಥಳವನ್ನು ತಮ್ಮ ಶಾಸ್ತ್ರೀಯ ಸಂಗೀತದ ಪರಿಣತಿಯನ್ನು ಸಾಬೀತು ಪಡಿಸುವ ವೇದಿಕೆಯಾಗಿ ಬಳಸಿಕೊಳ್ಳವುದು ತರವಲ್ಲ. ಕಲಾ ಪ್ರದರ್ಶನದಲ್ಲಿ ಔಚಿತ್ಯಪ್ರಜ್ಞೆಗೆ ಮಹತ್ವದ ಸ್ಥಾನವಿದೆ. ಯಕ್ಷಗಾನದಲ್ಲೂ ಯಾವುದು ಎಷ್ಟು ಹೇಗಿರಬೇಕೆನ್ನುವ ಅರಿವನ್ನು ನಾವು ಬೆಳೆಸಿಕೊಂಡರೆ ಅದರ ಸೌಂದರ್ಯವನ್ನು ಉಳಿಸಿಕೊಳ್ಳಬಹುದು.ಕೃಪೆ : http://nadavihara.blogspot.in


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