ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಸ್ವೀಕರಿಸಲಾಗದ ನಿಧನ ಚೆನ್ನಪ್ಪ ಶೆಟ್ಟಿ ಅಗಲಿಕೆ

ಲೇಖಕರು :
ಡಾ. ಎಂ. ಪ್ರಭಾಕರ ಜೋಶಿ
ಸೋಮವಾರ, ಮಾರ್ಚ್ 31 , 2014
ಸಾಧನೆಯಲ್ಲಿ ಛಲಗಾರ, ವ್ಯವಸಾಯದ ನಿಷ್ಠಾವಂತ ಕಲಾಕಾರ, ಅಧ್ಯಯನದಲ್ಲಿ ಸತತ ವಿದ್ಯಾರ್ಥಿ, ರಂಗದಲ್ಲಿ ಸಮರ್ಥ ವರಿಷ್ಠ ಸಾಧಕ - ನಮ್ಮ ಆತ್ಮೀಯ ಕಲಾವಿದ ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ ಅಗಲಿಯೇ ಹೋದರು. ಅವರ ಬಳಗ, ಕುಟುಂಬ, ಮಿತ್ರವಲಯ ಒಪ್ಪಿಕೊಳ್ಳ ಲಾಗದ ಘಟನೆ ಇದು. ದೃಢ ಆರೋಗ್ಯದ, ಶಿಸ್ತುಬದ್ಧ ಜೀವನದ, ನಿವ್ಯಸನಿ ಚೊಕ್ಕ ವ್ಯಕ್ತಿಗೆ ಈ ಬಗೆಯ ಅನಿರೀಕ್ಷಿತ ಅಂತ್ಯವೆ? ಅರ್ಥವಾಗುವುದಿಲ್ಲ.

ಬಂಟ್ವಾಳದ ಸಿದ್ಧಕಟ್ಟೆಯಲ್ಲಿ ಬಡ ಕೃಷಿಕ ಕುಟುಂಬದಲ್ಲಿ ಹುಟ್ಟಿ ಐದನೆಯ ತರಗತಿ ವಿದ್ಯೆ. ಕಲಾವಿದನಾಗಬೇಕೆಂಬ ಹಂಬಲ, ಅದಕ್ಕೆ ಬೇಕಾದ ಸತತ ಸಾಧನೆ, ಛಲದ ಅಭ್ಯಾಸಗಳಿಂದ ಸಾಮರ್ಥ್ಯ, ಕೀರ್ತಿಗಳಲ್ಲಿ ದೊಡ್ಡ ಎತ್ತರಕ್ಕೇರಿದ ಚೆನ್ನಪ್ಪ, ಅರ್ಥದಾರಿ ಸಿದ್ಧಕಟ್ಟೆ ವಾಸು ಶೆಟ್ಟರ ಅಳಿಯ -ಶಿಷ್ಯ. ಆ ಬಳಿಕ ಗುರುಗಳು ಹಲವರು. ನಾಟ್ಯಾಚಾರ್ಯ ಕುರಿಯ ವಿಠಲ ಶಾಸಿ ಪಡ್ರೆ ಚಂದು, ಹೆರಂಜಾಲು ವೆಂಕಟರಮಣರ ಶಿಷ್ಯನಾಗಿ, ನಿಡ್ಲೆ ನರಸಿಂಹ ಭಟ್ಟ, ಅಗರಿ ಭಾಗವತರ ಒಡನಾಡಿಯಾಗಿ ಕಲಾ ಸಂಗ್ರಹ. ಶಿಮಂತೂರು ನಾರಾಯಣ ಶೆಟ್ಟಿ, ವಿದ್ವಾನ್‌ ಕೊರ್ಗಿ ಉಪಾಧ್ಯಾಯರಿಂದ ಸಾಹಿತ್ಯ ಅಧ್ಯಯನ. ನಾಲ್ಕೂವರೆ ದಶಕಗಳ ಯಕ್ಷಗಾನ ವ್ಯವಸಾಯ. ವೇಷಧಾರಿಯ ಜತೆಗೆ, ಈಚಿನ ವರ್ಷಗಳಲ್ಲಿ ತಾಳಮದ್ದಲೆಯ ಪ್ರಮುಖ ಅರ್ಥಧಾರಿಯಾಗಿ ಯಶಸ್ವಿ.

