ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸ೦ದರ್ಶನ
Share
``ಅನುಸರಣೆ ಸರಿ; ಅನುಕರಣೆ ಸಲ್ಲದು`` - ಪಾತಾಳ ವೆ೦ಕಟರಮಣ ಭಟ್

ಲೇಖಕರು :
ಮನೋರಮಾ ಬಿ ಎನ್
ಶುಕ್ರವಾರ, ಸೆಪ್ಟೆ೦ಬರ್ 6 , 2013

ಸ್ತ್ರೀ ವೇಷಗಳ ಆಯಾಮ, ದಿಕ್ಕು, ಅವಕಾಶ, ಅನುಕೂಲದ ಸವಿಸ್ತಾರವಾದ ಅನುಭವಗಳನ್ನು ಕಟ್ಟಿಕೊಡುತ್ತಾ ಪ್ರತಿಯೋರ್ವ ಕಲಾವಿದರು ತಮ್ಮದೇ ಆದ ನೋಟಗಳನ್ನು ಚೆಲ್ಲುತ್ತಾ ಈ ಬಾರಿ ನಿಮಗೆ ಯಕ್ಷಗಾನದ ಸ್ತ್ರೀವೇಷಗಳ ಸಮಗ್ರ ದರ್ಶನ ಮಾಡಿಸಲಿದ್ದಾರೆ. ಲೇಖನವೊಂದಕ್ಕೆ ಸೀಮಿತವಾಗಬಹುದಾಗಿದ್ದ ವಿಷಯವನ್ನು ಪ್ರಧಾನವಾಗಿಸಿ ಕಲಾವಿದರ ಸಂದರ್ಶನದಲ್ಲಿ ಹಿಗ್ಗಿಸಿ, ವೈವಿಧ್ಯಮಯ ಮತ್ತು ಪೂರಕವಾದ ಅಭಿಪ್ರಾಯಗಳನ್ನು ದಾಖಲಿಸುವುದರೊಂದಿಗೆ ತಿಟ್ಟುಗಳ ಹೊಂದಾಣಿಕೆಯಲ್ಲ್ಲಿ ಮತ್ತು ಪರಂಪರೆ- ಪ್ರಯೋಗಗಳೆರಡರ ನೆಲೆಯಲ್ಲಿ ಪಾರಮ್ಯ ಮತ್ತು ಸಮನ್ವಯ ಸಾಧಿಸಲು ಸ್ತ್ರೀಪಾತ್ರಧಾರಿಗಳಾಗಿ ದುಡಿದ, ದುಡಿಯುತ್ತಿರುವ ಅನುಭವಿ ಜನಪ್ರಿಯ ಕಲಾವಿದರ ಪೈಕಿ ಕೆಲವರ ಮಾತಿನ ಮುಕುರವನ್ನು ಇಲ್ಲಿ ನಿಮ್ಮೆದುರಿಗೆ ತೆರೆದಿಡಲಾಗಿದೆ. ಈ ಮೂಲಕ ಒಳಿತು-ಕೆಡುಕು-ಭವಿಷ್ಯ-ಸಾಧ್ಯತೆಗಳ ಕುರಿತಂತೆ ಚಿಂತನ-ಮಂಥನ-ಚರ್ಚೆಗಳು, ಅಭಿಪ್ರಾಯಗಳಿಗೆ ಮುಕ್ತ ಅವಕಾಶ ಇದೆ. ಭಾರತದ ಸರ್ವ ಕಲೆಗಳ ಮಾಹಿತಿಗಳನ್ನು ಕೊಡುತ್ತಿರುವ ಅ೦ತರ್ಜಾಲ ತಾಣ ' 'www.noopurabhramari.com'ದಲ್ಲಿ ಪ್ರಕಟಗೊ೦ಡ ಲೇಖನ.
ಪಾತಾಳ ವೆ೦ಕಟರಮಣ ಭಟ್
1950ರ ನಂತರದ 3 ದಶಕಗಳಲ್ಲಿ ಸ್ತ್ರೀವೇಷದಲ್ಲಿ ಸೈ ಎನಿಸಿಕೊಂಡ ಹಿರಿಯ ಕಲಾವಿದ ಪಾತಾಳ ವೆ೦ಕಟರಮಣ ಭಟ್. ಸ್ತ್ರೀವೇಷಕ್ಕೆ ನಿರ್ದಿಷ್ಟ ವೇಷಭೂಷಣ ಪರಿಕಲ್ಪನೆ ಇಲ್ಲದಿದ್ದ ಕಾಲಕ್ಕೆ ಅಂತಃಪುರ ಗೀತೆಗಳನ್ನು ಗಮನಿಸಿ, ಶಿಲ್ಪಕಲೆಯಿಂದ ಪ್ರೇರಣೆ ಪಡೆದು ವೇಷಭೂಷಣ ಮಾಡಿದವರು. ಬೇಲೂರು-ಹಳೇಬೀಡಿಗೆ ಹೋಗಿ ಅಧ್ಯಯನ ನಡೆಸಿ ವಿವಿಧ ಬಗೆಯ ಆಭರಣ, ವಸ್ತ್ರ ವಿನ್ಯಾಸದ ಪ್ರಯೋಗ ನಡೆಸಿದವರು. ಭಂಗಿಗಳ ಅಧ್ಯಯನಕ್ಕಾಗಿ ಭರತನಾಟ್ಯವನ್ನು ಕಲಿತು ಯಕ್ಷಗಾನೀಯವಾಗಿ ಹೊಂದಿಸಿಕೊಂಡವರು.

