ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸ೦ದರ್ಶನ
Share
ರಸಾನಂದದ ಕಲ್ಪನೆಯಿದ್ದರೆ ನಿವೃತ್ತಿ ಎಂಬ ಪ್ರಶ್ನೆಯೇ ಇರುವುದಿಲ್ಲ : ಮಂಟಪ

ಲೇಖಕರು :
ಮನೋರಮಾ ಬಿ ಎನ್
ಭಾನುವಾರ, ಒಕ್ಟೋಬರ್ 27 , 2013

ಸ್ತ್ರೀ ವೇಷಗಳ ಆಯಾಮ, ದಿಕ್ಕು, ಅವಕಾಶ, ಅನುಕೂಲದ ಸವಿಸ್ತಾರವಾದ ಅನುಭವಗಳನ್ನು ಕಟ್ಟಿಕೊಡುತ್ತಾ ಪ್ರತಿಯೋರ್ವ ಕಲಾವಿದರು ತಮ್ಮದೇ ಆದ ನೋಟಗಳನ್ನು ಚೆಲ್ಲುತ್ತಾ ಈ ಬಾರಿ ನಿಮಗೆ ಯಕ್ಷಗಾನದ ಸ್ತ್ರೀವೇಷಗಳ ಸಮಗ್ರ ದರ್ಶನ ಮಾಡಿಸಲಿದ್ದಾರೆ. ಲೇಖನವೊಂದಕ್ಕೆ ಸೀಮಿತವಾಗಬಹುದಾಗಿದ್ದ ವಿಷಯವನ್ನು ಪ್ರಧಾನವಾಗಿಸಿ ಕಲಾವಿದರ ಸಂದರ್ಶನದಲ್ಲಿ ಹಿಗ್ಗಿಸಿ, ವೈವಿಧ್ಯಮಯ ಮತ್ತು ಪೂರಕವಾದ ಅಭಿಪ್ರಾಯಗಳನ್ನು ದಾಖಲಿಸುವುದರೊಂದಿಗೆ ತಿಟ್ಟುಗಳ ಹೊಂದಾಣಿಕೆಯಲ್ಲ್ಲಿ ಮತ್ತು ಪರಂಪರೆ- ಪ್ರಯೋಗಗಳೆರಡರ ನೆಲೆಯಲ್ಲಿ ಪಾರಮ್ಯ ಮತ್ತು ಸಮನ್ವಯ ಸಾಧಿಸಲು ಸ್ತ್ರೀಪಾತ್ರಧಾರಿಗಳಾಗಿ ದುಡಿದ, ದುಡಿಯುತ್ತಿರುವ ಅನುಭವಿ ಜನಪ್ರಿಯ ಕಲಾವಿದರ ಪೈಕಿ ಕೆಲವರ ಮಾತಿನ ಮುಕುರವನ್ನು ಇಲ್ಲಿ ನಿಮ್ಮೆದುರಿಗೆ ತೆರೆದಿಡಲಾಗಿದೆ. ಈ ಮೂಲಕ ಒಳಿತು-ಕೆಡುಕು-ಭವಿಷ್ಯ-ಸಾಧ್ಯತೆಗಳ ಕುರಿತಂತೆ ಚಿಂತನ-ಮಂಥನ-ಚರ್ಚೆಗಳು, ಅಭಿಪ್ರಾಯಗಳಿಗೆ ಮುಕ್ತ ಅವಕಾಶ ಇದೆ. ಭಾರತದ ಸರ್ವ ಕಲೆಗಳ ಮಾಹಿತಿಗಳನ್ನು ಕೊಡುತ್ತಿರುವ ಅ೦ತರ್ಜಾಲ ತಾಣ ' 'www.noopurabhramari.com'ದಲ್ಲಿ ಪ್ರಕಟಗೊ೦ಡ ಲೇಖನ.
ಮ೦ಟಪ ಪ್ರಭಾಕರ ಉಪಾಧ್ಯ
ಯಕ್ಷಗಾನದ ಸ್ತ್ರೀವೇಷಗಳ ಪೈಕಿ ಬಹು ಜನಪ್ರಿಯ ಮತ್ತು ಪ್ರಚಲಿತ ಹೆಸರು. ಸ್ತ್ರೀಪಾತ್ರಧಾರಿಯಾಗಿದ್ದುಕೊಂಡು ದಾಖಲಾರ್ಹವೆನಿಸುವ ಪ್ರಯೋಗಶೀಲ ಆಯಾಮವನ್ನಿತ್ತ 'ಸಾವಿರದ ಸಾಧಕ'. ಶತಾವಧಾನಿ ಡಾ. ಆರ್. ಗಣೇಶ್‌ರ ಯಕ್ಷಗಾನೀಯ ದೃಷ್ಟಿಗೆ ಇಂಬು ಕೊಡುವಲ್ಲಿ ಮಂಟಪ ಉಪಾಧ್ಯರ ಸ್ತ್ರೀಪಾತ್ರ ನಿರ್ವಹಣೆಯು ಯಕ್ಷಗಾನದ ಐತಿಹಾಸಿಕ ದಾಖಲೆ. ಸ್ತ್ರೀಪಾತ್ರಕ್ಕೆ ಹೊಸ ದಿಕ್ಕನ್ನು ನೀಡುವುದಷ್ಟೇ ಅಲ್ಲದೆ; ಸ್ತ್ರೀ ಪಾತ್ರವೊಂದನ್ನೇ ಇಟ್ಟುಕೊಂಡು 'ಏಕವ್ಯಕ್ತಿ ಯಕ್ಷಗಾನ' ವೆಂಬ ಅಭಿದಾನವನ್ನಿಟ್ಟು ಯಕ್ಷಗಾನೀಯವಾಗಿ ಹೊಸ ಸ್ಪರ್ಶವನ್ನು ನೀಡುವಲ್ಲಿ ಮಂಟಪರ ಸಾಧನೆ ನಿಜಕ್ಕೂ ಶ್ಲಾಘನೀಯ.

