ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸ೦ದರ್ಶನ
Share
ಸ್ತ್ರೀಪಾತ್ರದ ಪ್ರಭಾವ ಗೌಣವಾಗದ೦ತೆ ಅಭಿನಯಿಸಬೇಕು

ಲೇಖಕರು :
ಮನೋರಮಾ ಬಿ ಎನ್
ಬುಧವಾರ, ಸೆಪ್ಟೆ೦ಬರ್ 18 , 2013

ಸ್ತ್ರೀ ವೇಷಗಳ ಆಯಾಮ, ದಿಕ್ಕು, ಅವಕಾಶ, ಅನುಕೂಲದ ಸವಿಸ್ತಾರವಾದ ಅನುಭವಗಳನ್ನು ಕಟ್ಟಿಕೊಡುತ್ತಾ ಪ್ರತಿಯೋರ್ವ ಕಲಾವಿದರು ತಮ್ಮದೇ ಆದ ನೋಟಗಳನ್ನು ಚೆಲ್ಲುತ್ತಾ ಈ ಬಾರಿ ನಿಮಗೆ ಯಕ್ಷಗಾನದ ಸ್ತ್ರೀವೇಷಗಳ ಸಮಗ್ರ ದರ್ಶನ ಮಾಡಿಸಲಿದ್ದಾರೆ. ಲೇಖನವೊಂದಕ್ಕೆ ಸೀಮಿತವಾಗಬಹುದಾಗಿದ್ದ ವಿಷಯವನ್ನು ಪ್ರಧಾನವಾಗಿಸಿ ಕಲಾವಿದರ ಸಂದರ್ಶನದಲ್ಲಿ ಹಿಗ್ಗಿಸಿ, ವೈವಿಧ್ಯಮಯ ಮತ್ತು ಪೂರಕವಾದ ಅಭಿಪ್ರಾಯಗಳನ್ನು ದಾಖಲಿಸುವುದರೊಂದಿಗೆ ತಿಟ್ಟುಗಳ ಹೊಂದಾಣಿಕೆಯಲ್ಲ್ಲಿ ಮತ್ತು ಪರಂಪರೆ- ಪ್ರಯೋಗಗಳೆರಡರ ನೆಲೆಯಲ್ಲಿ ಪಾರಮ್ಯ ಮತ್ತು ಸಮನ್ವಯ ಸಾಧಿಸಲು ಸ್ತ್ರೀಪಾತ್ರಧಾರಿಗಳಾಗಿ ದುಡಿದ, ದುಡಿಯುತ್ತಿರುವ ಅನುಭವಿ ಜನಪ್ರಿಯ ಕಲಾವಿದರ ಪೈಕಿ ಕೆಲವರ ಮಾತಿನ ಮುಕುರವನ್ನು ಇಲ್ಲಿ ನಿಮ್ಮೆದುರಿಗೆ ತೆರೆದಿಡಲಾಗಿದೆ. ಈ ಮೂಲಕ ಒಳಿತು-ಕೆಡುಕು-ಭವಿಷ್ಯ-ಸಾಧ್ಯತೆಗಳ ಕುರಿತಂತೆ ಚಿಂತನ-ಮಂಥನ-ಚರ್ಚೆಗಳು, ಅಭಿಪ್ರಾಯಗಳಿಗೆ ಮುಕ್ತ ಅವಕಾಶ ಇದೆ. ಭಾರತದ ಸರ್ವ ಕಲೆಗಳ ಮಾಹಿತಿಗಳನ್ನು ಕೊಡುತ್ತಿರುವ ಅ೦ತರ್ಜಾಲ ತಾಣ ' 'www.noopurabhramari.com'ದಲ್ಲಿ ಪ್ರಕಟಗೊ೦ಡ ಲೇಖನ.