ಮೊದಲು ಬಡಗು ತಿಟ್ಟಿನ ವೇಷಧಾರಿಯಾಗಿ ರಂಗಕ್ಕೆ ಕಾಲಿಟ್ಟು; 1956ರ ನಂತರ ತೆಂಕುತಿಟ್ಟಿನ ಅಗ್ರಮಾನ್ಯ ಸ್ತ್ರೀ ವೇಷಧಾರಿಯಾಗಿ ಮೆರೆದ ಪಾತಾಳರ ಹೆಸರಿನಲ್ಲಿ ಈಗಾಗಲೇ ಪ್ರಶಸ್ತಿಯೊಂದನ್ನು ಅನುಭವಿ ಕಲಾವಿದರಿಗೆ ನೀಡುತ್ತಾ ಬರಲಾಗುತ್ತಿದೆ. ಹಲವು ಖ್ಯಾತಿವೆತ್ತ ಸನ್ಮಾನಗಳು, ಬಿರುದು, ಪ್ರಶಸ್ತಿಗಳು ಅವರ ಮನೆಯ ಗೋಡೆಯ ಹೊದಿಕೆಯನ್ನೆಲ್ಲಾ ಅಲಂಕರಿಸಿವೆಯೆಂದರೆ ನೀವೇ ಊಹಿಸಿ. ಯಕ್ಷಗಾನದ ಘಟಾನುಘಟಿಗಳ ಒಡನಾಟ, ಗೆಳೆತನದ ಸವಿಯೂಟ, ಹಲವು ಯಕ್ಷಗಾನ ಮೇಳಗಳೊಂದಿಗೆ ತಿರುಗಾಟದ ಅನುಭವ ಹೊಂದಿರುವ ಭಟ್ಟರು ತಮ್ಮ ಇಳಿವಯಸ್ಸಿನ ಹಾದಿಯಲ್ಲೂ ಹಲವು ಉಪನ್ಯಾಸ, ಪ್ರಾತ್ಯಕ್ಷಿಕೆ, ಶಿಕ್ಷಣ ಸಂಬಂಧೀ ಕಾರ್ಯಕ್ರಮಗಳಲ್ಲಿ ಕಾರ್ಯೋನ್ಮುಖರು. ಆಳವಾದ ಅಧ್ಯಯನ, ಸಮೃದ್ಧ, ಸರಳ ಕಲಾಜೀವನದ ಪ್ರತಿರೂಪವೆಂಬಂತೆ ಪಾತಾಳರ ಆತ್ಮಚರಿತ್ರೆ ಬಿಡುಗಡೆಯಾಗಿದೆ. ಪ್ರಸ್ತುತ ದಕ್ಷಿಣಕನ್ನಡದ ಉಪ್ಪಿನಂಗಡಿ ಬಳಿಯ ಪಾತಾಳ ಮನೆಯಲ್ಲಿ ನೆಲೆಸಿದ್ದಾರೆ ವೆ೦ಕಟರಮಣ ಭಟ್ಟರು. ಇವರ ಮುಂದಿನ ತಲೆಮಾರಿನ ನೇತಾರನಾಗಿ ಅವರ ಮಗ ಅಂಬಾಪ್ರಸಾದ್ ಯಶಸ್ವಿ ಸ್ತ್ರೀವೇಷಧಾರಿಯೆನಿಸಿದ್ದಾರೆ.

