ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಮಾತು ಮೌನವಾಯಿತು

ಲೇಖಕರು :
ರಾಜ್ ಕುಮಾರ್
ಶನಿವಾರ, ಮಾರ್ಚ್ 22 , 2014
ಅದು ನಾವೆಲ್ಲ ಬುದ್ದಿ ಮಲೆತು ಆಟನೋಡುವ ಹುಚ್ಚು ಹಿಡಿಸಿಕೊಂಡ ಬಾಲ್ಯದ ಸಮಯ. ಅಕ್ಕಪಕ್ಕದ ಬಯಲುಗಳಲ್ಲಿ ನಡೆಯುವ ಕಟೀಲು ಮೇಳದ ಆಟಗಳು ಇರುಳಲ್ಲೂ ಹಗಲಲ್ಲೂ ಕಾಡುತ್ತಿದ್ದವು. ಶುಲ್ಕವಿಲ್ಲದೇ ಸಿಗುತ್ತಿದ್ದ ಧಾರಾಳ ಮನರಂಜನೆಯಲ್ಲಿ ಕಟೀಲು ಮೇಳದ ಆಟಗಳೆಂದರೆ ಬಾಲ್ಯದ ಬಲು ಮುಖ್ಯ ಹಂತ ಎಂದು ಈಗ ಅನಿಸುತ್ತದೆ. ಕೈಯಲ್ಲಿ ನಾಲ್ಕಾಣೆಯ ಪಾವಲಿಯಲ್ಲೇ ಬೆಳಗು ಮಾಡುತ್ತಿದ್ದ ಕಟೀಲು ಮೇಳದ ಆಟಗಳೆಷ್ಟು ಅಪ್ಯಾಯಮಾನವಾಗಿತ್ತೋ ಅದರಲ್ಲಿ ನಿಯಮಿತವಾಗಿ ಕಾಣುವ ವೇಷಗಳು ಆ ಕಲಾವಿದರ ಮುಖವೂ ಅಪ್ಯಾಯಮಾನವಾಗಿತ್ತು. ಅಂತಹ ಮುಖಗಳಲ್ಲಿ ಕಂಡು ಬಂದ ಸುಂದರ ಮುಖವೇ ಶ್ರೀ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿಯವರದ್ದು.

ಕಟೀಲು ಮೇಳದ ಶ್ರೀ ದೇವಿ ಮಹಾತ್ಮೆ ಪ್ರತಿಸಾರಿ ಕಾಣುವ ಪ್ರಸಂಗ. ಯಥಾಪ್ರಕಾರ ಅದರಲ್ಲಿ ಬರುವ ಪಾತ್ರಗಳು ಶ್ರೀ ದೇವಿ, ತ್ರಿಮೂರ್ತಿಗಳು, ದೇವೆಂದ್ರ, ಮಹಿಷ ಹೀಗೆ ಹತ್ತು ಹಲವು ಆಕರ್ಷಣೆಗಳು. ದೇವಿ ಮಹಾತ್ಮೆ ಪ್ರಸಂಗದ ಆರಂಭದಲ್ಲಿ ತ್ರಿಮೂರ್ತಿಗಳಲ್ಲಿ ಬ್ರಹ್ಮನಾಗಿ ಕೆಲವು ಸಲ ವಿಷ್ಣುವಾಗಿ ಬರುತ್ತಿದ್ದರು ಸಿದ್ದಕಟ್ಟೆಯವರು. ಅಂದು ಹರಿಬ್ರಹ್ಮರ ವಾದ ವೈಖರಿ ಮನರಂಜನೆ ನೀಡುತ್ತಿದ್ದರೆ, ಪ್ರಸಂಗದ ಕೊನೆಯ ಭಾಗದಲ್ಲಿ ಚಂಡ ಮುಂಡರಲ್ಲೊಬ್ಬರಾಗಿಯೂ ಶೆಟ್ಟರು ರಂಗವೇರುತ್ತಿದ್ದ ನೆನಪು ಈಗಲೂ. ಸೌಮ್ಯ ಪಾತ್ರಗಳಂತೆ ಆರ್ಭಟಿಸಿ ಧೂಳೆಬ್ಬಿಸಿ ಕುಣಿವ ರಕ್ಕಸ ಪಾತ್ರದಲ್ಲೂ ಸಿದ್ದಕಟ್ಟೆಯವರು ಚಪ್ಪಾಳೆ ಗಿಟ್ಟಿಸುತ್ತಿದ್ದುದ್ದನ್ನು ಕಣ್ಣಾರೆ ಕಂಡಿದ್ದೇನೆ. ಇದೆಲ್ಲವೂ ಈಗ ನೆನಪಿನಂಗಳದ ಕುಂಟುಬಿಲ್ಲೆಯಂತೆ ನೆನಪಾಗಿಯೇ ಉಳಿದುಬಿಟ್ಟಿತು. ಕಾಲನ ಆಮಂತ್ರಣಕ್ಕೆ ಮನ್ನಿಸದೇ ಉಳಿಯಲಾರದಿರುವ ಈ ಲೌಕಿಕ ಜೀವನಕ್ಕೆ ಹೀಗೆ ಅನಿರೀಕ್ಷಿತವಾಗಿ ಸಾಕ್ಷ್ಯವಾಗುತ್ತಾರೆ ಎಂದು ಯಾರು ತಾನೆ ಬಗೆದಿದ್ದರು? ರಂಗದ ಮೇಲೆ ಸಕ್ರಿಯವಾಗಿದ್ದ ಕಲಾವಿದ ಹೀಗೆ ಎಲ್ಲವನ್ನು ಬಿಟ್ಟು ಮೌನದಂಚಿಗೆ ಜಾರುತ್ತಾರೆಂದರೆ ಊಹಿಸಲಿಕ್ಕೂ ಆಗದ ಕಹಿ ಸತ್ಯ.

