ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ವ್ಯಕ್ತಿ ವಿಶೇಷ
Share
ಅಜಾತಶತ್ರು -ಸ್ವನಿರ್ಮಿತ ವ್ಯಕ್ತಿತ್ವ : ಅಂಬಾತನಯ ಮುದ್ರಾಡಿ

ಲೇಖಕರು :
ಪಾದೇಕಲ್ಲು ವಿಷ್ಣು ಭಟ್ಟ
ಭಾನುವಾರ, ಆಗಸ್ಟ್ 31 , 2014

``ಜಗದಂಬೆ ವರದೆ ಶುಭವಿಭವೆ ಸುಖದೆ ತಾಯಾಗಿ ಎನ್ನ ಪೊರೆದೆ``- ಎಂದು ಕಾರ್ಕಳ ತಾಲೂಕು ಮುದ್ರಾಡಿ ಸಮೀಪದ ಭಕ್ರೆ ಮಠದ ಶ್ರೀ ಭದ್ರಕಾಳಿ ದೇವಿಯನ್ನು ಭಕ್ತಿಯಿಂದ ಸ್ತುತಿಸಿದ ``ಅಂಬಾತನಯ``ರು ಆ ದೇವಿಯ ಮಗ ತಾನೆಂದು ಈ ಕಾವ್ಯನಾಮವನ್ನು ತಾವೇ ಇರಿಸಿಕೊಂಡವರು. ಅವರು ಕನ್ನಡ ಸಾಹಿತ್ಯಲೋಕದಲ್ಲಿ ಈ ಕಾವ್ಯನಾಮದಿಂದಲೇ ಪ್ರಸಿದ್ಧರು. ಕೇಶವ ಶೆಟ್ಟಿಗಾರ ಎಂಬ ನಿಜನಾಮವನ್ನು ಹೇಳಿದರೆ ಅವರ ಪರಿಚಯವಾಗದು. 1935ರಲ್ಲಿ ಹುಟ್ಟಿದ ಅಂಬಾತನಯರಿಗೆ ಈಗ ಎಂಬತ್ತನೆಯ ವಯಸ್ಸು.

ಸತತ ಮೂವತ್ತಾರು ವರ್ಷಗಳ ಕಾಲ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ದುಡಿದು 1993ರಲ್ಲಿ ನಿವೃತ್ತಿ ಪಡೆದರೂ ಅವರ ಸಾಹಿತ್ಯ ಸೇವೆಯ ಕಾರ್ಯ ಮುಂದುವರಿದೇ ಇದೆ. ಅವರ ಶಾಲಾ ವಿದ್ಯಾಭ್ಯಾಸ ಎಂಟನೆಯ ತರಗತಿಯವರೆಗೆ ಆದರೂ ಲೋಕಜ್ಞಾನ ವಿಶೇಷವಾದುದು. ಅವರು ಕವಿ, ನಾಟಕಕಾರ, ವಚನಕಾರ, ಯಕ್ಷಗಾನ ಪ್ರಸಂಗಕರ್ತ, ಯಕ್ಷ ಗಾನ ಅರ್ಥಧಾರಿ, ಹರಿದಾಸ, ಜಿನದಾಸ, ವಿಡಂಬನಕಾರ, ವಾಗ್ಮಿ, ಚಿಂತನ ಅಂಕಣಕಾರ, ಶಿಕ್ಷಕರ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿ - ಹೀಗೆ ಸಾಹಿತ್ಯದ ವಿವಿಧ ಮಗ್ಗುಲುಗಳಲ್ಲಿ ಪರಿಶ್ರಮ ವಹಿಸಿದವರು; ಕೃಷಿ ಮಾಡಿದವರು. ಯಕ್ಷಗಾನ ಮತ್ತು ನವೋದಯ ಕಾಲದ ಸಾಹಿತ್ಯದ ಹಿನ್ನೆಲೆಯುಳ್ಳ ಅವರ ಎಲ್ಲ ಬರಹ ಗಳು ಇನ್ನೂ ಅಚ್ಚಾಗಿ ಬಂದಿಲ್ಲ. ಪ್ರಕಟಿತ ಕೃತಿ ಗಳು ಇಪ್ಪತ್ತರಷ್ಟಿವೆ. ಅವೆಲ್ಲ ಸಾಹಿತ್ಯದ ವಿಭಿನ್ನ ಪ್ರಕಾರಗಳಿಗೆ ಸೇರಿದುವೆಂಬುದು ವೈಶಿಷ್ಟé.

