ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ನಾವಿದ್ದಲ್ಲೇ ತಾಳಮದ್ದಲೆ

ಲೇಖಕರು :
ಪ್ರಿಯಾ ಕೆರ್ವಾಶೆ
ಮ೦ಗಳವಾರ, ಸೆಪ್ಟೆ೦ಬರ್ 2 , 2014

ಪಟ್ಟಣಕ್ಕೆ ಬಂದ ವಲಸಿಗರು ಯಕ್ಷಗಾನವನ್ನೂ ಕರೆತಂದರು.

ಎಷ್ಟೋ ಕಲೆಗಳು ವಲಸೆಯಿಂದ ನಶಿಸಿದ್ದು ಆಗಿದೆ. ಆದರೆ ತಾಳಮದ್ದಳೆ ಹಾಗಾಗಿಲ್ಲ. ಉದ್ಯೋಗ ಅರಸುತ್ತಾ ಸಿಟಿಗೆ ಬಂದವರೂ ಈ ಕಲೆಯನ್ನು ಮರೆತಿಲ್ಲ. ಕರಾವಳಿ, ಉತ್ತರಕನ್ನಡ ಜಿಲ್ಲೆಯ ತಾಳಮದ್ದಳೆ ಘಮಲು ಇಂದು ಎಲ್ಲಾ ಸಿಟಿಗಳೂ ಹರಡುತ್ತಿದೆ. ಇದಕ್ಕೆ ಕಾರಣ ಕಲೆಯ ಮೇಲಿನ ಪ್ರೀತಿ.

ಭಾನುವಾರದ ಒಂದು ಸಂಜೆ. ದೊಡ್ಡ ನಗರದ ಜನಸಮುದಾಯ ಖುಷಿ, ಬೇಜಾರಿನಲ್ಲಿ ವೀಕ್‌ ಆಫ್ನ ಕೋಳಿ ನಿದ್ದೆ ಮುಗಿಸಿ ಆಕಳಿಸುತ್ತ ಕಾಫಿ ಹೀರುವ ಹೊತ್ತಿಗೆ, ಒಂದಿಷ್ಟು ಮಂದಿ ಯುವಕರ ಗುಂಪು, ನೀಟಾಗಿ ಬಿಳಿ ಪಂಚೆಯುಟ್ಟು ಯಾವುದೋ ಲಹರಿಯಲ್ಲಿರುತ್ತಾರೆ.

'ಊರಲ್ಲಿದ್ದಿದ್ದರೆ ಧೋ ಎಂದು ಸುರಿವ ಮಳೆಯ ಅರ್ಭಟವನ್ನೂ ಮೀರಿ ಸ್ವರ ತೆಗೆಯಬೇಕಿತ್ತು. ಇಲ್ಲಿ ಅಂತಹ ಒಂದೇ ಒಂದು ಮಳೆಯನ್ನೂ ಕಂಡಿಲ್ವಲ್ಲಾ ಮಾರಾಯಾ..' ಅಂತ ಒಬ್ಬ ಯುವಕ ಊರನ್ನು ನೆನಪಿಸಿಕೊಂಡರೆ ಅದು ಪೀಠಿಕೆ. ಮುಂದೆ ಊರಿನ ಕಥೆ, ಭೂತ, ವರ್ತಮಾನ, ಭವಿಷ್ಯತ್‌ ಕಾಲಗಳಲ್ಲಿ ಹರಿದಾಡಿಬಿಡುತ್ತದೆ. ಈ ಹರಟೆ ನಿಲ್ಲಬೇಕಿದ್ದರೆ, ಅತ್ತಲಿಂದ ಭಾಗವತರು, 'ಶ್ರೀ...ಅಂಬುರುಹದಳ ನೇತ್ರೆ...' ಅಂತ ಭಾಗವತಿಕೆ ಆರಂಭಿಸಬೇಕು. ಆರಂಭದ ಪಾತ್ರ ಇರುವವನು ಅಲ್ಲಿಂದ ನಿರ್ಗಮಿಸುತ್ತಾನೆ. ಉಳಿದವರು ಮಾತು ಮುಂದುವರಿಸುತ್ತಾರೆ. ತಮ್ಮ ಪಾತ್ರ ಬರುವವರೆಗೂ ಹರಟೆ ಹೊಡೆಯುತ್ತಿದ್ದರೂ ಒಂದು ಕಿವಿ ಭಾಗವತರ ಪದ್ಯದತ್ತ ನೆಟ್ಟಿರುತ್ತದೆ.

