ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಹಿಂದೂಸ್ತಾನಿ ಸಂಗೀತಗಳ ಸಮನ್ವಯ ಭಾಗವತ - ಸುಬ್ರಹ್ಮಣ್ಯ ಧಾರೇಶ್ವರ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಗುರುವಾರ, ಒಕ್ಟೋಬರ್ 17 , 2013

ಸುಬ್ರಹ್ಮಣ್ಯ ಧಾರೇಶ್ವರ ಎಂದಾಗ ಬಡಗುತಿಟ್ಟಿನ ಯಕ್ಷಗಾನದ ಭಾಗವತಿಕೆಯ ಆಸಕ್ತರ ಗಮನ ಸೆಳೆಯುದು ಸರಿ ಸುಮಾರು ಮೂವತ್ತಕ್ಕೂ ಅದಿಕ ಸ೦ವತ್ಸರ ಕಾಲ ಬಡಗಿಗಿನ ರಂಗಸ್ಥಳದಲ್ಲಿ ತನ್ನ ಸುಮದುರ ಧ್ವನಿಯಿಂದ ಸಹಸ್ರಾರು ಪ್ರೇಕ್ಷ್ಶಕರ ಮನಸೂರೆಗೊಂಡ ವಿಸ್ಮಯಕಾರಿ ಭಾಗವತರೊಬ್ಬರ ಹೆಸರು. ಪೆರ್ಡೂರು ಮೇಳ ಪ್ರಾರಂಭದಿಂದ ನಿರಂತರ ಇಪ್ಪತ್ತಾರು ವರ್ಷ ತನ್ನ ಅದ್ಭುತ ಶಾರೀರ ಮತ್ತು ಶರೀರದಿಂದ ಯಕ್ಷಗಾನ ಮತ್ತು ಹಿಂದೂಸ್ತಾನಿ ಸಂಗೀತಗಳ ಸಮನ್ವಯ ಭಾಗವತರೆಂದು ಖ್ಯಾತಿ ಪಡೆದು ಯಕ್ಷಗಾನಾಸಕ್ತರ ಹೃದಯದಲ್ಲಿ ಶಾಶ್ವತವಾಗಿ ನೆಲೆ ನಿಂತವರು. ಕಳೆದ ವರ್ಷದ ತಿರುಗಾಟದಿಂದ ವೃತ್ತಿ ರಂಗಭೂಮಿಗೆ ವಿದಾಯ ಹಾಡಿರುವ ಭಾಗವತರ ನಿರ್ಗಮನ ಅಭಿಮಾನಿಗಳಿಗೆ ನಿರಾಸೆ ತಂದರೂ ಆರೋಗ್ಯ ಮತ್ತಿತರ ಕಾರಣದಿಂದ ನಿವೃತ್ತಿ ಅನ್ನುವುದು ವ್ಯಕ್ತಿಯೊಬ್ಬರ ಜೀವನದಲ್ಲಿ ಅನಿವಾರ್ಯ ಅನ್ನುವುದು ಸರ್ವವಿದಿತ. ನಿವೃತ್ತಿಯ ನಂತರವೂ ದುಡಿದು ಮುಂದಿನ ಪೀಳಿಗೆಯವರಿಗೆ ಅವಕಾಶ ನೀಡಬಯಸದೆ ನಿರುದ್ಯೋಗ ಸಮಸ್ಯಗೆ ಪರೋಕ್ಶವಾಗಿ ಕಾರಣರಾಗುತ್ತಿರುವ ವಿದ್ಯಾವಂತರನೇಕರಿಗೆ ಇದೊಂದು ಪಾಠವೂ, ಆದರ್ಶವೂ ಹೌದು.

ಹೇಳಿ ಕೇಳಿ ಕನಿಷ್ಟ ಇನ್ನು ಹತ್ತು ವರ್ಷ ರಂಗದಲ್ಲಿ ದುಡಿಯಬಲ್ಲ ಶಾರೀರ ಶರೀರ ಅವರಿಗಿದೆ. ಜನರಿಗೆ ಬೇಕು ಬೇಕು ಅನ್ನುವಾಗಲೆ ನಿವೃತ್ತಿಯನ್ನು ಘೋಷಿಸಿದ ಕೆರೆಮನೆ ಮಹಾಬಲ ಹೆಗಡೆ, ನಗರ ಜಗನ್ನಾಥ ಶೆಟ್ಟಿ, ಮುರೂರು ವಿಷ್ಣು ಭಟ್, ಎಮ್. ಎ. ನಾಯಕ್, ಎಮ್. ಆರ್. ವಾಸುದೇವ ಸಾಮಗ, ಗೋಡೆ ನಾರಾಯಣ ಹೆಗಡೆ, ನೆಲ್ಲೂರು ಮರಿಯಪ್ಪ ಆಚಾರ್, ರಾಮಕ್ರಷ್ಣ ಮ೦ದಾರ್ತಿ, ಕರ್ಕಿ ಪ್ರಭಾಕರ ಭಂಡಾರಿ, ಶಂಕರ ಭಾಗವತ್ ಮುಂತಾದ ಮೇರು ಕಲಾವಿದರಂತೆ ಧಾರೇಶ್ವರರೂ ಸಹ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಂಡಿದ್ದಾರೆ.

ಬಾಲ್ಯ ಮತ್ತು ಶಿಕ್ಷಣ

ಲಕ್ಷ್ಮೀನಾರಾಯಣ ಭಟ್ಟ ಮತ್ತು ಲಕ್ಷ್ಮೀ ದ೦ಪತಿಗಳ ಏಕಮಾತ್ರ ಪುತ್ರರಾದ ಇವರು ಸೆಪ್ಟೆ೦ಬರ್ 5, 1957ರ೦ದು ಗೋಕರ್ಣದಲ್ಲಿ ಜನಿಸಿದರು. ಹಿಂದೂಸ್ತಾನಿ ಸಂಗೀತಗಾರನಾಗಬೇಕು ಎಂಬುದು ಇವರ ಬಾಲ್ಯದ ಮಹದಾಸೆಯಾಗಿದ್ದು, ಚಿಕ್ಕಮ್ಮ ಸುಲೋಚನಾ ಮಧ್ಯಸ್ಥ ಮತ್ತು ಮಾವ ನಾರಾಯಣ ಮಧ್ಯಸ್ಥ ಸಂಗೀತದ ಗುಂಗನ್ನು ಮೊದಲು ತುಂಬಿದರು.