ಅಧ್ಯಯನಶೀಲ ಸಾಹಿತಿ

ವಿಹಾರವಾಚಿಕೆ 1960ರಲ್ಲಿ ಪ್ರಕಟಗೊಂಡಿತು. ಇದು ಚತುರ್ದಶ ಪಥಗಳ (ಸಾನೆಟ್‌ಗಳ) ಸಂಕಲನ. ಇದು ಇವರ ಮೊತ್ತಮೊದಲ ಪ್ರಕಟಿತ ಕೃತಿ. ಆ ಕೃತಿ ಪ್ರಕಟಗೊಂಡು 55 ವರ್ಷ ಗಳಾದುವು. ಅನಂತರ ಹಲವು ವರ್ಷ ಗಳಿಗೊಂದರಂತೆ ನಿಧಾನವಾಗಿ ಇವರ ಕೃತಿಗಳು ಪ್ರಕಟಗೊಂಡುವು. ಆ ಕೃತಿಗಳ ಮುನ್ನುಡಿಕಾರರನ್ನು ಗಮನಿಸಿದರೆ, ಅಂಬಾ ತನಯರನ್ನು ಪ್ರೋತ್ಸಾಹಿಸಿದ ಹಿರಿಯರನ್ನು ಗಮನಿಸಿದರೆ, ಅವರ ಸಾಹಿತ್ಯ ಸಾಧನೆಗಳ ಪರಿಚಯವಾದೀತು. ಮೊದಲ ಕೃತಿ ವಿಹಾರವಾಚಿಕೆಗೆ (1960) ಮುನ್ನುಡಿ ಬರೆದವರು ರಾಷ್ಟ್ರಕವಿ ಎಂ. ಗೋವಿಂದ ಪೈಗಳು, ಪರಿತ್ಯಕ್ತ ನಾಟಕಕ್ಕೆ (1992) ಬರೆದವರು ಸೇಡಿಯಾಪು ಕೃಷ್ಣಭಟ್ಟರು, ದರ್ಶನ ಧ್ವನಿ ಕವನ ಸಂಕಲನಕ್ಕೆ ಬರೆದವರು ಪ್ರೊ| ಎಸ್‌.ವಿ. ಪರಮೇಶ್ವರ ಭಟ್ಟರು, ಪ್ರಜಾಪ್ರಭುತೆಶ್ವರ ವಚನ ಶತಕ ವಿಡಂಬನ ವಚನಕೃತಿಗೆ ಮುನ್ನುಡಿಕಾರರು ಪ್ರೊ| ಕು.ಶಿ. ಹರಿದಾಸ ಭಟ್ಟರು, ಹೆಸರಿಲ್ಲದವನ ಹೆಸರು ವಿಷ್ಣು ಸಹಸ್ರನಾಮದ 108 ನಾಮಗಳ ಕವನರೂಪ ಮತ್ತು ಧೂರ್ತ ರಾಜಕೀಯ ನಾಯಕಾಷ್ಟೋತ್ತರ ಶತನಾಮಾವಳಿ ವಿಡಂಬನ ನಾಮಾವಳಿ ಕೃತಿಗಳಿಗೆ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು. ಒರತೆ ಚಿಂತನಬರಹಗಳ ಸಂಕಲನದ ಮುನ್ನುಡಿ ಕಾರರು ಪ್ರೊ| ಅಮೃತ ಸೋಮೇಶ್ವರರು, ಗುರು ಗೀತಾಮೃತ ಭಕ್ತಿಗೀತಗಳ ಸಂಕಲನಕ್ಕೆ ಮುನ್ನುಡಿ ಬರೆದವರು ಶತಾವಧಾನಿ ಡಾ| ಆರ್‌. ಗಣೇಶರು, ಶ್ರೀ ದುರ್ಗಾಭಜನೆಗೆ ಮುನ್ನುಡಿ ಬರೆದವರು ಡಾ| ಕಬ್ಬಿನಾಲೆ ವಸಂತ ಭಾರದ್ವಾಜರು. ಕನ್ನಡದ ಹೆಚ್ಚಿನ ಹಿರಿಯ ಕವಿ ಗಳ ಪರಿಚಯ ಸಂಪರ್ಕ ಅಂಬಾತನಯರಿಗಿದೆ.

