ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
20 ನಿಮಿಷ ಸುತ್ತು ಕುಣಿತದ ಹೊಸ ದಾಖಲೆ

ಲೇಖಕರು : ಕೃಷ್ಣ ಭಟ್ ಅಳದಂಗಡಿ
ಮ೦ಗಳವಾರ, ನವ೦ಬರ್ 4 , 2014
ನವ೦ಬರ್ 4, 2014

20 ನಿಮಿಷ ಸುತ್ತು ಕುಣಿತದ ಹೊಸ ದಾಖಲೆ

ಸುಳ್ಯ : ಯಕ್ಷಗಾನ ರಂಗದಲ್ಲಿ ಭಾನುವಾರ ಹೊಸ ದಾಖಲೆಯೊಂದು ಸಷ್ಟಿಯಾಯಿತು. ಪುಂಡು ವೇಷದ ಪ್ರಚಂಡರಿಬ್ಬರು ನಿರಂತರ 20 ನಿಮಿಷಗಳ ಸುತ್ತು ಕುಣಿತದ ಜತೆಯಾಟ ನಡೆಸುವ ಮೂಲಕ ಈ ದಾಖಲೆ ಬರೆದಿದ್ದಾರೆ. ದಾಖಲೆ ಸಷ್ಟಿಯಾಗಿದ್ದು ಸಂಪಾಜೆ ಯಕ್ಷೋತ್ಸವದಲ್ಲಿ. ಕುಣಿದದ್ದು - ದಿವಾಕರ ರೈ ಸಂಪಾಜೆ ಮತ್ತು ಚಂದ್ರಶೇಖರ ಧರ್ಮಸ್ಥಳ.

'ವಂಶ ವಾಹಿನಿ' ಪ್ರಸಂಗದಲ್ಲಿ ದಿವಾಕರ ರೈ ಸುದರ್ಶನನ ಪಾತ್ರ ಮಾಡಿದರೆ, ಚಂದ್ರಶೇಖರ ಧರ್ಮಸ್ಥಳ ತಮ್ಮ ಶತ್ರುಜಿತ. ಒಂದೇ ತಂದೆಯ ಇಬ್ಬರು ಹೆಂಡಿರ ಮಕ್ಕಳ ನಡುವಿನ ಕೌಟುಂಬಿಕ ಕಲಹದಿಂದ ಅಣ್ಣ-ತಮ್ಮ ಯುದ್ಧಕ್ಕೆ ನಿಂತಿದ್ದರು.

ಬೆಳಗ್ಗೆ 7.23ರ ಹೊತ್ತಿಗೆ ಹಾಡು ಆರಂಭವಾಗಿ ಎರಡೇ ನಿಮಿಷದಲ್ಲಿ ಇಬ್ಬರೂ ಸುತ್ತು ಕುಣಿತಕ್ಕೆ ಶುರುವಿಟ್ಟರು. ಸಾಮಾನ್ಯವಾಗಿ ಕೆಲವು ನಿಮಿಷಗಳಲ್ಲಿ ಮುಗಿದುಹೋಗುವ ಈ ಕುಣಿತ ಐದು ನಿಮಿಷವಾದರೂ ನಿಲ್ಲಲಿಲ್ಲ. ಅಷ್ಟು ಹೊತ್ತಿಗೆ ಪ್ರೇಕ್ಷಕರು ಚಪ್ಪಾಳೆ, ಶಿಳ್ಳೆಗಳ ಮೂಲಕ ಪ್ರೋತ್ಸಾಹ ನೀಡಿದ್ದರು. ಈಗ ನಿಲ್ಲುತ್ತದೆ, ಮುಂದಿನ ಕ್ಷಣ ನಿಲ್ಲಿಸುತ್ತಾರೆ ಅಂತ ಜನ ಯೋಚಿಸಿದ್ದೇ ಬಂತು. 10 ನಿಮಿಷ ದಾಟಿ 15ರ ಗಡಿಗೆ ಹೋಗುತ್ತಿದ್ದಂತೆಯೇ ಸಭಾಂಗಣವಿಡೀ ಹುಚ್ಚೆದ್ದು ಕುಣಿಯಿತು. ಚಪ್ಪಾಳೆ, ಶಿಳ್ಳೆ, ಹೋ ಹೋ.. ಉದ್ಗಾರಗಳು ಮುಗಿಲು ಮುಟ್ಟಿದವು. ಚಪ್ಪಾಳೆ ಹೊಡೆದು ಕೈಗಳು ಸೋತವೇ ಹೊರತು ಇಬ್ಬರು ಕಲಾವಿದರು ತಮ್ಮ ಪಟ್ಟು ಸಡಿಲಿಸಲಿಲ್ಲ. ನಿಧಾನಗೊಳಿಸಿ ನಿಲ್ಲಿಸುತ್ತಾರೆ ಅನಿಸುವಾಗ ಮತ್ತೆ ವೇಗ ನೀಡುತ್ತಿದ್ದರು.