ತಮ್ಮ ಪಾತ್ರಪ್ರಸಂಗ ಆರಂಭವಾಯಿತು ಅನ್ನುವಾಗ, ಯಾವ ಗಡಿಬಿಡಿಯೂ ಇಲ್ಲದೇ ಸಾವಕಾಶದಿಂದ ಎದ್ದುಹೋಗಿ ಪಾತ್ರವನ್ನು ಆವಾಹಿಸಕೊಂಡೋ, ಪಾತ್ರದ ಹೊರಗೆ ನಿಂತು ಅದರ ಆಳವನ್ನು ಕೆದಕುತ್ತಲೋ ಅರ್ಥಗಾರಿಕೆಗೆ ಮೊದಲುಮಾಡುತ್ತಾರೆ.

ಹೌದು. ತಾಳಮದ್ದೆಳನೇ. ಹಳ್ಳಿ ಬಿಟ್ಟು ಸಿಟಿಗೆ ಬಂದವರು ತಾಳದ ಕನಸು ನನಸು ಮಾಡಿಕೊಳ್ಳುವುದು ಹೀಗೇ...

...ಅಷ್ಟಕ್ಕೂ ಹೀಗೆ 'ತಾಳಮದ್ದಳೆ' ಅನ್ನುವ ಕರಾವಳಿ ಕರ್ನಾಟಕದ ಕಲೆ ಜಾಗತಿಕ ಯುಗದಲ್ಲಿ ತನ್ನ ಬಾಹುಳ್ಯವನ್ನು ವಿಸ್ತರಿಸುತ್ತಾ ಹೋಗುತ್ತಿರುವುದೇ ಅಚ್ಚರಿಯ ಬೆಳವಣಿಗೆ.

ಎರಡು ದಶಕಗಳ ಹಿಂದೆ ಕರಾವಳಿ ಜಿಲ್ಲೆಗಳಲ್ಲಿ ಬೇಸಿಗೆಯಲ್ಲಿ ಯಕ್ಷಗಾನ ಅಬ್ಬರ ಮೇಳೈಸುತ್ತಿದ್ದರೆ, ಮಳೆಗಾಲದಲ್ಲಿ ತಾಳಮದ್ದಲೆಯ ಖದರು. ಇಡೀ ದಿನ ಒಂದೇ ಶೃತಿಯಲ್ಲಿ ಸುರಿವ ಮಳೆ. ಕೃಷಿ ಕೆಲಸಕ್ಕೂ ವಿರಾಮ. ದೊಡ್ಡ ಮನೆಯ ವಿಶಾಲ ಪಡಸಾಲೆಗಳಲ್ಲಿ, ದೇವಸ್ಥಾನ, ಭಜನಾ ಮಂದಿರಗಳಲ್ಲಿ ತಾಳಮದ್ದಳೆ ಗಮ್ಮತ್ತು. ತಾಳಮದ್ದಳೆಯಲ್ಲಿ ಚೆಂಡೆಯ ಪೆಟ್ಟಿಗೆ ಧೀಂಗಿಣ ಕುಣಿಯುವ ವೇಷಗಳಿಲ್ಲ. ಬದಲಿಗೆ ವಾಚಿಕದ ಅತ್ಯುನ್ನತ ಎತ್ತರವಿದೆ.

ಅಂದಿದ್ದ ಕಾಲ, ದೇಶಸ್ಥಿತಿ ಇಂದಿಲ್ಲ. ಬದುಕಿನ ಆದ್ಯತೆ ಬದಲಾಗಿದೆ. ವಿದ್ಯಾವಂತ ಯುವ ವರ್ಗ ಪಟ್ಟಣದ ಕಡೆಗೆ ಶಿಫ್ಟ್ ಆಗುತ್ತಿರುವಂತೆ ತಾಳಮದ್ದಳೆ ಪರಂಪರೆ ಊರಲ್ಲಿ ಹಿಂದಿನಂತೆಯೇ ನಡೆಯುತ್ತಿದೆಯಾ? ಅಥವಾ ಹಿರಿಯರಷ್ಟೇ ಅದರಲ್ಲಿದ್ದರಾ? ಉದ್ಯೋಗ ಅರಸಿ ಊರಿಂದ ಹೊರಬಿದ್ದಿರುವ ಹುಡುಗರು ಏನುಮಾಡುತ್ತಿದ್ದಾರೆ ಅನ್ನುವ ಪ್ರಶ್ನೆ ಬರುವುದು ಸಾಮಾನ್ಯ.