*************************ಸುಬ್ರಹ್ಮಣ್ಯ ಹೆಗಡೆ, ಯಲಗುಪ್ಪ
ಯಕ್ಷಗಾನ ರಂಗದಲ್ಲಿ ರೂಪ, ಸ್ವರಭಾರ, ಆಳಂಗ, ಅಭಿನಯಗಳು ಒಂದಕ್ಕೊಂದು ಪೂರಕವಾಗಿದ್ದರೆ ಒಬ್ಬ ಕಲಾವಿದನ ಸ್ತ್ರೀ ವೇಷ ಎಷ್ಟು ಯಶಸ್ಸು ಗಳಿಸಬಹುದು ಎನ್ನುವುದಕ್ಕೆ ದೃಷ್ಟಾಂತ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ. ಹೊನ್ನಾವರದವರಾದ ಇವರು ಕನ್ನಡ ಸ್ನಾತಕೋತ್ತರ ಪದವೀಧರರಾಗಿ ಯಕ್ಷರಂಗ ಪ್ರವೇಶಿಸಿದವರು. ಪದವಿಯ ಬಳಿಕ ಕೆರೆಮನೆ ಶಂಭು ಹೆಗಡೆಯವರ ಗುಣವಂತೆಯ ಶ್ರೀಮಯ ಕಲಾಕೇಂದ್ರದಲ್ಲಿ ವಿದ್ಯಾರ್ಥಿಯಾಗಿ ಸೇರಿಕೊಂಡರು. ಅಲ್ಲಿ ಗುರುಗಳಾಗಿದ್ದ ಹೆರಂಜಾಲು ವೆಂಕಟರಮಣ ಗಾಣಿಗರಿಂದ ನಾಟ್ಯ ಕಲಿತು ಪರಿಪೂರ್ಣಕಲಾವಿದರಾಗಿ ಮೂಡಿಬಂದರು.ಪ್ರಶ್ನೆ : ಸ್ತ್ರೀ ವೇಷದ ಅಭಿವ್ಯಕ್ತಿಯಲ್ಲಿ ಜನಾಕರ್ಷಣೆ ಎಷ್ಟರ ಮಟ್ಟಿಗೆ ಮುಖ್ಯ?

ಸುಬ್ರಹ್ಮಣ್ಯ ಹೆಗಡೆ, ಯಲಗುಪ್ಪ : ಇಂದಿಗೆ ಒಬ್ಬ ಪಾತ್ರಧಾರಿ ಎಷ್ಟರಮಟ್ಟಿಗೆ ಜನಾಕರ್ಷಣೆ ಮಾಡಿದ್ದಾನೆ ಎಂಬುದು ಮುಖ್ಯವಾಗುತ್ತದೆಯೇ ವಿನಾ ಹಿರಿಯ, ಅನುಭವಿ ಎಂಬ ಪಟ್ಟಗಳಲ್ಲ. ಕೆಲವೊಮ್ಮೆ ಕಲಾವಿದನ ಸತ್ತ್ವವನ್ನನುಸರಿಸಿ ಸಾಧ್ಯವಾಗಬಹುದೇನೋ. ಆದರೆ ನನಗೆ ಅಂತವರ ಒಡನಾಟ ಯಕ್ಷಗಾನೀಯವಾದ ಅನುಭವಗಳನ್ನು ಕೊಟ್ಟಿವೆ.

ಸಾಲಿಗ್ರಾಮ ಮೇಳದಲ್ಲಿ ಜನಾಕರ್ಷಣೆಗಾಗಿ, ಕ್ರೇಜ್‌ಗಾಗಿ ನೃತ್ಯದಲ್ಲಿ ಹಲವು ಸರ್ಕಸ್‌ಗಳನ್ನು ಮಾಡಿದೆ. ಯಕ್ಷಗಾನಕ್ಕೆ ಅಪಚಾರವೋ ಅಲ್ಲವೋ ಅದು ನನಗೆ ತಿಳಿಯದು. ಆದರೆ ಜೀವನ ರೂಪಿಸಿಕೊಳ್ಳುವ ದೃಷ್ಟಿಯಿಂದ ಒಳ್ಳೆಯದಾಗಿದೆ. ತೆಂಕು, ಬಡಗು, ಬಡಾಬಡಗಿನ ಕುಣಿತ ಶೈಲಿಗಳನ್ನು ಆಯಾಯ ಪಾತ್ರಕ್ಕನುಕೂಲವಾಗಿ ಬಳಸಿಕೊಳ್ಳುತ್ತೇನೆ. ಅದು ಈಗಿನ ಕಾಲಕ್ಕೆ ಬೇಕು ಕೂಡಾ ; ಜನ ಅದನ್ನು ಸ್ವೀಕರಿಸುತ್ತಾರೆ. ‘ಶಿವರಂಜಿನಿ’ಯ ನಂತರ ‘ಮೇಳದಲ್ಲಿ ಸ್ತ್ರೀ ವೇಷದವರು ಯಾರು’ ಅಂತ ಕೇಳುವ ಮಟ್ಟಿಗೆ ಬಂತು. ಆಮೇಲೆ ಈ ಬಗೆಯ ಪಾತ್ರಗಳು ಹೆಚ್ಚಾಗುತ್ತಾ ಹೋಯಿತು. ಸ್ತ್ರೀವೇಷಕ್ಕೂ ಸಂಬಳ ಅಂತ ಮಾಡಿದ್ದು ಆಮೇಲೆಯೇ!

