ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
22 ಗಂಟೆ ರಂಜಿಸಿದ ಸಂಪಾಜೆ ಯಕ್ಷೋತ್ಸವ

ಲೇಖಕರು : ಕೃಷ್ಣ ಭಟ್ ಅಳದಂಗಡಿ
ಸೋಮವಾರ, ನವ೦ಬರ್ 3 , 2014
ನವ೦ಬರ್ 3, 2014

22 ಗಂಟೆ ರಂಜಿಸಿದ ಸಂಪಾಜೆ ಯಕ್ಷೋತ್ಸವ

ಸುಳ್ಯ : ಶನಿವಾರ ಸಂಜೆ ಐದು ಗಂಟೆಗೆ ಭೋರ್ಗರೆವ ಕೇಳಿಯೊಂದಿಗೆ ಶುರುವಾದ ಚೆಂಡೆ ಪೆಟ್ಟಿನ ಅನುರಣನ ಕೊನೆಯಾದದ್ದು ಭಾನುವಾರ ಸಂಜೆ ಭರ್ತಿ ಮೂರು ಗಂಟೆಗೆ. ಬರೋಬ್ಬರಿ 22 ಗಂಟೆಗಳ ಕಾಲ ಯಕ್ಷಲೋಕ ತನ್ನೆಲ್ಲ ವೈಭವ, ಸಂಸ್ಕೃತಿ, ಮೇಲಾಟ, ತಮಾಷೆಗಳೊಂದಿಗೆ ವಿಜೃಂಭಿಸಿದ್ದು ಸಂಪಾಜೆಯಲ್ಲಿ.

ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ವತಿಯಿಂದ ಕಲ್ಲುಗುಂಡಿ ಶಾಲೆಯ ಮೈದಾನದಲ್ಲಿ 24ನೇ ವರ್ಷದ ಸಂಪಾಜೆ ಯಕ್ಷೋತ್ಸವ ಸಹಸ್ರಾರು ಕಲಾ ಪ್ರಿಯರ ಸಮ್ಮುಖದಲ್ಲಿ ಯಕ್ಷ ಲೋಕದ ಹೊಸ ಮಜಲನ್ನೇ ತೆರೆಯಿತು.

4 ಪ್ರಸಂಗಗಳು, 10 ಭಾಗವತರು, 14 ಮಂದಿಯ ಚೆಂಡೆ-ಮದ್ದಳೆ, 13 ಸ್ತ್ರೀ ವೇಷಧಾರಿಗಳ ರೋಮಾಂಚನ, 4 ಹಾಸ್ಯಗಾರರ ಕಚಗುಳಿ, 15ಕ್ಕೂ ಅಕ ಬಣ್ಣದ ವೇಷಗಳು ಮತ್ತು 100ಕ್ಕೂ ಅಕ ಕಲಾವಿದರ ಮಹಾ ಸಮ್ಮಿಲನಕ್ಕೆ ಸಾಕ್ಷಿಯಾದ ಉತ್ಸವದಲ್ಲಿ ಯಕ್ಷ ಸಾಮ್ರಾಜ್ಯದ ನೂರಾ ರು ಪಟ್ಟುಗಳು 1,320 ನಿಮಿಷಗಳ ಪರ್ವದಲ್ಲಿ ತೆರೆದುಕೊಂಡವು.

ಹಳೆ-ಹೊಸ ಕಲಾವಿದರ ಸಂಗಮ, ಹಿಮ್ಮೇಳ- ಮುಮ್ಮೇಳಗಳ ತಾಳ ಮೇಳ, ಕ್ಲಾಸ್ ವೀಕ್ಷಕರ ಮುಂದೆ ಕಲಾವಿದರ ಪ್ರತಿಭೆಯ ಅನಾವರಣ ಸಂಪಾಜೆ ಯಕ್ಷೋತ್ಸವ ವಿಶೇಷ. ಈ ಬಾರಿಯೂ ರಾಜ್ಯದ ಮೂಲೆ ಮೂಲೆಗಳಿಂದ ಯಕ್ಷಗಾನ ಪ್ರೇಮಿಗಳು ದಂಡು ಕಟ್ಟಿಕೊಂಡೇ ಬಂದಿದ್ದರು.

