ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಪುಸ್ತಕಗಳು
Share
ಅಕ್ಷರ ಕ್ರಾಂತಿಯ ಯಕ್ಷ ಮಾಸಪತ್ರಿಕೆಗಳು

ಲೇಖಕರು : ಎಚ್‌ ಸುಜಯೀಂದ್ರ ಹಂದೆ
ಶನಿವಾರ, ಆಗಸ್ಟ್ 31 , 2013

ವಿದ್ಯುನ್ಮಾನ ಮಾಧ್ಯಮ ಎಷ್ಟೇ ಆಕರ್ಷಕವಾಗಿದ್ದರೂ, ಮುದ್ರಣ ಮಾಧ್ಯಮ ತನ್ನದೇ ಆದ ವಿಶಿಷ್ಟತೆ ಮತ್ತು ಅನನ್ಯತೆಯನ್ನು ಉಳಿಸಿಕೊಂಡಿದೆ ಎಂಬುದು ವಾಸ್ತವ. ಕಲೆ-ಸಂಸ್ಕೃತಿಯನ್ನು ಜನಮಾನಸದಲ್ಲಿ ಪಡಿಮೂಡಿಸುವಲ್ಲಿ ನಾಡಿನ ಅನೇಕ ಪತ್ರಿಕೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಿವೆ. ಯಕ್ಷಗಾನದಂತಹ ಶ್ರೀಮಂತ ಕಲೆಯ ಕುರಿತಾಗಿ ವಿದ್ವಾಂಸರ ಸೃಜನಶೀಲ ಬರಹಗಳನೇಕ ಬಿಡಿಬಿಡಿಯಾಗಿ ಸುದ್ದಿ ಪತ್ರಿಕೆಗಳಲ್ಲಿ, ವಾರಪತ್ರಿಕೆಗಳಲ್ಲಿ ಪ್ರಕಟವಾದ ಇತಿಹಾಸವಿದೆ. ಯಕ್ಷಗಾನಕ್ಕಾಗಿಯೇ ಮೀಸಲಾದ ಮಾಸಪತ್ರಿಕೆಗಳು ಎರಡು ದಶಕಗಳಿಂದೀಚೆಗೆ ಯಶಸ್ವಿಯಾಗಿ ಮುನ್ನುಡಿ ಬರೆದಿರುವುದು ಯಕ್ಷ ಇತಿಹಾಸದಲ್ಲಿ ಒಂದು ಮೈಲಿಗಲ್ಲು.

ಯಕ್ಷ ಪ್ರಭಾ

ಯಕ್ಷ ಪ್ರಭಾದ ಮುಖ್ಯ ಸಂಪಾದಕರು ಭಾಗವತ ಕುಬಣೂರು ಶ್ರೀಧರ ರಾವ್‌ (ಎಡ ಭಾಗದಲ್ಲಿರುವವರು )
ಸುಮಾರು 8 ಪುಟಗಳ ಪತ್ರಿಕೆಯ ಮಾದರಿ ಯಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡ ಉಜಿರೆಯ ಯಕ್ಷ ಪ್ರಭಾದ ಮುಖ್ಯ ಸಂಪಾದಕರು ಭಾಗವತ ಕುಬಣೂರು ಶ್ರೀಧರ ರಾವ್‌. ಇವರು 32 ವರ್ಷ ಗಳಿಂದ ಕಟೀಲು ಮೇಳದ ಮುಖ್ಯ ಭಾಗವತರು. ವಿದ್ಯಾವಂತ ಕಲಾವಿದರಾಗಿ, ಯಕ್ಷ ಕಲೆಯ ಉನ್ನತಿ ಗಾಗಿ ತನ್ನಿಂದಾದ ಕೊಡುಗೆಯನ್ನು ನೀಡಬೇಕೆಂಬ ಉದ್ದೇಶದಿಂದ 1995ರಲ್ಲಿ ವೈಯಕ್ತಿಕ ಮನೋಭಿ ಲಾಷೆಯಾಗಿ ಯಕ್ಷಪ್ರಭಾ ಹೊರಹೊಮ್ಮಿತು. ಪತ್ರಿಕೆಯ ಆರಂಭದಲ್ಲಿ ಸುಮಾರು 500 ಮಂದಿ ಚಂದಾದಾರರು ಪೋಷಕರಾಗಿದ್ದರು. ಈಗ ಪ್ರಸಾರ 3,000ರ ಗಡಿ ದಾಟಿದೆ. ಪತ್ರಿಕೆ ಭಾರತದಾದ್ಯಂತ ಅಲ್ಲದೆ ಗಲ್ಫ್ , ಅಮೆರಿಕಗಳಲ್ಲೂ ಸುದ್ದಿ ಮಾಡಿದೆ.

