ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಯಕ್ಷಗಾನದಲ್ಲಿ ಉಚ್ಚಾರ ಶುದ್ದಿ

ಲೇಖಕರು :
ರಾಜ್ ಕುಮಾರ್
ಸೋಮವಾರ, ಡಿಸೆ೦ಬರ್ 9 , 2013

ಒಂದು ಯಕ್ಷಗಾನ ಬಯಲಾಟ. ಪುಂಡು ವೇಶದ ಪ್ರವೇಶ. ತಾಯಿ ಕರೆದಾಗ ಬರುವ ವೇಷವದು. ಕೋಲ್ಮಿಂಚಿನಂತೆ ಪ್ರವೇಶಿಸಿದ ವೇಶ ಒಂದಷ್ಟು ಹೊತ್ತು ಪ್ರೇಕ್ಷಕರ ಕೈ ಬಾಯಿ ದಣಿಯುವಹಾಗೆ ದಿಗಿಣ ಸುತ್ತಿ ನಿಂತುಬಿಟ್ಟಿತು. ಕುಣಿತ ಬಹಳ ಆಕರ್ಷಕವಾಗಿತ್ತು. ಕುಣಿತವೊಂದೇ ಎಲ್ಲವನ್ನು ಹೇಳುವಂತಿದ್ದರೆ ಅನ್ನಿಸಿದ್ದು ಮಾತನಾಡಲು ತೊಡಗುವಾಗ. ಆ ಪಾತ್ರ ಮಾತನಾಡ ತೊಡಗಿದ್ದು ಹೀಗೆ “ ಅಮ್ಮಾ....ನೀಣು ಕರೆದಾಗ ಓಡೋಡಿ ಬಂದೆ............ಜೋರು ಹಸಿವಾಗುತ್ತಿದೆಯಮ್ಮ. ನಾಣು ಹೇನನ್ನು ತಿನ್ನಲಿ?”

ಎಂತಹಾ ಆಭಾಸ ! ಪ್ರಾಥಮಿಕ ಶಿಕ್ಷಣದ ತಳಹದಿ ಕುಸಿದ ಅನುಭವವಾಗುತ್ತದೆ. ಯಾವುದೋ ಶಬ್ದ ಯಾವುದೋ ಅರ್ಥವನ್ನು ಪ್ರಕಟಿಸಿದಾಗ ಅರ್ಥಗಾರಿಕೆಯ ಅರ್ಥವಾದರೂ ಏನು ಎಂದು ಯೋಚಿಸುವ ಹಾಗಾಗುತ್ತದೆ. ಉಚ್ಚಾರ ಶುದ್ದಿ ಹಲವು ಕಲಾವಿದರೂ ಬೇಕೆಂದೇ ಔದಾಸಿನ್ಯ ತೋರುವ ಭಾಗವಿದು. ಒಂದಷ್ಟು ಹೊತ್ತು ಕುಣಿದು ಧೂಳೆಬ್ಬಿಸಿದರೆ ಆ ಧೂಳಿನಲ್ಲಿ ಎಲ್ಲ ಮಾಯವಾಗುವುದೆಂಬ ಗ್ರಹಿಕೆ. ಹೆಚ್ಚಾಗಿ ನಾನು ನೀನು ಮುಂತಾದ ’ನ’ ಕಾರಗಳು ಕಷ್ಟ ದಿಂದ ಸುತ್ತಿ ಉಚ್ಚಾರದ ಬಗ್ಗೆ ಇವರಿಗಿರುವ ನಕರಾತ್ಮಕ ಧೋರಣೆಯನ್ನೇ ಪ್ರಕಟಪಡಿಸುವುದು ವಿಪರ್ಯಾಸ.