ಹೌಸ್‌ಫುಲ್: ಇಡೀ ಶಾಲೆಯ ಮೈದಾನವನ್ನು ಕೆಲವು ವಾರಗಳ ಹಿಂದೆಯೇ ಶೀಟಿನಿಂದ ಮುಚ್ಚಿ ವ್ಯವಸ್ಥೆ ಮಾಡಲಾಗಿತ್ತು. 7 ಸಾವಿರಕ್ಕೂ ಅಕ ಕುರ್ಚಿಗಳನ್ನು ಹಾಕಲಾಗಿತ್ತು. ಸಾವಿರಕ್ಕೂ ಅಕ ಮಂದಿ ಸುತ್ತಮುತ್ತ ನಿಂತು ನೋಡಬಹುದಾದ ವ್ಯವಸ್ಥೆ. ಜತೆಗೆ ನಾಲ್ಕು ಸ್ಕ್ರೀನ್‌ಗಳಲ್ಲಿ ಪ್ರಸಾರ. ಇಷ್ಟಾದರೂ ಶನಿವಾರ ರಾತ್ರಿ 12 ಗಂಟೆ ಹೊತ್ತಿಗೆ ಸಭಾಂಗಣ ಹೌಸ್‌ಫುಲ್ ಆಗಿ ಪ್ರೇಕ್ಷಕರು ಮರಳಬೇಕಾಯಿತು.

ನಾಲ್ಕು ಪ್ರಸಂಗಗಳ ಔತಣ: ಶಿವನ ಮಡದಿಯಾದ ಗೌರಿಯನ್ನು ಅಂದಕನೆಂಬ ದಾನವ ವರಿಸಲು ಬಯಸುವುದು, ಅಂತಿಮವಾಗಿ ಶಿವನಿಂದ ಜ್ಞಾನೋದಯವಾಗುವ ಪ್ರಸಂಗದಲ್ಲಿ ಕೆ. ಗೋವಿಂದ ಭಟ್, ಜಗದಾಭಿರಾಮ ಪಡುಬಿದ್ರಿ (ಅಂದಕ), ದೀಪಕ್ ರಾವ್ ಪೇಜಾವರ (ಶಿವ) ಪೈಪೋಟಿಯಲ್ಲಿ ಕುಣಿದು ಮನ ಸೆಳೆದರು. ಸಂತೋಷ್ ಕುಮಾರ್ ಹಿಲಿಯಾಣ ಅವರ ಸಖೀ ಗೀತ ಸಮ್ಮೋಹನಗೊಳಿಸಿತು.

ಬಡಗುತಿಟ್ಟಿನ ಐದು ಕಲಾವಿದರು, ಮೂವರು ಹಿಮ್ಮೇಳದವರು ಕಟ್ಟಿ ಕೊಟ್ಟ ಭೀಷ್ಮ ಪ್ರತಿಜ್ಞೆ ಅಬ್ಬರ ಚೆಂಡೆ ಪೆಟ್ಟಿನ ಉತ್ಸವದಲ್ಲಿ ಮದ್ದಳೆಯ ತಂಗಾಳಿ ಸೃಷ್ಟಿಸಿತು. ಬಳ್ಕೂರು ಕಷ್ಣ ಯಾಜಿ (ಶಂತನು), ಶಶಿಕಾಂತ್ ಶೆಟ್ಟಿ(ಯೋಜನಾಗಂಧಿ), ವಾಸುದೇವ ಸಾಮಗ(ಮಂತ್ರಿ), ಕಣ್ಣಿಮನೆ ಗಣಪತಿ ಭಟ್(ದೇವವ್ರತ) ಪಾತ್ರಗಳಿಗೆ ಜೀವ ತುಂಬಿದ ರೀತಿ ಅನನ್ಯ. ಶಶಿಕಾಂತ್ ಶೆಟ್ಟಿಯಂತೂ 'ವೀರ ಅಂಬಿಗ ರಾಯ ಕುಟೀರದೊಳ್' ಹಾಡಿಗೆ ಬೆವರು ಧಾರೆ ಸುರಿಯುವಷ್ಟು ಕುಣಿದರು. ರಾಘವೇಂದ್ರ ಆಚಾ ರ್ಯರ ಕಂಚಿನ ಕಂಠಕ್ಕೆ ಸಾಥ್ ಆಗಿ ಮೂರು ಮದ್ದಳೆ ಗಳನ್ನು ಮಾತನಾಡಿಸಿದ್ದು ಪರಮೇಶ್ವರ ಭಂಡಾರಿ.

