ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸ೦ದರ್ಶನ
Share
ಪೂರ್ಣಚಂದ್ರ ಎಂಬ ಅರ್ಪಿತಾ ಪ್ರಸಂಗ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ಆಗಸ್ಟ್ 7 , 2013

ಚಿಕ್ಕ ಪ್ರಾಯದ ಬಾಲೆ ಚದುರೆ
ಪ್ರಸಂಗವೊಂದ ಬರೆದೆಯೇನೇ!

ಧಿ-ಹಾಗಂತ ಥೇಟ್‌ ಯಕ್ಷಗಾನದ ಧಾಟಿಯಲ್ಲೇ ಕೇಳಬೇಕು. ಅಂಥ ಕೆಲಸವನ್ನು ಈ ಇಪ್ಪತ್ತರ ಬಾಲೆ ಅರ್ಪಿತಾ ಹೆಗಡೆ ಮಾಡಿದ್ದಾಳೆ. ಹೊಸಚಿಗುರು ಹಳೆಬೇರು, ಹಳೆ ತತ್ವ ಹೊಸಯುಕ್ತಿ ಒಂದಾಗುವುದು ಅಂದರೆ ಇದೇ. ಫೇಸ್‌ಬುಕ್‌ ಪ್ರಿಯೆ, ಅನಿಮೇಷನ್‌ ವಿದ್ಯಾರ್ಥಿನಿ, ಬರೆದದ್ದು ಯಕ್ಷಗಾನ ಪ್ರಸಂಗ. ಅದೇನು ಸುಲಭದ ಕೆಲಸವಲ್ಲ, ಕಂದಪದ್ಯದಿಂದ ಹಿಡಿದು ಷಟ್ಪದಿಗಳ ತನಕದ ಛಂದಸ್ಸು ಗೊತ್ತಿರಬೇಕು. ಬರೆದ ಪದ್ಯ ಯಾವ ತಾಳದಲ್ಲಿರಬೇಕು ಅನ್ನುವುದು ತಿಳಿದಿರಬೇಕು. ವೀರಾವೇಶದ ಪದ್ಯಗಳಿಂದ ಶೃಂಗಾರದ ಪದ್ಯಗಳ ತನಕ ಒಂದೊಂದಕ್ಕೂ ಒಂದೊಂದು ಧಾಟಿ. ವಿದೂಷಕನ ಶೈಲಿಯೇ ಬೇರೆ, ರಾಜಗಾಂಭೀರ್ಯ, ರಾಜಕುಮಾರಿಯ ವಯ್ನಾರ, ತಪಸ್ವಿಯ ಧೀಮಂತಿಕೆಗಳೆಲ್ಲ ಒಂದು ಪ್ರಸಂಗದೊಳಗೆ ಮೈಗೂಡುವಂತೆ ಬರೆಯುವುದು ಒಂದು ಸವಾಲು.

ಪ್ರಶ್ನೆ : ಯಕ್ಷಗಾನಕ್ಕೆ ಅಡಿಯಿರಿಸಿದ್ದು ಹೇಗೆ?

ಅರ್ಪಿತಾ ಹೆಗಡೆ : ರಕ್ತಗತವಾಗಿ ಅಂತ ಹೇಳಬಹುದು. ಅಪ್ಪ ಪುರುಷವೇಷ ಮಾಡ್ತಾ ಇದ್ದರು. ತುಂಬಾ ಚಿಕ್ಕವಳಾಗಿದ್ದಾಗಿನಿಂದಲೂ ನನಗೂ ಯಕ್ಷಗಾನ ಮಾಡಬೇಕು ಅನಿಸ್ತಾ ಇತ್ತು. ನನಗಿನ್ನು ನೆನಪಿದೆ, ಸುಮಾರು ನಾಲ್ಕು ವರ್ಷದವಳಾಗಿದ್ದಾಗ 'ನೀಲ ಗಗನದಲ್ಲಿ ಮೇಘಗಳು..' ಅನ್ನುವ ಪದ್ಯಕ್ಕೆ ಬಣ್ಣಹಚ್ಚಿ ಕುಣಿದಿದ್ದೆ. ಆನಂತರ ಅಪ್ಪ ನನ್ನ ಯಕ್ಷದೇಗುಲಕ್ಕೆ ಸೇರಿಸಿದರು. ಅಲ್ಲಿ ಯಕ್ಷಗಾನ ಅಭ್ಯಾಸ ಮಾಡಿದೆ. ಚಕ್ರವ್ಯೂಹದ ಅಭಿಮನ್ಯು, ಲವ-ಕುಶ, ಕಂಸ, ಅಂಬೆ, ದಾಕ್ಷಾಯಿಣಿ, ದ್ರೌಪದಿ, ಮೋಹಿನಿ, ವಿಷ್ಣು ಹೀಗೆ ನೂರಾರು ಪಾತ್ರಗಳಿಗೆ ಬಣ್ಣ ಹಚ್ಚಿದ್ದೇನೆ. ಪ್ರಸ್ತುತ ಸಿರಿಕಲಾಮೇಳದಲ್ಲಿ ಯಕ್ಷಗಾನ ಕಲಾವಿದೆಯಾಗಿದ್ದೇನೆ.

