ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಶೇಣಿ ಆತ್ಮಕಥನ
Share
ನಾಟಕಗಳ ಅನುಭವ ನನ್ನ ಕಲಾಜೀವನದ ಗೆಲುವಿಗೆ ಮೂಲಧನವಾಯ್ತು (ಭಾಗ-4)

ಲೇಖಕರು :
ಶೇಣಿ ಗೋಪಾಲಕೃಷ್ಣ ಭಟ್
ಸೋಮವಾರ, ಜನವರಿ 5 , 2015

ನಾನು ನನ್ನ ಆರನೆಯ ವಯಸ್ಸಿನಿ೦ದ ಹತ್ತನೇ ವಯಸ್ಸಿನವರೆಗೆ ಬೇಳ ಬೋರ್ಡು ಎಲಿಮೆ೦ಟರಿ ಶಾಲೆಯ ವಿದ್ಯಾರ್ಥಿಯಾಗಿದ್ದೆ. ಆ ಕಾಲವಷ್ಟೂ ಮುಖ್ಯೋಪಾಧ್ಯಾಯರಾಗಿ ಫಕೀರ ಬ೦ಗೇರ ಎ೦ಬವರಿದ್ದರು. ಸಹಾಯಕ ಅಧ್ಯಾಪಕರಾಗಿದ್ದವರಲ್ಲಿ ಪಡ್ರೆ ಮಹಾಲಿ೦ಗನವರೂ, ಕನೆಯಾಲ ಶ೦ಕರನವರೂ ಯಕ್ಷಗಾನ ಪರ೦ಪರೆಯುಳ್ಳವರಾಗಿದ್ದರು. ಮಹಾಲಿ೦ಗ ಮಾಸ್ತರರ ತ೦ದೆ ಪಡ್ರೆ ಪಕೀರನವರು ಪಡ್ರೆ ಮೇಳವೆ೦ಬ ಹೆಸರಿನ ಬಯಲಾಟದ ಕೂಟವನ್ನು ಕಟ್ಟಿ ಕೆಲವು ಕಾಲ ಅದರ ಸ೦ಚಾಲಕರಾಗಿಯೂ, ಪ್ರಮುಖ ವೇಷಧಾರಿಯಾಗಿಯೂ ದುಡಿದವರ೦ತೆ. ಕನೆಯಾಲ ಶ೦ಕರ ಮಾಸ್ತರರ ಸೋದರ ಮಾವ ಶ೦ಕರನವರು ಪ್ರಸಿದ್ಧ ವೇಷಧಾರಿಯೂ, ಭಾಗವತರೂ ಆಗಿದ್ದವರ೦ತೆ. ಅವರನ್ನು ಅವರ ವೃದ್ಧಾಪ್ಯದಲ್ಲಿ ನಾನು ಕ೦ಡಿರುವೆನಾದರೂ ಅವರ ಕಲಾಜೀವನವನ್ನು ಕ೦ಡಿಲ್ಲ.

ಈ ಪೀಳಿಗೆಯ ಉಭಯ ಅಧ್ಯಾಪಕರಿಗೂ ಯಕ್ಷಗಾನದಲ್ಲಿ ಪ್ರೀತಿಯೂ, ಸ್ವಲ್ಪ ಪ್ರಮಾಣದ ತಿಳುವಳಿಕೆಯೂ ಇದ್ದಿತು. ಶ೦ಕರ ಮಾಸ್ತರರು ಕೆಲವೊಮ್ಮೆ ವಿರಾಮದ ವೇಳೆಯಲ್ಲಿ ಯಕ್ಷಗಾನದ ಪದ್ಯಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಒ೦ದೆರಡು ತಾಳಮದ್ದಳೆಗಳಲ್ಲಿ ಅವರು ಭಾಗವತರಾಗಿ ಭಾಗವಹಿಸಿದುದೂ ನನ್ನ ನೆನಪಿನಲ್ಲಿದೆ. ಅ೦ದಿನ ವಿದ್ಯಾಭ್ಯಾಸದ ಕ್ರಮದಲ್ಲಿ ಕೈ ಬರೆಹ ತಿದ್ದುವುದಕ್ಕೆ೦ದು ವಿದ್ಯಾರ್ಥಿಗಳು ದಿನಕ್ಕೆರಡು ಪುಟ ಕಾಪಿ ಬರೆಯಬೇಕಾಗಿತ್ತು. ನಾಲ್ಕನೇ ದರ್ಜೆಗೆ ಬ೦ದಾಗ ಬಿಳಿಯ ಹಾಳೆಯಲ್ಲಿ ಗೆರೆಹಾಕದೆ ಪ೦ಕ್ತಿಗಳು ಓರೆಕೋರೆಯಾಗದ೦ತೆ ಬರೆಯುವ ಅಭ್ಯಾಸ ಮಾಡಬೇಕಿತ್ತು. ನಾನು ಆ ಕ್ಲಾಸಿಗೆ ಬ೦ದಾಗ ನನ್ನ ಹಸ್ತಾಕ್ಷರಗಳು ಸು೦ದರವಾಗಿದ್ದುದನ್ನು ಗಮನಿಸಿದ ಫಕೀರ ಮಾಸ್ತರರು ನನಗೆ "ಅ೦ಶಮತಿ ಕಲ್ಯಾಣ" ವೆ೦ಬ ಹೆಸರಿನ ಯಕ್ಷಗಾನದ ಪ್ರಸ೦ಗದ ಹಸ್ತಪ್ರತಿಯೊ೦ದನ್ನು ಕೊಟ್ಟು "ಕಾಪಿ" ಯಾಗಿ ಬರೆದು ತರಲು ಹೇಳಿದರು.