ಒಮ್ಮೆ ಗೋಕರ್ಣಕ್ಕೆ ಶ್ಯಾಮಲಾ ಭಾವೆ ಅವರು ಬಂದಾಗ ಅವರ ಹಿಂದೆಯೇ ಹೊರಟ ಧಾರೇಶ್ವರರನ್ನು, ಮನೆಯವರಿಗೆ ಗೊತ್ತಾಗಿ ಹೋಗಲು ಬಿಡಲಿಲ್ಲ. ಇವರ ವಿದ್ಯಾಭ್ಯಾಸವು ಪ್ರಥಮ ಪಿಯುಸಿಗೆ ಮುಕ್ತಾಯಗೊಂಡಿತು. ಆಮೇಲೆ ಹೊಟ್ಟೆಪಾಡಿಗಾಗಿ ಎಲೆಕ್ಟ್ರಿಕ್‌ ಕೆಲಸ ಕಲಿತರು. ಕರೆಂಟ್‌ ವಾಯರಿಂಗ್‌ ಮಾಡುವುದು ಇವರ ಉದ್ಯೋಗವಾಯಿತು. ಆವಾಗ ಅಪರೂಪವಾದ ಮೈಕ್‌ ಸೆಟ್‌ ಇಟ್ಟು ನಾಟಕ, ಸಂಗೀತ ಕಾರ್ಯಕ್ರಮಗಳಿಗೆ ನೀಡತೊಡಗಿದರು. ಜೀವನ ಪೂರ್ತಿ ಲೈಟ್‌ ಕಂಬ ಹತ್ತುವುದರಲ್ಲಿಯೇ ಕಳೆಯುತ್ತದೆ ಎಂದುಕೊಂಡಿದ್ದ ಇವರು ಭಾಗವತ ಆಗಿರುವುದು ಒಂದು ಆಕಸ್ಮಿಕ.

ಯಕ್ಷಗಾನದ ಮೇರು ಭಾಗವತ ಉಪ್ಪೂರು ನಾರಾಯಣ ಭಾಗವತರು ಹಾಗೂ ಸಣ್ಣ ವಯಸ್ಸಿನಲ್ಲೇ ಯಾರೂ ಮರೆಯದ ಹೆಸರನ್ನು ಮಾಡಿ ನೆನಪಾಗಿಯೇ ಉಳಿದ ದಿ. ಕಾಳಿಂಗ ನಾವುಡರು ಗೋಕರ್ಣಕ್ಕೆ ಬಂದಿದ್ದರು. ಇವರ ತಂದೆಗೂ ಅವರಿಗೂ ಒಳ್ಳೆಯ ಸ್ನೇಹವಿತ್ತು. ಉಪ್ಪೂರರ ಹತ್ತಿರ ಇವರನ್ನು ತೋರಿಸಿ ಇವರು ದಾರಿಗೆ ತರುವ ಕೆಲಸ ನಿಮ್ಮದು ಎಂದು ಒಪ್ಪಿಸಿಬಿಟ್ಟರು. ಇವರು ದಾರಿ ತಪ್ಪಿರಲಿಲ್ಲ ಅದು ಬೇರೆ ಮಾತು. ಅವರು ಹೇಳಿದ್ದು ಇವರ ಮೇಲಿನ ಕಾಳಜಿಯಿಂದ ಎನ್ನುವುದು ಸ್ಪಷ್ಟ. ಸಂಗೀತಗಾರನಾಗಬೇಕೆಂದಿದ್ದ ಇವರು ಯಕ್ಷಗಾನದ ಭಾಗವತನಾಗಬೇಕಾದ ಸ್ಥಿತಿ ಬಂತು. ಮೊದಲನೆಯದಾಗಿ ಇವರಿಗೆ ಯಕ್ಷಗಾನವೆಂದರೆ ಅಷ್ಟಕಷ್ಟೇ. ಅಂದರೆ ಗದಾಯುದ್ಧ ಪ್ರಸಂಗವೆಂದರೆ ಗದೆಯಲ್ಲಿ ಹೊಡೆದುಕೊಳ್ಳುವುದು ಎನ್ನುವ ಕಲ್ಪನೆ ಇತ್ತ೦ತೆ. ಆದರೆ ಎಂದು ಉಪ್ಪೂರರ ಗರಡಿಗೆ ಸೇರಿದರೋ ಅಂದಿನಿಂದ ಇವರ ಗತಿ ಬದಲಾಯಿತು.

ಸುಬ್ರಹ್ಮಣ್ಯ ಧಾರೇಶ್ವರ
ಜನನ : ಸೆಪ್ಟೆ೦ಬರ್ 5, 1957
ಜನನ ಸ್ಥಳ : ಗೋಕರ್ಣ
ಉತ್ತರ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ : 30 ವರ್ಷಗಳ ಸುದೀರ್ಘ ಕಾಲ ಭಾಗವತರಾಗಿ ಹಲವು ಮೇಳದಲ್ಲಿ ದುಡಿಮೆ.
ಪ್ರಶಸ್ತಿಗಳು:
ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ

ಪ್ರಾರ೦ಭದ ದಿನಗಳು

ಚಿಕ್ಕ ಪ್ರಾಯದಲ್ಲೇ ತಮ್ಮ ವೈವಿದ್ಯಪೂರ್ಣ ಹಾಗೂ ವೈಶಿಷ್ಯಪೂರ್ಣ ಪ್ರತಿಭೆಗೆ ಕಿರೀಟವೆಂಬಂತೆ ಧಾರೇಶ್ವರರು ಆರಿಸಿಕೊಂಡ ಕ್ಷೇತ್ರ ಸುಗಮ ಸಂಗೀತ. ಆ ಕಾಲದಲ್ಲಿ 100ಕ್ಕೂ ಮಿಕ್ಕಿ ಸಾರ್ವಜನಿಕ ಕಾರ್ಯಕ್ರಮ ನೀಡಿದ್ದರು. ಭಕ್ತಿಗೀತೆಯ ಧ್ವನಿಸುರುಳಿಗಳಲ್ಲಿ ಅವರ ಧ್ವನಿ ಅಚ್ಚಾಗಿತ್ತು. ಮದ್ರಾಸಿನ ಪ್ರಸಿದ್ದ ಸಂಗೀತಗಾರ ಟಿ. ವಿ. ಜಿ. ಹಾಗೂ ಪ್ರಧಾನವಾದಕ ವಾಸುದೇವನ್ ರವರ ನಿರ್ದೇಶನದಲ್ಲಿ ನಿರ್ಮಿತವಾದ ಧ್ವನಿಸುರುಳಿಯಲ್ಲಿ ಧಾರೇಶ್ವರತನವಿರುವುದು ಗಮನಿಸಬಹುದು. ತಾನು ಹತ್ತನೇ ತರಗತಿ ಮುಗಿಸುವ ಹೊತ್ತಿಗೆ ಸಂಗೀತ, ನಾಟಕದ ಗೀಳು ಹೆಚ್ಚಾಗಿ ಸಂಗೀತಗಾರನಾಗುವ ಕನಸುಹೊತ್ತು ಸಿದ್ದಲಿಂಗೇಶ್ವರ ನಾಟ್ಯ ಸಂಘ ಸಂತನೂರು ಇಲ್ಲಿ ಸಂಗೀತ ನಿರ್ದೇಶಕ ಮತ್ತು ಹಿನ್ನಲೆ ಗಾಯಕನಾಗಿ ಭಡ್ತಿಯಾಗಿ ಎರಡು ವರ್ಷ ಅನುಭವ ಪಡೆದರು.

