ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸ೦ದರ್ಶನ
Share
ಯಕ್ಷಗಾನದಲ್ಲಿ ಗುಣಮಟ್ಟ ಉಳಿಸಿಕೊಳ್ಳಬೇಕು: ಮೂಡಂಬೈಲು ಶಾಸ್ತ್ರಿ

ಲೇಖಕರು : ಎಲ್‌. ಎನ್‌. ಭಟ್‌ ಮಳಿಯ
ಶನಿವಾರ, ಜನವರಿ 3 , 2015

ಪುತ್ತೂರಿನಲ್ಲಿ ಜ. 2ರಿಂದ ಮೂರು ದಿನಗಳ ಕಾಲ ನಡೆಯುವ 10ನೇ ಅಖಿಲ ಭಾರತ ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನಕ್ಕೆ ಅನುಭವಿ. ಅರ್ಥಧಾರಿ ಮೂಡಂಬೈಲು ಸಿ. ಗೋಪಾಲಕೃಷ್ಣ ಶಾಸ್ತ್ರಿ ಅಧ್ಯಕ್ಷರು. ನಾಲ್ಕೈದು ದಶಕಗಳ ಅರ್ಥಗಾರಿಕೆಯ ಅನುಭವ, ಪಾಂಡಿತ್ಯ ಇವೆಲ್ಲ ಶಾಸ್ತ್ರಿಯವರ ವಿಶೇಷತೆ. ಈ ಸಂಭ್ರಮದಲ್ಲಿ ಅವರೊಂದಿಗೆ ಮುಕ್ತಮಾತು.

ಪ್ರಶ್ನೆ : ಮೌಲ್ಯಯುತ ಕಲಾಪ್ರಕಾರವಾದ ಯಕ್ಷಗಾನ ಇಂದು ಆರಾಧನೀಯ ಕಲೆಯಾಗಿ ವಿಸ್ತಾರ ವಾಗುತ್ತಿರುವ ಬಗ್ಗೆ?

ಮೂಡಂಬೈಲು : ಯಕ್ಷಗಾನ ಕಲೆ ಇಂದು ಆರಾಧನೀಯ ಕಲೆಯಾಗಿ ವಿಸ್ತಾರವಾಗುತ್ತಿರುವುದು ನಿಜವಾದರೂ ಹಿಂದಿನ ಕಾಲಕ್ಕೆ ಹೋಲಿಸಿದರೆ ತನ್ಮಯತೆ, ಭಕ್ತಿ ಕಡಿಮೆ ಆದಂತೆ ಭಾಸವಾಗುತ್ತಿದೆ. ಚೌಕಿ ಪೂಜೆ, ವೇದಿಕೆಗಳ ಬಗ್ಗೆ ಕಲಾವಿದರಲ್ಲಿ ಇದ್ದ ಗೌರವ ಭಾವ ಇಂದು ಕಡಿಮೆ. ಚೌಕಿ ಪೂಜೆಗೆ ತಪ್ಪದೆ ಹಾಜರಾಗುತ್ತಿದ್ದ ಕಲಾವಿದರು ಈಗ ಅವರವರ ವೇಷಕ್ಕಾಗುವಾಗ ಬರುತ್ತಾರೆ. ಜನಸಂಖ್ಯೆ ಏರಿದಂತೆ ಹರಕೆ ಹೆಚ್ಚಾಗುತ್ತದೆ. ಆದರೆ ಆಟ ಆಡಿಸುವವರ ಭಕ್ತಿ ಹೆಚ್ಚಾಗಿದೆ ಎನ್ನುವಂತಿಲ್ಲ. ಆಟದ ದಿನ ಹಣದ ವ್ಯವಸ್ಥೆ ಮಾಡಿ ಮನೆಯಲ್ಲೇ ವಿಶ್ರಾಂತಿ ಪಡೆಯುವವರೂ ಇದ್ದಾರೆ.

ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ

ಪ್ರಶ್ನೆ : ಪ್ರಸಂಗ, ಪದ್ಯ, ತಾಳ, ಕುಣಿತ, ಮಾತುಗಾರಿಕೆ ಎಲ್ಲದಕ್ಕೂ ಕಾಲಮಿತಿಯ ಪ್ರದರ್ಶನಗಳಲ್ಲಿ ಅವಕಾಶ ಇದೆಯೇ?

