ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ದುರ್ಬಲ ಪ್ರಸಂಗ

ಲೇಖಕರು :
ರಾಜ್ ಕುಮಾರ್
ಶುಕ್ರವಾರ, ಆಗಸ್ಟ್ 30 , 2013

“ಕಣ್ಣಿದ್ದೂ ಕುರುಡಾಗಿ ಕಿವಿಯಿದ್ದೂ ಕಿವುಡಾಗಿ ಬಾಯಿ ಇದ್ದೂ ಮೂಕನಾಗಿ ನೋಡಬೇಕಾದ್ದು ಜಗತ್ತಿನಲ್ಲಿ ಬಹಳವಿದೆ.”

ಬಹಳ ಹಿಂದೆ ನನ್ನ ಬಾಲ್ಯದಲ್ಲಿ ಒಂದು ಆಟಕ್ಕೆ ಹೋದ ನೆನಪು. ಅದು ಮಂಗಳೂರಿನ ದೇರೇಬೈಲು ಪರಿಸರದಲ್ಲಿ ಎಲ್ಲೋ ಆದ ಆಟ. ಪ್ರಸಂಗ ದೇವಿ ಮಹಾತ್ಮೆ. ಊರ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಊರಿನವರೇ ಆಡುವ ಆಟವದು. ಅಟ ಬಹಳ ಅಧ್ಹೂರಿಯಲ್ಲಿ ಆಗುತ್ತಿತ್ತು .ಸಭೆಯೂ ಹಾಗೆ..ಆಟ ಅಡುತ್ತಿದ್ದ ಗದ್ದೆಯ ತುಂಬ ಸೇರಿತ್ತು. ಮಹಿಷಾಸುರ ಪ್ರವೇಶವೂ ಯಥಾ ಪ್ರಕಾರ ಅದ್ಧೂರಿಯಲ್ಲಿ ಆಯಿತು. ಮಕ್ಕಳು ನಾವೆಲ್ಲ ಬೆರಗುಗಣ್ನುಗಳಿಂದ ನೋಡುತ್ತಿದ್ದೆವು. ಸಭೆಯಲ್ಲಿ ಧೂಳೆಬ್ಬಿಸಿ ಎಲ್ಲ ಧೂಳೀಪಟವಾದಮೇಲೆ ರಂಗಸ್ಥಳಕ್ಕೆ ಒಂದು ಸುತ್ತು ಬಂದ ಮಹಿಷ ಮತ್ತೆ ರಂಗಸ್ಥಳ ಪ್ರವೇಶ ಮಾಡಿದ. ಚೆಂಡೆಯವರ ಪಕ್ಕದಲ್ಲೇ ಓಡೋಡಿ ಬಂದವನು ವೇಗವಾಗಿ ಬಂದು ಜೋಲು ಹೊಡೆದು ಕೆರೆಗೆ ಹಾರಿದ ಹಾಗೆ ಮುಂದೆ ಬಂದು ರಂಗಸ್ಥಳದ ಕೆಳಗೆ ಬಿದ್ದು ಬಿಟ್ಟ. ದೊಂದಿ ರಾಳದವರು ಅಧರಿಸುವ ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ. ಧೊಪ್ಪನೇ ಬಿದ್ದವನು ಸ್ವಲ್ಪ ಹೊತ್ತು ಅಲ್ಲೇ ಹೊಲದ ಮಣ್ಣಿನಲ್ಲೇ ಬಿದ್ದು ಬಿಟ್ಟಿದ್ದಾನೆ. ಆರಂಭದಲ್ಲಿ ನಾವೆಲ್ಲ ಇದು ಕುಣಿತದ ಒಂದು ಕ್ರಮ ಎಂದು ತಿಳಿದುಕೊಂಡರೂ ಮರುಕ್ಷಣದಲ್ಲೇ ಅರಿವಾಯಿತು ಇದು ಕಥೆ ಬೇರೆ ಅಂತ. ಮಹಿಷಾಸುರ ನಿಜಕ್ಕೂ ಜೋರಾಗಿಯೇ ಸುರಾಪಾನ ಮಾಡಿ ಹುಚ್ಚು ಕಟ್ಟಿದ್ದ. ಸ್ವಲ್ಪ ಹೊತ್ತು ತಡೆದು ಸಾವರಿಸಿ ಎದ್ದು ನಿಂತರೂ ನಿಲ್ಲುವುದಕ್ಕಾಗದೇ ಇರುವಾಗ ಕೆಲವರು ಹಿಡಿದು ನಿಲ್ಲಿಸಿ ರಂಗಸ್ಥಳಕ್ಕೆ ಹತ್ತಿಸಿಬಿಟ್ಟರು. ಮತ್ತೆ ಅದು ಯಾವುದೋ ರೀತಿಯಲ್ಲಿ ಕುಣಿದು ಅಂತು ಆಟ ಮುಂದುವರೆಯಿತು. ಬಿದ್ದು ಮೈಯೆಲ್ಲ ಇದ್ದ ಧೂಳನ್ನು ನೋಡಿದರೆ ನಿಜಕ್ಕೂ ಮಹಿಷಾಸುರನ ಸಹಜಾಭಿನಯ ಎಂದು ಪ್ರಶಸ್ತಿಯನ್ನು ಕೊಡುತ್ತಿದ್ದರೋ ಏನೋ? ಹಾಗೂ ಅಲ್ಲಲ್ಲಿ ಮೆತ್ತಿಕೊಂಡ ಧೂಳು ಕೊಡವಿಕೊಂಡು ಮಹಿಷ ಕುಣಿದ.

