ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ
Share
ಯಕ್ಷಗಾನ ಭಾಗವತಿಕೆ ಮತ್ತು ಛಂದಸ್ಸು

ಲೇಖಕರು :
ದಿನೇಶ ಉಪ್ಪೂರ
ಮ೦ಗಳವಾರ, ಜುಲೈ 23 , 2013

`
ಯಕ್ಷಗಾನ ಛಂದಸ್ಸಿನ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇವೆ. ಹಲವಾರು ವಿದ್ವಾಂಸರು ಈ ಬಗ್ಗೆ ಸಾಕಷ್ಟು ಅಭ್ಯಾಸ ಮಾಡಿದ್ದಾರೆ. ಹಿಂದಿನ ಹಲವಾರು ಪ್ರಸಂಗಗಳ, ಪದ್ಯಗಳ ಸತ್ವಗಳನ್ನು, ಮೌಲ್ಯಗಳನ್ನು ಬಿಡಿ ಬಿಡಿಯಾಗಿ ತೆರೆದಿಟ್ಟು ಯಕ್ಷಗಾನ ಸಾಹಿತ್ಯ ಎಷ್ಟು ಶ್ರೀಮಂತವಾಗಿದೆ ಎಂಬುದನ್ನು ತಿಳಿಸಿದವರಿ ದ್ದಾರೆ. ಯಕ್ಷಗಾನ ಛಂದಸ್ಸಿನ ಬಗ್ಗೆ ನಿರ್ಣಯಾತ್ಮಕವಾಗಿ ಮಾತನಾಡುವ ಹಲವರು ಇಂದು ಇದ್ದಾರೆಂಬುದು ಸಂತೋಷದ ವಿಷಯ.

ಹಿರಿಯ ಭಾಗವತರು ತಮ್ಮ ಶಿಷ್ಯರಿಗೆ ತಾಳ, ರಾಗಗಳ ಜೊತೆಗೆ ಹಿಂದಿನ ಪೌರಾಣಿಕ, ಕಾಲ್ಪನಿಕ ಪ್ರಸಂಗಗಳ ಪಠ್ಯ ಗಳನ್ನು ಮಾದರಿಯಾಗಿ ಇರಿಸಿಕೊಂಡು ಆ ಪ್ರಸಂಗಗಳ ನಡೆ ಹೇಗೆ, ರಾಗ ಹೇಗೆ, ಯಾವ ಪದ್ಯ ಹೇಳಬೇಕು, ಒಟ್ಟಾರೆ ಅವಧಿಯನ್ನು ಕಡಿಮೆಗೊಳಿಸಿ ಪ್ರದರ್ಶಿಸುವಾಗ ಯಾವ ಪದ್ಯ ಬಿಡಬಹುದು ಎಂಬುದನ್ನೆಲ್ಲ ಹೇಳಿಕೊಡುತ್ತಿದ್ದುದು ರೂಢಿ. ಹೀಗಿ ರುತ್ತಾ ಇತ್ತೀಚೆಗೆ ಒಂದು ಯಕ್ಷಗಾನ ಕಾರ್ಯಾಗಾರದಲ್ಲಿ ಒಬ್ಬರು ಪಂಚವಟಿ ಪ್ರಸಂಗದ ಒಂದು ಪ್ರಸಿದ್ಧ ಪದ್ಯದ ಸಾಹಿತ್ಯವನ್ನು ಬದಲಿಸಿ ಹಾಡಿದರು. ಅನಂತರ ತಿಳಿದು ಬಂದುದೇನೆಂದರೆ, ಆ ಪದ್ಯದಲ್ಲಿ ಛಂದಸ್ಸು ದೋಷವಿರುವುದರಿಂದ ಛಂದಸ್ಸು ತಿಳಿದ ಮಹನೀಯರಿಂದ ಆ ಪದ್ಯವನ್ನು ಸರಿಪಡಿಸಿಕೊಂಡು ಹಾಡಲಾಗಿದೆ ಎಂದು.

ಹಿಂದಿನ ಅನೇಕ ಪ್ರಸಂಗಕರ್ತರು ಪೌರಾಣಿಕ ಜ್ಞಾನವಿರುವವರಾದರೂ ಛಂದಶಾಸ್ತ್ರ ಪಾರಂಗತರಾಗಿರಲಿಕ್ಕಿಲ್ಲ ಎಂದು ನನ್ನ ಅನಿಸಿಕೆ. ನನಗೆ ತಿಳಿದಿರುವ ಅನೇಕ ಪ್ರಸಂಗಕರ್ತರು ಹಿಂದಿನ ಹಳೆಯ ಪ್ರಸಿದ್ಧ ಪ್ರಸಂಗಗಳ ದಾಟಿಯನ್ನು, ಪದ್ಯದ ಅಳತೆಯನ್ನು ಹೊಂದಿಸಿಕೊಂಡು ಕತೆಯ ಸಂದರ್ಭಕ್ಕೆ ತಕ್ಕ ಹಾಗೆ ಪದ್ಯಗಳನ್ನು ರಚಿಸಿ ಪ್ರಸಂಗ ಬರೆಯುತ್ತಿದ್ದರು. ಈಗಲೂ ಅನೇಕ ಪ್ರಸಂಗಕರ್ತರು ಹಿಂದಿನ ಪದ್ಯಗಳ ದಾಟಿಯಲ್ಲೇ ಪದ್ಯ ರಚಿಸಿ "ದಾಟಿ', "ಮಟ್ಟು', "ಎಂಬಂತೆ' ಎಂಬುದಾಗಿ ಬರೆಯುತ್ತಾರೆ. ಅವು ಶುದ್ಧ ಪದ್ಯಗಳಲ್ಲ, ಅವುಗಳಲ್ಲಿ ಛಂದಸ್ಸಿಲ್ಲ ಎಂಬುದು ನನ್ನ ವಾದವಲ್ಲ. ಅಂತಹ ಪದ್ಯಗಳಲ್ಲಿ ಹೊಸ ರೀತಿಯ ಅಳತೆಯ ಮಟ್ಟುಗಳ ಪದ್ಯಗಳೂ ಇವೆ. ಅವುಗಳನ್ನು ಹೀಗೆಯೇ ಹಾಡಬೇಕು ಎಂಬ ಪ್ರಸಂಗಕರ್ತರೂ ಇರಬಹುದು.

