ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಯಕ್ಷಾಂಗಣ: ಯಕ್ಷರ ಚೆನ್ನನ ಸ್ಮತಿ

ಲೇಖಕರು :
ಭಾಸ್ಕರ ರೈ ಕುಕ್ಕುವಳ್ಳಿ
ಶನಿವಾರ, ನವ೦ಬರ್ 8 , 2014
ಯಕ್ಷಗಾನ ರಂಗದಲ್ಲಿ ಕೀರ್ತಿಶೇಷ ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟರದು ವಿಶಿಷ್ಟ ವ್ಯಕ್ತಿತ್ವ. ಯಾರ ಜಾಡನ್ನೂ ಹಿಡಿಯದೆ ಭಿನ್ನ ಶೈಲಿಯಲ್ಲಿ ಹಂತಹಂತವಾಗಿ ಜನಾಕರ್ಷಣೆಯನ್ನು ಹೆಚ್ಚಿಸಿ ಕೊಂಡಿದ್ದ ಅವರು ಇನ್ನೂ ಹತ್ತಿಪ್ಪತ್ತು ವರ್ಷ ಈ ಕ್ಷೇತ್ರದಲ್ಲಿ ತಾರಾವರ್ಚಸ್ಸಿನಿಂದ ಮೆರೆಯಬಲ್ಲವರಾಗಿದ್ದರು. ಆದರೆ ಯಕ್ಷ ಕಲಾರಸಿಕರಿಗೆ ಆ ಯೋಗವಿಲ್ಲ. ಚೆನ್ನಪ್ಪ ಶೆಟ್ಟರು ರಂಗ ದಿಂದ ಮಾತ್ರವಲ್ಲ, ಇಹದಿಂದಲೇ ದೂರ ಸರಿದರು.

ತಾಳಮದ್ದಳೆಯೊ೦ದರಲ್ಲಿ ಚೆನ್ನಪ್ಪ ಶೆಟ್ಟರು (ಬಲ ಬದಿಯಲ್ಲಿ)
ದುಂಡು ಮುಖ, ಒಂದಿಷ್ಟು ಗಂಭೀರವಾದರೂ ತುಟಿ ಯಂಚಿನಲ್ಲಿ ಮಾಸದ ಮುಗುಳ್ನಗು, ಕಾಂತಿ ಯುಕ್ತ ಕಣ್ಣುಗಳು -ಮೊದಲ ನೋಟಕ್ಕೇ ಯಾರನ್ನಾದರೂ ಸೆಳೆಯಬಲ್ಲ ಆಕರ್ಷಕ ನಿಲುವು ಅವರದು. ವೇಷ ತೊಟ್ಟು ರಂಗದ ಮೇಲೆ ಬಂದರೆಂದರೆ ಪುರಾಣ ಪಾತ್ರಗಳು ಮರುಹುಟ್ಟು ಪಡೆದಂತೆ! ಸುಂದರ ರೂಪ, ಬಣ್ಣ ಗಾರಿಕೆ, ವೇಷಭೂಷಣಗಳಲ್ಲಿ ಅಚ್ಚುಕಟ್ಟುತನ, ಮಿತವಾದ ನಾಟ್ಯ, ಮೋಹಕ ಅಭಿನಯ. ಮಾತನಾಡಲು ತೊಡಗಿದರೆ ವಿಷಯಸಾಂದ್ರತೆ, ಪುರಾಣ- ಕಾವ್ಯ - ದರ್ಶನ ಶಾಸ್ತ್ರಗಳ ವಿಪುಲ ಜ್ಞಾನ, ಅಧ್ಯಯನದ ಹಿನ್ನೆಲೆಯಲ್ಲಿ ಮೂಡಿಬರುವ ಸಂಸ್ಕೃತ ಶ್ಲೋಕ ಗಳು, ಕನ್ನಡ ಕಾವ್ಯ ಭಾಗಗಳು, ಸ್ಪಷ್ಟ ಉಚ್ಚಾರ, ಮಾತಿನ ಏರಿಳಿತ, ಮಂಡನೆ-ಖಂಡನೆ- ಅಭಿವ್ಯಕ್ತಿ, ಉಪಮೆ- ದೃಷ್ಟಾಂತ- ವಾದ-ಸಂವಾದಗಳಿಂದ ಮಾತನ್ನು ಬೆಳೆಸುವ ರೀತಿ ಬಹಳ ಚೆನ್ನ!