ಸಾ೦ದರ್ಭಿಕ ಚಿತ್ರ
ನಾವು ಪ್ರಾಥಮಿಕ ಶಿಕ್ಷಣ ಮುಗಿಸಿ ಪ್ರೌಢ ಶಿಕ್ಷಣಕ್ಕೆ ಕಾಲಿರಿಸಿದಾಗ ಹದಿ ಹರೆಯದ ಋತು ಆರಂಭವಾಗುವ ದಿನಗಳು. ಪ್ರಪಂಚದ ಬಗ್ಗೆ ಕುತೂಹಲದ ಜತೆಗೆ ಎಲ್ಲವೂ ತಿಳಿದಿದೆ ಎಂಬ ಹಮ್ಮೂ ಮನಸ್ಸಿನ ಮೂಲೆಯಲ್ಲಿರುತ್ತದೆ. ಯಾಕೆಂದರೆ ಶರೀರದ ನರನಾಡಿಗಳಲ್ಲಿ ಹರಿಯುವ ಬಿಸಿ ರಕ್ತ ನಮ್ಮಲ್ಲಿ ಅಜೇಯವಾದ ಶಕ್ತಿಯನ್ನು ತುಂಬಿಸಿದಂತೆ ಭಾಸವಾಗಿ ವಿಶ್ವ ದಿಗ್ವಿಜಯದ ಸೇನಾನಿಗಳಂತೆ ತಲೆ ಎತ್ತಿ ತಿರುಗಾಡುವ ವಯಸ್ಸು. ಪ್ರೌಢ ಶಿಕ್ಷಣ ಎಂಟನೇ ತರಗತಿಯಿಂದ ಆರಂಭ. ಅಲ್ಲಿ ಮೊದಲ ದಿನ ಬಂದ ಕನ್ನಡ ಅಧ್ಯಾಪಕರು ಬಂದು ಎಲ್ಲರಲ್ಲೂ ಕನ್ನಡ ಅಕ್ಷರ ಮಾಲೆಯನ್ನು ಬರೆಸುತ್ತಾರೆ. ಎಲ್ಲ ಬಲ್ಲವರಂತೆ ವರ್ತಿಸುವ ವಯೋಮಾನಕ್ಕೆ ಅದು ಕ್ಷುಲ್ಲಕ ವಿಷಯವಾಗುತ್ತದೆ. ಮಾಸ್ತರ್ ನಮ್ಮನ್ನು ತಮಾಷೆ ಮಾಡುತ್ತಿದ್ದಾರೋ? ಇದು ಒಂದು ಲೇವಡಿಯೇ? ಎಂಬ ಅನುಮಾನ. ಒಂದನೇ ತರಗತಿಯ ಮಕ್ಕಳಿಂದ ಮಾಡಿಸಬಲ್ಲ ಕೆಲಸವನ್ನು ನಮ್ಮಿಂದ ಯಾಕಾದರೂ ಮಾಡಿಸುತ್ತಾರೋ? ನಾವು ಅಕ್ಷರ ಮಾಲೆಯನ್ನು ಬರೆಯುವುದೇ ಒಂದು ಅವಮಾನ ಎಂದುಕೊಂಡು ಮಕ್ಕಳು ಬರೆಯಲು ತೊಡಗುತ್ತಾರೆ. ಆದರೆ ಮಾಸ್ತರ ಉದ್ದೇಶ ಸ್ಪಷ್ಟವಾಗುವುದು ನಮ್ಮೆಲ್ಲರ ಪುಸ್ತಕ ಕಂಡಾಗ. ಎರಡು ಮೂರು ಮಂದಿ ಬಿಟ್ಟು ಉಳಿದ ನಲ್ವತ್ತಕ್ಕೂ ಹೆಚ್ಚು ಮಕ್ಕಳು ಉಗುಳು ನುಂಗುವ ಹಂತಕ್ಕೆ ಬಂದು ಬಿಡುತ್ತಾರೆ ! ನಮ್ಮ ಎಂಟನೆಯ ಮಕ್ಕಳು, ಐವತ್ತೆರಡು ಅಕ್ಷರಗಳಲ್ಲಿ ಹತ್ತು ಅಕ್ಷರ ಬರೆದಾಗ ಗೊಂದಲಕ್ಕೆ ಒಳಗಾಗಿ ಅಕ್ಕ ಪಕ್ಕದವರ ಪುಸ್ತಕ ಇಣುಕುವುದಕ್ಕೆ ತೊಡಗುತ್ತಾರೆ. ಯಾವುದಾದ ನಂತರ ಯಾವುದು. ವ್ಯಂಜನಾಕ್ಷರದ ಜತೆ ಕಾಗುಣಿತ ಸೇರಿಸಬೇಕೆ ಬೇಡವೇ? ಒಟ್ಟು ಗೊಂದಲ. ಎಂಟನೇ ತರಗತಿಯ ಮಕ್ಕಳಿಗೆ ಕನ್ನಡ ಬರೆಯುವುದು ಬಿಡಿ ಉಚ್ಹಾರವೂ ಸರಿಯಾಗಿ ಸಿದ್ದಿಸದೇ ಇರುವುದು ಕಂಡಾಗ ಹಾರುತ್ತ ಓಡಿದ ದನದ ಎಳೇ ಕರುವನ್ನು ಎಳೆದು ಗೂಟಕ್ಕೆ ಕಟ್ಟಿ ಹಾಕಿದ ಅನುಭವವಾಗುತ್ತದೆ..

