ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ ಮೇಳ
Share
ಕಟೀಲು ಯಕ್ಷಗಾನ ಮೇಳಗಳು

ಲೇಖಕರು :
ಮಿಥುನ ಕೊಡೆತ್ತೂರು
ಶನಿವಾರ, ಆಗಸ್ಟ್ 2 , 2014

ಶ್ರೀ ಕಟೀಲು ದೇವಿಗೆ ಆಟವೆಂದರೆ ಇಷ್ಟ. ಹಾಗಾಗಿ ಶ್ರೀ ಕ್ಷೇತ್ರದ ಹರಕೆ ಆಟಗಳಿಗೆ ವಿಶೇಷ ಮಹತ್ವವಿದೆ. ಅರುಣಾಸುರನನ್ನು ಮರ್ಧಿಸಿ ನೆಲೆಯಾದ ಭ್ರಮರಾಂಬಿಕೆ ಖುದ್ದು ತಮ್ಮ ಮನೆಗೆ ಬರುತ್ತಾಳೆ ಎಂಬ ನಂಬಿಕೆಯಿಂದ ಬಹು ಶ್ರದ್ಧೆಯಿಂದ ಆಟ ಆಡಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ದಿನಂಪ್ರತಿ ಸರಾಸರಿ ಮೂರ‍್ನಾಲ್ಕು ಹರಕೆಯಾಟಗಳು ಬುಕ್ಕಿಂಗ್ ಆಗುತ್ತಿವೆ. ಇಪ್ಪತ್ತು ವರುಷಗಳಿಗೂ ಮಿಕ್ಕಿ ಆಟಗಳ ಬುಕ್ಕಿಂಗ್ ಆಗಿವೆ ಎಂದರೆ ಬಹುಶಃ ಮತ್ಯಾವ ಕಲೆಯೂ ಈ ಪರಿಯ ದಾಖಲೆ ಮಾಡಿರಲಿಕ್ಕಿಲ್ಲ. ಒಂದರ್ಥದಲ್ಲಿ ಇದು ಗಿನ್ನಿಸ್ ದಾಖಲೆ.

ಒಟ್ಟಾರೆ ಮುನ್ನೂರು ಮಂದಿ ಕಲಾವಿದರಿಗೆ ಬದುಕು ನೀಡುವ ಕಟೀಲಿನ ಆರು ಮೇಳಗಳು ಕ್ಷೇತ್ರದ ಪ್ರಚಾರವನ್ನೂ ಕೇವಲ ಪೌರಾಣಿಕ ಪ್ರಸಂಗಗಳ ಪ್ರದರ್ಶನದಿಂದ ಧರ್ಮ ಪ್ರಚಾರವನ್ನೂ ಮಾಡುತ್ತಿವೆ. ಕಲೆಯನ್ನೂ ಉಳಿಸಿ, ಬೆಳೆಸುವ ಮಹತ್ತರ ಕಾರ‍್ಯವನ್ನು ಮಾಡುತ್ತಿದೆ.

ಸಾಧಾರಣ 125ರಿಂದ 150 ವರುಷಗಳ ಇತಿಹಾಸವಿರುವ ಕಟೀಲು ಮೇಳ 1975ರಲ್ಲಿ ವ್ಯವಸ್ಥಿತ ಎರಡನೇ ಮೇಳ ಆರಂಭಿಸಿತು. 1982ರಲ್ಲಿ ಮೂರನೇ ಮೇಳ, 1993ರಲ್ಲಿ ನಾಲ್ಕನೇ ಮೇಳ, 2010ರಲ್ಲಿ ಐದನೇ ಮೇಳ ಆರಂಭಿಸಿದ ಕಟೀಲು ಕ್ಷೇತ್ರ 2013ರಲ್ಲಿ ಆರನೇ ಮೇಳ ಆರಂಭಿಸಿದೆ. ಆದರೂ 25-30 ವರುಷಗಳ ಆಟ ಬಾಕಿಯಾಗುತ್ತಿದೆ.

