ಬಡಗು ಬೆಡಗಿನ ಪುಂಡು ವೇಷಧಾರಿ ಬೆಲ್ತೂರು ರಮೇಶ
ಲೇಖಕರು : ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಶುಕ್ರವಾರ, ಮಾರ್ಚ್ 7 , 2014
|
ಬಡಗುತಿಟ್ಟಿನ ಒಂದು ಪ್ರಭೇದವಾದ ನಡುತಿಟ್ಟಿನ ಮಟಪಾಡಿ ಸಂಪ್ರದಾಯದ ಅನುಭವೀ ಪುಂಡು ವೇಷಧಾರಿಯಾಗಿ ಬೆಲ್ತೂರು ರಮೇಶನವರನ್ನು ಯಾವ ಅಂಗದಲ್ಲೂ ಗುರುತಿಸಬಹುದು. ವೇಗದ ಕುಣಿತ, ಖಚಿತವಾದ ಹೆಜ್ಜೆಗಾರಿಕೆ, ಅಪಾರ ಶ್ರುತಿಜ್ಞಾನ, ಆಕರ್ಷಕ ಕುಳ್ಳಗಿನ ಮೈಕಟ್ಟು, ಆಳವಾದ ರಂಗಾನುಭವ ಅತ್ಯಪೂರ್ವ ಪ್ರತ್ಯುತ್ಪನ್ನತ್ವ, ಸ್ಫುಟವಾದ ಶ್ರುತಿಬದ್ದ ಮಾತುಗಾರಿಕೆ, ಮನಸೆಳೆಯುವ ಹಾವಭಾವ, ಮೂರನೇಯ ವೇಷಕೊಪ್ಪುವ ಆಳ್ತನದಿಂದ ಬಡಗುತಿಟ್ಟಿನ ಅಗ್ರಮಾನ್ಯ ಕಲಾವಿದನೆಂದು ಗುರುತಿಸಲ್ಪಟ್ಟ ರಮೇಶನವರು ಅರವತ್ತು ಎಪ್ಪತ್ತರ ದಶಕದಲ್ಲಿ ಯಕ್ಷಗಾನ ವಲಯದಲ್ಲಿ ಮನೆಮಾತಾಗಿದ್ದವರು.
|
ಬಾಲ್ಯ, ಶಿಕ್ಷಣ ಹಾಗೂ ಯಕ್ಷಗಾನ ಪಾದಾರ್ಪಣೆ
“ಬೇಲ್ತೂರು” ಎಂಬ ಅನ್ವರ್ಥನಾಮದಿಂದ ಪ್ರಸಿದ್ದರಾದ ರಮೇಶನವರು ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಬೆಲ್ತೂರು ಎಂಬಲ್ಲಿ ರಾಮ ನಾಯ್ಕ ಮತ್ತು ರುಕ್ಕು ದಂಪತಿಯ ಸುಪುತ್ರನಾಗಿ ಜನಿಸಿದರು. ಎಳವೆಯಲ್ಲಿಯೇ ಕಡು ಬಡತನದ ನೋವನ್ನುಂಡು ಬೆಳೆದವರು. ಅತೀವವಾದ ಬಡತನದಲ್ಲೇ ಬಾಲ್ಯದಿಂದಲೇ ಯಕ್ಷಗಾನದ ಗೀಳನ್ನು ಹೊಂದಿದವರು. ಬಡಗುತಿಟ್ಟಿನ ಪ್ರಸಿದ್ದ ಬಣ್ಣದ ವೇಷಧಾರಿ ಬೆಲ್ತೂರು ರಾಮ ಬಳೆಗಾರರು ಇದೇ ಪ್ರಾಂತ್ಯದವರಾಗಿದ್ದು ಅವರ ರಾಕ್ಷಸ ವೇಷಗಳ ಘರ್ಜನೆ ಇವರೊಳಗಿನ ಯಕ್ಷಗಾನಾಸಕ್ತಿಯನ್ನು ಚಿಗುರಿಸಿತು. ಕೇವಲ ಐದನೇ ತರಗತಿ ವಿಧ್ಯಾಭ್ಯಾಸಕ್ಕೆ ಸೀಮಿತಗೊಳಿಸಿ ರಾಮ ಬಳೆಗಾರರ ಮಳೆಗಾಳದ ಹೂವಿನ ಕೋಲಿನ ಕಲಾವಿದರಾಗಿ ಸೇರಿಕೊಂಡರು.