ಸಾ೦ದರ್ಭಿಕ ಚಿತ್ರ : ಮಹಿಷಾಸುರನ ಪಾತ್ರ
ಕಲಾವಿದ ಯಾರೋ ಒಂದೂ ಈಗ ಜ್ಞಾಪಕವಿಲ್ಲ. ಮಹಿಷಾಸುರ ರೈಸು ಬೇಕು ಅಂತ ಯಾರೋ ಒಂದಷ್ಟು ಅಮೃತ ಸೇವೆಯನ್ನು ಮಾಡಿಸಿದ್ದು ಅದು ಸರ್ವಾಂಗ ಸೇವೆಯೇ ಅಗಿಬಿಟ್ಟಿತು. ಎಂತಹ ಆಭಾಸ ? ಆದರೂ ಸಹಜವೋ ಎಂಬಂತೆ ಆಟ ಮುಂದುವರೆಯಿತು. ಜೋಲುತ್ತಾ ವಾಲುತ್ತ ಮಹಿಷ ಕೆಲವೊಮ್ಮೆ ಕುಣಿವಾಗ ಈಗ ಬಿದ್ದು ಬಿಡುತ್ತಾನೆ ಎಂದು ನಾವೆಲ್ಲ ಮಕ್ಕಳು ತಮಾಷೆಗೆ ಪಂಥ ಕಟ್ಟಿದ್ದು ಈಗಲೂ ನೆನಪಿದೆ ಆದರೆ ಈಗ ಅದರ ಗಂಭೀರತೆ ಅರಿವಾಗುತ್ತದೆ.

ಇದು ಹೀಗಾಗದರೆ ಆನಂತರ ಒಂದು ಸಲ ರಂಗಸ್ಥಳದ ಹಿಂದೆ ಹೋದಾಗ ಇನ್ನೊಂದು ಕೌತುಕ ಕಾದಿತ್ತು ದೇವಿಯ ಪಾತ್ರಧಾರಿ ಬೆಂಚಿಮೇಲೆ ಕುಳಿತು ಬೀಡಿ ಸೇದುವುದು…ಮತ್ತೆ ಗಡಿಬಿಡಿಯಲ್ಲಿ ಹೊಗೆಯುಗುಳುತ್ತ ಪ್ರವೇಶ ಮಾಡುವಾಗ ಹೋಗೆಯುಗುಳುವ ದೇವಿ ಆ ಸನ್ನಿವೇಶಕ್ಕೆ ನಿಜಕ್ಕು ಸಹಜ ಅಭಿನಯ ಅಂತ ಅನ್ನಿಸಬೇಕು.

