ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಸರಳ ವ್ಯಕ್ತಿತ್ವದ ಪ್ರತೀಕ ವಿದ್ವಾನ್‌ ಪೆರ್ಲ ಕೃಷ್ಣ ಭಟ್

ಲೇಖಕರು :
ಜಯ ಮಣಿಯಂಪಾರೆ
ಬುಧವಾರ, ನವ೦ಬರ್ 27 , 2013

ತನ್ನ ಹೆಸರಿನೊಂದಿಗೆ ಹುಟ್ಟಿದ ಊರಿಗೂ ಖ್ಯಾತಿ ತಂದಿತ್ತ ಮಹಾನುಭಾವರಲ್ಲಿ ಒರ್ವರಾಗಿ ಗುರುತಿಸಿಕೊಂಡಿದ್ದ ಪೆರ್ಲ ಕೃಷ್ಣ ಭಟ್ಟರನ್ನು ಅರಿಯದವರು ಯಾವುದೇ ಕ್ಷೇತ್ರದಲ್ಲೂ ಇರಲಾರರು. ಯಾಕೆಂದರೆ ಆವರ ಅಭಿರುಚಿ ಹಾಗೂ ಅಭಿಮಾನಿ ವಲಯ ಅಷ್ಟೂ ಸುವಿಶಾಲತೆಯಿಂದ ಕೂಡಿದ್ದಾಗಿದೆ. ಶಿಕ್ಷಕರಾಗಿ , ಅರ್ಥಧಾರಿಗಳಾಗಿ, ಸಾಹಿತಿಯಾಗಿ, ವಾಗ್ಮಿಯಾಗಿ, ಗಡಿನಾಡು ಏಕೀಕರಣದ ಹೋರಾಟಗಾರರಾಗಿ ಹೀಗೆ ಬಹುಮುಖ ವ್ಯಕ್ತಿತ್ವದಲ್ಲಿ ಗುರುತಿಸಿಕೊಂಡಿದ್ದರು. ಗುರು ಕೃಷ್ಣ ಭಟ್ಟರ ಹಿರಿಯರು ವೈದಿಕರಾಗಿ ಗುರುಸ್ಥಾನದಲ್ಲಿರುವುದರಿಂದ ಗುರು ಎಂಬ ಪದ ಅವರಿಗೆ ಪಾರಂಪರಿಕವಾಗಿ ಆಂಟಿಕೊಂಡ ಬಳುವಳಿಯಾಗಿದೆ. ಅಡ್ಡ ಪಂಚೆ, ನಸು ಕಂದು ಬಣ್ಣದ ಖಾದಿ ಅಂಗಿ ಅಥವಾ ಜುಬ್ಟಾ ಧರಿಸಿ ಸರಳತೆಯ ಪ್ರತೀಕವಾಗಿ ಅಪ್ಪಟ ಗಾಂಧಿವಾದಿಯಂತೆ ಕಂಡು ಬರುತ್ತಿದ್ದ ಪೆರ್ಲ ಕೃಷ್ಣ ಭಟ್ಟರು ತನ್ನ ವೃದ್ಧಾಪ್ಯದ ಅಂಚಿನಲ್ಲೂ ಪೆರ್ಲ ಪೇಟೆಗೊಂದು ಸುತ್ತು ತಿರುಗಾಡಿ ತನ್ನ ಅಚ್ಚು ಮೆಚ್ಚಿನ ತಾಣಗಳಲ್ಲಿ ಒಂದರೆ ಘಳಿಗೆ ಕೂತು ಪರಿಚಿತರನ್ನು ಕಂಡು ಮಾತಾಡಿ ಅಪರಿಚತರಲ್ಲಿ ಮಂದಸ್ಮಿತದ ನಗೆ ಬೀರಿ ಹೋಗುವುದನ್ನು ಹವ್ಯಾಸವಾಗಿರಿಸಿದ್ದ ಕ್ರಿಯಾಶೀಲ ವ್ಯಕ್ತಿಯಾಗಿದ್ದರು.