ಅಲ್ಲಲ್ಲಿ ನಡೆದ ಗೋಷ್ಠಿ, ವಿಚಾರಸಂಕಿರಣ, ಯಕ್ಷ ಚಿತ್ರ- ಸುದ್ದಿಗಳನ್ನು ಪ್ರಕಟಿಸುವುದಲ್ಲದೆ ತಾಳಮದ್ದಳೆ ಸಪ್ತಾಹ ಅವಲೋಕನ, ಪ್ರಸಂಗ ಸಾಹಿತ್ಯ ವಿಶ್ಲೇಷಣೆಯನ್ನು ಜನವಾಹಿನಿಗೆ ತಲುಪಿಸುವ ಯಕ್ಷಪ್ರಭಾ, ಕಟೀಲು ಮತ್ತು ಧರ್ಮಸ್ಥಳ ಮೇಳದ ವಾರ್ಷಿಕ ಕ್ಯಾಂಪ್‌ ಬುಕ್ಕಿಂಗ್‌ನ ಸುದೀರ್ಘ‌ ಪಟ್ಟಿ ನೀಡುತ್ತಿರುವುದರಿಂದ ಕ್ಯಾಲೆಂಡರ್‌ ರೂಪದಲ್ಲಿಯೂ ಸಹಕಾರಿಯಾಗಿದೆ.

ಯಕ್ಷರಂಗ

ಕರ್ನಾಟಕದ ಯಕ್ಷಗಾನಕ್ಕೆ ಮೀಸಲಾದ ಪತ್ರಿಕೆ ಎಂಬ ಉಪ ಶೀರ್ಷಿಕೆಯೊಂದಿಗೆ ಗುರುತಿಸಿಕೊಂಡ ಹೊನ್ನಾವರ ತಾಲೂಕಿನ ಹಳದೀಪುರದ ಯಕ್ಷರಂಗ ಪತ್ರಿಕೆ ಪುಸ್ತಕ ಮಾದರಿಯದು. "ಯಕ್ಷಲೋಕ' ಎಂಬ ನೋಂದಾಯಿತ ಸಂಸ್ಥೆಯ ಪ್ರಕಾಶನದಲ್ಲಿ ಹೊರಬರುತ್ತಿರುವ ಪತ್ರಿಕೆಯ ಮೂಲ ಸ್ಥಾಪಕರು ಯಕ್ಷಗಾನ ಪತ್ರಿಕೋದ್ಯಮದ ಪಿತಾಮಹರೆಂಬ ಬಿರುದು ಹೊತ್ತ ಕಡತೋಕ ಮಂಜುನಾಥ ಭಾಗವತರು. 1957ರಲ್ಲಿ "ಯಕ್ಷಗಾನ' ಎಂಬ ಹೆಸರಿನಲ್ಲಿ ಕಡತೋಕರಿಂದ ಆರಂಭ ವಾದ ಪತ್ರಿಕೆ ಇತಿಹಾಸ ದಾಖಲಿಸಿದೆ. ಕಾರಣಾಂತರದಿಂದ ಒಮ್ಮೆ ಸ್ಥಗಿತಗೊಂಡರೂ 1980ರಲ್ಲಿ ಮರುಹುಟ್ಟು ಪಡೆಯಿತು. ಪತ್ರಿಕೆಗೆ ಹೊಸ ರೂಪ ಕೊಟ್ಟ ಕಡತೋಕ ಗೋಪಾಲಕೃಷ್ಣ ಭಾಗವತ ಮೂಲತಃ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತಕಾರರು.

