ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಪುಸ್ತಕಗಳು
Share
ಯಕ್ಷಗಾನ ಅರ್ಥಸಹಿತ ಪುಸ್ತಕ `ಕುಮಾರ ವಿಜಯ` ಮರುಮುದ್ರಣಗೊಂಡಿದೆ!

ಲೇಖಕರು :
ನಾ.ಕಾರ೦ತ, ಪೆರಾಜೆ
ಸೋಮವಾರ, ಮಾರ್ಚ್ 2 , 2015

ಈ ಖುಷಿಯನ್ನು ಹಂಚಿಕೊಳ್ಳಲು ಹೆಮ್ಮೆಯಾಗುತ್ತಿದೆ. ಪುಸ್ತಕವೊಂದು ಪ್ರಕಟವಾಗಿ, ಅದಕ್ಕೆ 'ಲೋಕಾರ್ಪಣ ಭಾಗ್ಯ' ಬಂದ ಬಳಿಕ ಓದುಗರ ಕೈಗೆ ತಲುಪಿಸುವುದೇ ತ್ರಾಸ. ಖ್ಯಾತರ ಪುಸ್ತಕಗಳನ್ನು ಪ್ರಕಟಣಪೂರ್ವದಲ್ಲೇ ಕಾಪಿಡುವ ಸಾಹಿತ್ಯಪ್ರಿಯರಿದ್ದಾರೆ. ಯಕ್ಷಗಾನಕ್ಕೆ ಸಂಬಂಧಪಟ್ಟಂತೆ ಅಂತಹ ಭಾಗ್ಯ ತೀರಾ ಕಡಿಮೆ. ಕವಿ ಮುದ್ದಣ ವಿರಚಿತ 'ಕುಮಾರ ವಿಜಯ' ಪ್ರಸಂಗದ ಅರ್ಥ ಸಹಿತ ಕೃತಿಯು 2004ರಲ್ಲಿ ಪ್ರಕಟವಾಗಿತ್ತು. ಎರಡೇ ವರುಷದಲ್ಲಿ ಪುಸ್ತಕವು ಪೂರ್ತಿ ಮಾರಾಟವಾಗಿದೆ. ಈಗ ಅದಕ್ಕೆ ಎರಡನೇ ಮುದ್ರಣದ ಸಂಭ್ರಮ. ಖ್ಯಾತ ಅರ್ಥಧಾರಿ, ವಿದ್ವಾಂಸ ಮೂಡಂಬೈಲು ಸಿ. ಗೋಪಾಲಕೃಷ್ಣ ಶಾಸ್ತ್ರಿಯವರು ಪ್ರಸಂಗಕ್ಕೆ ಸರಳವಾಗಿ ಅರ್ಥವನ್ನು ಪೋಣಿಸಿದ್ದಾರೆ. ಬಾಲಚಂದ್ರ ರಾವ್ ನಂದಳಿಕೆಯವರು ತಮ್ಮ ಮುದ್ದಣ ಪ್ರಕಾಶನದ ಮೂಲಕ ಪ್ರಕಾಶಿಸಿದ್ದಾರೆ.

ಮುದ್ದಣನ ಪ್ರಸಂಗ ಸುಲಲಿತವಲ್ಲ. ಒಂದೊಂದು ಶಬ್ದವು ಸ್ಫುರಿಸುವ ಅರ್ಥ ಅನನ್ಯ. ಪದವೈಭವ, ಪ್ರಾಸಮೋಡಿ, ಕಲ್ಪನಾ ಶ್ರೀಮಂತಿಕೆ, ಕೂಟಾರ್ಥ ಪ್ರಯೋಗ, ಶ್ಲೇಷೆಗಳ ಪರಿಪಾಕ. ಅಧ್ಯಯನ ಮಾಡದೆ ತಾಳಮದ್ದಳೆಯಲ್ಲಿ ಅರ್ಥಹೇಳಲು ಒದ್ದಾಡಬೇಕಾಗಬಹುದು. ಮುದ್ದಣದ ಪ್ರಸಂಗದ ಓದಿಗೆ ಪುರಾಣ ಮಾಹಿತಿ, ಆಳವಾದ ಜ್ಞಾನ, ಪದಕೋಶಗಳ ಸಹಾಯವಿದ್ದರೆ ಸುಲಭವಾಗಿ ಜೀರ್ಣಿಸಿಕೊಳ್ಳಲು ಸಾಧ್ಯ. ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಯವವರು ತಮ್ಮ ಗಟ್ಟಿ ಜ್ಞಾನದ ನೆರಳಲ್ಲಿ ಮುದ್ದಣದ ಸಾಹಿತ್ಯವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಲ್ಲರು. ಹಾಗಾಗಿಯೇ ಕುಮಾರ ವಿಜಯ ಪ್ರಸಂಗದ ಅರ್ಥಗಾರಿಕೆ ಅವರಲ್ಲಿ ಸರಳ, ಸುಂದರವಾಗಿ ಮೂಡಿಬಂದಿದೆ.

