ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಶೀನಪ್ಪ ರೈಗಳ ರಾಜಗಾ೦ಭೀರ್ಯಕ್ಕೆ ರಾಜ್ಯೋತ್ಸವ ಪ್ರಶಸ್ತಿಯ ಗರಿ

ಲೇಖಕರು :
ರಾಜ್ ಕುಮಾರ್
ಶನಿವಾರ, ನವ೦ಬರ್ 1 , 2014

`` ಬಲ್ಲಿರೇನಯ್ಯಾ.......ಯಾರೆಂದುಕೊಳ್ಳಬಲ್ಲಿರಿ.....ಹಾಗೆಂದುಕೊಳ್ಳಬಹುದು. ಬಂದಂತಹ ಕಾರ್ಯ ಅನೇಕವಿದೆ....`` ಯಕ್ಷಗಾನದ ಒಡ್ಡೋಲಗದ ಆದ್ಯ ಮಾತುಗಳಿವು. ಮುಖ್ಯವಾಗಿ ರಾಜವೇಶವೊಂದು ಪ್ರವೇಶಗೊಂಡು ಸಿಂಹಾಸನಾರೂಢವಾದ ಮೇಲೆ ಗತ್ತಿನಿಂದ ಸಭೆಯನ್ನು ನಾಲ್ದೆಸೆಗೆ ನೋಡಿ ಹೇಳುವಂತಹ ಈ ಮಾತಿನಿಂದಲೇ ಪ್ರೇಕ್ಷಕನನ್ನು ಸನ್ನಿಗೊಳಪಡಿಸುತ್ತವೆ. ಅದರಲ್ಲೂ ತೆಂಕುತಿಟ್ಟು ಯಕ್ಷಗಾನದ ಪ್ರವೇಶದ ಅಬ್ಬರದ ವೈಶಿಷ್ಟ್ಯ ಆ ಸೊಗಸು ಪೂರ್ಣವಾಗಿ ಅನುಭವಿಸಿದ್ದಲ್ಲಿ ಯಕ್ಷಗಾನದ ಮುಂದಿನ ಸನ್ನಿವೇಶಕ್ಕೆ ಪ್ರೇಕ್ಷಕ ಅಣಿಯಾದಂತೆ. ತೆಂಕುತಿಟ್ಟು ಯಕ್ಷಗಾನದ ರಾಜಗಾಂಭೀರ್ಯವನ್ನು ತೋರಿದ ಪ್ರಮುಖರ ಹೆಸರನ್ನು ಇಂದು ಯಕ್ಷಗಾನ ಅಭಿಮಾನಿಗಳಲ್ಲಿ ಕೇಳಿನೋಡಿ, ಆ ಪಟ್ಟಿಯಲ್ಲಿ ಮೊದಲು ಕಂಡು ಬರುವ ಹೆಸರು ಸಂಪಾಜೆ ಶೀನಪ್ಪ ರೈಗಳದ್ದು.