ಹಲವು ವಿಚಾರಗಳಲ್ಲಿ ಚೆನ್ನಪ್ಪ ಶೆಟ್ಟಿ ಪ್ರತ್ಯೇಕವಾಗಿ ನಿಲ್ಲುವ, ಮಾದರಿಯಾಗುವ ಕಲಾ ವ್ಯವಸಾಯಿ. ಇರಾ, ಕರ್ನಾಟಕ, ಕಟೀಲು, ಧರ್ಮಸ್ಥಳ, ಕದ್ರಿ - ಈ ತೆಂಕು ಮೇಳಗಳ ಜತೆಗೆ ಬಡಗುತಿಟ್ಟಿನಲ್ಲೂ ಸಾಲಿಗ್ರಾಮ, ಪೆರ್ಡೂರು ಮೇಳಗಳಲ್ಲಿ ಯಶಸ್ವಿ. ಈಗ ಕೆಲವರ್ಷ ಹೊಸನಗರ ಮೇಳದಲ್ಲಿ ಮುಖ್ಯ ವೇಷಧಾರಿ. ಯಾವುದ ನ್ನಾದರೂ ಗಂಭೀರವಾಗಿ ಸ್ವೀಕರಿಸುವ ಚೆನ್ನಪ್ಪ, ಬಡಗಿನ ತಿರುಗಾಟಕ್ಕೆ ತನ್ನ ತಾರಾಬಲ ಮೌಲ್ಯವನ್ನೇ ಆಶ್ರಯಿಸದೆ ಆ ತಿಟ್ಟನ್ನೂ ಕಲಿತೇ ವ್ಯವಸಾಯ ಮಾಡಬೇಕೆಂಬ ಛಲದಿಂದ ಹೆರಂಜಾಲು ಅವರಲ್ಲಿ ನೃತ್ಯಾಭ್ಯಾಸಗೈದವರು. ಸ್ವಾನುಭವಕ್ಕಾಗಿ ಕೆಲಕಾಲ ವಿದ್ವಾನ್‌ ಗೋಪಾಲಕೃಷ್ಣ ಅಯ್ಯರ್‌ ಅವರಲ್ಲಿ ಸಂಗೀತವನ್ನೂ ಕಲಿತವರು.

ಆಟ, ಕೂಟಗಳ ಪಾತ್ರ ನಿರ್ವಹಣೆಯಲ್ಲಿ ನಾಯಕ, ಪ್ರತಿನಾಯಕ ಹಾಗೂ ಬೇರೆ ಬೇರೆ ಪಾತ್ರಗಳಿಗೆ ಸಿದ್ಧನಾದ ಸಮರ್ಥ ಚೆನ್ನಪ್ಪ ಶೆಟ್ಟರು ಶ್ರೀರಾಮ, ಶ್ರೀಕೃಷ್ಣ, ಅರ್ಜುನ, ಕೌರವ, ಭೀಷ್ಮ, ಪರಶುರಾಮ, ವಿಷ್ಣು, ಶ್ವೇತಕುಮಾರ, ದ್ರೋಣ, ಸುಧನ್ವ, ಪೆರುಮಳ ಹಾಗೆ ವಿವಿಧ ಪಾತ್ರಗಳಲ್ಲಿ ಯಶಸ್ವಿ. ಪಾತ್ರದ ಅಭಿವ್ಯಕ್ತಿಯ ಯಶಸ್ಸಿಗೆ ಸದಾ ಯತ್ನ. ವಾದದಲ್ಲಿ ಪಟ್ಟು. ಆದರೆ ನಿಜದಲ್ಲಿ ಸ್ನೇಹವೂ ಹಾಗೆಯೇ.

ಚೊಕ್ಕಭಾಷೆ, ಪೂರಕ ಸಾಹಿತ್ಯಗಳು, ಪ್ರಸಂಗದ ನಡೆಯ ನಿರ್ವಹಣೆ, ಗೌರವಯುತ ಗಂಭೀರ ನಿರ್ವಹಣೆ, ಹದವಾದ ಅತಿಯಲ್ಲದ ರಂಜನೆಗಳಿಂದ ಕೂಡಿದ ಸದಭಿರುಚಿಯ ಪಾತ್ರಾಭಿವ್ಯಕ್ತಿ ಚೆನ್ನಪ್ಪರದು.