ಬಳಿಕ ಯಕ್ಷಗಾನವನ್ನು ಶಾಸ್ತ್ರೀಯವಾಗಿ ಕಲಿಯುವ ಹಂಬಲ ಜಾಸ್ತಿಯಾಗಿ ಗುರು ವೀರಭದ್ರ ನಾಯಕ್ ಮತ್ತು ಹೆರಂಜಾಲು ವೆಂಕಟರಮಣ ಗಾಣಿಗರ ಶಿಷ್ಯನಾಗಿ ಸೇರಿಕೊಂಡು, ಈ ಈರ್ವರು ಮಹಾನ್ ಗುರಗಳ ಮಾರ್ಗದರ್ಶನದಿಂದ ಪರಿಪೂರ್ಣ ಕಲಾವಿದರಾಗಿ ಮೂಡಿಬಂದರು. ಹಾಗಾಗಿ ಈಗಲೂ ಸಹ ಬೆಲ್ತೂರರನ್ನು ವೀರಭದ್ರ ನಾಯಕರ ಅಧೀಕೃತ ಶಿಷ್ಯನೆಂದು ಜನ ಗುರುತಿಸುತ್ತಾರೆ. ವೆಂಕಟರಮಣ ಗಾಣಿಗರು ಹೆಜ್ಜೆ ಗುರುಗಳಾಗಿ ನಾಯಕರು ಮಾತುಗಾರಿಕೆಯನ್ನು ಕಲಿಸಿ ಬೆಲ್ತೂರರನ್ನು ಸಮರ್ಥ ಕಲಾವಿದರಾಗಿ ರೂಪಿಸಿದರು. ಹೆರಂಜಾಲು ವೆಂಕಟರಮಣ, ವೀರಭದ್ರ ನಾಯಕರಿಂದ ಕಲಿತ ಪರಿಪೂರ್ಣ ಹೆಜ್ಜೆಗಾರಿಕೆಯಿಂದ ಇವರನ್ನು ಮಟ್ಟಾಡಿ ತಿಟ್ಟಿನ ಪ್ರಾತಿನಿಧಿಕ ಕಲಾವಿದನೆಂದು ಗುರುತಿಸಲಾಗಿದೆ.
ತಮ್ಮ ಹದಿನೈದನೇ ವಯಸ್ಸಿನಲ್ಲಿ ಮಾರಣಕಟ್ಟೆ ಮೇಳದಲ್ಲಿ ಗೆಜ್ಜೆ ಕಟ್ಟಿದ ಬೆಲ್ತೂರರು ಸತತ ಐದು ವರ್ಷ ಅಲ್ಲಿ ತಿರುಗಾಟ ಮಾಡಿ, ಬಳಿಕ ಸಾಲಿಗ್ರಾಮ ಮೇಳ ಸೇರಿದರು. ಅಲ್ಲಿ ಪ್ರಸಿದ್ದ ಭಾಗವತರಾಗಿದ್ದ ನಾರ್ಣಪ್ಪ ಉಪ್ಪೂರರು, ನೆಬ್ಬೂರು ನಾರಾಯಣ ಬಾಗವತರು, ಮರವಂತೆ ನರಸಿಂಹ ದಾಸರು, ಮರವಂತೆ ಶೀನದಾಸರು ಮರಿಯಪ್ಪಾಚಾರರು, ಕೊನೆಯ ಒಂದು ವರ್ಷ ಕಾಳಿಂಗ ನಾವಡರು, ಕಲಾವಿದರಾದ ಕೆರೆಮನೆ ಮಹಾಬಲ ಹೆಗಡೆ, ಶಂಭು ಹೆಗಡೆ, ಗಜಾನನ ಹೆಗಡೆ, ಶಿರಿಯಾರ ಮಂಜು ನಾಯ್ಕರು, ಜಲವಳ್ಳಿಯವರು, ನಗರ ಜಗನ್ನಾಥ ಶೆಟ್ಟಿ, ಅರಾಟೆ ಮಂಜುನಾಥ, ಕುಂಜಾಲು ರಾಮಕೃಷ್ಣ, ಹರಾಡಿ ಮಹಾಬಲ ಗಾಣಿಗ, ಗುರು ವೀರಭದ್ರ ನಾಯಕ್, ಹೆರಂಜಾಲು ವೆಂಕಟರಮಣ ಹಳ್ಳಾಡಿ ಮಂಜಯ್ಯ ಶೆಟ್ಟಿ, ಪುಂಡರೀಕಾಕ್ಷ ಉಪಾದ್ಯಾಯ, ಬಳ್ಕೂರು ಕೃಷ್ಣ ಯಾಜಿ, ಹೊನ್ನಪ್ಪ ಗೋಕರ್ಣ, ಐರೋಡಿ ಗೋವಿಂದಪ್ಪ ಮುಂತಾದ ಕಲಾವಿದರೊಂದಿಗೆ ಪ್ರಸಿದ್ದ ಪುಂಡು ವೇಷಧಾರಿಯಾಗಿ ಸುಮಾರು ಹತ್ತು ವರ್ಷ ಕಲಾಸೇವೆ ಮಾಡಿದರು.