ಗಜಾನನ ಹೆಗಡೆಯವರ ಸ್ತ್ರೀವೇಷವನ್ನು ಕಂಡು ಇಷ್ಟಪಟ್ಟು ಯಕ್ಷಗಾನ ಕೇಂದ್ರದಲ್ಲಿ ಕಲಿತವರು. ಸ್ತ್ರೀಪಾತ್ರಕ್ಕೆ ಬೇಡಿಕೆ ಕಡಿಮೆ ಇದ್ದ ಕಾಲಕ್ಕೆ ಮಂಟಪರ 'ರೂಪ ಚೆಂದ; ಸ್ತ್ರೀವೇಷಕ್ಕೆ ಒಪ್ಪುತ್ತದೆ' ಅನ್ನುವ ದೃಷ್ಟಿಯಿಂದ ಹಿರಿಯ ಗುರುಗಳ ಆಣತಿಯ ಮೇರೆಗೆ ಸ್ತ್ರೀಪಾತ್ರವಾಗಿ ಪಾದಾರ್ಪಣೆ. ಸಮಯಮಿತಿ ಮೇಳ, ಇಡಗುಂಜಿ, ಪೆರ್ಡೂರು ಮೇಳಗಳಲ್ಲಿ ಸೇವೆ ಸಲ್ಲಿಸಿ ; ಮುಖ್ಯ ಸ್ತ್ರೀಪಾತ್ರಧಾರಿಯಾಗುವ ಮಟ್ಟಿಗೆ ಬೆಳೆದರೂ, ವೃತ್ತಿಯಾಗಿ ಯಕ್ಷಗಾನ ಬೇಡ ಎಂದು ತೀರ್ಮಾನಿಸಿ ಬೆಂಗಳೂರಿಗೆ ಬಂದು ಐಸ್ಕ್ರೀಮ್ ತಯಾರಿಕೆಯ ವ್ಯವಹಾರದಲ್ಲಿ ತೊಡಗಿಕೊಂಡವರು. ಚಿಟ್ಟಾಣಿಯವರ ಜೊತೆಗೆ ಹಲವು ಪ್ರಸಂಗಗಳಲ್ಲಿ ಮೋಹಿನಿ, ಮೇನಕೆಯಾಗಿ ಪಾತ್ರ ನಿರ್ವಹಿಸಿ ತಾರಾಮೌಲ್ಯವನ್ನೂ ಪಡೆದವರು. ಮೂರು ವರ್ಷ ಭರತನಾಟ್ಯವನ್ನು ಬೆಂಗಳೂರಿನ ಮಂಜುಳಾ ಪರಮೇಶ್ ಅವರ ಬಳಿ ಅಭ್ಯಸಿಸಿ, ತಮ್ಮ ಅಭಿವ್ಯಕ್ತಿಗೆ ಹೊಂದುವುದಿಲ್ಲವೆಂದು ಕೈಬಿಟ್ಟು; ನಂತರ ನಾಲ್ಕು ವರ್ಷಕಾಲ ಬಣ್ಣ ಹಚ್ಚದೆ ತಟಸ್ಥರಾಗಿದ್ದರು ಮಂಟಪ. ಕಾವ್ಯ ಚಿತ್ರ-ಯಕ್ಷ ನೃತ್ಯದ ವೇಳೆಗೆ ಶತಾವಧಾನಿ ಡಾ. ಗಣೇಶ್‌ರೊಂದಿಗೆ ಆದ ಪರಿಚಯ, ನಂತರದ ನೂತನ ಅಭಿವ್ಯಕ್ತಿಯ ಹುಡುಕಾಟದಲ್ಲಿ ಹೊರಬಂದದ್ದೇ ಏಕವ್ಯಕ್ತಿ ಯಕ್ಷಗಾನ.

ಪ್ರಶ್ನೆ : ಸ್ತ್ರೀ ಪಾತ್ರಗಳ ಗೆಲ್ಲುವಿಕೆಗೆ ಏನು ಮಾಡಬೇಕು? ಯಾವುದು ಯಶಸ್ಸನ್ನು ನಿರ್ಧರಿಸುತ್ತದೆ ?