ತಾಳಮದ್ದಳೆಯ ವೇದಿಕೆಯಲ್ಲೂ ಅವರದು ಶ್ರೀಮದ್ಗಾಂಭೀರ್ಯ. ಉಡುಗೆ-ತೊಡುಗೆಗಳಲ್ಲೂ ರಸಿಕ ಪ್ರಜ್ಞೆ. ಕೇಳುಗರನ್ನು ಹಿಡಿದಿಟ್ಟುಕೊಳ್ಳಬಹುದಾದ ಮಾತಿನ ಜಾಣ್ಮೆ! ಅವರ ಅರ್ಥಗಾರಿಕೆ ಕೇಳುಗರಲ್ಲಿ ವಿಭಿನ್ನ ಪರಿಣಾಮ ಬೀರುವ ನುಡಿ ಬೆಡಗಾಗಿ ರಂಜಿಸುತ್ತದೆ. ಆ ಭಾಷೆ, ಭಾವ, ಪುರಾಣ ಶಿಲ್ಪ ನಮ್ಮಿಂದ ಶಾಶ್ವತವಾಗಿ ದೂರವಾಗಿದೆ. "ಯಕ್ಷರ ಚೆನ್ನ' ಕಿನ್ನರ ಲೋಕ ಸೇರಿಯಾಗಿದೆ. ಇನ್ನು ಏನಿದ್ದರೂ ಚೆನ್ನಪ್ಪ ಶೆಟ್ಟರು ಒಂದು ಸಿಹಿಯಾದ ನೆನಪು ಮಾತ್ರ!

ಬಂಟ್ವಾಳ ರಾಯಿ ಗ್ರಾಮದ ನೂಯಿ ಎಂಬಲ್ಲಿ ವಾಸು ಶೆಟ್ಟಿ ಮತ್ತು ಲಿಂಗಮ್ಮ ದಂಪತಿಗೆ 1952ರ ಮೇ 8ರಂದು ಜನಿಸಿದ ಚೆನ್ನಪ್ಪಶೆಟ್ಟಿ ಕಲಿತದ್ದು ಕೇವಲ ಐದನೇ ತರಗತಿ. ಎಳವೆಯಲ್ಲೇ ಮೊಳಕೆಯೊಡೆದ ಯಕ್ಷಗಾನಾಸಕ್ತಿ ಅವರನ್ನು ಕಲಾವಿದನಾಗಿ ಬೆಳೆಸಿತು. ಧರ್ಮಸ್ಥಳದ ಯಕ್ಷಗಾನ ಕೇಂದ್ರದಲ್ಲಿ ಪ್ರಥಮ ತಂಡದ ವಿದ್ಯಾರ್ಥಿಯಾಗಿ ಕುರಿಯ ವಿಠಲ ಶಾಸ್ತ್ರಿ ಮತ್ತು ಪಡ್ರೆ ಚಂದು ಅವರಿಂದ ಶಾಸ್ತ್ರೀಯ ನೃತ್ಯಾಭಿನಯಗಳನ್ನು ಕಲಿತರು. ವಿದ್ವಾನ್‌ ಕೆ. ಕಾಂತ ರೈ ಮತ್ತು ಕುರ್ತೋಡಿ ವಾಸು ಶೆಟ್ಟರಿಂದ ಅರ್ಥಗಾರಿಕೆ ಅಭ್ಯಸಿಸಿದರು. ಅದಾಗಲೇ ಸೊರ್ನಾಡು ವಿಶ್ವನಾಥ ಶೆಟ್ಟರ ಗಣೇಶದುರ್ಗೆ ಯಕ್ಷಗಾನ ಕಲಾ ಮಂಡಳಿ ಮತ್ತು ಕಾಸರಗೋಡು ರಾಘವೇಂದ್ರ ಯಕ್ಷಗಾನ ಕಲಾಮಂಡಳಿಗಳಲ್ಲಿ ತಿರುಗಾಟ ನಡೆಸಿ ಅನುಭವ ಪಡೆದಿದ್ದ ಅವರು 1974ರಲ್ಲಿ ಕಟೀಲು ಮೇಳದಲ್ಲಿ ಪೂರ್ಣಪ್ರಮಾಣದ ಕಲಾವಿದರಾಗಿ ಸೇರ್ಪಡೆ ಗೊಂಡರು.

