ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ವ್ಯಕ್ತಿ ವಿಶೇಷ
Share
ಯಶಸ್ವಿ ಪ್ರಸಂಗಕರ್ತ, ಕಲಾತಪಸ್ವಿ ಡಾ. ವೈ. ಚಂದ್ರಶೇಖರ ಶೆಟ್ಟಿ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಬುಧವಾರ, ಮಾರ್ಚ್ 26 , 2014

ವೃತ್ತಿಗಾಗಿ ಕೈಯಲ್ಲಿ ಸ್ಟೆತೋಸ್ಕೋಪ್ ಹಿಡಿದು ಆದರ್ಶ ವೈದ್ಯನಾಗಿ ಪ್ರವೃತ್ತಿಗಾಗಿ ರಂಗಕಲೆಗಳನ್ನು ತನ್ನ ಬದುಕಿನಲ್ಲಿ ಅಳವಡಿಸಿಕೊಂಡ ಕುಂದಾಪುರದ ಸಾಂಸ್ಕೃತಿಕ ರೂವಾರಿ, ಡಾ. ವೈ. ಚಂದ್ರಶೇಖರ ಶೆಟ್ಟಿಯವರು . ಬದುಕಿನುದ್ದಕ್ಕೂ ವೃತ್ತಿಗೆ ಪ್ರಾಮಾಣಿಕವಾಗಿ ತೊಡಗಿಸಿಕೊಂಡು ರಂಗಕಲೆಗಳಿಗಾಗಿ ವೃತ್ತಿಯಲ್ಲಿನ ಭಡ್ತಿಗಳನ್ನೂ ಬಯಸದೆ ಸರಕಾರಿ ವೈದ್ಯನಾಗಿ ನಾಟಕದ ನಟನಾಗಿ, ಪ್ರಸಂಗಕರ್ತನಾಗಿ, ಯಕ್ಷಗಾನದ ಸ್ತ್ರೀವೇಷಧಾರಿಯಾಗಿ ಸಂಗೀತ, ನೃತ್ಯ ನಿರ್ದೇಶಕನಾಗಿ ಬಹುಮುಖ ಪ್ರತಿಭೆಯೊಂದಿಗೆ ತನ್ನನ್ನು ತೊಡಗಿಸಿಕೊಂಡ ಇವರು ಕುಂದಾಪುರದ ಸಾಂಸ್ಕೃತಿಕ ಲೋಕಕ್ಕೆ ಭದ್ರ ಬುನಾದಿಯನ್ನು ಹಾಕಿದವರು. ವಿದ್ಯಾವಂತರು ಸಮಾಜದ ಮೇಲು ವರ್ಗದವರು ಯಕ್ಷಗಾನವನ್ನು ನೋಡಲು ಸಹ ಹಿಂಜರಿಯುತಿದ್ದ ಕಾಲದಲ್ಲಿ ಅಂದಿನ ವಕೀಲರಾದ ಎಂ. ಎಂ. ಹೆಗ್ಡೆಯವರ ಪ್ರೇರಣೆಯೊಂದಿಗೆ ಕುಲೀನ ಮನೆತನದ ಹುಡುಗನೊಬ್ಬ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದ್ದೇ ಒಂದು ಸಾದನೆ, ಸಾಹಸ.

ಎಂಟರ ಹರೆಯದಿಂದ ಎಪ್ಪತ್ತರ ಹರೆಯದ ವರೆಗೆ ಬದುಕಿನುದ್ದಕ್ಕೂ ರಾತ್ರಿ ಪರಿವ್ರಾಜಕ ವೃತ್ತಿ. ಶ್ರೀಮಂತ ಮನೆತನದಲ್ಲಿ ಹುಟ್ಟಿ ಹಣ ಕೊಳ್ಳೆಹೊಡೆಯಬಹುದಾದ ವೃತ್ತಿ ಬಿಟ್ಟು, ಜನಸಾಮಾನ್ಯರ ಪ್ರೀತಿಯ ಕಲೆಯಾದ ಯಕ್ಷಗಾನಕ್ಕೆ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಕೊನೆಯ ತನಕವೂ ಪ್ರಾಥಮಿಕ ಆರೋಗ್ಯ ಘಟಕದ ವೈದ್ಯಾದಿಕಾರಿಯಾಗಿಯೇ ನಿವೃತ್ತಿಯಾದರು. ತನ್ನಲ್ಲಿಗೆ ಬರುವ ಅಸಂಖ್ಯ ರೋಗಿಗಳನ್ನು ಹೃದಯದಿಂದ ಗುರುತಿಸಿ ಅವರ ನಾಡಿಬಡಿತದಲ್ಲಿ ಕಲಾಬಡಿತವನ್ನು ಗುರುತಿಸಿದರು. ನೂರಾರು ನವ ತರುಣರನ್ನು ನಾಟಕ, ಯಕ್ಷಗಾನ ರಂಗಕ್ಕೆ ಧುಮುಕುವಂತೆ ಮಾಡಿದರು. ಇವರ ಆಸ್ಪತ್ರೆಯೆಂದರೆ ರೋಗಿಗಳ ಹಿಂಡು, ಕಲಾವಿದರ ದಂಡು ಕಲಾರಸಿಕರ ಮಿತ್ರರ ಹಿಂಡು ಮಾತ್ರವಲ್ಲದೆ ಮೇಳಗಳ ಯಜಮಾನರಿಗೂ ಆದರಣೀಯರಾದರು. ಕಲಾಸಕ್ತ ಮಿತ್ರರಿಗೆ ಗೆಳೆಯರಾದರು.