ಪ್ರಶ್ನೆ : ಯಕ್ಷಗಾನದಲ್ಲಿ ಸ್ತ್ರೀಪಾತ್ರ ಗೌಣವಾಗಲು ಕಾರಣವೇನಿರಬಹುದು?

ಸುಬ್ರಹ್ಮಣ್ಯ ಹೆಗಡೆ, ಯಲಗುಪ್ಪ : ಯಕ್ಷಗಾನದಲ್ಲಿ ಪುರುಷ ಪಾತ್ರಕ್ಕಿರುವಷ್ಟು ಪ್ರಾಮುಖ್ಯತೆ ಸ್ತ್ರೀಪಾತ್ರಕ್ಕೆ ಮೊದಲಿನಿಂದಲೂ ಇಲ್ಲ. ಬಹುಷಃ ಪುರುಷವೇಷ ಪೌರಾಣಿಕ ಕಲ್ಪನೆ ಕೊಡುತ್ತಾ ಸಾಗಿ ಸ್ತ್ರೀ ವೇಷ ಗೌಣವಾಗುತ್ತಾ ಆಧುನಿಕತೆ ಬಿಂಬಿಸುತ್ತಿದ್ದುದೇ ಕಾರಣವಾಗಿರಬಹುದು. ಇದಕ್ಕೆ ಆಯಾಯ ಕಾಲದ ಸ್ತ್ರೀ ಪಾತ್ರಧಾರಿಗಳ ಸಾಮರ್ಥ್ಯದ ಕೊರತೆಯೂ ಇರಬಹುದು.

ಪ್ರಶ್ನೆ : ಸ್ತ್ರೀ ಪಾತ್ರದ ನಿರ್ವಹಣೆಗೆ ಯಾವ ಕ್ರಮಗಳು ಅಗತ್ಯ?

ಸುಬ್ರಹ್ಮಣ್ಯ ಹೆಗಡೆ, ಯಲಗುಪ್ಪ : ಸಿಟ್ಟು, ಸೆಡವು, ಸಂತೋಷ, ದುಃಖ ಎಲ್ಲದರ ಪ್ರಕಟದಲ್ಲೂ ಹೆಣ್ಣು ಮತ್ತು ಗಂಡಿನ ಅಭಿವ್ಯಕ್ತಿ ಬೇರೆ ಬೇರೆ. ಹಾಗೆಂದು ಕೆಲವೊಂದು ದುಡುಕಿನ ಸ್ತ್ರೀ ವೇಷಗಳನ್ನು ಮಾಡಿದರೂ ಅದು ಹೆಣ್ತನದಲ್ಲಿಯೇ ಇರಬೇಕು. ಗಂಡುಕಲೆ ಎಂದು ಆಡುವುದಲ್ಲ. ಹೆಣ್ಣಿನ ಸಹಜತೆ-ಸೂಕ್ಷ್ಮತೆಗಳನ್ನು ಅರ್ಥೈಸಿ ಸರಿಯಾಗಿ ಅಭಿವ್ಯಕ್ತಿಸಬೇಕು. ಕೆಲವೊಂದು ಪಾತ್ರಗಳು ಕರುಣಾ ರಸದ್ದೇ ಆದರೂ ಅದರ ಅಭಿವ್ಯಕ್ತಿಯ ವಿಧಾನ, ಕೊಡಲ್ಪಡುವ ರೀತಿ ಬೇರೆ ಬೇರೆಯಾಗಿರುತ್ತದೆ. ಉದಾ : ಸೀತೆ, ದಮಯಂತಿ.

ಪಾತ್ರವನ್ನು ಚೆಂದಗೆ ಕಾಣಿಸಿಕೊಡುವುದು ಇಡೀ ಪಾತ್ರದ ಯಾವುದೋ ಒಂದು ಮೂಲೆಯಲ್ಲಿರುತ್ತದೆ. ಅದನ್ನು ಹುಡುಕಿ ತೋರಿಸುವ ಪ್ರಯತ್ನ ಆಗಬೇಕು. ಅಧ್ಯಯನಶೀಲವಾದರೆ ಮಾತ್ರ ಇವೆಲ್ಲದರ ಅಭಿವ್ಯಕ್ತಿ ಸಾಧ್ಯ.

