ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಯುನೆಸ್ಕೋ ಮನ್ನಣೆ ಎನ್ನುವ ಯಕ್ಷ ಸ್ವಪ್ನ

ಲೇಖಕರು :
ಪುರುಷೋತ್ತಮ ಬಿಳಿಮಲೆ
ಮ೦ಗಳವಾರ, ನವ೦ಬರ್ 4 , 2014

ಯುನೆಸ್ಕೋ ಮನ್ನಣೆ ಎನ್ನುವುದು ಕಲಾ ಪ್ರಕಾರವೊಂದಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಈ ಮನ್ನಣೆಗೆ ಅರ್ಹವಾದ ಅನೇಕ ಕಲಾಪ್ರಕಾರಗಳು ಕರ್ನಾಟಕದಲ್ಲಿವೆ. ಆದರೆ, ಅವುಗಳಿಗೆ ಯುನೆಸ್ಕೋ ಗೌರವವನ್ನು ದೊರಕಿಸಿಕೊಡುವ ಪ್ರಯತ್ನಗಳು ನಡೆದಿಲ್ಲ. ಇಂಥ ಪ್ರಯತ್ನ ನಡೆಸಿದ ಯಕ್ಷಗಾನ ಪ್ರಿಯರ ಕನಸು ಕೂಡ ನನಸಾಗಲಿಲ್ಲ. ಇದಕ್ಕೆ ಕಾರಣಗಳನ್ನು ವಿಶ್ಲೇಷಿಸುವ ಈ ಬರಹ, ಯುನೆಸ್ಕೋ ಪಟ್ಟಿಯನ್ನು ಸೇರುವ ಮಾರ್ಗಗಳು ಹಾಗೂ ಅದರಿಂದ ಲಭ್ಯವಾಗುವ ಪ್ರಯೋಜನಗಳ ಕುರಿತೂ ಬೆಳಕು ಚೆಲ್ಲುತ್ತದೆ.

ಮೌಖಿಕ ರೂಪದಲ್ಲಿ ಉಳಿದು ಬರುತ್ತಿರುವ ಕಲಾರೂಪಗಳನ್ನು ಉಳಿಸಿ, ಬೆಳೆಸಲು ವಿಶ್ವಸಂಸ್ಥೆಯ ಪ್ರಧಾನ ಅಂಗವಾದ ‘ಶಿಕ್ಷಣ, ವಿಜ್ಞಾನ ಮತ್ತು ಸಂಸ್ಕೃತಿ ವಿಭಾಗ’ವು (ಯುನೆಸ್ಕೋ) 1946ರಿಂದಲೂ ಕೆಲಸ ಮಾಡುತ್ತಾ ಬರುತ್ತಿದೆ. ವಿಶ್ವದ ಬಹು ಸಂಸ್ಕೃತಿಯ ಉಳಿಯುವಿಕೆಗೆ ಪ್ರೋತ್ಸಾಹ, ಕಲಾರೂಪಗಳನ್ನು ತಲೆಮಾರುಗಳಿಂದ ಮುಂದಿನ ತಲೆಮಾರುಗಳಿಗೆ ದಾಟಿಸುತ್ತಿರುವ ಕಲಾವಿದರಿಗೆ ಮನ್ನಣೆ ಮತ್ತು ತರಬೇತಿ, ಪ್ರಾದೇಶಿಕ ಮತ್ತು ಸಾಂಸ್ಕೃತಿಕ ಚರಿತ್ರೆಗಳ ಬರವಣಿಗೆಗೆ ಪ್ರೋತ್ಸಾಹ ಮೊದಲಾದ ಅಗತ್ಯ ಕೆಲಸಗಳನ್ನು ಅದು ಕೈಗೆತ್ತಿಕೊಳ್ಳುತ್ತಲೇ ಬರುತ್ತಿದೆ. ಸಣ್ಣ ಸಣ್ಣ ಸಮುದಾಯಗಳು ಪ್ರದರ್ಶಿಸಿಕೊಂಡು ಬರುತ್ತಿರುವ ಅಪೂರ್ವ ಕಲೆಗಳ ಬಗ್ಗೆ ವಿಶ್ವಸಂಸ್ಥೆಯ ಈ ವಿಭಾಗಕ್ಕೆ ವಿಶೇಷ ಆಸಕ್ತಿ. ಈ ಆಸಕ್ತಿಯನ್ನು ಇನ್ನಷ್ಟು ವಿಸ್ತಾರಗೊಳಿಸಲು ಅಂತರರಾಷ್ಟ್ರೀಯ ವಿದ್ವಾಂಸರ ತಂಡವು 1983ರಲ್ಲಿ ಹೊಸದಾದ ನೀತಿಸಂಹಿತೆಯೊಂದನ್ನು ರೂಪಿಸಿತು.

United Nations Educational, Scientific and Cultural Organization
ಅದರ ಪ್ರಕಾರ, ಮಾನವನು ಭೌತಿಕವಾಗಿ ನಿರ್ಮಿಸಿಕೊಂಡು ಬಂದಿರುವ ಅನೇಕ ಅಪೂರ್ವ ಸ್ಮಾರಕಗಳನ್ನು ಸಂರಕ್ಷಿಸಲು ಕ್ರಮ ಕೈಗೊಳ್ಳಲಾಯಿತು. ಇದರ ಪರಿಣಾಮವಾಗಿ ನಾಶದ ಅಂಚಿನಲ್ಲಿದ್ದ ಅನೇಕ ಜಗದ್ವಿಖ್ಯಾತ ಕಟ್ಟಡಗಳನ್ನು ನಾವಿಂದು ನೋಡುವಂತಾಗಿದೆ. 2003ರಿಂದ ಈ ಸಂರಕ್ಷಣಾ ನಿಯಮಗಳನ್ನು ವಿಶ್ವಸಂಸ್ಥೆಯು ಕಂಠಸ್ಥ ಪರಂಪರೆಗೂ ವಿಸ್ತರಿಸಿಕೊಂಡಿತು. ಅದರ ಫಲವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲೂ ನಿರಾಕರಣೆಗೆ ಒಳಗಾದ ಜಾನಪದ ಪರಂಪರೆಗಳನ್ನು ಗುರ್ತಿಸುವ, ದಾಖಲಿಸುವ, ಸಂರಕ್ಷಿಸುವ ಮತ್ತು ಪುರುಜ್ಜೀವನಗೊಳಿಸುವ ಕೆಲಸಗಳು ಆರಂಭವಾದುವು. ಇಂದು ಈ ಕೆಲಸಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರ್ವಹಿಸಲು 18 ಜನ ವಿದ್ವಾಂಸರಿರುವ ತಜ್ಞರ ಸಮಿತಿಯೊಂದಿದೆ.