ಈ ಎರಡು ಸನ್ನಿವೇಶಗಳಲ್ಲಿ ದೌರ್ಬಲ್ಯ ಹೇಗೆ ಒಂದು ಪತನಕ್ಕೆ ಹೇತುವಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಯಿತು. . ಸಾರ್ವಜನಿಕ ಜೀವನದಲ್ಲಿ ಇರುವವರು ಒಂದು ದೌರ್ಬಲ್ಯಕ್ಕೆ ಅಂಟಿಕೊಂಡಾಗ ಆ ದೌರ್ಬಲ್ಯ ಕೇವಲ ವೈಯಕ್ತಿಕ ವಿಚಾರವಾಗಿ ಉಳಿಯುವುದಿಲ್ಲ. ಅವರು ಪ್ರತಿನಿಧಿಸುವ ಸಾರ್ವಜನಿಕ ರಂಗಕ್ಕೂ ಅದು ಬಾಧಕವಾಗುತ್ತದೆ. ಅದರೆ ಬಾಧಕವಾಗುವುದೆಲ್ಲ ಅಸಡ್ಡೆಯಿಂದ ಗಮನಿಸಲ್ಪಡುವುದಿಲ್ಲ. ಸಾಮಾನ್ಯ ಘಟನೆ ಎಂಬಂತೆ ಅದು ಕಳೆದು ಬಿಡುತ್ತದೆ. ನಮ್ಮ ಕುಟುಂಬದ ಮನೆಯ ಸದಸ್ಯರು ಅಥವಾ ಒಡನಾಡಿಗಳು ಸಾರ್ವಜನಿಕವಾಗಿ ದೌರ್ಬಲ್ಯದಿಂದ ನಗೆಪಾಟಲಿಗೀಡಾಗುವಾಗ ಅಗುವ ನೋವು ಮುಜುಗರ ಕೊನೆಯಲ್ಲಿ ಹತಾಶೆ ಅನುಭವಕ್ಕೆ ಬರಬೇಕೆಂದರೆ ಆತ ಖಂಡಿತವಾಗಿಯೂ ದೌರ್ಬಲ್ಯದಿಂದ ದೂರವಿದ್ದವನಾಗಿರಬೇಕು.