ಹುಟ್ಟಿಂದ ಭಾಗವತಿಕೆ, ಅರ್ಥಗಾರಿಕೆ ಕೇಳಿ ಬೆಳೆದ ಊರಕಡೆಯ ಹುಡುಗರು ಸೀಮಾತೀತವಾಗಿ 'ವಿಶ್ವ ಮಾನವ' ರಾಗಿದ್ದಾರೆ. ಅದೃಷ್ಟವಶಾತ್‌ ಹಾಗೆ ಹರಿದು ಹಂಚಿ ಹೋದವರು ಅಲ್ಲಲ್ಲಿ ಒಟ್ಟಾಗಿದ್ದಾರೆ. ತಮ್ಮ ತಾಳಮದ್ದಳೆ ಹುಚ್ಚನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಸ್ಯಾನ್‌ಫ್ರಾನ್ಸಿಸ್ಕೋದಿಂದ ಬೆಂಗಳೂರಿನವರೆಗೂ ಅಂತಹ ಸಾಕಷ್ಟು ಉತ್ಸಾಹಿ ತಂಡಗಳು ಕಾಣಸಿಗುತ್ತವೆ. ಮುಂಬೈ ಕನ್ನಡಿಗರಂತೂ ವಾರದ ಕೊನೆಯಲ್ಲಿ ಒಂದಲ್ಲ ಒಂದು ಕಡೆ 'ತಾಳಮದ್ದಳೆ' ನೆಪದಲ್ಲಿ ಒಟ್ಟಾಗುತ್ತಾರೆ.

ಊರಲ್ಲಿ ಹೇಗಿದೆ?

ಹೌದು, ಊರಿಂದ ಹರಿದು ಬಂದ ಕಲಾವಿದರಿಲ್ಲದ ಊರಿನ ಚಿತ್ರಣ ಹೇಗಿದೆ? ಕಲಾವಿದರೇ ಇಲ್ಲದೆ ಭಣಗುಡುತ್ತಿದೆಯಾ ? ನೀವು ಹೀಗಂದುಕೊಂಡಿದ್ದರೆ ನಿಮ್ಮ ಊಹೆ ಸಂಪೂರ್ಣ ತಪ್ಪು.

ಊರಿನಲ್ಲಿ ತಾಳಮದ್ದಳೆ ಕಲಾವಿದರಿಗೆ ಒಂದು ಕ್ಷಣವೂ ಬಿಡುವಿಲ್ಲ. ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲೂ ತಾಳಮದ್ದಳೆ ಏರ್ಪಡಿಸುವುದು ಫ್ಯಾಶನ್‌ ಆಗಿದೆ. ಮೊದಲಾದರೆ ಸಂಪರ್ಕ ವ್ಯವಸ್ಥೆ ಇಷ್ಟೊಂದು ಪ್ರಬಲವಾಗಿರಲಿಲ್ಲ. ಈಗ ಎಂತಹ ಕುಗ್ರಾಮಕ್ಕೂ ಬಸ್‌ ವ್ಯವಸ್ಥೆ ಇರುವುದರಿಂದ ಎಲ್ಲೆಡೆ ತಾಳಮದ್ದಳೆ. ಹಾಗಾಗಿ ಕಲಾವಿದರಿಗೆ, ತಾಳಮದ್ದಳೆ ಪ್ರಿಯರಿಗೆ, ಆಯೋಜಕರಿಗೆ ಸುಗ್ಗಿ.