ಸರ್ವಾಭೀಷ್ಟ ಸಿದ್ಧಿಗಾಗಿ ಆಟ ಆಡಿಸುವ ಭಕ್ತರು ಇದ್ದಾರೆ. ಕಾಣಿಕೆ ಡಬ್ಬಿಯಲ್ಲಿ ಹಣ ಸಂಗ್ರಹಿಸಿ ಆಟ ಆಡಿಸುವ ಭಕ್ತರೂ ಇದ್ದಾರೆ. ಮುಸ್ಲಿಂ, ಕ್ರೈಸ್ತರೂ ಹರಿಕೆ ಆಟ ಆಡಿಸುತ್ತಾರೆ.

ಆಟ ಆಡಿಸಿದವರ ಅಭೀಷ್ಟಗಳನ್ನು ಈಡೇರಿಸುವ ಜಗನ್ಮಾತೆಯ ಸಾನಿಧ್ಯದಿಂದ ಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲಿ ಮೇಳಗಳ ತಿರುಗಾಟ ಆರಂಭವಾಗಿ ಮೇ ತಿಂಗಳ ಕೊನೆಗೆ ಮುಕ್ತಾಯ ಕಾಣುತ್ತದೆ.

ಮೇಳ ಹೊರಡುವುದು ಹೀಗೆ

ಮೇಳ ಒಳಗಾಗುವಾಗ (ಮೇ ತಿಂಗಳ ಕೊನೆಯಲ್ಲಿ) ಆಸ್ರಣ್ಣರು ಹೇಳುವ ಕಾರ್ತಿಕ ದೀಪೋತ್ಸವದ ಅನಂತರದ ಶುಭದಿನದಂದು ಮೇಳ ಹೊರಡುವುದು. ವೈಷಭ ಮಾಸದ 11 ನೆಯ ದಿನ ಮೇಳ ಒಳಗಾಗುವುದು ಇದುವರೆಗೆ ನಡೆಯುತ್ತಿದ್ದ ಕ್ರಮ. ಕಳೆದ ಬಾರಿ ಹೊಸದಾಗಿ ಆರನೆಯ ಮೇಳ ಆರಂಭವಾದಾಗ ದೀಪಾವಳಿ ಕಳೆದ ಕೂಡಲೇ ಅಂದರೆ ದೀಪೋತ್ಸವಕ್ಕಿಂತ ಮೊದಲೇ (ನವೆಂಬರ್ 8) ಮೇಳಗಳು ಹೊರಟಿವೆ.

ಮೇಳ ಹೊರಡುವ ದಿನ ಬೆಳಿಗ್ಗೆ ದೇವರ ಪೂಜಾ ಕಿರೀಟಗಳ ಪ್ರತಿಷ್ಠೆ, ಸಾಯಂಕಾಲ ಪ್ರತಿ ಮೇಳದ ಭಾಗವತರಿಂದ ಪ್ರತ್ಯೇಕ ಪ್ರತ್ಯೇಕ ಗಣಪತಿ ಸ್ತುತಿ, ದುರ್ಗಾಸ್ತುತಿ, ಇದನ್ನು ತಾಳ ಮದ್ದಲೆ ಅಂತಲೂ ಕರೆಯುತ್ತಾರೆ. ಬಳಿಕ ವೀಳ್ಯ ಇಡುವುದು, ಭಾಗವತರಿಗೆ ವೀಳ್ಯ ಕೊಡುವುದು., ದೇವರ ಎದುರು ಭಾಗವತರಿಗೆ, ಮದ್ಲೆಗಾರರಿಗೆ, ಹಾಸ್ಯದವರಿಗೆ ಸೀರೆ ಪ್ರಸಾದ ನೀಡುವುದು. ಇತ್ತೀಚಿನ ವರ್ಷಗಳಲ್ಲಿ ಎಲ್ಲ ಕಲಾವಿದರಿಗೆ ಪ್ರಸಾದ ನೀಡಲಾಗುತ್ತಿದೆ.