ಕ್ಷಣಗಳು ಉರುಳುತ್ತಿದ್ದಂತೆಯೇ ಸಭಾಂಗಣ ಕೇಕೆಗಳಿಂದ ತುಂಬಿ ಹೋಯಿತು. ಜತೆಗೆ ಆತಂಕ. ಹಲವಾರು ಮಂದಿ ನಿಲ್ಲಿಸಿ ನಿಲ್ಲಿಸಿ ಎಂದು ಬೊಬ್ಬೆ ಹಾಕಿದರು. ಆದರೆ, ಕಲಾವಿದರ ಕಿವಿಗೆ ಇದು ತಲುಪಲೇ ಇಲ್ಲ. ಕಲಾವಿದರ ಉತ್ಸಾಹ ನೋಡಿ ಎರಡಕ್ಕೆ ಇನ್ನೊಂದು ಚೆಂಡೆ ಸೇರಿಸಲಾಯಿತು. ಇಬ್ಬರೂ ನಿಂತಲ್ಲೇ ಸುತ್ತು ಹೊಡೆಯುತ್ತಿದ್ದರೂ ಪೈಪೋಟಿಗೆ ಬಿದ್ದು ಎಲ್ಲಿ ಎಡವಟ್ಟು ಮಾಡಿಕೊಳ್ಳುತ್ತಾರೋ ಎಂಬ ಗಾಬರಿ ಹುಟ್ಟಿತು. 18 ನಿಮಿಷವೂ ದಾಟಿ ಕುಣಿತ ಮುಂದುವರಿದಾಗ ಸಂಘಟಕರಿಗೇ ದಿಗಿಲಾಯಿತು. ಆಗ ಯಕ್ಷೋತ್ಸವ ಪ್ರತಿಷ್ಠಾನದ ಹಿರಿಯರು ವೇದಿಕೆಗೆ ಕಾಲಿಟ್ಟರು. ಆಗ ಸೂಚನೆಯನ್ನು ಅರಿತ ಕಲಾವಿದರು 20ನೇ ನಿಮಿಷದಲ್ಲಿ ತಮ್ಮ ಪಟ್ಟು ಸಡಿಲಿಸಿ ಒಂದೇ ಕ್ಷಣದಲ್ಲಿ ಜತೆಗೇ ಕುಣಿತ ನಿಲ್ಲಿಸಿದರು.

