ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಯಕ್ಷಗಾನಕ್ಕೆ ಮಹಿಳೆಯರ ಕೊಡುಗೆ ಅಪಾರ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಜನವರಿ 12 , 2015
ಜನವರಿ 12, 2015

ಯಕ್ಷಗಾನಕ್ಕೆ ಮಹಿಳೆಯರ ಕೊಡುಗೆ ಅಪಾರ

ಶಿರಸಿ : ಯಕ್ಷಗಾನ ಕ್ಷೇತ್ರಕ್ಕೆ ಸಂಕೀರ್ಣ ಕಲಾ ಪ್ರದರ್ಶನದಲ್ಲಿ ವಿವಿಧ ಸವಾಲುಗಳನ್ನು ಎದುರಿಸಿ ಮಹಿಳಾ ಕಲಾವಿದರು ಅನುಪಮ ಕೊಡುಗೆ ನೀಡುತ್ತಿದ್ದಾರೆ ಎನ್ನುವ ಶ್ಲಾಘನೆಯ ಅನಿಸಿಕೆಗಳು ನಗರದಲ್ಲಿ ಭಾನುವಾರ ವ್ಯಕ್ತವಾದವು. ಅಲ್ಲದೇ ಅನುಕರಣೆ ಮಾತ್ರವಲ್ಲದೇ ಇನ್ನಷ್ಟು ಸಾಧ್ಯತೆಗಳ ಕುರಿತು ಮಹಿಳಾ ಕಲಾವಿದರು ಗಮನಹರಿಸಬೇಕು ಎನ್ನುವ ಆಶಯ ಈ ಸಂದರ್ಭದಲ್ಲಿ ಪ್ರಸ್ತಾಪವಾಯಿತು.

ರಾಜ್ಯ ಯಕ್ಷಗಾನ-ಬಯಲಾಟ ಅಕಾಡೆಮಿಯು ನಗರದ ಗಾಣಿಗರ ಸಮುದಾಯ ಭವನದಲ್ಲಿ ನಡೆದ ಯಕ್ಷಗಾನ-ಬಯಲಾಟ ರಂಗ ಸಂಭ್ರಮದ ಎರಡನೆಯ ದಿನ ಭಾನುವಾರ ಬೆಳಗ್ಗೆ ಏರ್ಪಡಿಸಿದ್ದ ಮಹಿಳಾ ಯಕ್ಷಗಾನದ ಸಾಧ್ಯತೆ ಮತ್ತು ಸವಾಲುಗಳ ಕುರಿತು ಗೋಷ್ಠಿಯಲ್ಲಿ ಇಂಥ ಅನಿಸಿಕೆಗಳು ವ್ಯಕ್ತವಾದವು.

ಸ್ವತಃ ಯಕ್ಷಗಾನ ಕಲಾವಿದರು ಆಗಿರುವ ಗೋಪಾಲಕಷ್ಣ ಹೆಗಡೆ ಕುಮಟಾ, ವಿ.ದತ್ತಮೂರ್ತಿ ಭಟ್ಟ, ದಿವಾಕರ ಹೆಗಡೆ ಕೆರೆಹೊಂಡ ಮತ್ತು ಪ್ರಜ್ಞಾ ಮತ್ತಿಹಳ್ಳಿ ಗೋಷ್ಠಿಯಲ್ಲಿ ಪಾಲ್ಗೊಂಡು ಮಹಿಳಾ ಕಲಾವಿದರ ಯಕ್ಷಗಾನದ ಸಾಧ್ಯತೆಗಳು-ಸವಾಲುಗಳ ಕುರಿತು ಚರ್ಚಿಸಿದರು. ಮುಂಬಯಿಯ ಎಚ್.ಬಿ.ಎಲ್ ರಾವ್, ಜಿ.ಎಸ್.ಭಟ್ಟ ಮೆಸೂರು ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡರು.