ಅಂಬಾತನಯರ ಔಪಚಾರಿಕ ವಿದ್ಯಾಭ್ಯಾಸ ಎಂಟನೆಯ ತರಗತಿ ಮಾತ್ರವಾದರೂ ಸತತ ಅಧ್ಯಯನಶೀಲತೆ ಮತ್ತು ವಾಗ್ಮಿತೆಯಿಂದಾಗಿ ಅವರಿಗೆ ಶಾಲೆ-ಕಾಲೇಜುಗಳಲ್ಲಿಯೂ ಧಾರ್ಮಿಕ ಸಾಮಾಜಿಕ ಸಂಘಟನೆಗಳ ಕಾರ್ಯಕ್ರಮಗಳಲ್ಲಿಯೂ ಸಾಕಷ್ಟು ಅವಕಾಶಗಳು ದೊರಕಿವೆ. ಉಪನ್ಯಾಸಕಾರರಾಗಿ ಅವರು ಶಿಕ್ಷಕರ ಸಭೆಗಳಲ್ಲಿ, ಕಾಲೇಜು, ವಿದ್ಯಾರ್ಥಿಗಳ ಸಭೆಗಳಲ್ಲಿ, ಸಾರ್ವಜನಿಕ ಸಭೆಗಳಲ್ಲಿ, ಯತಿವರೇಣ್ಯರಿದ್ದ ಸಭೆ ಗಳಲ್ಲಿ, ಸರಕಾರಿ ಅಧಿಕಾರಿಗಳ ತರಬೇತಿ ಸಭೆಗಳಲ್ಲಿ ಭಾಗವಹಿಸಿದ್ದಾರೆ. ಪರಿತ್ಯಕ್ತ ಎಂಬ ಅವರ ನಾಟಕ ಕೃತಿಯು ನಾಲ್ಕು ವರ್ಷಗಳ ಕಾಲ ಮಂಗಳೂರು ವಿಶ್ವವಿದ್ಯಾನಿಲಯದ ಐಚ್ಛಿಕ ಕನ್ನಡ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವಾಗಿತ್ತೆಂಬುದು ಉಲ್ಲೇಖೀಸಲೇಬೇಕಾದ ವಿಷಯ.