ತೆಂಕುತಿಟ್ಟು ಯಕ್ಷಗಾನದ ರಾಜವೇಷಗಳಿಗೆ ಅಗ್ರಗಣ್ಯರು

ಹದವಾದ ಮತ್ತು ಅಷ್ಟೇ ಬಲಿಷ್ಠವಾದ ಹೆಜ್ಜೆಗಾರಿಕೆ, ಬಾಹುಗಳನ್ನು ಅಗಲಿಸಿ ಶಿರವನ್ನು ನಿಮಿರಿಸಿ ಕಣ್ಣುಗಳನ್ನು ಅರಳಿಸಿ ತಾಳಕ್ಕೆ ಸರಿಯಾಗಿ ರೈಗಳ ರಾಜವೇಶದ ಪ್ರವೇಶ ಕಾಣುವುದೆಂದರೆ ಅದು ಮಾದರಿ ಯಕ್ಷಗಾನವನ್ನು ಕಂಡಂತೆ. ಇಂದು ಯಕ್ಷಗಾನಕ್ಕೆ ಪ್ರೇಕ್ಷಕ ಹಂಬಲಿಸಿ ಅದರ ಹುಚ್ಚು ಬೆಳೆಸಿದ್ದರೆ ಅದರಲ್ಲಿ ಇಂತಹ ರಾಜವೇಷಗಳ ಪಾಲು ಬಹಳಷ್ಟಿವೆ. ಸಾಂಪ್ರದಾಯಿಕ ಒಡ್ದೋಲಗದ ದೇವೇಂದ್ರನಿಂದ ತೊಡಗಿ ಅರ್ಜುನ, ಅತಿಕಾಯ, ಹಿರಣ್ಯಾಕ್ಷ ರಕ್ತ ಬೀಜ, ಛೇ ಒಂದೇ ಎರಡೆ ಹಲವು ಸಲ ಪ್ರಸಂಗ ನಿರ್ಣಯವಾಗುವುದೂ ಇಂತಹ ವೈಶಿಷ್ಟ್ಯತೆಗಳಿಂದ. ಆ ವೈಶಿಷ್ಟ್ಯತೆಯನ್ನು ತುಂಬಿದ ಪ್ರಮುಖರಲ್ಲಿ ಸಂಪಾಜೆ ರೈಗಳು ಅಗ್ರಗಣ್ಯರು.

ಅತ್ಯಂತ ಸರಳ ಸಜ್ಜನಿಕೆಯ ವಿನಯವಂತ ಕಲಾವಿದ. ಸದಾ ಮಂದಸ್ಮಿತ ಮುಖದಲ್ಲಿ ಹೊಳೆಯುವ ಕಣ್ಣುಗಳು ಹಲವು ಪಾತ್ರಗಳಿಗೆ ಹಲವು ಭಾವಗಳನ್ನು ತುಂಬಿಸಿಬಿಡುತ್ತವೆ. ಆಕರ್ಷಕ ಮುಖವರ್ಣಿಕೆ , ಅಚ್ಚುಕಟ್ಟಿನ ವೇಷಗಾರಿಕೆ, ಲಯಬದ್ದ ಕುಣಿತ ಅದಕ್ಕೊಪ್ಪುವ ಅಭಿನಯ ಇದೆಲ್ಲದಕ್ಕೂ ಸರಿಮಿಗಿಲೆನಿಸುವ ಹಿತಮಿತವಾದ ಮಾತುಗಾರಿಕೆ ಎಲ್ಲವೂ ಯಕ್ಷಗಾನ ಪರಂಪರೆಯ ದರ್ಶನವನ್ನು ಮಾಡಿಸುತ್ತವೆ. ಕುಣಿತವಾಗಲಿ ಮಾತುಗಾರಿಕೆಯಾಗಲಿ ಅಭಿನಯವಾಗಲಿ ಯಕ್ಷಗಾನ ಪರಂಪರೆಯನ್ನು ಉಲ್ಲೇಖಿಸಿ ಹೇಳುವುದಾದರೆ ಈಗ ಸಂಪಾಜೆಯವರ ಹೆಸರನ್ನು ಮೊದಲು ಹೇಳಬೇಕಾಗುತ್ತದೆ. ಅಂತಹ ಸುದೃಢ ಸಂಪೂರ್ಣ ವೇಷಗಾರಿಕೆ.