ಮಂಟಪ : ಪಾತ್ರಕ್ಕೆ ಸ್ಥಾಯಿ ಭಾವ ಬಹಳ ಮುಖ್ಯ. ಅನೌಚಿತ್ಯವೇ ರಸಕ್ಕೆ ವಿಘ್ನಕಾರಕ ಎಂದು ಪಾಠವಾದದ್ದು ಗಣೇಶರಿಂದ. ಪಾತ್ರದ ಅನೌಚಿತ್ಯಗಳಲ್ಲಿ ನಮ್ಮ ದೌರ್ಬಲ್ಯಗಳೂ ಅಡಗಿರುತ್ತವೆ. ಕೆಲವೊಂದು ಕಸರತ್ತನ್ನಷ್ಟೇ ಕಲಿತು ಅದರೊಳಗಿನ ಅಭಿನಯ, ರಸ ತೀವ್ರತೆಯನ್ನು ಕೈಬಿಟ್ಟರೆ ಒಂದೆರಡು ವರ್ಷ ಚಲಾವಣೆಯಲ್ಲಿರಬಹುದು. ಮೂರನೇ ವರ್ಷಕ್ಕೆ ಅದೂ ಕೂಡಾ ಬಿದ್ದು ಹೋಗುತ್ತದೆ. ಹಾಗೆಂದು ಬದಲಾವಣೆ ಮಾಡಿಕೊಳ್ಳುತ್ತಾ ಸಾಗಿದರೆ ಎಷ್ಟು ದಿನ? ಆದರೆ ಅಭಿನಯವನ್ನೇ ರಸವಾಗಿ ಪರಿವರ್ತಿಸಿಕೊಂಡಾಗ ಬದಲಾವಣೆ ಬೇಕಾಗುವುದಿಲ್ಲ. ಅದೇ ಒಂದು ಬದಲಾವಣೆಯಾಗುತ್ತದೆ.

ಕಲೆಯೊಂದು ಆಧ್ಯಾತ್ಮ. 'ನಾನಿಲ್ಲ. ನಾನು ಅಲ್ಲ. ಆಗ ನಾವೇ ಎಲ್ಲಾ' ಎಂಬುದನ್ನು ದ್ವೈತವಾಗಿ ನೋಡಿಕೊಂಡೂ ಅದ್ವೈತವನ್ನು ಸಾಧಿಸಿಕೊಳ್ಳಲು ಸಾಧ್ಯವಿದೆ. ನೋಡುವವರು ಪಾತ್ರವಾಗಿ, ನರ್ತಿಸುತ್ತೇವೆ ಎಂಬ ಅಹಂಕಾರವನ್ನು ನಾವು ಕಳಚಿಕೊಂಡರೆ ರಸೋತ್ಪತ್ತಿಯಾಗುತ್ತದೆ. ಅದಕ್ಕೆ ಅನುಕೂಲವಾಗಿ ಪರಿಶ್ರಮ, ಚಿಂತನೆ, ಅಧ್ಯಯನ ಇದ್ದರೆ ನಮ್ಮ ಅಭಿವ್ಯಕ್ತಿಯ ವೇಳೆಗೆ ಪ್ರಯೋಜನಕ್ಕೆ ಬರುತ್ತದೆ ಎಂಬುದನ್ನು ಬಿಟ್ಟರೆ, ನೆನಪು ಮಾಡಿಕೊಳ್ಳುತ್ತಾ ಅಭಿನಯ ಮಾಡಿದರೆ ರಸನಿಷ್ಪತ್ತಿ ಆಗುವುದಿಲ್ಲ. ಆದರೆ ಕಲಿತದ್ದನ್ನು ತೋರಿಸುವ ಪ್ರಯತ್ನವೇ ಈಗ ಹೆಚ್ಚಾಗುತ್ತಿದೆ. ಪಾತ್ರದ ಒಳಗೆ ನಾವಿಳಿದರೆ ವೇಷ ಚೆಂದ ಇತ್ತೇ, ಇಲ್ಲವೇ ಎಂಬುದು ಕೂಡಾ ಗಮನಕ್ಕೆ ಬರುವುದಿಲ್ಲ. ರಸಕ್ಕೆ ಏರದಿದ್ದಾಗ ಮಾತ್ರ ಸೀರೆ, ವೇಷಭೂಷಣದ ಬಗ್ಗೆ ಗಮನ ಹೋಗುವುದು.