1975 ರಲ್ಲಿ ಧಾರೇಶ್ವರರ ಜೀವನದಲ್ಲಿ ಒಂದು ಹೊಸ ತಿರುವು ಮೂಡಿತು. ಬಡಗುತಿಟ್ಟಿನ ಅನರ್ಘ ರತ್ನಗಳಂತ ಭಾಗವತರನ್ನು ನೀಡಿದ ಹಂಗಾರಕಟ್ಟೆ ಯಕ್ಷಗಾನ ಕೇಂದ್ರದ ಪರಿಚಯವಾಯಿತು. ಭಾಗವತ ಕಾಳಿಂಗ ನಾವಡ, ಶಂಕರ ಭಾಗವತ, ಕೆ. ಪಿ. ಹೆಗಡೆ, ಸುರೇಶ ಶೆಟ್ಟಿ, ಹಿರಿಯಣ್ಣಾಚಾರ್, ಶಬರಾಯ, ರಾಘವೇಂದ್ರ ಮಯ್ಯ, ಉಮೇಶ ಸುವರ್ಣ ಮುಂತಾದ ಹಿಮ್ಮೇಳದ ಕಲಾವಿದರನ್ನು ನೀಡಿದ ಕೇಂದ್ರದಲ್ಲಿ ನಾರಣಪ್ಪ ಉಪ್ಪೂರ ಮತ್ತು ಮದ್ದಳೆಯ ತಿಮ್ಮಪ್ಪ ನಾಯಕರ ಶಿಷ್ಯತ್ವ ಲಭಿಸಿ ಉಪ್ಪೂರರ ಸ್ಪರ್ಶ ಇವರ ಕಂಠಕ್ಕಾಯಿತು. ಆರ್ಥಿಕ ಭದ್ರತೆಯ ದ್ರಷ್ಟಿಯಿಂದ ಶ್ರೀ ಅಮೃತೇಶ್ವರಿ ಮೇಳದಲ್ಲಿ ವಿದ್ಯುತ್ತ್ ಸಂಯ್ಯೋಜಕರಾಗಿ ಸೇರಿಕೊಂಡರು. ರಂಗದ ಬಲಬಾಗದಲ್ಲಿ ಲೈಟಿಂಗ್ ಮಾಡುವಾಗ ಉಪ್ಪೂರರ ಕಂಠ, ದುರ್ಗಪ್ಪ ಗುಡಿಗಾರರ ಮದ್ದಳೆಯ ನಿನಾದ ಇವರ ಹುಚ್ಚೆಬ್ಬಿಸಿತು. ಇವರ ಆಸಕ್ತಿ ಗಮನಿಸಿದ ಗುರುಗಳು ಸಂಗೀತಗಾರರನ್ನಾಗಿ ಇವರನ್ನು ಮೇಳಕ್ಕೆ ಭಡ್ತಿ ನೀಡಿದರು. ಇವರ ಕಂಠಸಿರಿಗೆ ಭವ್ಯ ಭಂಗಲೆ ನಿರ್ಮಿಸಿದ ಶಿಲ್ಪಿಗಳ ಸಾಲಿನಲ್ಲಿ ಶ್ರೀ ನಾರಣಪ್ಪ ಉಪ್ಪೂರ, ಹಾಗು ದುರ್ಗಪ್ಪ ಗುಡಿಗಾರರಿಗೆ ಅತ್ಯುನ್ನತ ಸ್ಥಾನ ಲಭಿಸುತ್ತದೆ. ಅಮೃತೇಶ್ವರೀ ಮೇಳದಲ್ಲಿ ಚಿಟ್ಟಾಣಿ ರಾಮಚಂದ್ರ ಹೆಗಡೆ, ನಗರ ಜಗನ್ನಾಥ ಶೆಟ್ಟಿ, ಗೋಡೆ ನಾರಾಯಣ ಹೆಗಡೆ, ಶಿರಿಮಠ ಪಂಜು ನಾಯಕ್, ವಾಸುದೇವ ಸಾಮಗ, ಕೋಟ ವೈಕುಂಠ, ಎಂ. ಏ ನಾಯ್ಕ, ಹೊನ್ನಪ್ಪ ಗೋಕರ್ಣ ಮುಂತಾದವರ ಒಡನಾಟದಲ್ಲಿ ಪರಿಪೂರ್ಣ ಭಾಗವತರಾಗಿ ಮೂಡಿ ಬಂದರು. ಬಳಿಕ ಪಂಚಲಿಂಗೇಶ್ವರ ಮೇಳದಲ್ಲಿ ಸೇವೆ ಸಲ್ಲಿಸಿದರು

ವೃತ್ತಿ ಹಾಗೂ ಕಲಾಸೇವೆ

ಪೆರ್ಡೂರು ಮೇಳದ ಪ್ರಾರಂಭದ ದಿನಗಳು ಧಾರೇಶ್ವರ, ದುರ್ಗಪ್ಪ ಗುಡಿಗಾರ್, ಗಜಾನನ ದೇವಾಡಿಗರ ಗಜಗಟ್ಟಿ ಹಿಮ್ಮೇಳದಲ್ಲಿ ನಗರ ಜಗನ್ನಾಥ ಶೆಟ್ಟರ ಸುಂದರ ರಾವಣನಿಗೆ ``ಮಾರಣಾಸ್ತ್ರ ತಾಗಿ ಬಿಗುವೇರಿತಲ್ಲೊ ಜಾಣೆ `` ಪದ್ಯವಿರಬಹುದು, ರಾಮಾಂಜನೇಯದಲ್ಲಿ ಕುಮಟಾ ಗೋವಿಂದ ನಾಯಕರ ಹನುಮಂತನಿಗೆ ``ರಘೋತ್ತುಮ ರಾಮ `` ಪ್ರವೇಶದ ಪದ್ಯವಿರಬಹುದು, ಮುರೂರು ವಿಷ್ಣು ಭಟ್ಟರ ಸೀತೆಗೆ ವ್ಯಂಗ್ಯಭರಿತವಾದ ``ಏನಿದೇನು ಸಿಟ್ಟು ಮಹನೀಯ `` , ಗೋಡೆಯವರ ಬ್ರಹ್ಮನಿಗೆ ``ಮದುವೆ ಬೇಡವೇನೆ? `` ಪದ್ಯ ಇರಬಹುದು. ಕುಶಲವದಲ್ಲಿ ಮೋಹನದಾಸ ಶೆಣೈಯವರ ``ರಾಮನಿಗೆ ಚಲುವರನು ನೋಡಿದರೆ`` ಭಾವಪೂರ್ಣವಾದ ಪದ್ಯವಿರಲಿ ಆ ಕಾಲದ ಯುವ ಕಲಾವಿದರಾದ ಗೋಪಾಲಾಚಾರ್ಯರ ಅಭಿಮನ್ಯು ರಾಮ ನಾಯರಿಯವರ ಸುಭದ್ರೆಗೆ ``ಯಾತಕಿಂತು ಬುದ್ದಿಬಂತು `` ಕರುಣಾರಸದ ಪದ್ಯವಿರಲಿ, ಇಲ್ಲೆಲ್ಲ ತನ್ನ ಗುರು ನಾರಣಪ್ಪ ಉಪ್ಪೂರರನ್ನು ನೆನಪಿಸಿದರೆ, ಬಡಗಿನ ಇನ್ನೊ೦ದು ಶೈಲಿಯಾದ ಕುಂಜಾಲು ಶೈಲಿಯನ್ನು ಆ ಶೈಲಿಯ ಪ್ರಾತಿನಿಧಿಕರಾದ ಮರಿಯಪ್ಪ ಅಚಾರ್ಯರ ಶೈಲಿಯಲ್ಲಿ ಹಾಡಿ ಕಾಳಿಂಗ ನಾವಡರ ನಂತರ ಬಡಗಿನ ಕುಂಜಾಲು ಮತ್ತು ಮಾರ್ವಿ ಎರಡೂ ಶೈಲಿಯ ಪ್ರಾತಿನಿಧಿಕ ತಾನೆ೦ಬುದನ್ನು ತೋರಿಸಿಕೊಟ್ಟ ಏಕಮೇವ ಭಾಗವತರಿವರು.

