ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಯಕ್ಷ ವೇದಿಕೆಯಲ್ಲಿ ಜೀವ ಪಡೆದ `ಜಗಜಟ್ಟಿ ಬಾಚ`

ಲೇಖಕರು : ವೀಜಿ ಕಾಸರಗೋಡು
ಮ೦ಗಳವಾರ, ಮಾರ್ಚ್ 24 , 2015
ಐತಿಹಾಸಿಕ ಪುರುಷನೊಬ್ಬನನ್ನು ಪ್ರಧಾನ ಕೇಂದ್ರವಾಗಿಸಿ ಅಂದಿನ ತುಳುನಾಡಿನ ವೈಭವವನ್ನು ಇಂದಿನ ಜನಾಂಗದ ಮುಂದೆ ಅನಾವರಣಗೊಳಿಸಿದ ಅಪರೂಪದ ಪ್ರಯತ್ನ ಕಾಸರಗೋಡಿನ ಪುಳ್ಕೂರಿನಲ್ಲಿ ಇತ್ತೀಚೆಗೆ ಪ್ರದರ್ಶನಗೊಂಡ ಜಗಜಟ್ಟಿ ಬಾಚ ಯಕ್ಷಗಾನ.

ಬ್ರಾಹ್ಮಣ ಕುಲದಲ್ಲಿ ಹುಟ್ಟಿ, ಜಟ್ಟಿಕಾಳಗದಲ್ಲಿ ಪರಿಣತಿ ಸಾಧಿಸಿ ಸಾಹಸಗಳ ಮೂಲಕ ತುಳು ನಾಡಿನ ಅಭಿಮಾನ ಮೂರ್ತಿಯಾಗಿ ಬೆಳೆದ ಪುಳ್ಕೂರು ಬಾಚನ ಕಥೆ ಯಕ್ಷಗಾನ ವಾಗಿ ಪ್ರಸ್ತುತಿಗೊಂಡು ಜನಮನ್ನಣೆ ಪಡೆದಿದೆ. ಪೌರಾಣಿಕ-ಕಾಲ್ಪನಿಕ ವಸ್ತುಗಳನ್ನು ಯಕ್ಷಗಾನದ ನಾಲ್ಕು ಕಂಬಗಳ ನಡುವೆ ಪ್ರದರ್ಶಿಸಬಹುದು. ಆದರೆ ಬಾಚ ಇಂದಿಗೆ ಮೂರು ತಲೆಮಾರುಗಳ ಹಿಂದೆ ಜೀವಿಸಿದ್ದವನು. ಇಂಥ ವ್ಯಕ್ತಿಯೊಬ್ಬನ ಜೀವನಗಾಥೆಯನ್ನು ಯಕ್ಷಗಾನವಾಗಿ ಪ್ರದರ್ಶಿಸು ವುದು ಅಷ್ಟು ಸುಲಭವಲ್ಲ. ಏಕೆಂದರೆ, ಪ್ರೇಕ್ಷಕರಾಗಿ ಇರುವವರು ಬಾಚನನ್ನು ತಮ್ಮ ಅಜ್ಜ-ಪಿಜ್ಜಂದಿರ ಮೂಲಕ ಅರಿತ ಮೂರನೆಯ ತಲೆಮಾರಿನವರು.

ಕಾಸರಗೋಡಿನ ಪುಳ್ಕೂರು ಶ್ರೀ ಮಹಾ ದೇವ ದೇವಾಲಯದಲ್ಲಿ ಜರಗಿದ ಬ್ರಹ್ಮ ಕಲಶೋತ್ಸವದ ಅಂಗವಾಗಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಮಾ.1ರಂದು ರಾತ್ರಿ ಈ ವಿನೂತನ ಪ್ರಸಂಗ ಯಶಸ್ವಿಯಾಗಿ ಪ್ರದರ್ಶನ ಕಂಡಿದೆ. ದೇಗುಲದ ಎಡಭಾಗದ ಬಯಲಲ್ಲಿ ನಿರ್ಮಿಸಲಾದ ರಂಗಮಂಟಪದಲ್ಲಿ ಆಸನ ವ್ಯವಸ್ಥೆ ಸಾಲದೆ ಸಾವಿರಾರು ಮಂದಿ ನಿಂತುಕೊಂಡೇ ಆಟ ನೋಡಿದರು. ಈಗ ಪ್ರಚಲಿತವಿರುವ ಯಕ್ಷ ಗಾನೀಯ ಪ್ರಸಂಗಗಳಿಗಿಂತ ಭಿನ್ನ ಅಂಶವೆಂದರೆ, ಕಾಸರಗೋಡಿನಲ್ಲಿ ಇಂದಿಗೂ ಸಂತಾನವನ್ನು ಹೊಂದಿರುವ ಅನೇಕ ಕುಟುಂಬಗಳ ಹಿರಿಯರು ಈ ಪ್ರಸಂಗದಲ್ಲಿ ಕಥಾ ಪಾತ್ರಗಳಾಗಿ ಬಂದು ರಂಗದಲ್ಲಿ ಮೆರೆಯುತ್ತಾರೆ.