ಸುಮಾರು 36 ಪುಟಗಳ ಪತ್ರಿಕೆಯಲ್ಲಿ ಪ್ರಸಂಗ ಆಕರಗಳ ಬಗೆಗೆ, ಕಲಾವಿದ ವೃತ್ತಿ ವಿಶೇಷಗಳ ಬಗೆಗೆ ಮಾತ್ರವಲ್ಲದೆ ಕಾರ್ಯಕ್ರಮಗಳ ಅವಲೋಕನವೂ ಪ್ರಕಟವಾಗುತ್ತದೆ. ಸ್ಥಿರ ಅಂಕಣಗಳ ಜೊತೆಗೆ ಅತಿಥಿ ಸಂಪಾದಕರನ್ನು ಆಹ್ವಾನಿಸಿ ಪತ್ರಿಕೆಗೊಂದು ಹೊಸ ಭಾಷ್ಯ ಬರೆದಿದೆ.

ಕಣಿಪುರ

ಯಕ್ಷಗಾನಕ್ಕೊಂದು ಮಾಧ್ಯಮ ಸಂಸ್ಕೃತಿಯನ್ನು ಗಟ್ಟಿಗೊಳಿಸಬೇಕೆಂಬ ಹಂಬಲದಿಂದಲೇ 2012ರ ಜನವರಿಯಲ್ಲಿ ಕಾಸರಗೋಡು- ಕುಂಬಳೆಯಿಂದ ಕಣಿಪುರ ದಿಗ್ವಿಜಯ ಹೊರಟಿದೆ. ನಾಡಿನ ಬೇರೆ ಬೇರೆ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಅನುಭವವುಳ್ಳ ಎಂ.ನಾ. ಚಂಬಲ್ತಿಮಾರ್‌ ಸಾರಥ್ಯದ ಕಣಿಪುರವು ಕರಾವಳಿಯ ಸಾಂಸ್ಕೃತಿಕ ಮಾಸಪತ್ರಿಕೆ ಎಂದೇ ಗುರುತಿಸಲ್ಪಟ್ಟಿದೆ.

ಯಕ್ಷಗಾನ ಮಾತ್ರವಲ್ಲದೆ ನೃತ್ಯ ಸಂಗೀತ, ಸಾಹಿತ್ಯ ಕ್ಷೇತ್ರಗಳಿಗೂ ವೇದಿಕೆಯಾಗಿರುವ ಕಣಿಪುರದ ಸಂಪಾದಕೀಯ ನವಿಲುಗರಿಯಂತೆ ಬಣ್ಣ ಬಣ್ಣದ ಚಿತ್ತಾರವನ್ನು ಅರಳಿಸಿದೆ. ಪುಸ್ತಕದ ಕೋಣೆ, ಪ್ರಶ್ನಾಬಂಧ, ಸಿ ಡಿ ಕಾರ್ನರ್‌, ಕ್ಯಾಸೆಟ್‌ ಯುಗದ ನೆನಪು, ಚೆನ್ನುಡಿ, ಶುಭ ಚಿಂತನ ಮೊದಲಾದ ಸ್ಥಿರ ಬರಹಗಳೊಂದಿಗೆ ಶುಂಠಿ ಮಿಠಾಯಿಯಂತಹ ವ್ಯಂಗ್ಯಚಿತ್ರಗಳನ್ನು ಪ್ರಕಟಿಸುತ್ತಿದೆ.