ಪ್ರಶ್ನೆ : ಈಗೀನ ಪೀಳಿಗೆಯವರ ತಲ್ಲಣಗಳೇ ಬೇರೆ, ಅಂಥದ್ದರಲ್ಲಿ ನೀವು ಯಕ್ಷಗಾನದ ಬಗ್ಗೆ ಇಷ್ಟು ಆಸಕ್ತಿ ಹೊಂದಲು ಕಾರಣ?

ಅರ್ಪಿತಾ ಹೆಗಡೆ : ನನಗೆ ಈ ಕಲೆ ಬಗ್ಗೆ ಇರುವ ಆಸಕ್ತಿಯೇ ಕಾರಣ. ನನಗೆ ಬೇರೆ ಯಾವ ಹೊಸ ತಂತ್ರಜ್ಞಾನವನ್ನು ನೋಡಿದರೂ ಅದು ನಮ್ಮದಲ್ಲ ಅನಿಸ್ತಾ ಇರುತ್ತೆ. ಈಗಿನ ಪೀಳಿಗೆಯವರಲ್ಲಿ ಈ ಆಸಕ್ತಿ ಕಡಿಮೆ ನಿಜ. ಅದಕ್ಕೆ ನನಗೆ ಇಷ್ಟೊಂದು ಅದ್ಭುತ ಕಲೆಯನ್ನು ಉಳಿಸಬೇಕು ಮತ್ತು ನನ್ನ ಓರಗೆಯವರಿಗೆ ತಿಳಿಸಬೇಕು, ಅವರನ್ನು ಈ ಕಲೆಯತ್ತ ಸೆಳೆಯಬೇಕು ಎಂಬ ಆಸೆಯಿದೆ. ಇಂದು ರಾಮಾಯಣ, ಮಹಾಭಾರತ ಕತೆಯನ್ನು ಪಠಣ ಮಾಡಿ ಮಕ್ಕಳಿಗೆ ಹೇಳಿಕೊಡಲು ದೊಡ್ಡವರಿಗೂ ಪುರುಸೊತ್ತಿಲ್ಲ. ಅದನ್ನು ಕೇಳಿಸಿಕೊಳ್ಳಲು ಚಿಕ್ಕವರಿಗೂ ವ್ಯವಧಾನವಿಲ್ಲ. ಅದೆ ಚೋಟಾ ಭೀಮ್‌ ಮತ್ತು ಹನುಮಾನ್‌ ಅಂತ ಆ್ಯನಿಮೇಷನ್‌ ಮಾಡಿ ತೋರಿಸಿದರೆ ಇಷ್ಟಪಟ್ಟು ನೋಡುತ್ತಾರೆ. ಹಾಗೇ ನನ್ನ ಮುಂದಿನ ಪೀಳಿಗೆಗೆ ನಾನು ಯಕ್ಷಗಾನವನ್ನು ಆ್ಯನಿಮೇಷನ್‌ಗೆ ಪರಿವರ್ತನೆ ಮಾಡಿ ಅವರಿಗೆ ತೋರಿಸಬೇಕು ಎಂಬ ಗುರಿಯಿಟ್ಟುಕೊಂಡಿದ್ದೇನೆ. ಅದಕ್ಕಾಗಿಯೇ ಆ್ಯನಿಮೇಷನ್‌ ಡಿಗ್ರಿ ಕೂಡ ಓದುತ್ತಿದ್ದೇನೆ. ನಾನು ಈಗಿನ ಪೀಳಿಗೆಯವರ ಹಾಗೆ ಡ್ರೆಸ್‌ ಮಾಡದಿರಬಹುದು, ಆದರೆ ನಾನು ಕೂಡ ಫೇಸ್‌ಬುಕ್‌ನಲ್ಲಿದ್ದೀನಿ, ಅಲ್ಲಿಯೂ ನಮ್ಮ ಯಕ್ಷಗಾನವನ್ನು ಪ್ರಮೋಟ್‌ ಮಾಡುವ ಕೆಲಸ ಮಾಡುತ್ತೇನೆ.