ಕಲಾವಿದ ಎಂದ ಮೇಲೆ ಒಂದಲ್ಲ ಒಂದು ಗಂಭೀರವಾದ ದೌರ್ಬಲ್ಯ ಹೊಂದಿರಬೇಕೆಂಬ ಸಹಜ ನಿಯಮವಿದೆ. ಕಲೆಯೇ ಒಂದು ದೌರ್ಬಲ್ಯವಾಗಿ ಅದಕ್ಕೆ ಸಮಾನಾಂತರವಾಗಿ ಇನ್ನೊಂದು ದೌರ್ಬಲ್ಯ ಜತೆಯಲ್ಲೇ ಇದ್ದು ಕೊಂಡು ಇನ್ನೊಂದು ಸಮಾನಾಂತರದ ಹಾದಿಯನ್ನು ಕ್ರಮಿಸದಂತೆ ಪ್ರೇರೇಪಿಸುತ್ತದೆ. ಇದು ಅರಿವಿದ್ದೂ ಅನಿವಾರ್ಯವೆಂಬಂತೆ ಅಪ್ಪಿಕೊಳ್ಳುವುದು ಮನಸ್ಸಿನ ದಾಸ್ಯವನ್ನು ಬಿಂಬಿಸುತ್ತದೆ. ಯಾವುದೇ ದೌರ್ಬಲ್ಯವೆಂದು ಪರಿಗಣಿಸಲ್ಪಡುತ್ತದೋ ಅದು ಎಂದು ಮುಖ್ಯ ಕ್ರಿಯೆಗೆ ಪೂರಕವಾಗಿರುವುದಕ್ಕೆ ಸಾಧ್ಯವೇ ಇಲ್ಲ. ಎಣ್ಣಿ ಬತ್ತಿದ ದೀಪ ತಾನಾಗಿ ಆರಿಹೋದ ಮೇಲೆ ಅದಕ್ಕೆ ಎಣ್ಣೆಯ ಬದಲು ನೀರು ಹಾಕಿದರೂ ಅಲ್ಲಿದ್ದ ಎಣ್ಣೆ ಸತ್ವವನ್ನು ಹೀರಿ ಮೊದಲಿನ ಪ್ರಭೆಯಲ್ಲೇ ಕ್ಷಣ ಹೊತ್ತು ಉರಿಯುತ್ತದೆ. ಆ ದೀಪದ ಅಳಿದುಳಿದ ಎಲ್ಲಾ ಸತ್ವವನ್ನು ಹೀರಿ ಉರಿದು ಆರಿದ ನಂತರ, ಆ ದೀಪ ಮತ್ತೆಂದೂ ಬೆಳಗಲಾರದು. ಅದರಂತೆ ಮನುಷ್ಯನ ದೇಹ ದೌರ್ಬಲ್ಯದ ವಶವಾದರೆ ದೀಪ ನೀರಿನಿಂದ ಚೈತನ್ಯವನ್ನು ಪಡೆದಂತೆ ಒಮ್ಮೆಗೆ ಪ್ರಜ್ವಲಿಸಬಹುದು. ಆದರೆ ಜೀವ ಸೆಲೆಯನ್ನೇ ಸೆಳೆದು ಉರಿವ ದೀಪ ಮತ್ತೆಂದೂ ಉರಿಯದ ನಗ್ನ ಸ್ಥಿತಿಗೆ ತಲುಪಿದಂತೆ ದೇಹವೂ ತನ್ನೆಲ್ಲ ಚೈತನ್ಯವನ್ನು ಬತ್ತಿಸಿಕೊಂಡು ಶುಷ್ಕಾವಸ್ಥೆಗೆ ಬಂದು ಬಿಡುತ್ತದೆ. ಆದರೂ ಮನುಷ್ಯ ದೌರ್ಬಲ್ಯದ ವಶವಾಗುತ್ತಾನೆ ಎಂದರೆ ಅದು ಪ್ರಾರಭ್ದವಲ್ಲ ಆಹ್ವಾನಿಸುವ ದುರಂತ ಎನ್ನಬೇಕು.

ಯಕ್ಷಗಾನದ ಕಲಾವಿದ ತನ್ನೆಲ್ಲ ಕುಟುಂಬದಿಂದ ಪರಿವಾರದಿಂದ ದೂರವಿದ್ದು ಹಲವು ಸಮಯ ಜೀವನ ಮಾಡುವ ಅನಿವಾರ್ಯತೆ ಇರುತ್ತದೆ. ವೃತ ನಿಷ್ಠನಂತೆ ಸನ್ಯಾಸೀ ಮನೋಭಾವದಿಂದ ಅತ್ಮ ಸಂಯಮ ಹೊಂದಿರುವುದು ವಿದ್ಯಾಸಂಪನ್ನರಿಗೇ ಸಾಧ್ಯವಾಗುತ್ತಿಲ್ಲ. ಹಾಗಾಗೀ ಅಷ್ಟೋ ಇಷ್ಟೋ ವಿದ್ಯೆ ಕಲಿತವನಿಗೆ ಇದರ ಈ ಸಂಯಮದ ಗಂಭೀರತೆ ಅರಿವಾಗುವುದು ಹೇಗೆ? ಏನು ಪ್ರಾರಭ್ಧವೋ ಅಂಟಿಕೊಂಡು ಬಿಟ್ಟಿದೆ ಎನ್ನುವುದು ಸುಲಭ. ಆದರೆ ಪ್ರಾರಬ್ಧ ಅವನದಾಗಿರದೆ ಅದನ್ನು ಅವಲಂಬಿಸಿದ ಉಳಿದ ಅಂಗಗಳದ್ದಾಗಿರುತ್ತದೆ.