ಸಾಮಾನ್ಯವಾಗಿ ಯೌವನದಲ್ಲಿ ಶೃಂಗಾರ ಸಂಬಂಧಿಯಾದ ಕೃತಿಗಳನ್ನು, ಪಕ್ವ ವಯಸ್ಸಿ ನಲ್ಲಿ ಅಧ್ಯಾತ್ಮ ಸಂಬಂಧಿಯಾದ ಕೃತಿಗಳನ್ನು ಬರೆಯುತ್ತಾರೆಂದು ತಿಳಿಯಲಾಗಿದೆ. ಆದರೆ ಅಂಬಾತನಯರು ಕಿನ್ನರ - ಕಿನ್ನರಿ ಎಂಬ ಪ್ರೇಮಗೀತೆಗಳ ಸಂಕಲನವನ್ನು ಹೊರ ತಂದುದು ಅವರ ಎಪ್ಪತ್ತೈದರ ಮಾಗಿದ ವಯಸ್ಸಿನ ಅನಂತರ. ಕನ್ನಡ ಸಾಹಿತ್ಯದ ದೃಷ್ಟಿಯಿಂದ ನೋಡುವುದಾದರೆ, ಅದು ನವ್ಯೋತ್ತರ - ದಲಿತ ಬಂಡಾಯ ಕಾಲದಲ್ಲಿ ಬಂದುದು. ಪ್ರೇಮಗೀತೆಗಳಿಗೆ ಈ ಚಳುವಳಿಗಳ ಹಂಗಿಲ್ಲವೆಂಬುದನ್ನು ಪ್ರತಿಪಾದಿಸಿದವರವರು.

ಅಂಬಾತನಯ ಮುದ್ರಾಡಿ
ಜನನ : 1935
ಜನನ ಸ್ಥಳ : ಮುದ್ರಾಡಿ
ಕಾರ್ಕಳ ತಾಲೂಕು, ದಕ್ಷಿಣ ಕನ್ನಡ
ಕರ್ನಾಟಕ ರಾಜ್ಯ

ವೃತ್ತಿ, ಪ್ರವೃತ್ತಿ, ಸಾಧನೆ:
ಕವಿ, ನಾಟಕಕಾರ, ವಚನಕಾರ, ಯಕ್ಷಗಾನ ಪ್ರಸಂಗಕರ್ತ, ಯಕ್ಷ ಗಾನ ಅರ್ಥಧಾರಿ, ಹರಿದಾಸ, ಜಿನದಾಸ, ವಿಡಂಬನಕಾರ, ವಾಗ್ಮಿ, ಚಿಂತನ ಅಂಕಣಕಾರ, ಶಿಕ್ಷಕರ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿ - ಹೀಗೆ ಸಾಹಿತ್ಯದ ವಿವಿಧ ಮಗ್ಗುಲುಗಳಲ್ಲಿ ಕೃಷಿ ಮಾಡಿದವರು.

ಪ್ರಶಸ್ತಿಗಳು:
ರಾಜ್ಯೋತ್ಸವ ಪ್ರಶಸ್ತಿ ಪ್ರಶಸ್ತಿಯೂ ಸೇರಿದ೦ತೆ ಹಲಾವ್ರು ಸ೦ಘ-ಸ೦ಸ್ಥೆಗಳಿ೦ದ ಪ್ರಶಸ್ತಿಗಳು ಹಾಗೂ ಸನ್ಮಾನ.

