ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ
Share
ಯಕ್ಷಗಾನ (ತೆಂಕು ತಿಟ್ಟು): ಶಾಸ್ತ್ರೀಯತೆಯ ಪ್ರಶ್ನೆ

ಲೇಖಕರು :
ಡಾ. ಎಂ. ಪ್ರಭಾಕರ ಜೋಶಿ
ಭಾನುವಾರ, ನವ೦ಬರ್ 24 , 2013

ಯಕ್ಷಗಾನದ ಶಾಸ್ತ್ರೀಯತೆಯ ಪ್ರಶ್ನೆ - ಹಲವು ಬಾರಿ ಚರ್ಚಿತವಾದದ್ದು, ಈಗ ಮತ್ತೂಮ್ಮೆ ಚರ್ಚೆಗೆ ಬಂದಿದೆ. ಇದು ಆಗಾಗ ಚರ್ಚಿತವಾಗುವುದೂ, ಕುತೂಹಲಕರ. ದಕ್ಷಿಣಾದಿ (ಕರ್ನಾಟಕ) ಯಾ ಹಿಂದೂಸ್ತಾನಿ ಸಂಗೀತವು ಶಾಸ್ತ್ರೀಯವೆ? ಕಥಕ್‌ ನೃತ್ಯವು ಶಾಸ್ತ್ರೀಯವೆ? ಅಲ್ಲವೆ? ಎಂಬ ಪ್ರಶ್ನೆಗಳನ್ನು ಯಾರೂ ಈಗ ಕೇಳುವುದಿಲ್ಲ. ಯಕ್ಷಗಾನವು - "ಜನಪ್ರಿಯ ರಂಗಭೂಮಿ'ಯಾಗಿ, ಹಲವು ಪರಿವರ್ತನೆಗಳನ್ನು ಕಾಣುತ್ತ, ಹಲವು ರೂಪಾಂತರ, ವಿರೂಪಾಂತರಗಳಲ್ಲಿ ನಮ್ಮ ಮುಂದಿರುವುದರಿಂದ ಬಹುಶಃ ಈ ಪ್ರಶ್ನೆ ಆಗಾಗ ಬರುತ್ತಿದೆ. ಈ ಸ್ಥಿತಿಯು ಚಿಂತನೀಯ.

ಶಾಸ್ತ್ರೀಯ - ಜಾನಪದ ಎಂಬ (clssical andc folk) - ಪ್ರಧಾನವಾಗಿ, ಪಾಶ್ಚಾತ್ಯ ಕಲಾ ವಿಮರ್ಶೆಯ ವಿಭಾಗವು ಎಷ್ಟೋ ಬಾರಿ ನಮ್ಮ ಕಲೆಗಳಿಗೆ ಹೊಂದದೆ ಹೋಗುತ್ತದೆ. ಮಾರ್ಗ -ದೇಸಿ (ದೇಶಿ) ಎಂಬವೂ clssical andc folkಗಳಿಗೆ ಪೂರ್ಣ ಸಂವಾದಿ ಪರಿಭಾಷೆಗಳಲ್ಲ. ಆ ವಿಭಾಗವನ್ನು ಒಪ್ಪಿ ಹೇಳುವುದಾದರೆ -ಯಕ್ಷಗಾನದ ಒಂದು ತಿಟ್ಟು ಶಾಸ್ತ್ರೀಯ, ಇನ್ನೊಂದು ಶಾಸ್ತ್ರೀಯವಲ್ಲ ಎಂದು ಹೇಳುವುದು ಸರಿಯಲ್ಲ. ಹೌದಾದರೆ - ಎರಡೂ ಶಾಸ್ತ್ರೀಯ ಕಲೆಗಳೇ. ಕಲೆಯ ಅಂಗೋಪಾಂಗಗಳ ಪ್ರೌಢತೆ, ಸಂಕೀರ್ಣತೆ, ನಿಯಮಬದ್ಧತೆ ಮತ್ತು ಅದರ ಆಸ್ವಾದನಕ್ಕೆ ಬೇಕಾದ ಮಟ್ಟ ವನ್ನು ಆಧರಿಸಿ ಒಂದು ಕಲೆಯನ್ನು ಶಾಸ್ತ್ರೀಯ ಎನ್ನುತ್ತೇವೆ.