ನಾವು ಒಂದು ಉತ್ತಮವಾದ ಉಡುಗೆಯನ್ನು ತೊಡುತ್ತೇವೆ. ಒಂದಷ್ಟು ಸಂಭ್ರಮದಿಂದ ಮನಸ್ಸು ಪ್ರಫುಲ್ಲಿತವಾಗುತ್ತದೆ. ಒಂದು ಸಲ ಯೋಚಿಸುವ ನಿರ್ಜೀವವಾದ ಉಡುಗೆ ಏನುಂಟೋ ಅದಕ್ಕೆ ಜೀವವಿದ್ದು ಒಂದು ಮನಸ್ಸಿನ ಸ್ಪಂದನವಿದ್ದರೆ ಅದನ್ನು ಧರಿಸಿದವನ ಸಂಭ್ರಮದಲ್ಲಿ ಅದು ಒಂದಾಗಲಾರದೇ? ಹಾಗೇ ಆ ಉಡುಗೆಯನ್ನು ಧರಿಸಿದವನು ಕಂಠ ಪೂರ್ತಿ ಕುಡಿದು ಕೆಸರಲ್ಲಿ ಬಿದ್ದು ಹೊರಳಾಡಿದಾಗ, ಆ ಉಡುಗೆಯ ಮನೋಭಾವ ಹೇಗಿರಬಹುದು? “ಛೇ ಇವನು ನನ್ನನ್ನು ಆಯ್ಕೆ ಮಾಡದೆ ಇರುತ್ತಿದ್ದರೆ ಈ ದುಸ್ಥಿತಿ ಬರುತ್ತಿರಲಿಲ್ಲ “ ಎಂದು ಮರುಗಲಾರದೇ? ಕುಡುಕನ ದೇಹಕ್ಕಂಟಿದ ಉಡುಗೆಯೂ ಕುಡುಕನಾಗಿಬಿಟ್ಟಿತು. ಹಾಗಾಗಿ ಜ್ಞಾನಿಗಳು ದೇಹವನ್ನು ಉಡುಗೆಗೆ ಹೋಲಿಸಿರಬೇಕು. ನಮ್ಮ ಆತ್ಮ ಮನಸ್ಸು ಸುಂದರವಾಗಿದ್ದರೆ ನಮ್ಮ ದೇಹವು ಸುಂದರವಾಗಿರುತ್ತದೆ. ಅದು ಬಾಹ್ಯ ಸೌಂದರ್ಯವೇ ಅಗಬೇಕೆಂದೇನೂ ಇಲ್ಲ. ಅಂತರಂಗದ ಚೈತನ್ಯ ಏನಿದೆಯೋ ಅದುವೇ ಸೌಂದರ್ಯದ ಪ್ರತೀಕವಾಗಿರುತ್ತದೆ. ಕಲುಷಿತ ವ್ಯಕ್ತಿಯ ಉಡುಪು ಕಲುಷಿತವಾದಂತೆ ಕಲುಷಿತ ಮನಸ್ಸಿನ ದೇಹವೂ ಕಲುಷಿತವಾದಂತಾಗುತ್ತದೆ.

ಮನುಷ್ಯನಿಗೆ ದೌರ್ಬಲ್ಯ ಇರುವುದು ಸಾಮಾನ್ಯ.ಕುಡುಕನಾಗಿಯಾಗಿಯೋ ಧೂಮ ವ್ಯಸನಿಯಾಗಿಯೋ ಅಥವಾ ಇನ್ನಿತರ ದೌರ್ಬಲ್ಯ ಏನಿದೆಯೋ ಅದಕ್ಕೆ ವಶವಾಗುವುದು ಸಹಜ. ಅಡಿಕೆ ಮರಕ್ಕೆ ಕೊಳೆರೋಗ ಬಂದಂತೆ ಪ್ರಕೃತಿ ಸಹಜವಾಗಿ ಅದು ಅಂಟಿಕೊಂಡುಬಿಡುತ್ತದೆ. ಆದರೆ ಅದನ್ನು ಮೆಟ್ಟಿ ನಿಂತು ತೊರೆದು ಬರುವುದಿದೆಯಲ್ಲ ಅದನ್ನು ಮನಸ್ಥೈರ್ಯ ಎನ್ನಬಹುದು.