ಕುಂಬಳೆಯ ಜಯಸಿಂಹ ಮಹಾರಾಜನ ಇತಿಹಾಸ, ಪುಳ್ಕೂರು ಮಹಾದೇವ ದೇಗುಲದ ಐತಿಹ್ಯ, ಮಾಯಿಪ್ಪಾಡಿ ಅರಸರ ಆಳ್ವಿಕೆ, ಕೂಡ್ಲು ಶಾನುಭಾಗ ಮನೆತನದ ಒಡೆತನ ಇತ್ಯಾದಿ ಜೀವಂತ ನಿದರ್ಶನಗಳ ಜತೆಗೇ ಮುನ್ನಡೆ ಯುವ ಬಾಚನ ಇತಿಹಾಸ ಯಕ್ಷಗಾನ ರಂಗದಲ್ಲಿ ಮಂಡನೆಗೊಂಡಿದೆ ಎಂಬುದು ತುಳುನಾಡಿನ ಇತಿಹಾಸಕ್ಕೆ ಸಲ್ಲಿಸಿದ ಬಲುದೊಡ್ಡ ಗೌರವ. ಬಂಡೆಕಲ್ಲುಗಳನ್ನು, ದೊಡ್ಡ ಗಾತ್ರದ ಅರೆಯುವ ಕಲ್ಲುಗಳನ್ನು, ಸಂಕ ನಿರ್ಮಾಣಕ್ಕಿರುವ ಉದ್ದನೆಯ ಹೆಬ್ಬಂಡೆಗಳನ್ನು, ಕೂಡ್ಲು ದೇವಾಲಯದ ಮುಂಭಾಗದಲ್ಲಿ ಇಂದಿಗೂ ಕಂಡುಬರುವ ವೀರಗಲ್ಲು ಇತ್ಯಾದಿಗಳನ್ನು ಬಾಚ ಹೊತ್ತು ತಂದಿದ್ದ ಎಂಬುದನ್ನು ಇತಿಹಾಸ ತಿಳಿಸುತ್ತದೆ. ಚಾರಿತ್ರಿಕ ಸಾಕ್ಷ್ಯಗಳ ವಿನಾ ಯಾವುದೇ ಅತಿಶಯಗಳನ್ನು ಇಲ್ಲಿ ಬಳಸಲಿಲ್ಲ ಎಂಬುದೂ ಅಷ್ಟೇ ಸತ್ಯ.

ಬಾಚ ಯಕ್ಷಗಾನದ ಅಭಿಮಾನಿಯಾಗಿದ್ದ, ತಾನೂ ವೇಷಧಾರಿಯಾಗಿ ರಂಗದಲ್ಲಿ ಮೆರೆದಿದ್ದ ಎಂಬ ಅಂಶವನ್ನು ಮೆರೆದಿರುವುದು ಯಕ್ಷಗಾನಕ್ಕೆ ಸಲ್ಲಿಸಿದ ಪ್ರಾಮಾಣಿಕ ಗೌರವವಾಗಿದೆ. ತನ್ನ ಆರಾಧ್ಯಮೂರ್ತಿ ಆಂಜನೇಯನ ಪಾತ್ರ ಧರಿಸಿ ಬಾಚ "ಲಂಕಾ ದಹನ' ನಡೆಸಿದ "ಆಟದೊಳಗಿನ ಆಟ' ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಕುಂಬಳೆ ಜಯಸಿಂಹನ ಸಾಹಸಗಳು, ಪಾಂಡ್ಯ ರಾಜ ನನ್ನು ಸೋಲಿಸಿ ಆತನ ವೀರ ಪುತ್ರಿಯನ್ನೇ ವರಿಸಿದ ಘಟನೆ, ಪುಳ್ಕೂರಿನಲ್ಲಿ ಶಿವದೇವರು ನೆಲೆನಿಲ್ಲಲು ಕಾರಣವಾಗುವ ತಂತ್ರಿಗಳನ್ನು ಬ್ರಹ್ಮರಕ್ಕಸ ಮೊಸಳೆ ರೂಪಿನಿಂದ ಕಾಡುವ ಸನ್ನಿವೇಶ, ಪರಮೇಶ್ವರಯ್ಯ - ಪಾರ್ವತಿ ದಂಪತಿಗೆ ಮಕ್ಕಳಿಲ್ಲದ ಚಿಂತೆ, ಶಿವನಿಗೆ ಹರಕೆ ಹೊತ್ತ ಹಿನ್ನೆಲೆಯಲ್ಲಿ ಅಪಾರ ನಿರೀಕ್ಷೆಯೊಂದಿಗೆ ಜನಿಸುವ ಪುತ್ರ ಬಾಚ, ಭಿನ್ನವಾಗಿ ಬೆಳೆಯುವ ಬ್ರಾಹ್ಮಣ ಕುಮಾರ ಜಗಜಟ್ಟಿಯಾಗಿ ಹಲವೆಡೆ ಸಮ್ಮಾನ ಗಳಿಸಿ ತುಳುನಾಡಿಗೆ ರತ್ನಪ್ರಾಯವಾಗುವ ರೀತಿ, ಮಾಯಿಪ್ಪಾಡಿ ಅರಸರು- ಕೂಡ್ಲು ಶಾನುಭಾಗರ ಸಂಪರ್ಕದಲ್ಲಿ ಬಾಚನ ಬದುಕಿನಲ್ಲಿ ಕಾಣುವ ಏಳಿಗೆ ಇತ್ಯಾದಿಗಳು ಮನೋಜ್ಞವಾಗಿವೆ. ಕಥೆಯ ಅವಿಭಾಜ್ಯ ಅಂಗಗಳಾದ ಬ್ರಹ್ಮರಕ್ಕಸ, ಮೊಸಳೆ, ಕೇರಳ ಜಟ್ಟಿ ಇತ್ಯಾದಿಗಳು ರಂಗದ ಶ್ರೀಮಂತಿಕೆಯನ್ನು ಹೆಚ್ಚಿಸಿವೆ.