ಮೂಡಂಬೈಲು : ಪ್ರಸಂಗ, ಪದ್ಯ, ತಾಳ, ಕುಣಿತ, ಮಾತುಗಾರಿಕೆ ಎಲ್ಲದಕ್ಕೂ ಕಾಲಮಿತಿಯ ಪ್ರದರ್ಶನಗಳಲ್ಲಿ ನ್ಯಾಯ ಸಿಗುವುದಿಲ್ಲ. ಕಾಲ ಮಿತಿ ನಿರ್ಧರಿಸಿದರೆ ಎಲ್ಲವುಗಳನ್ನೂ ಮಿತಗೊಳಿಸಬೇಕು. ಆದರೆ ಈಗ ಹಾಗಿಲ್ಲ. ಕೇವಲ 3-4 ಗಂಟೆಗಳ ಪ್ರದರ್ಶನಕ್ಕೆ ಮೂವರು ಭಾಗವತರು, 3-4 ಪ್ರಸಂಗಗಳು. ಅಲ್ಲಲ್ಲಿ ದ್ವಂದ್ವ, ಮಾತುಗಾರರಿಗೆ ಪ್ರಾಮುಖ್ಯತೆ, ಹಾಸ್ಯಕ್ಕೆ ಎರಡು ಮೂರು ಮಂದಿ, ಚಾಲೂ ಕುಣಿತಗಳ ಬಾಹುಳ್ಯ ಕಾಲಮಿತಿಗೊಳಪಟ್ಟು ಕಡಿಮೆಯಾಗಿಲ್ಲ. ಸಮಯದೊಳಗೆ ಕಥೆ ಮುಗಿಸುವ ಗಡಿಬಿಡಿಯಲ್ಲಿ ಚೆಂಡೆ ಹೊಡೆಯುವುದು ಬಿಟ್ಟರೆ ಬೇರೇನೂ ಕೇಳುವುದಿಲ್ಲ. ತಾಳಮದ್ದಳೆಗಳಲ್ಲೂ ಇದೇ ಸ್ಥಿತಿ. ಇತ್ತೀಚೆಗೆ 'ವಾದ-ಸಂವಾದ' ಎಂಬ ಕ್ರಮ ಬಳಕೆಯಲ್ಲಿದೆ. ಅದು ಕೇವಲ ಚರ್ಚೆಗಾಗಿರುವುದರಿಂದ ತಾಳಮದ್ದಳೆ 'ಕಲೆಯೇ' ಅಲ್ಲವೆನ್ನುವಂತೆ ತೋರಿಸಿ ಕೊಡುತ್ತದೆ.

ಪ್ರಶ್ನೆ : ಆಶು ಸಾಹಿತ್ಯಕ್ಕೆ ಇಂದು ಯಕ್ಷಗಾನದಲ್ಲಿ ಅವಕಾಶ ಇದೆಯೇ?

ಮೂಡಂಬೈಲು : ಆಶು ಸಾಹಿತ್ಯ ಅರ್ಥಧಾರಿಗಳಿಂದ ಬಂದರೆ ಅವಕಾಶವಿದೆ. ಆದರೆ ಅದು ಸಕಾಲಿಕವಾಗಿ ಉಳಿದಿಲ್ಲ. ಭಾಗವತರಿಂದಲೂ ಬಂದರೆ ಸಂತೋಷ. ಆದರೆ ಅದು ರಂಗದ ಹಿಂದೆ ಪ್ರಸಂಗ ರಚನಾ ಸಮಯದಲ್ಲಿ ಮಾತ್ರ. ಆಟ ಕೂಟಗಳ ವೇದಿಕೆಯಲ್ಲಿ ಭಾಗವತರು ಆಶು ಸಾಹಿತ್ಯ ಪ್ರಯೋಗಿಸಿದರೆ ಅರ್ಥ ಹೇಳುವವರೂ ಕಡಿಮೆ. ಕುಣಿತವಾದರೂ ಹಿಮ್ಮೇಳದ ಪ್ರಭಾವದಿಂದ ನಡೆದೀತು. ಮೊದಲೇ ಪ್ರಸಂಗ ಪುಸ್ತಕ ಕೊಟ್ಟರೂ ಓದಿ ಅರ್ಥ ಹೇಳುವ ಅಭ್ಯಾಸ ಮಾಡುವವರು ದುರ್ಲಭ. ಪ್ರಧಾನ ಭಾಗವತ, ಹಿರಿಯ ಮದ್ಲೆಗಾರ, ಒಂದನೆಯ ವೇಷಧಾರಿ, ನಾಯಕಿ ಸ್ತ್ರೀ ಪಾತ್ರಧಾರಿ ಇತ್ಯಾದಿ ಸ್ಥಾನ ಪರಿಗಣನೆಗೆ ಒಂದೆರಡು ವರ್ಷಗಳ ಕಿರಿಯ ಸ್ಥಾನ ನಿರ್ವಹಣೆ ಬೇಡವೇ? ಸ್ಥಾನ ಪರಿಗಣನೆಗೆ ಕಿರಿಯ ಸ್ಥಾನದಲ್ಲಿದ್ದು ಅನುಭವ ಬೇಕೇ ಬೇಕು. ಹೊಸ ಕಲಾವಿದ ಪ್ರತಿಭಾವಂತನೇ ಆದರೂ ರಂಗಸ್ಥಳ ಮಾಹಿತಿ, ಪ್ರಸಂಗಾನುಭವ, ಹಿಮ್ಮೇಳದ ಹೊಂದಾಣಿಕೆ, ಪುರಾಣದ ಹಿನ್ನೆಲೆ ಗೊತ್ತಿಲ್ಲದೆ ಪ್ರಥಮ ಸ್ಥಾನಕ್ಕೆ ಏರಿದರೆ ಸಾಧಾರಣ ಪ್ರೇಕ್ಷಕನಿಗೆ ದೋಷ ಗೊತ್ತಾಗದಿರಬಹುದು. ಕಲಾವಿದನ ಅಪಕ್ವತೆ ಯಕ್ಷಗಾನಕ್ಕೆ ಮಾರಕವಾಗಬಹುದು.