ಐರೋಡಿ ಗೋವಿಂದಪ್ಪನವರ ಸಭೆಯ ಅರ್ಜುನನಿಗೆ ``ಹಂಸ ಕೇತನಾದಿಗಳೆಲ್ಲ ಕೇಳಿ`` ಇರಬಹುದು, ಭೀಷ್ಮ ಪರ್ವದ ``ಎಲವೊ ಬಾಲ ಬಾಲ ಭಾಷೆ`` ಹಿಂದೂಸ್ತಾನಿ ರೂಪಕತಾಳದ ಪದ್ಯವಿರಲಿ ನಗರದವರ ಅರ್ಜುನನಿಗೆ ``ಯಾದವೋತ್ತಮ ಲಾಲಿಸಿ ಕೇಳು`` ಪದ್ಯವಿರಲಿ ಇಲ್ಲೆಲ್ಲ ಕುಂಜಾಲು ಶೈಲಿಯ ಸಮರ್ಥ ಭಾಗವತ ತಾನೆಂದು ತೋರಿಸಿಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. ಬಡಗುತಿಟ್ಟಿನ ಹಾಸ್ಯಗಾರ ಹಳ್ಳಾಡಿ ಜಯರಾಮ ಶೆಟ್ಟಿ, ಬಡಾಬಡಗುತಿಟ್ಟಿನ ರಮೇಶ ಭಂಡಾರಿಯವರನ್ನು ಸಮರ್ಥವಾಗಿ ರಂಗದಲ್ಲಿ ಬಳಸಿಕೊಂಡ ಕೀರ್ತಿಯೂ ಇವರಿಗೆ ಸಲ್ಲುತ್ತದೆ.

ಹಳೆಯ ಪೌರಾಣಿಕ ಪ್ರಸಂಗಗಳಲ್ಲಿ ಯಕ್ಷಗಾನದಲ್ಲಿ ಪ್ರಚಲಿತವಿದ್ದ ಉಪ್ಪೂರ ಶೈಲಿಯನ್ನು ಹಾಗೂ ಕುಂಜಾಲು ಶೈಲಿಯನ್ನು ಬಳಸಿಕೊಳ್ಳುತಿದ್ದ ಅಪರೂಪದ ಭಾಗವತರಲ್ಲಿ ಇವರೊಬ್ಬರು. ಕುಂಜಾಲು ಶೈಲಿಯಲ್ಲಿ ಹಾಡಬಲ್ಲವರು ಉಪ್ಪೂರರ ಶೈಲಿಯಲ್ಲಿ ಸೋಲುತ್ತಾರೆ ಉಪ್ಪೂರರ ಶೈಲಿಯಲ್ಲಿ ಹಾಡಬಲ್ಲವರು ಕುಂಜಾಲು ಶೈಲಿಯಲ್ಲಿ ಸೋಲುತ್ತಾರೆ ಎರಡೂ ಶೈಲಿಯಲ್ಲಿ ತನ್ನ ಕಂಠವನ್ನು ಬಳಸುತಿದ್ದ ಕಾಳಿಂಗ ನಾವಡರ ನಂತರದ ಭಾಗವತರಿವರಾದರು ಎಂದರೆ ತಪ್ಪಾಗದು.. ಕರ್ಣಾರ್ಜುನ, ಜಾಂಬವತಿ, ಮೀನಾಕ್ಷಿ, ರತಿ ಕಲ್ಯಾಣ, ಕೃಷ್ಣಾರ್ಜುನ ಮುಂತಾದ ಪ್ರಸಂಗದಲ್ಲಿ ಕುಂಜಾಲು ಶೈಲಿಯನ್ನು ಬಳಸಿದರೆ, ರಾಮಾಂಜನೇಯ, ಲಂಕಾದಹನ, ಪಟ್ಟಾಭಿಷೇಕ ಮುಂತಾದ ಪ್ರಸಂಗಗಳಲ್ಲಿ ಚಾಲ್ತಿಯಲ್ಲಿರುವ ಉಪ್ಪೂರ ಶೈಲಿಯನ್ನು ಬಳಸಿ ಎರಡೂ ಶೈಲಿಗೆ ಮರ್ಯಾದೆ ನೀಡಿದ ಮಹಾನುಭಾವ ಭಾಗವತರಿವರು.

ಸಂಪ್ರದಾಯದ ರಾಗಗಳಾದ ಕಾಂಭೋಜಿ, ಹರಿ ಕಾಂಬೋಜಿ, ಅಠಾಣ, ಮಧ್ಯಮಾವತಿ, ಕಲ್ಯಾಣಿ, ಮೋಹನ, ಬಿಲಹರಿ, ದೇವಗಾಂದಾರಿ, ಆರಭಿ, ಕಾನಡ ತೋಡಿ, ಪೂರ್ವಿ, ಹಿಂದೋಳ ರಾಗದಷ್ಟೆ ಇವರು ಬಳಸುತಿದ್ದ ಹೊಸ ರಾಗಗಳಾದ ವಾಸಂತಿ, ವೃಂದಾವನ ಸಾರಂಗ, ಸಾರಂಗ, ಪೀಲು, ಸಾರಮತಿ, ಉದಯಚಂದ್ರಿಕ, ದೇಶ್, ಮಾಂಡ್, ಆಹೇರಿ, ರೇವತಿ, ಮಾಲ್ ಕಂಸ್, ಬೇಹಾಗ್ ಚಾರುಕೇಶಿಯಂತ ಇತ್ತಿಚಿಗೆ ಬಳಕೆಯಾದ ರಾಗಗಳು ಕೂಡ ಅಷ್ಟೇ ಪರಿಪೂರ್ಣ ಭಾಮಿನಿ ಪದ್ಯಗಳನ್ನು ಯಕ್ಷಗಾನದ ಹೊರ್ತಾದ ಮಟ್ಟಿನಲ್ಲಿ ಹಾಡಬಲ್ಲ ಇವರು ಉತ್ತರ ಕನ್ನಡದ ಕಲಾವಿದರಾದ ಚಿಟ್ಟಾಣಿ ರಾಮಚಂದ್ರ ಹೆಗಡೆ, ಗೋಡೆ ನಾರಾಯಣ ಹೆಗಡೆ, ಬಾಸ್ಕರ ಜೋಶಿ, ವಿಷ್ಣು ಭಟ್ ಮುಂತಾದ ಕಲಾವಿದರೊಂದಿಗೆ, ಹಾಗು ಶುದ್ದ ನಡುತಿಟ್ಟಿನ ನಗರ ಜಗನ್ನಾಥ ಶೇಟ್ಟಿ, ಐರೋಡಿ ಗೋವಿಂದಪ್ಪ, ಕೋಟ ವೈಕುಂಠ, ಎಮ್ ಎ ನಾಯ್ಕ, ರಾಮ ನಾಯರಿ, ಮೋಹನದಾಸ ಶೆಣೈ, ಉಪ್ಪುಂದ ನಾಗೇಂದ್ರ, ಗೋಪಾಲಾಚಾರ್ಯ ಮುಂತಾದ ಕಲಾವಿದರನ್ನು ಅವರ ಲಯ ಸಾಮರ್ಥ್ಯ ಕಂಠ ಶಕ್ತಿಗಣುಗುಣವಾಗಿ ರಂಗದಲ್ಲಿ ಅವರನ್ನು ತೋರ್ಪಡಿಸಿದ್ದಾರೆ.