ತ್ಯಾಗಮಯವಾದ ಬದುಕಿನಲ್ಲಿ ಸದಾ ಭೋಗದ ಪ್ರತಿಫಲ ಕಂಡ ಈ ಅಪೂರ್ವ ಸಾಧಕರು ಲೌಕಿಕ ಭೋಗಗಳನ್ನು ಕುರುಡು ನಂಬಿಕೆಗಳನ್ನು ತೀರಾ ಕಡೆಗಣಿಸಿದ್ದರು. ಸಂಪ್ರದಾಯಿಕ ಸಮಾಜದಲ್ಲಿದ್ದು ಮೂಢನಂಬಿಕೆಗಳನ್ನು ಬಿಟ್ಟು ಬದುಕಿದ ಮುತ್ಸದ್ದಿಯಾಗಿದ್ದಾರೆ. ಲಿಖೀತ ಹಾಗೂ ಮೌಖೀಕ ಸಾಹಿತ್ಯಗಳೆರಡರಲ್ಲೂ ಸಿದ್ಧ ಹಸ್ತರಾಗಿದ್ದ ಪೆರ್ಲರು ಸಾರಸ್ವತ ಹಾಗೂ ಸಾಂಸ್ಕೃತಿಕ ಲೋಕದ ರಾಯಭಾರಿತ್ವದ ಅಭಿನವ ಕೃಷ್ಣರಾಗಿ ಖ್ಯಾತಿವೆತ್ತಿದವರಾಗಿದ್ದಾರೆ.

ಅನನ್ಯ ಸಾಧಕನ ಅನುಪಮ ಬದುಕು

ಶ್ರೀಪತಿ ಶಾಸ್ತ್ರಿ -ನೇತ್ರಾವತಿ ದಂಪತಿಗಳ ಪುತ್ರರಾಗಿ 1923 ಮೇ.16ರಂದು ಜನಿಸಿದ ಪೆರ್ಲ ಕೃಷ್ಣ ಭಟ್ಟರು ಪೆರ್ಲ ಹಾಗೂ ನೀರ್ಚಾಲು ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಗಳಿಸಿಕೊಂಡರು . ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿನ ಚಾಮರಾಜೇಂದ್ರ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಜನೆಗೈಯುತ್ತಿರುವಾಗ ಭಿಕ್ಷಾನ್ನ-ವಾರಾನ್ನದ ಉದರ ಪೋಷಣೆ. ಜತೆಗೆ ಖಾಸಗಿಯಾಗಿ ಹಿಂದಿ ಕಲಿತರು. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿ ಪ್ರವೀಣ ಪದವಿ ಪಡೆದರು. ಇ೦ಗ್ಲೀಷ್ ಕಲಿತು ಮದ್ರಾಸು ವಿ.ವಿ.ಯಿಂದ ಇಂಟರ್‌ ಮೀಡಿಯಟ್‌ ಸರ್ಟಿಫಿಕೇಟ್‌ ಪಡೆದರು. ಸಂಸ್ಕೃತ , ನ್ಯಾಯ ಶಾಸ್ತ್ರದಲ್ಲಿ ವಿದ್ವಾನ್‌ ಪದವಿಧರರಾದರು. ಬಾಲ್ಯ ಕಾಲದಲ್ಲಿಯೇ ಹಲವಾರು ಕನ್ನಡ, ಸಂಸ್ಕೃತ ಸಮ್ಮೇಳನಗಳಲ್ಲಿ ಭಾಗವಹಿಸಿ ತನ್ನ ನಾಡು ನುಡಿಯ ಬಗ್ಗೆ ಅಪಾರ ಅಭಿಮಾನ ಭರಿತರಾದ ನಾಟಕ , ಯಕ್ಷಗಾನ ಕಲಾವಿದರಾಗಿ ಗುರುತಿಸಿಕೊಂಡವರಾಗಿದ್ದಾರೆ. ಸತ್ಯದ ಪ್ರತಿಪಾದಕರಾಗಿ , ನಿಷ್ಠುರವಾದಿಯಾದ ಕೃಷ್ಣ ಭಟ್ಟರು ಕ್ವಿಟ್‌ ಇಂಡಿಯಾ ಚಳುವಳಿಯಲ್ಲೂ ಭಾಗವಹಿಸುವ ಮೂಲಕ ದೇಶ ಸೇವೆಗೈದ ಸಂತೃಪ್ತರು.