ಬಾಲ್ಯ , ಶಿಕ್ಷಣ, ರಂಗಭೂಮಿಯಲ್ಲಿ ಪಾದಾರ್ಪಣೆ

ಕುಂದಾಪುರ ತಾಲೂಕಿನ ಬಂಟ ಮನೆತನದಲ್ಲಿ ಮೇರು ಪಂಕ್ತಿಯಲ್ಲಿರುವ ಯಡ್ತರೆ ಕುಟುಂಬಕ್ಕೆ ವಿಶೇಷವಾದ ಗೌರವ ಆ ಕಾಲದಲ್ಲಿತ್ತು. ಇಂತಹ ಮೇರು ಕುಟುಂಬದ ಹಿರಿಯ ವಕೀಲರಾದ ತೇಜಪ್ಪ ಶೆಟ್ಟಿ, ಗಿರಿಜಮ್ಮ ದಂಪತಿಗಳ ಸುಪುತ್ರನಾಗಿ 1941ರಲ್ಲಿ ಜನಿಸಿದ ಇವರು ಕುಂದಾಪುರ ಭಾಷೆಯಂತೆ ‘ಕುಮ್ಚೆಟ್ಟು’ ಹಾರಿದ್ದು ಯಕ್ಷಗಾನವನ್ನು ಉಂಡುಟ್ಟು ಬೆಳೆದ ಯಕ್ಷಗಾನದ ತವರೂರಾದ ಕುಂದಾಪುರದಲ್ಲಿ. ಕುಂದಾಪುರ ಮತ್ತುಕೋಟದ ಪ್ರಸಿದ್ದ ಕುಟುಂಬಗಳೆ ಅಂದಿನ ಮೇಳಗಳಿಗೆ ತಂಗುದಾಣ. ಎಲ್ಲಿಯೂ ವೀಳ್ಯ ಇಲ್ಲದಿದ್ದರೆ ಯಡ್ತರೆ ಮನೆಯ ಹೆಬ್ಬಾಗಿಲು ಸದಾ ಮುಕ್ತವಾಗಿತ್ತು. ಹಾಗಾಗಿ ಯಕ್ಷಗಾನ ಇವರ ರಕ್ತದಲ್ಲೆ ಹರಿದಿತ್ತು.


ಪ್ರಾಥಮಿಕ ವಿದ್ಯಾಬ್ಯಾಸಕ್ಕಾಗಿ ಕುಂದಾಪುರ ಹಿಂದೂ ಶಾಲೆ, ಪ್ರೌಡ ಶಿಕ್ಷಣಕ್ಕಾಗಿ ಅಲ್ಲಿನ ಬೋರ್ಡ್ ಹೈಸ್ಕೂಲ್, ಇವುಗಳು ಶೆಟ್ಟರ ಕಲಾಭಿವೃಧ್ಧಿಗೆ ಹೆದ್ದಾರಿಯಾದವು. ಸುಂದರ ಶರೀರ ಕೋಮಲ ಶಾರೀರ ಇವರಿಗೆ ದೈವದತ್ತ ಕೊಡುಗೆ. ಎಂಟರ ಹರೆಯದಲ್ಲೇ ನಾಗಪ್ಪ ಮಾಸ್ಟರರಿಂದ ಯಕ್ಷಗಾನ ದೀಕ್ಷೆ. ನಾಲ್ಕನೆ ತರಗತಿಯಲ್ಲಿ ಕರ್ಣಾರ್ಜುನದ ಶಲ್ಯನ ಪಾತ್ರ ಅಂದಿನ ಹಿರಿಯ ಕಲಾವಿದ ವಂಡ್ಸೆ ಮುತ್ತ ಗಾಣಿಗರ ಪಡಿಯಚ್ಚು, ಐದನೇ ತರಗತಿಯಲ್ಲಿ ದ್ರೌಪದಿ ಪ್ರತಾಪದ ದ್ರೌಪದಿ ಅಲ್ಲಿಯೂ ಕೊಳ್ಕೆಬೈಲ್ ಶೀನ ನಾಯ್ಕರ ವೇಷದ ಛಾಯೆ, ಅಂಬೆ, ಪ್ರಭಾವತಿ, ದಾಕ್ಷಾಯಣಿ ಹೀಗೆ ಹವ್ಯಾಸಿ ರಂಗದ ಮೇರು ಸ್ತ್ರೀವೇಷಧಾರಿಯಾಗಿ ಮೂಡಿಬಂದರು. ರಂಗಭೂಮಿಯ ಪ್ರತಿಷ್ಠಿತ ನಿರ್ದೇಶಕರಲ್ಲಿ ಒಬ್ಬರಾದ ಬಸ್ರೂರು ಸಂಜೀವ ರಾಯರಿಂದ ತರಬೇತಿ ಪಡೆದು ಆಶಾ-ನಿರಾಶ ನಾಟಕದಲ್ಲಿ ಪುಟ್ಟ ಬಾಲಕನ ಪಾತ್ರ ನಾಟಕ ರಂಗಭೂಮಿಯಲ್ಲೇ ಕ್ರಾ೦ತಿ ಎಬ್ಬಿಸಿತು. ಸಂಗೀತತಜ್ಞ, ರಂಗತಜ್ಞ ಕೋಟೇಶ್ವರ ಸೂರ್ಯನಾರಾಯಣ ಐತಾಳರ ರೂಪರಂಗದ ಟಿಪ್ಪು ಸುಲ್ತಾನ್ ನಾಟಕದ ಜಯಂತಿಯ ಪಾತ್ರದಲ್ಲಿ ನಾಟಕದಲ್ಲಿ ರಂಗನಟಿಯೇ ನಾಚುವ ಇವರ ಅಭಿನಯ ಅಸಂಖ್ಯ ಪ್ರೇಕ್ಷಕರನ್ನು ತಲುಪಿತು.