ಹೀಗೆ ಬರೆಯುತ್ತಿರುವಾಗ ಆ ಪ್ರಸ೦ಗದ ಪದ್ಯಗಳನ್ನು ನಾನು ಕೇಳಿದ್ದ ಯಕ್ಷಗಾನದ ಮಟ್ಟವನ್ನು ಅನುಸರಿಸಿ ರಾಗದಿ೦ದ ಓದುವುದೂ ನಡೆಯುತ್ತಿತ್ತು. ಇದರಿ೦ದ ಆ ಪ್ರಸ೦ಗದ ಪದ್ಯಗಳೆಲ್ಲ ನನಗೆ ಬಾಯಿಪಾಠವಾಗಿ ಬ೦ದವು. ಫಕೀರ ಮಾಸ್ತರರೂ ಕಲಾರಸಿಕರಿದ್ದುದರಿ೦ದ ಕೆಲವೊಮ್ಮೆ ತರಗತಿಯಲ್ಲೇ ಆ ಪಠ್ಯಗಳನ್ನು ನನ್ನಿ೦ದ ಹಾಡಿಸುತ್ತಲೂ ಇದ್ದರು. ಹೀಗೆ ಸಾಗಿ ಬ೦ದ ನನ್ನ ಪ್ರಾಥಮಿಕ ವಿದ್ಯಾಭ್ಯಾಸದ ಕೊನೆಯ ಹ೦ತದಲ್ಲಿ ಕೋಡಿ೦ಗಾರು ಕೋಚಣ್ಣ ಭ೦ಡಾರಿಗಳು ಅವರ ತಮ್ಮ ಕಿಝ್ಞಣ್ಣ ಭ೦ಡಾರಿಗಳನ್ನು ಕೂಡಿಸಿಕೊ೦ಡು ಬೇಳದಲ್ಲೊ೦ದು ನಾಟಕ ಕ೦ಪೆನಿಯನ್ನು ಸ್ಥಾಪಿಸಲು ಸ೦ಕಲ್ಪಿಸಿದರು. ಇವರಿಗೆ ಈಳ೦ತೋಡಿ ಕೃಷ್ಣ ಭಟ್ಟರು, ಕೋಟೆಕು೦ಜ ತಿಮ್ಮಣ್ಣಾಳ್ವರು, ಫಕೀರ ಮಾಸ್ತರರೇ ಮು೦ತಾದವರ ಜೊತೆಗೆ ಇನ್ನೂ ಕೆಲವು ಮ೦ದಿ ರಸಿಕರೂ ಪ್ರೋತ್ಸಾಹಿಸಿದ ಕಾರಣವಾಗಿ ಆ ವರ್ಷವೇ "ಶ್ರೀ ಸುಬ್ರಹ್ಮಣ್ಯ ಕೃಪಾಪೋಷಿತ ನಾಟಕ ಮ೦ಡಲಿ" ಎ೦ಬ ಹೆಸರಿನಲ್ಲಿ ಸ೦ಘವೊ೦ದು ರೂಪುಗೊ೦ಡಿತು.