ಪ್ರಶ್ನೆ : ಸ್ತ್ರೀ ವೇಷಧಾರಿಯ ಅಭಿವ್ಯಕ್ತಿಗೆ ಆಯುಷ್ಯವಿಲ್ಲ ಎಂಬ ಮಾತನ್ನು ಒಪ್ಪುವುದಾದರೆ ಅದನ್ನು ಮೀರುವ ಪ್ರಯತ್ನಗಳೇನಾದರೂ ಇವೆಯೇ?

ಸುಬ್ರಹ್ಮಣ್ಯ ಹೆಗಡೆ, ಯಲಗುಪ್ಪ : ಹೌದು. ಸ್ತ್ರೀಪಾತ್ರಕ್ಕೆ ಹೆಚ್ಚು ಬಾಳಿಕೆ ಇಲ್ಲ. ಸಾಧಾರಣವಾಗಿ ಯಕ್ಷಗಾನಕ್ಕೆ ಬರುವಾಗಲೇ 18-20 ಕಳೆದಿರುತ್ತದೆ. ಬುದ್ಧಿಯೂ ಗ್ರಹಿಸುವಷ್ಟು ಪ್ರೌಢವಾಗಿರುವುದಿಲ್ಲ. ಇನ್ನೇನು ಪ್ರಬುದ್ಧ ವೇಷಧಾರಿಯಾಗುತ್ತಾನೆ ಅನ್ನುವಾಗ ಮುಖದ ಹೊಳಪು ಇಳಿಯುತ್ತಾ ಹೋಗುತ್ತದೆ. ಚೆಲುವನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಶರೀರ-ಶಾರೀರ ಸರಿಯಾಗಿಟ್ಟುಕೊಳ್ಳುವ ಪ್ರಯತ್ನ ಪಾತ್ರಧಾರಿ ಮಾಡಬೇಕು. ವಯಸ್ಸು ಬದಲಾದಂತೆ ವೇಷದ ಔಚಿತ್ಯವನ್ನು ಗಮನಿಸಿ ಅಂತಂತಹ ವೇಷಗಳನ್ನು ನಿರ್ವಹಿಸುವುದು ಉತ್ತಮ.

ಪ್ರಶ್ನೆ : ಸ್ತ್ರೀ ಪಾತ್ರಧಾರಿಗಳ ಕುರಿತ ಅಭಿಪ್ರಾಯ ಜನರಲ್ಲಿ ಹೇಗಿದೆ?

ಸುಬ್ರಹ್ಮಣ್ಯ ಹೆಗಡೆ, ಯಲಗುಪ್ಪ : ಈಗಿನ ಕಾಲಕ್ಕೆ ಚೆನ್ನಾಗಿಯೇ ಇದೆ. ಅಷ್ಟೇಕೆ, ಅಮೇರಿಕಾಗೆ ಹೋಗಿದ್ದಾಗ 40 ಜನ ಕಲಾವಿದರಿಗೆ ಹೋಟೆಲ್ ಒಂದನ್ನು ಕಾದಿರಿಸಲಾಗಿತ್ತು. ಅದೇ ಹೋಟೆಲ್‌ನಲ್ಲಿ ಬಹು ನೃತ್ಯದ ಹೆಣ್ಣುಮಕ್ಕಳು ತಂಗಿದ್ದರು. ಅವರ ಗ್ರೀನ್ ರೂಂ ಬೇರೆಯಿತ್ತು. ಅವರಿಗೆಲ್ಲಾ ಒಂದೇ ಸಮನೆ ಕುತೂಹಲ. ‘ಹೆಂಗಸರ್ಯಾರು ಬಂದಿದ್ದು ಕಂಡಿಲ್ಲ. ಹಾಗೆಂದು ಸ್ತ್ರೀ ಪಾತ್ರವೂ ಇತ್ತು’. ಕೊನೆಗೆ ಅವರು ಪ್ರದರ್ಶನದ ತರುವಾಯ ನಮ್ಮ ಬಳಿಗೆ ಬಂದು ಸ್ತ್ರೀಪಾತ್ರ ಮಾಡಿದವರನ್ನು ಹುಡುಕಿ ತೆಗೆಯುವಾಗ ಆದ ಅವರ ಸಂತೋಷ, ಅಚ್ಚರಿ, ಅಭಿಮಾನ ನಿಜಕ್ಕೂ ಖುಷಿ ತಂದಿತ್ತು. ಹೀಗೆ, ಅಭಿಮಾನದ ದೃಷ್ಟಿಯೇ ಹೆಚ್ಚಿರುವಾಗ ಸ್ತ್ರೀ ಪಾತ್ರಧಾರಿಗಳನ್ನು ವಿಚಿತ್ರವಾಗಿ ನೋಡಿದರೆ ಅಂಥವರ ಮನಸ್ಸೇ ವಿಕೃತ ಎನ್ನಬೇಕಷ್ಟೇ !