ಈ ಸಮಿತಿಯು ಆರಂಭಿಕ ಹಂತದಲ್ಲಿ ಸಹಜವಾಗಿ ಬುಡಕಟ್ಟು ಜನರ ಸಾಂಸ್ಕೃತಿಕ ಚಹರೆಗಳನ್ನು ಮನಗಾಣಿಸುವ ಅನೇಕ ಅಂಶಗಳತ್ತ ಗಮನ ಹರಿಸಿತು. ಇದರಲ್ಲಿ ಅವರ ಉಡುಗೆ ತೊಡುಗೆಗಳು, ಆಹಾರ, ನೃತ್ಯ, ಸಂಗೀತ ವಾದ್ಯಗಳು, ಮತ್ತಿತರ ಅಂಶಗಳನ್ನು ಒಳಗೊಳ್ಳಲಾಯಿತು. ಬುಡಕಟ್ಟು ಜನರ ಪಾರಂಪರಿಕ ತಿಳಿವಳಿಕೆಯನ್ನು ಬೇರೆಯವರು ಕದ್ದು ಮಾರಾಟ ಮಾಡದಂತೆ ನೋಡಿಕೊಳ್ಳಲು ಹೊಸ ಬಗೆಯ ಕಾನೂನುಗಳನ್ನು ಕೂಡಾ ರೂಪಿಸಲಾಯಿತು. ಹೀಗೆ ಕಳೆದ ಸುಮಾರು 10 ವರ್ಷಗಳಿಂದ ಯನೆಸ್ಕೋವು ಜಗತ್ತಿನ ಜಾನಪದದ ಸಂರಕ್ಷಣೆಗೆ ಕಟಿಬದ್ಧವಾಗಿ ಕೆಲಸ ಮಾಡುತ್ತಿದೆ. ಈಚಿನ ಅದರ ವರದಿಯ ಪ್ರಕಾರ ಇಂದು ಸುಮಾರು 72 ದೇಶಗಳ 165 ಜನಪದ ಕಲೆಗಳು ವಿಶ್ವ ಸಂರಕ್ಷಣಾ ಪಟ್ಟಿಗೆ ಸೇರ್ಪಡೆಯಾಗಿವೆ.

ಈ ಪಟ್ಟಿಗೆ ಸೇರಿದ ಕಲೆಗಳ ಸಾಂಸ್ಕೃತಿಕ ಮೌಲ್ಯ, ಅವು ನಿರ್ದಿಷ್ಟ ಸಂಸ್ಕೃತಿಯೊಂದರಲ್ಲಿ ಆಳವಾಗಿ ಬೇರೂರಿದ ಬಗೆ, ಅವುಗಳ ಅನನ್ಯತೆ, ವಿಶಿಷ್ಟ ಕೌಶಲಗಳು ಹಾಗೂ ಅವುಗಳ ಪ್ರಸ್ತುತ ಸ್ಥಿತಿಗತಿಗಳನ್ನು ಯುನೆಸ್ಕೋ ವಿಶ್ವದ ಜನರಿಗೆ ಬೇರೆ ಬೇರೆ ಮಾಧ್ಯಮಗಳ ಮೂಲಕ ತಿಳಿಯಪಡಿಸುತ್ತಾ ಬರುತ್ತಿದೆ. ಈ ಕಾರಣದಿಂದಾಗಿ ಅನೇಕ ದೇಶಗಳು ತಮ್ಮ ನಾಡಿನ ಜನಪದ ಕಲೆಗಳಿಗೆ ಯುನೆಸ್ಕೋ ಮನ್ನಣೆ ದೊರಕಿಸಿಕೊಳ್ಳಲು ಶ್ರಮಿಸುತ್ತಿವೆ.

ಇಂಥ ಸಾಮೂಹಿಕ ಪ್ರಯತ್ನಗಳ ಫಲವಾಗಿ ಇಂದು ಅರ್ಜೆಂಟಿನಾದ ‘ಟಾಂಗೋ’, ಬಾಂಗ್ಲಾ ದೇಶದ ‘ಬಾವುಲ್’ ಹಾಡುಗಳು, ಭೂತಾನಿನ ‘ಮುಖವಾಡ ಕುಣಿತ’, ಕಾಂಬೋಡಿಯಾದ ‘ರೋಯಲ್ ಬ್ಯಾಲೆ’, ಚೀನಾದ ‘ಡ್ರಾಗನ್ ನೃತ್ಯ’, ಟಿಬೆಟ್ಟಿನ ‘ಒಪೆರಾ’, ಇಂಡೊನೇಶಿಯಾದ ‘ವಯಾಂಗ್ ಬೊಂಬೆಯಾಟ’, ಜಪಾನಿನ ‘ಐನು ನೃತ್ಯ’ ಮತ್ತು ‘ಕಾಗುರಾ ನೃತ್ಯ’ ಮೊದಲಾದ ಅನೇಕ ಕಲಾಪ್ರಕಾರಗಳು ತಾವು ಉಳಿದದ್ದಲ್ಲದೆ ಜಗತ್ತಿನ ಗಮನವನ್ನು ತಮ್ಮೆಡೆಗೆ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಇಂದು ಯುನೆಸ್ಕೋ ಮನ್ನಣೆ ಪಡೆದ ಕಲೆಗಳು ಯಾವುದೇ ಜಾಗತಿಕ ಸಮಾವೇಶಗಳಲ್ಲಿ ಸುಲಭವಾಗಿ ಪ್ರದರ್ಶನಗೊಳ್ಳುತ್ತವೆ.

ಈ ಪಟ್ಟಿಗೆ ಸೇರಲು ಅರ್ಹವಾಗುವ ನೂರಾರು ಜನಪದ ಕಲೆಗಳು ಮತ್ತು ಆಚರಣೆಗಳು ಭಾರತದಲ್ಲಿ ಇರುವುದು ಹೌದಾದರೂ ಯುನೆಸ್ಕೋ ಮನ್ನಣೆ ದೊರೆತಿರುವುದು ಇದುವರೆಗೆ ಕೇವಲ ಎಂಟಕ್ಕೆ ಮಾತ್ರ. ಅವುಗಳೆಂದರೆ, ಮಣಿಪುರದ ‘ಸಂಕೀರ್ತನ’, ಕೇರಳದ ‘ಕುಟಿಯಾಟ್ಟಂ’ ಮತ್ತು ‘ಮುಡಿಯೇಟ್ಟು’, ವೈದಿಕ ಮಂತ್ರ ಪಠಣ, ವಾರಣಾಸಿಯ ‘ರಾಮಲೀಲಾ’, ಗರವಾಲದ ‘ರಮ್ಮನ್’, ರಾಜಸ್ತಾನದ ‘ಕಲಬೇಲಾ’, ಪಶ್ಚಿಮ ಬಂಗಾಳದ ‘ಚಾವು’ ಮತ್ತು ಲಡಾಕಿನ ‘ಬೌದ್ಧ ಮಂತ್ರ ಪಠಣಗಳು’.