ನಿಜ ಜೀವನದಲ್ಲಿ, ಸ್ನೇಹ ಸಂಬಂಧಗಳಲ್ಲಿ, ಮೇಳದ ವ್ಯವಸಾಯದಲ್ಲಿ ತುಂಬಿದ, ಸಜ್ಜನ, ನೇರ, ಚೊಕ್ಕ ಜಂಟಲ್‌ಮಾÂನ್‌ ಕಲಾವಿದ. ತುಂಬ ಶಿಸ್ತು, ವ್ಯವಸಾಯ ನಿಷ್ಠೆ, ಸಹಕಲಾವಿದರ ಹಾಡು, ವಾದನ, ಕುಣಿತ, ತಾಳ, ಮಾತುಗಳ ಬಗೆಗೆ ಮುಕ್ತಮನದ ಪ್ರಶಂಸೆ.

ತಾನು ಕಂಡ ಎಲ್ಲ ಕಲಾವಿದರ ಬಗೆಗೆ ವಿಸ್ತಾರ ವಾದ ಚಿತ್ರಗಳು, ಅವರ ಸಾಧನೆಯ ವೈಶಿಷ್ಟé ವನ್ನು ಗುರುತಿಸುವ ನೆನಪು, ಅವುಗಳ ವರ್ಣನೆ, ಜತೆಗಾರರನ್ನು ಪ್ರಾಂಜಲವಾಗಿ ಮೆಚ್ಚುವ ಗುಣಗಳ ಚುಕ್ಕಿ ಇಲ್ಲದ ವ್ಯಕ್ತಿತ್ವದ, ವಿನಯ ಶಾಲಿ ಆದರೆ, ಆತ್ಮಾಭಿಮಾನಿ ಕಲಾವಿದ ಚೆನ್ನಪ್ಪ ವ್ಯವಸ್ಥಾಪಕರಿಗೆ, ಮೇಳಕ್ಕೆ ಸಮಸ್ಯೆಯಾಗದೆ ಸದಾ ಸಹಕಾರಿ.

ಕಲೆಯ, ಕೃಷಿ ಜೀವನದ, ಹಳ್ಳಿ ಬದುಕಿನ ವಿಸ್ತಾರ ಅನುಭವ ಸಂಗ್ರಹವಿದ್ದ ಚೆನ್ನಪ್ಪ ಒಳ್ಳೆಯ ಸಂಭಾಷಣಾ ಚತುರ, ವಿನೋದಶೀಲ. ಹಪಹಪಿಕೆ, ಅತಿನಿರೀಕ್ಷೆ ಇಲ್ಲದ, ಸದಾ ಅಧ್ಯಯನಶೀಲ ಸಾಧಕ. ಯಕ್ಷಗಾನ ಕಲಾವಿದರ ಸಮೂಹದಲ್ಲೇ ಪ್ರತ್ಯೇಕ ವ್ಯಕ್ತಿತ್ವ. ಕಲಾ ಕ್ಷೇತ್ರದಲ್ಲೂ, ಊರಿನಲ್ಲೂ ಅವರ ಜನಪ್ರಿಯತೆಗೆ ಸಾಕ್ಷಿ ಅವರ ಅಂತ್ಯದರ್ಶನಕ್ಕೆ ಬಂದ ದೊಡ್ಡ ಜನಸಂದಣಿ. ಸುಖ ಸಂಸಾರಿ, ಅರುವತ್ತರ ಹರೆಯದಲ್ಲಿ ಅತ್ಯಂತ ಚುರುಕಾಗಿ ಆರೋಗ್ಯಶಾಲಿಯಾಗಿದ್ದ ಚೆನ್ನಪ್ಪ ಶೆಟ್ಟರಿಗೆ ಇದೀಗ ಮಾನ ಸಮ್ಮಾನಗಳ, ಪಕ್ವ ಸಾಧನೆಯ ಕಾಲ ಬರುತ್ತಲೇ ಅದಕ್ಕೆ ಅವರಿಗೂ, ನಮಗೂ ಯೋಗ ಉಳಿಯಲಿಲ್ಲ. ಒಪ್ಪಲಾಗದ ಖೇದ ಅವರ ನಿಧನ. ದಿವಂಗತ ಎಂದು ಹೇಗೆ ಬರೆಯಲಿ? ಬದುಕೆಷ್ಟು ಕ್ರೂರ, ಎಷ್ಟು ನಿಗೂಢ?ಕೃಪೆ : www.udayavani.com


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