ಹೀಗೆ ಅಪಾರ ಆನುಭವಗಳನ್ನು ಮೈಗೂಡಿಸಿಕೊಂಡಿದ್ದ ಭಟ್ಟರು ಊರಿಗೆ ಹಿಂದಿರುಗಿ ತಂದೆಯ ವೈದಿಕ ವೃತ್ತಿಯಲ್ಲೂ ಸಹಕಾರಿಗಳಾದರು. ಈನಡುವೆ ಆಕಸ್ಮಿಕ ಎಂಬಂತೆ 1946ರಲ್ಲಿ ಮಂಗಳೂರು ಕೆನರಾ ಹೈಸ್ಕೂಲಿನಲ್ಲಿ ಹಿಂದಿ ಶಿಕ್ಷಕರಾಗಿ ನೇಮಕಗೊಂಡರು. ಬಳಿಕ ಮರು ವರ್ಷವೇ ಹುಟ್ಟೂರಾದ ಪೆರ್ಲ ಸತ್ಯನಾರಾಯಣ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿ ಸೇವೆ ಸಲ್ಲಿಸಲು ಅವಕಾಶವೊದಗಿ ಬಂದಿತ್ತು. 1978ರಲ್ಲಿ ಇವರು ಉದ್ಯೋಗದಿಂದ ನಿವೃತ್ತರಾಗುವ ಸಮಯಕ್ಕೆ ಪೆರ್ಲದ ಹಿಂದಿರೆಂಬ ಖ್ಯಾತಿಯ ನಾಮಧೇಯದಿಂದಲೇ ಗುರುತಿಸಿಕೊಂಡಿದ್ದರು.ಬಳಿಕ ಪೆರ್ಲ ಪ್ರಪ್ರಥಮ ಹಾಗೂ ಏಕೈಕ ಗುರುಕುಲ ಎಂಬ ಮುದ್ರಣಾಲಯವನ್ನು ಸ್ಥಾಪಿಸಿ ಅ ಮೂಲಕ ಜನಪ್ರೀತಿಗೆ ಪಾತ್ರರಾದರು.

ನಿರಹಂಕಾರ ಭರಿತ ಅರ್ಥಧಾರಿ

ಯಕ್ಷಗಾನದ ಅರ್ಥಗಾರಿಕೆಯಲ್ಲಿ ಪೆರ್ಲರದ್ದು ಧೀರ ಗಂಭೀರ ಸ್ವರ, ಮಾತುಗಳು ಸ್ಪಷ್ಟ , ನ್ಯಾಯ -ಮೀಮಾಂಸೆಗಳ ಭಾರದಿಂದ ವೇದ-ವೇದಾಂತದ ಸಾರದಿಂದ ನಿರರ್ಗಳ ಮೌಖೀಕ ಸಾಹಿತ್ಯದ ಮೂಲಕ ರಸವತ್ತಾತೆಯನ್ನು ಕಟ್ಟಿಕೊಡುವ ಕೃಷ್ಣಭಟ್ಟರು ಹಲವಾರು ಆಟ ಕೂಟಗಳಲ್ಲಿ ಭಾಗವಹಿಸಿ ಸುಪ್ರಸಿದ್ಧರು. ಇವರು ರಸಪೂರ್ಣವಾದ ಅರ್ಥಗಾರಿಕೆಯಿಂದಲೇ ಉಡುಪಿಯ ಕೃಷ್ಣ ಮಠದ ಹಾಗೂ ಎಡನೀರಿನ ಗೋಪಾಲಕೃಷ್ಣ ಮಠದ ಶ್ರೀಗಳ ಆತ್ಮೀಯತೆಯನ್ನು ಗಳಿಸಿಕೊಂಡಿದ್ದರು. ಈ ಎರಡು ಮಠಗಳಲ್ಲಿ ನಡೆಯುವ ಯಕ್ಷಗಾನ ಕೂಟದಲ್ಲಿ ವೃದ್ಧಾಪ್ಯದ ಆಂಚಿನವರೆಗೂ ಭಾಗವಹಿಸುತ್ತಿದ್ದ ಇವರು ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿ, ಮೈಸೂರು, ಬೆಂಗಳೂರು, ಮುಂಬಯಿ, ಹೈದರಾಬಾದ್‌ , ಮದ್ರಾಸು, ಮಧುರೈ, ತಿರುಚಿನಪಳ್ಳಿಗಳಲ್ಲಿ ನಡೆದ ಯಕ್ಷಗಾನ ಕೂಟದಲ್ಲಿ ಭಾಗವಹಿಸಿ ಖ್ಯಾತಿಯನ್ನು ಪಡೆದುಕೊಂಡವರಾಗಿದ್ದಾರೆ.