‘ಕುಟಿಯಾಟ್ಟಂ’
ಇವುಗಳಲ್ಲಿ ಕೇರಳದ ಎರಡು ಕಲೆಗಳನ್ನು ಹೊರತು ಪಡಿಸಿದರೆ ಉಳಿದವೆಲ್ಲವೂ ಉತ್ತರ ಭಾರತದವು ಎಂಬುದನ್ನು ಗಮನಿಸಬೇಕು. ಭಾರತದ ಉನ್ನತ ಆಡಳಿತ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಬಹುತೇಕ ಅಧಿಕಾರಿಗಳಿಗೆ ದಕ್ಷಿಣ ಭಾರತದ ಬಗೆಗೆ ತಿಳಿವಳಿಕೆ ಇಲ್ಲದಿರುವುದು ಜೊತೆಗೆ ಅವರಲ್ಲಿ ಅನೇಕರು ಉನ್ನತ ಜಾತಿಗೆ ಸೇರಿದವರಾಗಿರುವುದು ಭಾರತದ ಪಟ್ಟಿ ಸಣ್ಣದಾಗಿರುವುದಕ್ಕೆ ಕಾರಣ. ಸಹಜವಾಗಿ ಜಾನಪದವು ಅಂಥವರ ಕಣ್ಣಿಗೆ ಬೀಳುವುದೂ ಇಲ್ಲ. ವೈದಿಕ ಮಂತ್ರ ಪಠಣವು ಯುನೆಸ್ಕೋ ಮನ್ನಣೆಗೆ ಪಾತ್ರವಾಗುವುದೇ ಹೌದಾದರೆ, ತುಳು ಪಾಡ್ದನದ ಹಾಡುಗಾರರು ಅಥವಾ ಮಂಟೇಸ್ವಾಮಿ ಪದ ಹಾಡುವ ನೀಲಗಾರರು ಯಾಕೆ ಅಂಥ ಮನ್ನಣೆಗೆ ಪಾತ್ರರಾಗಬಾರದು ಎಂಬ ಪ್ರಶ್ನೆಯನ್ನು ಈಗ ತಡವಾಗಿಯಾದರೂ ನಾವು ಕೇಳಿಕೊಳ್ಳಬೇಕಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಅನೇಕ ಅಧಿಕಾರಿಗಳ ಭಾರತೀಯ ತಿಳಿವಳಿಕೆಗಳು ಪಾರ್ಶ್ವಿಕವಾದುದು ಮಾತ್ರವಲ್ಲ ಪೂರ್ವಗ್ರಹಪೀಡಿತವಾದುದು. ಭಗವದ್ಗೀತೆಯನ್ನು ದೇಶದ ಉಡುಗೊರೆಯಾಗಿ ನೀಡುವವರಿಂದ ಜಾನಪದದ ಬಗೆಗೆ ಹೆಚ್ಚೇನೂ ನಿರೀಕ್ಷಿಸುವಂತಿಲ್ಲ.

ಹತ್ತಾರು ಸವಲತ್ತು

ಯುನೆಸ್ಕೋ ಮನ್ನಣೆ ದೊರೆಯುವುದರಿಂದ ಒಂದು ನಿರ್ದಿಷ್ಟ ಕಲೆಗೆ ಯಾವ ಬಗೆಯ ಪ್ರಯೋಜನಗಳು ದೊರೆಯುತ್ತವೆ ಎಂದು ಸಾಮಾನ್ಯವಾಗಿ ಕೇಳಲಾಗುತ್ತದೆ. ಇದಕ್ಕೆ ಉತ್ತರಿಸಲು ಪಕ್ಕದ ರಾಜ್ಯ ಕೇರಳದ ಕುಟಿಯಾಟ್ಟಂ ಅನ್ನು ಗಮನಿಸೋಣ. ‘ಕುಟಿಯಾಟ್ಟಂ’ ಎಂಬ ಪ್ರಾಚೀನ ಕಲೆಗೆ 2000ನೇ ಇಸವಿಯಲ್ಲಿ ಯುನೆಸ್ಕೋ ಮನ್ನಣೆ ನೀಡಿತು. ಅದನ್ನು ‘ಮನುಕುಲದ ಅತ್ಯಂತ ಪ್ರಶಸ್ತ ಕಲೆ’ ಎಂದು ಕೂಡಾ ಘೋಷಿಸಿತು. ಈ ಘೋಷಣೆಯ ಬೆನ್ನಲ್ಲಿಯೇ ಕುಟಿಯಾಟ್ಟಂನ ದಾಖಲಾತಿ, ಸಂರಕ್ಷಣೆ, ಪರಿಷ್ಕರಣೆ, ಮತ್ತು ಪ್ರದರ್ಶನಗಳಿಗೆ ವಿಶೇಷ ಅನುದಾನ ಬಿಡುಗಡೆ ಮಾಡಿತು. 2010ರಲ್ಲಿ ಈ ಕುರಿತು ಯುನೆಸ್ಕೋ ಒಂದು ವಿವರವಾದ ವರದಿಯನ್ನು ಬಿಡುಗಡೆಮಾಡಿತು. ಅದರ ಪ್ರಕಾರ ಕಳೆದ 10 ವರ್ಷಗಳಲ್ಲಿ ಕುಟಿಯಾಟ್ಟಂನ ಸಂರಕ್ಷಣೆಗೆ ಸುಮಾರು 90 ಕೋಟಿ ರೂಪಾಯಿ ಬಿಡುಗಡೆ ಆಗಿದೆ. ಅದರ ಪರಿಣಾಮವಾಗಿ ಇಂದು–