ಆಗ ಸಾಲಿಗ್ರಾಮ ಮೇಳದಲ್ಲಿ ಜಯಬೇರಿ ಬಾರಿಸಿದ “ ಸಮಗ್ರಭೀಷ್ಮ” ಪ್ರಸಂಗದಲ್ಲಿನ ಪರ್ವದ ಕೃಷ್ಣ, ಹಾಗೂ ಶಿರಿಯಾರ ಮಂಜುನಾಯಕರ ಅನುಪಸ್ಥಿತಿಯಲ್ಲಿನ ದೇವವ್ರತ, ಮಹಾಸತಿಮಂಗಳಾ, ಸತೀಸುಶೀಲೆ, ರಾಜನರ್ತಕಿ, ಚಂದ್ರಹಾಸ ಮುಂತಾದಪ್ರಸಂಗಗಳ ವೇಷಗಳು ಅಪಾರ ಜನಮನ್ನಣೆ ಗಳಿಸಿದ್ದವು. ಬಳ್ಕೂರು ಕೃಷ್ಣಯಾಜಿ ಮತ್ತು ಇವರ ಜೋಡಿ ವೇಷಗಳು ಸಹ ಪ್ರಸಿದ್ದವಾಗಿದ್ದವು. ಅದೇ ಸಮಯದಲ್ಲಿ ಡಾ.ಕಾರಂತರ ಪ್ರೋತ್ಸಾಹ ಸೋಮನಾಥ ಹೆಗ್ಡೆಯವರ ಸಹಕಾರದೊಂದಿಗೆ 1979ರಲ್ಲಿ ಪ್ರಥಮ ವಿದೇಶಿ ಯಾತ್ರೆ ಕೈಗೊಳ್ಳಲು ಸಾದ್ಯವಾಯಿತೆಂದು ಅವರೀರ್ವರನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ.
|
ಬೆಲ್ತೂರು ರಮೇಶ |
 |
ಜನನ |
: |
1949 |
ಜನನ ಸ್ಥಳ |
: |
ಬೆಲ್ತೂರು, ಕುಂದಾಪುರ ತಾಲೂಕು
ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ
|
ಕಲಾಸೇವೆ:
48 ವರ್ಷಗಳ ಕಾಲ ಅಮೃತೇಶ್ವರಿ, ಕಳವಾಡಿ, ಸೌಕೂರು, ಹಾಲಾಡಿ ಮಡಾಮಕ್ಕಿ, ಬಗ್ವಾಡ್ಲಿ, ಆಜ್ರಿ ಶನೀಶ್ವರ ಮೇಳಗಳಲ್ಲಿ ಪ್ರಧಾನ ಕಲಾವಿದರಾಗಿ ದುಡಿಮೆ.
|
ಪ್ರಶಸ್ತಿಗಳು:
ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ವೀರಭದ್ರ ನಾಯಕರ ಜನ್ಮಶತಮಾನೋತ್ಸವ ಪ್ರಶಸ್ತಿ
ಸಾಲಿಗ್ರಾಮ ಮೇಳದಿಂದ ನೀಡುವ ಪಳ್ಳಿ ಸೋಮನಾಥ ಹೆಗ್ಡೆ ಪ್ರಶಸ್ತಿ
|
|
|
ಅಗ್ರಗಣ್ಯರ ಒಡನಾಟ
ಆ ಬಳಿಕ ಮಂದಾರ್ತಿ ಮೇಳ ಸೇರಿದ ಇವರು ಅಲ್ಲಿ ಮತ್ಯಾಡಿ ನರಸಿಂಹ ಶೆಟ್ಟಿ, ಹರಾಡಿ ಅಣ್ಣಪ್ಪ ಗಾಣಿಗರ ಹಿಮ್ಮೇಳದಲ್ಲಿ ಕೋಡಿ ಶಂಕರ ಗಾಣಿಗ, ಮೊಳಹಳ್ಳಿ ಹೆರಿಯ, ಹೆರಂಜಾಲು ಸುಬ್ಬಣ್ಣ ಗಾಣಿಗ, ಮಜ್ಜಿಗೆಬೈಲು