ಡಾ. ವೈ. ಚಂದ್ರಶೇಖರ ಶೆಟ್ಟಿ
ಜನನ : 1941
ಜನನ ಸ್ಥಳ : ಕುಂದಾಪುರ ತಾಲ್ಲೂಕು
ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ:
ಸರಕಾರಿ ವೈದ್ಯನಾಗಿ ನಾಟಕದ ನಟನಾಗಿ, ಪ್ರಸಂಗಕರ್ತನಾಗಿ, ಯಕ್ಷಗಾನದ ಸ್ತ್ರೀವೇಷಧಾರಿಯಾಗಿ ಸಂಗೀತ, ನೃತ್ಯ ನಿರ್ದೇಶಕನಾಗಿ ಸಾಂಸ್ಕೃತಿಕ ಲೋಕಕ್ಕೆ ಅನನ್ಯ ಕೊಡುಗೆ.

ಸಾಲಿಗ್ರಾಮ ಮತ್ತು ಪೆರ್ಡೂರು ಮೇಳಗಳ ಪ್ರಧಾನ ಪ್ರಸ೦ಗಕರ್ತ.

ಪ್ರಶಸ್ತಿಗಳು:
ಹಲವಾರು ಸ೦ಘ-ಸ೦ಸ್ಥೆಗಳಿ೦ದ ಹಾಗೂ ಮೇಳದ ವೇದಿಕೆಯಲ್ಲಿ ನೂರಾರು ಸನ್ಮಾನಗಳು

ಮರಣ ದಿನಾ೦ಕ : ಮೇ 7, 2013

ಯಕ್ಷಗಾನದಲ್ಲಿ ಪ್ರಧಾನ ಸ್ತ್ರೀವೇಷಧಾರಿ

ಯಕ್ಷಗಾನ ಸವ್ಯಸಾಚಿ ಎಂ. ಎಂ. ಹೆಗ್ಡೆಯವರು ಕುಂದಾಪುರದಲ್ಲಿ ಕೋಣಿ ಶಿವಸ್ವಾಮಿ ಹೊಳ್ಳ, ಕಂದಾವರ ರಘುರಾಮ ಶೆಟ್ಟಿ, ಶ್ರೀಧರ ಹಂದೆ ಮುಂತಾದ ಅಂದಿನ ವಿದ್ಯಾವಂತ ಯುವಕರನ್ನು ಒಂದುಗೂಡಿಸಿ ಸ್ಥಾಪಿಸಿದ ಹವ್ಯಾಸಿ ಮೇಳದಲ್ಲಿ ಪ್ರಧಾನ ಸ್ತ್ರೀವೇಷಧಾರಿಯಾಗಿ ಗುರುತಿಸಿಕೊಂಡ ಇವರ ಮೀನಾಕ್ಷಿ, ಪದ್ಮಗ೦ಧಿ, ಮದನಾಕ್ಷಿ , ತಾರಾವಳಿ ಮುಂತಾದ ಪಾತ್ರಗಳು ಜೋಡಾಟದಲ್ಲಿ ಜಯಭೇರಿ ಪಡೆದವು. ಅಂಬೆ, ಚಿತ್ರಾಂಗದೆಯಂತಹ ಪ್ರಧಾನ ಸ್ತ್ರೀಭೂಮಿಕೆಗೆ ಜೀವ ತುಂಬಿದ ಕಾರಣದಿಂದಲೋ ಏನೋ ಮುಂದೆ ಸಾಲಿಗ್ರಾಮ ಮೇಳದಲ್ಲಿ ಅವರ ಜ್ವಾಲಾ, ಪದ್ಮಪಾಲಿ, ರಾಜನರ್ತಕಿ, ಈಶ್ವರೀ ಪರಮೇಶ್ವರಿ, ಶಂಕರಿ ಶಿವಶಂಕರಿ, ಸ್ವರ್ಣಸುಂದರಿ, ಹಾಗೇಯೇ ಪೆರ್ಡೂರು ಮೇಳದಲ್ಲಿ ಪದ್ಮಪಲ್ಲವಿ ಗೌರಿ ಶ್ರೀಗೌರಿ, ಸಿರಸಿ ಮೇಳದಲ್ಲಿ ಭಾಗ್ಯ ಭಾರತಿಯಂತಹ ಸ್ತ್ರೀಪಾತ್ರ ಪ್ರಧಾನವಾದ ಪ್ರಸಂಗಗಳು ರಚನೆಗೊಂಡವು. ಎಚ್.ಎನ್.ನಕ್ಕತ್ತಾಯರ ನಿರ್ದೇಶನದಲ್ಲಿ ನೂರಾರು ರಂಗಪ್ರಯೋಗಗಳು ಸಾಕಾರಗೊಂಡವು. ಅಣ್ಣ-ತಮ್ಮ ನಾಟಕದ ಶೋಭಾ, ಅಕ್ಷಯಾಂಬರದ ದ್ರೌಪದಿ, ಮುದುಕನ ಮದುವೆಯ ಕಲ್ಯಾಣಿ ಇವುಗಳು ಇವರ ರಂಗಭೂಮಿಯ ಸ್ಥಿರವಾಗಿ ನಿಂತ ಪಾತ್ರಗಳಲ್ಲಿ ಪ್ರಮುಖವಾದವುಗಳು.