ಲೆಕ್ಕದ ಮಾಸ್ತರಿಂದಲೂ ಇದೇ ಪರೀಕ್ಷೆ ! ಒಂದರಿಂದ ನೂರವರೆಗೆ ತಪ್ಪಿಲ್ಲದೇ ಯಾರು ಬರೆಯುತ್ತಾರೆ? ಬಹಳ ಸುಲಭ. ಆದರೆ ನಿಜಕ್ಕೂ ಗಾಬರಿಯಾಗುವುದು ಯಥಾ ಪ್ರಕಾರ ಎರಡು ಮೂರು ಮಂದಿಯನ್ನು ಬಿಟ್ಟು ಉಳಿದವರೆಲ್ಲರೂ ತೆಲೆಕೆರೆದು ಕೊಳ್ಳುವಾಗ. ಎಷ್ಟು ಸರಳವಾದ ವಿಚಾರ. ನಾವು ಎಡವುದು ಇಲ್ಲೆ. ಇದಕ್ಕೆ ಶಿಕ್ಷಣದ ಬುನಾದಿ ಎಂದು ಹೇಳುವುದು. ಆಡಿಪಾಯದ ಕಲ್ಲು ವಕ್ರವಾದರೆ ಮುಂದಿನ ಶಿಕ್ಷಣದ ರೂಪವಾದರೂ ಹೇಗಿರಬಹುದು?

ನನ್ನಜ್ಜನಲ್ಲಿ ವೇದಪಾಠ ಕಲಿಯಲು ಯರಾದರೂ ತೊಡಗಿದಾಗ ಅಜ್ಜನ ಶಿಕ್ಷಣವೂ ಇದೇ ರೀತಿಯಾಗಿತ್ತು. ಕೇವಲ ಪ್ರಾರಂಭದ ಅ ಆ ಇ ಈ ಯಿಂದಲೇ ಅಭ್ಯಾಸ ತೊಡಗಿಸಿಬಿಡುತ್ತಿದ್ದರು. ಅದು ಬರವಣಿಗೆ ಕಲಿಯುವ ಕಾಲವಲ್ಲ. ಅದಕ್ಕೆ ತಕ್ಕ ಅನುಕೂಲವೂ ಇರುತ್ತಿರಲಿಲ್ಲ. ಹಾಗಾಗಿ ಅದ್ಯಾಕ್ಷರಗಳು ಕೇವಲ ಉಚ್ಚಾರಕ್ಕಾಗಿ ಪಾಠದ ವಿಷಯಗಳಾಗಿಬಿಡುತ್ತಿದ್ದವು. ಯಾಕೆಂದರೆ ಸರಿಯಾಗಿ ಅ, ಆ, ಇ, ಈ ಹೇಳಲಾಗದವನು ಮುಂದಿನ ವಿದ್ಯೆಗೆ ಅರ್ಹನೇ ಅಲ್ಲ. ಅಜ್ಜನ ಮಂತ್ರ ಉಚ್ಚಾರ ಎಂದರೆ ಹಾಗೆ. ಅಲ್ಲಿ ಬರವಣಿಗೆಗೆ ಪ್ರಾಶಸ್ತ್ಯವಿಲ್ಲ. ಉಚ್ಚಾರ, ಅದು ನಿರರ್ಗಳ ಉಚ್ಚಾರ. ಒಂದು ಪ್ರಾಣಾಕ್ಷರದ ಪ್ರಹಾರ ಸ್ವಲ್ಪ ಮೃದುವಾದರೆ ಪೂರ್ಣ ಮಂತ್ರದ ಸತ್ವವೇ ಕಳೆದು ಹೋದಂತೆ. ಹಾಗಾಗಿ ಮಂತ್ರ ಮಂತ್ರವಾಗಿ ಭಾಸವಾಗಬೇಕಾದರೆ ಒಂದೊಂದು ಅಕ್ಷರದ ಉಚ್ಚಾರಣೆಯೂ ಸ್ಫಟಿಕಕ್ಕಿಂತಲೂ ಸ್ಪಷ್ಟವಾಗಿರಬೇಕು. ಉಚ್ಚಾರದಲ್ಲಿ ಪ್ರಾಮಾಣಿಕತೆ ಇರಬೇಕು. ಇಲ್ಲವಾದಲ್ಲಿ ಮಂತ್ರ ಕೇವಲ ಅಕ್ಷರ ಜೋಡಣೆಯಾಗುತ್ತದೆ ಹೊರತು ಅದು ಮಂತ್ರೋಚ್ಚಾರವಾಗುವುದಿಲ್ಲ. ಸರಿಯಾಗಿ ಮಂತ್ರೋಚ್ಚಾರ ಪಠಿಸುವ ನಾಲಗೆಯ ಉಚ್ಚಾರ ಶುದ್ದಿ, ಪಾಚಿಗಟ್ಟಿದ ನೆಲದಲ್ಲಿ ಭದ್ರವಾಗಿ ಮೂಡಿಸುವ ಹೆಜ್ಜೆಯಂತೆ. ಜಾರಿದರೂ ಕಚ್ಚಿ ಹಿಡಿದು ನಿಲ್ಲುತ್ತದೆ.