ಆನಂದ ಶೆಟ್ಟಿ, ಚಂದ್ರ ಆಚಾರ್, ಕೃಷ್ಣಮೂರ್ತಿ ಆಚಾರ್ ಮುಂತಾದವರ ಒಡನಾಡಿಯಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ. ಜೋಡಾಟದ ಪುಂಡು ವೇಷದ ಹುಲಿಯೆಂದೇ ಗುರುತಿಸಲ್ಪಟ್ಟ ಇವರ ಜೋಡಾಟದ ಅಭಿಮನ್ಯು, ಬಬ್ರುವಾಹನ, ಲವಕುಶ, ಮೈಂದದ್ವಿವಿಜ, ಕೌಂಡ್ಲೀಕ, ವೃಷಸೇನ, ಮೀನಾಕ್ಷಿ ಮಂತ್ರಿ ಮುಂತಾದ ಪಾತ್ರಗಳು ಎದುರಾಳಿಯ ಮೈಯಲ್ಲಿ ಬೆವರುರಿಸುತಿತ್ತು. ದೇವಿ ಮಹಾತ್ಮೆಯ ವಿದ್ಯುನ್ಮಾಲಿ, ಚಂಡಮುಂಡ, ರುಕ್ಮಾವತಿ ಕಲ್ಯಾಣದ ಮತ್ತು ರತಿ ಕಲ್ಯಾಣದ ಕೃಷ್ಣ, ಅವರಿಗೆ ಪ್ರಸಿದ್ದಿಯನ್ನು ತಂದಿತ್ತ ಪಾತ್ರಗಳಾಗಿತ್ತು. ಹತ್ತು ವರ್ಷಗಳ ಹಿಂದೆ ಉಡುಪಿಯ ಯಕ್ಷಗಾನ ಕಲಾರಂಗ ಸಂಯ್ಯೋಜಿತ ಸುಧಾರಿತ ದೇವಿಮಹಾತ್ಮೆಯಲ್ಲಿ ಯುವ ಕಲಾವಿದ ಕೊಳಾಲಿ ಕೃಷ್ಣನೊಂದಿಗೆ ಅವರು ಅಭಿನಯಿಸಿದ ಮುಂಡಾಸುರನ ಪಾತ್ರ ಅಪಾರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಕೃಷ್ಣ, ಪ್ರಾಹ್ಲಾದ, ಪರಶುರಾಮ ಮುಂತಾದ ಪಾತ್ರಗಳಿಂದ ಯಕ್ಷಕಲಾ ಕ್ಷೇತ್ರದಲ್ಲಿ ಚಿರಸ್ಠಾಯಿಯಾಗಬಲ್ಲ ಸ್ಥಾನಕ್ಕೇರಿದ ರಮೇಶರ ಬಬ್ರುವಾಹನ ಮತ್ತು ಅಭಿಮನ್ಯು ಪಾತ್ರಗಳು ಬಡಗುತಿಟ್ಟಿನ ಹಳೆಯ ಸಂಪ್ರದಾಯದಲ್ಲಿ ದಾಖಲಾದ ಪಾತ್ರಗಳು.
ಅಮೃತೇಶ್ವರಿ, ಕಳವಾಡಿ, ಸೌಕೂರು, ಹಾಲಾಡಿ ಮಡಾಮಕ್ಕಿ, ಬಗ್ವಾಡ್ಲಿ, ಆಜ್ರಿ ಶನೀಶ್ವರ ಮೇಳಗಳಲ್ಲಿ ತಿರುಗಾಟ ಮಾಡಿರುವ ಇವರಿಗೆ ಈಗ ನಿವೃತ್ತಿಯ ವಯಸ್ತು, ಆದರೂ ತಿರುಗಾಟ ಮಾಡುವ ಅನಿವಾರ್ಯತೆ. ಅನಾರೋಗ್ಯ ಪೀಡಿತರಾಗಿರುವ ಹೆಂಡತಿ, ಮೂವರು ಹೆಣ್ಣು ಮಕ್ಕಳಿರುವ ಅವರ ಸಂಸಾರ ನೌಕೆ ಸಾಗಲು ಈ ವಯಸ್ಸಿನಲ್ಲೂ ಮೇಳದ ತಿರುಗಾಟ ಅನಿವಾರ್ಯ.