ಪ್ರಶ್ನೆ : ಈ ವಯಸ್ಸಿಗೆ ಕತೆ ಬರೆಯಲು ಸ್ಪೂರ್ತಿ ಏನು?

ಅರ್ಪಿತಾ ಹೆಗಡೆ : ಒಂದು ಕತೆ ಬರೆಯಬೇಕು ಅಂತ ಇಷ್ಟ ಇದ್ದೇ ಇತ್ತು. ನಾನು ದ್ವಿತೀಯ ಪಿ.ಯು.ಸಿ.ಯಲ್ಲಿದ್ದಾಗ ಪೂರ್ವಾಂಗನೆ ಮತ್ತು ಪಶ್ಚಿಮಾಂಗನೆ ಎನ್ನುವ ಕತೆಯಿತ್ತು. ಆ ಕತೆ ಬಣ್ಣಗಳು ಮಾತನಾಡಿಕೊಳ್ಳುವ ಕತೆಯಾಗಿತ್ತು. ಅದು ನನ್ನ ಪ್ರಭಾವಿಸಿತ್ತು. ಆಗ ನಾನು ಅದನ್ನು ಸ್ಪೂರ್ತಿಯಾಗಿಟ್ಟುಕೊಂಡು, ಕಪ್ಪು ಬಣ್ಣದ ತಂಗಿ ಮತ್ತು ಬಿಳಿ ಬಣ್ಣದ ಅಣ್ಣ ಅವರಿಬ್ಬರ ನಡುವೆ ನಡೆಯುವ ವರ್ಣವೈಷಮ್ಯದ ಕತೆಯನ್ನು ಬರೆದೆ. ಮತ್ತು ನಾನೊಬ್ಬಳೆ ಮಗಳು, ನನಗೂ ಒಬ್ಬ ಅಣ್ಣನಿರಬೇಕಿತ್ತು ಎಂದು ಸದಾ ಅನಿಸುತ್ತಿತ್ತು ಅದರಂತೆ ಕತೆಯಲ್ಲಾದರೂ ಅಣ್ಣನ ಬಗ್ಗೆ ಬರೆಯೋಣ ಎಂದು ಅನಿಸಿ ಬರೆದೆ.

ಪ್ರಶ್ನೆ : ಸಂಪ್ರದಾಯವಾದಿಗಳು ತಗಾದೆ ತೆಗೆದರೆ ಅವರಿಗೆ ಹೇಗೆ ಉತ್ತರಿಸುತ್ತೀರಿ?

ಅರ್ಪಿತಾ ಹೆಗಡೆ : ಖಂಡಿತ ಆ ಬಗ್ಗೆಗೂ ನಾನು ಯೋಚನೆ ಮಾಡಿದ್ದೇನೆ. ನಮ್ಮಲ್ಲಿ ತುಂಬಾ ಮಂದಿ ಪೌರಾಣಿಕಪ್ರಿಯರು ಇದ್ದಾರೆ. ಹಳೆ ಬೇರು, ಹೊಸ ಚಿಗುರು ಎರಡೂ ಬೇಕು. ನಾನು ಕೌಟುಂಬಿಕ ಕತೆ ಬರೆದಿದ್ದೀನಿ ನಿಜ, ಆದರೆ ಎಲ್ಲಿಯೂ ನಾನು ಚೌಕಟ್ಟು ಮೀರುವ ಪ್ರಯತ್ನ ಮಾಡಿಲ್ಲ. ಏನೇ ಮಾಡಿದರೂ ಅದೆಲ್ಲವನ್ನು ಯಕ್ಷಗಾನದ ಚೌಕಟ್ಟಿನಲ್ಲೇ ಮಾಡಿದ್ದೀನಿ.

ಪ್ರಶ್ನೆ : ಕತೆ ಹೊರತುಪಡಿಸಿ ಬೇರೆ ಏನೆಲ್ಲಾ ಹೊಸಪ್ರಯೋಗಗಳು ಇದರಲ್ಲಿವೆ?