ಹಿರಿಯ ಮದ್ದಳೆ ವಾದಕರಾದ ದುರ್ಗಪ್ಪ ಗುಡಿಗಾರ್, ಬೇಳಂಜೆ ತಿಮ್ಮಪ್ಪ ನಾಯ್ಕ, ಗಜಾನನ ದೇವಾಡಿಗರಂತೆ, ಕಿರಿಯರಾದ ಸುನಿಲ್ ಭಂಡಾರಿ, ಶ್ರೀದರ ಭಂಡಾರಿ, ರಾಕೇಶ ಮಲ್ಯರನ್ನು ಅಷ್ಟೇ ಸಲೀಸಾಗಿ ಹೊಂದಿಸಿಕೊಂಡಿದ್ದು ಇವರ ಹೆಚ್ಚುಗಾರಿಕೆ. ಯಕ್ಷಗಾನದಲ್ಲಿ ಹಿಂದೂಸ್ಥಾನಿ ಸಂಗೀತವನ್ನು ಜೋಡಿಸಿ ಕ್ರಾಂತಿ ಮೂಡಿಸಿದ ಇವರು ಯಕ್ಷಗಾನ ಮತ್ತು ಸಂಗೀತದಲ್ಲಿ ಸಮಾನ ಆಸಕ್ತಿಯನ್ನು ಹೊಂದಿದ ಸಂಗೀತಾಸಕ್ತರನ್ನು ಯಕ್ಷಗಾನಕ್ಕೆ ಮಾರುಹೋಗುವಂತೆ ಮಾಡಿದ ಭಾಗವತರಲ್ಲಿ ಮೇರುಪಂಕ್ತಿಯಲ್ಲಿರುವವರು. ಯಾವ ಕ್ಷೇತ್ರದಲ್ಲಿ ದ್ವೇಷ ನೆಲೆಯೂರಿದರು ಸಂಗೀತಕ್ಕೆ ದ್ವೇಷಿಗಳೆ ಇಲ್ಲ ಅನ್ನುವ ರೂಡಿ ಮಾತಿನಂತೆ ಸಂಗೀತಾಸಕ್ತರಾಗಿ ಅದೇ ಕ್ಷೇತ್ರಕ್ಕೆ ಇವರು ತಮ್ಮನ್ನು ತೊಡಗಿಸಿಕೊಂಡರು. ರಂಗಸ್ಥಳದ ಎಲ್ಲಾ ತುದಿಯಲ್ಲೂ ಶರೀರ ಹಾಗೂ ಶಾರೀರದ ಕೃಪೆಯಿಂದ ವ್ಯವಸ್ಥಿತ ರಂಗ ವ್ಯವಹಾರವನ್ನು ಕರಗತ ಮಾಡಿಕೊಂಡರು. ಸೊಗಸಾದ ಹಾಡುಗಾರಿಕೆ, ವ್ಯವಸಾಯ ಕ್ಷೇತ್ರದಲ್ಲಿ ಗೌರವ, ಜನಪ್ರಿಯತೆ ವಿಶಿಷ್ಟ ರಂಗತಂತ್ರ ವಿದ್ಯಾವಂತರನ್ನು ನಾಚಿಸುವ ಭಾಷಣ ಕಲೆ, ಮಾತುಗಾರಿಕೆ, ವಿಶಾಲವಾದ ಕಲಾಕ್ಷೇತ್ರದ ಜನರೊಂದಿಗೆ ಬಾಂದವ್ಯ, ಸಾಮರಸ್ಯ, ಸಕಲ ಕ್ಷೇತ್ರಗಳಲ್ಲೂ ನೆಲೆಯೂರಿರುವ ಜಾತಿ ರಾಜಕೀಯದಿಂದ ಬಹುದೂರ, ಮೇಳದ ಪ್ರಧಾನ ಭಾಗವತನಿಗಿರಬೇಕಾದ ಈ ಎಲ್ಲಾ ಗುಣಗಳನ್ನು ಹೊಂದಿದ ಅದ್ಭುತ ಭಾಗವತನೆಂದು ಇವರನ್ನು ಎಲ್ಲಾ ಅಂಗಗಳಿಂದಲೂ ಗುರುತಿಸಬಹುದು.