ಜಬ್ಟಾರ್‌ ಸುಮೊ, ಖ್ಯಾತಿ ಅರ್ಥಧಾರಿ
ಹಿರಿಯ ಅರ್ಥಧಾರಿ ಜಬ್ಟಾರ್‌ ಸಾಮು ಹೇಳುವಂತೆ, 'ಮೊದಲು ಒಂದು ಸೀಮಿತ ಚೌಕಟ್ಟಿನೊಳಗೆ ಕಾರ್ಯಭಾರ ಮಾಡುತ್ತಿದ್ದ ತಾಳಮದ್ದಳೆ ಇಂದು ಪ್ರವಾಹೋಪಾದಿಯಲ್ಲಿ ನಡೆಯುತ್ತಿದೆ. ವೃತ್ತಿಪರ ಕಲಾವಿದರಾದ ನಾವು ಬೆಳಗ್ಗೆ ಕಾಸರಗೋಡಿನ ಪೈವಳಿಕೆಯಲ್ಲಿದ್ದರೆ, ಮಧ್ಯಾಹ್ನ ಪರಂಗಿಪೇಟೆಯಲ್ಲಿರುತ್ತೇವೆ, ರಾತ್ರಿಗೆ ಬ್ರಹ್ಮಾವರದಲ್ಲಿದ್ದರೆ, ಮರುದಿನ ಬೆಳಗ್ಗೆ ಕಾರ್ಕಳ. ಎಷ್ಟೋ ಸಲ ಸಮಯವಿಲ್ಲದೆ ಆಹ್ವಾನವನ್ನು ನಿರಾಕರಿಸಿ ಬಿಡುತ್ತೇವೆ. ನಿಜಕ್ಕೂ ಈಗ 'ಕೂಟ' ದ ಕಲಾವಿದರಿಗೆ ಶುಕ್ರದೆಸೆ. ಕಾಸರಗೋಡಿನಿಂದ ಅಂಕೋಲಾವರೆಗೂ, ಕೆಲವೊಮ್ಮೆ ಹೊರರಾಜ್ಯ, ಹೊರದೇಶದವರೆಗೂ ನಮ್ಮ ವ್ಯಾಪ್ತಿ ವಿಸ್ತರಿಸುವುದುಂಟು.'

ಕರಾವಳಿ ಮಲೆನಾಡು ಪ್ರದೇಶದಲ್ಲಿ ಬಹಳಷ್ಟು ಹೊಸ ಕಲಾವಿದರು ಪ್ರಸಿದ್ಧಿಗೆ ಬರುತ್ತಿದ್ದಾರೆ. ವಾಸುದೇವ ರಂಗಭಟ್ಟ , ವಾದಿರಾಜ ಕಲ್ಲೂರಾಯ, ರಮಣಾಚಾರ್‌, ಹರೀಶ ಬಳಂಚಿಮೊಗರು ...ಮೊದಲಾದ ಉದಯೋನ್ಮುಖ ಕಲಾವಿದರ ಗಡಣವೇ ತಾಳಮದ್ದಳೆ ಕ್ಷೇತ್ರದಲ್ಲಿ ಜೀವಸಂಚಾರ ಮೂಡಿಸುತ್ತಿದೆ...

ಅರ್ಥದಾರಿ ಸುಧನ್ವ ದೇರಾಜೆ ಹೇಳ್ಳೋದು ಹೀಗೆ- "ನಾವು ಏಳೆಂಟು ಮಂದಿ ಜತೆಸೇರಿ ವೀಕೆಂಡ್‌ಗಳಲ್ಲಿ ತಾಳಮದ್ದಳೆ ಕೂಟ ನಡೆಸುತ್ತೇವೆ. ನಮ್ಮಂತಹದ್ದೇ ಹಲವು ತಂಡಗಳಿವೆ. ಕರಾವಳಿ ಕರ್ನಾಟಕದ ಭಾಗಗಳಾದ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡಜಿಲ್ಲೆಯವರದೇ ಇದರಲ್ಲಿ ಸಿಂಹಪಾಲು. ಈ ಜಿಲ್ಲೆಗಳಿಂದ ಬಂದ ಲಕ್ಷಾಂತರ ಜನರಿರುವ ಬೆಂಗಳೂರಿನಲ್ಲಿ ಸಾಕಷ್ಟು ಪ್ರೇಕ್ಷಕ ವರ್ಗವೂ ಇದೆ. ಆರ್‌.ಕೆ. ಪಂಜಾಜೆ ಅವರಂತಹ ಹಿರಿಯ ಅರ್ಥಧಾರಿಗಳು ಇಪ್ಪತ್ತು ವರ್ಷಗಳಷ್ಟು ಹಿಂದಿಂದಲೇ ಇಲ್ಲಿ ತಾಳಮದ್ದಳೆ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದ್ದಾರೆ'