ಭಾವಪ್ರಧಾನ ಅರ್ಥಗಾರಿಕೆ

ಅಂಬಾತನಯರದು ಭಾವಪ್ರಧಾನವಾದ ಅರ್ಥಗಾರಿಕೆಯೆಂದು ಪ್ರಸಿದ್ಧಿ ಇದೆ. ಕರ್ಣ, ರುಕ್ಮಾ೦ಗದ, ಧರ್ಮರಾಯ, ವಿದುರ, ಭರತ, ಅತಿಕಾಯ, ಸಂಜಯ ಮೊದಲಾದ ಅವರ ನಿರೂಪಣೆಗಳು ಅವರಿಗೇ ವಿಶಿಷ್ಟವಾದ ರೀತಿಯಲ್ಲಿ ಹೊರಹೊಮ್ಮು ವಂತಹವು. ಹೊಸಕಾಲದ ಯಕ್ಷಗಾನ ಪ್ರಸಂಗಕರ್ತರಾಗಿಯೂ ಅವರದು ಗಮನಾರ್ಹವಾದ ಹೆಸರು. ಮಹಾಸತಿ ಅನಸೂಯಾ, ಭಕ್ತ ಪ್ರಹ್ಲಾದ ಎರಡು ಕೃತಿಗಳು ಮಾತ್ರವೇ ಪ್ರಕಟಗೊಂಡಿವೆ. ಪಾಂಡುಚರಿತ್ರೆ, ಹನೂಮದ್ವಿಲಾಸ, ರಾಜಾ ಚಿತ್ರಕೇತು, ಆನಂದಲೇಖಾ, ಚಿತ್ರಲೇಖಾ, ಸತೀ ರೂಪಮತಿ ಮೊದಲಾದ ಕೃತಿಗಳು ಪ್ರಕಟಗೊಂಡಿಲ್ಲ. ಕ್ರಿಸ್ತ ಕಾರುಣ್ಯದಂತಹ ವಿಭಿನ್ನ ವಸ್ತುವನ್ನಿರಿಸಿಕೊಂಡು ಪ್ರಸಂಗ ಬರೆದ ಹಿರಿಮೆ ಅವರದು. ಹಿರಿಯ ಅರ್ಥಧಾರಿಗಳಾದ ಮಲ್ಪೆ ಶಂಕರನಾರಾಯಣ ಸಾಮಗ, ರಾಮದಾಸ ಸಾಮಗ, ಶೇಣಿ ಗೋಪಾಲಕೃಷ್ಣ ಭಟ್ಟ, ಪೆರ್ಲ ಕೃಷ್ಣ ಭಟ್ಟ, ಪೊಲ್ಯ ದೇಜಪ್ಪ ಶೆಟ್ಟಿ, ಕುಂಬಳೆ ಸುಂದರ ರಾವ್‌, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಎಂ. ಪ್ರಭಾಕರ ಜೋಶಿ ಮೊದಲಾದ ಹಿರಿಯ ಅರ್ಥಧಾರಿಗಳೊಡನೆ ತಾಳೆಮದ್ದಳೆಗಳಲ್ಲಿ ಭಾಗವಹಿಸಿದ ಅನುಭವಿ ಅಂಬಾತನಯರು. ಕುಂಬಳೆ ಸುಂದರ ರಾವ್‌ ಅವರು ಒಂದೆಡೆ ಅಂಬಾತನಯರ ಬಗೆಗೆ ಹೇಳಿದ ಮಾತು: ""ಅಂಬಾತನಯರಿಗೆ ಭಾಷಾ ಶುದ್ಧಿಯಿದೆ; ಸಿದ್ಧಿಯಿದೆ. ಅಪೂರ್ವವಾದ ಶ್ರುತಿ ಮೇಲಿನ ಧ್ವನಿಶಕ್ತಿಯಿದೆ. ಅವರೊಂದಿಗೆ ಅನೇಕ ಸಲ ಅರ್ಥ ಹೇಳಿದ್ದೇನೆ; ಸಂತೋಷ ತಾಳಿದ್ದೇನೆ. ಅವರು ಸಂವಾದಕ್ಕೆ ಹತ್ತಿರ ಬರುತ್ತಾರೆ; ವಾದಕ್ಕೆ ದೂರ ಸರಿಯುತ್ತಾರೆ.' ನಿಜ ಜೀವನದಲ್ಲೂ ಅವರು ಸಂವಾದ - ಮಾತುಕತೆಗಳಿಗೆ ಹತ್ತಿರ; ವಾದ-ವಿವಾದಗಳಿಗೆ ದೂರ.