ಪೆರ್ಡೂರು ಮೇಳದಲ್ಲಿ ಜಯಭೇರಿ

ಸುಮಾರು 25 ವರ್ಷದ ಹಿಂದೆ ಯಡಾಡಿ ಕರುಣಾಕರ ಶೆಟ್ಟರು ಹೊಸದಾಗಿ ಪೆರ್ಡೂರು ಡೇರೆಮೇಳ ನಿರ್ಮಿಸಿದಾಗ ಸ್ವತಃ ಕಲಾವಿದರಾದ ಕರುಣಾಕರ ಶೆಟ್ಟರು ಧಾರೇಶ್ವರರ ಸಾರಥ್ಯವೇ ಸಮರ್ಥವೆಂದು ತನ್ನ ಅನಂತ ಪದ್ಮನಾಭ ದಶಾವತಾರ ಯಕ್ಷಗಾನ ಮೇಳದಲ್ಲಿ ಪ್ರಧಾನ ಭಾಗವತರ ಪಟ್ಟ ನೀಡಿದರು. ದುರ್ಗಪ್ಪ ಗುಡಿಗಾರರ ಮದ್ದಳೆ, ಗಜಾನನ ದೇವಾಡಿಗರ ಚೆ೦ಡೆಯ ಹಿಮ್ಮೇಳದಲ್ಲಿ, ನಗರ ಜಗನ್ನಾಥ ಶೆಟ್ಟಿ, ಗೋಡೆ ನಾರಾಯಣ ಹೆಗಡೆ, ಉಪ್ಪುಂದ ನಾಗೇಂದ್ರ, ರಾಮ ನಾಯರಿ, ಬೇಳಂಜೆ ಸುಂದರ ನಾಯಕ್, ಕಿನ್ನಿಗೋಳಿ ಮುಖ್ಯಪ್ರಾಣ, ರಮೇಶ ಭಂಡಾರಿ, ತೀರ್ಥಳ್ಳಿ ಗೋಪಾಲಾಚಾರ್ ಮುಂತಾದ ಕಲಾವಿದರೊಂದಿಗೆ ಗಜಗಟ್ಟಿ ಮೇಳವಾಗಿ ತಿರುಗಾಟಕ್ಕೆ ಹೊರಟ ಪೆರ್ಡೂರು ಮೇಳದಲ್ಲಿ ಕಂದಾವರ ರಘುರಾಮ ಶೆಟ್ಟರ ಶೂದ್ರ-ತಪಸ್ವಿನೀ ಪ್ರಸಂಗ ಜಯಭೇರಿ ಬಾರಿಸಿ ಮೊದಲ ವರ್ಷದಲ್ಲೇ ದಾಖಲೆ ನಿರ್ಮಿಸಿತು. ಅಂದಿನ ಧಾರೇಶ್ವರರ ಕೊರವಂಜಿಯ ಕಣಿಯ ಹಾಡು, ಧಾರೇಶ್ವರರಿಗೆ ವಿಶೇಷ ಹೆಸರು ತಂದುಕೊಟ್ಟಿತು. ಮುಂದೆ ಚಾರು-ಚಂದ್ರಿಕೆ, ಪದ್ಮಪಲ್ಲವಿ, ಮಾನಸ ಮಂದಾರ ಮುಂತಾದ ಹೊಸ ಪ್ರಸಂಗದ ಹಾಡುಗಳು ಇವರಿಗೆ ಅಪಾರ ಜನಮನ್ನಣೆ ನೀಡಿತು.

ಧಾರೇಶ್ವರರ ನಿರ್ದೇಶನದಲ್ಲಿ ಗೋಪಾಲಾಚಾರ್ಯ ಮತ್ತು ರಾಮ ನಾಯರಿಯವರ ದೀಪ ನೃತ್ಯ ಪದ್ಮಪಲ್ಲವಿ ಪ್ರಸಂಗದ ವಿಶೇಷ ಆಕರ್ಷಣೆಯಾಗಿತ್ತು. ಧಾರೇಶ್ವರರು ಭಾಗವತರಾಗುತಿದ್ದಂತೆ ಜನಪ್ರಿಯತೆಯ ತುದಿಗೆ ತಲುಪಲು ಅವರು ಹಾಡಿದ ``ಕಣಿ ಹಾಡು`` ಮತ್ತು ಚಾರುಚಂದ್ರಿಕೆಯ ``ಅಲ್ಲಿ ನಾನು ಇಲ್ಲಿ ನೀನು`` ಮುಂತಾದ ಹೊಸ ಶೈಲಿಯ ಹಾಡುಗಳು ಸಹ ಪ್ರಮುಖ ಕಾರಣ. ಕಣಿ ಹಾಡಿನಲ್ಲಿ ಜಾನಪದ ಸೊಗಡನ್ನು ಅಳವಡಿಸಿದರೆ ``ಅಲ್ಲಿ ನಾನು ಇಲ್ಲಿ ನೀನು`` ಎಂಬಲ್ಲಿ ಮಿಶ್ರ ಸಾರಂಗದ ಜಾಡನ್ನು ಪ್ರಯೋಗ ಮಾಡಿದರು. ಸ್ವಪ್ನ ಸಾಮ್ರಾಜ್ಯ ಪ್ರಸಂಗದಲ್ಲಿ ಅವರು ಇನ್ನೊಂದು ಪ್ರಯೊಗಕ್ಕೆ ಕೈ ಹಾಕಿ ಸೈ ಎನಿಸಿಕೊಂಡರು. ಇಲ್ಲಿ ಶಾಸ್ತ್ರೀಯ ರಾಗಗಳನ್ನು ರಂಗಸ್ಥಳಕ್ಕೆ ತಂದರು. ಸೌಗಂಧಿಕಾ ಪುಷ್ಪ ಎಂಬ ರಾಗಮಾಲಿಕೆ ಯೊಂದನ್ನು ರೂಪಿಸಿಕೂಂಡರು. ಇದು ನಿರಂತರ ಅರ್ಧ ಗಂಟೆಗೂ ಮಿಕ್ಕಿದ ಹಾಡುಗಾರಿಕೆ: ರಾಗಮಾಲಿಕೆ, ಇದರಲ್ಲಿ ಮಧ್ಯಮಾವತಿ, ಕಾನಡ, ಅಠಾಣ, ಹಿಂದೂಸ್ತಾನಿ, ಕೇದಾರ, ಹಿಂದೋಳ ರಾಗಗಳನ್ನು ಕ್ರಮವಾಗಿ ಪ್ರಯೋಗಿಸಿದರು. ಇದಕ್ಕೆ ಪ್ರೇಕ್ಷಕರು ಮಂತ್ರ ಮುಗ್ದರಾದರು. ಆದರೆ ಗಮನಿಸಬೇಕಾದ ಅಂಶವೆಂದರೆ , ``ಕಣಿಯ ಹೇಳುವೆ`` ಕೇವಲ ಜಾನಪದ ಹಾಡಾಗಿ ; ``ಅಲ್ಲಿ ನೀನು ಇಲ್ಲಿ ನಾನು`` ಭಾವಗೀತೆಯಾಗಿ, ನಾಗವಲ್ಲಿ ಪ್ರಸಂಗದ ``ಕಣಕಣದಲೂ ಶಾರದೆ`` ಹಾಡಿನಲ್ಲಿ ಭಕ್ತಿ ರಸದ ಪರಾಕಾಷ್ಟೆಯಾಗಿ, ರಾಗಮಾಲಿಕೆ ಸಂಗೀತ ಕಛೇರಿಯ ಭಾಗವಾಗಿ ರಂಗಸ್ಥಳ ಪ್ರವೇಶಿಸಲಿಲ್ಲ. ಅವೆಲ್ಲವೂ ಯಕ್ಷಗಾನದ ಸಾಧ್ಯತೆಯ ಚೌಕಟ್ಟಿನೊಳಗೆ ಯಕ್ಷಗಾನ ಹಾಡುಗಳಾಗಿಯೇ ಪ್ರವೇಶಿಸಿದವು. ಯಕ್ಷಗಾನದ್ದೇ ತಾಳ, ಹಿಮ್ಮೇಳ ಗಳನ್ನು ಬಳಸಿದ್ದು ಅವರ ಹೆಚ್ಚುಗಾರಿಕೆ.