ಆ ಮೇಲೆ ದೇವತಾ ಪ್ರಾರ್ಥನೆ, ದೇವರ ಪೂಜೆ, ದೇವರ ಪ್ರಸಾದ ಹಾಕಿ ಅರ್ಚಕರಾದ ಅಸ್ರಣ್ಣರು ಭಾಗವತರಿಗೆ ಜಾಗಟೆ, ಹಿಮ್ಮೇಳದವರಿಗೆ ಚೆಂಡೆ ಮದ್ದಲೆ, ಮೇಳವೊಂದರ ತಲಾ ಇಬ್ಬರು ಕಲಾವಿದರಿಗೆ ಗೆಜ್ಜೆಗಳನ್ನು ನೀಡುತ್ತಾರೆ. ದೇವರ ಎದುರು ಕುಣಿದು, ಮೇಳದ ದೇವರೊಂದಿಗೆ ಗಣಪತಿ ದೇವರ ಎದುರು ಕುಣಿದು, ಮೇಳದ ದೇವರೊಂದಿಗೆ ಗಣಪತಿ ದೇವರ ಎದುರು ಕುಣಿದು ಚೌಕಿಗೆ ಹೋಗುತ್ತಾರೆ. ಅಲ್ಲಿ ಚೌಕಿ ದೇವರಿಗೆ ಪೂಜೆಯಾಗುತ್ತದೆ. ಆರಂಭದಲ್ಲಿ ಐದು ರಂಗಸ್ಥಳದಲ್ಲಿ ಪ್ರತ್ಯೇಕ ಕುಣಿದು, ಪೀಠಿಕೆ ಸ್ತ್ರೀವೇಷದ ಬಳಿಕ ಒಂದೇ ರಂಗಸ್ಥಳದಲ್ಲಿ ಪಾಂಡವಾಶ್ವಮೇಧ ನಡೆಯುತ್ತದೆ.

ಕ್ರೈಸ್ತ ಮುಸ್ಲಿ೦ ಬ೦ಧುಗಳಿ೦ದಲೂ ಸೇವೆಯಾಟ

ಕಟೀಲು ಭ್ರಾಮರಿಯನ್ನು ಹಿಂದುಗಳಷ್ಟೇ ನಂಬಿ ಆರಾದಿಸುತ್ತಿಲ್ಲ, ಕ್ರೈಸ್ತ ಮುಸಲ್ಮಾನ ಬಂಧುಗಳೂ ಪೂಜಿಸುತ್ತಾರೆ. ಕಟೀಲು ಮೇಳಗಳ ಬಯಲಾಟವನ್ನು ಪ್ರತಿ ವರ್ಷ ಆಡಿಸುವ ಮೂಲಕ ಪೆರ್ಮುದೆಯ ಪಿ.ಬಿ.ಪಿಂಟೋ ಧನ್ಯತೆಯನ್ನು ಹೊಂದಿದರೆ, ಬಜಪೆಯ ಬಶೀರ್, ಮಲಜಿಯ ಕ್ರಿಶ್ಚಿಯನ್ ಅಶೋಕ್, ಹೂವಿನ ವ್ಯಾಪಾರಿಯಾಗಿದ್ದ ಖಾದ್ರಿ ಬ್ಯಾರಿ, ಉಳ್ಳಾಲದ ಮುಸ್ಲಿಮ್ ವ್ಯಾಪಾರಿಯೊಬ್ಬರು ಹೀಗೆ ಹಿಂದೂಯೇತರರೂ ಆಟವಾಡಿಸುತ್ತಾರೆ. ಮುಡಾಯಿಕೋಡಿ ಹತ್ತು ಸಮಸ್ತರು ಮೋಂಟು ರೋಡ್ರಿಗಸ್ ನೇತೃತ್ವದಲ್ಲಿ ಅರಸಿನಮಕ್ಕಿ ಹತ್ತು ಸಮಸ್ತರು ಎಂ.ಬಿ.ಇಬ್ರಾಹಿಂ ಮುಂದಾಳತ್ವದಲ್ಲಿ ಇವತ್ತಿಗೂ ಶ್ರೀ ದೇವಿಯ ಸೇವೆಯನ್ನು ಬಯಲಾಟದ ಮೂಲಕ ಮಾಡುತ್ತಿದ್ದಾರೆ.