ಭಾಗವತ ವಾಚನ, ರಾಮಾಯಣ ಪ್ರವಚನಗಳಲ್ಲದೆ ಆಕಾಶವಾಣಿ , ದೂರದರ್ಶನದಲ್ಲಿ ನಿರಂತರ ಕಾರ್ಯಕ್ರಮವನ್ನು ನೀಡಿ ಗುರುತಿಸಿಕೊಂಡಿದ್ದರು. ದೇರಾಜೆ, ಸಾಮಗ, ಕುಬಣೂರು, ಶೇಣಿ, ಕಿಲ್ಲೆ, ಕೀರಿಕ್ಕಾಡು, ಜೋಷಿ, ಬಲಿಪ , ಕುಂಬಳೆ ಮೊದಲಾದ ಹಿರಿಯ ಯಕ್ಷಗಾನ ಸಮಾಕಾಲಿನರೊಂದಿಗೆ ಆತ್ಮೀಯ ಒಡನಾಟ ಬೆಳೆಸಿಕೊಂಡ ಶತಮಾನದ ಹಿರಿಯ ಅರ್ಥಗಾರಿಕೆಯ ಕೊನೆಯ ಕೊಂಡಿಯಲ್ಲಿ ಒರ್ವರಾಗಿದ್ದರು.

ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ

ಕನ್ನಡ ಹಾಗೂ ಸಂಸ್ಕೃತದಲ್ಲಿ ಹಲವಾರು ಕೃತಿಗಳನ್ನು ರಚಿಸಿಸುವ ಮೂಲಕ ಸಾರಸ್ವತ ಲೋಕದಲ್ಲಿ ಗುರತಿಸಿಕೊಂಡಿದ್ದ ಕೃಷ್ಣ ಭಟ್ಟರು ಸಂಸ್ಕೃತದಲ್ಲಿರುವ ಮಂತ್ರ ಪೂಜಾ ವಿಧಿಗಳನ್ನು ಕನ್ನಡದಲ್ಲಿ ಸರಳವಾಗಿ ಬರೆದಿದ್ದಾರೆ. ಪೇಮ ಚಂದರ ಕಥೆಗಳನ್ನು ಹಾಗೂ ಮಕ್ಕಳಿಗಾಗಿ ರಾಮಾಯಣವನ್ನು ಸರಳವಾಗಿ ಅನುವಾದಿಸಿದ್ದಾರೆ. ಕೆ.ಎಂ.ಮುನ್ಯಿಯವರ ಪರಶುರಾಮ ಕೃತಿಯನ್ನು ಅನುವಾದಿಸಿದ್ದಾರೆ.ನೀತಿ ಕಥಾ ಮಾಲೆ, ಸಾರ್ಥಕ ಷೋಢಷ ಸಂಸ್ಕಾರ, ಔರ್ಧ್ವದೇಹಿಕ ವಿಧಿ, ಋಗ್ವೇದಿಯ ನಿತ್ಯ ಕರ್ಮ, ತ್ರಿಕಾಲ ಸಂದ್ಯಾವಂದನಮ್‌, ನಂದೀನಿ ನಂದನಾನಂದನಮ್‌ ಇವರು ರಚಿಸಿದ ಪ್ರಮುಖ ಕೃತಿಗಳಾಗಿದೆ.