ಪ್ರಶ್ನೆ : ಸ್ತ್ರೀ ಪಾತ್ರಕ್ಕೆ ನಿರ್ದಿಷ್ಟ ಪರಿಕಲ್ಪನೆಯಿಲ್ಲ; ಅದನ್ನು ಕಡೆಗಣಿಸಲಾಗಿದೆ ಎಂಬ ಮಾತನ್ನು ಒಪ್ಪುತ್ತೀರಾ?

ಪಾತಾಳ ವೆ೦ಕಟರಮಣ ಭಟ್ : ಪುರುಷ ಪಾತ್ರಕ್ಕೆ ಸಂವಾದಿಯಾಗಿ ಸ್ತ್ರೀಪಾತ್ರಗಳ ನಿರೂಪಣೆ ಮೊದಲಿನಿಂದಲೂ ತೀರಾ ವಿರಳ. ಯಕ್ಷಗಾನದ ಜನಕನೆನಿಸಿಕೊಂಡ ಪಾರ್ತಿಸುಬ್ಬನೂ ಸ್ತ್ರೀಪಾತ್ರದ ಬಗ್ಗೆ ಹೇಳಿದವನಲ್ಲ. ೮೦ ವರ್ಷದ ಹಿಂದೆ ಹಿಂದೂ ಸಂಪ್ರದಾಯದ ಹೆಣ್ಣುಮಕ್ಕಳು ಯಾವ ಬಗೆಯಲ್ಲಿ ಸೀರೆ ಉಟ್ಟು, ಅಲಂಕರಿಸಿಕೊಳ್ಳುತ್ತಿದ್ದರೋ ಅಂತೆಯೇ ವೇಷ ಮಾಡಬಹುದು ಎನ್ನಲಾಗಿತ್ತು.

ಅಷ್ಟೇ ಏಕೆ, ಯಕ್ಷಗಾನಕ್ಕೆ ಸ್ತ್ರೀವೇಷದ ಪರಿಕಲ್ಪನೆ ಇಲ್ಲ ಎಂದೇ ಕಾರಂತರು ಹೇಳಿದ್ದಾರೆ. ಯಾಕೆಂದರೆ ಅಂದಿನ ಕಾಲಕ್ಕೆ ವೇಷಭೂಷಣಕ್ಕೆಂದು ‘ಪೆಟ್ಟಿಗೆ’ ಅನ್ನುವ ಪದ್ಧತಿಯೇ ಸ್ತ್ರೀ ವೇಷದವರಿಗೆ ಇರಲಿಲ್ಲ. ಸ್ತ್ರೀವೇಷ ಮಾಡುವವರು ಕೇವಲ ಸಾಮಾನ್ಯ ಸ್ತ್ರೀಯರ ಹಾಗೆ ಸೀರೆ ಉಟ್ಟುಕೊಂಡು ಬರುವವರು. ಚಂದ್ರಮತಿ, ದಮಯಂತಿ, ಸೀತೆ ಮುಂತಾದ ಗರತಿ ಪಾತ್ರಗಳಾದರೆ ಮರಾಠೀ ಕಚ್ಚೆ ಹಾಕಿ ಉಡುತ್ತಿದ್ದರು. ಪುರುಷವೇಷಕ್ಕಿರುವ ನಾಟ್ಯವೇ ಲಾಸ್ಯದ ಬಳಕೆಯಲ್ಲಿ ತುಸು ಹೆಚ್ಚಿದ್ದು ಸ್ತ್ರೀವೇಷಕ್ಕೆ ಅನ್ವಯವಾಗುತ್ತಿತ್ತು. ಸೂಕ್ತ ಅಂಗಭಂಗಿಗಳಿರಲಿಲ್ಲ. ಬೊಂಬೆಯಂತೆ ಕುಣಿಯುವುದೇ ಅಂದಿಗೆ ರೂಢಿ. ಆದರೆ ಕಾರಂತರ ಬಳಿಯಲ್ಲಿ ಕಲಾವಿದರು ಪ್ರಶ್ನಿಸಿ ಕೊನೆಗೆ ಅವರ ಸಲಹೆಯಂತೆ ಕೇದಿಗೆ ಮುಂದಲೆ ಕಟ್ಟುವುದಕ್ಕೆ ಪ್ರಾರಂಭಿಸಿದರು.