ಯಕ್ಷಗಾನದ ಬಡಗು ತಿಟ್ಟನ್ನು (ಬಡಗುಮಟ್ಟು) ಆಧರಿಸಿ, ಮಹಾವಿದ್ವಾಂಸ ಡಾ| ವಿ. ರಾಘವನ್‌ ಅವರೂ ತೆಂಕುತಿಟ್ಟನ್ನು ಆಧರಿಸಿ (ತೆಂಕಮಟ್ಟು), ಇನ್ನೋರ್ವ ಆಚಾರ್ಯ ವಿದ್ವಾಂಸ ದಿ| ಕುಕ್ಕಿಲ ಕೃಷ್ಣ ಭಟ್ಟರೂ ಯಕ್ಷಗಾನದ ಶಾಸ್ತ್ರೀಯತೆಯನ್ನು ಪ್ರತಿಪಾದಿಸಿ ದ್ದಾರೆ. (ಯಕ್ಷಗಾನದ ಶಾಸ್ತ್ರೀಯತೆ ಕುರಿತ ಕುಕ್ಕಿಲರ ಬರಹಗಳಿಗೆ ನೋಡಿರಿ: ಕುಕ್ಕಿಲ ಸಂಪುಟ, ಕರ್ನಾಟಕ ಸಂಘ, ಪುತ್ತೂರು. "ಯಕ್ಷಗಾನದ ತೆಂಕುತಿಟ್ಟು ಹೆಚ್ಚು ಶಾಸ್ತ್ರೀಯ' ಎಂದು ಕುಕ್ಕಿಲರ ಮತವಿದ್ದಂತೆ ಕಾಣುತ್ತದೆ. ಇರಲಿ.

ತೆಂಕಾಗಲಿ, ಬಡಗಾಗಲಿ - ನಾವು ಶಾಸ್ತ್ರೀಯ ಅನ್ನುವಾಗ - ಈಗ ಅದು ಕಾಣಿಸುವ ರೂಪಗಳನ್ನು ನೋಡಿ ಹೇಳಬೇಕೆ? ಅಲ್ಲ, ಒಂದೊಂದು ತಿಟ್ಟಿಗೆ ಇರುವ ಒಂದು ನಿಯಮಬದ್ಧ, ಆದರ್ಶೀಕೃತ (ಜಿಛಛಿಚlಜಿsಛಿಛ) ರೂಪವನ್ನು ಗ್ರಹಿಸಿ ತಾನೆ ಹೇಳಬೇಕು? ತೆಂಕುತಿಟ್ಟು, ಬಡಗುತಿಟ್ಟು ಇವೆರಡಕ್ಕೂ ಸಮಾನವಾಗಿರುವ ಮತ್ತು ಒಂದೊಂದು ತಿಟ್ಟಿಗೆ ಪ್ರತ್ಯೇಕವಾಗಿರುವ ಕಲಾನಿಯಮ, ಕಲಾವ್ಯಾಕರಣಗಳನ್ನು ಗಮನಿಸಿ ಹೇಳುವುದಾದರೆ -ಅಲ್ಲಿ ಇರುವುದು ಶಾಸ್ತ್ರೀಯ ಕಲೆಯೊಂದರ ರೂಪಲಕ್ಷಣವೇ ಆಗಿದೆ. ಸುಮಾರು ನಲ್ವತ್ತರಷ್ಟು ಶಾಸ್ತ್ರೀಯ ರಾಗಗಳು, ಪೌರಾಣಿಕ ಕಥಾನಕ, ನಿಶ್ಚಿತ ವೇಷ ನಿಯಮ, ನಿಯಮಬದ್ಧ ವಾದ ವಿಸ್ತೃತ ವ್ಯವಸ್ಥೆಯುಳ್ಳ ಕುಣಿತ, ಛಂದೋಬದ್ಧವಾದ ಸಾಹಿತ್ಯ, ಸಾಹಿತ್ಯಾತ್ಮಕವಾದ ಅರ್ಥಗಾರಿಕೆ, ತಾಳ, ವಾದನ ನಿಯಮಗಳು - ಇವುಗಳು ಶಾಸ್ತ್ರೀಯವಾದುವು. ಪೂರ್ವ ರಂಗ (ಸಭಾಲಕ್ಷಣ) ಸಾಹಿತ್ಯ ಮತ್ತು ರಂಗಪ್ರಯೋಗಗಳು ಭರತನ ನಾಟ್ಯಶಾಸ್ತ್ರದಲ್ಲಿ ಹೇಳಿರುವ ಅನೇಕ ವಿವರಗಳಿಗೆ ಹೊಂದಿಕೆಯಾಗಿವೆ. ಇದನ್ನು ಪ್ರತಿಪಾದಿಸಿ ಸ್ಥಾಪಿಸಬೇಕಾದುದಿಲ್ಲ. ಕೆದಕುವಿಕೆಯೂ ಅಗತ್ಯವಲ್ಲ.