ಪದ್ಯಾಣ, ಅಮ್ಮಣ್ಣಾಯ, ರಾಮಕೃಷ್ಣ ಮಯ್ಯ, ಕನ್ನಡಿಕಟ್ಟೆ ಈ ನಾಲ್ವರು ಭಾಗವತರ ಭರ್ಜರಿ ಹಾಡುಗಳನ್ನು ಹೊತ್ತು ತಂದ ವಂಶವಾಹಿನಿ ಹಾಸ್ಯ, ಮಾತಿನ ಚಕಮಕಿ, ಕುಣಿತ ದಾಖಲೆ, ಚರ್ಚೆ ಗಳೊಂದಿಗೆ ನೆನಪಿನಲ್ಲಿ ಉಳಿಯಿತು. ಸುಣ್ಣಂಬಳ ಅವರ ದಿಕ್ಕು ತಪ್ಪದ ಧ್ರುವ ಸಂಧಿ, ದಿಕ್ಕು ತಪ್ಪಿಸಲು ಯತ್ನಿಸುವ ಪೆರ್ಮುದೆ ಅವರ ಯುಧಾಜಿತು, ತೂಕದ ಮಾತಿನ ವಾಸುದೇವ ರಂಗಾ ಭಟ್ಟರ ಭಾರದ್ವಾಜ, ಸಂಚಲನ ಮೂಡಿಸುವ ಸೀತಾರಾಮ್ ಕಟೀಲ್ ಹಾಸ್ಯದೊಂದಿಗೆ ವಿಜೃಂಭಿಸಿತು.

ದಿವಾಕರ ರೈ ಸಂಪಾಜೆ(ಸುದರ್ಶನ), ಚಂದ್ರಶೇಖರ ಧರ್ಮಸ್ಥಳ (ಶತ್ರುಜಿತ) ಅವರ ಪೈಪೋಟಿಯ 30 ನಿಮಿಷಗಳ ಸುತ್ತು ಕುಣಿತ ಹೊಸ ದಾಖಲೆ ಸೃಷ್ಟಿಸಿತು. ಸುಬ್ರಹ್ಮಣ್ಯ ಯಲಗುಪ್ಪರ ಶಶಿಕಲೆ ರಮ್ಯ ಚೈತ್ರ ಕಾಲ.

ಪಂಥಾಹ್ವಾನದಲ್ಲಿ ಸೋತು ಕದ್ರುವಿನ ದಾಸಿಯಾದ ತಾಯಿ ವಿನತೆಯನ್ನು ದಾಸ್ಯದಿಂದ ಮುಕ್ತಗೊಳಿಸಲು ಅಮೃತ ಕಲಶ ಪಡೆಯುವುದಕ್ಕಾಗಿ ಗರುಡ ನಡೆಸುವ ಹೋರಾಟದ ಏರುಪದ್ಯಗಳ ಸಮ್ಮೋಹಕ ಕಥೆ ಆರು ಗಂಟೆ ಕಾಲ ವಿಜೃಂಭಿಸಿತು. ಪಟ್ಲ, ಬಲಿಪರು, ಹೊಸಮೂಲೆ ಹಾಡಿಗೆ ಹಿಮ್ಮೇಳ-ಮುಮ್ಮೇಳಗಳ ಸಾಥ್ ಅದ್ಭುತ.