1960ರ ದಶಕದ ಕಾಲದಲ್ಲಿ ಸ್ತ್ರೀ ವೇಷ ಮಾಡುವವರ ಪೈಕಿ ಹೆಚ್ಚಿನವರಿಗೆ ಲಂಗ ಧರಿಸುವುದೇ ಚಾಲ್ತಿ. ನಾನೂ ಲಂಗಧರಿಸಿ ಪಾತ್ರ ಮಾಡಿದ್ದೇನಾದರೂ ರಂಗಕ್ಕೆ ಅಂತಹ ವೇಷಗಳು ಹೊಂದುವುದಿಲ್ಲವಾದ್ದರಿಂದ ಲಂಗದ ಬಳಕೆಯ ಕುರಿತು ನನಗೆ ಸಮ್ಮತಿ ಇಲ್ಲ. ಸ್ತ್ರೀಪಾತ್ರ ಮಾಡುವರು ಕಚ್ಚೆ ಹಾಕಿಯೇ ಅಭಿನಯಿಸಬೇಕು ಎನ್ನುವುದು ನನ್ನ ಅಭಿಮತ.

ಮೊದಲು ನಾನು ಘಟವಾಣಿಯಾದ ಪಾತ್ರವೊಂದಕ್ಕೆ ವಸ್ತ್ರವಿನ್ಯಾಸ ಮಾಡಿದೆ. ಅದು ಎಲ್ಲಾ ವೇಷಗಳಿಗೂ ಸೂಕ್ತವಾಗಿರಲಿಲ್ಲ. ಶಿಲ್ಪಗಳ ಅಧ್ಯಯನದಿಂದ ಕಿರೀಟದ ಬಳಕೆ ತಂದೆ. ಆದರೆ ಅದು ತಲೆಗೆ ತೀರಾ ದೊಡ್ಡದೆನ್ನಿಸಿ ಸಭಿಕರ ಮುಂದೆ ಆಭಾಸವಾಗಬಹುದೆಂದು ಕಂಡಿತು. ಕೊನೆಗೆ ದೇವರ ಕಿರೀಟಗಳಲ್ಲಿ ಕಾಣುವ ಹಿಂದಿನ ದಿವ್ಯ ಪ್ರಭಾವಳಿಯನ್ನಷ್ಟೇ ಉಳಿಸಿಕೊಂಡು ಸ್ತ್ರೀಪಾತ್ರಕ್ಕೆ ಕಿರೀಟವನ್ನಾಗಿಸಿದೆ.