ಕರಾವಳಿ ಜಿಲ್ಲೆಗಳಲ್ಲಿ ಅಲ್ಲದೆ ದೂರದ ತಿಪಟೂರು, ಬೆಂಗಳೂರುಗಳಲ್ಲೂ ಕಟೀಲು ಮೇಳದ ಹರಕೆಯಾಟ ಆಗಿದೆ. ಮುಂಬಯಿಯಿಂದಲೂ ಬೇಡಿಕೆ ಬಂದಿದೆ. ಆದರೆ ರಂಗಸ್ಥಳ, ಪರಿಕರಗಳ ಸಾಗಾಟ, ಕಲಾವಿದರ ಪ್ರಯಾಣದ ಸಮಸ್ಯೆಗಳಿಂದಾಗಿ ತಿರುಗಾಟದ ಸಂದರ್ಭ ದೂರದ ಪ್ರಯಾಣ ಸಾಧ್ಯವಾಗುತ್ತಿಲ್ಲ. ಕಟೀಲಿನ ರಥಬೀದಿಯಲ್ಲೇ ಬಯಲಾಟ ಆಡಿಸುವ ಅವಕಾಶವಿರುವುದರಿಂದ ಹರಕೆ ತೀರಿಸುವುದು ದೂರದೂರುಗಳಲ್ಲಿರುವವರಿಗೆ ಕಷ್ಟ.

ದೇವಿ ಮಹಾತ್ಮೆ ಕಟೀಲಿನಲ್ಲಿ ಪ್ರದರ್ಶನವಿಲ್ಲ !

ಯಾಕೆಂದು ಯಾರಿಗೂ ಗೊತ್ತಿಲ್ಲ! ದೇವಿಗೆ ಸಂಬಂಧಿಸಿದ ಶ್ರೀ ದೇವೀಮಹಾತ್ಮೆ, ಶ್ರೀ ದೇವೀ ಲಲಿತೋಪಾಖ್ಯಾನ, ಕಟೀಲು ಕ್ಷೇತ್ರ ಮಹಾತ್ಮೆ ಪ್ರಸಂಗಗಳು ಕಟೀಲಿನಲ್ಲಿ ಪ್ರದರ್ಶನವಾಗುವುದಿಲ್ಲ. ಬಪ್ಪನಾಡಿನ ಗದ್ದೆಯಲ್ಲಿ ಪೊಳಲಿ ಸೀಮೆಯಲ್ಲೂ ದೇವಿಯ ಕುರಿತಾದ ಪ್ರಸಂಗಗಳು ಪ್ರದರ್ಶನವಾಗುವುದಿಲ್ಲ. ಯಾಕೆಂದು ಕೇಳಿದರೆ ಸರಿಯಾದ ಕಾರಣವನ್ನು ಯಾರೂ ಹೇಳಲೊಲ್ಲರು. ಆದರೆ ಕಟೀಲಿನಲ್ಲಿ ದೇವೀ ಮಹಾತ್ಮೆ, ಮಾಡಿದರೆ ಏನಾಗುತ್ತದೆ, ನೋಡಿಯೇ ಬಿಡೋಣ ಅಂತ ಆಟ ಆಡಿಸಿದವರ ಮನೆ ಆಟ ನಡೆಯುತ್ತಿರವಾಗಲೇ ಬೆಂಕಿ ಹತ್ತಿ ಉರಿದು ಹೋಯಿತಂತೆ. ಮತ್ತೊಮ್ಮೆ ವೇಷಧಾರಿಯೊಬ್ಬರು ಮೂರ್ಛೆ ಹೋದರಂತೆ. ಹೀಗೆ ಅನೇಕ ಕಥೆಗಳನ್ನು ಹಿರಿಯರು ಹೇಳುತ್ತಾರೆ. ಹಾಗಾಗಿ ದೇವೀ ಕುರಿತಾದ ಪ್ರಸಂಗಗಳು ಕಟೀಲಿನ ಆಸುಪಾಸಿನಲ್ಲಿ ಆಗುವುದಿಲ್ಲ. ಹಾಗೆಂದು ತಿರುಗಾಟದಲ್ಲಿ ಬೇರೆ ಕಡೆಗಳಲ್ಲಿ ಕಟೀಲು ಮೇಳಗಳು ಅತಿ ಹೆಚ್ಚು ಸಲ ಆಡುವುದು ದೇವೀ ಮಹಾತ್ಮೆ, ಕಟೀಲು ಕ್ಷೇತ್ರ, ಮಹಾತ್ಮೆಗಳನ್ನೇ!