ಸ್ಟಾರ್ ಪ್ರಸ೦ಗಗಳ ರಚನೆ

ಯಕ್ಷಗಾನ ರಂಗಭೂಮಿ ಎರಡರಲ್ಲೂ ತನ್ನ ಅದ್ಭುತ ಅಭಿನಯದಿಂದ ಮಿಂಚಿದ ಇವರು 1969ರಲ್ಲಿ ಎಂ. ಬಿ. ಬಿ. ಎಸ್. ಪದವಿಗಳಿಸಿ ಕಿರಿಮಂಜೇಶ್ವರ ಪ್ರಾಥಮಿಕ ಆರೋಗ್ಯ ಘಟಕದಲ್ಲಿ ವೈದ್ಯಾಧಿಕಾರಿಯಾಗಿ ಸೇರ್ಪಡೆಗೊಂಡಾಗ ಅವರ ಯಕ್ಷಗಾನ ಸಂಬಂಧಿ ಚಟುವಟಿಕೆಗಳು ಸ್ಪುಟಿತಗೊಂಡವು. ಡಾ.ಶೆಟ್ಟರ ವಿನೂತನ ಕಲ್ಪನೆ, ನೃತ್ಯ ಸಂಯ್ಯೋಜನೆ, ರಂಗವಿನ್ಯಾಸ ಪ್ರಬುದ್ದ ನಿರ್ದೇಶನಗಳಿಂದ ಪ್ರೇರಣೆಗೊಂಡ ಅಂದಿನ ಸಾಲಿಗ್ರಾಮ ಮೇಳದ ಯಜಮಾನರಾದ ಪಳ್ಳಿ ಸೋಮನಾಥ ಹೆಗ್ಡೆಯವರು ತನ್ನ ಮೇಳದ ಪ್ರಧಾನ ಪ್ರಸಂಗಕರ್ತನನ್ನಾಗಿ ನೇಮಿಸಿಕೊಂಡರು. ಮೇಳದ ಆಗು-ಹೋಗುಗಳಲ್ಲಿ ಹೆಗ್ಡೆಯವರಿಗೆ ಹೆಗಲಿಗೆ ಹೆಗಲುಕೊಟ್ಟು ದುಡಿದ ಇವರು ಪಳ್ಳಿ ಕುಟುಂಬದವರಿಗೆ ಅತ್ಯಂತ ನಿಕಟವರ್ತಿಗಳಾಗಿದ್ದರು. ಘಟಾನುಘಟಿ ಕಲಾವಿದರಿದ್ದ ಮೇಳದಲ್ಲಿ ಇವರ ಲೀಲಾಮೂರ್ತಿ ಶ್ರೀಕೃಷ್ಣ, ಜ್ವಾಲಾ, ಮಹಾಸತಿ ಮಂಗಳಾ, ರಾಜನರ್ತಕಿ ಪದ್ಮಪಾಲಿ ಮುಂತಾದ ಪ್ರಸಂಗಗಳಿಂದ ಮೇಳದ ಗಲ್ಲಾಪೆಟ್ಟಿಗೆ ತುಂಬುವುದರೊಂದಿಗೆ ಬಯಲಾಟದಿಂದ ಡೇರೆಮೇಳಕ್ಕೆ ಆಗತಾನೆ ಬಂದ ಅರಾಟೆ ಮಂಜುನಾಥ, ರಾಮನಾಯಿರಿ, ಜಲವಳ್ಳಿ ವೆಂಕಟೇಶ ರಾವ್, ಐರೋಡಿ ಗೋವಿಂದಪ್ಪ, ಕುಮಟಾ ಗೋವಿಂದ ನಾಯ್ಕ್, ಮರವಂತೆ ನರಸಿಂಹದಾಸ, ನೆಲ್ಲೂರು ಮರಿಯಪ್ಪಾಚಾರ್, ಹುಂಚದಕಟ್ಟೆ ಶ್ರೀನಿವಾಸ ಆಚಾರ್, ಕೆಮ್ಮಣ್ನು ಆನಂದ ಶಿರಿಯಾರ ಮಂಜುನಾಯ್ಕ್ ಮುಂತಾದವರು ಆರು ತಿಂಗಳ ತಿರುಗಾಟದಲ್ಲಿ ಹೊಸ ಪ್ರಸಂಗದ ಸ್ಟಾರ್ ಕಲಾವಿದರಾಗಿ ಮೂಡಿಬಂದರು.