ಆಮೇಲೆ ಎರಡು ವರ್ಷ ಧರ್ಮಸ್ಥಳ ಮೇಳ ದಲ್ಲಿ ಸೇವೆ ಸಲ್ಲಿಸಿ 1981ರಲ್ಲಿ ಕದ್ರಿ ಮೇಳದಲ್ಲಿ ಮುಖ್ಯ ವೇಷಧಾರಿಯಾಗಿ ಗಮನ ಸೆಳೆದರು. ಮುಂದೆ ಬಪ್ಪನಾಡು ಮತ್ತು ಮಧೂರು ಮೇಳಗಳಲ್ಲಿ ಒಂದೆರಡು ವರ್ಷವಿದ್ದು, ತೆಂಕುತಿಟ್ಟಿನಲ್ಲಿ ಒಟ್ಟು 18 ವರ್ಷಗಳ ತಿರುಗಾಟ ಪೂರೈಸಿದರು. ಈ ಮಧ್ಯೆ ತಾಳಮದ್ದಳೆಯ ಅರ್ಥಧಾರಿಯಾಗಿಯೂ ಬೆಳೆದ ಚೆನ್ನಪ್ಪ ಶೆಟ್ಟರು, ಡಾ| ಎನ್‌. ನಾರಾಯಣ ಶೆಟ್ಟಿ ಮತ್ತು ಕೊರ್ಗಿ ವೆಂಕಟೇಶ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ಭಾಷಾ ಪ್ರಭುತ್ವ ಪಡೆದರು. ಶೇಣಿ-ಸಾಮಗರಿಗೆ ಸಮದಂಡಿಯಾಗಿ ಮೆರೆದರು.

ಮುಂದೆ ಬಡಗುತಿಟ್ಟಿನಲ್ಲಿ ಹೊಸ ಅಭಿಯಾನ ಆರಂಭಿಸಿದ ಶೆಟ್ಟರು ಅದಕ್ಕೆಂದೇ ಹೆರಂಜಾಲು ವೆಂಕಟರಮಣ ಅವರಿಂದ ಬಡಗಿನ ನಾಟ್ಯ ಕಲಿತರು. 12 ವರ್ಷ ಅಪ್ರತಿಮ ವೇಷಧಾರಿಯಾಗಿ ಪೆರ್ಡೂರು ಮತ್ತು ಸಾಲಿಗ್ರಾಮ ಮೇಳದಲ್ಲಿ ಪ್ರಸಿದ್ಧಿಯ ಉತ್ತುಂಗಕ್ಕೇರಿದರು. ಮತ್ತೆ ತೆಂಕುತಿಟ್ಟಿಗೆ ಮರಳಿ ಕಳೆದ ಎಂಟು ವರ್ಷಗಳಿಂದ ಹೊಸ ನಗರ ಮೇಳದಲ್ಲಿ ಅಪಾರ ಜನ ಮನ್ನಣೆ ಗಳಿಸಿದರು. ಅವರಿಗೀಗ ಮಾನ- ಸಮ್ಮಾನಗಳನ್ನು ಪಡೆಯುವ ಕಾಲ; ಆದರೆ "ಕಾಲ' ಬಿಡಬೇಕಲ್ಲ! ನಾಲ್ಕೂವರೆ ದಶಕಗಳ ಅವರ ಕಲಾಯಾತ್ರೆ ಅನಿರೀಕ್ಷಿತವಾಗಿ ಕೊನೆಗೊಂಡಿತು.