ಕೌಶಲದ ಕೊಡುಗೆ.. ಎರಡು ದಶಕ ಹಿಂದೆ ಮಹಿಳೆಯರು ಯಕ್ಷಗಾನ ಕ್ಷೇತ್ರದಲ್ಲಿ ಕಾಣಿಸಿಕೊಂಡಿರದಿದ್ದರೂ ನಂತರದಲ್ಲಿ ಯಾವುದೇ ಆಖ್ಯಾನವನ್ನು ಉತ್ತಮವಾಗಿ ಸಾದರಪಡಿಸಬಲ್ಲರು ಎನ್ನುವಷ್ಟು ಬೆಳೆದಿರುವದು ಖುಷಿಯ ಸಂಗತಿಯಾಗಿದೆ. ನಾನಾ ಪಾತ್ರಗಳ ನಿರ್ವಹಣೆಯ ಕೌಶಲ ಮಹಿಳೆಯರಲ್ಲಿದೆ ಅನ್ನಿಸುವಂತಾಗಿದೆ ಎಂದು ದಿವಾಕರ ಹೆಗಡೆ ಕೆರೆಹೊಂಡ ಶ್ಲಾಘಿಸಿದರು.

ಮಹಿಳಾ ಕಲಾವಿದರ ಯಕ್ಷಗಾನ ಕ್ಷೇತ್ರದ ಕೊಡುಗೆಯ ಇನ್ನಷ್ಟು ಸಾಧ್ಯತೆಗಳನ್ನು ಅವರು ತೆರೆದಿಟ್ಟರು. ಇಷ್ಟು ವರ್ಷ ಪುರುಷ ಕಲಾವಿದರು ಮಾಡಿದ ರೀತಿಯಲ್ಲಿಯೇ ಯಕ್ಷಗಾನ ಪ್ರದರ್ಶನ ನೀಡಬೇಕು ಎಂದೇನೂ ಇಲ್ಲ. ಅನುಕರಣಿಗಿಂತ ಮುಖ್ಯವಾಗಿ ಅನನ್ಯತೆಗೆ ಒತ್ತು ನೀಡಬೇಕು. ಭೀಷ್ಮ ವಿಜಯ ಪ್ರಸಂಗವನ್ನು ಅಂಬೆಯ ಕಥೆಯನ್ನಾಗಿ ಪ್ರಸ್ತುತ ಪಡಿಸುವದಕ್ಕೆ ಯೋಚಿಸಬೇಕು. ಭಿನ್ನ ಭಾವಕ್ಕೆ ಅವಕಾಶವಾಗುವಂತೆ ಸತ್ಯವತಿ ಕುಂತಿ ಮುಂತಾದ ಪಾತ್ರಗಳನ್ನು ಪ್ರಧಾನವಾಗಿ ಬಿಂಬಿಸುವದಕ್ಕೆ ಮುಂದಾಗಬೇಕು ಎಂದು ಅವರು ಆಶಿಸಿದರು.

ಮಹಿಳೆಯರೂ ಯಕ್ಷಗಾನ ಪ್ರಸಂಗ ಬರೆಯಬೇಕು, ವೆದೇಹಿಯವರಂಥ ಮಹಿಳಾ ಲೇಖಕಿಯರು ಪ್ರಸಂಗ ಬರೆದು ಪ್ರದರ್ಶಿಸಿದಾಗ ಅದಕ್ಕೊಂದು ಬೇರೆ ಆಯಾಮ ಸಿಗಬಹುದು. ಮಾತೇ ಇಲ್ಲದ ಬ್ಯಾಲೆಗಳನ್ನು ಪ್ರಸ್ತುತಪಡಿಸಿ ಬೆರಗು ಮೂಡಿಸುವಂಥ ಸಾಮರ್ತ್ಯ ಹೆಣ್ಣುಮಕ್ಕಳಿಗೆ ಇದೆ ಎಂದರು.

ತಾಳಮದ್ದಲೆಯಲ್ಲಿ ತೊಡಗಿ.. ವೇಷಭೂಷಣದ ಕುಣಿತದ ಅನಿವಾರ್ಯತೆಯಲ್ಲಿ ಆಸಕ್ತ ಎಲ್ಲ ಹೆಣ್ಣುಮಕ್ಕಳಿಗೆ ಯಕ್ಷಗಾನ ಆಟ ಪ್ರದರ್ಶನ ಕಷ್ಟಕರವಾಗಬಹುದು. ಆದರೆ ಅದರ ಅಗತ್ಯವಿಲ್ಲದ ತಾಳಮದ್ದಲೆ ಕಲೆಯ ಬಗ್ಗೆ ಇನ್ನಷ್ಟು ಮಹಿಳೆಯರು ತೊಡಗಿಕೊಳ್ಳಲು ಅವಕಾಶವಿದೆ. ಮಾತನ್ನು ದುಡಿಸುವ, ಮಾತಿಗೆ ಆಕಾರ, ಘನತೆ ನೀಡುವಂಥ ಅವಕಾಶದ ತಾಳಮದ್ದಲೆ ಕಲೆಯಲ್ಲೂ ತೊಡಗಿಕೊಳ್ಳಬೇಕು ಎಂದು ದಿವಾಕರ ಹೆಗಡೆ ಪ್ರಸ್ತಾಪಿಸಿದರು.