ಅಮಾತ್ಯ ನಂದಿನಿ ಪ್ರಸಂಗದಿಂದ ನಗರ ಜಗನ್ನಾಥ ಶೆಟ್ಟರು ಖಳನಾಯಕನಾಗಿ ಗುರುತಿಸಿಕೊಂಡರೆ, ಮುದುಕನ ಮದುವೆ ಕಥೆಯ ಆದಾರಿತ ಚೈತ್ರ ಪಲ್ಲವಿಯಿಂದ ಹಳ್ಳಾಡಿ ಜಯರಾಮ ಶೆಟ್ಟಿ ಮತ್ತು ಬೆಳಿಯೂರು ಕೃಷ್ಣಮೂರ್ತಿ ಸ್ಟಾರ್ ಹಾಸ್ಯಗಾರರೆಂದು ಗುರುತಿಸಿಕೊಂಡರು. ಆ ತನಕ ಯಕ್ಷಗಾನ ರಂಗಭೂಮಿಯಲ್ಲಿ ಎರಡನೇ ವೇಷಕ್ಕೆ ಸರಿದೊರೆಯಾದ ಸ್ತ್ರೀಪಾತ್ರವಿಲ್ಲದೆ ಕೊರಗುತಿದ್ದರೂ ಶೆಟ್ಟರ ಹೆಚ್ಚಿನ ಪ್ರಯೋಗಗಳು ಕಥಾನಾಯಕಿ ಆಧಾರಿತವೇ ಆಗಿದ್ದು ಹಾಸ್ಯಪಾತ್ರಗಳು ಪ್ರಧಾನವಾಗಿದ್ದು ಅವುಗಳು ಕಥೆಯ ವೇಗ ಹಾಗೂ ‌ಓಘಗಳಿಗೆ ಪೂರಕವಾಗಿದ್ದುದು ಗಮನಾರ್ಹವಾಗಿತ್ತು. ಹೀಗಾಗಿ ರಂಗಸ್ಥಳದಲ್ಲಿ ಜ್ವಾಲಾ, ಪದ್ಮಪಾಲಿ, ಈಶ್ವರಿ, ಪರಮೇಶ್ವರಿ, ಬಾರ್ಕೂರ ಬಂಗಾರಿ, ನೀಲಾವರದ ನೀಲಾಂಬರಿ ಮುಂತಾದ ಸ್ತ್ರೀಪಾತ್ರಗಳಿಗೆ ವಿಫ಼ುಲ ಆಯಾಮ ಒದಗಿಸಿದ ಕೀರ್ತಿ ಸ್ವತ: ತಾನೋರ್ವ “ರಂಗನಾಯಕಿ”ಯಾದ ಡಾ.ಶೆಟ್ಟರಿಗೆ ಸಲ್ಲುತ್ತದೆ.

ಆಯಾ ಪಾತ್ರಗಳಿಗೆ ಜೀವತುಂಬಿದ ಅರಾಟೆ ಮಂಜುನಾಥ, ನಾಗೂರು ದಯಾನಂದ, ರಾಜೀವ ಶೆಟ್ಟಿ , ಹೊಸಂಗಡಿ ಜಯರಾಮ ಗಾಣಿಗ, ಶಶಿಕಾಂತ ಶೆಟ್ಟಿ, ಯಲಗುಪ್ಪ ಸುಬ್ರಮಣ್ಯ ಹೆಗಡೆ ಮುಂತಾದ ಕಲಾವಿದರು ವಿಶೇಷವಾಗಿ ಬೆಳಕಿಗೆ ಬರಲು, ಕಲಾವಿದರ ಸ್ವಪ್ರಯತ್ನದೊಂದಿಗೆ ಶೆಟ್ಟರ ದಕ್ಷ ನಿರ್ದೇಶನವೂ ಕಾರಣವಾಯಿತು. ಪ್ರಸಂಗದ ಒಟ್ಟು ಪ್ರದರ್ಶನದಲ್ಲಿ ಅವರು ಕಲಾವಿದರು ಮತ್ತು ಮೇಳದ ಯಜಮಾನರೊಂದಿಗೆ ರಾಜಿ ಮಾಡಿಕೊಳ್ಳುತ್ತಿರಲಿಲ್ಲ. ತನಗೆ ಬೇಕಾದ ರಂಗ ಪರಿಕರಗಳನ್ನು ಮೇಳದ ಯಜಮಾನರಲ್ಲಿ ಕೇಳಿ ಪಡೆಯುವ ಅರ್ಹತೆ ಅವರಿಗಿತ್ತು. ಸಾಲಿಗ್ರಾಮ, ಸಿರ್ಸಿ, ಪೆರ್ಡೂರು ಮಂಗಳಾದೇವಿ ಮೇಳಗಳಿಗೆ ನಿರಂತರ ಯಶಸ್ವಿ ಮೌಲ್ಯಾಧಾರಿತ ಪ್ರಸಂಗ ನೀಡಿದ ಇವರು ಆಯಾ ಮೇಳಗಳ ಯಜಮಾನರ ನಿಕಟವರ್ತಿಗಳಾಗಿದ್ದು ಕಲಾವಿದರ ಆಯ್ಕೆಯಲ್ಲಿಯೂ ಅವರ ಪಾತ್ರವಿರುತಿತ್ತು.

