ಮಾತಿನ ಮೋಡಿಗಾರ ಮಂಕಿ ಈಶ್ವರ ನಾಯ್ಕ್ ಗೆ ``ಯಕ್ಷ ಭರವಸೆ`` ಪ್ರಶಸ್ತಿ
ಲೇಖಕರು : ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಸೋಮವಾರ, ಒಕ್ಟೋಬರ್ 20 , 2014
|
ಮಣಿಪಾಲ ಅಕಾಡೆಮಿಯ ಕುಂದಾಪುರ ಭಂಡಾರ್ ಕಾರ್ಸ್ ಕಾಲೇಜು ಪ್ರತಿವರ್ಷ ನೆಡೆಸಿಕೊಂಡು ಬರುವ ರಾಜೋತ್ಸವದಲ್ಲಿ, ವಿಶೇಷ ತಾಳಮದ್ದಳೆಯನ್ನು ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿದೆ. ಇತರ ವಿದ್ಯಾಸಂಸ್ಥೆಗಳಿಗೆ ಆದರ್ಶಪ್ರಾಯವಾದ ಈ ಕಾರ್ಯಕ್ರಮದಲ್ಲಿ ತಾಳಮದ್ದಳೆ ಕಾರ್ಯಕ್ರಮದ ಪ್ರಾರಂಬಿಸಿದ ಪ್ರಾಂಶುಪಾಲರೆಂಬ ಹೆಗ್ಗಳಿಕೆಗೆ ಪಾತ್ರರಾದ ಕಲಾಪೋಷಕ ಡಾ.ಶಾಂತಾರಾಮ್ ಅವರು ಕಳೆದ 3 ವರ್ಷದಿಂದ ತಿಟ್ಟು ಮಟ್ಟುಗಳ ಭೇದವಿಲ್ಲದೇ ಯಕ್ಷಗಾನವನ್ನು ಭವಿಷ್ಯತ್ತಿನೆಡೆಗೆ ಸಾಗಿಸಬಲ್ಲ ಯುವ ಪ್ರತಿಭಾವಂತ ವೃತ್ತಿ ಕಲಾವಿದರೊಬ್ಬರಿಗೆ ಡಾ.ಶಾಂತಾರಾಮ್ ಪುರಸ್ಕಾರ ನೀಡಿ ರಾಜ್ಯೋತ್ಸದಂದು ನೀಡಿ ಗೌರವಿಸುತಿದ್ದಾರೆ.
|
ಕಳೆದೆರಡು ವರ್ಷಗಳಲ್ಲಿ ಈ ಪುರಸ್ಕಾರಕ್ಕೆ ಭಾಜನರಾದವರು ನಡುತಿಟ್ಟಿನ ಕುಂದಾಪುರ ಶೈಲಿಯ ಸ್ತ್ರೀವೇಷಧಾರಿ ಹೆನ್ನಾಬೈಲು ಸಂಜೀವ ಶೆಟ್ಟಿ ಮತ್ತು ತೆಂಕುತಿಟ್ಟಿನ ಪ್ರತಿಭಾವಂತ ಭಾಗವತ ಪಟ್ಲ ಸತೀಶ ಶೆಟ್ಟಿಯವರು. ಈ ವರ್ಷದ ರಾಜ್ಯೋತ್ಸವದಂದು ನವೆ೦ಬರ್ 1 ರಂದು ನೀಡುವ ಈ ಪ್ರಶಸ್ತಿಗೆ ಭಾಜನರಾಗುವವರು ಬಡಾಬಡಗುತಿಟ್ಟಿನ ಭರವಸೆಯ ಪ್ರತಿಭಾವಂತ ಯುವ ಕಲಾವಿದ ಮಂಕಿ ಈಶ್ವರ ನಾಯ್ಕರು.
