ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಯಕ್ಷಪ್ರಯೋಗಕ್ಕೆ 17ರ ಹರೆಯ

ಲೇಖಕರು : ಕೆ.ವಿ.ರಮಣ್
ಶನಿವಾರ, ನವ೦ಬರ್ 8 , 2014
ಯಕ್ಷಗಾನ ತನ್ನ ಜನ್ಮಭೂಮಿಯಲ್ಲಿ ವಿನೂತನ ಪ್ರಯೋಗಗಳಿಗೆ ತೆರೆದುಕೊಳ್ಳು ತ್ತಲೇ ಇದೆ. ನಿರಂತರ 17 ವರ್ಷಗಳಿಂದ ಯಶಸ್ವಿಯಾಗಿ ಇಂಥ ಪ್ರಯೋಗಗಳನ್ನು ಮಾಡುತ್ತಿರುವ ಸಂಸ್ಥೆ ಬೆಳುವಾಯಿಯ ಯಕ್ಷದೇವ ಮಿತ್ರಕಲಾ ಮಂಡಳಿ. ರಂಜನೆ ಯೊಂದಿಗೆ ಬೆಳವಣಿಗೆ ಮತ್ತು ಪರಂಪರೆಯ ಉಳಿಕೆಗಳನ್ನು ಲಕ್ಷ್ಯವಾಗಿರಿಸಿಕೊಂಡ ಈ ಪ್ರಯೋಗಗಳು ಪ್ರತೀ ವರ್ಷ ಯಕ್ಷಗಾನ ರಸಿಕರನ್ನು ಕುತೂಹಲದಿಂದ ಕಾಯುವಂತೆ ಮಾಡುತ್ತಿವೆ. ಯಕ್ಷಗಾನ ಕಲಾವಿದ, ಸಂಘಟಕ ದೇವಾನಂದ ಭಟ್‌ ಅವರ ಕಲ್ಪನೆಗಳು ಪ್ರಬುದ್ಧ ರೂಪತಾಳಿ ರಂಗದಲ್ಲಿ ಅರಳುವುದು ಈ ಯಶಸ್ಸಿಗೆ ಮೂಲ ಕಾರಣ.

ಯಕ್ಷಗಾನ ಕಲಾವಿದ, ಸಂಘಟಕ ದೇವಾನಂದ ಭಟ್‌
ಇದೀಗ ನ.6ರಂದು ಆರಂಭವಾಗಿರುವ ಯಕ್ಷಕಲೋತ್ಸವ - 2014 ನ.9ರವರೆಗೆ ನಾಲ್ಕು ದಿನಗಳ ಮೂಡಬಿದಿರೆಯ ಪದ್ಮಾವತಿ ಕಲಾ ಮಂದಿರದಲ್ಲಿ ನಡೆಯಲಿದೆ. ಕಳೆದ 16 ವರ್ಷ ಗಳಿಂದ ನಿರಂತರ ಚಟುವಟಿಕೆಯಲ್ಲಿರುವ ಸಂಸ್ಥೆ ತನ್ನ ಕ್ರಿಯಾಶೀಲತೆಯಿಂದಾಗಿ ಕಲಾವಿದರು, ವಿಮರ್ಶಕರು, ಆಸಕ್ತರ ಸದಸ್ಯತ್ವವನ್ನು ಹೆಚ್ಚಿಸಿ ಕೊಳ್ಳುತ್ತಾ ನಡೆದುಬಂದಿದೆ. ಯಕ್ಷಗಾನದ ಒಂದೊಂದು ವಿಭಾಗವನ್ನೂ ಪ್ರತ್ಯೇಕವಾಗಿ ಒರೆಗೆ ಹಚ್ಚುವ ಪ್ರಯತ್ನ ಮಾಡಿದ್ದು ಯಕ್ಷದೇವ ಮಿತ್ರರ ಅಧ್ಯಯನಶೀಲತೆಗೆ ಸಾಕ್ಷಿ.

ಯಕ್ಷಗಾನದ ಹಿಮ್ಮೇಳ ರಸಾಸ್ವಾದನೆ ಯೊಂದಿಗೆ ಭಾಗವತಿಕೆಯ ಗಾಯನ ಮಾಧುರ್ಯ, ಸಾಹಿತ್ಯ ಸ್ಪಷ್ಟತೆ, ಯಕ್ಷ ಛಂದಸ್ಸುಗಳ ಬಳಕೆಯ ಬಗೆಗಿನ ಜಾಗೃತಿ ಮೂಡಿಸಿದ್ದು ಈ ಮಿತ್ರರ ಹೆಚ್ಚುಗಾರಿಕೆ. ಮದ್ದಲೆಗಾರರ ವ್ಯಾಪ್ತಿ - ಮಿತಿ, ಚಕ್ರತಾಳದ ಬಳಕೆ, ಚೆಂಡೆವಾದನಗಳ ಪ್ರಯೋಗ ಗಳೂ ಇಲ್ಲಿ ನಡೆದಿವೆಯನ್ನುವುದು ಗಮನಾರ್ಹ.