ಚಿತ್ರಾಭಿನಯ, ಪದಾಭಿನಯ (ಪದ್ಯಗಳ ಶಬ್ಧಗಳನ್ನು ಮುದ್ರೆಗಳಿಂದ ತೋರಿಸುವಿಕೆ) ಇದ್ದರೆ ಮಾತ್ರ ಶಾಸ್ತ್ರೀಯ ಎಂದು ಹೇಳುವಂತೆಯೂ ಇಲ್ಲ. ನೃತ್ಯ -ನಾಟ್ಯಗಳಿಗೆ ಸಂಬಂಧಿಸಿದ ನಿಯಮಗಳು ಸಂಕೀರ್ಣವಾಗಿವೆ.

ಈಗ ನಾವು ರಂಗದಲ್ಲಿ ಕಾಣುವ ರೂಪಗಳನ್ನೆಲ್ಲ ಗಮನಿಸಿ ಹೇಳುವುದಾದರೆ-ಅಶಾಸ್ತ್ರೀಯವಾದ ಅಂಗಗಳು ಎರಡೂ ತಿಟ್ಟುಗಳಲ್ಲಿ ಬೇಕಷ್ಟಿವೆ. ಅದರಿಂದ ಈ ಕಲೆ ಅ-ಶಾಸ್ತ್ರೀಯ ವೆಂದಾಗುವುದಿಲ್ಲ. ಕಾಲಿಕ ಮತ್ತು ವ್ಯಕ್ತಿದೋಷಗಳನ್ನು ಹಿಡಿದುಕೊಂಡು (ಒಬ್ಬನು ಶ್ರುತಿ ಬಿಡುವುದು, ಒಬ್ಬನ ತಾಳದ ಶೈಥಿಲ್ಯ, ರಾಗಮಿಶ್ರಣ) - ಒಂದು ತಿಟ್ಟನ್ನು ನಿರ್ಣಯಿಸುವುದು ತಪ್ಪು. ವಿಚಲನೆಗಳು ಎಲ್ಲೆಡೆ ಇದ್ದೇ ಇರುತ್ತವೆ.

ಎಲ್ಲ ರಂಗಭೂಮಿಗಳೂ - ಧಾರ್ಮಿಕ ರಂಗಭೂಮಿ ಗಳಿಂದ (ಭೂತಾರಾಧನೆ, ಪೂಜಾ ನಾಟ್ಯಗಳು) ಸ್ವೀಕರಿಸಿವೆ, ಅದಕ್ಕೆ ಮರಳಿ ನೀಡಿವೆ ( ಭೂತಗಳ ಈಗಿನ ಕೆಲ ಕುಣಿತಗಳು, ಯಕ್ಷಗಾನದಿಂದ ಪ್ರಭಾವಿತವಾಗಿವೆ). ಇದು ಸತತ ಕ್ರಿಯೆ.

ಶಾಸ್ತ್ರೀಯತೆಯನ್ನು ಕಲೆಯ ಮೌಲಿಕ ಮತ್ತು ವ್ಯವಸ್ಥಿತ ಸ್ವರೂಪವನ್ನು ಆಧರಿಸಿ, ಕಾಲ, ದೇಶ, ಇತಿಹಾಸಗಳ ಬೆಳಕಿನಲ್ಲಿ ನೋಡಿ, ನಿರ್ಧರಿಸಬೇಕು.

ಈಯೆಲ್ಲ ನಿಟ್ಟಿನಲ್ಲಿ ತೆಂಕುತಿಟ್ಟು ಯಕ್ಷಗಾನವು ಭಾರತದ ಅನ್ಯ ಶಾಸ್ತ್ರೀಯ ಕಲಾ ಪ್ರಕಾರಗಳ ವಿಶಾಲವಾದ ಚೌಕಟ್ಟಿನಲ್ಲಿ, ತನ್ನ ಪ್ರಾದೇಶಿಕ ವೈಶಿಷ್ಟéಗಳನ್ನೂ ಹೊಂದಿಕೊಂಡು, ಶಾಸ್ತ್ರೀಯ ಲಕ್ಷ್ಯ - ಲಕ್ಷಣ ಸಂಪನ್ನವಾಗಿಯೇ ಇದೆ.ಕೃಪೆ : http://www.udayavani.com


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