ವಿ.ದತ್ತಮೂರ್ತಿ ಭಟ್ಟ ಮಾತನಾಡಿ, ಮಹಿಳೆಯರ ಬದುಕೇ ಸವಾಲು ಎನ್ನುವಂತಿದೆ, ಯಕ್ಷಗಾನವೂ ಸವಾಲಿನ ಕಲೆಯಾಗಿದೆ. ಹೀಗಿದ್ದೂ ಮಹಿಳೆಯರು ಯಕ್ಷಗಾನದಲ್ಲಿ ತೊಡಗಿಕೊಳ್ಳುವದು ದೊಡ್ಡ ಸವಾಲೇ ಆಗಿದೆ ಎಂದರು. ಮಹಿಳೆಯರು ಮನೋಬಲ, ದೇಹಬಲ, ಆರೋಗ್ಯ ಬಲದ ಎಲ್ಲವನ್ನೂ ಸರಿದೂಗಿಸಿಕೊಂಡು ಯಕ್ಷಗಾನ ಕಲೆಯ ಪ್ರದರ್ಶನದಲ್ಲಿ ನಿರ್ವಹಿಸುತ್ತಿದ್ದಾರೆ. ವಿವಿಧೆಡೆಯ ಮಹಿಳಾ ಕಲಾವಿದರು ಎರಡು ದಶಕಗಳಿಂದ ಈ ಕಲೆಯಲ್ಲಿ ಸ್ಥಾಯಿಯಾಗಿದ್ದು ಅನುಪಮ ಕೊಡುಗೆ ನೀಡುತ್ತಿದ್ದಾರೆ ಎಂದರು.

ಪರಿಶ್ರಮದ ಅರಿವಿದ್ದೂ.. ಯಕ್ಷಗಾನ ಕಲಾವಿದೆ, ಅಧ್ಯಾಪಕಿ ಪ್ರಜ್ಞಾ ಮತ್ತಿಹಳ್ಳಿ ಮಾತನಾಡಿ, ಸಂಸ್ಕೃತಿಯನ್ನು ವಿಸ್ತರಿಸುವದಕ್ಕೆ, ಕಲೆಯನ್ನು ಸಮಷ್ಟಿಯಲ್ಲಿ ಸುಖಿಸುವದಕ್ಕೆ, ಆತ್ಮಸಂತೋಷ ಹೆಚ್ಚಿಸಿಕೊಳ್ಳುವದಕ್ಕೆ ಪೂರಕವಾದ ಯಕ್ಷಗಾನ ಕಲೆಯಲ್ಲಿ ಪರಿಶ್ರಮ ಅಗತ್ಯವಾಗುತ್ತದೆ. ಯಕ್ಷಗಾನ ಪ್ರದರ್ಶನವು ಶಾರೀರಿಕ ಕಸುವನ್ನು ಬೇಡುವ ಕಲೆಯಾಗಿದ್ದು ವೇಷಭೂಷಣ ಕಟ್ಟಿಕೊಂಡು ಕಿರಿಕಿರಿಯಾಗುವದೇ ಮುಂತಾದ ಸವಾಲುಗಳನ್ನು ಬದಿಗಿಟ್ಟು ಮಹಿಳಾ ಕಲಾವಿದರು ಸಕ್ರಿಯರಾಗಿದ್ದೇವೆ ಎಂದರು.

ಯಕ್ಷಗಾನ ಆಟ ನೋಡುವದಕ್ಕೆ ಬಂದ ಪ್ರೇಕ್ಷಕರಲ್ಲಿ ಹಲವು ವರ್ಷಗಳಿಂದ ಕಣ್ಣಲ್ಲಿ ಕಟ್ಟಿಟ್ಟುಕೊಂಡ ಪಾತ್ರಾಭಿನಯಗಳ ಚಿತ್ರಣವಿರುತ್ತದೆ. ಅದನ್ನು ಮನದಲ್ಲಿಟ್ಟು ಮಹಿಳಾ ಕಲಾವಿದೆಯರ ಯಕ್ಷಗಾನ ನೊಡುವಾಗ ಪುರುಷ ನಿರ್ಮಿತ ಪಾತ್ರಗಳ ಜತೆ ಹೋಲಿಕೆ ಮಾಡಿದರೆ ಸೂಕ್ತವಾಗುವದಿಲ್ಲ. ಈ ಮಧ್ಯೆಯೇ ಕಲೆಯಲ್ಲಿ ತನ್ನತನವನ್ನು ಕಲಾವಿದೆಯರು ಪ್ರಸ್ತುಪಡಿಸುವದು ಅಗತ್ಯ ಎಂದರು.