ದುರ್ವ್ಯಸನಗಳೂ ಕೂಡ ಆವಿಷ್ಕರಿಸಲ್ಪಟ್ಟಿದೆ. ಈಗಿರುವ ಚಟಗಳು ಮೊದಲಿಲ್ಲ.ಮೊದಲಿದ್ದದ್ದು ಈಗ ಕಂಡೂ ಬರುವುದಿಲ್ಲ. ಕಾಲಭೇದವಿಲ್ಲದೇ ಯಾವುದೇ ವ್ಯಸನವಾದರು ಅದು ಕಲಾ ಬದುಕಿಗೆ ಮಾರಕವಾಗಿ ಜತೆಗೆ ಬೆಳೆಯುತ್ತ ಬೆಳೆಯುತ್ತ ಮತ್ತೆ ಅದೆ ಸರ್ವವ್ಯಾಪಿಯಾಗಿ ಎಲ್ಲವನ್ನೂ ನುಂಗಿ ಹಾಕುತ್ತದೆ. ಇತ್ತೀಚೆಗೆ ಹಲವರಿಗೆ ಅಂಟಿಕೊಂಡ ಜನಪ್ರಿಯ ವ್ಯಸನ ಗುಟ್ಕ. ಇದರ ವ್ಯಸನಿಗಳಿಗೆ, ವೇಷತೊಡುವಾಗಲೇ..ವೇಷ ಭೂಷಣದ ಯಜಮಾನ ಹೇಳುತ್ತಾನೆ “ ಉಗುಳು ಹಾಕಬೇಡಿ..” ಎಂತಹ ದುರ್ದೈವ? ತುಟಿಯೆಡೆಯಲ್ಲಿ ಗುಟ್ಕ ಇರಿಸಿದನೋ ರಂಗಸ್ಥಳದಲ್ಲಿ ಸ್ಪಷ್ಟ ಉಚ್ಚಾರವಿಲ್ಲದೆ ಅಭಾಸವಾಗುತ್ತದೆ. ಕನ್ನಡ ಭಾಷೆ ಇಂದು ಜೀವಂತ ಉಳಿದಿದ್ದರೆ ಅದು ಯಕ್ಷಗಾನದಲ್ಲಿ ಅಂತ ನಾವು ಬೀಗಬಹುದು. ಆದರೆ ಉಚ್ಚಾರ ಶುದ್ದಿಯಿಲ್ಲದ ಭಾಷೇ ಉಳಿದು ಏನು ಪಲ?

ಒಂದು ಸಲ ನಮ್ಮ ಮಿತ್ರರೊಬ್ಬರು ರಾತ್ರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ನಡೆದ ಘಟನೆ ಕೇಳಿದಾಗ ಬಹಳಷ್ಟು ಖೇದವೆನಿಸಿತು. ಕಂಠಪೂರ್ತಿ ಏರಿಸಿ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬನನ್ನು ಪ್ರೋತ್ಸಾಹಕರೆಂಬ ಹಿಂಬಾಲಕರು, ಹೇಗೋ ಬಸ್ಸು ಹತ್ತಿಸಿ ಕಳುಹಿಸಿದ್ದರು. ಒಂದಷ್ಟು ಹೊತ್ತು ಬಸ್ಸಿನಲ್ಲಿದ್ದ ಇತರರು “ ಅವು ಆಟದ ಜನ.. ಆಟದಾಯೆ” ಎಂದು ಪರಿಚಯ ವಿನಿಮಯ ಮಾಡಿಕೊಂಡರು. ಆದರೆ ಇಲ್ಲಿ ಪ್ರಾಮಾಣಿಕ ಕಲಾಭಿಮಾನ ಇದ್ದವನ ಮನಸ್ಸು ಹೇಗಾದೀತು. ಕಲಾವಿದನೂ ಊಹಿಸಲಾರ ಹಿಂಬಾಲಿಸುವ ಚೇಲಾಗಳು ಹೇಳಲಾರರು. ದೊಡ್ದ ಕಲಾಸೇವೆ ಮಾಡಿದಂತೆ ಆತನನ್ನು ಹತ್ತಿಸಿ ಆ ಹಿಂಬಾಲಕರು ಕೃತಾರ್ಥರಾಗುತ್ತಾರೆ.