ಸ್ಪಷ್ಟ ಹಾಗೂ ಉತ್ಕೃಷ್ಟ ಮ೦ತ್ರೋಚ್ಛಾರಕ್ಕೆ ಪ್ರಸಿಧ್ಧರಾಗಿರುವ ವೇದಮೂರ್ತಿ ದಿ|ಅಚ್ಚಣ್ಣ ಭಟ್ (ಈ ಲೇಖನದ ಲೇಖಕರ ಅಜ್ಜ)
ಯಾವುದೇ ಪ್ರಾಣಿಗೂ ಇಲ್ಲದೇ ಇರುವ ಒಂದು ವಿಶಿಷ್ಟ ಶಕ್ತಿ ಮನುಷ್ಯನಿಗಿದೆ. ಅದು ಮಾತುಗಾರಿಕೆ. ಈ ಮಾತುಗಾರಿಕೆ ಸ್ಪಷ್ಟ ಉಚ್ಚಾರಿಂದ ಅಲಂಕರಿಸಲ್ಪಟ್ಟರೆ ಅದು ಶೋಭಿಸುತ್ತದೆ. ಯಕ್ಷಗಾನದ ಬಹಳ ಮುಖ್ಯ ಒಂದು ಅಂಗ ಎಂದರೆ ಅದು ಮಾತುಗಾರಿಕೆ. ಇಲ್ಲಿ ಪಾತ್ರಗಳು ಅಭಿನಯದೊಂದಿಗೆ ಮಾತನಾಡುತ್ತವೆ. ಕುಣಿತದ ಚಮತ್ಕಾರ ಒಂದು ಬಗೆಯಾದರೆ ಮಾತಿನ ಚಮತ್ಕಾರ ಹಲವು ಸಲ ಯಕ್ಷಗಾನಕ್ಕೆ ಅತ್ಯಂತ ವಿಶಿಷ್ಟತೆಯನ್ನು ನೀಡಿದೆ. ಕುಣಿತ ಅರಿಯದ ಕಲಾವಿದರೂ ತಮ್ಮ ಸಮಯ ಪ್ರಜ್ಞೆಯಿಂದ ಮಾತುಗಾರಿಕೆಯಿಂದ ಎಲ್ಲೂ ಯಕ್ಷಗಾನಕ್ಕೆ ಊನ ಬಾರದಂತೆ ವ್ಯವಹರಿಸಿದ ನಿದರ್ಶನ ಹಲವಿದೆ. ಮಾತುಗಾರಿಕೆಗಿಂತ ಸ್ಪಷ್ಟವಾದ ಉಚ್ಹಾರ ಶುದ್ದಿ ಹಲವು ಸಲ ಮಾತಿನ ನಿಖರತೆಯನ್ನು ತೋರಿದ ನಿದರ್ಶನವೂ ಇದೆ. ಆದರೆ ಇದೇ ಮಾತುಗಾರಿಕೆಗೆ ಬಂದಾಗ ಉಚ್ಚಾರ ತೊದಲಿ ಅನರ್ಥವೇ ಸೃಷ್ಟಿಯಾದರೂ ಪರಿವೆ ಇಲ್ಲದಂತೆ ತಾನೊಬ್ಬ ದೊಡ್ಡ ಕಲಾವಿದ ಎಂದು ಕಿರೀಟ ಕುಣಿಸಿದ ನಿದರ್ಶನವೂ ಇದೆ.