ಚೆಂದ, ಸೌಂದರ್ಯವೇ ಸ್ತ್ರೀಪಾತ್ರದ ಮುಖ್ಯ ಅಂಶವಲ್ಲ. ಆದರೆ ಅದೇ ಮುಖ್ಯ ಎಂಬಂತಾಗಿರುವುದು ದೌರ್ಭಾಗ್ಯ. ಕಾಣಿಸಿಕೊಳ್ಳುವುದೇ ಉದ್ದೇಶವಾಗಿದ್ದ ಕಾಲಕ್ಕೆ ಸೀರೆ, ಪೋಷಾಕು, ವೇಷಭೂಷಣವೆಲ್ಲಾ ಚೆಂದವಾಗಿದ್ದರೆ ಮಾತ್ರ ಮಿಂಚಲು ಸಾಧ್ಯ ಎಂಬುದಷ್ಟೇ ನನಗೂ ಗೊತ್ತಿದ್ದರಿಂದ ಕಲೆಗಿಂತ ಹೆಚ್ಚು ಪ್ರದರ್ಶನದ ಬಗ್ಗೆ ಗಮನವಿತ್ತು. ಅದಕ್ಕೆ ಪೂರಕವಾಗಿ ಭರತನಾಟ್ಯ ಕಲಿತೆ. ಆ ಶ್ರಮ ನನ್ನ ಒಟ್ಟು ನೃತ್ಯದಲ್ಲಿ ಹೊಸ ರೇಖೆಗಳನ್ನು ಕಾಣಿಸಿದ ಕಾರಣ ಈವಾಗಲೂ ಭರತನಾಟ್ಯ ಕುಣೀತಿರಿ ಎಂಬ ದೂರುಗಳಿವೆ. ಆದರೆ ಕಲೆಯ ಆನಂದ, ಸ್ವಾದ, ರಸ, ಭಾವ ಮುಂತಾಗಿ ಯಾವ ವಿಚಾರಗಳೂ, ನಾಟ್ಯಶಾಸ್ತ್ರದ ಯಾವ ಕಲ್ಪನೆಯೂ ಆಗ ಇರಲಿಲ್ಲ. ಜನರ ಮುಂದೆ ಹೋಗಿ ನರ್ತಿಸಿ ಚಪ್ಪಾಳೆ ಗಿಟ್ಟಿಸಿಕೊಳ್ಳುವ ತೀವ್ರತೆಯೊಂದೇ ಇತ್ತು.

ಪ್ರಶ್ನೆ : ಯಕ್ಷಗಾನದಲ್ಲಿ ಪುರುಷಪಾತ್ರಕ್ಕೆ ಇರುವ ಪ್ರಾತಿನಿಧ್ಯ ಸ್ತ್ರೀಪಾತ್ರಕ್ಕೆ ಇದೆಯೇ?

ಮಂಟಪ : ಜೀವಂತಿಕೆ ಇರುವುದೇ ಸ್ತ್ರೀಪಾತ್ರದಲ್ಲಿ. ಆದರೆ ಈ ರಂಗದಲ್ಲಿ ಗಂಡುಪಾತ್ರಕ್ಕೆ ಇರುವ ವ್ಯವಸ್ಥಿತ ಅವಕಾಶ ಸ್ತ್ರೀಪಾತ್ರಕ್ಕೆ ಇಲ್ಲ. ಹಾಗಾಗಿ ಸ್ತ್ರೀಪಾತ್ರ ಕೈಬಿಟ್ಟರೂ ಆಗುತ್ತದೆ ಎಂದಾದದ್ದು. ಈಗ ಸಖಿಯರೇ ಇಲ್ಲದ ರಾಜಕುಮಾರಿ ಪ್ರವೇಶ ಆಗುವುದೂ ಇದೇ ಕಾರಣಕ್ಕೆ. ಆದರೆ ಯಾವಾಗ ಸ್ತ್ರೀಪಾತ್ರವನ್ನು ನಿಲ್ಲಿಸುತ್ತಾರೋ ಅಲ್ಲಿಗೆ ಯಕ್ಷಗಾನ ಅಂತ್ಯ.

ಪಾತ್ರದೊಳಗೆ ಒಂದಾಗಿ ಇಳಿಯುವ ಅನುಭೂತಿ ಗಂಡುವೇಷದಲ್ಲಿ ನೂರಕ್ಕೆ ನೂರು ಸಾಧ್ಯವಿಲ್ಲ. ಕಾರಣವಿಷ್ಟೇ, ಗಂಡಿಗೆ ಅವಲಂಬನೆ ಬೇಕು ; ವೈವಿಧ್ಯ ಇಲ್ಲ. ಅದೇ ಹೆಣ್ಣಿಗೆ ವೈವಿಧ್ಯ ಜಾಸ್ತಿ. ಹೆಣ್ಣು ನೂರು ತರಹದಲ್ಲಿ ಸಿಟ್ಟು, ನಗು ಪ್ರಕಟಿಸಿ ತೋರುತ್ತಾಳೆ. ಅದೇ ಗಂಡಿಗೆ ಎರಡರಿಂದ ಮೂರು ಬಗೆಯಲ್ಲಿ ಮಾತ್ರ ಇದು ಸಾಧ್ಯ. ರಸಾನಂದದ ದೃಷ್ಟಿಯಿಂದ ಹೆಣ್ಣಿಗೆ ಸೂಕ್ಷ್ಮತೆ ಹೆಚ್ಚು. ಉದಾ : ಸೀತೆಯ ವಿನಾ ರಾಮನನ್ನು ಅಭಿನಯಿಸುತ್ತಾ ರಾಮಾಯಣ ಕಥೆ ಹೇಳುವುದರಲ್ಲಿ ಅರ್ಥ ಇಲ್ಲ. ಆದರೆ ಸೀತೆಗೆ ಹಾಗಲ್ಲ.