ಬೇಗಾರು ಶಿವಕುಮಾರ್-ಮಂಟಪ ಉಪಾಧ್ಯಾ ಯರ ದೌಷ್ಟ್ಯ ಮತ್ತು ದಯನೀಯತೆಯ ರಂಗ ಪ್ರಸ್ತುತಿ ಕೆಲವೊಮ್ಮೆ ಭಾವುಕರಾಗಿಸಿದರೆ, ಸದಾಶಿವ ಶೆಟ್ಟಿಗಾರ್ ಮತ್ತು ನಿಡ್ಲೆ ಗೋವಿಂದ ಭಟ್ಟರ ಗರುಡ ರಂಗವನ್ನು ಹುಡಿ ಹಾರಿಸಿತು.

ಆರು ಮಂದಿ ಕಲಾವಿದರು ಸರ್ಪಗಳಾಗಿ ವಿಶಿಷ್ಟ ಬಣ್ಣಗಾರಿಕೆಯೊಂದಿಗೆ ಹದವರಿತ ಪೋಷಣೆಯಿಂದ ಮಿಂಚಿದರೆ ಲವಣಾಸುರ (ಹರಿನಾರಾಯಣ), ಮಕರಾಸುರ (ಸತೀಶ್ ನೈನಾಡು) ಧೂಳೆಬ್ಬಿಸಿದರು. ಎಂದಿನಂತೆ ಉಚಿತ ಊಟ, ಉಪಾಹಾರದ ವ್ಯವಸ್ಥೆ ಎಲ್ಲ ಹೊತ್ತಿನಲ್ಲೂ ಇತ್ತು. ಮುಂದಿನ ವರ್ಷ ಸಂಪಾಜೆ ಯಕ್ಷೋತ್ಸವಕ್ಕೆ ಬೆಳ್ಳಿಹಬ್ಬದ ಸಂಭ್ರಮ.

ಹಿರಿ-ಕಿರಿ ಕಲಾವಿದರ ಚಕಮಕಿ: ಅಂದಕ ಮತ್ತು ನಮುಚಿ ಪಾತ್ರಧಾರಿಗಳ ನಡುವಿನ ಮಾತಿನ ವರಸೆ ಸ್ವಲ್ಪ ಹೊತ್ತು ಬಿಸಿಯೇರಿಸಿತು. ಹಿರಿ ಕಲಾವಿದರಲ್ಲಿ 'ಈ ವಯಸ್ಸಲ್ಲಿ ಇದೆಲ್ಲಾ ನಿನಗೆ ಬೇಕಾ' ಎಂದು ಕುಟುಕಿದ ಕಿರಿ ಕಲಾವಿದನ ಮಾತನ್ನು ಕತ್ತರಿಸಿದ್ದು, ಆಗ ಆತ 'ನನಗೆ ಇನ್ನೂ ಮಾತನಾಡಲಿಕ್ಕಿದೆ' ಎಂದದ್ದು ಚರ್ಚೆಗೆ ಗ್ರಾಸ. 'ಸಮುದ್ರದಷ್ಟು ಮಾತನಾಡುವವರು ಬೇಡ, ಸಮಗ್ರ ಮಾತು ಬೇಕು' ಎಂಬ ಗುರುವಿನ ಮಾತಿಗೆ ಚಪ್ಪಾಳೆ. 'ಬೇಕಿದ್ದರೆ ನನ್ನ ತಾಯಿ, ಹೆಂಡತಿಯನ್ನೂ ತಗೋ' ಎಂಬ ಕಿರಿಯನ ಮಾತು ಅತಿಯಾಯಿತು.