ಪ್ರಯೋಗಶೀಲ ಭಾಗವತಿಕೆ

ಸೃಜನಶೀಲ ಕಲಾವಿದರಾಗಿ ಧಾರೇಶ್ವರರು ಪರಂಪರೆಯ ಪ್ರಸಂಗಗಳಿಗೆ ಸನ್ನಿವೇಶಗಳಲ್ಲಿ ಮಾರ್ಪಾಡು ಮಾಡಿದ್ದಾರೆ. ಭೀಷ್ಮ ವಿಜಯದಲ್ಲಿ ಸೋತ ಅಂಬೆ ಪುನಃ ಸಾಲ್ವನ ಬಳಿಗೆ ಹೋದಾಗ ಆತನ ಅವಹೇಳನ ತಮಾಷೆ ಹುಸಿ ಮುನಿಸು ಎಂದು ಧಾರೇಶ್ವರರ ಕಲ್ಪನೆಯ ಅಂಬೆ ತಿಳಿದು ತುಜಾವಂತು ರಾಗದ ಬದಲು ಶೃಂಗಾರದ ಉದಯ ಚಂದ್ರಿಕ ರಾಗದ ``ಕೇಳಯ್ಯ ಖಳರಾಯ ಪೂರ್ವದಲಿ ನಾನು`` ಪದ್ಯ ಕಾಂಭೋಜಿಗೆ ಬದಲಾಗಿ ಕಲಾವತಿಯಲ್ಲಿ, ``ಕರುಣನಿಧಿ ಅವದರಿಸು`` ಶಂಕರಾಭರಣ ರಾಗದ ``ಭಾವಕಿಯ ಸೌಂದರ್ಯ ನೋಡಿ``ಯನ್ನು ಮೋಹನದಲ್ಲಿ ಬೆಳಗಿನ ಜಾವದಲ್ಲಿ ಅವರು ಅಳವಡಿಸಿದರೆ ಪ್ರೇಕ್ಷಕರು ಹುಚ್ಚೆದ್ದು ಕುಣಿಯುವ ದೃಶ್ಯ ಅವರ ಸೃಜನಶೀಲತೆಗೆ ಸಾಕ್ಷಿ. ಕೇವಲ ಕಚದೇವಯಾನಿಯ ಸಂಬಾಷಣೆಯ ``ಪೋಗಿ ಬಹೆ ನ ನಾಗವೇಣಿಯೇ ಪರಮ ಸಖನೆ ಕೇಳೋ``, ದೇಶ್ ರಾಗದಲ್ಲಿ ಬಬ್ರುವಾಹನದ ಶೃಂಗರಿಸಿ ``ಉರಗೇಂದ್ರ ನಂದನೆ`` ಪದ್ಯಗಳೆ ಸಾಕು ಅವರ ಪೌರಾಣಿಕ ಪ್ರಸಂಗದ ನೆಲೆಗಟ್ಟನ್ನು ಅರಿಯಲು. ಬೊಬ್ಬೆ ಹೊಡೆಯುವುದು ಭಾಗವತಿಕೆ ಅಲ್ಲ ಅನ್ನುವ ಹಿರಿಯ ಕಲಾವಿದ ದಿ||ಕೆರೆಮನೆ ಮಹಾಬಲ ಹೆಗಡೆಯವರ ಮಾತನ್ನು ಸಾರ ಸಗಟಾಗಿ ಪಾಲಿಸಿಕೊಂಡು ಬಂದ ಸಜ್ಜನ ಕಲಾವಿದರಾಗಿ ವಿದ್ವಜ್ಜನರ ಮನ್ನಣೆಗೆ ಪಾತ್ರರಾದರು.

ಧಾರೇಶ್ವರರ ವಿಶೇಷತೆಯೇ ಅವರ ಕೋಮಲ ಕಂಠ ಶಬ್ದಗಳ ಸ್ಪಷ್ಟ ಉಚ್ಚಾರ, ರಾಗಗಳ ಬಳಕೆಯಲ್ಲಿನ ಜಾಣ್ಮೆ ಶೃಂಗಾರ ಕರುಣ, ಭಕ್ತಿ ರಸದ ಪದ್ಯಗಳಲ್ಲಿ ಅವರದ್ದು ಎತ್ತಿದ ಕೈ. ಕಾರ್ತವೀರ್ಯನ ಜಲಕ್ರೀಡೆ, ಸಾಲ್ವ ಶೃಂಗಾರ ಸುದನ್ವ-ಪ್ರಭಾವತಿ, ಬೀಷ್ಮ-ಪರಶುರಾಮ, ಶರ್ಮಿಷ್ಟೆ-ದೇವಯಾನಿ. ಗದಾಯುದ್ದದ ``ನಿನ್ನಯ ಬಲು ಏನು``, ``ಕಪಟನಾಟಕ ರಂಗ``, ಅಠಾಣ ರಾಗದ ``ಶ್ರೀ ಮನೋಹರ ಸ್ವಾಮಿ ಪರಾಕು``, ಮುಂತಾದ ಅವರ ಕಂಠದಿಂದ ಮೂಡಿಬಂದ ಪದ್ಯಗಳು ಭಾಗವತಿಕೆಯ ಆಸಕ್ತರು ಅನುದಿನವೂ ನೆನಪಿಸುವ ಪದ್ಯಗಳಾಗಿ ದಾಖಲಾಗಿದೆ.

ಧಾರೇಶ್ವರರ ಹಾಡುಗಾರಿಕೆಯನ್ನು ಗಿಮಿಕ್ಸ್ ಎಂದೂ, ಭಾವಗೀತೆ ಎಂದೂ ವಿಮರ್ಶಿಸಿದ ಒಂದು ವರ್ಗವಿದೆ. ಅದನ್ನೆ ಗಿಮಿಕ್ಸ್ ಅನ್ನುವ ಬದಲು ಪ್ರಯೋಗ ಶೀಲತೆ ಎನ್ನಬಹುದಲ್ಲ. ಇಳಿ ಶ್ರುತಿಯಲ್ಲಿ ಮಾತ್ರ ಹಾಡಬಲ್ಲರು ಅನ್ನುವ ಕೆಲವರಿಗೆ ಪೌರಾಣಿಕ ಪ್ರಸಂಗದಲ್ಲಿ ಕಪ್ಪು ಮೂರರಲ್ಲೂ ಬಿಳಿ ನಾಲ್ಕರಲ್ಲೂ ಹಾಡಿ ತೋರಿಸಿ ಹುಬ್ಭೇರಿಸುವಂತೆ ಮಾಡಿದ್ದಾರೆ. ಸುಗಮ ಸಂಗೀತ, ಶಾಸ್ತ್ರೀಯ ಸಂಗೀತವನ್ನು ಯಕ್ಷಗಾನಕ್ಕೆ ಅವರು ಪೋಣಿಸಿದ್ದು ಈ ಕಲೆಗಿರುವ ಮೈಲಿಗೆಯನ್ನು ತೊಡೆದು ಹಾಕಿದೆ. ಇದರಿಂದ ಭಾಗವತಿಕೆಯ ಕ್ಷೇತ್ರ ಅಪಾರ ವಿಸ್ತಾರ ಪಡೆಯಿತು. ಎಡದಲ್ಲಿ ನಾವಡರನ್ನೂ ಬಲಬಾಗದಲ್ಲಿ ಧಾರೇಶ್ವರರನ್ನು ಕುಳ್ಳಿರಿಸಿ ನಾರಣಪ್ಪ ಉಪ್ಪೂರರವರು ಮಾಡಿದ ಸಾದನೆ ಸಾರ್ಥಕವಾಯಿತು. ಯಾವುದೆ ಕಲಾವಿದ ಹೊಸತನವನ್ನು ಅರ್ಥಪೂರ್ಣವಾಗಿ ತಂದಾಗ ಕಲೆ ಪರಿಪೂರ್ಣವಾಗುತ್ತದೆ. ಯಾವುದೇ ಕಲೆ ನಿಂತ ನೀರಾಗಬಾರದು ಸದಾ ಹರಿಯುತ್ತಿರಬೇಕು ಆದರೆ ದಡಮೀರಿ ಹರಿಯದಂತ ಎಚ್ಚರ ಬೇಕು. ಅಂತಹ ಎಚ್ಚರದಿಂದ ಪರಿಪೂರ್ಣ ಬಡಗುತಿಟ್ಟಿನ ಭಾಗವತರಾಗಿ ಮೂಡಿ ಬಂದವರು ಗುಂಡ್ಮಿ ಕಾಳಿಂಗ ನಾವಡರು ಮತ್ತು ಸುಬ್ರಹ್ಮಣ್ಯ ಧಾರೇಶ್ವರರರು. ಇವರೀರ್ವರು ಈ ಶತಮಾನದ ಉತ್ತರಾರ್ದದ ಯುಗಪುರುಷ ಭಾಗವತರೆಂದಲ್ಲಿ ತಪ್ಪಾಗದು.