ಪ್ರಶ್ನೆ : ಯಕ್ಷಗಾನ ಅಕಾಡೆಮಿ ಮತ್ತು ವಿಶ್ವ ವಿದ್ಯಾನಿಲಯ ಚಟುವಟಿಕೆಗೆ ಇನ್ನಷ್ಟು ಚೇತನ ಬೇಕಲ್ಲವೇ?

ಮೂಡಂಬೈಲು : ಯಕ್ಷಗಾನ ಅಕಾಡೆಮಿಗೆ ಸಾಕಷ್ಟು ಧನ ಪೂರೈಕೆ ಈಗ ಆಗುತ್ತಿದ್ದರೂ ಚಟುವಟಿಕೆ ಏನೇನೂ ಕಾಣುತ್ತಿಲ್ಲ. ಮಾರ್ಚ್ ತಿಂಗಳಿಗಾಗುವಾಗ ಎಲಾಟ್‌ಮೆಂಟ್ ಮುಗಿದೀತು. ಅಷ್ಟೇ. ವಿಶ್ವ ವಿದ್ಯಾನಿಲಯದಲ್ಲೂ ಗುಣಮಟ್ಟದ ಪರಿಗಣನೆ ಕಾಣುತ್ತಿಲ್ಲ.

ಪ್ರಶ್ನೆ : ನಿಮ್ಮ ಇತ್ತೀಚಿನ ಯಕ್ಷಗಾನ ಸಂಬಂಧಿ ಪುಸ್ತಕಗಳ ವಿವರ ಹೇಳಿ..

ಮೂಡಂಬೈಲು : ನಂದಳಿಕೆ ನಾರಾಯಣಪ್ಪನವರು ಬರೆದ 'ಕುಮಾರ ವಿಜಯ' ಯಕ್ಷಗಾನ ಪ್ರಸಂಗಕ್ಕೆ ಅರ್ಥ ಬರೆದಿದ್ದೇನೆ. ಶೀಘ್ರದಲ್ಲಿ ಅದು ಪ್ರಕಟವಾಗಲಿದೆ. 'ವಾಲ್ಮೀಕಿ ರಾಮಾಯಣ ಕೋಶ'ದ ಮೂಲ ಕರ್ತ ಪಂಡಿತ ರಾಮ ಕುಮಾರ ರಾಯ್ ಎಂಬ ಪ್ರಕಾಂಡ ವಿದ್ವಾಂಸರು ರಚಿಸಿದ ಹಿಂದಿ ಗ್ರಂಥವನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ. 427 ಪುಟಗಳ ಪುಸ್ತಕ.*********************

ಸ೦ದರ್ಶಕರು : ಎಲ್.ಎನ್.ಭಟ್ಟ ಮಳಿ, ಫಾರ್ಮಾಸಿಸ್ಟ್, ಕೆಎಂಸಿ ಆಸ್ಪತ್ರೆ, ಅತ್ತಾವರ, ಮಂಗಳೂರು

ಕೃಪೆ : http://vijaykarnataka.com


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