ಪೆರ್ಲ ಕೃಷ್ಣ ಭಟ್
ಜನನ : ಮೇ 16, 1923
ಜನನ ಸ್ಥಳ : ಪೆರ್ಲ
ಕಾಸರಗೋಡು ಜಿಲ್ಲೆ,
ಕೇರಳ ರಾಜ್ಯ
ಕಲಾಸೇವೆ : ಪ್ರಸಿದ್ಧ ವಾಗ್ಮಿ, ನಿವೃತ್ತ ಅಧ್ಯಾಪಕ, ಸಂಸ್ಕೃತದಲ್ಲಿ ವಿದ್ವಾನ್‌, ಹಿಂದಿ ರಾಷ್ಟ್ರ ಭಾಷಾ ಪ್ರವೀಣ, ಯಕ್ಷಗಾನ ಕಲಾವಿದ, ಯಕ್ಷಗಾನದ ಅರ್ಥಧಾರಿಗಳಾಗಿ, ಸಾಹಿತಿಯಾಗಿ, ವಾಗ್ಮಿಯಾಗಿ, ಗಡಿನಾಡು ಏಕೀಕರಣದ ಹೋರಾಟಗಾರರಾಗಿ ಹೀಗೆ ಬಹುಮುಖ ವ್ಯಕ್ತಿತ್ವದಲ್ಲಿ ಗುರುತಿಸಿಕೊಂಡಿದ್ದರು.
ಪ್ರಶಸ್ತಿಗಳು:
  • 1974ರಲ್ಲಿ ಕೇರಳ ರಾಜ್ಯದ ಶ್ರೇಷ್ಟ ಅಧ್ಯಾಪಕ ಪ್ರಶಸ್ತಿ
  • 1984ರಲ್ಲಿ ಕರ್ನಾಟಕ ಸರ್ಕಾರದ ಸಂಸ್ಕೃತ ವಿದ್ವಾಂಸ ಗೌರವ ಪ್ರಶಸ್ತಿ
  • 1993ರಲ್ಲಿ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ
  • ಗಡಿನಾಡು ಏಕೀಕರಣ ಪ್ರಶಸ್ತಿ
  • ಪಾರ್ತಿಸುಬ್ಬ,ಪೊಳಲಿ, ದೇರಾಜೆ, ಕಿಲ್ಲೆ ಸ್ಮಾರಕ ಪ್ರಶಸ್ತಿ
  • ಸುಮಾರು 45ಕ್ಕೂ ಹೆಚ್ಚು ಮಾನ ಪತ್ರಗಳ
  • 50ಕ್ಕೂ ಅಧಿಕ ಸಮ್ಮಾನ
  • 1989ರಲ್ಲಿ ಮುಂಬಯಿ ಯಕ್ಷಗಾನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
  • 1992ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಪ್ರಪ್ರಥಮ ಅಧ್ಯಕ್ಷ
  • ಜಾತ್ರೆ ಮತ್ತು ಇತರ ಕಥೆಗಳು ಕೇರಳ ಸರ್ಕಾರದಿಂದ ಪಠ್ಯ ಪುಸ್ತಕಕ್ಕಾಗಿ ಆಯ್ಕೆಯಾಗಿವೆ
ಮರಣ ದಿನಾ೦ಕ : ಸೆಪ್ಟೆ೦ಬರ್ 2, 2013
ಪಾದುಕ ಪ್ರಧಾನ, ತಾಳಮದ್ದಲೆ ಮೊದಲಾದುವು ಇವರು ರಚಿಸಿದ ನಾಟಕಗಳಾಗಿವೆ. ಸುಮಾರು 150ರಷ್ಟು ಸುಭಾಷಿತಗಳನ್ನು ಸಂಗ್ರಹಿಸಿ ಸರಳ ಕನ್ನಡ ಅನುವಾದದೊಂದಿಗೆ ಕೃತಿ ರೂಪಕ್ಕಿಳಿಸಿದ್ದಾರೆ. ಹಲವಾರು ಕ್ಷೇತ್ರಗಳ ಸುಪ್ರಭಾತವನ್ನು ರಚಿಸಿದ ಕೃಷ್ಣ ಭಟ್ಟರು ಹಲವು ಸ್ಮರಣ ಸಂಚಿಕೆಗಳ ಸಂಪಾದಕರಾಗಿ , ದೈನಿಕ, ಸಪ್ತಾಹಿಕ, ಮಾಸಿಕ, ವಿಶೇಷ ಸಂಚಿಕೆಗಳಲ್ಲಿ ಲೇಖನಗಳನ್ನು ಬರೆಯುವ ಮೂಲಕ ಸರಸ್ವತಿ ಸೇವೆಯಲ್ಲಿ ಗುರುತಿಸಿಕೊಂಡಿದ್ದಾರೆ. ಬದುಕಿ ಫಲವೇನು ಎಂಬುದು ಇವರ ಪ್ರಕಟಿತ ಆತ್ಮಕಥೆಯಾಗಿದೆ .ಅಲ್ಲದೆ 1994ರಲ್ಲಿ ಪೆರ್ಲದಲ್ಲಿ ಜರಗಿದ ಇವರ ಸಪ್ತತಿ ಸಮಾರಂಭದಲ್ಲಿ ಇವರ ಬದು ಹಾಗೂ ಸಾಧನೆಯ ಕುರಿತಾದ ಬರಹದ ಸುದರ್ಶನ ಎಂಬ ಅಭಿನಂದನ ಗ್ರಂಥ ಅಭಿಮಾನಗಳ ಸಮ್ಮುಖದಲ್ಲಿ ಲೋಕಾರ್ಪಣೆಯಾಗಿದೆ.