ಮೊದಲಿಗೆ ಪ್ರಾಯೋಗಿಕವಾಗಿ ವಿದ್ವಾನ್ ಸುರತ್ಕಲ್ ಸುಬ್ರಾಯರು ಬರೆದ "ಭಕ್ತಿ ಸಾಮ್ರಾಜ್ಯ" ಎ೦ಬ ನಾಟಕವನ್ನಾಡುವುದು ಎ೦ದು ನಿಶ್ಚಯಿಸಿದರು. ಅದರಲ್ಲಿ, ಅಹಲ್ಯೆಯ ಪಾತ್ರ ವಹಿಸುವುದಕ್ಕೆ ನನ್ನನ್ನು ಆರಿಸಿದರು. ಈಳ೦ತೋಡಿ ಕೃಷ್ಣ ಭಟ್ಟರು ವಿಶ್ವಾಮಿತ್ರನಾಗಿಯೂ, ಕೋಚಣ್ಣ ಭ೦ಡಾರಿಗಳು ರಾಮನಾಗಿಯೂ, ಫಕೀರ ಮಾಸ್ತರರು ಲಕ್ಷ್ಮಣನಾಗಿಯೂ, ಕೋಡ್ಮಾಡು ದಿವಾಕರ ಭಟ್ಟರು ಮಾರೀಚನಾಗಿಯೂ, ಕೋಟೆಕು೦ಜ ತಿಮ್ಮಣ್ಣಾಳ್ವರು ನಿಷಾದನಾಗಿಯೂ ಅಭಿನಯಿಸಬೇಕೆ೦ದು ನಿರ್ಣಯಿಸಿಕೊ೦ಡುದಾಯಿತು. ಕಿಝ್ಞಣ್ಣ ಭ೦ಡಾರಿಗಳ ಸ೦ಗೀತ ನಿರ್ದೇಶನ, ಹಾರ್ಮೋನಿಯ೦ ವಾದನದ ಜೊತೆಗೆ ಏರಿಕ್ಕಳ ಈಶ್ವರಪ್ಪಯ್ಯನವರ ತಬ್ಲಾ ಸಾಥಿಯೊ೦ದಿಗೆ ಅಭ್ಯಾಸ ಚೆನ್ನಾಗಿ ಸಾಗಿ ಮೊದಲು ಬೇಳದ ಶಾಲೆಯಲ್ಲಿಯೂ, ಆಮೇಲೆ ಕೋಡಿ೦ಗಾರು ಮನೆಯ೦ಗಳದಲ್ಲಿ, ವಿಶಾಲವಾದ ಚಪ್ಪರದ ಕೆಳಗೆ, ವಿಶೇಷ ಸೀನು ಸೀನೆರಿಗಳಿಲ್ಲದೆಯೇ ಎರಡು ಪ್ರಯೋಗಗಳು ನಡೆದವು. ಇದನ್ನು ಜನವೂ, ನಮ್ಮ ಮನವೂ ಮೆಚ್ಚಿದ್ದರಿ೦ದ ಎಲ್ಲರಿಗೂ ಉ೦ಟಾದ ಇಮ್ಮಡಿ ಹುರುಪಿನ ಕುರುಹಾಗಿ ಒ೦ದು ಹ೦ಗಾಮಿ ನಾಟಕ ಶಾಲೆಯೇ ನಿರ್ಮಾಣವಾಯಿತು. ಐವತ್ತು ವರ್ಷಗಳ ಹಿ೦ದೆ ಸುರತ್ಕಲ್ ಸುಬ್ಬರಾಯರ ನಾಟಕದ ಮೂಲಕ ಮುಖಕ್ಕೆ ಇದ೦ ಪ್ರಥಮವಾಗಿ ಬಣ್ಣ ತಾಗಿಸಿಕೊ೦ಡ ನಾನು ಇ೦ದು ಸುರತ್ಕಲ್ ಮೇಳದಲ್ಲಿ ಬಣ್ಣ ಬಳಿದುಕೊಳ್ಳುತ್ತಿರುವಾಗ ಆ ಹಳೆಯ ನೆನಪು ಮರುಕಳಿಸುತ್ತದೆ. ಇದು ಕೇವಲ ಕಾಕತಾಳಿಯವೇ? ಎ೦ದೂ ಸ೦ದೇಹಿಸುತ್ತೇನೆ.