ಅರ್ಥಗಾರಿಕೆಯು ಅನುವಾದ ರೀತಿಯ ಬರೆಹವಲ್ಲ. ಮಾತಿನ ರೂಪದಲ್ಲಿ ರಂಗದಲ್ಲಿ ಆಶುಭಾಷಣವಾಗಿ ಸೃಷ್ಟಿಯಾಗುವ ಸಾಹಿತ್ಯ. ಒಬ್ಬೊಬ್ಬ ಕಲಾವಿದನ ಬೌದ್ಧಿಕ ಶಕ್ತಿಗನುಗುಣವಾದ ಪ್ರಸ್ತುತಿ. ಅನಾವರಣಗೊಳ್ಳುವ ಸಾಹಿತ್ಯದ ಸೊಬಗು. ಧರ್ಮಸೂಕ್ಷ್ಮದ ಪ್ರತಿಪಾದನೆ. ಅಲಂಕಾರಗಳ ವೈಭವ. ಮುದ್ದಣದ ಪ್ರಸಂಗದಲ್ಲಿ ಕಲಾವಿದನ ಬೌದ್ಧಿಕ ಶಕ್ತಿಗೆ ಸವಾಲಿದೆ. ಅವೆಲ್ಲವನ್ನೂ ಕೃತಿಯಲ್ಲಿ ಲಿಖಿತವಾಗಿ ಪೋಣಿಸಲು ಸಾಧ್ಯವಿಲ್ಲ. ಶಾಸ್ತ್ರಿಗಳಿಗೆ ಈ ಮಿತಿಯ ಅರಿವಿದ್ದು ಬಹಳ ಜಾಣ್ಮೆಯಿಂದ ಪದ್ಯಗಳಿಗೆ ಅರ್ಥವನ್ನು ಬರೆದಿದ್ದಾರೆ.

1946ರಲ್ಲಿ ಕುಮಾರ ವಿಜಯ ಪ್ರಸಂಗ ಮುದ್ರಣವಾಗಿತ್ತು. 662 ಪದ್ಯಗಳು. ಆರ್ಥಗಾರಿಕೆಯನ್ನು ಪ್ರಸ್ತುತಪಡಿಸಿದ ವಿಧಾನವನ್ನು ಶಾಸ್ತ್ರಿಗಳು ಹೇಳುತ್ತಾರೆ, "ಪ್ರದರ್ಶನದಲ್ಲಿ ಅರ್ಥವನ್ನು ಹೇಳದೆ, ಕೇವಲ ಗಾನಕ್ಕೆ ಸೀಮಿತವಾಗುವ ಸ್ತುತಿ ಹಾಗೂ ಮಂಗಲಪದಗಳಿಗೂ ವಿವರಣೆ ನೀಡಿದ್ದೇನೆ. ಪಾತ್ರಗಳ ಅರ್ಥವಾಗಿ ಹೇಳಬಾರದ ಸಂದರ್ಭಗಳಲ್ಲಿ, ಅರ್ಥಹೇಳುವವನನ್ನು 'ಕವಿವಾಕ್ಯ'. 'ಕವಿ' ಎಂಬುದಾಗಿ ಸೂಚಿಸಿದ್ದೇನೆ. ಅರ್ಥಧಾರಿಗಳು ಮುಂದಿನ ಪದ್ಯಕ್ಕೆ ಇತ್ತುಗಡೆ ಕೊಡುವಾಗ, ಸಂಭಾಷಣೆಯಲ್ಲಿ ನಿರತರಾದ ಇಬ್ಬರೂ ಪರಸ್ಪರ ಹೇಗೆ ಸಹಕರಿಸಬಹುದೆಂಬುದನ್ನು ಅಲ್ಲಲ್ಲಿ ತೋರಿಸಿದ್ದೇನೆ. ಸಂಭಾಷಣಾ ರೂಪದಲ್ಲಿ ಚರ್ಚಿಸುವಾಗ, ವಿಷಯಪ್ರತಿಪಾದನೆ ಮಾಡುವ ಸ್ಥೂಲ ಕ್ರಮವನ್ನೂ ಒಂದೆರಡು ಕಡೆ ಕಾಣಿಸಿದ್ದೇನೆ. ಗ್ರಂಥವಿಸ್ತಾರದ ಭಯದಿಂದ ಎಲ್ಲಾ ಕಡೆಗಳಲ್ಲಿ ಎತ್ತುಗಡೆ, ಚರ್ಚೆ ಇತ್ಯಾದಿಗಳನ್ನು ಕೈಗೆತ್ತಿಕೊಳ್ಳಲಿಲ್ಲ."