ಉದ್ಯೋಗವನ್ನು ಅರಸುತ್ತಾ ಬಂದವರು ಕೇವಲ ಅವರು ಮಾತ್ರ ಬಂದಿಲ್ಲ. ಕೊಂಕಳಲ್ಲಿ ಕಲೆಯನ್ನು ಹೊತ್ತುತಂದಿದ್ದಾರೆ. ಹೀಗೆ ಕಲೆಯ ಹರಿವೊಂದು ಮುಖ್ಯಪ್ರವಾಹವಾಗಿಯೂ, ಕವಲು ಕವಲಾಗಿಯೂ ಏಕಕಾಲದಲ್ಲಿ ಹರಿಯುತ್ತಿರುವುದಕ್ಕೆ ಮುಖ್ಯಕಾರಣ ತಾಳಮದ್ದಳೆಯ ಮೋಡಿ. ಕಲಾವಿದರೊಬ್ಬರು ತಮಾಷೆಯಾಗಿ ಹೀಗೆ ಹೇಳುತ್ತಾರೆ. 'ಇದೊಂದು ಚಟ. ಯಕ್ಷಗಾನ ಕಲಾವಿದನೊಬ್ಬ ಚಟ್ಟಹತ್ತಿದಾಗಲೂ ಚೆಂಡೆ ಪೆಟ್ಟು ಕೇಳಿ ಫ‌ಟ್ಟ ಎದ್ದನಂತೆ!'

ಊರು ಬಿಟ್ಟು ಕೆಲಸ ಅರಸಿ ಪಟ್ಟಣದಲ್ಲಿ ನೆಲೆ ಕಂಡುಕೊಂಡಿರುವವರಿಗೂ ಇಂಥ ಚಟವಿದೆ. ಅದರ ಫ‌ಲವೇ ತಾಳಮದ್ದಳೆ.

ಹಿಂದೆಲ್ಲ ತಾಳಮದ್ದಳೆ ಸೀಮಿತ ವ್ಯಾಪ್ತಿಯಲ್ಲಿ, ಸೀಮಿತ ಕಲಾವಿದರ ಕೂಡುವಿಕೆಯಲ್ಲಿ ಕೇವಲ ಮಳೆಗಾಲದಲ್ಲಿ ಮಾತ್ರ ನಡೆಯುತ್ತಿತ್ತು. ಕೆಲವೊಮ್ಮೆ 'ಮಹಾನ್‌' ಕಲಾವಿದರ ಮಾತ್ಸರ್ಯದಲ್ಲಿ ಹೊಸ ಕಲಾವಿದರಿಗೆ ಅವಕಾಶವೇ ಇರುತ್ತಿರಲಲ್ಲ. ಈಗ ಚಿತ್ರಣ ಸಂಪೂರ್ಣ ಬದಲಾಗಿದೆ. ನಾಮಕರಣ, ಮನೆ ಗೃಹಪ್ರವೇಶಗಂತಹ ಖಾಸಗಿ ಕಾರ್ಯಕ್ರಮದಿಂದ ಹಿಡಿದು ಕರಾವಳಿ ಭಾಗಗಳಲ್ಲಿ ನಡೆಯುವ ಸಮಸ್ತ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ತಾಳಮದ್ದಳೆ ಅನಿವಾರ್ಯ ಭಾಗದಂತಾಗಿದೆ. ಕಾಲದ ಹಂಗೂ ಇಲ್ಲ. ಹೊಸ, ಹಳೆ ಕಲಾವಿದರಿಗೆ ಸಾಕಷ್ಟು ಉತ್ತೇಜನ ಸಿಗುತ್ತದೆ. - ಜಬ್ಟಾರ್‌ ಸುಮೊ. , ಖ್ಯಾತಿ ಅರ್ಥಧಾರಿ

ಕೃಪೆ : http://udayavani.com


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