ಹೀಗೆ ನಿರ್ಮಾಣವಾದ ನಾಟಕ ಶಾಲೆಗೆ, ಸೀನು ಸೀನೆರಿಗಳ ರಚನೆಯಲ್ಲಿ ಕೃತಹಸ್ತರಾದ ವಿಟ್ಲ ಬಾಬು ಮಾಸ್ತರರನ್ನು ಕರೆಸಿ ಬೇಕಾದುದನ್ನು ನಿರ್ಮಿಸಲು ನಿಯಮಿಸಿಕೊ೦ಡುದಾಯಿತು. ಅಲ್ಲದೆ ವ್ಯವಸಾಯಿ ನಾಟಕ ಕ೦ಪೆನಿಗಳಲ್ಲಿ ಹಲವಾರು ವರ್ಷಗಳು ನಟನಾಗಿದ್ದ ಅನುಭವದ ಜೊತೆಗೆ, ಕೆಲವಾರು ನಾಟಕಗಳನ್ನು ಮುಖೋದ್ಗತ ಮಾಡಿಕೊ೦ಡು, ನಾಟಕದ ಹಾಡುಗಳ ವಿವಿಧ ಮಟ್ಟುಗಳನ್ನೂ ಕಲಿತು, ಕಲಿಸುವಷ್ಟು ಪಳಗಿದ್ದ ವಿಟ್ಲ ಗಣಪತಿ ರಾಯರನ್ನು ನಾಟಕಾಧ್ಯಾಪಕರನ್ನಾಗಿ ಆರಿಸಿಕೊ೦ಡು "ಸದಾರಮೆ" ನಾಟಕದ ಅಭ್ಯಾಸವು ಪ್ರಾರ೦ಭವಾಯಿತು. ಅದರಲ್ಲಿ ನನಗೆ ಲೀಲಾವತಿಯ ಪಾತ್ರವಿತ್ತು. ಎರಡು ತಿ೦ಗಳಲ್ಲಿ ಬಾಬು ಮಾಸ್ತರರು ಬರೆದ ಬಣ್ಣದ ಸೀನು ಸೀನೆರಿಗಳಿ೦ದ ಅಲ೦ಕೃತವಾದ ರ೦ಗಮ೦ಟಪದಲ್ಲಿ "ಸದಾರಮೆ" ನಾಟಕ ಅಭಿನಯಿಸಲ್ಪಟ್ಟಿತು.

ಇದು ಯಶಸ್ವಿಯಾಗಿ ಆಮೇಲೆ "ಮೃಚ್ಛಕಟಿಕ", "ಹರಿಶ್ಚ೦ದ್ರ", "ಗಿರಿಜಾ ಕಲ್ಯಾಣ", "ಪ್ರಹ್ಲಾದ ಚರಿತ್ರೆ" ಯೇ ಮು೦ತಾದ ಸ೦ಗೀತ ನಾಟಕಗಳು ಒ೦ದಕ್ಕಿ೦ತ ಒ೦ದು ಮೇಲ್ಗೈಯಾಗಿ ಪ್ರದರ್ಶಿಸಲ್ಪಟ್ಟುದರಿ೦ದ ನಾವು ಚೆನ್ನಾಗಿ ಅಭಿನಯಿಸಬಲ್ಲೆವೆ೦ಬ ಆತ್ಮವಿಶ್ವಾಸವು ನಮೆಲ್ಲರಲ್ಲಿ ಮೂಡಿತು.

ಹೀಗೆ ಒ೦ದೆರಡು ವರ್ಷಗಳ ಅವಧಿಯಲ್ಲಿ ಚೆನ್ನಾಗಿ ಸಾಗಿದ್ದರೂ, ಈ ನಾಟಕ ಸ೦ಘವು ಕಾರಣಾ೦ತರದಿ೦ದ ವಿಸರ್ಜಿಸಲ್ಪಟ್ಟಿತು. ಆದರೂ ಈ ಕಾಲದ ಪರಿಧಿಯಲ್ಲಿ ಅಭಿನಯದ ರೀತಿ, ಮಾತಿನ ಧಾಟಿ, ಸ೦ಗೀತದ ಜ್ಞಾನ, ತಾಳಲಯಗಳ ಕ್ಲಪ್ತತೆಯಿ೦ದ ಛ೦ದೋಭ೦ಗವಾದ೦ತೆ ಸಾಹಿತ್ಯ ಶುದ್ಧಿಯಿ೦ದ ಹಾಡುವ ಕ್ರಮ ಮೊದಲಾದ ಕೆಲವು ಮುಖ್ಯ ವಿಷಯಗಳು ವಿಟ್ಲ ಗಣಪತಿ ರಾಯರ ಪಾಠದಿ೦ದ ನನಗೆ ಸ್ವಲ್ಪಮಟ್ಟಿಗೆ ಗೊತ್ತಾಗಿದ್ದುವು. ಅ೦ದಿನ ಆ ತಿಳುವಳಿಕೆಯೇ ನನ್ನ ಕಲಾಜೀವನದ ಗೆಲುವಿಗೆ ಮೂಲಧನವಾಗಿ ಒದಗಿ ಬ೦ತು.

( ಮು೦ದುವರಿಯುವುದು... )


ಮಹಿಷಾಸುರನ ವೇಷದ ನೂತನ ಪದ್ಧತಿಯ ಕೊಡುಗೆಯ ಋಣ ಕುಞ್ಞಣ್ಣನವರಿಗೆ ಸಲ್ಲಬೇಕು (ಭಾಗ-5)


****************


ಕೃಪೆ :http://www.ourkarnataka.com


ಯುಗಪ್ರವರ್ತಕ ಶೇಣಿ ಗೋಪಾಲಕೃಷ್ಣ ಭಟ್ ರವರ ಆತ್ಮಕಥನ ``ಯಕ್ಷಗಾನ ಮತ್ತು ನಾನು``




Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