ಯಾವ ಕಿರಿಕಿರಿಗಳ ಮಧ್ಯೆಯೂ ಅವು ಗಳಿಗಿಂತ ಬೇರೆಯಾಗಿ ಕುಳಿತು ತಮ್ಮ ಕೆಲಸ ಮಾಡಿಕೊಳ್ಳುವ ಸಾಮರ್ಥ್ಯ ಅಂಬಾತನಯ ರಿಗಿದೆ. ಯಾವ ಜಾತ್ರೆಯ ಗೌಜಿ ಗದ್ದಲಗಳ ನಡುವೆಯೂ ಶಾಲೆಯ ಅಧ್ಯಾಪಕರ ಕೊಠಡಿಯ ವಿನೋದ ಹರಟೆಗಳ ಮಧ್ಯೆಯೂ ಅವರು ಕವಿತಾ ರಚನೆ ಮಾಡಬಲ್ಲರು; ಗಂಭೀರವಾದ ಸಾಹಿತ್ಯ ರಚನೆ ಮಾಡಬಲ್ಲರು. ಯಾವ ಪೂರ್ವಸಿದ್ಧತೆಯಿಲ್ಲದೆ ಆಶುರೂಪದಲ್ಲಿ ಕವಿತಾ ರಚನೆ ಮಾಡುವ ಸಿದ್ಧಿ ಅವರಿಗಿದೆ. ಅವರ ಹರಿಕಥೆಗಳಲ್ಲಿ ಅವರು ಬಳಸುವ ಹೆಚ್ಚಿನ ಎಲ್ಲ ಹಾಡುಗಳು ಅವರ ರಚನೆಗಳೇ. ಮಾತ್ರವಲ್ಲ, ಎಷ್ಟೋ ಹರಿಕಥೆಗಳಲ್ಲಿ ಅಲ್ಲಲ್ಲೇ ಕಟ್ಟಿ ಹಾಡಿದ ಹಾಡುಗಳು ನೂರಾರು. ಆ ಹಾಡುಗಳೆಲ್ಲ ಲಿಖೀತ ರೂಪಕ್ಕೆ ಬರಲೂ ಇಲ್ಲ; ಪುನಃ ಪುನಃ ಹಾಡಲ್ಪಡಲೂ ಇಲ್ಲ. ಮತ್ತೂಮ್ಮೆ ಹೇಳಿದಾಗ ಅದು ಬೇರೆಯೇ ಕವಿತೆ. ಛಂದೋ ಬದ್ಧವಾಗಿ ಇಂತಹ ರಚನೆ ಮಾಡಬೇಕಾದರೆ ಅದಕ್ಕೆ ಬೇರೆಯೇ ಶಕ್ತಿ -ಅಭ್ಯಾಸಗಳು ಬೇಕು.