ಆದರೆ ಹೆಚ್ಚಿನ ಭಾಗವತರು ತಮ್ಮ ತಮ್ಮ ಗುರುಗಳಿಂದ ಭಾಗವತಿಕೆ ಕಲಿಯುವಾಗ ರಾಗ, ತಾಳ, ಅಭ್ಯಾಸಗಳ ಜೊತೆಗೆ ಹಿಂದಿನ ಪ್ರಸಂಗಗಳ ನಡೆ, ಪದ್ಯಗಳನ್ನು ಹಾಡುವ ರೀತಿ, ಮಟ್ಟು, ಮುಕ್ತಾಯ ಇತ್ಯಾದಿಗಳನ್ನು ಕಲಿತು ಪರಿಣತಿ ಹೊಂದಲೇಬೇಕಾಗುತ್ತದೆ. ಇಂದಿನ ಮೇಳಗಳಲ್ಲಿ ಭಾಗವತರಾಗಿ ಮೆರೆಯುತ್ತಿರುವ ಅನೇಕ ಭಾಗವತರು ಅಂತಹ ಗುರುಗಳಿಂದ ಅಭ್ಯಾಸ ಮಾಡಿ ಬಂದಿರಲೇಬೇಕು. ಯಾಕೆಂದರೆ, ಭಾಗವತಿಕೆ ಇದ್ದಕ್ಕಿದ್ದಂತೆ ಕಲಿತು ಬರುವಂಥದ್ದಲ್ಲ. ಇಂದು ಹಲವು ಭಾಗವತರು ಹಳೆಯ ಪ್ರಸಂಗಗಳ ಪದ್ಯಗಳನ್ನು ಹಿಂದಿನವರು ಹೇಳುವ ಹಾಗೆ ಹೇಳುತ್ತಿಲ್ಲ ಎಂದರೆ, ಅವುಗಳನ್ನು ಹೇಳುವ ಕ್ರಮವನ್ನು ಅವರು ಕರಗತ ಮಾಡಿಕೊಂಡಿಲ್ಲ, ಅನನುಭವಿಗಳು ಅಥವಾ ಮರೆತಿದ್ದಾರೆ ಎಂದು ಅರ್ಥ. ಹಳೆಯ ಪ್ರಸಂಗಗಳ ಪದ್ಯಗಳಲ್ಲಿ ಛಂದಸ್ಸು ದೋಷವಿದೆ ಎಂದು ಸಾಹಿತ್ಯವನ್ನು ಬದಲಿಸಿ ಹಾಡಿದರೂ ಅದನ್ನು ಮೇಲಿನಂತೆಯೇ ಪರಿಗಣಿಸಬೇಕಾಗುತ್ತದೆಯೇ ಹೊರತು ಬೇರೆ ಅಲ್ಲ ಅಥವಾ ಅದೊಂದು ಪ್ರಯೋಗ ಮಾತ್ರ ಆದೀತು.

ಕೆಲವು ಪ್ರಸಂಗಗಳಲ್ಲಿ ಪಾತ್ರಗಳ ಔಚಿತ್ಯದ ದೃಷ್ಟಿಯಿಂದ ಕೆಲವೊಂದು ಪದ್ಯಗಳನ್ನು ಭಾಗವತರೇ ಸೇರಿಸಿ ಹಾಡುವುದು ಕ್ರಮವಿತ್ತು. ಹಲವು ಭಾಗವತರು ಹಳೆಯ ಪ್ರಸಂಗಗಳ ಪದ್ಯಗಳನ್ನು ಉದ್ದೇಶಪೂರ್ವಕವಾಗಿ ಹೊಸ ರಾಗಗಳನ್ನು ಬಳಸಿ ಹೇಳುವುದೂ ಇತ್ತು. ಅದು ಆ ಭಾಗವತರಿಗೆ ಸೀಮಿತ. ಕೆಲವೊಮ್ಮೆ ಅದು ಚೆನ್ನಾಗಿದ್ದರೆ ಅದನ್ನು ಬೇರೆ ಭಾಗವತರು ಅನುಸರಿಸುತ್ತಿದ್ದರು. ಅದು ಆಯಾಯ ಭಾಗವತರ ಮನೋಭಾವಕ್ಕೆ ಅನುಗುಣವಾಗಿ ಇರುತ್ತದೆ. ಆದರೆ ಪ್ರಸಂಗಗಳ ಪದ್ಯ ಗಳನ್ನು ಬದಲಾಯಿಸಿ ಸಾಹಿತ್ಯವನ್ನು ಮಾರ್ಪಡಿಸಿ ಹಾಡುವುದು ಬಹಳ ಅಪರೂಪ ವೆಂದೇ ನನ್ನ ಅನಿಸಿಕೆ. ಈ ಬಗ್ಗೆ ಚರ್ಚೆಯಾಗಲಿ.ಕೃಪೆ : http://www.udayavani.com


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Pramod Rai(10/10/2013)
ಸೂಕ್ತವಾಗಿ ಬರೆದಿದ್ದೀರಿ. ಉತ್ತಮ ಚಿಂತನೆ !
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