ಪ್ರತಿನಾಯಕನ ವೇಷಗಳಿ೦ದ ಸಮ್ಮೋಹನ

ಕಟೀಲು ಮೇಳದಲ್ಲಿನ ಇವರ ವೇಷಗಾರಿಕೆ ಅದರಲ್ಲೂ ಬಲಿಪ್ಪರು ಇರಾ ಭಾಗವತರು (ಕುಂಡಚ್ಚ) ಮೊದಲಾದವರೊಂದಿಗಿನ ಇವರ ವೇಷಗಳು, ಅದು ಹಿರಣ್ಯಾಕ್ಷ, ರಕ್ತಬೀಜನ ಅಬ್ಭರ, ಕಾರ್ತವೀರ್ಯನ ಬೇಟೆಯಾಡುವ ದೃಶ್ಯ ಇಂದಿಗೂ ಯಕ್ಷರಸದ ಸ್ವಾದದ ನೆನಪನ್ನು ಉಳಿಸಿಬಿಟ್ಟಿದೆ. ಇವರ ಕುಣಿತ ಬಹಳ ಸರಳವಾಗಿರುತ್ತದೆ, ದೇಹ ದಂಡನೆಯಿಲ್ಲದ ಕುಣಿತ. ಪ್ರತಿ ಹೆಜ್ಜೆಯೂ ತಾಳಬದ್ದ. ರಂಗ ಸ್ಥಳದಲ್ಲಿನ ನಿಲುವಿನಲ್ಲೂ ಲೆಕ್ಕಾಚಾರ. ರಂಗವನ್ನು ತನ್ನ ಕುಣಿತಕ್ಕೆ ಹಾವ ಭಾವಕ್ಕೆ ಬಳಸಿಕೊಳ್ಳುವಲ್ಲಿ ರಂಗ ತುಂಬಿಕೊಳ್ಳುವಾಗ ವೇಷಗಾರಿಕೆ ಮಾತ್ರವಲ್ಲ ಯಕ್ಷಗಾನ ಸೋಲುವುದೇ ಇಲ್ಲ. ಹಿರಣ್ಯಾಕ್ಷ ಸತ್ತು ಬಿದ್ದರೂ ಪ್ರೇಕ್ಷಕ ಮನದಲ್ಲಿ ಪಾತ್ರ ಜೀವಂತವಾಗಿ ಮತ್ತೂ ವಿಜ್ರಂಭಿಸುತ್ತದೆ. ಇರುಳಿಡೀ ಆಟ ನೋಡಿ ಮರುದಿನ ನಿದ್ದೆಯ ಗುಂಗಿನಲ್ಲಿ ತಿರುಗಾಡುವಾಗ ತಲೆಯಲ್ಲಿ ರಾಜವೇಷದ ಕಿರೀಟ ಹೊತ್ತಂತೆ ತಲೆ ಅಲುಗಾಡುತ್ತಾ ಸಂಪಾಜೆ ರೈಗಳ ವೇಷ ಭಂಗಿಯ ಕನಸನ್ನು ಕಾಣುತ್ತದೆ. ಇದು ರೈಗಳ ವೇಷಗಳ ಸಮ್ಮೋಹನ ಎಂದು ಹೇಳಬಹುದು.