ಯಕ್ಷಗಾನಕ್ಕೆ ಪ್ರೇಕ್ಷಕರಿಲ್ಲ ಎಂಬ ಕೂಗು ಒಂದೆಡೆಯಾದರೆ ಕಲಾವಿದರ ಕೊರತೆ ಇನ್ನೊಂದೆಡೆ ಈ ನಿಟ್ಟಿನಲ್ಲಿ ಈ ಭವ್ಯ ಕಲೆಗೆ ಭವಿಷ್ಯ ಇಲ್ಲ ಎನ್ನುವು ಈ ಕಾಲಘಟ್ಟದಲ್ಲಿ ಕಾಣಬರುವ ಕೆಲವೇ ಕೆಲವು ಯುವ ಕಲಾವಿದರಲ್ಲಿ ಮಂಕಿ ಈಶ್ವರ ನಾಯ್ಕರು ಒಂದು ಆಶಾಕಿರಣ. ಭವಿಷ್ಯದಲ್ಲಿ ಮೇರು ಕಲಾವಿದನಾಗುವ ಎಲ್ಲಾ ಅರ್ಹತೆ ಇರುವ ಇವರು ಇಂದು ರಂಗದಲ್ಲಿ ತನ್ನ ಅತ್ಯುತ್ತಮ ಪಾತ್ರಪೋಷಣೆ, ಸುಂದರವಾದ ರೂಪ, ಆಳಂಗ, ಶುದ್ದ ಸಾಂಪ್ರದಾಯದ ನೃತ್ಯ, ಹೆಚ್ಚೂ ಅಲ್ಲದ ಕಡಿಮೆಯೂ ಅಲ್ಲದ ಮಾತುಗಾರಿಕೆಯಿಂದ ಪುಂಡುವೇಷದಲ್ಲಿ ಅತ್ಯುನ್ನತಿಗೇರಿ ಸದ್ಯ ಪುರುಷ ವೇಷಧಾರಿಯ ಸಾಲಿಗೆ ಬಂದು ಮುಟ್ಟಿದ್ದಾರೆ. ಸೌಮ್ಯ ಸ್ವಭಾವದ ನಾಯಕ ಪಾತ್ರಗಳಿಗೆ ಶಿರಿಯಾರ ಮಂಜುನಾಯ್ಕರ ಶೈಲಿಯಲ್ಲಿ ಜೀವ ತುಂಬಬಲ್ಲ ಇವರ ಸ್ವಭಾವಕ್ಕೆ ತಕ್ಕ ಸೌಮ್ಯ ಪಾತ್ರಗಳು ಹೊಸ ನವೀನ ಪ್ರಸಂಗಗಳಲ್ಲಿ ಅತ್ಯುತ್ತಮವೆಂದು ಗುರುತಿಸಲ್ಪಟ್ಟಿದೆ.
ಬಾಲ್ಯ ಮತ್ತು ಶಿಕ್ಷಣ
ಬಡಗು ತಿಟ್ಟು ಯಕ್ಷಗಾನದ ಆಡೊಂಬಲವಾದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮೀಪ ಮಂಕಿ ಎಂಬಲ್ಲಿ ಯಕ್ಷಗಾನದ ಯಾವುದೇ ಪೂರ್ವ ಇತಿಹಾಸವಿಲ್ಲದ ಕುಟುಂಬದ ಹನುಮಂತ ನಾಯ್ಕ್ ಮತ್ತು ಲಕ್ಷ್ಮಿ ದಂಪತಿಗಳ ಪುತ್ರನಾಗಿ 1977ರಲ್ಲಿ ಜನಿಸಿದ ಇವರು ಜೀವನದಲ್ಲಿ ಶಿಕ್ಷಕನಾಗಬೇಕೆಂಬ ಮಹದಾಸೆಯಿಂದ ಸರಕಾರಿ ಕಾಲೇಜಿನಲ್ಲಿ ಪಿ. ಯು. ಸಿ. ವರೆಗೆ ಶಿಕ್ಷಣ ಪಡೆದರು. ಕಿತ್ತು ತಿನ್ನುವ ಬಡತನದಿಂದ ಆಸೆ ಕೈಗೂಡದೆ ಇದ್ದಾಗ ಕುಟುಂಬ ವರ್ಗದವರ ವಿರೋದದ ನಡುವೆಯೂ ಕೆರಮನೆ ಶಂಭು ಹೆಗಡೆಯವರ ಗುಣವಂತೆಯ ಶ್ರೀಮಯ ಯಕ್ಷಗಾನ ಕೇಂದ್ರ ಕೈಬೀಸಿ ಕರೆಯಿತು. ಹೆರಂಜಾಲು ವೆಂಕಟರಮಣ ಗಾಣಿಗ ಮತ್ತು ಹೆರಂಜಾಲು ಗೋಪಾಲ ಗಾಣಿಗರ ಸಮರ್ಥ ನಿರ್ದೇಶನದಲ್ಲಿ ಅಪ್ಪಟ ಪರಂಪರೆಯ ಬಡಗು ತಿಟ್ಟು ಕಲಾವಿದನಾಗಿ ಮೂಡಿಬಂದರು.