 • ಜನರ ನಡುವಿನಿಂದ ಮರೆಯಾಗಿ ಹೋಗುತ್ತಿದ್ದ ಕುಟಿಯಾಟ್ಟಂ ಮರು ಜೀವ ಪಡೆಯಿತು.
 • ಈ ಕಲೆಯನ್ನು ಆಧುನಿಕ ಪ್ರೇಕ್ಷಕರಿಗೆ, ಅದರಲ್ಲೂ ಮುಖ್ಯವಾಗಿ ಅಂತಾರಾಷ್ಟ್ರೀಯ ಪ್ರೇಕ್ಷಕರಿಗೆ ಪರಿಚಯಿಸಲಾಯಿತು. ಇದಕ್ಕಾಗಿ ಕಲಾತಂಡಗಳನ್ನು ಪರಿಷ್ಕರಿಸಲಾಯಿತು.
 • ಅಂತರರಾಷ್ಟ್ರೀಯ ಸಾಂಸ್ಕೃತಿಕ ವೇದಿಕೆಗಳಲ್ಲಿ ಕುಟಿಯಾಟ್ಟಂ ಅನ್ನು ಪ್ರದರ್ಶಿಸಲಾಗುತ್ತಿದೆ.
 • ಈ ಕಲೆಯ ಕುರಿತು ಮಹತ್ವದ ಸಂಶೋಧನೆಗಳು ನಡೆದು, ಗ್ರಂಥಗಳು ಮತ್ತು ಲೇಖನಗಳು ಪ್ರಕಟವಾಗಿವೆ.
 • ಕುಟಿಯಾಟ್ಟಂ ಕುರಿತು ಸಂಶೋಧನೆ ಮಾಡುವ ವಿದ್ವಾಂಸರಿಗೆ ಶಿಷ್ಯವೇತನ ನೀಡಲಾಗುತ್ತಿದೆ.
 • ಕುಟಿಯಾಟ್ಟಂ ಕೇಂದ್ರವಾಗಿರಿಸಿಕೊಂಡ ವಸ್ತು ಸಂಗ್ರಹಾಲಯದ ಸ್ಥಾಪನೆ.
 • ಕುಟ್ಟಿಯಾಟ್ಟಂ ಕಲಿಯುವ ವಿದ್ಯಾರ್ಥಿಗಳಿಗೆ ‘ಅಂತರ­ರಾಷ್ಟ್ರೀಯ ಕಲಾ ಶಾಲೆ’ಗಳ ನಿರ್ಮಾಣ, ಇತ್ಯಾದಿ.
ಯುನೆಸ್ಕೋ ಮನ್ನಣೆಯಿಂದಾಗಿ ತೆರೆಮರೆಗೆ ಸರಿಯುತ್ತಿದ್ದ ಕಲೆಯೊಂದು ಮುನ್ನೆಲೆಗೆ ಬಂದು ವಿಜೃಂಭಿಸುತ್ತಿರುವ ಕತೆಯಿದು. ನಿರ್ವಿವಾದವಾಗಿ ಯುನೆಸ್ಕೋ ಮನ್ನಣೆಗೆ ಒಳಗಾಗ­ಬಹುದಾದ ಅನೇಕ ಕಲೆಗಳು ಕರ್ನಾಟಕದಲ್ಲಿ ಇವೆ. ಅಂಥ ಮನ್ನಣೆಗೆ ಯುನೆಸ್ಕೋ ತಜ್ಞರ ಸಮಿತಿ ನಿಗದಿ ಮಾಡಿದ ಅರ್ಹತೆ­ಗಳನ್ನು ನಮ್ಮ ಅನೇಕ ಕಲೆಗಳು ಸುಲಭವಾಗಿ ಪೂರೈಸುತ್ತವೆ.

ತಮ್ಮ ಅಪೂರ್ವ ಸಂಗೀತಗುಣ, ಬಣ್ಣ, ಹೆಜ್ಜೆಗಾರಿಕೆ, ವೇಷಭೂಷಣಗಳು ಮತ್ತು ಸುದೀರ್ಘ ಚರಿತ್ರೆಗಳಿಂದ ಅಪೂರ್ವವಾಗಿರುವ ಹಲವು ಕಲೆಗಳನ್ನು ಕನ್ನಡದ ಕಲಾವಿದರು ಇವತ್ತಿನವರೆಗೆ ಉಳಿಸಿಕೊಂಡು ಬಂದಿದ್ದಾರೆ. ತುಂಗಭದ್ರಾ ನದಿಯ ಉತ್ತರ ಭಾಗದಲ್ಲಿನ ಅಲಾವಿ ಕುಣಿತ, ಕರಡಿ ಮಜಲು, ಗೊಂದಲಿಗರ ಮೇಳ, ಜಗ್ಗಲಿಗೆ, ಜೋಗತಿ ಕುಣಿತ, ಪುರವಂತಿಕೆ ಮೊದಲಾದುವು, ದಕ್ಷಿಣ ಕರ್ನಾಟಕದಲ್ಲಿ ಪ್ರಚಲಿತದಲ್ಲಿರುವ ಪೂಜಾ ಕುಣಿತ, ಕರಗ, ಡೊಳ್ಳು, ವೀರಗಾಸೆ, ನೀಲಗಾರರ ಮೇಳ, ಬೀಸು ಕಂಸಾಳೆ, ಸೋಮನ ಕುಣಿತ ಮೊದಲಾದುವು, ಕರಾವಳಿ ಭಾಗದ ಆಟಿ ಕಳೆಂಜ, ಕರಂಗೋಲು, ಸಿದ್ಧವೇಷ, ಸುಗ್ಗಿ ಕುಣಿತ, ಜಾಲಾಟ, ಭೂತಾರಾಧನೆ, ತಾರ್ಲೆ ಕುಣಿತ, ಪಾಣರಾಟ, ಕಾಡ್ಯನಾಟ, ಮೊದಲಾದುವು ನಮ್ಮ ನಡುವಿನ ಅನನ್ಯ ಕಲಾ ಪ್ರಕಾರಗಳು.

ಈ ಕಲೆಗಳು ತಮ್ಮ ಜೊತೆಗೆ ಕರೆದೊಯ್ಯುವ ಸುದೀರ್ಘ ಮೌಖಿಕ ಕಾವ್ಯ ಪರಂಪರೆಗಳು ಜಗತ್ತಿಗೇ ಅಪೂರ್ವ. ಇವುಗಳ ಜೊತೆಗೆ ಈಗ ಅವಸಾನದ ಹಾದಿ ಹಿಡಿಯುತ್ತಿರುವ ದಾಸರಾಟ, ಪಗರಣ, ಹೂವಿನ ಕೋಲು, ತೊಗಲು ಬೊಂಬೆಯಾಟ, ಸಂಗ್ಯಾಬಾಳ್ಯಾ, ಶ್ರೀಕೃಷ್ಣ ಪಾರಿಜಾತ, ದೊಡ್ಡಾಟ, ಮೊದಲಾದ ಪ್ರದರ್ಶನ ಕಲೆಗಳನ್ನು ಇರಿಸಿ ನೋಡಿದಾಗ ಕರ್ನಾಟಕದ ವರ್ಣರಂಜಿತ ಕಲಾಪರಂರೆಗಳ ಒಂದು ದೊಡ್ಡ ಲೋಕ ನಮ್ಮ ಕಣ್ಣೆದುರು ಬಂದು ನಿಲ್ಲುತ್ತದೆ. ಇಷ್ಟಿದ್ದರೂ ಜಾಗತೀಕರಣದ ಇಂದಿನ ಸಂದರ್ಭದಲ್ಲಿ ನಾವೆಲ್ಲ ನೋಡುತ್ತಿರುವಂತೆ ಈ ಕಲೆಗಳು ನಿಧಾನವಾಗಿ ಮರೆಯಾಗುತ್ತಿವೆ. ಹಿರಿಯ ತಲೆಮಾರಿಗೆ ಸೇರಿದ ಕಲಾವಿದರು ತಮ್ಮ ಮಕ್ಕಳು ಈ ಕಲೆಗಳನ್ನು ಮುಂದುವರಿಸುವುದು ಬೇಡವೆಂದು ಪ್ರಾಮಾಣಿಕವಾಗಿ ಹೇಳುತ್ತಿದ್ದಾರೆ. ಹೊಸ ತಲೆಮಾರಿನ ಹುಡುಗರು ಈ ಕಲೆಗಳತ್ತ ಬರುತ್ತಿಲ್ಲ. ಹೊಸ ಪ್ರೇಕ್ಷಕರನ್ನು ಸೃಷ್ಟಿಸಿಕೊಳ್ಳುವಲ್ಲಿ ಈ ಕಲೆಗಳು ಈಚೆಗೆ ಯಶಸ್ವಿಯಾಗಿಲ್ಲ. ಕಾರಣ ಮನುಕುಲ ಸೃಷ್ಟಿಸಿಕೊಂಡ ಅಭೂತಪೂರ್ವ ಕಲಾಯುಗವೊಂದು ಮುಗಿದುಹೋಗುವ ಹಾಗೆ ತೋರುತ್ತಿದೆ. ಇಂದಲ್ಲ ನಾಳೆ ಅಂಥದ್ದೊಂದು ಘಟನೆ ನಡೆಯುವುದಂತೂ ನಿಜ.