ಕೃತಿಗಳು

ಕಿರಾತಾರ್ಜುನೀಯ (ಅನುವಾದ), ಪಾದುಕಾ ಪ್ರದಾನ (ನಾಟಕ), ತಾಳಮದ್ದಳೆ (ಪ್ರಸಹನ), ಭಗವಾನ್‌ ಪರಶುರಾಮ (ಅನುವಾದ), ಜಾತ್ರೆ ಮತ್ತು ಇತರ ಕಥೆಗಳು (ಅನುವಾದ), ಭಗವಾನ್‌ ಬುದ್ಧ (ಜೀವನ ಚರಿತ್ರೆ), ಮಹಾಭಾರತ ಉಪಖ್ಯಾನಗಳು (ಕಥಾ ಸಂಕಲನ), ಕಲಾ ತಪಸ್ವಿ (ಸಂಪಾದಿತ ಸಂಸ್ಮರಣಾ ಗ್ರಂಥ), ಮಧೂರು ಶ್ರೀ ಸಿದ್ಧಿವಿನಾಯಕ ಸುಪ್ರಭಾತಂ (ಸಂಸ್ಕೃತ), ಶರವು ಮಹಾಗಣಪತಿ ಸುಪ್ರಭಾತ (ಕನ್ನಡ), ಮಂಜುನಾಥೇಶ್ವರ ಸುಪ್ರಭಾತಂ (ಸಂಸ್ಕೃತ), ಋಗ್ವೇದೀಯ ನಿತ್ಯಕರ್ಮ ವಿಧಿ (ಮೂಲ ಸಂಸ್ಕೃತ - ಕನ್ನಡ ಅನುವಾದ ಸಹಿತ), ಸತ್ಯನಾರಾಯಣ ಪೂಜಾ ವಿಧಿ (ಸಂಪಾದಿತ ಕನ್ನಡ ಅರ್ಥ ವಿವರ ಸಹಿತ), ಸಾರ್ಥ ಶೋಡಷ ಸಂಸ್ಕಾರ ರತ್ನಮಾಲಾ (ಮೂಲ ಸಂಸ್ಕೃತ ಹಾಗೂ ಕನ್ನಡ ಅರ್ಥ ಸಹಿತ).

ಪಠ್ಯ ಪುಸ್ತಕ

ಕೃಷ್ಣ ಭಟ್‌ ಅವರ ಕೃತಿಗಳಾದ ಕಿರಾತಾರ್ಜುನೀಯ (ಕಥೆ), ಪಾದುಕಾ ಪ್ರದಾನ, ಭಗವಾನ್‌ ಬುದ್ಧ, ಮಹಾಭಾರತ ಉಪಖ್ಯಾನಗಳು, ಜಾತ್ರೆ ಮತ್ತು ಇತರ ಕಥೆಗಳು ಕೇರಳ ಸರಕಾರದಿಂದ ಪಠ್ಯ ಪುಸ್ತಕಕ್ಕೆ ಆಯ್ಕೆಯಾಗಿದ್ದವು. ಉದಯವಾಣಿಯಲ್ಲಿ ಅವರು 'ತಿಳಿಗನ್ನಡ' ಅಂಕಣ ಬರೆದಿದ್ದರು.