ಯಾವುದೇ ಆಗಲಿ ಸೃಷ್ಟಿ ಎಂದರೆ ಅದಕ್ಕೆ ಮುಂದೆ ಪ್ರಶ್ನೆ ಇರದಂತೆ ಸದೃಢವಾಗಿರಬೇಕು. ಆದರೆ ಇಂದಿಗೆ ‘ಪರಂಪರೆಯ ವೇಷ’ ಎಂದು ಹೇಳಿಕೊಳ್ಳುವುದರಲ್ಲಿ ನನಗೆ ಯಾವ ಅರ್ಥವೂ ಕಾಣುವುದಿಲ್ಲ. ಕಾರಣ ಚಿಂತಕರ ಶ್ರಮ, ಬುದ್ಧಿವಂತಿಕೆಯಿಂದ ವೇಷಭೂಷಣದ ಪರಿಕ್ರಮ ಬಂದಿತು.

ಪ್ರಶ್ನೆ : ಸ್ತ್ರೀವೇಷಧಾರಿಗಳು ಇತ್ತೀಚೆಗೆ ತಮ್ಮ ತಿಟ್ಟುಗಳ ನೃತ್ಯಶೈಲಿಯನ್ನು ಬದಲಾಯಿಸಿಕೊಳ್ಳುತ್ತಾ ಸಾಗಿರುವ ಹಿನ್ನಲೆಯಲ್ಲಿ ಯಾವ ಬಗೆಯ ನೃತ್ಯಶೈಲಿ ಯಕ್ಷಗಾನದ ಸ್ತ್ರೀಪಾತ್ರಕ್ಕೆ ಸೂಕ್ತ?

ಪಾತಾಳ ವೆ೦ಕಟರಮಣ ಭಟ್ : ನನಗೆ ಎರಡೂ ತಿಟ್ಟುಗಳ ಶೈಲಿ ಕರಗತವಾಗಿದೆ. ಆದರೆ ಯಾವತ್ತೂ ಇವೆರಡರ ಬೆರಕೆಪಾಕ ಮಾಡಲು ಹೋಗಲಿಲ್ಲ. ಮಾಡಬಾರದು ಕೂಡಾ. ಎರಡೂ ಪದ್ಧತಿಗಳ ಮಿಶ್ರಣ ಮಾಡಿದರೆ ಮೂಲಪಾಠಕ್ಕೆ ಕುಂದಾಗುತ್ತದೆ. ಅದರಲ್ಲೂ ತೆಂಕುತಿಟ್ಟಿನ ಕಲಾವಿದರಿಗೆ ಕೀಳರಿಮೆ ಭಾವ ಜಾಸ್ತಿ. ಅವರವರ ತಿಟ್ಟುಗಳಲ್ಲೇ ಬೇಕಾದ ಸೌಕರ್ಯ, ಸೌಂದರ್ಯ ಇರುವಾಗ ಇನ್ನೊಬ್ಬರ ಆಶ್ರಯ ಯಾಕೆ? ನಮ್ಮಲ್ಲಿ ಏನೂ ಇಲ್ಲವೆಂದು ಮೂದಲಿಸಿಕೊಳ್ಳಲೋ?

ಭಾಗವತರು ಪದ್ಯಗಳನ್ನು ವಿಳಂಬಗತಿಯಲ್ಲಿ ಹಾಡಿದರೆ, ಮದ್ದಳೆಗೂ ಹೆಚ್ಚಿನ ಅವಕಾಶ ಕೊಟ್ಟರೆ ತೆಂಕಿನಲ್ಲೂ ಅಭಿನಯ ಮಾಡಲು ಅವಕಾಶವಿದೆ. ಭಾಗವತರು ಪದ್ಯವನ್ನು ಎಳೆದಷ್ಟೂ ಮಿಶ್ರಮಾಡಿ ಕುಣಿಯುವವರೇ ಹೆಚ್ಚು. ನಮ್ಮದನ್ನು ಕಡೆಗಣಿಸಿ ಪರಚಿಂತನೆ, ವ್ಯಾಮೋಹ ಯಾಕೆ? ನಮ್ಮ ನಮ್ಮಲ್ಲಿ ನಂಬಿಕೆ ಬೇಕು. ಆಗ ಬೇರಾರದ್ದೂ ಎರವಲು ಬೇಕಾಗುವುದಿಲ್ಲ. ಸಂಶೋಧನೆ ಮಾಡಿ ಉಪಯೋಗಿಸಿದರೆ ಆಯಾಯ ಶೈಲಿಗಳಲ್ಲೇ ಬೇಕಾದಷ್ಟು ನಾಟ್ಯಸಂಗ್ರಹವಿದೆ.