ಇಂಥ ಪರಿಸ್ಥಿತಿಯಲ್ಲಿ ನಮ್ಮ ಯಾವುದೇ ಕಲೆಗೆ ಯುನೆಸ್ಕೋ ಮನ್ನಣೆ ದೊರೆಯುವಂತೆ ಮಾಡಲು ಈ ಕೆಳಗಿನ ಕೆಲಸಗಳನ್ನು ಮಾಡಬೇಕಾಗುತ್ತದೆ.

 1. ಯುನೆಸ್ಕೋ ಬಿಡುಗಡೆ ಮಾಡಿದ ಸರಳವಾದ ಅರ್ಜಿ ಫಾರಂ ಒಂದನ್ನು ಬಹಳ ಎಚ್ಚರಿಕೆಯಿಂದ ತುಂಬುವುದು. ಅದರಲ್ಲಿ ಕಲೆಯೊಂದು ಪ್ರಚಲಿತದಲ್ಲಿರುವ ಪ್ರದೇಶ, ಅದರ ಬೇರೆ ಬೇರೆ ಹೆಸರುಗಳು, ಅದನ್ನು ಉಳಿಸಿಕೊಂಡು ಬರುತ್ತಿರುವ ಸಮುದಾಯಗಳು, ಕಲೆಯ ವಿವರ, ಅದು ಜನಪ್ರಿಯವಾಗಿರುವ ಭೌಗೋಳಿಕ ಪ್ರದೇಶಗಳು, ರಂಗಸ್ಥಳ, ಸಂಗೀತ, ವೇಷ ಭೂಷಣಗಳು, ನೃತ್ಯ ವೈವಿಧ್ಯ ಮತ್ತತರ ವಿಷಯಗಳನ್ನು ಸಂಕ್ಷಿಪ್ತವಾಗಿ ಆದರೆ ವೈಜ್ಞಾನಿಕವಾಗಿ ವಿವರಿಸಬೇಕು.

 2. ಯಾವ ಕಲೆಯ ಬಗ್ಗೆ ಬೇಡಿಕೆ ಸಲ್ಲಿಸಲಾಗುವುದೋ ಆ ಕಲೆಯ ಬಗ್ಗೆ ಐದರಿಂದ ಆರು ನಿಮಿಷಗಳ ಅವಧಿಯ ಪರಿಣಾಮಕಾರೀ ಸಾಕ್ಷ್ಯಚಿತ್ರವೊಂದನ್ನು ಅರ್ಜಿ ಜೊತೆ ಲಗತ್ತೀಕರಿಸುವುದು. ಈ ಸಾಕ್ಷ್ಯಚಿತ್ರವು ವಿದೇಶೀ ವಿದ್ವಾಂಸರಿಗೆ ಕಲೆಯನ್ನು ಪರಿಚಯಿಸುವುದಲ್ಲದೆ ಅದರ ಮಹತ್ವವನ್ನು ಮನಗಾಣಿಸುವಂತಿರಬೇಕು.


ಈ ಎರಡು ಕೆಲಸಗಳನ್ನು ಮಾಡಬೇಕಾದ್ದು ಅಗತ್ಯ. ಆದರೆ ಇದನ್ನು ಸುಲಭದ ಕೆಲಸವೆಂದು ಯಾರಾದರೂ ಭಾವಿಸಬಾರದು. ಇದಕ್ಕೆ ಯಕ್ಷಗಾನದಲ್ಲಿ ನಡೆದ ಪ್ರಯತ್ನಗಳೇ ಸಾಕ್ಷಿ.

ಕುಂಬಳೆ ಸುಂದರ ರಾಯರು
ಹಿರಿಯ ಕಲಾವಿದರಾದ ಕುಂಬಳೆ ಸುಂದರ ರಾಯರು ‘ಯಕ್ಷಗಾನ ಅಕಾಡೆಮಿ’ಯ ಅಧ್ಯಕ್ಷರಾಗಿದ್ದಾಗ ಅಗತ್ಯ ಮಾಹಿತಿಗಳೊಡನೆ ದೆಹಲಿಯ ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದರು. ಆದರೆ ಆ ಪ್ರಸ್ತಾವನೆಯನ್ನು ಕಲಾಕೇಂದ್ರವು ಯುನೆಸ್ಕೋಗೆ ಕಳಿಸಿಕೊಡಲೇ ಇಲ್ಲ. ಏಕೆಂದರೆ ಅವರ ಪ್ರಕಾರ ಪ್ರಸ್ತಾವನೆಯ ಗುಣಮಟ್ಟ ಏನೇನೂ ಸಾಲದು. ಜೊತೆಗೆ ಯಕ್ಷಗಾನವು ಎಷ್ಟು ವಿಸ್ತಾರವಾಗಿ ಬೆಳೆದಿದೆ ಎಂದರೆ ಅದನ್ನು 250 ಪದಗಳಲ್ಲಿ ಸರಿಯಾಗಿ ವಿವರಿಸುವುದು ಕಷ್ಟ. ಸಮುದಾಯವೊಂದರ ಪಾರಂಪರಿಕ ಕಲೆಯೆಂದು ಯಕ್ಷಗಾನವನ್ನು ಗುರುತಿಸಲು ಸಾಧ್ಯವಾದರೆ ಆಗ ಅದಕ್ಕೆ ಯುನೆಸ್ಕೋ ಮನ್ನಣೆ ದೊರಕುವುದು ಸುಲಭವಾದೀತು ಎಂಬ ನೆಲೆಯಲ್ಲಿ ಇಡಗುಂಜಿ ಮೇಳದ ಕೆರೆಮನೆ ಶಿವಾನಂದ ಹೆಗಡೆ ಅವರು ತಮ್ಮ ಮೇಳವನ್ನೇ ಮನ್ನಿಸುವಂತೆ ಇನ್ನೊಂದು ಪ್ರಸ್ತಾವನೆಯನ್ನೂ ಕಳಿಸಿದ್ದರು. ಅದು ಕೂಡಾ ಫಲಪ್ರದವಾಗಲಿಲ್ಲ. ಇದಾದ ನಂತರ ಅದರ ಬಗ್ಗೆ ಅಲ್ಲಿ ಇಲ್ಲಿ ಕೆಲವು ವೇದಿಕೆಗಳಲ್ಲಿ ಸರಳವಾದ ಮಾತುಗಳು ಕೇಳಿಬಂದುವೇ ವಿನಾ ಯಾರೂ ಗಂಭೀರ ಪ್ರಯತ್ನ ಮಾಡಲೇ ಇಲ್ಲ.