70ರ ಇಳಿ ವಯಸ್ಸಿನಲ್ಲೂ ಯುವಕರನ್ನೂ ನಾಚಿಸುವ೦ಥ ಕಲಾವಿದ ಶ್ರೀ ಸೂರಿಕುಮೇರು ಗೋವಿ೦ದ ಭಟ್
ಇಂದು ಈ ಇಳಿವಯಸ್ಸಿನಲ್ಲೂ ರಂಗಸ್ಥಳದಲ್ಲಿ ದಣಿವರಿಯದೆ ಕುಣಿಯುವ ಗೋವಿಂದಣ್ಣ ಯಾರಿಗೆ ಗೊತ್ತಿಲ್ಲ ಹೇಳಿ.. ಅವರ ದೀರ್ಘಾವಧಿಯ ಕಲಾಜೀವನಕ್ಕೆ ಕಾರಣ ಅವರ ದೌರ್ಬಲ್ಯ ರಹಿತ ಜೀವನ ಶೈಲಿ. ಗೋವಿಂದಣ್ಣನಿಂದ ಪ್ರೇರೇಪಿತರಾಗಿ ಕಿರೀಟ ತೊಟ್ಟು ಅನುಕರಿಸುವವರು ಹಲವರಿರಬಹುದು ಆದರೆ ಅವರ ಪರಿಶುದ್ದ ಜೀವನ ಶೈಲಿ ಪ್ರೇರೇಪಿಸಲ್ಪಡುವುದೇ ಇಲ್ಲ. ಬಲಿಪ್ಪಜ್ಜ ಅರುವತ್ತು ಸಂವತ್ಸರದ ಅವಧಿ ತನ್ನ ಕಂಠಸಿರಿಯನ್ನು ಮೆರೆಯಿಸಿದ್ದರೆ ಅದಕ್ಕೆ ದೌರ್ಬಲ್ಯ ರಹಿತ ಜೀವನ ಶೈಲಿಯೇ ಕಾರಣ.

ದೌರ್ಬಲ್ಯ ಎಂಬುದು ಸಮಯಕ್ಕೊದಗದ ಬಲರಾಮನ ಬಲದಂತೆ. ಯಾದವ ಸೇನೆಯೊಂದಿಗೆ ಬಲರಾಮ ದುರ್ಯೋಧನನ ಪಕ್ಷಕ್ಕೆ ಬಂದರೂ ಕೌರವನ ಪಾಲಿಗೆ ಸಮಯಕ್ಕೊದಗದೆ ದುರ್ಬಲನೇ ಆಗಿಬಿಡುತ್ತಾನೆ. ಯಾಕೆಂದರೆ ಕೌರವನ ಕಡೆಯಲ್ಲಿ ಇರುವುದು ದುರ್ಯೋಧನ, ದುಶ್ಯಾಸನ , ದುರ್ದರ್ಶ.. ಹೀಗೆ ದುರ್ ಗಳೆ ತುಂಬಿದ ಕಾರಣ ಬಲರಾಮನೂ ದುರ್ಬಲರಾಮನಾಗಿಬಿಡುತ್ತಾನೆ. ಎಷ್ಟು ಬಲವಿದ್ದರೂ ದುರ್ಬಲದೊಟ್ಟಿಗೆ ಸೇರಿದರೆ ಆ ಬಲ ಸಿಗಬೇಕಾದಲ್ಲಿ ಇರಬೇಕಾದಲ್ಲಿ ಇರುವುದೇ ಇಲ್ಲ.