ಬಾಲ್ಯ, ಶಿಕ್ಷಣ ಹಾಗೂ ಕಲಾಸೇವೆ

ಸುಳ್ಯದ ಸಂಪಾಜೆ ಕೀಲಾರ್ ಮದೇಪಾಲು ಎಂಬಲ್ಲಿ ಜೂನ್ 7, 1943ರ೦ದು ರಾಮಣ್ಣ ರೈ ಮತ್ತು ಕಾವೇರಿ ದ೦ಪತಿಯವರ ಸುಪುತ್ರರಾಗಿ ಸ೦ಪಾಜೆಯಲ್ಲಿ ಜನಿಸಿದರು. ನಾಲ್ಕನೇ ತರಗತಿಯವರೆಗೆ ಶಿಕ್ಷಣವನ್ನು ಪಡೆದು ಸ್ತ್ರೀವೇಷಧಾರಿಯಾಗಿದ್ದ ತ೦ದೆಯವರ ಪ್ರೇರಣೆಯ೦ತೆ, ತ೦ದೆಯವರಿ೦ದ ಅರ್ಥಗಾರಿಕೆ, ಕುಂಬಳೆ ಕಣ್ಣನ್‌ರಿಂದ ಕುಣಿತ, ಮಾಸ್ತರ್ ಕೇಶವರಿಂದ ಭರತನಾಟ್ಯ ಹಾಗೂ ಬಣ್ಣದ ಕುಟ್ಯಪ್ಪರಿಂದ ಬಣ್ಣಗಾರಿಕೆ ಅಭ್ಯಸಿಸಿದರು. 13ನೇ ವಯಸ್ಸಿನಿ೦ದಲೇ ಯಕ್ಷಗಾನ ಕಲಾಕ್ಷೇತ್ರವನ್ನು ಪ್ರವೇಶಿಸಿದ ಇವರು ಆರ೦ಭದಲ್ಲಿ ಪು೦ಡುವೇಷವನ್ನು ಮಾಡುತ್ತಿದ್ದರು. ನ೦ತರ ಕಿರೀಟ ವೇಷದ ಬಗ್ಗೆ ಆಕರ್ಷಿತರಾಗಿ ನಾಟ್ಯದ ಶೈಲಿ ಮತ್ತು ಮಾತಿನ ಗತ್ತುಗಾರಿಕೆಯಿ೦ದ ಜನಾಕರ್ಷಿಸಿದರು. ಪುಂಡುವೇಷ, ರಾಜವೇಷಗಳ ಮೂಲಕ ತಮ್ಮದೇ ಆದ ಶೈಲಿಯಲ್ಲಿ ವಿಶಿಷ್ಟ ಛಾಪು ಮೂಡಿಸಿರುವ, ನಿಖರ ಪಾತ್ರ ಕಲ್ಪನೆ ಮತ್ತು ಅಚ್ಚುಕಟ್ಟಾದ ಪ್ರಸ್ತುತೀಕರಣದ ಮೂಲಕ ಪ್ರಾಜ್ಞರಿಂದಲೂ ಸೈ ಎನಿಸಿಕೊಂಡಿರುವ ಶೀನಪ್ಪ ರೈ ಪರಂಪರೆಯನ್ನು ಬಿಟ್ಟು ಹೋದವರಲ್ಲ.

ಸಂಪಾಜೆ ಶೀನಪ್ಪ ರೈ
ಜನನ : ಜೂನ್ 7, 1943
ಜನನ ಸ್ಥಳ : ಸಂಪಾಜೆ, ಸುಳ್ಯ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
ವಿಳಾಸ:
ಶ್ರೀ ದೇವಿ ರಕ್ಷಾ ನಿಲಯ, ಮಾದೆಪಾಲು ಮನೆ, ಸ೦ಪಾಜೆ ಗ್ರಾಮ, ಕಲ್ಲುಗು೦ಡಿ ಸ೦ಪಾಜೆ ಅ೦ಚೆ , ಸುಳ್ಯ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪಿನ್-ಕೋಡ್ : 574234
ಮೊಬೈಲ್ : 9481264379