ಕ್ಷೇತ್ರ ಮಹಾತ್ಮೆ ಪ್ರಸ೦ಗಗಳ ರಚನೆ

ಬಡಗುತಿಟ್ಟಿಗಿಂತ ತೆಂಕುತಿಟ್ಟಿನ ಕಲಾವಿದರ ಬಗ್ಗೆ ವಿಶೇಷ ಗೌರವವಿದ್ದ ಇವರು ತೆಂಕುತಿಟ್ಟಿನ ಕಲಾವಿದರ ಶಿಸ್ತಿನ ಬಗ್ಗೆ ಆಗಾಗ ತನ್ನ ಆಪ್ತೇಷ್ಟರಲ್ಲಿ ಹೇಳಿಕೊಳ್ಳುತಿದ್ದರು. ಅದಕ್ಕೆ ಉದಾಹರಣೆಯಾಗಿ ತನ್ನ ಜೀವಿತದ ಕೊನೆಯಪ್ರಸಂಗ ಕುಂದಾಪುರ ಕ್ಷೇತ್ರ ಮಹಾತ್ಮೆ ರಚಿಸಿ ತೀರಾ ಇತ್ತೀಚಿಗೆ ತೆಂಕಿನ ಹೊಸನಗರ ಮೇಳದ ಕಲಾವಿದರಿಂದ ಆಡಿಸಿ ಸಂತೋಷಪಟ್ಟಿದ್ದರು. ಕ್ಷೇತ್ರ ಮಹಾತ್ಮೆ ಪ್ರಸಂಗದ ಸರದಾರನೆಂದು ಗುರುತಿಸಿಕೊಂಡ ಅವರ ಸೌಕೂರು ಕ್ಷೇತ್ರ ಮಹಾತ್ಮೆ ಮತ್ತು ಮಾರಣಕಟ್ಟೆ ಕ್ಷೇತ್ರ ಮಹಾತ್ಮೆ ಪ್ರಸಂಗಗಳು ಕ್ಷೇತ್ರ ಮಹಾತ್ಮೆ ಪ್ರಸಂಗಗಳಲ್ಲೇ ವಿಶಿಷ್ಟವಾಗಿ ಗುರುತಿಸಿಕೊಂಡವುಗಳು. ಹೊಸ ಪ್ರಸಂಗಗಳಿಗೆ ಹೊಸಹೊಸ ರಾಗ ನೃತ್ಯ ಸಂಯೋಜನೆಯಲ್ಲಿ ಪಳಗಿದ ಇವರ ಪ್ರಯತ್ನವೋ ಎಂಬಂತೆ, ರಾಜನರ್ತಕಿ ಪ್ರಸಂಗದಲ್ಲಿ ನೆಲ್ಲೂರು ಮರಿಯಪ್ಪಚಾರ್, ಮಹಾಸತಿ ಮಂಗಳಾದಲ್ಲಿ ಮರವಂತೆ ನರಸಿಂಹದಾಸ್, ಚೈತ್ರಪಲ್ಲವಿಯಲ್ಲಿ ಕಾಳಿಂಗ ನಾವಡರು, ಪದ್ಮಪಲ್ಲವಿ, ಚೈತ್ರಚಂದನ, ಮಾನಸಮಂದಾರ ಪ್ರಸಂಗಗಳಲ್ಲಿ ಸುಬ್ರಮಣ್ಯ ದಾರೇಶ್ವರ, ಮತ್ತು ಸುರೇಶ ಶೆಟ್ಟಿ. ದರ್ಮಸ೦ಕ್ರಾ೦ತಿಯಲ್ಲಿ ನಾರಾಯಣ ಶಬರಾಯ, ರಂಗನಾಯಕಿಯಲ್ಲಿ ಕೊಳಗಿ ಕೇಶವ ಹೆಗಡೆ, ಹೆರಂಜಾಲು ಗೋಪಾಲ ಗಾಣಿಗ, ಈಶ್ವರಿ ಪರಮೇಶ್ವರಿ, ಶಂಕರಿ ಶಿವಶಂಕರಿಯಲ್ಲಿ ರಾಘವೇಂದ್ರ ಮಯ್ಯ, ಭಾಗ್ಯಭಾರತಿಯಲ್ಲಿ ಕೆ. ಪಿ. ಹೆಗಡೆ. ಸದಾಶಿವ ಅಮೀನ್ ಮುಂತಾದ ಮೇರು ಭಾಗವತರಿಂದ ಹೊಸ ಹೊಸ ರಾಗಗಳು ನೃತ್ಯ ವಿನ್ಯಾಸಗಳು ಸಾಕಾರಗೊಂಡವು.