ಕಟೀಲು ಮೇಳದ ದೇವೀ ಮಾಹಾತ್ಮ್ಯೆ ಪ್ರಸಂಗದ ಪ್ರದರ್ಶನ ಭೂಮಿತೂಕದ್ದು. ಸಾಕ್ಷಾತ್ ದೇವಿಯೇ ರಂಗಸ್ಥಳದಲ್ಲಿ ಸನ್ನಿಹಿತಳಾಗುತ್ತಾಳೆಂಬ ಶ್ರದ್ಧೆ, ಪ್ರತೀತಿಗಳು ಹಳೆಗಾಲದಿಂದಲೂ ಹರಿದುಬಂದಿವೆ. ಆ ಕಾಲದಲ್ಲಿ ಈಗಿನಂತೆ ಆಧುನಿಕ ರಂಗಪರಿಕರ ಸೌಲಭ್ಯವಿರಲಿಲ್ಲ. ದೇವಿಯ ವೇಷಧಾರಿ ಅಂದು ನೋಟಕರಿಗೆ ಮಾನವರಾಗಿ ಕಾಣಿಸುತ್ತಿರಲಿಲ್ಲ. ಪಾತ್ರಧಾರಿಯೂ ದೀಕ್ಷಾಬದ್ಧನಾಗಿ ಆಹಾರ ಆಚಾರಗಳಲ್ಲಿ ಆ ದಿನ ಅಷ್ಟೇ ನಿಷ್ಟೆಯಿಂದ ಇರುತ್ತಿದ್ದ.

ಗುಡಿಯಲ್ಲಂದು ಸಪ್ತಶತೀ ಪಾರಾಯಣ, ವಿಶೆಷ ಪೂಜಾರಾಧನೆ, ಸಂತರ್ಪಣೆಗಳು ನಡೆಯುತ್ತಿದ್ದವು. ಅದು ಅಂದು ಚಂಡಮುಂಡಾದಿ ರಾಕ್ಷಸ ವೇಷಗಳು ದೇವಿಗೆ ಸಾಕಷ್ಟು ದೂರ ನಿಂತೇ ಯುದ್ಧ ಮಾಡುತ್ತಿದ್ದವು. ಹತ್ತಿರ ಸುಳಿಯುತ್ತಿರಲಿಲ್ಲ. ರಂಗದಲ್ಲಿ ಹೆಚ್ಚು ಹೊತ್ತು ನಿಲ್ಲುತ್ತಿರಲಿಲ್ಲ. ಕಣ್ ಮುಚ್ಚಿ ತೆರೆಯುವುದರೊಳಗಾಗಿ ಕಾಳಗದ ಅಭಿನಯ ಮಾಡಿ ಓಡುತ್ತಿದ್ದರು. ಪಾತ್ರಧಾರಿಗೂ ದೇವಿಗೂ ವ್ಯತ್ಯಾಸವೇ ತೋರುತ್ತಿರಲಿಲ್ಲ. ಅಂತಹ ತಾದಾತ್ಮ್ಯ.

ಮೇಳದಲ್ಲಿ ಒಟ್ಟು 20ಕ್ಕೂ ಹೆಚ್ಚು ಚಿನ್ನದ, ಬೆಳ್ಳಿಯ ಕಿರೀಟಗಳು ಇವೆ. ಬೆಳ್ಳಿಯ ತೊಟ್ಟಿಲು 6 ಪ್ರತಿಮೇಳದಲ್ಲೂ ಬೆಳ್ಳಿಯ ಶಂಖ ಚಕ್ರ ಗದಾ ಬಾಣ ಬಿಲ್ಲುಗಳು ಇವೆ. ಮಳೆಗಾಲ ಪೂರ್ತಿ ವೇಷಭೂಷಣಗಳ ಪರಿಷ್ಕರಣೆಯ ಕೆಲಸವು ದೇವಳದ ವತಿಯಿಂದ ದೇವಸ್ಥಾನದಲ್ಲಿ ನಡೆಯುತ್ತದೆ.


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