ಕುಣಿತದಂತೆ ಸ್ಪಷ್ಟ ಉಚ್ಚಾರವೂ ಒಂದು ಕಲೆ. ಯಕ್ಷಗಾನಕ್ಕೆ ಸಂಬಂಧಿಸಿ ಇದು ಬಹಳ ಮಹತ್ವದ ಅಂಶ. ಆದರೆ ಇದನ್ನೇ ಬಹಳಷ್ಟು ನಿರ್ಲಕ್ಷಿಸಲಾಗುತ್ತದೆ. ನಾರದನೋ ಬ್ರಹಸ್ಮತಿಯಾಗಿ ಬಂದವನು ನಾಣು ನೀಣೂ ಎಂದು ತೊದಲಿದರೆ ಆ ಪಾತ್ರವನ್ನು ಸಹಿಸಿಬಿಡುವುದಾದರೂ ಹೇಗೆ. ಸಹಿಸಿ ಆ ಭಾಗವನ್ನೇ ಬಿಡಬೇಕಷ್ಟೇ. ಹಾಡುಗಾರಿಕೆಗೆ ಪೂರಕವಾಗಿ ಕುಣಿತ ಮತ್ತು ಅಭಿನಯ ಜತೆಯಾದರೆ ಇದನ್ನು ಆಧರಿಸಿಕೊಂಡು ಅರ್ಥಗಾರಿಕೆಯಿಂದ ಪಾತ್ರ ಸ್ಥಾಯಿಯಾಗಿ ಭದ್ರಗೊಳ್ಳಬೇಕು. ಮೊದಲಭಾಗ ಪ್ರಭಾವವನ್ನು ಬೀರಿ ಕೊನೆಯಲ್ಲಿ ಉಚ್ಹಾರ ಸಂಸ್ಕಾರಹೀನವಾದರೆ ಪಾತ್ರದ ಭಾವನೆಗೆ ಪೂರ್ಣವಿರಾಮ ದಕ್ಕುವುದಿಲ್ಲ. ಪಾತ್ರ ಹೇಳುವಂತದ್ದು ಅಪೂರ್ಣವಾಗಿದೆ ಎಂಬ ಭಾವ ಉಂಟಾಗುತ್ತದೆ.

ಈ ಉಚ್ಚಾರ ಶುದ್ದಿ ಕಲಿಕೆಯ ಆರಂಭಿಕ ಹಂತದಲ್ಲೇ ತಿದ್ದುವಂತಾಗಬೇಕು. ಕೇವಲ ಅಭಿನಯ ಮತ್ತು ನಾಟ್ಯದಿಂದ ಮಾತ್ರವೇ ಪ್ರದರ್ಶಿಸುವ ಕಲೆ ಯಕ್ಷಗಾನವಲ್ಲ. ಉಚ್ಚಾರ ಶುದ್ದಿಯಲ್ಲಿ ಹೇಳಿದ ಮಾತುಗಳು ಹೆಚ್ಚು ನಿಖರತೆಯನ್ನು ಸೂಚಿಸುತ್ತವೆ.. ಕನ್ನಡ ಪರಿಶುದ್ಧವಾಗಿ ಬಳಕೆಯಾಗುವುದು ನಮ್ಮಲ್ಲಿ ಎಂದು ಕನ್ನಡ ನುಡಿಯಬಗ್ಗೆ ನಮ್ಮಲ್ಲೆ ನಾವು ಹೆಮ್ಮೆ ಪಡುತ್ತಾ ಅಭಿಮಾನದಿಂದ ಹೇಳಿಕೊಳ್ಳುತ್ತೇವೆ. ಅದಕ್ಕೆ ಯಕ್ಷಗಾನವನ್ನು ಕಾರಣವಾಗಿಸುತ್ತೇವೆ. ಆದರೆ ಆ ಅಭಿಮಾನ ಅರ್ಹವಾದದ್ದು ಎಂದು ಪ್ರಾಮಾಣಿಕವಾಗಿ ನಂಬಬಹುದೇ?

ಸ್ಪಷ್ಟ ಉಚ್ಚಾರ ಪ್ರಾಥಮಿಕ ಹಂತದಲ್ಲೇ ತಿದ್ದಿಕೊಳ್ಳುವಂತಾಗಬೇಕು. ಆರಂಭದ ವಿದ್ಯಾರ್ಥಿ ದೆಸೆಯಲ್ಲೇ ಕುಣಿತಕ್ಕಿಂತಲೂ ಮೊದಲು ಉಚ್ಚಾರ ಶುದ್ಧಿಯನ್ನು ಕಲಿಸಬೇಕು. ಕಲಿಸುವವರಿಗೂ ಇದರ ಪರಿಪೂರ್ಣತೆ ಸಿದ್ದಿಸಿರಬೇಕು. ವಾಸ್ತವದಲ್ಲಿ ಕುಣಿತ ಬಲ್ಲವರೆ, ಯಕ್ಷಗಾನ ಬಲ್ಲವನು ಎಂದು ದೃಢೀಕರಣ ಪತ್ರ ನೀಡಿಬಿಡುವ ಪರಿಪಾಠ ನಿಲ್ಲಬೇಕು.ಕೃಪೆ : http://yakshachintana.blogspot.in


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