ವೃತ್ತಿಪರ ರಂಗಭೂಮಿಗೆ ಹಿಡಿದ ಪರಂಪರೆಯ ಜಡ್ಡು ಕಟ್ಟುರುವಿಕೆಯನ್ನು ಒದ್ದು ಕೆಡವಿ ನಿರ್ದೇಶನಕ್ಕೆ ಒಳಪಡಿಸಿ ನವನವೀನ ಪರಿಕಲ್ಪಣೆಯನ್ನು ಪ್ರಪ್ರಥಮವಾಗಿ ರಂಗಕ್ಕೆ ತಂದ ಕೀರ್ತಿ ಅವಿಭಜಿತ ಜಿಲ್ಲೆಯಲ್ಲಿ ಡಾ.ಶೆಟ್ಟರಿಗೆ ಸಲ್ಲುತ್ತದೆ. ಮಹಾನ್ ಸ್ತ್ರೀವೇಷಧಾರಿಯಾಗಿ ರಾಮಾಯಣ, ಭಾರತ, ಭಾಗವತ ಪ್ರಸಂಗಗಳ ಬಗ್ಗೆ ಅಪಾರ ಗೌರವವಿದ್ದು, ಪೌರಾಣಿಕ ಪ್ರಸಂಗಗಳಿಗೆ ಸ್ವತ ಜೀವತುಂಬಿ, ಬದಲಾಗುತ್ತಿರುವ ಕಾಲಘಟ್ಟಕ್ಕೆ ಡೇರೆಮೇಳಗಳ ಉಳಿವಿಗಾಗಿ, ವಿದ್ಯುನ್ಮಾನ ಯುಗದಲ್ಲಿ ಕಲೆಯ ಉಳಿವಿಗಾಗಿ ಅಂತ್ಯೋದಯ ಜ್ಯೋತಿಯಾಗಿ ಮೂಡಿಬಂದ ಶೆಟ್ಟರು ಮಡಿವಂತ ಪ್ರೇಕ್ಷಕರ, ಜಿಜ್ನಾಸುಗಳ ವಿಮರ್ಶಕರ ಕಟುಟೀಕೆಗೆ ಒಳಗಾದರೂ ತನ್ನ ಪ್ರಯತ್ನವನ್ನು ಬಿಟ್ಟವರಲ್ಲ. ದೇವಾಲಯದಿಂದ ಹರಕೆ ಸಂದಾಯವಾಗುತಿದ್ದ ಮೇಳಗಳು ವ್ಯಾಪಾರೀಕರಣಗೊಂಡು ಡೇರೆ ಮೇಳವಾಗಿ ಹೊಸ ಪ್ರಸಂಗಗಳು ಹೊರಬಿದ್ದಾಗ ಕಟು ಟೀಕೆಗೆ ಒಳಗಾದ ಸಂದರ್ಭದಲ್ಲಿ ನಡೆದ ಸಾರ್ವಜನಿಕ ಸನ್ಮಾನ ಸಮಾರಂಭದಲ್ಲಿ ಅವರು ಆಡಿದ ಮಾತು “ ಪೌರಾಣಿಕ ಪ್ರಸಂಗಗಳ ಹೊರತಾಗಿ ಆಧುನಿಕ ರಚನೆಗಳು ಯಕ್ಷಗಾನದ ಉಳಿವಿಗೆ ಒಬ್ಬ ಯಕ್ಷಗಾನ ಪ್ರೇಮಿಯಾಗಿ ಹೇಳುವುದಿದ್ದರೆ ಅನಿವಾರ್ಯವಲ್ಲ. ಒಬ್ಬ ಕೃತಿಕಾರನಾಗಿ ಹೇಳುವುದಿದ್ದರೆ ಹೌದು. ಯಕ್ಷಗಾನ ಕಲಾವಿದ ಉಳಿಯಬೇಕಾದರೆ ಆರ್ಥಿಕ ಲಾಭ ಬೇಕು. ಅದಕ್ಕೆ ಪ್ರೇಕ್ಷಕನಿಗೆ ತಕ್ಕ ಪ್ರದರ್ಶನಬೇಕು” ಎನ್ನುವುದು ಅವರು ನಂಬಿಕೊಂಡು ಬಂದ ಸತ್ಯಕ್ಕೆ ಹತ್ತಿರವಾಗಿದೆ. ತನ್ನಲ್ಲಿ ತುಂಬಿಕೊಂಡ ಹೊಸ ಪ್ರಸಂಗದ ಕೀಳರಿಮೆಯಿಂದ ಯಕ್ಷಗಾನ ಸಂಬಂದಿ ಸಭೆ ಗೋಷ್ಟಿಗಳಲ್ಲಿ ಭಾಗವಹಿಸಲು ಅವರು ಹಿಂಜರಿಯುತಿದ್ದರು.