ಪ್ರಶ್ನೆ : ಸ್ತ್ರೀಪಾತ್ರಗಳಲ್ಲಿ ಸ್ತ್ರೀಯರ ಪಾಲ್ಗೊಳ್ಳುವಿಕೆ ಎಷ್ಟು ಸರಿ? ತಪ್ಪು?

ಸುಬ್ರಹ್ಮಣ್ಯ ಹೆಗಡೆ, ಯಲಗುಪ್ಪ : ಸ್ತ್ರೀಯರಿಗಿಂತಲೂ ಗಂಡಸರೇ ಸ್ತ್ರೀಪಾತ್ರ ಮಾಡಿದರೆ ಪರಿಣಾಮಕಾರಿ. ರಂಗಭೂಮಿಯಲ್ಲಿ ಮೊದಲಿನಿಂದಲೂ ಸ್ತ್ರೀವೇಷ ಮಾಡಿದ್ದೆಲ್ಲಾ ಗಂಡಸರೇ. ಹಾಗೆ ನೋಡಿದರೆ ಹೆಣ್ಣಿನ ಭಾವನೆ ಹೆಣ್ಣಿಗೆ ಅರ್ಥವಾಗುತ್ತದೆ ಎಂಬ ಮಾತು ಪೂರ್ಣ ಸತ್ಯವಲ್ಲ. ಹೆಣ್ಣಿನ ಮನಸ್ಸು ಗಂಡಸರಿಗೂ ಅರ್ಥವಾಗುತ್ತದೆ. ಸಾಮಾಜಿಕವಾಗಿಯೂ ಇದು ದಿಟ. ಉದಾ : ರಂಗಕ್ಕೆ ನಾಚಿಕೆ ಎಷ್ಟು ಬೇಕು ಅನ್ನುವುದು ಹೆಣ್ಣಿಗೆ ಅರ್ಥೈಸಿಕೊಂಡು ಅಭಿನಯಿಸಲು ಕಷ್ಟ ಆದೀತು. ಅದೇ ಗಂಡಸಿಗೆ ರಂಗಕ್ಕೆ ಹೇಗೆ ಶೃಂಗಾರವನ್ನು ಅರ್ಥ ಮಾಡಿಕೊಂಡು ಮಾಡಬೇಕು ಅನ್ನುವುದು ಗೊತ್ತಿರುತ್ತದೆ.

ಪ್ರಶ್ನೆ : ಸ್ತ್ರೀಪಾತ್ರಗಳ ಭವಿಷ್ಯದ ಬಗ್ಗೆ ಏನಾದರೂ ಕಲ್ಪನೆಯಿದೆಯೇ?

ಸುಬ್ರಹ್ಮಣ್ಯ ಹೆಗಡೆ, ಯಲಗುಪ್ಪ : ಭವಿಷ್ಯದಲ್ಲಿ ಯಕ್ಷಗಾನದ ಸ್ತ್ರೀ ಪಾತ್ರಗಳು ಹೀಗೆಯೇ ಇರಬೇಕು ಅಥವಾ ಇರುತ್ತದೆ ಎಂದು ಹೇಳುವುದು ಕಷ್ಟ. ಆದರೆ ಸ್ತ್ರೀಪಾತ್ರದ ಪ್ರಭಾವ ಗೌಣವಾಗದ ಹಾಗೆ ಪ್ರಯತ್ನವನ್ನು ಸ್ತ್ರೀವೇಷದವರು ಮಾಡಬೇಕು.ಕೃಪೆ : www.noopurabhramari.com


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
padmanabha (10/23/2015)
i like very very yalaguppa streevesha where yalauppa is not in that mela i cannat see the ykashagana
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