ಈ ಸಂದರ್ಭದಲ್ಲಿ ಕಾಸರಗೋಡಿನ ಶೇಣಿ ಅಕಾಡೆಮಿ ಮೂಲಕ ಪುರುಷೋತ್ತಮ ಪೈಕ ಅವರಿಂದ ಪ್ರಸಾರವಾಗುತ್ತಿದ್ದ ಯಕ್ಷ ಪತ್ರಿಕೆಯನ್ನು ಸ್ಮರಿಸಿಕೊಳ್ಳಬಹುದು.

ಬಲ್ಲಿರೇನಯ್ಯ

"ಯಕ್ಷಲೋಕದ ಗೆಳೆಯ ಗೆಳತಿಯರ ಭಾವನೆಗಳ ರಂಗ ಸ್ಥಳ'ವೆಂದೇ ಹೆಜ್ಜೆ ಇಟ್ಟಿರುವ ಬಲ್ಲಿರೇನಯ್ಯದ ಕನಸು ಕಂಡವರು ಕಲಾವಿದ ವರ್ಕಾಡಿ ತಾರಾನಾಥ ಬಲ್ಯಾಯ. ಆಜ್ಞಾಸೋಹಂ ಪ್ರಕಾಶನದ ಮೂಲಕ ಬೆಳ್ಮಣ್ಣಿನಿಂದ ಪ್ರಕಟವಾಗುವ ಬಲ್ಲಿರೇನಯ್ಯ ಈಗಾಗಲೇ ಪ್ರಾಯೋಗಿಕವಾಗಿ ಎಂಟು ಸಂಚಿಕೆಗಳನ್ನು ಹೊರತಂದಿದ್ದು, 3,000 ಚಂದಾದಾರರನ್ನು ಹೊಂದಿದೆ.

ಬಲ್ಲಿರೇನಯ್ಯದ ಮುಖ್ಯ ಸಂಪಾದಕರು ಕಲಾವಿದ ವರ್ಕಾಡಿ ತಾರಾನಾಥ ಬಲ್ಯಾಯ (ಎಡ ಭಾಗದಲ್ಲಿರುವವರು )
"ಕೇಳಿ' ಎಂಬ ಸಂಪಾದಕೀಯ, ಓದುಗರ ಸ್ಪಂದನಕ್ಕಾಗಿಯೇ ಮೀಸಲಾದ "ಅಹೋ ದಕ್ಕಿತು', ತಿಂಗಳ ಕಾರ್ಯಕ್ರಮದ ಪಕ್ಷಿನೋಟ ಬೀರುವ "ಡಂಗುರ' ಪುಟಗಳು ಅನನ್ಯವಾಗಿವೆ.

ಯಕ್ಷಗಾನದ ರಂಗಸ್ಥಳದಲ್ಲಿ ಬಣ್ಣ ಬಣ್ಣದ ಯಕ್ಷ ವೇಷಗಳು ಗೆಜ್ಜೆ ಕಟ್ಟಿ ಹೆಜ್ಜೆ ಇಟ್ಟು ಮರೆಯಾದರೂ, ಅವೆಲ್ಲ ವನ್ನು ನೆನಪಿನ ರಂಗಸ್ಥಳದಲ್ಲಿ ಕಟ್ಟಿ ಕೊಡುವ ಯಕ್ಷಗಾನ ಮಾಸಪತ್ರಿಕೆಗಳ ಅಕ್ಷರ ಕೈಂಕರ್ಯ ಸುಲಭದ ಮಾತಲ್ಲ. ನೋಂದಾವಣೆ, ಲೇಖನ-ಚಿತ್ರ ಸಂಗ್ರಹ, ಅಂಚೆ- ಸಂಚಿಕೆಗಳ ವಿತರಣೆ, ಮುದ್ರಾ ರಾಕ್ಷಸನ ಪೀಡೆ ಹೀಗೆ ಹತ್ತು ಹಲವು ನೋವು ಗಳ ನಡುವೆಯೂ ಸಕಾಲದಲ್ಲಿ ನಮ್ಮನ್ನು ತಲುಪುವ ಹೊಣೆ ಹೊತ್ತ ಸಂಪಾದಕರದು ಆತ್ಯಂತಿಕ ಸುಖ ನೀಡುವ ಪ್ರಸವ ವೇದನೆ.