ಸಾಂಸ್ಕೃತಿಕ ಲೋಕದ ರಾಯಭಾರಿಗೆ ಸಂದ ಸಮ್ಮಾನಗಳು

1978ರ ವರೆಗೆ ಹಿಂದಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಕೃಷ್ಣ ಭಟ್ಟರು 1974ರಲ್ಲಿ ಕೇರಳ ರಾಜ್ಯದ ಶ್ರೇಷ್ಟ ಅಧ್ಯಾಪಕ ಪ್ರಶಸ್ತಿಯನ್ನು ಹಾಗೂ ಬಳಿಕ ಕರ್ನಾಟಕ ರಾಜೋತ್ಸವ ಪ್ರಶಸ್ತಿ, ಗಡಿನಾಡು ಏಕೀಕರಣ ಪ್ರಶಸ್ತಿ, ಪಾರ್ತಿಸುಬ್ಬ, ಪೊಳಲಿ, ದೇರಾಜೆ, ಕಿಲ್ಲೆ ಸ್ಮಾರಕ ಪ್ರಶಸ್ತಿಗೆ ಭಾಜನರಾದರು. ಸುಮಾರು 45ಕ್ಕೂ ಹೆಚ್ಚು ಮಾನ ಪತ್ರಗಳು, 50ಕ್ಕೂ ಅಧಿಕ ಸಮ್ಮಾನಗಳನ್ನು ಪಡೆದುಕೊಂಡಿದ್ದಾರೆ. 1989ರಲ್ಲಿ ಮುಂಬಯಿ ಯಕ್ಷಗಾನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, 1992ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಪ್ರಪ್ರಥಮ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಹೀಗೆ ಸಂಸ್ಕೃತಿ ಹಾಗೂ ಸಂಸ್ಕಾರಕ್ಕೆ ಹಾಗೂ ಶಿಕ್ಷಣ ಹಾಗೂ ಸಾಹಿತ್ಯಕ್ಕೆ ವಿಶೇಷ ಸೇವೆ ಸಲ್ಲಿಸಿದ ಈ ಮಹಾನುಭಾವರು ಸೆ.2ರಂದು ಇಳಿ ಮಧ್ಯಾಹ್ನದ ಹೊತ್ತಿನಲ್ಲಿ ಅಸ್ತಂಗತರಾದದ್ದು ಮೌಖೀಕ ಹಾಗೂ ಲಿಖೀತ ಸಾಹಿತ್ಯ ಲೋಕಕ್ಕೆ ತುಂಬಲಾರ ನಷ್ಟವಾಗಿದೆ. ಇನ್ನೇನಿದ್ದರೂ ಅವರ ಗತ ಕಾಲದ ಮೆಲುಕಿನ ನೆನಪುಗಳಷ್ಟೆ ಹಸಿರಾಗಿ ಉಳಿದಿದೆ.

ಕರಾಡ ಕುಟುಂಬದಲ್ಲಿ ಜನಿಸಿದ ಪೆರ್ಲ ಕೃಷ್ಣ ಭಟ್ಟರು ಬಹುಭಾಷ ಪ್ರೇಮಿಯಾಗಿದ್ದರು. ಕನ್ನಡದಲ್ಲಿ ಪ್ರಾಥಮಿಕ ಜ್ಞಾನರ್ಜನೆಗೈದು .ಸಂಸ್ಕೃತದಲ್ಲಿ ಹಾಗೂ ಹಿಂದಿಭಾಷೆಯಲ್ಲಿ ಆಸಕ್ತಿವಹಿಸಿ ವಿದ್ವಾಂಸರಾಗಿ ಗುರುತಿಸಿಕೊಂಡರು .ಮಲಯಾಳವನ್ನು ಅರಿತಿದ್ದ ಇವರು ತೌಳವ ಸಂಸ್ಕೃತಿ ಹಾಗೂ ತುಳು ಭಾಷೆಯ ಮೇಲೆ ಅಪಾರ ಅಭಿಮಾನವನ್ನು ಬೆಳೆಸಿದ್ದರು. ಗ್ರಾಮೀಣ ಪ್ರದೇಶದ ತುಳು ಭಾಷೆಯ ಆಡು ನುಡಿಯ ಬಗ್ಗೆ ಹಿಡಿತ ಸಾಧಿಸಿದ್ದ ಈ ಆನನ್ಯ ಸಾಧಕ 2004ರಲ್ಲಿ ಪೆರ್ಲದ ನೇಸರ್‌ ಕಲಾವಿದೆರ್‌ ಆಶ್ರಯದಲ್ಲಿ ಪ್ರಕಾಶನ ಕಂಡ ನೇಸರ್‌ ಎಂಬ ಕಾಸರಗೋಡು ಜಿಲ್ಲೆಯ ಪ್ರಪ್ರಥಮ ತುಳು ಮಾಸ ಪತ್ರಿಕೆಯನ್ನು ಲೋಕರ್ಪಣೆಗೈದಿದ್ದರು. ಮಾತ್ರವಲ್ಲದೆ ತನ್ನ ಸಹಚರಿಗಳಾದ ತುಳು ಬಾಂದವರಲ್ಲಿ ಆತ್ಮೀಯತೆಯನ್ನು ಕಂಡುಕೊಂಡ ಮಹಾನ್‌ ವ್ಯಕ್ತಿಯಾಗಿದ್ದರು.