ಕಲಾಸೇವೆ:
ಕು೦ಡಾವು, ವೇಣೂರು, ಇರುವೈಲು, ಸೌಕೂರು, ಚೌಡೇಶ್ವರಿ, ಕಟೀಲು, ಎಡನೀರು ಹಾಗೂ ಹೊಸನಗರ ಮೇಳದಲ್ಲಿ ಅತ್ಯದ್ಭುತ ರಾಜವೇಷಧಾರಿಯಾಗಿ ನಿರ೦ತರ 58 ವರ್ಷಗಳಿ೦ದ ಕಲಾಸೇವೆ
ಪ್ರಶಸ್ತಿಗಳು:
  • 2014 ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
  • ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ,
  • ಕಿಲಾರು ಪ್ರತಿಷ್ಠಾನ ಪ್ರಶಸ್ತಿ,
  • ಜಾಗತಿಕ ಬಂಟ ಪ್ರತಿಷ್ಠಾನ ಪ್ರಶಸ್ತಿ,
  • ಹೊಸದಿಲ್ಲಿಯ ಯಕ್ಷಕಲಾನಿಧಿ ಪ್ರಶಸ್ತಿ
  • ಸರ್ಪಂಗಳ ಸುಬ್ರಹ್ಮಣ್ಯ ಭಟ್ ಪ್ರಶಸ್ತಿ
  • ಹಲಾವಾರು ಸ೦ಘ-ಸ೦ಸ್ಥೆಗಳಿ೦ದ ವಿವಿಧ ಪ್ರಶಸ್ತಿಗಳು.
ಕಳೆದ 5 ದಶಕಗಳಿ೦ದಲೂ ಕಲಾಸೇವೆಯನ್ನು ಸಲ್ಲಿಸುತ್ತಿರುವ ಇವರು ಕು೦ಡಾವು ಮೇಳ (4 ವರ್ಷ), ವೇಣೂರು ಮೇಳ (3 ವರ್ಷ), ಇರುವೈಲು ಮೇಳ (2 ವರ್ಷ) , ಸೌಕೂರು ಮೇಳ (2 ವರ್ಷ), ಚೌಡೇಶ್ವರಿ ಮೇಳ (2 ವರ್ಷ), ಕಟೀಲು ಮೇಳ (33 ವರ್ಷ), ಎಡನೀರು ಮೇಳ (2 ವರ್ಷ) ಹಾಗೂ 2006 ರಿ೦ದ ಶ್ರೀರಾಮಚ೦ದ್ರಾಪುರ ಹೊಸನಗರ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಕುಟು೦ಬ ಹಾಗೂ ಪ್ರಶಸ್ತಿಗಳು

ಮಡದಿ ಗಿರಿಜಾವತಿ ಹಾಗೂ ಮೂವರು ಮಕ್ಕಳ (ಜಯರಾಮ ರೈ, ರೇವತಿ ಶೆಟ್ಟಿ, ರಜನಿ ರೈ) ಸ೦ತೃಪ್ತ ಕುಟು೦ಬ ಹೊ೦ದಿದ ಇವರ ಸುಪುತ್ರ ಜಯರಾಮ ರೈಯವರು ಕಿಈಟ ವೇಷದ ಪಾತ್ರಗಳನ್ನು ನಿರ್ವಹಿಸುವ ಹವ್ಯಾಸಿ ಕಲಾವಿದರಾಗಿದ್ದು ತ೦ದೆಯವರ ಶೈಲಿಯನ್ನು ಮು೦ದುವರೆಸುತ್ತಿದ್ದಾರೆ.

ನಿರ೦ತರ 58 ವರುಷಗಳ ಕಲಾಸೇವೆಯಲ್ಲಿ ಹಲವಾರು ಸನ್ಮಾನ ಹಾಗೂ ಪ್ರಶಸ್ತಿಗಳನ್ನು ಪಡೆದಿದ್ದು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕಿಲಾರು ಪ್ರತಿಷ್ಠಾನ ಪ್ರಶಸ್ತಿ, ಜಾಗತಿಕ ಬಂಟ ಪ್ರತಿಷ್ಠಾನ ಪ್ರಶಸ್ತಿ, ಹೊಸದಿಲ್ಲಿಯ ಅಕಾಡೆಮಿ ಆಫ್ ತೆಂಕುತಿಟ್ಟು ಯಕ್ಷಗಾನ 2012ನೇ ಸಾಲಿನ ಯಕ್ಷಕಲಾನಿಧಿ ಪ್ರಶಸ್ತಿ, ಸರ್ಪಂಗಳ ಸುಬ್ರಹ್ಮಣ್ಯ ಭಟ್ ಪ್ರಶಸ್ತಿಗಳ ಜೊತೆಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ ಎಂದರೆ ಅದು ಕೇಳುವಾಗಲೂ ಹರುಷ, ಬರೆಯುವಾಗಲೂ ಹರುಷ,,,ಆ ಸ್ಮೃತಿಗಳೇ ಒಂದು ಮಂದಹಾಸದ ಮಧುರತೆಯಿಂದ ತುಂಬಿರುತ್ತದೆ. ಇದು ಕೇವಲ ರೈಗಳಿಗೆ ಸಂದ ಪ್ರಶಸ್ತಿಯಲ್ಲ. ಯಕ್ಷಗಾನದ ಅದರಲ್ಲೂ ತೆಂಕುತಿಟ್ಟಿನ ರಾಜವೇಷಕ್ಕೆ ದೊರಗಿದ ರಾಜ ಸನ್ಮಾನ, ಅಗಾಧ ಪ್ರತಿಭೆಗೆ ಸ೦ದ ಪುರಸ್ಕಾರವೇ ಸರಿ.