ದಿವಾಕರ ರೈ ಮತ್ತು ಚಂದ್ರಶೇಖರ್ ಹಾಲಿ ಯಕ್ಷ ತಿರುಗಾಟದ ಪ್ರಧಾನ ಪುಂಡು ವೇಷಧಾರಿಗಳು. ಆತ್ಮೀಯವಾಗಿದ್ದುಕೊಂಡೇ ಹೊಸ ಪ್ರಯೋಗಗಳಲ್ಲಿ ಸ್ಪರ್ಧೆ ಹುಟ್ಟುಹಾಕಿಕೊಳ್ಳುತ್ತಾರೆ. ಶನಿವಾರ ರಾತ್ರಿ ಆರಂಭವಾದ ಪ್ರದರ್ಶನದಲ್ಲಿ ಚಂದ್ರಶೇಖರ್ ಮೊದಲು ರಂಗಕ್ಕೆ ಬಂದಿದ್ದರೆ ದಿವಾಕರ್ ಬಳಿಕ.ಮಾತಿನ ನಡುವೆ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ ಚಂದ್ರಶೇಖರ್ ಅವರನ್ನು ಉದ್ದೇಶಿಸಿ (ಪಾತ್ರಗಳ ನೆಲೆಯಲ್ಲೇ) 'ಈಗಲೇ ತುಂಬಾ ಮೈ ಹುಡಿ ಮಾಡಬೇಡ, ಸುದರ್ಶನ ಜತೆಗಿನ ಸ್ಪರ್ಧೆಗೆ ಶಕ್ತಿ ಬೇಕಾಗುತ್ತದೆ' ಅಂತ ಎಚ್ಚರಿಸುತ್ತಿದ್ದರು,ನಿಜವೆಂದರೆ, ಇಬ್ಬರೂ ಕಲಾವಿದರು ಈ ಕುಣಿತಕ್ಕೆ ಮೊದಲು ಸುಮಾರು 2 ಗಂಟೆ ಕಾಲ ವಿಭಿನ್ನ ಹೆಜ್ಜೆ, ಲಯ, ನತ್ಯಗಳ ಮೂಲಕ ನೋಡುಗರನ್ನು ಹುಚ್ಚೆಬ್ಬಿಸಿದ್ದರು. ಯಕ್ಷಲೋಕದಲ್ಲಿ ಇದೊಂದು ದಾಖಲೆ ಎಂದು ಯಕ್ಷಪ್ರೇಮಿಗಳು ಹೇಳುತ್ತಿದ್ದು, ಇದನ್ನು ನೂರಾರು ಮೊಬೈಲ್‌ಗಳು, ಅಧಿಕತ ವಿಡಿಯೋಗಳು ದಾಖಲಿಸಿಕೊಂಡಿವೆ.

ಇಬ್ಬರಿಗೂ ಕಾಲು ನೋವಿತ್ತು !: ದಿವಾಕರ ರೈ ಅವರ ಕಾಲಿನ ಹೆಬ್ಬೆರಳಿಗೆ ಏನೋ ಗಾಯವಾಗಿದ್ದು ಕುಣಿಯೋದು ಕಷ್ಟ ಅಂತ ಗೆಳೆಯರಲ್ಲಿ ಹೇಳಿದ್ದರು. ಕೊನೆಗೆ ನೋವು ನಿವಾರಕ ತಿಂದು ರಂಗಕ್ಕೆ ಬಂದಿದ್ದರು. ಚಂದ್ರಶೇಖರ್‌ಗೆ ಕಾಲ ಗಂಟು ನೋವು ಇತ್ತು. ಕಳೆದ ತಿರುಗಾಟದ ವೇಳೆ ಎರಡು ತಿಂಗಳು ರಜೆ ಹಾಕಿ ಪ್ಲಾಸ್ಟರ್ ಕಟ್ಟಿಸಿಕೊಂಡು ರೆಸ್ಟ್ ಮಾಡಿದ್ದರು. ಬಳಿಕ ಹೆಚ್ಚು ದಿಗಿಣ ಹಾಕುತ್ತಿರಲಿಲ್ಲ.

ಅಷ್ಟು ಕುಣಿದ ಬಳಿಕವೂ ಇಬ್ಬರೂ ನಿರಾಳವಾಗಿಯೇ ಇದ್ದರು. 'ನನ್ನಲ್ಲಿ ಇನ್ನೂ ಶಕ್ತಿ ಇತ್ತು. ನಾವು ಮಿನಾ ಉಳಿಸಿಕೊಂಡೇ ಕೆಲಸ ಮಾಡುತ್ತೇವೆ' ಎಂದು ವಿಕ ಜತೆ ಹೇಳಿದ ದಿವಾಕರ ರೈ, ನಿರಂತರ ನಾಟ್ಯಾಭ್ಯಾಸ ಮಾಡುವುದು ನಿಜವಾದರೂ ಈ ರೀತಿಯ ಪ್ರದರ್ಶನಕ್ಕೆ ದೇವರ ದಯೆ ಮತ್ತು ಪ್ರೇಕ್ಷಕರ ಪ್ರೋತ್ಸಾಹವೇ ಕಾರಣ' ಅಂದರು. ಇದೇ ಮೊದಲ ಬಾರಿಗೆ ಜನ ಎದ್ದು ನಿಂತು ಗೌರವಿಸಿದ್ದರ ಖುಷಿ ಅನುಭವಿಸಿದ್ದೇನೆ. ಅದನ್ನು ನೋಡಿದಾಗ ಆಯಾಸವೆಲ್ಲ ಪರಿಹಾರವಾಯಿತು ಎಂದ ದಿವಾಕರ್, ಇದೆಲ್ಲವೂ ನಾಲ್ಕು ಕಂಬಗಳ ನಡುವಿನ ಸ್ಥಳದ ಮಹಿಮೆ ಎನ್ನಲು ಮರೆಯಲಿಲ್ಲ.