ಪ್ರಶ್ನೆ : ಸ್ತ್ರೀ ಪಾತ್ರಕ್ಕೆ ಮಹಿಳೆಯರು ಜೀವ ತುಂಬಬಹುದಲ್ಲವೇ?

ಪಾತಾಳ ವೆ೦ಕಟರಮಣ ಭಟ್ : ಸ್ತ್ರೀವೇಷಕ್ಕೆ ರೂಪ, ಭಾಷೆ ಎರಡೂ ಮುಖ್ಯವಾದದ್ದು. ಆಗಲೇ ಯಕ್ಷಗಾನದಲ್ಲಿ ಮೇಲೇರಲು ಸಾಧ್ಯ. ಅಂತಹ ರೂಪ ಸ್ತ್ರೀಯರಿಗೆ ಇದ್ದರೂ ಅವರು ಯಕ್ಷಗಾನದಲ್ಲಿ ಸ್ತ್ರೀಪಾತ್ರವೆಂದು ಅಭಿನಯಿಸುವುದು ಅಷ್ಟು ಉಚಿತವಲ್ಲ. ಕಾರಣ, ಬಹುತೇಕ ಗಂಡಸರೇ ತುಂಬಿಕೊಂಡಿರುವ ಪ್ರದರ್ಶನಗಳಲ್ಲಿ ಅವರಿಗೆ ಬದುಕು, ನಿರ್ವಹಣೆ, ಓಡಾಟ, ಆಹಾರ ಕ್ರಮ, ಅಪರಾತ್ರಿಯ ಪ್ರಸಂಗಗಳು ಕಷ್ಟಕರವಾಗಿ ಪರಿಣಮಿಸುತ್ತವೆ. ಇತ್ತೀಚೆಗೆ ಸ್ತ್ರೀಯರದ್ದೇ ಆದ ಮೇಳ, ತಂಡಗಳಿದ್ದರೂ ಅವರಿಗೆ ಯಕ್ಷಗಾನದಲ್ಲಿ ಗಂಡಸರು ಮೇಲೇರಿದಂತೆ ಏರುವುದೂ, ಶ್ರಮ ಹಾಕುವುದು ಅಷ್ಟು ಸುಲಭವಾಗಿಲ್ಲ.

ಪ್ರಶ್ನೆ : ಸ್ತ್ರೀ ಪಾತ್ರ ನಿರ್ವಹಿಸುವವರ ಕರ್ತವ್ಯಗಳೇನು?

ಪಾತಾಳ ವೆ೦ಕಟರಮಣ ಭಟ್ : ಧರ್ಮೋದ್ಧಾರ, ಆತ್ಮೋನ್ನತಿಗಾಗಿ ಯಕ್ಷಗಾನ ಇರುವುದು. ಎದುರಿನಿಂದ ಮನರಂಜನೆ ಎಂದು ಕಂಡರೂ, ಅದರೊಳಗೆ ಧಾರ್ಮಿಕ ಮೌಲ್ಯಗಳು ಸಂಪದ್ಭರಿತವಾಗಿವೆ. ಅದನ್ನು ಅಭಿನಯದಲ್ಲಿ ಕಲಾವಿದನಾದವನು ಆಕರ್ಷಿಸಿ ತಿಳಿಸಬೇಕು. ಪಾತ್ರಗಳು ಜಾಗೃತಿ, ಪ್ರಜ್ಞೆ, ಒಳಿತು ಕೆಡುಕುಗಳನ್ನು ನಿರೂಪಿಸಬೇಕು.