ಪ್ರಶ್ನೆ : ಹಾಗಾದರೆ ಸ್ತ್ರೀಪಾತ್ರ ನಿರ್ವಹಣೆಗೆ ಸ್ತ್ರೀ ಸೂಕ್ತಳಾ? ಅಥವಾ ಪುರುಷನೇ?

ಮಂಟಪ : ರಂಗವೇ ಕಲ್ಪನಾ ಲೋಕ. ಸಹಜ ಜೀವನದಲ್ಲಿರುವುದಕ್ಕಿಂತಲೂ ಅತೀ ಎನಿಸುವಂತದ್ದೆ ಅಭಿನಯ ಎನಿಸಿಕೊಳ್ಳುತ್ತದೆ. ಸಹಜವಾಗಿದ್ದರೆ ಅದು ರಂಗದ ಮೇಲಿನ ಅಭಿನಯ ಆಗುವುದಿಲ್ಲ. ಸಿನಿಮಾ ಅಥವಾ ಕಿರುತೆರೆಯೆನಿಸಿಕೊಳ್ಳುತ್ತದೆ. ರಂಗದಲ್ಲಿ ನಾವಲ್ಲದ್ದನ್ನು ನಾವಾಗುವುದರಲ್ಲೇ ವಿಶೇಷತೆಯಿರುವುದು. ಹಾಗಾಗಿ ಸ್ತ್ರೀಪಾತ್ರವನ್ನು ಸ್ತ್ರೀಯೇ ಮಾಡಿದರೆ ವಿಶೇಷ ಅಲ್ಲ.

ರಂಗಭೂಮಿ ವ್ಯವಸ್ಥೆ ಸಿನಿಮಾದಂತೆ ವಾಸ್ತವದ ಪ್ರತಿರೂಪದ ಚಿತ್ರಣವಲ್ಲ. ಹೆಣ್ಣಾದವಳು ತನ್ನ ಸಹಜತೆಯನ್ನೆ ಪ್ರಕಟಿಸಿದರೆ ಅದು ಅಭಿನಯ ಆಗುವುದಿಲ್ಲ. ಉದಾ : ನಾಚಿಕೆ ಅಭಿವ್ಯಕ್ತಿ ಮಾಡಲು ಹೊರಟಾಗ ಎಷ್ಟು ಮಾಡಬೇಕು ಅನ್ನುವ ಅಳತೆ ತಪ್ಪಿ ಮೀರಿ ಹರಿಯಬಹುದು. ಅತೀ ಎನ್ನಿಸುವ ಸ್ತ್ರೀಪಾತ್ರದ ಅಭಿನಯವನ್ನು ಸ್ತ್ರೀ ಮಾಡಲಾರಳು. ಬೇಕಾದರೆ ಅವಳಿಗೆ ಗಂಡು ವೇಷ ಬಹಳ ಚೆನ್ನಾಗಿ, ಸುಲಭವಾಗಿ ದಕ್ಕುತ್ತದೆ. ಹೆಣ್ಣು ಪುರುಷನು ನಿರ್ವಹಿಸಿದ್ದಕ್ಕಿಂತ ಚೆನ್ನಾಗಿ ಪುರುಷಪಾತ್ರ ಮಾಡಬಲ್ಲಳು.

ಯಕ್ಷಗಾನದಲ್ಲಿ ಪುರುಷರು ಮಾಡುವ ಸ್ತ್ರೀಪಾತ್ರಗಳಂತೆ ಓರ್ವ ಸ್ತ್ರೀ ಸ್ತ್ರೀಪಾತ್ರಗಳನ್ನು ಮಾಡುತ್ತಾ ಅದೇ ಪ್ರಮಾಣದಲ್ಲಿ ಪ್ರೇಕ್ಷಕರನ್ನು ಆಕರ್ಷಿತರಾಗುವಂತೆ ಮಾಡುವುದು ಸಾಧ್ಯವೇ ಇಲ್ಲ. ಆಕೆಗೆ ಮಾಮೂಲಿ ಜೀವನಕ್ಕಿಂತ ಭಿನ್ನವಾದ, ಯಕ್ಷಗಾನದ ಮಾಧ್ಯಮಕ್ಕೆ ಸಹಜವಾದ ಒಂದು ಸ್ಪಂದನೆಯನ್ನಿತ್ತು ಕಲಾದೃಷ್ಟಿಯಿಂದ ಸ್ತ್ರೀಪಾತ್ರವನ್ನು ಗೆಲ್ಲಿಸಲು ನೂರಕ್ಕೆ ನೂರು ಸಾಧ್ಯವಿಲ್ಲ. ಬೇಕಾದರೆ ಗಮನಿಸಿ: ಕೂಚಿಪುಡಿ, ಓಡಿಸ್ಸಿಯಲ್ಲಿ ಸ್ತ್ರೀಪಾತ್ರ ಧರಿಸಿ ಪುರುಷರು ಸ್ತ್ರೀಯರಿಗಿಂತಲೂ ಚೆಂದದ ಸ್ತ್ರೀಪಾತ್ರ ಮಾಡಿ ದಕ್ಕಿಸಿಕೊಂಡಿದ್ದಾರೆ. ಗಂಡಾಗಿದ್ದುಕೊಂಡು ಬೇಗ ಹೆಣ್ಣಾಗುವುದು ಒಂದು ಸವಾಲು. ಹಾಗೆ ನೋಡಿದರೆ ಸ್ತ್ರೀಪಾತ್ರದಲ್ಲೇ ನನಗೆ ಹೆಚ್ಚುವರಿ ಆನಂದ ಸಿಕ್ಕುತ್ತದೆ.