ಕಾಸರಗೋಡು ಕನ್ನಡ ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದವರು ಅವರು. ನಿವೃತ್ತಿಯ ನಂತರ ಪೆರ್ಲದಲ್ಲಿ 'ಗುರುಕುಲ' ಮುದ್ರಣಾಲಯ ಸ್ಥಾಪಿಸಿ ಆ ಭಾಗದಲ್ಲಿದ್ದ ಮುದ್ರಣಾಲಯ ಕೊರತೆ ನೀಗಿದವರು. ಈ ಮುದ್ರಣಾಲಯದ ಮೂಲಕ ಹಲವಾರು ಅಮೂಲ್ಯ ಗ್ರಂಥಗಳನ್ನು ಪ್ರಕಟಿಸಿದ್ದರು.

ಸಂಸ್ಕೃತ ಪಂಡಿತರಾಗಿದ್ದ ಕೃಷ್ಣ ಭಟ್ಟರು ಹಿಂದಿ, ಕನ್ನಡ ಹಾಗೂ ಇಂಗ್ಲಿಷ್‌ನಲ್ಲೂ ಅಷ್ಟೇ ಪ್ರಭುತ್ವ ಹೊಂದಿದ್ದರು. ಹಿಂದಿಯ ಪ್ರಸಿದ್ಧ ಲೇಖಕ ಪ್ರೇಮಚಂದ್ ಅವರ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು. 'ಬದುಕಿ ಫಲವೇನು' ಅವರ ಪ್ರಸಿದ್ಧ ಹೊತ್ತಗೆ. ಖಂಡಿಗೆ ಶ್ಯಾಮ ಭಟ್, ಸೇಡಿಯಾಪು ಕೃಷ್ಣ ಭಟ್‌ರೊಂದಿಗೆ ಪೆರ್ಲ ಕೃಷ್ಣ ಭಟ್ ಕಾಸರಗೋಡಿನ ಮೂವರು ಹಿರಿಯ ವಿದ್ವಾಂಸರಾರೆಂದೇ ಹೆಸರುವಾಸಿಯಾದವರು. ಕೃಷ್ಣ ಭಟ್ಟರು ಪತ್ನಿ ಕಮಲ ಹಾಗೂ 2 ಹೆಣ್ಣುಮಕ್ಕಳಾದ ಶಶಿಕಲಾ ಮತ್ತು ನಿವೇದಿತಾ, ಪುತ್ರ ರಾಜಾರಾಮರನ್ನು ಅಗಲಿದ್ದಾರೆ.



******************

ಪೆರ್ಲದಿಂದ ಪ್ರಕಾಶಿತಗೊಂಡ ಕಾಸರಗೋಡಿನ ಪ್ರಪಥಮ ತುಳು ಮಾಸ ಪತ್ರಿಕೆ ನೇಸರ್‌ನ ಬಿಡುಗಡೆಗೊಳಿಸುತ್ತಿರುವ ಪೆರ್ಲ ಕೃಷ್ಣಭ ಭಟ್ಟರು.






ಕೃಪೆ : http://udayavani.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