ಈ ವೈಫಲ್ಯಕ್ಕೆ ಎರಡು ಮುಖಗಳಿವೆ. ಮೊದಲನೆಯದಾಗಿ ಯುನೆಸ್ಕೋ ಅಂಗೀಕರಿಸಿಕೊಂಡ ಕೆಲವು ನಿಯಮಗಳಿಗೆ ಯಕ್ಷಗಾನದಂಥ ಕಲೆಯನ್ನು ಒಗ್ಗಿಸುವುದು ಸುಲಭವಲ್ಲ. ನಿಯಮಗಳಲ್ಲಿ ಮಾರ್ಪಾಡುಗಳನ್ನು ಮಾಡಿಸುವಷ್ಟು ಶಕ್ತಿ ನಮಗೂ ಇಲ್ಲ, ನಮ್ಮನ್ನು ವಿಶ್ವ ಸಂಸ್ಥೆಯಲ್ಲಿ ಪ್ರತಿನಿಧಿಸುವವರಿಗೂ ಇಲ್ಲ. ಎರಡನೆಯದಾಗಿ ಜಗತ್ತಿನ ಹಲವು ಕಲೆಗಳಿಗೆ ಹೋಲಿಸಿದರೆ ಯಕ್ಷಗಾನ ತಲುಪಿದ ಎತ್ತರ ಅಸಾಧಾರಣವಾದುದು. ಇಂದಿಗೂ ಲಕ್ಷಾಂತರ ಜನರು ಅದನ್ನು ನೋಡುತ್ತಾರೆ. ಸಣ್ಣ ಭೌಗೋಳಿಕ ವಲಯದಲ್ಲಿ ಸುಮಾರು 30ಕ್ಕೂ ಹೆಚ್ಚು ವೃತ್ತಿಪರ ಮೇಳಗಳು ಮತ್ತು ಸಾವಿರಕ್ಕೂ ಮಿಕ್ಕು ಹವ್ಯಾಸಿ ಮೇಳಗಳು ವಿವಿಧ ಪ್ರಸಂಗಗಳನ್ನು ಪ್ರದರ್ಶಿಸುತ್ತಲೇ ಬರುತ್ತಿವೆ. ಯಕ್ಷಗಾನದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿಗಳ ವ್ಯವಹಾರವೂ ನಡೆಯುತ್ತಿದೆ. ಕೆಲವು ಪ್ರಸಂಗಗಳ ಪ್ರದರ್ಶನದ ಟಿಕೆಟ್‌ಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತವೆ. ಯಕ್ಷಗಾನ ಕಲಾವಿದರ ಪ್ರತಿಭೆಯಂತೂ ಅನ್ಯಾದೃಶವಾದುದು.

ತಮ್ಮ ವಿಶಿಷ್ಟ ಬಣ್ಣಗಾರಿಕೆ, ವೇಷ ಭೂಷಣಗಳು, ನೃತ್ಯ ಮತ್ತು ಮಾತುಗಾರಿಕೆಗಳಿಂದ ತಮ್ಮದೇ ಆದ ಪರಂಪರೆಯನ್ನು ನಿರ್ಮಿಸಿಕೊಳ್ಳುವ ಚೈತನ್ಯಶಾಲಿಗಳು ಅವರು. ಒಂದು ಸಣಕಲು ಸಾಲನ್ನು ಆಧರಿಸಿ, ರಂಗದ ಮೇಲೆ ಅವರು ಕತೆಯನ್ನು ಕಟ್ಟುವ ರೀತಿಗೆ ಮನಸೋಲದವರಿಲ್ಲ. ಅದೂ ಒಂದೊಂದು ದಿವಸ ಒಂದೊಂದು ರೀತಿ. ಇವತ್ತು ವಾಲಿಯ ವಾದ ಹಿರಿದಾದರೆ, ನಾಳೆ ರಾಮನದ್ದು ಮಿಗಿಲು. ಒಂದು ದಿನ ರಾವಣನ ಬಣ್ಣ, ಮತ್ತೊಂದು ದಿನ ದೂತನ ಹಾಸ್ಯ, ಇನ್ನೊಂದು ದಿನ ಅಭಿಮನ್ಯುವಿನ ಕುಣಿತ– ಹೀಗೆ ಇದೊಂದು ಕೊನೆಯಿಲ್ಲದ ಕುತೂಹಲಗಳ ಲೋಕ.

ಭಾಗವತರುಗಳು ಮತ್ತು ಚೆಂಡೆ-ಮದ್ದಳೆಯ ಕಲಾವಿದರುಗಳು ಕೂಡಾ ಯಕ್ಷಗಾನ ಲೋಕದ ಸರಸ್ವತಿಯ ದಿಗ್ವಿಜಯ ಕಥನದ ರೂವಾರಿಗಳೇ ಹೌದು. ಒಬ್ಬೊಬ್ಬರದು ಕೂಡಾ ಒಂದೊಂದು ಬಗೆಯ ಅಸಾಮಾನ್ಯ ಪ್ರತಿಭೆ. ಯಕ್ಷಗಾನ ಹಾಡುಗಾರಿಕೆಯಂತೂ ಭಾಗವತರುಗಳಿಗೆ ಇಂದು ತಾರಾಮೌಲ್ಯವನ್ನು ಒದಗಿಸಿಕೊಟ್ಟಿದೆ. ದಿನದಿಂದ ದಿನಕ್ಕೆ, ಕಲಾವಿದರಿಂದ ಕಲಾವಿದರಿಗೆ ಬದಲಾಗುತ್ತಿರುವ ಹಾಡುಗಾರಿಕೆಯ ಶೈಲಿಗಳು ಯಕ್ಷಗಾನ ಭಾಗವತಿಕೆಯ ಬಹುರೂಪೀ ಪರಂಪರೆಗೆ ಒಳ್ಳೆಯ ಉದಾಹರಣೆಯಾಗಿದೆ. ಇಂಥ ಸಮೃದ್ಧ ಕಲೆಯೊಂದಕ್ಕೆ ಯುನೆಸ್ಕೋ ಮನ್ನಣೆ ದೊರೆಯಬೇಕಾದ್ದು ಅಗತ್ಯ. ಆದರೆ ದೊರೆಯುತ್ತಿಲ್ಲ, ಯಾಕೆ?