ಕೌಟು೦ಬಿಕ ಜೀವನ

2012 ವರ್ಷದಿಂದ ವೃತ್ತಿ ರಂಗಭೂಮಿಯಿಂದ ನಿರ್ಗಮಿಸುತ್ತಿರುವ ಅವರ ಭಾಗವತಿಕೆ ಕೇಳುವ ಅವಕಾಶ ಡೇರೆಯೊಳಗೆ ಕುಳಿತು ಸಾದ್ಯವಾಗದಿದ್ದರೂ ಅಲ್ಲಲ್ಲಿ ಅವರದ್ದೇ ಆದ ಕಾರ್ಯಕ್ರಮಗಳು ಭಾಗವತಿಕೆಯ ಕಮ್ಮಟಗಳು ನೆರವೇರಲಿವೆ. ಸುಸಂಸ್ಕ್ರತ ವಿದ್ಯಾವ೦ತ ಕುಟುಂಬ ಹೊಂದಿದ ಅವರದ್ದು ಪತ್ನಿ ಒಬ್ಬ ಪುತ್ರ ಕಾರ್ತಿಕ , ಪುತ್ರಿ ತೇಜಸ್ವ್ನಿನಿಗೆ ಒಳ್ಳೆಯ ವಿದ್ಯೆ ನೀಡಿ ಕಲಾವಿದರಿಗೆ ಆದ್ರ್ಶಪ್ರಾಯರಾಗಿದ್ದಾರೆ. ತಂದೆಗೆ ಚೆ೦ಡೆಯ ಸಾಥಿ ನೀಡಿದ ಗಜಾನನ ದೇವಾಡಿಗರ ಚೆ೦ಡೆಯ ನಿನಾದಕ್ಕೆ ಮಾರು ಹೋಗಿ ತಂದೆಯ ವಿರೋಧದ ನಡುವೆಯು ಉತ್ತಮ ಚೆ೦ಡೆ ವಾದಕನಾಗಿದ್ದು ಪುತ್ರ ಕಾರ್ತಿಕನ ದೊಡ್ಡ ಸಾದನೆ ಎನ್ನ ಬಹುದು.

****************

ಸುಬ್ರಹ್ಮಣ್ಯ ಧಾರೇಶ್ವರರವರ ಕೆಲವು ಭಾವಚಿತ್ರಗಳುಮದ್ದಳೆ ಮಾ೦ತ್ರಿಕ ದುರ್ಗಪ್ಪ ಗುಡಿಗಾರ್ ಹಾಗೂ ಚಿಟ್ಟಾಣಿ ರಾಮಚ೦ದ್ರ ಹೆಗಡೆಯವರೊ೦ದಿಗೆ
ವೃತ್ತಿ ಭಾಗವತಿಕೆಯ ವಿದಾಯದ ನ೦ತರ, ಇತ್ತೀಚೆಗೆ ಬೆ೦ಗಳೂರಿನಲ್ಲಿ ನಡೆದ ಪ್ರದರ್ಶನವೊ೦ದರಲ್ಲಿ ಚಿಟ್ಟಾಣಿಯವರ ದುಷ್ಟಬುಧ್ಧಿಗೆ ಧಾರೇಶ್ವರರವ ಹಾಡುಗಾರಿಕೆ.
ಸುಬ್ರಹ್ಮಣ್ಯ ಧಾರೇಶ್ವರ, ಚಿಟ್ಟಾಣಿ ರಾಮಚ೦ದ್ರ ಹೆಗಡೆ, ಧಾರೇಶ್ವರರವರ ಪುತ್ರ ಕಾರ್ತಿಕ್ ಧಾರೇಶ್ವರ ಹಾಗೂ ಚಿಟ್ಟಾಣಿಯವರ ಮೊಮ್ಮಗ ಕಾರ್ತಿಕ್ ಚಿಟ್ಟಾಣಿ
ಇತ್ತೀಚಿನ ಸಮಾರ೦ಭವೊ೦ದರಲ್ಲಿ ಕು೦ಬ್ಳೆ ಸು೦ದರ ರಾವ್ ಹಾಗೂ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆಯವರೊ೦ದಿಗೆ

Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Kirana Thirthahalli(11/17/2015)
The Living legend of Bhagavathike world... His voice variations are mind blowing. Mummela vannu 100% utilise maaduttare. Thumba shudda vakthithwa. I love his pair with Ramesh Bhandary Moorur. Both are excellent performers. No comparison for his talent. Nanna favourite padhya galu: "chandrahasa dustabuddi" prasanga da yellaa paddyagalu, "thanna maaninigittaa", "shivaranjini" prasanga da yella paddyagalu.
Nandish(10/30/2013)
Hi Sir, Superb Article, but please provide me the link to hear his songs..plzzz
Swamy(10/18/2013)
Even though am not from Karaavali, Because of this great man, I started understanding and repeating the yakshagaana padya’s. They are pretty clear in his voice.Few of my favorite padya’s sing by this great artist are ‘Enidenidu mahaneeya sittu’ from Raamaanjaneya, ‘Raghottama raama’ from Maaruthi Prataapa and ‘Hamsa Ketanaadigalella Keli’ from Babruvaahana.
sharan(10/18/2013)
sari sati yaaru illa bidi evarige
ಪೂರಕ ಲೇಖನಗಳು
     ತಾಜಾ ಲೇಖನಗಳು
   
  ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
  ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
  ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
   
  © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