ತೆಕ್ಕಟ್ಟೆಯ ಯಶಸ್ವಿ ಕಲಾವೃಂದ ಸಾಂಸ್ಕೃತಿಕ ಪರ್ವ-ಸರಣಿ ವಾರ್ಷಿಕ ಸಂಭ್ರಮದ ಅಂಗವಾಗಿ ಸೆ.1, 2013ರಂದು ಈ ನಾಲ್ಕು ಯಕ್ಷ ಮಾಸಪತ್ರಿಕೆಗಳ ಸಂಪಾದಕರನ್ನು ಪ್ರಸಂಗ ಸಾಹಿತಿ, ಸಂಶೋಧಕ, ಕಬ್ಬಿನಾಲೆ ವಸಂತ ಭಾರದ್ವಾಜರ ಅಧ್ಯಕ್ಷತೆಯಲ್ಲಿ ಗೌರವಿಸಿ ಅಭಿನಂದಿಸಿ ಧನ್ಯತೆಯನ್ನು ಹೊಂದಲಿದೆ.

*****************


ಯಕ್ಷಪ್ರಭಾ

ಸಂಪಾದಕ : ಭಾಗವತ ಕುಬಣೂರು ಶ್ರೀಧರ ರಾವ್
ಮೊಬೈಲ್ : 9448784783
ಸ್ಥಿರ ದೂರವಾಣಿ : 08256-237296
ಮಿ೦ಚೆ (email) : yakshanews@yahoo.in
ಚ೦ದಾ : Rs.100 (2 ವರ್ಷಗಳಿಗೆ )


ಯಕ್ಷರಂಗ

ಸಂಪಾದಕ : ಕಡತೋಕ ಗೋಪಾಲಕೃಷ್ಣ ಭಾಗವತ
ಮೊಬೈಲ್ : 8762786856
ಮಿ೦ಚೆ (email) : kadatokayaksharanga@yahoo.com
ಚ೦ದಾ : Rs.150 (1 ವರ್ಷಗಳಿಗೆ )


ಕಣಿಪುರ

ಸಂಪಾದಕ : ಎಮ್ಮೆನ್ ಚಂಬಲ್ತಿಮಾರ್
ಮೊಬೈಲ್ : 9995035627
ಸ್ಥಿರ ದೂರವಾಣಿ : 08861-130357
ಮಿ೦ಚೆ (email) : mnakanipura@yahoo.com
ಚ೦ದಾ : Rs.250 (1 ವರ್ಷಗಳಿಗೆ )


ಬಲ್ಲಿರೇನಯ್ಯ

ಸಂಪಾದಕ : ಕಲಾವಿದ ತಾರಾನಾಥ ಬಲ್ಯಾಯ
ಮೊಬೈಲ್ : 9449714612 , 9448863875
ಮಿ೦ಚೆ (email) : taranathavorkadi@yahoo.in
ಚ೦ದಾ : Rs.200 (1 ವರ್ಷಗಳಿಗೆ )
ಕೃಪೆ : http://www.udayavani.com/


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Krishna Prasad(8/31/2013)
all the best to all publications
Nagesh(8/31/2013)
I would like to subscribe. Can you provide me the contact details of each publications ?
ಪೂರಕ ಲೇಖನಗಳು
     ತಾಜಾ ಲೇಖನಗಳು
   
  ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
  ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
  ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
   
  © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