ಸ್ಟ್ಯಾಂಡಿಂಗ್‌ ಒವೇಶನ್: ಅಷ್ಟು ಹೊತ್ತಿನವರೆಗೆ ಬಿಡದೆ ಚಪ್ಪಾಳೆ, ಶಿಳ್ಳೆ ಹೊಡೆಯುತ್ತಿದ್ದ 6000ಕ್ಕೂ ಅಧಿಕ ಪ್ರೇಕ್ಷಕರು ಕುಣಿತ ನಿಲ್ಲುತ್ತಿದ್ದಂತೆಯೇ ಒಮ್ಮೆಗೇ ಎದ್ದು ನಿಂತು ಯಕ್ಷೇತಿಹಾಸದಲ್ಲೇ ಅತ್ಯಪರೂಪ ಎನ್ನಬಹುದಾದ ಸ್ಟ್ಯಾಂಡಿಂಗ್ ಒವೇಶನ್ ನೀಡಿದರು. ಇಬ್ಬರು ಕಲಾವಿದರು ಜನ ನೀಡಿದ ಗೌರವವನ್ನು ತಲೆ ಬಾಗಿ, ಕೈಮುಗಿದು ವಿನಯದಿಂದ ಸ್ವೀಕರಿಸಿದರು. ಆದರೆ, ಅಷ್ಟು ಹೊತ್ತಿನ ನಿರಂತರ ಕುಣಿತದ ಬಳಿಕವೂ ಹುಮ್ಮಸ್ಸು ಮುಗಿದಿರಲಿಲ್ಲ. ಮತ್ತೆ ನಾಲ್ಕೈದು ನಿಮಿಷಗಳ ಕಾಲ ಸಿಂಹಾಸನ ಜಿಗಿತ, ದಿಗಿಣ ಮತ್ತು ತಿರುಗುವ ಪಟ್ಟುಗಳನ್ನು ಪ್ರಯೋಗಿಸಿದರು. ಜತೆಗೆ ಮಾತನ್ನೂ ಸರಾಗವಾಗಿ ಆಡಿ ಅಚ್ಚರಿ ಮೂಡಿಸಿದರು. ಅಲ್ಲದೆ ಯಕ್ಷೋತ್ಸವ ಪ್ರತಿಷ್ಠಾನವು ದಾಖಲೆ ಬರೆದ ಕಲಾವಿದರಿಗೆ ತಲಾ 10000 ರೂ. ಬಹುಮಾನ ನೀಡಿದ್ದಾರೆ.

ಹಿಂದಿದ್ದ ಇವರ ದಾಖಲೆ: 2012ರ ಯಕ್ಷೋತ್ಸವದ ಪ್ರಚಂಡ ಭಾರ್ಗವ ಪ್ರಸಂಗದಲ್ಲಿ ದಿವಾಕರ್ ರೈ ಮತ್ತು ಚಂದ್ರಶೇಖರ್ 48 ನಿಮಿಷ ಕಾಲ ಕೈಕೈ ಹಿಡಿದು ತಿರುಗಿದ್ದರು. ಕನ್ಯಾಂತರಂಗ ಪ್ರಸಂಗದಲ್ಲಿ ಅಶ್ವಿನಿ ದೇವತೆಗಳಾಗಿದ್ದ ದಿವಾಕರ್ ರೈ-ಸದಾಶಿವ ಕುಲಾಲ್ 147 ದಿಗಿಣ ತೆಗೆದಿದ್ದರು. ಪುತ್ತೂರು ಯಕ್ಷೋತ್ಸವದಲ್ಲಿ ಶ್ರೀನಿವಾಸ ಕಲ್ಯಾಣದ ಕಿರಾತರಾಗಿ ದಿವಾಕರ್ 172 ದಿಗಿಣ ತೆಗೆದಿದ್ದರು. ಚಂದ್ರಶೇಖರ್ ಧರ್ಮಸ್ಥಳ ದಾಖಲೆ ದಿಗಿಣ ತೆಗೆದದ್ದು 152.

ಕೃಪೆ : http://www.vijaykarnataka.com

Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