ಪ್ರಶ್ನೆ : ಸ್ತ್ರೀಪಾತ್ರ ನಿರ್ವಹಣೆ ಪುರುಷರ ಸಹಜ ಜೀವನಕ್ಕೆ ಸಮಸ್ಯೆಗಳನ್ನು ಸೃಷ್ಟಿಸುವ ಸಂಭವ ಇರುತ್ತದೆಯೇ?

ಮಂಟಪ : ನನಗಾಗಿ ಯಾರೋ ಓಡಿಬಂದು ಹೆಣ್ಣೆಂದು ಗ್ರಹಿಸಿ ಈವರೆಗೆ ಮಾತನಾಡಿಲ್ಲ. ನಾವೂ ಬಿಗಿ ಇದ್ದಾಗ, ಅಭಿನಯವನ್ನು ಅಗ್ಗವಾಗಿ ಕಾಣದೆ ಇದ್ದರೆ ನಮಗೆ ಆ ಬಗೆಯ ಅನುಭವಗಳಾಗುವುದಿಲ್ಲ. ಸೆಳೆಯಬೇಕು ಅಂತಲೇ ವೇಷ ಮಾಡಿ, ನಿತ್ಯಜೀವನದಲ್ಲೂ ಹಗಲುವೇಷ ಮಾಡಿದರೆ ಎಂತವರೇ ಆದರೂ ಛೇಡಿಸುತ್ತಾರೆ. ಹಾಗಾಗಿ ಸ್ತ್ರೀಪಾತ್ರ ನಿರ್ವಹಿಸುವವರು ಹಗಲಿಗೂ ಸ್ತ್ರೀಪಾತ್ರ ಮಾಡುವರೆಂಬ ಭಾವನೆ, ಭ್ರಮೆ ತರಬಾರದು. ಅದು ರಂಗ ಮತ್ತು ಜೀವನದಲ್ಲಿ ಕೆಟ್ಟ ಪ್ರಭಾವ ಬೀರುತ್ತದೆ. ಹಗಲಿನಲ್ಲಿಯೂ ಸ್ತ್ರೀಪಾತ್ರದ ಅನುಭವವನ್ನೇ ತರುತ್ತಿದ್ದರೆ ರಂಗದಲ್ಲಿ ಆ ಅನುಭವ ಬರುವುದೇ ಇಲ್ಲ. ರಂಗದಲ್ಲಿ ಒಯ್ಯಾರದ ನಡಿಗೆ ಮಾಡಿ, ಜೀವನದಲ್ಲೂ ಅದೇ ರೀತಿ ಮಾಡಿದರೆ ಹೇಗೆ?

ನಾವು ಹೇಗೆ ಸ್ವಭಾವವನ್ನು ರೂಪಿಸಿಕೊಳ್ಳುತ್ತೇವೆಯೋ ಅಂತೆಯೇ ನಾವು ವ್ಯಕ್ತಿತ್ವದಲ್ಲಿ ರೂಪು ಪಡೆಯುತ್ತೇವೆ. ಭಾವವನ್ನು ಕೆರಳಿಸಿದರೆ ಹಾಗೆಯೇ ಬೆಳೆದುಬಿಡಬಹುದು. ಪದೇ ಪದೆ ಸೀರೆ ಉಡಿಸಿದರೆ ಗಂಡಿಗೂ ಹೆಣ್ಣಿನ ಮನೋಧರ್ಮವೇ ಬರುತ್ತದೆಯಲ್ಲವೆ? ಅದು ಅಸಹ್ಯ. ಆದ್ದರಿಂದ ಅಂತಹ ಅಪಸವ್ಯಗಳನ್ನು ಕಲಾವಿದ ಮೀರಬೇಕು. ಹೊಸ ಜೀವವಾಗಬೇಕು. ಭಾವದ ತೀವ್ರತೆ ಇರಬೇಕು. ದೈವಿಕತೆ ಮೂಡುವುದೇ ಆಗ. ಪ್ರಜ್ಞಾಪೂರ್ಣ ಗಮನಕ್ಕಿಂತಲೂ ನಡವಳಿಕೆಗಳನ್ನು ಗಮನಿಸುವ ಶಕ್ತಿಯಿರಬೇಕು. ಭಾವಕೋಶದಲ್ಲಿ ಗಮನಿಸಿದ್ದು ಸುಪ್ತವಾಗಿದ್ದರೆ ಅಭಿನಯದ ವೇಳೆಗೆ ರಂಗದಲ್ಲಿ ಹೊರಬರುತ್ತದೆ.