|
ಮಂಕಿ ಈಶ್ವರ ನಾಯ್ಕ್ |
 |
ಜನನ |
: |
1977 |
ಜನನ ಸ್ಥಳ |
: |
ಮಂಕಿ, ಹೊನ್ನಾವರ
ಉತ್ತರ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
|
ಕಲಾಸೇವೆ:
ಗುಂಡಬಾಳ, ಅಮೃತೇಶ್ವರಿ, ನೀಲಾವರ, ಪೇರ್ಡೂರು ಮೇಳಗಳಲ್ಲಿ ತಿರುಗಾಟ ಪೂರೈಸಿ, ಪ್ರಸ್ತುತ ಸಾಲಿಗ್ರಾಮ ಮೇಳದಲ್ಲಿ ಪ್ರಧಾನ ಪುರುಷ ವೇಷಧಾರಿಯಾಗಿ ಸೇವೆ ಸಲ್ಲಿಸುತಿದ್ದಾರೆ
|
ಪ್ರಶಸ್ತಿಗಳು:
ಹಲಾವಾರು ಸ೦ಘ-ಸ೦ಸ್ಥೆಗಳಿ೦ದ ವಿವಿಧ ಪ್ರಶಸ್ತಿಗಳು.
|
|
|
ವೃತ್ತಿ ಹಾಗೂ ಕಲಾಸೇವೆ
1995ರಲ್ಲಿ ಉತ್ತರ ಕನ್ನಡದ ಬೈಲೂರಿನಲ್ಲಿ ಬಾಲಗೋಪಾಲನಾಗಿ ರಂಗ ಪ್ರವೇಶ ಮಾಡಿದ ಇವರು ಮತ್ತೆ ಕಲಾ ರಂಗಸ್ಥಳದಿಂದ ಹಿಂದಿರುಗಿ ನೋಡಲಿಲ್ಲ. ಉತ್ತರ ಕನ್ನಡದ ಬಹುತೇಕ ಕಲಾವಿದರು ಗೆಜ್ಜೆ ಕಟ್ಟಿದ ಗುಂಡಬಾಳ ಮೇಳದಲ್ಲಿ ಸೇವೆ ಸಲ್ಲಿಸಿ, 2001ರಲ್ಲಿ ಸಾಲಿಗ್ರಾಮ ಮೇಳದಲ್ಲಿ ನಿರಂತರ 9 ವರ್ಷ ಸೇವೆ ಸಲ್ಲಿಸಿ, ಶ್ರೀ ಪೆರ್ಡೂರು ಮೇಳದಲ್ಲಿ 4 ವರ್ಷ, ನೀಲಾವರ ಮೇಳ, ಅಮೃತೇಶ್ವರಿ ಮೇಳಗಳಲ್ಲಿ ಸೇವೆ ಸಲ್ಲಿಸಿ ಸದ್ಯ ಶ್ರೀ ಸಾಲಿಗ್ರಾಮ ಮೇಳದ ಪ್ರಧಾನ ಕಲಾವಿದರಲ್ಲಿ ಒಬ್ಬರಾಗಿ ಜನಪ್ರೀಯತೆಯ ತುತ್ತತುದಿಗೇರಿದ್ದಾರೆ.
ಸೌಮ್ಯ ಸ್ವಭಾವದ ನಾಯಕ ಪಾತ್ರಗಳಲ್ಲಿ ಛಾಪು
ಬಬ್ರುವಾಹನ, ಅಭಿಮನ್ಯು, ಚಂದ್ರಹಾಸ, ಮದನ, ಸುದನ್ವ, ಲವ-ಕುಶ, ದರ್ಮಾಂಗದ ಮುಂತಾದ ಸೌಮ್ಯ ಸ್ವಭಾವದ ವೀರಾವೇಷದ ಪಾತ್ರಗಳಲ್ಲಿ ವಿಶೇಷವಾಗಿ ಗಮನಸೆಳೆಯುವ ಇವರ ಯಾವುದೇ ಪ್ರಸಂಗದ ಕೃಷ್ಣನ ಪಾತ್ರವನ್ನು ನೋಡಿದರೂ ಸಾಕು ಇವರ ಯೋಗ್ಯತೆಯನ್ನು ಅಳೆಯಲು. ಖಳನಾಯಕನಿಗಿಂತಲೂ ಕಥಾ ನಾಯಕನ ಪಾತ್ರವೇ ಹೆಚ್ಚು ಗಮನ ಸೆಳೆಯುತ್ತದೆ ಎನ್ನುವಲ್ಲಿ ಅವರ ಪಾತ್ರಪೂಷಣೆಯಲ್ಲಿ ಅವರ ಸೌಮ್ಯ ಕಳಂಕರಹಿತ ವ್ಯಕ್ತಿತ್ವವೂ ಪರಿಣಾಮ ಬೀರಿದೆ.