ಪ್ರಶಸ್ತಿ-ಪುರಸ್ಕಾರಗಳು

ನಾಟಕಗಳ ಮೂಲಕ ಅಸಂಖ್ಯಾ ಹವ್ಯಾಸಿ ಸಂಸ್ಥೆಗಳಿಗೆ, ಯಕ್ಷಗಾನ ಮೇಳಗಳಿಗೆ ಕಾಯಕಲ್ಪ ಒದಗಿಸಿದ ಶೆಟ್ಟರು ಕುಂದಾಪುರದ ಚಿಕ್ಕಮ್ಮ ಕ್ರೀಡಾ ಸಂಘ, ಕನ್ನಿಕಾಪರಮೇಶ್ವರಿ ಯಕ್ಷಗಾನ ಸಂಘ ಕಂಡ್ಲೂರು, ರಾಘವೇಂದ್ರ ಕಲಾ ಸಂಘ, ಮೈಲಾರೇಶ್ವರ ಸಂಘ, ಹತ್ತಾರು ಯುವಕ ಮಂಡಲ ಹಲವಾರು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು. ಸರ್ವಧರ್ಮದ ಕಲಾವಿದರನ್ನು ಸಮಾನತೆಯಿಂದ ನೋಡುತಿದ್ದ ಇವರು ಜಾತ್ಯಾತಿತತೆಗೆ ಇನ್ನೋಂದಿ ಹೆಸರು. ವೈದ್ಯರಿಗೆ, ಅಧ್ಯಾಪಕರಿಗೆ ಕಲಾವಿದರಿಗೆ ಇರಬೇಕಾದ ಜಾತ್ಯಾತೀತ ನಿಲುವನ್ನು ಜೀವಿತದ ಕೊನೆಯವರೆಗೆ ಉಳಿಸಿಕೊಂಡ ಇವರು ಅನ್ಯ ಕೋಮಿನವರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಮೂಲತ ನಾಟಕದ ಕಲಾವಿದರಾದ ಇವರು ತನ್ನ ಅನುಭವದ ವೈಶಾಲ್ಯವನ್ನು ಸಾದ್ಯತೆಯಾಗಿ ವಿಶಾಲ ರಂಗಭೂಮಿಯಲ್ಲಿ ಪ್ರಯೋಗಿಸುವ ಯುವ ಜನಾಂಗ ಸಿದ್ದವಾಗುತ್ತಿಲ್ಲ ಎಂಬ ಕೊರಗಿನಲ್ಲಿ ತನ್ನ ಅನ್ವೇಷಣೆಯನ್ನು ಯಕ್ಷಗಾನಕ್ಕೆ ಬದಲಾಯಿಸಿದರು. ನೂರಕ್ಕೂ ಅದಿಕ ಸನ್ಮಾನಗಳನ್ನು ಮೇಳದ ವೇದಿಕೆಗಳಲ್ಲಿ ಪಡೆದ ಅವರ ಪ್ರಸಂಗಗಳ ನೂರು ಇನ್ನೂರನೆ ಪ್ರಯೋಗಗಳಲ್ಲು ವಿಶೇಷ ಗೌರವಕ್ಕೆ ಪಾತ್ರರಾಗಿದ್ದರು. ಕಂಡ್ಲೂರಿನಲ್ಲಿ ನಡೆದ ರಾಜ್ಯ ಮಟ್ಟದ ಸನ್ಮಾನವಲ್ಲದೆ, ಕಳೆದ ಮಾರ್ಚ್ ತಿಂಗಳಲ್ಲಿ ಕುಂದಾಪುರದಲ್ಲಿ ಹೊಸನಗರ ಮೇಳದ ರಂಗಸ್ಥಳದಲ್ಲಿ ನಡೆದ ಅದ್ದೂರಿಯ ಸನ್ಮಾನ ಅವರಿಗೆ ಸಂದ ಕೊನೆಯ ಸನ್ಮಾನವಾಗಿತ್ತು.

ತನ್ನ ಬಾಳ ಸಹವರ್ತಿ ಚಂದ್ರಲೇಖಾ ಎಲ್ಲರೊಳಗೊಂದಾಗಿ, ಗಂಡನನ್ನು ಸಂಪೂರ್ಣ ಕಲೆಗೆ ಬಿಟ್ಟುಕೊಟ್ಟು,ಗಂಡನ ಮುಗುಳ್ನಗೆಯಲ್ಲಿ ಬದುಕನ್ನು ಗೆದ್ದು ಕಳೆದ ವರ್ಷವಷ್ಟೇ ಇಹಲೋಕದ ಯಾತ್ರೆ ಮುಗಿಸಿದರು .ಓರ್ವಪುತ್ರ, ಪುತ್ರಿ, ಅಪಾರ ಕಲಾಭಿಮಾನಿಗಳನ್ನು ಅಗಲಿದ ಡಾ.ಚಂದ್ರಶೇಖರ ಶೆಟ್ಟರ ಕೀರ್ತಿ ಚಂದ್ರನಿರುವಷ್ಟು ಕಾಲ ಉಳಿಯಲಿ ಎನ್ನುವುದೇ ಕಲಾಭಿಮಾನಿಗಳಾದ ನಾವೆಲ್ಲರು ಮಾಡಬಹುದಾದ ದೀರ್ಘ ನಮನ.

****************

ಡಾ. ವೈ. ಚಂದ್ರಶೇಖರ ಶೆಟ್ಟರವರ ಕೆಲವು ಭಾವಚಿತ್ರಗಳು














Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