ಮುಖ್ಯವಾಗಿ, ಯಕ್ಷಗಾನ ಕಲೆಯ ಆಳ ಮತ್ತು ವಿಸ್ತಾರಗಳೇ ಅದಕ್ಕೀಗ ಶತ್ರುವಾಗಿದೆ. ಈ ಕಲೆಯನ್ನು ಇವತ್ತು ಒಂದು ಚೌಕಟ್ಟಿನಲ್ಲಿರಿಸಿ ವಿವರಿಸಲು ಅಸಾಧ್ಯವಾದಂಥ ಸನ್ನಿವೇಶ ನಿರ್ಮಾಣವಾಗಿದೆ. ಯಕ್ಷಗಾನವನ್ನು ವೈಜ್ಞಾನಿಕವಾಗಿ ವಿವರಿಸುವ ಕಲೆ ನಮಗಿನ್ನೂ ಸಿದ್ಧಿಸಿಲ್ಲ. ಒಂದು ವಾಕ್ಯದಲ್ಲಿ ಅದನ್ನು ನಿರ್ವಚಿಸುವುದು ಹೇಗೆ? ಕೆಲವರ ಪ್ರಕಾರ ಅದೊಂದು ಜನಪದ ಕಲೆ, ಇನ್ನು ಕೆಲವರ ಪ್ರಕಾರ ಅದು ಶಾಸ್ತ್ರೀಯ ಕಲೆ, ಮತ್ತೆ ಕೆಲವರ ಪ್ರಕಾರ ಅದು ಅರ್ಧ ಶಾಸ್ತ್ರೀಯ... ಹೀಗೆ ಚರ್ಚೆಗಳು ನಡೆಯುತ್ತಲೇ ಇರುವಾಗ ಯಕ್ಷಗಾನದ ಅನನ್ಯತೆಯನ್ನು ಬೇರೆಯವರಿಗೆ ವೈಜ್ಞಾನಿಕ ಪರಿಭಾಷೆಯಲ್ಲಿ ತಿಳಿಸುವ ಪರಿ ಯಾವುದು? ಯಕ್ಷಗಾನದ ಅಪಾರ ಜನಪ್ರಿಯತೆಯು ಅದರ ಕುರಿತ ಸಂಶೋಧನೆ ಮತ್ತು ವಿಮರ್ಶೆಯನ್ನು ಹಿಂದೆ ತಳ್ಳಿಬಿಟ್ಟಿದೆ.

ಜನಪ್ರಿಯತೆಯು ಸದಾ ಏಕರೂಪತೆಯನ್ನು ನಿರಾಕರಿಸಿ, ಬಹುರೂಪತೆಯನ್ನು ಸಾಧ್ಯ ಮಾಡುತ್ತದೆ. ಯಕ್ಷಗಾನದ ಬಹುರೂಪತೆಯ ಪ್ರಶ್ನೆ ತುಂಬಾ ಸಂಕೀರ್ಣವಾದುದು. ಅದರಲ್ಲಿ ತೆಂಕು–ಬಡಗುಗಳೆಂಬ ಎರಡು ಪ್ರಾದೇಶಿಕ ಪ್ರಭೇದಗಳಿದ್ದು ಅವುಗಳಲ್ಲಿ ಮತ್ತೆ ಕೆಲವು ಸೂಕ್ಷ್ಮ ವ್ಯತ್ಯಾಸಗಳು ಕಾಣಸಿಗುತ್ತವೆ. ತುಳು ಯಕ್ಷಗಾನಗಳದ್ದು ಇನ್ನೊಂದೇ ರೂಪ. ಇವುಗಳಲ್ಲಿ ಯಾವುದನ್ನು ಯಕ್ಷಗಾನದ ಕನಿಷ್ಠತಮ ಮೂಲಭೂತ ಘಟಕ ಎಂದು ಹೇಳುವುದು ಅಸಾಧ್ಯ. ಹಾಡುಗಾರಿಕೆ, ಮುಖವರ್ಣಿಕೆ, ನೃತ್ಯ, ಸಂಗೀತ ವಾದ್ಯಗಳೇ ಮೊದಲಾದ ವಿಷಯಗಳಲ್ಲಿ ಅಪಾರ ವೈವಿಧ್ಯವನ್ನು ತೋರಿಸುವ ಯಕ್ಷಗಾನದ ಬಗ್ಗೆ ಒಮ್ಮತ ಮೂಡಿಸುವ ಹಾಗೆ ಮಾತಾಡುವುದಾಗಲೀ ಬರೆಯವುದಾಗಲೀ ಅಸಾಧ್ಯ.

ಇಂಥ ಸಂಕೀರ್ಣ ಪರಿಸ್ಥಿತಿಯಲ್ಲಿ ಯಕ್ಷಗಾನ ಕಲೆಗೆ ಯುನೆಸ್ಕೋ ಮನ್ನಣೆ ದೊರೆಯುವಂತೆ ಮಾಡಲು ಈ ಕೆಳಗಿನ ಕೆಲಸಗಳನ್ನು ಅಗತ್ಯವಾಗಿ ಮಾಡಲು ಸಾಧ್ಯವೇ ಎಂದು ಯಕ್ಷಗಾನ ಪ್ರಿಯರು ಯೋಚಿಸಬೇಕು–

 1. ತೆಂಕು ಬಡಗು ಎಂಬ ವ್ಯತ್ಯಾಸಗಳನ್ನು ತೋರಿಸದೆ, ಇದುವೇ ಯಕ್ಷಗಾನ ಎಂದು ಅಧಿಕೃತವಾಗಿ ವಿವರಿಸುವ ಸಾಕ್ಷ್ಯಚಿತ್ರವೊಂದನ್ನು ಸಿದ್ಧಪಡಿಸುವುದು. ಈ ಕೆಲಸ ಅತ್ಯಂತ ವೃತ್ತಿಪರವಾಗಿ ನಡೆಯಬೇಕು. ‘ಬಿಬಿಸಿ’ಯವರು ಒಮ್ಮೆ ತೋರಿಸಿದ 2 ನಿಮಿಷಗಳ ಯಕ್ಷಗಾನಕ್ಕೆ ಏಳು ಕ್ಯಾಮೆರಾಗಳನ್ನು ಬಳಸಿದ್ದರು, ಮತ್ತು ಅದಕ್ಕಾಗಿ ಸುಮಾರು ಮೂರು ಗಂಟೆಗಳ ಅವಧಿಯ ದಾಖಲಾತಿ ನಡೆಸಿದ್ದರು.

  ಹವಾಯಿ ದ್ವೀಪದ ಹೊನುಲುವಿನಲ್ಲಿ ನಡೆದ ಏಷಿಯಾ ಸಂಶೋಧಕರ ಸಮ್ಮೇಳನದಲ್ಲಿ ನಾನು ನೋಡಿದ 10 ನಿಮಿಷಗಳ ಕಥಕ್ಕಳಿ ಸಾಕ್ಷ್ಯಚಿತ್ರವು ನಮಗೆ ಮಾದರಿ ಆಗಬೇಕು. ಇಂಥ ಗುಣಮಟ್ಟದ ಸಾಕ್ಷ್ಯಚಿತ್ರದ ನಿರ್ಮಾಣ ಕಷ್ಟ ಸಾಧ್ಯ. ಏಕೆಂದರೆ ಅಪಾರವಾದ ವೈವಿಧ್ಯಗಳಿರುವ ಯಕ್ಷಗಾನವನ್ನು ಅಧಿಕೃತಗೊಳಿಸಿ, ಅದರಿಂದ ಒಂದು ಪಠ್ಯವನ್ನು ಸಿದ್ಧಗೊಳಿಸಿದರೆ ಯುನೆಸ್ಕೋವನ್ನು ನಾವು ದಾರಿ ತಪ್ಪಿಸಿದಂತಾಗುತ್ತದೆ. ಅಂಥ ಸಂದರ್ಭದಲ್ಲಿ ಒಂದು ವೇಳೆ ಮನ್ನಣೆ ದೊರಕಿದರೂ ಏನೂ ಮಾಡಲಾಗದ ಸ್ಥಿತಿಗೆ ನಾವು ತಲುಪಿದಂತಾಗುತ್ತದೆ.