ಒರತೆ ಎಂಬುದು ಅವರ ಆಕಾಶವಾಣಿ ಚಿಂತನೆಗಳ ಸಂಕಲನ. ಆ ಚಿಂತನ ಲೇಖನ ಗಳೊಳಗೆ ಹಲವಾರು ಕವಿತೆಗಳಿವೆ. ಅಂತಹ ಕವಿತೆಗಳನ್ನು ತುಂಡುಪದಗಳೆಂದೂ ಕರೆಯ ಬಹುದು. ಉದ್ಧರಣೆಗಳ ರೂಪದಲ್ಲಿರುವ ಅವು ಎಲ್ಲಿಂದಲೋ ಎತ್ತಿ ತಂದವುಗಳಲ್ಲ. ಆಯಾ ಸಂದರ್ಭಗಳಲ್ಲೇ ಸೃಷ್ಟಿಯಾದುವು. ಭಾಮಿನಿ ಷಟ್ಪದಿ, ವಾರ್ಧಕ ಷಟ್ಪದಿ, ಸಾಂಗತ್ಯ, ಹೊಸಗನ್ನಡದ ಬೇರೆ ಬೇರೆ ಮಟ್ಟುಗಳು, ಯಕ್ಷಗಾನದ ಬೇರೆ ಬೇರೆ ಮಟ್ಟುಗಳು, ಬೇಂದ್ರೆಯವರ ಮೇಘದೂತದ ಮೇಘ ಛಂದಸ್ಸು ಮೊದಲಾದ ಛಂದೋಬಂಧ ಗಳಲ್ಲಿ ನಿಂತಲ್ಲಿ ಕುಳಿತಲ್ಲಿ ಕವಿತೆ ಕಟ್ಟುವ ಸಾಮರ್ಥ್ಯ ಅಂಬಾತನಯರಿಗಿದೆ. ಈ ಆಶುಕವಿತಾ ಸಾಮರ್ಥ್ಯದಿಂದಲೇ ಅವರು ಎಷ್ಟೋ ಅಷ್ಟಾವಧಾನ ಕಾರ್ಯಕ್ರಮಗಳಿಗೆ ಪ್ರತ್ಛಕರಾಗಿ ಆಮಂತ್ರಿತರಾದವರು. ಡಾ| ಆರ್‌. ಗಣೇಶ್‌ ಮತ್ತು ಡಾ| ಕಬ್ಬಿನಾಲೆ ವಸಂತ ಭಾರದ್ವಾಜರ ಹಲವಾರು ಅಷ್ಟಾವಧಾನಗಳಲ್ಲಿ ಭಾಗವಹಿಸಿದ ಅನುಭವ ಅವರಿಗಿದೆ. ದತ್ತಪದಿ, ಸಮಸ್ಯಾಪೂರಣ ಇತ್ಯಾದಿ ಪ್ರತ್ಛಕರಾಗಿ ಅವರು ನಿರ್ವಹಿಸಿದ್ದಾರೆ. "ನೀನು ಸೈಕಲು ಮೆಟ್ಟಿ ನಾರಿಯ ನೆಲೆಗೆ ಸೇರಿಸಿದೆ' ಎಂಬ ವಾಕ್ಯ ಕೊಟ್ಟು ರಾಮಾಯಣದ ಘಟನೆಗೆ ಅನ್ವಯಿಸಿ ಪದ್ಯ ರಚನೆಗೆ ಅವರು ಕರೆಕೊಟ್ಟರು ಒಂದೆಡೆ. ಇದರ ಪರಿಹಾರ ಬಹಳ ಸುಲಭವೇ ಆದರೂ ಪ್ರೇಕ್ಷಕರಿಗೆ ತುಂಬ ಚಮತ್ಕಾರಪೂರ್ಣವಾಗಿ ಕಂಡುದು ಸುಳ್ಳಲ್ಲ.

ಅಜಾತ ಶತ್ರು

ಸಾಹಿತ್ಯ ಲೋಕದಲ್ಲಾಗಲಿ, ಯಕ್ಷಗಾನ ಲೋಕದಲ್ಲಾಗಲಿ, ಅವರ ಔದ್ಯೋಗಿಕ ಜೀವನದ ಶಿಕ್ಷಣ ಕ್ಷೇತ್ರದಲ್ಲಾಗಲಿ ಅವರು ಅಜಾತಶತ್ರು. ಅವರು ಎಲ್ಲರಿಗೂ ಬೇಕು, ಎಲ್ಲದಕ್ಕೂ ಬೇಕು. ರಾತ್ರಿ ಕಾಡುದಾರಿಯಲ್ಲಿ ಹುಲಿಚಿರತೆಗಳ ಭೇಟಿ ಮಾಡಿದ ಆ ಕಾಲದ ಅನುಭವವೂ ಅವರಿಗಿದೆ; ವಿಮಾನದಲ್ಲಿ ಓಡಾಡಿದ ಅನುಭವವೂ ಅವರಿಗಿದೆ. ಮುದ್ರಾಡಿಯಂತಹ ಹಲವು ಹಳ್ಳಿಗಳ ನಿಕಟ ಪರಿಚಯದೊಂದಿಗೆ ಮುಂಬಯಿಯ ಮಹಾನಗರ ಜೀವನವೂ ಅವರ ಅನುಭವ ಕೋಶದಲ್ಲಿದೆ. ಮುಂಬಯಿಯಲ್ಲಿ ಅವರ ಅಭಿಮಾನಿ ಬಳಗವಿದೆ. ಅವರ 75ರ ಅಭಿನಂದನೆಯೊಡನೆ ಅವರ ಸಾಹಿತ್ಯದ ಬಗೆಗೆ ಒಂದು ದಿನದ ವಿಚಾರಗೋಷ್ಠಿ ನಡೆಸಿ "ಸುಮನಸ' ಎಂಬ ಅಭಿನಂದನ ಗ್ರಂಥವನ್ನು ಮುಂಬಯಿಯಲ್ಲಿ ಸಮರ್ಪಿಸಲಾಯಿತು. ಈ ಗೌರವವಲ್ಲದೆ ರಾಜ್ಯ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವಗಳು ಅವರಿಗೆ ಸಂದಿವೆ.