ಮೇಳ ಕಟ್ಟಿದ್ದಾರೆಂದರೆ.... ಹಿರಿಯ ಕಲಾವಿದ ಕುಮಟಾದ ಪ್ರೊ. ಜಿ.ಎಲ್.ಹೆಗಡೆ ಮಾತನಾಡಿ, ಮಹಿಳೆಯರು ಯಕ್ಷಗಾನದ ಮೇಳ ಕಟ್ಟಿ, ವೇಷಧಾರಿಯಾಗಿ ಬಂದರೆಂದರೆ, ಅವರಲ್ಲಿ ಸಾಮರ್ಥ್ಯವಿದೆ ಎಂದು ಗೊತ್ತಾಗುತ್ತದೆ. ಯಕ್ಷಗಾನ ಕ್ಷೇತ್ರದಲ್ಲಿ ಮಾತವರ್ಗದ ಕೊಡುಗೆ ದೊಡ್ಡದಾಗಿದ್ದು ಅದನ್ನು ಒಪ್ಪಂದದಲ್ಲಿ ನೋಡಬೇಕು ಎಂದರು.

ಕಲಾವಿದರು ಸ್ವಯಂ ನಿರ್ದೇಶಕರಾಗಿದ್ದು ತಮ್ಮೆಲ್ಲರ ಪಾತ್ರ ಚೆನ್ನಾಗಿ ಆಗಬೇಕು ಎಂದು ಯೋಚಿಸಬೇಕು. ಒಳ್ಳೆಯ ಓದು ಕಲಾವಿದರಿಗೆ ಸಹಕಾರಿಯಾಗುತ್ತದೆ. ಭಾವಕ್ಕೆ ತಕ್ಕ ಭಾಷೆ, ಕಥೆಯ ವ್ಯವಸ್ಥೆಗೆ ಭಂಗ ತಾರದಂಥ ತಕ್ಕ ಕುಣಿತ, ಮುಂತಾದ ಔಚಿತ್ಯಗಳನ್ನು ಎಲ್ಲ ಕಲಾವಿದರೂ ಪಾಲಿಸಬೇಕಾಗುತ್ತದೆ ಎಂದರು.

ಪ್ರದರ್ಶನದ ಆಚೀಚೆ.. ಇದಕ್ಕೂ ಮೊದಲು ಶನಿವಾರ ಸಂಜೆ ಬೆಂಗಳೂರಿನ ಸಿರಿಕಲಾ ಮೇಳದ ಮಹಿಳಾ ಕಲಾವಿದೆಯರು ಪ್ರಸ್ತುತಪಡಿಸಿದ ಕರ್ಣ ಪರ್ವ ಆಖ್ಯಾನದ ಪ್ರದರ್ಶನದ ಕುರಿತು ವಿಚಾರ ವಿನಿಮಯ ನಡೆಯಿತು. ಯಕ್ಷ ತಪಸ್ವಿ ಹೊಸ್ತೋಟ ಮಂಜುನಾಥ ಭಾಗವತರು, ಪ್ರೊ.ಎಂ.ಎ.ಹೆಗಡೆ, ಮುಂಬಯಿಯ ಎಚ್.ಬಿ.ಎಲ್ ರಾವ್, ಜಿ.ಎಸ್.ಭಟ್ಟ ಮೆಸೂರು, ಶ್ರೀಪಾದ ಭಟ್ಟ ಮುಂತಾದವರು ಪಾಲ್ಗೊಂಡರು.

ಯಕ್ಷಗಾನ;ಬಯಲಾಟ ಅಕಾಡೆಮಿ ಸದಸ್ಯೆ ಪ್ರೊ.ವಿಜಯನಳಿನಿ ರಮೇಶ ಸ್ವಾಗತಿಸಿದರು. ಸುಜಾತಾ ಹೆಗಡೆ ದಂಟಕಲ್ ನಿರೂಪಿಸಿದರು.ಕೃಪೆ : http://vijaykarnataka.com


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