ನೆಡ್ಲೆ ನರಸಿಂಹ ಭಟ್ಟರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಅವರ ಪುತ್ರ ನೆಡ್ಲೆ ರಾಮ ಭಟ್ಟರ ಹಿರಿತನದಲ್ಲಿ ಈ ಕೃತಿ ಅಚ್ಚುಕಂಡಿದೆ. ೨೦೧೫ ಫೆಬ್ರವರಿ 21 (ಇಂದು) ಕಟೀಲಿನಲ್ಲಿ ಸಂಜೆ ಕೃತಿ ಅನಾವರಣಗೊಳ್ಳುತ್ತದೆ. ತಾಳಮದ್ದಳೆ ಕಲಾವಿದರಿಗೆ ಉತ್ತಮ ಕೃತಿ. ಪುಸ್ತಕದ ಕೊನೆಗೆ ಕಠಿಣ ಶಬ್ದಗಳಿಗೆ ಅರ್ಥಗಳನ್ನು ನೀಡಿದ್ದು ಅಭ್ಯಾಸಕ್ಕೆ ಪೂರಕ. ಯಕ್ಷಗಾನ ಸಾಹಿತ್ಯವೊಂದು ಮರುಮುದ್ರಣಗೊಳ್ಳುತ್ತಿರುವುದು ಅಪರೂಪ.

ಮುದ್ದಣ ಕವಿಯ ’ಕುಮಾರ ವಿಜಯ’ ಮತ್ತು ’ರತ್ನಾವತಿ ಕಲ್ಯಾಣ’ತಾಳಮದ್ದಳೆ ಸಿಡಿಯೂ ಕೂಡಾ ಈ ಸಂದರ್ಭದಲ್ಲಿ ಆಸಕ್ತರ ಕೈಸೇರಲಿದೆ. ಈ ಎರಡೂ ಪ್ರಸಂಗಗಳ ಪದ್ಯಗಳನ್ನು ಸುಲಲಿತವಾಗಿ ಬಲಿಪ ನಾರಾಯಣ ಭಾಗವತರು ಹಾಡಿದ್ದಾರೆ. ಡಾ.ಶೇಣಿ, ರಾಮದಾಸ ಸಾಮಗರು ಅರ್ಥಗಾರಿಕೆಯಲ್ಲಿ ಮೆರೆದಿದ್ದಾರೆ. ಮುದ್ದಣ ಕವಿಯ ಸಾಹಿತ್ಯವನ್ನು ಕನ್ನಡ ಸಾರಸ್ವತ ಲೋಕಕ್ಕೆ ವಿವಿಧ ಮಾಧ್ಯಮಗಳ ಮೂಲಕ ನಂದಳಿಕೆ ಬಾಲಚಂದ್ರ ರಾಯರು ಬೆಳಕು ಹಾಕುತ್ತಿದ್ದಾರೆ. ಕವಿಯ ಜತೆಗೆ ಕವಿ ಹುಟ್ಟಿ ಬೆಳೆದ ನಂದಳಿಕೆಯ ಅಭಿವೃದ್ಧಿಯೂ ಜತೆಜತೆಗೆ ಆಗಿರುವುದು ಒಂದು ಕಾಲ ಘಟ್ಟದ ಏಕವ್ಯಕ್ತಿ ಸಾಧನೆ. ಸಾಹಿತ್ಯ ಪ್ರಕಟಣೆ, ಪ್ರಶಸ್ತಿ ಪ್ರದಾನ, ಪುರಸ್ಕಾರಗಳ ಮೂಲಕ ಕವಿ ಮುದ್ದಣ ವರ್ತಮಾನದಲ್ಲೂ ಜೀವಂತ.ಕೃಪೆ : http://yakshamatu.blogspot.in


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
GURUPRASANNA BHAT(4/15/2016)
WHERE SHOULD I HAVE TO BUY THIS BOOK
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