ಅರ್ಪಿತಾ ಹೆಗಡೆ : ಕೋಲಾಟ ಒಂದನ್ನು ಹೊಸದಾಗಿ ಸೇರಿಸಿದ್ದೀನಿ. ಮತ್ತು ಯಕ್ಷಗಾನದ ಚೌಕಟ್ಟಿನಲ್ಲಿ ಬರುವ ಪರಂಪರ ಯುದ್ಧ ನೃತ್ಯ ಸ್ಪರ್ಧೆಯನ್ನು ಇಟ್ಟಿದ್ದೀನಿ.

ಪ್ರಶ್ನೆ : ನಿಮ್ಮ ಸ್ನೇಹಿತರನ್ನು ಈ ಪ್ರಯೋಗಕ್ಕೆ ಆಹ್ವಾನಿಸಿದ್ದೀರಾ?

ಅರ್ಪಿತಾ ಹೆಗಡೆ : ಫೇಸ್‌ಬುಕ್‌ನಲ್ಲಿ ಆಹ್ವಾನ ಮಾಡಿದ್ದೀನಿ ಮತ್ತು ಕ್ಲಾಸ್‌ನಲ್ಲೂ ಹೇಳಿದ್ದೀನಿ. ಇಲ್ಲಿನವರಿಗೆ ಯಕ್ಷಗಾನದ ಬಗ್ಗೆ ಅಷ್ಟಾಗಿ ಗೊತ್ತಿರುವುದಿಲ್ಲ. ಬಲವಂತವಾಗಿ ಯಾವ ಕಲೆಯನ್ನು ಅರ್ಥಮಾಡಿಸಬಾರದು ಎಂದು ನಂಬಿದವಳು ನಾನು. ನೋಡೋಣ ಹೇಗಾಗುತ್ತೆ ಅಂತ.

ಪ್ರಶ್ನೆ : ಮತ್ತೆ ಕತೆ ಬರೆಯುತ್ತೀರಾ?

ಅರ್ಪಿತಾ ಹೆಗಡೆ : ಖಂಡಿತ ಬರೆಯುತ್ತೇನೆ. ಒಂದು ವಿನೂತನ ಕತೆ ಜೊತೆ ಮತ್ತೂಂದು ಪ್ರಸಂಗ ಮಾಡೇ ಮಾಡುತ್ತೇನೆ.

ಪ್ರಶ್ನೆ : ಮನೆಯವರ ಪ್ರೋತ್ಸಾಹ ಹೇಗಿತ್ತು?

ಅರ್ಪಿತಾ ಹೆಗಡೆ : ನಾನು ಎಲ್‌.ಕೆಜಿ.ಯಲ್ಲಿರುವಾಗಲೇ ಎಲ್ಲರೂ ನನ್ನ ತುಂಬಾ ಬೆಂಬಲಿಸುತ್ತಿದ್ದರು. ಕಾಲೇಜಿನಲ್ಲಿದ್ದಾಗ ಯಕ್ಷ-ಭರತನಾಟ್ಯ ಅಂತ ಜುಗಲ್‌ಬಂದಿ ಮಾಡಿದ್ದೆ. ಅಪ್ಪನಂತೂ ಮನೆಯಿಂದ ಇಪ್ಪತ್ತು ಕಿ.ಮೀ ದೂರವಿರುವ ಯಕ್ಷದೇಗುಲಕ್ಕೆ ಅವರೇ ಕರೆದುಕೊಂಡು ಹೋಗಿ ಬಿಟ್ಟು ವಾಪಸ್‌ ಕರೆತರುತ್ತಿದ್ದರು.

ಪ್ರಶ್ನೆ : ಆಸಕ್ತಿಗಳೇನು?

ಅರ್ಪಿತಾ ಹೆಗಡೆ : ಕಾದಂಬರಿ, ಪುರಾಣ ಕತೆಗಳನ್ನು ಓದುವುದು, ಸಂಗೀತ, ಭಾವಗೀತೆ ಕೇಳ್ಳೋದು. ಭರತನಾಟ್ಯ, ಕಥಕ್‌ ನೃತ್ಯಗಳನ್ನು ನೋಡುವುದು.ಕೃಪೆ : http://kannada.yahoo.com


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Rajalakshmi A.H.(3/25/2015)
Arpitha hegde avara bagge swalpa mattige tilidukonddidde. ega avara vishayavannu internet nalli tilidukondaga tumbane santhosha aytu. e kaleya bagge chikkandinallii nanagu aasakthi ittu adare avakasha iralilla. all the best in arpita
ಪೂರಕ ಲೇಖನಗಳು
     ತಾಜಾ ಲೇಖನಗಳು
   
  ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
  ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
  ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
   
  © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