ಹಾಗಾಗಿ ಯಾವುದೇ ಕಲ್ಪನೆಯು ಅಸಹ್ಯವಾಗಿರಬಾರದು. ಸಭೆಯಲ್ಲಿ ಸ್ತ್ರೀವೇಷ ಮಾಡುವವರು ಪುರುಷಪಾತ್ರದ ಜೊತೆಗೆ ಅಪ್ಪುಗೆ, ಮುತ್ತು ಕೊಡುವ ಸನ್ನಿವೇಶಗಳಲ್ಲಿ ಅಭಿನಯಿಸಬಾರದು. ಅದು ಸಭೆಗೆ ಕೆಟ್ಟ ಪರಿಣಾಮ; ಮಾತ್ರವಲ್ಲ ಸಭೆಯಲ್ಲಿರುವ ಹೆಣ್ಣುಮಕ್ಕಳ ಅವರ ಭಾವನೆಗೆ ಘಾಸಿಯನ್ನುಂಟುಮಾಡುತ್ತದೆ.

ಪ್ರಶ್ನೆ : ಕಲಾವಿದರಿಗೆ ನಿಮ್ಮ ಕಿವಿಮಾತೇನು?

ಪಾತಾಳ ವೆ೦ಕಟರಮಣ ಭಟ್ : ಕಲಾವಿದ ಮಾತ್ರವಲ್ಲ ಎಲ್ಲರಿಗೂ ಈ ಮಾತು ಅನ್ವಯ. ಅದರಲ್ಲೂ ಕಲಾವಿದನಿಗಂತೂ ದುಶ್ಚಟಗಳಿರಬಾರದು, ಅಧ್ಯಯನಶೀಲನಾಗಿರಬೇಕು, ಎಲ್ಲಾ ಪುರಾಣ, ಸಾಮಾಜಿಕ ಸಾಹಿತ್ಯದ ಅಭ್ಯಾಸ ಬೇಕು. ನಿತ್ಯ‌ಅಭ್ಯಾಸಿಯಾಗಿರಬೇಕು, ಕಲಿಕೆಯ ಮನಸ್ಸು ನಿರಂತರವಾಗಿರಬೇಕು, ತನ್ನಲ್ಲಿನ ಕಲೆಯನ್ನು ಬೆಳೆಸುವಲ್ಲಿ ಏನು ಉಪಯೋಗವೋ ಅದನ್ನೆಲ್ಲವನ್ನೂ ಅಳವಡಿಸಿಕೊಳ್ಳುವ ಮನಸ್ಸು ಬೇಕು. ಆದರೆ ಅನುಕರಣೆಯಾಗಿ ಅಲ್ಲ; ಸ್ವಂತಿಕೆಗೆ ಸರಿಯಾದ ಅನುಸರಣೆಯಾಗಿ.

ಪೂರ್ವಾರ್ಜಿತ ಇದ್ದರೆ ಮಾತ್ರ ಕಲಾವಿದನಾಗಬಲ್ಲ. ಪಾತ್ರದ ಔಚಿತ್ಯ ನೋಡಿ ಅಭಿನಯಿಸಬೇಕು. ಪಾತ್ರಸ್ವಭಾವಕ್ಕೆ ಅನುಕೂಲವಾಗಿ ಭಾಷೆ ಬಳಸಬೇಕು. ವ್ಯಕ್ತಿಯು ರಂಗದಲ್ಲಿ ಪಾತ್ರವಾಗಬೇಕು. ಮನಸ್ಸು, ಹೃದಯ ಲೀನವಾಗಬೇಕು. ಕೇಳುವ ಪದ್ಯಗಳಿಗೆ ಅಭಿನಯ ಲಯವಾಗಬೇಕು. ವ್ಯಕ್ತಿ ವ್ಯಕ್ತಿಯಾಗಿ ಉಳಿದರೆ ಅದರಿಂದ ಏನೂ ಪ್ರಯೋಜನವಿಲ್ಲ.ಕೃಪೆ : www.noopurabhramari.com


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Vaishnavi(12/2/2013)
Noopura Bhramari is a journal and Bi-monthly magazine. Not only website. Now it has became Research Foundation also.
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