****************

ಶೀನಪ್ಪ ರೈಗಳ ಕೆಲವು ಭಾವಚಿತ್ರಗಳು ( ಚಿತ್ರ ಕೃಪೆ : ರಾಮ್ ನರೇಶ್ ಮ೦ಚಿ ಹಾಗೂ ಅ೦ತರ್ಜಾಲದ ಅನಾಮಿಕ ಮಿತ್ರರು )


ಚೌಕಿಯಲ್ಲಿ ಬಣ್ನಗಾರಿಕೆಯಲ್ಲಿ ನಿರತ ರೈಗಳು




ಇ೦ದ್ರಜಿತುವಿನ ಪಾತ್ರದಲ್ಲಿ




ಪತ್ನಿ ಹಾಗೂ ಕುಟು೦ಬದವರೊಡನೆ




ದೆಹಲಿಯಲ್ಲಿ ಸನಾನಿಸಲ್ಪಡುತ್ತಿರುವುದು




ಚೌಕಿಯಲ್ಲಿ ಬಣ್ನಗಾರಿಕೆಯಲ್ಲಿ ನಿರತ ರೈಗಳು




ಆನೆಯ ಮೇಲೆ ಕುಳಿತು ಸಮುದ್ರ ಮಥನದ ದೇವೇ೦ದ್ರನಾಗಿ




ಶ್ರೀ ವಿಶ್ವವಲ್ಲಭತೀರ್ಥ ಶ್ರೀಗಳಿ೦ದ ಸನಾನಿಸಲ್ಪಡುತ್ತಿರುವುದು




****************

ಶೀನಪ್ಪ ರೈಗಳ ಕೆಲವು ದೃಶ್ಯಾವಳಿಗಳು


ತೆ೦ಕು ತಿಟ್ಟು ಯಕ್ಷಗಾನದ ಪರಮ ಅಭಿಮಾನಿ ಕಟೀಲು ಸಿತ್ಲ ರ೦ಗನಾಥ ರಾವ್ ರವರು ನಡೆಸಿಕೊಟ್ಟ ರೈಗಳ ಸ೦ದರ್ಶನ




ಶೀನಪ್ಪ ರೈಯವರ ಇ೦ದ್ರಜಿತುವಿನ ಪ್ರವೇಶ




ಇ೦ದ್ರಜಿತುವಿನ ಪಾತ್ರದಲ್ಲಿ ಶೀನಪ್ಪ ರೈಗಳು, ಶ್ರೀರಾಮನಾಗಿ ದಿವ೦ಗತ ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿಯವರು




ದೇವೇ೦ದ್ರನಾಗಿ ಶೀನಪ್ಪ ರೈಯವರು








ಕೃಪೆ : http://yakshachintana.com/    ಹಾಗೂ ಅ೦ತರ್ಜಾಲದಲ್ಲಿ ಪ್ರಕಟಗೊ೦ಡ ಇತರ ಮಾಹಿತಿಗಳಿ೦ದ


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