ದೌರ್ಬಲ್ಯಗಳನ್ನೇ ಭಂಡವಾಳವಾಗಿಸುವ ಪ್ರೋತ್ಸಾಹಕರೂ ಇಲ್ಲದಿಲ್ಲ. ನಾಳೆಯ ಕಲಾವಿದನ ಭವಿಷ್ಯ ಜತೆಗೆ ಯಕ್ಷಗಾನದ ಭವಿಷ್ಯ ಪರಿಗಣಿಸದೆ ಇಂದಿನ ದೀಪ ಉರಿದರೆ ಸಾಕು ಎಂದು ಬಯಸುವ ಕಲಾಪೋಷಕರೂ ಇದ್ದಾರೆ. ಆಟ ಶುರುವಾಗುವ ಮೊದಲು ನಂತರ ಮರುದಿನದವರೆಗೂ ಚೌಕಿ ಈ ದೌರ್ಬಲ್ಯಗಳ ಕುರುಹನ್ನು ಢಾಳಾಗಿ ಪ್ರದರ್ಶಿಸುತ್ತದೆ. ಇದರಿಂದಾಗಿ ಬೆಂಗಳೂರಿನ ಕಾಲೇಜ್ ಸಭಾಭವನ ಒಂದರಲ್ಲಿ ಯಕ್ಷಗಾನಕ್ಕೆ ಸಭಾಂಗಣ ಲಭ್ಯವಿಲ್ಲ ಎಂದು ನೇರವಾಗಿ ಹೇಳಿಬಿಡುತ್ತಾರೆ. ಛೇ ನಮ್ಮ ಊರಿನವರು ಈ ಮಟ್ಟಕ್ಕೆ ಇಳಿದು ಬಿಟ್ಟರೇ ಯಾರನ್ನು ಹೇಳುವುದು? ಸಾರ್ವಜನಿಕವಾಗಿ ನಮ್ಮ ಬಂಧು ಒಬ್ಬ ನಗೆಪಾಟಲಿಗೀಡಾದಾಗ ಹೆಚ್ಚೇಕೆ.. ನಮ್ಮ ಅಪ್ಪ ಕಂಠ ಪೂರ್ತಿ ಕುಡಿದು ರಸ್ತೆ ಬದಿ ಬಿದ್ದರೆ ಆಗುವ ಮುಜುಗರ ಹೇಗಾಗುತ್ತದೋ ಆದೆ ಅನುಭವವಾಗಿಬಿಡುತ್ತದೆ. ಆದರೂ ಈ ಜ್ವಲಂತ ಸಮಸ್ಯೆಯ ಬಗ್ಗೆ ಗಮನ ಹರಿಯುವುದೇ ಇಲ್ಲ. ನಾವು ಕಾಲಮಿತಿ ಯಕ್ಷಗಾನದ ಬಗ್ಗೆ ಚರ್ಚಿಸುವುದಕ್ಕಿಂತಲೂ ಇಂತಹ ವಿಚಾರಗಳಿಗೆ ಗಮನ ಕೊಡಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಕಲಾವಿದ ಮತ್ತು ಇವನನ್ನು ಪ್ರೇರೇಪಿಸುವವರು ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ.ಕೃಪೆ : http://yakshachintana.blogspot.in/


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Krishna (10/28/2015)
Aruva Koragappa shetty kooda ide saalige seruva meru kalavida. Enantheeri ?
Krishna (10/28/2015)
76 varsha prayada Aruva Koragappa shetty kooda ide saalige seruva meru kalavida. Enantheeri ?
kswamy(9/2/2013)
true true
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