ಧರ್ಮ ಜಿಜ್ಞಾಸೆ ಚರ್ಚೆ: ಧ್ರುವನಿಧಿ (ಸುಣ್ಣಂಬಳ)-ಸುಧಾಜಿತು(ಪೆರ್ಮು ದೆ) ನಡುವಿನ ಧರ್ಮ ಜಿಜ್ಞಾಸೆಯಲ್ಲಿ ಹಲವು ಆಯಾಮಗಳು ಬಿಚ್ಚಿಕೊಂಡರೂ ಕೆಲವರು ಆಕ್ಷೇಪ ಮಾಡಿದರು. ತಾನು ಸದಾ ಯಾರಿಗಾದರೂ ತಾಗ ಲು ಪ್ರಯತ್ನಿಸುವುದಾಗಿ ಒಪ್ಪಿಕೊಂಡ ಪೆರ್ಮುದೆ, ಧ್ರುವನಿಧಿ ಶಾಸ್ತ್ರಸಮ್ಮತವಾಗಿ ಮಾತನಾಡಿದರು. ದುರ್ಬುದ್ಧಿಗೆ ನಿಂತಿದ್ರೆ ನಾನೇ ಗೆಲ್ಲುತ್ತಿದ್ದೆ ಅಂದರು.

ವಾಮ ಮಾರ್ಗ: ಯಥಾರ್ಥಕ್ಕಾದರೆ ವಾಮ ಮಾರ್ಗ ಮಾತ್ರ ನನಗೆ ಗೊತ್ತು. ಉಳಿದವರಲ್ಲಿ ಎಷ್ಟು ಉಂಟು ಅಂತ ನೋಡುವುದೇ ನನ್ನ ಕೆಲಸ. ಯಾರಲ್ಲಿ ಎಷ್ಟಿದೆ ಎನ್ನುವುದಕ್ಕೆ ನಾನು ಒರೆಗಲ್ಲು ತಾನೇ ಎಂದು ಸುಧಾಜಿತು ಪಾತ್ರಕ್ಕೆ ಅದ್ಭುತ ನ್ಯಾಯ ಕೊಟ್ಟ ಪೆರ್ಮುದೆ ಹೇಳಿದಾಗ ಚಪ್ಪಾಳೆ ಸುರಿಮಳೆ.

ಇದು ನಮ್ಮ ಕ್ಷೇತ್ರ: ಇದು ನಮ್ಮ ಕ್ಷೇತ್ರ. ಅವನು ಹೊರಗಿನವನು. ಹೊರಗಿನವನು ಇಲ್ಲಿಗೆ ಬಂದು ಇಷ್ಟೆಲ್ಲ ಮಾತನಾಡಿದರೆ ಸುಮ್ಮನಿರಬೇಕಾ ಎಂದು ಭಾರದ್ವಾಜ (ವಾಸುದೇವ ರಂಗಾ ಭಟ್) ಪಾತ್ರಧಾರಿ ಬಗ್ಗೆ ಪೆರ್ಮುದೆ ಸಲುಗೆ ಮಾತು. 'ಅಜ್ಜ ಇವನು ಸ್ವಲ್ಪ ಜೋರಿದ್ದಾನೆ.. ತಿಳ್ಕೊಂಡ ಹಾಗಿದೆ' ಎನ್ನುವುದು ಚಂದ್ರಶೇಖರ ಒಗ್ಗರಣೆ.

*ನಾನು ಯಾವತ್ತೂ ಪ್ರಸಂಗ ಬಿಟ್ಟು ಮಾತನಾಡು ವುದಿಲ್ಲ. ಕೆಲವರು ನನ್ನ ಬಗ್ಗೆ ವೃಥಾ ಅಪಪ್ರಚಾರ ಮಾಡುತ್ತಾರೆ. -ಸೀತಾರಾಮ್ ಕುಮಾರ್ಕೃಪೆ : http://www.vijaykarnataka.com

Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
prabhakar (11/12/2014)
Atyuttama pradarshana. Yakshaganada rasadouthana. Nibberagaaguva Vaibhava. Apoorva Yakshotsava.
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