ಸ್ವಂತ ಆಸಕ್ತಿಯಿಂದ ಅಧ್ಯಯನ ಮಾಡಿ ಬೆಳೆದ ವ್ಯಕ್ತಿತ್ವ ಅಂಬಾತನಯರದು. ದನ ಮೇಯಿಸುತ್ತಿದ್ದ ಹುಡುಗನನ್ನು ಶಾಲೆಗೆ ಕರೆತಂದು ಪ್ರೋತ್ಸಾಹಿಸಿ ಮಾರ್ಗದರ್ಶನ ಮಾಡಿದ ಗುರು ಮುದ್ರಾಡಿಯ ಮರಿಯಪ್ಪ ಕಲ್ಕೂರರನ್ನು ಅವರು ಈಗಲೂ ನೆನೆಯುತ್ತಾರೆ. ಸಾಹಿತ್ಯ ಪ್ರೇರಣೆಯನ್ನು ಅಂಬಾತನಯರಲ್ಲಿ ಬಿತ್ತಿದ ಗುರುವೆಂದರೆ ಮಕ್ಕಳ ಸಾಹಿತಿ ಪಳಕಳ ಸೀತಾರಾಮ ಭಟ್ಟರು.

ಇಂದು ಅಂಬಾತನಯರು 80ರ ಹಿರಿಯರು. ಹಿರಿಯರ ಮೇಲೆ ಗೌರವ; ಕಿರಿಯರ ಮೇಲೆ ವಿಶ್ವಾಸ, ಒಳಿತಿನ ನಿರೀಕ್ಷೆ , ಆಶಾವಾದ, ಚಿಂತನ -ಪ್ರಯತ್ನ, ಕಲಾಗೌರವ - ಅವರ ಬದುಕಿನಿಂದ ನಾವು ಕಲಿಯಬೇಕಾದ ಮೌಲ್ಯಗಳು.

*********************

ಕೃಪೆ : http://udayavani.com


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
JAGADEESHA.N(12/24/2014)
good
Ram Hegde Keremane(9/2/2014)
ಅಂಬಾತನಯ ಮುದ್ರಾಡಿಯವರನ್ನು ನಾನು ಚೆನ್ನಾಗಿ ಬಲ್ಲೆ.ಅವರ ನಿರರ್ಗಳ ಮಾತುಗಾರಿಕೆ,ಅವರ ಅತ್ಯಂತ ಸುಂದರವಾದ ಕನ್ನಡ ಬರವಣಿಗೆ,ಯಕ್ಷಗಾನದ ಕಾವ್ಯಮಯ ಅರ್ಥಗಾರಿಕೆ,ಎಲ್ಲವೂ ವಿಶಿಷ್ಟವಾದವು.
Naravi Vittal Hegde(9/2/2014)
Ambhatanayaru Sharadatanayaroo houdu
Shankar Shetty Padu Kudoor(9/1/2014)
Very well written. I am proud to be have hailed from his neighboring village. Thanks for this piece.
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