ಚೆನ್ನಪ್ಪಶೆಟ್ಟರು ದೇಶ-ವಿದೇಶಗಳಲ್ಲಿ ಪ್ರದರ್ಶನ ನೀಡಿ ಅಸಂಖ್ಯ ಅಭಿಮಾನಿಗಳನ್ನು ಗಳಿಸಿದ್ದಾರೆ. ಮುಂಬಯಿ ಪ್ರೇಕ್ಷಕರಿಗಂತೂ ಅವರು ಚಿರಪರಿಚಿತರು. ಕಳೆದ ಹತ್ತು ವರ್ಷಗಳಿಂದ ಅಜೆಕಾರು ಬಾಲಕೃಷ್ಣ ಶೆಟ್ಟರ ನೇತೃತ್ವದ ಅಜೆಕಾರು ಕಲಾಭಿಮಾನಿ ಬಳಗ ಏರ್ಪಡಿಸುತ್ತ ಬಂದಿರುವ ಸರಣಿ ತಾಳಮದ್ದಳೆಗಳಲ್ಲಿ ಅವರು ನಿರಂತರ ಭಾಗವಹಿಸಿದ್ದಾರೆ. ಈ ವರ್ಷ ಅವರಿಲ್ಲದಿದ್ದಾಗ ಅವರ ಸ್ಮತಿ ಸಂಪುಟವಾಗಿ "ಯಕ್ಷರ ಚೆನ್ನ' ಗ್ರಂಥವನ್ನು ಪ್ರಕಟಿಸಿ ಮುಂಬಯಿಯಲ್ಲಿ ಬಿಡುಗಡೆಗೊಳಿಸಿದೆ.

ಸಿದ್ಧಕಟ್ಟೆ ಚೆನ್ನಪ್ಪಶೆಟ್ಟರು ಇಂದು ನಮ್ಮೊಂದಿಗಿಲ್ಲ. ಆದರೆ ಯಕ್ಷ ಕಲಾಭಿಮಾನಿಗಳ ಮಾನಸಲೋಕದಲ್ಲಿ ಅವರು ಚಿರಸ್ಥಾಯಿ.

ಮಂಗಳೂರಿನ "ಯಕ್ಷಾಂಗಣ' ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆ ನ.9ರಿಂದ 15ರವರೆಗೆ ಮಂಗಳೂರಿನ ರವೀಂದ್ರ ಕಲಾಭವನದಲ್ಲಿ ದ್ವಿತೀಯ ವರ್ಷದ "ತಾಳಮದ್ದಳೆ ಸಪ್ತಾಹ' ಏರ್ಪಡಿಸಿದೆ. ಇದರ ಭಾಗವಾಗಿ ಸರಣಿ ಸಂಸ್ಮರಣ ಕಾರ್ಯಕ್ರಮ ಜರಗುತ್ತದೆ. ಯಕ್ಷಗಾನ ಸಂಘಟಕರಾದ ವಳವೂರು ರಾಮಣ್ಣ ರೈ, ಅಳಪೆ ಶ್ರೀನಿವಾಸ ರಾವ್‌ ಹಾಗೂ ಹಿರಿಯ ಅರ್ಥಧಾರಿಗಳಾಗಿದ್ದ ವಿದ್ವಾನ್‌ ಕೆ. ಕಾಂತ ರೈ, ಬಿ.ಆರ್‌. ಭೋಜ ಆಚಾರ್ಯ, ಎ.ಕೆ. ನಾರಾಯಣ ಶೆಟ್ಟಿ ಮತ್ತು ಎ.ಕೆ. ಮಹಾಬಲ ಶೆಟ್ಟಿ - ಇವರುಗಳನ್ನು ಬೇರೆ ಬೇರೆ ದಿನಗಳಲ್ಲಿ ಸ್ಮರಿಸಿ, ಆಯಾಯ ದಿನದ ತಾಳಮದ್ದಳೆಯನ್ನು ಅವರಿಗೆ ಅರ್ಪಿಸಲಾಗುತ್ತದೆ. ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಚೆನ್ನಪ್ಪಶೆಟ್ಟರ ಸಂಸ್ಮರಣ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ "ಯಕ್ಷರ ಚೆನ್ನ' ಗ್ರಂಥದ ಅನಾವರಣ ಜರಗಲಿದ್ದು, ಹಿರಿಯ ಭಾಗವತ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟರಿಗೆ ಸಿದ್ಧಕಟ್ಟೆ ಚೆನ್ನಪ್ಪಶೆಟ್ಟಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.ಕೃಪೆ : http://udayavani.com


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