ಹಗಲಿನಲ್ಲಿ ಸ್ತ್ರೀಪಾತ್ರ ನಿರ್ವಹಿಸುವವನ್ನು ಗುರುತಿಸಲಿಕ್ಕೇ ಕಷ್ಟವಾಗುತ್ತದೆ ಎನ್ನುವುದಾದರೆ ಅದು ಆತನ ಹೆಗ್ಗಳಿಕೆ, ಸತ್ತ್ವ. ಘನತೆ, ಗಾಂಭೀರ್ಯ ಕೂಡಾ ಅದರಿಂದಲೇ ಬರುತ್ತದೆ. ಎರಡೂ ಕಡೆ ಒಂದೇ ಭಾವ ಇದ್ದರೆ ಅದರಲ್ಲಿ ಸಹಜ ಮತ್ತು ಅಭಿನಯ ಅಂತ ಹೇಳಲು ಏನೂ ಇರುವುದಿಲ್ಲ.

ಪ್ರಶ್ನೆ : ಸ್ತ್ರೀ ವೇಷ ನಿರ್ವಹಣೆಗೆ ಆಯುಷ್ಯ ಕಡಿಮೆ ಎಂದಿರುವಾಗ ಬೇಗನೆ ನಿವೃತ್ತಿಯಾಗುವುದು ಅಗತ್ಯವೇ?

ಮಂಟಪ : ಜನರಿಗೇ ವೇಷ ಕಾಣಿಸುವುದೇ ಉದ್ದೇಶವೆಂಬಂತೆ ಪಾತ್ರ ಮಾಡ ಹೊರಟರೆ ನಿವೃತ್ತಿಯಾಗಬೇಕಾದೀತು. ಏಕೆಂದರೆ ತಾರಾಮೌಲ್ಯವೂ ಬೆಳವಣಿಗೆಯಲ್ಲ. ಕುಣಿತದ ಪ್ರಯೋಗಗಳು, ಜನಪ್ರಿಯತೆಗೆ ಇರಬೇಕಾದ ಕಸರತ್ತುಗಳನ್ನೇ ಮಾಡುತ್ತಾ ಇದ್ದರೆ ವಯಸ್ಸಾದಲ್ಲಿಗೆ ನಿವೃತ್ತಿಯಾಗಬೇಕಾಗುತ್ತದೆ.

ಈ ಅರಿವು ನನ್ನಲ್ಲಿ ಬಂದದ್ದು ಶತಾವಧಾನಿ ಗಣೇಶರಿಂದ. ವಯಸ್ಸು 50 ವರ್ಷದ ನಂತರ ಸ್ತ್ರೀಪಾತ್ರವನ್ನು ಜನ ಸ್ವೀಕರಿಸುವುದಿಲ್ಲ ಎಂಬ ಸತ್ಯ ಗೊತ್ತಿದ್ದೂ ; ನನಗೆ ನನ್ನೊಳಗಿನ ಹುಡುಕಾಟಕ್ಕೆ ಉತ್ತರವನ್ನು ಕಂಡುಕೊಳ್ಳ್ಳುವ ಹಪಹಪಿಕೆಯಿತ್ತು. ಕಾವ್ಯಚಿತ್ರ-ಯಕ್ಷನೃತ್ಯದ ನಂತರದ ಮಾತುಕತೆಯಲ್ಲಿ ನನ್ನಲ್ಲ್ಲಿದ್ದ ಪ್ರಶ್ನೆಗೆ ಶತಾವಧಾನಿ ಗಣೇಶರಲ್ಲಿ ಪರಿಹಾರ ದೊರಕಿತ್ತು. ರಸದ ಮಟ್ಟಕ್ಕೆ ಕಲಾವಿದ ಏರಿದನೆಂದರೆ, ವಯಸ್ಸು ಎಂಭತ್ತಾದರೂ ದೇಹದಲ್ಲಿ ಕಸುವಿದ್ದರೆ ವೇಷ ಮಾಡಬಹುದು. ಪ್ರೇಕ್ಷಕ ರಸಾನಂದದಲ್ಲಿ ಮುಳುಗಿದಾಗ ವಯಸ್ಸು ಲೆಕ್ಕಕ್ಕೆ ಬರುವುದಿಲ್ಲ. ನೋಡುವವನಿಗೆ ತಾನು ನೋಡುತ್ತೀನಿ ಎಂಬ ಭಾವವೂ, ಕುಣಿಯುವವನಿಗೆ ತಾನು ಕುಣಿಯುತ್ತೀನಿ ಎಂಬ ಭಾವವೂ ಮರೆತು ರಸ ಉತ್ಪನ್ನವಾದರೆ ಎಲ್ಲವೂ ಸಾಧ್ಯ. ಆಗಿನ ಹೊತ್ತಿಗೆ ಅವರಂದಿದ್ದು ಅರ್ಥವಾಗಿರಲಿಲ್ಲ. ಆದರೂ ಈ ರಂಗ ಇಷ್ಟವಾಗಿದ್ದ ಕಾರಣ, ನನ್ನ ಅನ್ವೇಷಣೆಗೆ ದಾರಿ ದೊರೆತಿತ್ತು.