ವಿದೇಶ ಪ್ರವಾಸ
ವಿದೇಶಿ ನೆಲದಲ್ಲೂ ರಮೇಶರು ತನ್ನ ಪ್ರತಿಭೆ ಮೆರೆದಿದ್ದಾರೆ. ದಿ. ಬಿ. ವಿ. ಆಚಾರ್ಯರ ಮತ್ತು ಸುಬ್ಬಣ್ನ ಭಟ್ಟರ ನೇತ್ರತ್ವದಲ್ಲಿ ಡಾ/ ಮಾರ್ತ ಆಸ್ಟನ್ ಜೊತೆಗೆ 1979ರಲ್ಲಿ ಅಮೇರಿಕದಲ್ಲಿ ಆ ಕಾಲದಲ್ಲಿ ಈ ಕಲೆಗೆ ಮನ್ನಣೆ ಸಿಗುವ ಹಾಗೆ ಮಾಡಿದ್ದರು. ಕೆ.ಎಸ್. ಉಪಾದ್ಯಾಯರ ಜೊತೆಗೆ ಹಾಂಗ್ ಕಾಂಗ್, ಜೆರ್ಮನಿ, ಕೆನಡ, ಮತ್ತು ಡಾ.ಲೀಲಾ ಉಪಾದ್ಯಾಯರ ಜೊತೆಗೆ ಫ್ರಾನ್ಸ್, ಜರ್ಮನಿ, ಇಸ್ರೇಲ್, ಹೀಗೆ ಬಡಗುತಿಟ್ಟಿನ ಕಲಾವಿದರಲ್ಲಿ ಇಷ್ಟೊಂದು ಬಾರಿ ವಿದೇಶಿ ಯಾತ್ರೆ ಮಾಡಿ ದಾಖಲೆ ನಿರ್ಮಿಸಿದ್ದಾರೆ. ತನ್ನ ಯಕ್ಷಗಾನ ತಿರುಗಾಟಕ್ಕೆ. ಹಿರಿಯ ಕಲಾವಿದರಾದ ವೀರಭದ್ರ ನಾಯಕ್, ವೆಂಕಟರಮಣ ಗಾಣಿಗ, ಬಣ್ಣದ ರಾಮ ಬಳೆಗಾರ್, ಗುಂಡ್ಮಿ ಬಸವ ನಾಯಕ್, ಶಿರಿಯಾರ ಮಂಜು ನಾಯಕ್, ಕೋಟ ವೈಕುಂಟರವರನ್ನು ಹಾಗು ಸಾಲಿಗ್ರಾಮ ಮೇಳದಲ್ಲಿ ತನ್ನ ಉಚ್ಛ್ರಾಯ ಸ್ತಿತಿಯಲ್ಲಿ ಮೇಳದ ಯಜಮಾನರಾದ ದಿ. ಪಳ್ಳಿ ಸೋಮನಾಥ ಹೆಗ್ಡೆಯವರನ್ನು ಕ್ರತಜ್ಜತೆಯಿಂದ ನೆನೆಯುವ ಇವರು ಸರಳ ಸಜ್ಜನ ವ್ಯಕ್ತಿ.
ಪ್ರಶಸ್ತಿಗಳು
ಯಕ್ಷಗಾನವೇ ವೃತ್ತಿ ಪ್ರವೃತ್ತಿಯಾಗಿರುವ, ಹೇಳಿಕೊಳ್ಳುವಂತಹ ಸ್ಥಿತಿವಂತರಲ್ಲದ ಇವರನ್ನು ಅನೇಕ ಸಂಘ ಸ೦ಸ್ಥೆಗಳು ಗುರುತಿಸಿ ಸನ್ಮಾನಿಸಿವೆ. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ವೀರಭದ್ರ ನಾಯಕರ ಜನ್ಮಶತಮಾನೋತ್ಸವ, ಸಾಲಿಗ್ರಾಮ ಮೇಳದಿಂದ ನೀಡುವ ಪಳ್ಳಿ ಸೋಮನಾಥ ಹೆಗ್ಡೆ ಪ್ರಶಸ್ತಿ ಸನ್ಮಾನ ಸಹಿತ ಹಲವಾರು ಸನ್ಮಾನಗಳು ಇವರಿಗೆ ಸಂದಿವೆ. ದೇಶ ವಿದೇಶದ ಅಪಾರ ಪ್ರೇಕ್ಷಕರ ಮನಗೆದ್ದು ನಿರಂತರ 48 ವರ್ಷ ಬಡಗುತಿಟ್ಟು ರಂಗಸ್ಥಳವನ್ನು ಶ್ರೀಮಂತ ಗೊಳಿಸಿದ 63 ವರ್ಷದ ಈ ಹಿರಿಯ ಕಲಾವಿದನಿಗೆ 2012ನೇ ವರ್ಷದ ಬೆ೦ಗಳೂರಿನ ಯಕ್ಷ ದೇಗುಲ ಪ್ರಶಸ್ತಿಯು ದೊರೆತಿರುತ್ತದೆ.
****************
|
|
|