ಶ್ರೀ ರಾಮ , ವಿಷ್ಣು, ಈಶ್ವರ , ಪರಶುರಾಮ, ದ್ರೋಣ ಹೀಗೆ ವಿಭಿನ್ನ ಬಗೆಯ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಇವರು ಸೌಮ್ಯರೀತಿಯಿಂದ ಪಾತ್ರದ ಮೂಲಕ ತೀಕ್ಷ್ಣವಾಗಿ ಇರಿಯುತ್ತಿದ್ದರು. ಮೇಲ್ನೋಟಕ್ಕೆ ಸೌಮ್ಯವಾಗಿ ಕಂಡು ಬರುತ್ತಿದ್ದ ನಿರ್ವಣೆ ಬಹಳ ಆಳವಾಗಿ ತೀಕ್ಷ್ಣವಾಗಿ ಪ್ರೇಕ್ಷಕನನ್ನು ತಲುಪುತ್ತಿದ್ದವು. ಅದು ಕುಣಿತದಿಂದಲೂ, ಅಭಿನಯದಿಂದಲೂ ಆಗಿರಬಹುದು, ಅಥವಾ ಅರ್ಥಗಾರಿಕೆಯಿಂದಲೂ ಆಗಿರಬಹುದು. ಈ ವೈಶಿಷ್ಟ್ಯವೇ ಅವರಿಗೆ ಅಭಿಮಾನೀ ಬಳಗವನ್ನು ಸೃಷ್ಟಿಸಿತ್ತು. ರಾಜ್ಯ ಹೊರರಾಜ್ಯಗಳಲ್ಲೂ ಈ ಬಳಗ ವ್ಯಾಪಿಸಿ ಈಗ ಆ ಬಳಗ ಮೌನವಾಗಿ ರೋಧಿಸುವಂತಾದುದು ದುರಂತ ಎನ್ನಲೇಬೇಕು.

ಇದೀಗ ಯಕ್ಷಲೋಕ ತೀವ್ರವಾದ ಅಘಾತಕ್ಕೆ ಒಳಗಾಗಿಬಿಟ್ಟಿದೆ. ಯಕ್ಷಗಾನಕ್ಕೆ ತುಂಬಲಾರದ ನಷ್ಬ ಎಂದು ರೂಢಿಯಲ್ಲಿ ಹೇಳುವುದಾದರೂ ಯಕ್ಷಗಾನಕ್ಕೆ ಆದ ನಷ್ಟ ಎಂದೂ ತುಂಬಲಾಗಿಲ್ಲ. ಆದರೂ ಅನಿರೀಕ್ಷಿತವಾಗಿ ಆಗುವ ಇಂತಹ ಘಟನೆಗಳು ಕೇವಲ ನಷ್ಟವೆಂದು ಹೇಳುವಹಾಗಿಲ್ಲ. ಬಂಗಾರ ವರ್ಣದ ತೆನೆ ಸುಂಟರಗಾಳಿಯ ಆಘಾತಕ್ಕೆ ಸಿಕ್ಕಿದಂತೆ ಇದು ಅಳಿಸಲಾಗದ ದುರಂತ ಎನ್ನಬೇಕು. ’ಮಾತಿನಮಲ್ಲ’ ಎಂದು ಅಭಿಮಾನಿಗಳಿಂದ ಕರೆಸಿಕೊಂಡವರು. ಆದರೆ ಮಾತಿನ ಮಲ್ಲ ಮಾತಿಲ್ಲದೇ ಇಲ್ಲಿ ಲೀನವಾದ. ಮಾತು ಮುಗಿಸಿ ಮೌನಿಯಾದ ಕಲಾವಿದನ ನನಪುಗಳು ಇನ್ನೂ ಮಾತುಗಳನ್ನಾಡುತ್ತ ಕಲರವವನ್ನು ಸೃಷ್ಟಿಸುತ್ತಾ ಇದೆ. ಮಾತಿನಿಂದ ಕಟ್ಟಿಕೊಟ್ಟ ಈ ನೆನಪಿನ ಬುತ್ತಿ ಬಹುಕಾಲ ಅಕ್ಷಯವಾಗಿ ಉಳಿಯಲಿ ಎಂಬ ಆಶಯಗಳೊಂದಿಗೆ ಮಾತು ನಿಲ್ಲಿಸಿದ ಕಲಾಕಾರನಿಗೆ ಇದು ಮೌನದ ಶ್ರದ್ದಾಂಜಲಿಯಾಗಲಿ.ಕೃಪೆ : www.yakshachintana.blogspot.in


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