ಅಂತಹ ಸಮಯದಲ್ಲಿ ಏಕವ್ಯಕ್ತಿ ಯಕ್ಷಗಾನ ಮಾಡುವ ಯೋಚನೆಯನ್ನಿತ್ತು, ಭಾಮಿನಿಯನ್ನು 1999ರಲ್ಲಿ ನನ್ನ ಕೈಗಿತ್ತರು. ಪ್ರಸಂಗದಲ್ಲಿ ಸ್ತ್ರೀವೇಷ ಬಂದರೆ ಚಹಾ ಕುಡಿಯಲೋ, ಚೌಕಿಯಲ್ಲಿ ವೇಷಧಾರಿಗಳನ್ನು ಮಾತನಾಡಿಸಿಕೊಂಡು ಬರಲೋ ಹೋಗುತ್ತಿದ್ದ ಮನಸ್ಥಿತಿಯೇ ಜಾಸ್ತಿಯಾಗಿರುವಾಗ ನಾಯಿಕೆಯರ ಕಲ್ಪನೆಯುಳ್ಳ ವಸ್ತುವಿನ ಅಭಿವ್ಯಕ್ತಿ ಸುಲಭವಲ್ಲ ಎಂದೇ ಹಿಂಜರಿದಿದ್ದೆ. ಪುರುಷ ವೇಷದ ಸಹಕಾರವಿಲ್ಲದೆ ಇದು ಸಾಧ್ಯವಿಲ್ಲ ಎಂದೇ ಆಲೋಚನೆಯ ಕ್ಷಿತಿಜವನ್ನು ಸಣ್ಣ ಮಾಡಿಕೊಂಡಿದ್ದೆ.

ಜನರಿಗಾಗಿ ಕುಣಿಯುವುದನ್ನು ಬಿಡಬಹುದು. ಆದರೆ ತಮಗೇ ಎಂದು ಕುಣಿಯುವುದನ್ನೂ ಬಿಟ್ಟು ನಿವೃತ್ತಿ ಎಂದು ಪ್ರತಿಬಂಧಿಸಿಕೊಳ್ಳುವುದು ಯಾಕೆ? ಇಂತಿಷ್ಟೇ ಕಾರ್ಯಕ್ರಮ ಮಾಡಬೇಕೆಂಬ ಹಠ ಬಿಡುವುದು ಒಳಿತು. ಆದರೆ ವೇಷ ಮಾಡುವುದನ್ನೇ ಬಿಡುವುದಲ್ಲ. ನಮಗೆ ಬೇಕಾದ ಕಡೆ, ನಮಗಿಷ್ಟವಾದಲ್ಲಿ, ಒಬ್ಬಿಬ್ಬ ರಸಿಕರು ಇರುವೆಡೆಯೂ ಅಭಿನಯ ಮಾಡಬಹುದಲ್ಲ ! ಆಗ ವೇಷದ ಆಯುಷ್ಯದ ಪ್ರಶ್ನೆ ಉದ್ಭವಿಸುವುದಿಲ್ಲ. ಆದರೆ ಕಲೆ ಏನು ಅಂತ ತೋರಿಸಿಕೊಡುವಷ್ಟು ಸರಕು ನಮ್ಮಲ್ಲಿದ್ದರೆ ಮಾತ್ರ ಇದು ಸಾಧ್ಯ. ಬಣ್ಣ ಹಚ್ಚದೆಯೂ ಅಭಿನಯಿಸಿ ಕಣ್ಣೀರು ಹಾಕಿಸುವಂತಹ ತಾಕತ್ತು ಇರಬೇಕು. ಕುಣಿತ ಇರಲಿಕ್ಕಿಲ್ಲದಿರಬಹುದು. ಆದರೆ ಸಾತ್ತ್ವಿಕ ಅಭಿನಯ ಇದ್ದರೆ ಕುಣಿತವೊಂದು ಲೆಕ್ಕವೇ ಅಲ್ಲ. ೨೫ ವರ್ಷದ ಪ್ರಾಯವುಳ್ಳ್ಳವನು ಬಂದು ಚೆಂದಗೆ ನೃತ್ಯ ಮಾಡಿದರೆ ಒಪ್ಪಿಕೊಳ್ಳೋಣ. ಹಾಗಂತ ವಯಸ್ಸಾಯಿತು ಎಂಬ ಕಾರಣವೊಂದಕ್ಕೆ ನಮ್ಮ ಪಾತ್ರಕ್ಕೆ ಆಯುಷ್ಯ ಮುಗಿಯಿತು ಎನ್ನುವ ಮನೋಸ್ಥಿತಿಗೆ ಬೀಳಬಾರದು.ಕೃಪೆ : www.noopurabhramari.com


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Anant Vaidya(2/13/2014)
tumba channagide
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