ಮಾತಿನ ಮೋಡಿಗಾರ
ಯಕ್ಷಗಾನದಲ್ಲಿ ಜಯಬೇರಿ ಪಡೆದ ನಾಗಶ್ರೀ ಪ್ರಸಂಗದ ಕ್ಲಿಷ್ಟಕರ ಪಾತ್ರವಾದ ಶುಬ್ರಾಂಗ ನಂತ ಪಾತ್ರಗಳಲ್ಲಿ ಅತಿಯಾದ ಕುಣಿತವಿಲ್ಲದೆ ಕೂಡ ಕೇವಲ ಮಾತಿನ ಮಂಟಪದಿಂದ ಅವರು ಪಾತ್ರಪೋಷಣೆ ಮಾಡುವ ಇವರ ಮಾತುಗಾರಿಕೆಯ ಮೋಡಿಗೆ ಜನ ಬೆರಗಾಗುತ್ತಾರೆ. ಇತ್ತೀಚಿನ ಪ್ರಸಿದ್ದ ಪ್ರಸಂಗಗಳಾದ ಈಶ್ವರಿ ಪರಮೇಶ್ವರಿ, ಅಗ್ನಿಚರಿತ್ರೆ, ರಂಗನಾಯಕಿ ನಕ್ಷತ್ರ, ನಾಗಾಭರಣ ಮುಂತಾದ ಪ್ರಸಂಗಗಳ ಅವರ ಪಾತ್ರಗಳು ಪ್ರೇಕ್ಷಕರನ್ನು ರಂಜಿಸಿವೆ. ಸುಂದರವಾದ ರೂಪ, ನಿಲುವು, ಪಾತ್ರ ಪೋಷಣೆ ಮತ್ತು ಅಸ್ಖಲಿತವಾಗಿ ಪುಂಖಾನುಪುಂಕವಾಗಿ ಹರಿದು ಬರುವ ಮಾತುಗಾರಿಕೆ ಇವರ ಧನಾತ್ಮಕವಾದ ಅಂಶಗಳು. ವೃತ್ತಿ ಜೀವನದಲ್ಲಿ ಚಿಟ್ಟಾಣಿಯವರು, ದಾರೇಶ್ವರ, ಕೊಂಡದಕುಳಿ, ಯಾಜಿ, ವಿಶ್ವನಾಥ ಶೆಟ್ಟಿ, ಎಂ. ಕೆ ರಮೇಶಾಚಾರ್ಯ, ಮುಗ್ವ ಗಣೇಶ ನಾಯ್ಕ್ ಮುಂತಾದವರ ಸಹಕಾರವನ್ನು ಸದಾ ನೆನಪಿಸುವ ಇವರು ಸರಳತೆ ಸಜ್ಜನಿಕೆಗೆ ಇನ್ನೊಂದು ಹೆಸರು.
ಪುರಸ್ಕಾರ ಹಾಗೂ ಸನ್ಮಾನಗಳು
ಮಂಕಿ ವಿದ್ಯಾರ್ಥಿವೃಂದ ಮತ್ತು ಶಿಕ್ಷಕರಿಂದ ``ಯಕ್ಷಸಂದೀಪ`` ಎನ್ನುವು ಬಿರುದಿನೊಂದಿಗೆ ಸನ್ಮಾನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ, ಅಸ್ರಣ್ಣ ಅಭಿಮಾನಿ ಬಳಗ ಮುಂಬಯಿ, ಕರ್ನಾಟಕ ಕರಾವಳಿ ಸಂಘ ಹೈದರಾಬಾದ್ ರವರಿಂದ ``ನಟಶೇಖರ`` ಬಿರುದಿನೊಂದಿಗೆ ನಾಡಿನಾದ್ಯಂತ ಹಲವಾರು ಸನ್ಮಾನ ಪಡೆದ ಇವರಿಗೆ ``ಯಕ್ಷ ಭರವಸೆ``ಯ ಪುರಸ್ಕಾರ ಯೋಗ್ಯವಾಗಿಯೇ ಸಂದಿದೆ.
****************
****************
|
|
|