 2. ಇದುವೇ ಯಕ್ಷಗಾನ ಪರಂಪರೆ, ಇದರ ಲಕ್ಷಣಗಳು ಇವು ಎಂದು ಖಚಿತವಾಗಿ ವಿವರಿಸುವ ಕೆಲವು ತೀರ್ಮಾನಗಳನ್ನು ನಾವು ತೆಗೆದುಕೊಳ್ಳಲೇಬೇಕಾಗುತ್ತದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇದೂ ಅಸಾಧ್ಯವಾದುದು. ಏಕೆಂದರೆ ಯಕ್ಷಗಾನ ಪರಂಪರೆಯ ಬಗ್ಗೆ ಕೊನೆ ಮಾತುಗಳನ್ನು ಹೇಳುವುದು ನಮಗಿಂದು ಸಾಧ್ಯವಿಲ್ಲ. ಆ ಕಲೆ ಎಷ್ಟು ಸೃಜನಶೀಲವಾಗಿದೆಯೆಂದರೆ, ಅಲ್ಲಿ ಪ್ರತಿಭಾನ್ವಿತ ಕಲಾವಿದರು ತಮ್ಮದೇ ಪರಂಪರೆಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಇವುಗಳಲ್ಲಿ ಯಾರದ್ದಾದರೂ ಒಂದು ಶೈಲಿಯನ್ನು ಅಧಿಕೃತ ಎಂದು ಹೇಳುವುದು ಕಷ್ಟ, ಮಾತ್ರವಲ್ಲ ಹಾಗೆ ಹೇಳುವುದು ಕಲೆಯ ಅಂತಃಸತ್ವದ ದೃಷ್ಟಿಯಿಂದ ಅಪರಾಧ ಕೂಡಾ ಹೌದು.

 3. ಯುನೆಸ್ಕೋವು ಸಮುದಾಯ ಕೇಂದ್ರಿತ ಕಲೆಗಳಿಗೆ ಹೆಚ್ಚು ಆದ್ಯತೆ ನೀಡುತ್ತದೆ. ಆದರೆ ಯಕ್ಷಗಾನವು ಇಂದು ಸಮುದಾಯದ ಗಡಿಗಳನ್ನು ಮೀರಿ ಸಾರ್ವತ್ರಿಕ ಕಲೆಯಾಗಿ ಬೆಳೆದಿದೆ. ಇಷ್ಟಿದ್ದರೂ ಯಾವುದಾದರೂ ಒಂದು ಹಳೆಯ ತಂಡವನ್ನು ಯಕ್ಷಗಾನದ ಅಧಿಕೃತ ಪ್ರತಿನಿಧಿ ಎಂದು ಹೇಳಲು ಸಾಧ್ಯವೋ ಎಂದು ಯೋಚಿಸಲು ಸಾಧ್ಯವಿದೆ. ಉದಾಹರಣೆಗೆ ಕೂಡ್ಲು ಮೇಳ, ಸುರತ್ಕಲ್ ಮೇಳ, ಧರ್ಮಸ್ಥಳ ಮೇಳ, ಇಡಗುಂಜಿ ಮೇಳ, ಸಾಲಿಗ್ರಾಮ ಮೇಳ, ಪೆರ್ಡೂರು ಮೇಳ ಇತ್ಯಾದಿ. ಹೀಗೆ ಮಾಡುವುದೂ ಕಷ್ಟ ಯಾಕೆಂದರೆ, ಈ ಮೇಳಗಳಿಗೆ ಅವರದ್ದೇ ಆದ ಕಲಾವಿದರು ಎಂದಿಲ್ಲ. ಪ್ರತಿ ವರ್ಷವೂ ಕಲಾವಿದರು ಬೇಕೆಂದರೆ ತಂಡವನ್ನು ಬದಲಾಯಿಸಬಹುದು. ಅತ್ಯುತ್ತಮ ಕಲಾವಿದರಿರುವ ಒಂದು ತಂಡವನ್ನು ಅಮೂರ್ತವಾಗಿ ರೂಪಿಸುವುದೂ ಅಸಾಧ್ಯ. ಜೊತೆಗೆ ಯಕ್ಷಗಾನಕ್ಕೆ ಏಕ ರೂಪತೆಯನ್ನು ತಂದುಕೊಡಲು ಮಾಡುವ ಯಾವುದೇ ಪ್ರಯತ್ನಗಳು ಅದರ ಬೆಳವಣಿಗೆ ಸಹಾಯಕವಾಗಲಾರವು.

ಇಂಥ ಹಲವು ಕಾರಣಗಳಿಂದಾಗಿ ಯಕ್ಷಗಾನಕ್ಕೆ ಯುನೆಸ್ಕೋ ಮನ್ನಣೆ ದೊರಕುವುದು ಕಷ್ಟವಾಗಬಹುದು. ಎಲ್ಲ ಯಕ್ಷಗಾನ ಪ್ರಿಯರು ಒಂದೆಡೆ ಸೇರಿ, ಒಂದು ನಿರ್ದಿಷ್ಟ ವಿಷಯದ ಬಗೆಗೆ ಸರ್ವಾನುಮತದ ತೀರ್ಮಾನಕ್ಕೆ ಬರುವುದು ಕನಸಿನ ವಿಷಯ. ಆ ಕಲೆಯು ಅಷ್ಟೊಂದು ಸೃಜನಶೀಲವೂ ವೈವಿಧ್ಯಮಯವೂ ಆಗಿರುವುದೇ ಅದಕ್ಕೆ ಕಾರಣ.

ಯಕ್ಷಗಾನದ ವಿಷಯ ಹಾಗಿರಲಿ, ಯುನೆಸ್ಕೋ ಪಟ್ಟಿಗೆ ತಕ್ಕುದಾದ ಅನೇಕ ಕಲೆಗಳು ಕರ್ನಾಟಕದಲ್ಲಿವೆ. ಅವುಗಳಿಗೆ ಅಂತರರಾಷ್ಟ್ರೀಯ ಮಾನ್ಯತೆ ತಂದುಕೊಡುವ ಕುರಿತ ಚಿಂತನೆ–ಪ್ರಯತ್ನಗಳು ಇನ್ನು ಮುಂದಾದರೂ ನಡೆಯಬೇಕಿದೆ.ಕೃಪೆ : http://prajavani.com


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