ಮುಮ್ಮೇಳಕ್ಕೆ ಸಂಬಂಧಿಸಿದಂತೆ ಭಾವ ಸೃಷ್ಟಿ, ಕಥಾನಡೆ, ಒಟ್ಟು ರಂಗಕ್ರಿಯೆಯಲ್ಲಿ ನಿರ್ದೇಶನದ ಸ್ವರೂಪ, ಭಾಗವತ ಒಬ್ಬನೇ ನಿರ್ದೇಶಕನಾಗಿರುತ್ತ ಪ್ರತಿಯೊಬ್ಬರೂ ಸಹ ನಿರ್ದೇಶಕರಾಗುವ ಸ್ವರೂಪದ ಬಗೆಗಿನ ವಿಮರ್ಶನ ಇಲ್ಲಿ ನಡೆದಿದೆ. ತೆಂಕು - ಬಡಗು ತಿಟ್ಟುಗಳ ಪ್ರಸಿದ್ಧ ಕಲಾವಿದರೆಲ್ಲ ಮೂಡಬಿದಿರೆಯ ಈ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ವೇಷ ವೈವಿಧ್ಯ ಕಲ್ಪನೆ, ವೇಷ ತೊಟ್ಟು ನಾಟ್ಯ, ಅಭಿನಯ, ಒಂದೆಡೆ ಅರ್ಥಗಾರಿಕೆ ಇನ್ನೊಂದೆಡೆ ಪ್ರತ್ಯೇಕವಾದ ಪಾತ್ರ ಸೃಷ್ಟಿಯ ಸಾಧ್ಯತೆ, ಹಿಮ್ಮೇಳದಲ್ಲಿ ತೆಂಕು - ಬಡಗು, ಬಡಗು -ತೆಂಕು ಕೂಡು ಕೂಟ, ಸ್ಪರ್ಧೆಗಳು, ಚಾವಡಿ ಕೂಟ, ಶಾಲೆಗಳಲ್ಲಿ ತರಬೇತಿ ಮತ್ತು ವಿನೂತನ ಪ್ರಯೋಗಗಳಿಂದಲೇ ಸಂಸ್ಥೆ ಮನೆಮಾತಾಗಿದೆ. ಯಕ್ಷಲೋಕ ದರ್ಶನ, ಯಕ್ಷಾಂತರಂಗ ಮುಂತಾದ ಆಕರ್ಷಕ ಶೀರ್ಷಿಕೆಗಳನ್ನು ಅನ್ವರ್ಥವಾಗಿಸಿದ ಯಕ್ಷದೇವ ಮಿತ್ರರು ಈ ಬಾರಿ ಯಕ್ಷ ಕಲೋತ್ಸವದ ಸಂಭ್ರಮದಲ್ಲಿದ್ದಾರೆ.

ಸಂಘಟನೆಯಲ್ಲಿ ಪ್ರೀತಿ - ಬದ್ಧತೆ, ಪ್ರಯೋಗದಲ್ಲಿ ನಾವೀನ್ಯ ಇರುವುದರಿಂದಲೇ ಎಲ್ಲ ಕಲಾವಿದರು ಸಹಕರಿಸುತ್ತಾರೆಂದು ಯಕ್ಷದೇವ ಮಿತ್ರ ಕಲಾ ಮಂಡಳಿಯ ಕಾರ್ಯಾಧ್ಯಕ್ಷ ದೇವಾನಂದ ಭಟ್‌ ಸ್ಮರಿಸುತ್ತಾರೆ. ಉದ್ಯಮಿ, ಗೌರವಾಧ್ಯಕ್ಷ ಶ್ರೀಪತಿ ಭಟ್‌ ಅವರ ಬೆಂಬಲ, ಮಹಾವೀರ ಪಾಂಡಿ ಮತ್ತಿತರ ಮಿತ್ರರ ಸಹಕಾರ, ಮಂಡಳಿಯ ಸರ್ವ ಸದಸ್ಯರು ಕಲಾಪೋಷಕರ ನಿರಂತರ ಪ್ರೋತ್ಸಾಹಗಳಿಂದ ಇಂತಹ ಸಂಯೋಜನೆ ಸಾಧ್ಯವಾಗುತ್ತದೆ ಎನ್ನುತ್ತಾರವರು.ಕೃಪೆ : http://www.vijaykarnataka.com


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