ಕನ್ನಡ ಪಠ್ಯಪುಸ್ತಕಗಳಲ್ಲಿ ಅಚ್ಚಳಿಯದೆ ಉಳಿದ ಪುಳ್ಕೂರು ಜಗಜಟ್ಟಿ ಬಾಚನ ಚಾರಿತ್ರಿಕ ಕಥೆ ಯಕ್ಷಗಾನ ರೂಪದಲ್ಲಿ ಪ್ರಥಮ ಪ್ರದರ್ಶನ ಕಾಣುವಲ್ಲಿ ಪ್ರಧಾನ ಪ್ರೇರಣೆಯಾದುದು ಹಿರಿಯ ಸಂಶೋಧಕ, ಸಾಹಿತಿ ಪುಳ್ಕೂರು ಪ್ರದೇಶದ ಸಿರಿ ಬಾಗಿಲು ವೆಂಕಪ್ಪಯ್ಯನವರ ರಚನೆ. ಅವರ ಪುತ್ರ, ತೆಂಕುತಿಟ್ಟಿನ ಭರವಸೆಯ ಭಾಗವತ ಸಿರಿ ಬಾಗಿಲು ರಾಮಕೃಷ್ಣ ಮಯ್ಯ ಯಕ್ಷಗಾನಕ್ಕಾಗಿ ಕಥಾನಕವನ್ನು ಮರಳಿ ಸಿದ್ಧಗೊಳಿಸಿದರೆ, ಹಿರಿಯ ಪ್ರಸಂಗಕರ್ತ ಮಧೂರು ವೆಂಕಟಕೃಷ್ಣ ಪದ್ಯಗಳನ್ನು ರಚಿಸಿ ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ. ಮಧೂರು ವೆಂಕಟಕೃಷ್ಣ ಮತ್ತು ಪತ್ರಕರ್ತ, ಕವಿರಾಜ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಎಂ.ನಾ. ಚೆಂಬಲ್ತಿಮಾರ್‌ ಬಾಚನ ಐತಿಹಾಸಿಕ ಶೋಧನೆ ನಡೆಸಿ ಸಹಕರಿಸಿದ್ದಾರೆ. ಸಿರಿಬಾಗಿಲು ರಾಮಕೃಷ್ಣ ಮಯ್ಯ, ಯುವ ಕಲಾವಿದ ಶೇಣಿ ವೇಣುಗೋಪಾಲ ಭಟ್ಟರ ನೇತೃತ್ವದಲ್ಲಿ ಈ ಪ್ರಸಂಗ ರಂಗವಿನ್ಯಾಸ ನಡೆಸಿದ್ದಾರೆ. "ಜಗಜಟ್ಟಿ ಬಾಚ' ಪ್ರಸಂಗದ ಸಿದ್ಧತೆಗೆ ಒಂದಿಡೀ ವರ್ಷದ ಶೋಧನೆ, ಸಾಧನೆ ನಡೆದಿತ್ತು. ಇದರ ಪರಿಣಾಮವನ್ನು ಮೊದಲ ಪ್ರದರ್ಶನದಲ್ಲೇ ಕಾಣಬಹುದಾಗಿತ್ತು.

ಹಿಮ್ಮೇಳದಲ್ಲಿ ಭಾಗವತರಾಗಿ ಕುರಿಯ ಗಣಪತಿ ಶಾಸಿŒ, ಸಿರಿಬಾಗಿಲು ರಾಮಕೃಷ್ಣ ಮಯ್ಯ, ಚೆಂಡೆ-ಮದ್ದಳೆಗಳಲ್ಲಿ ಅನೇಕ ಪ್ರತಿಭಾನ್ವಿತರು ಆಖ್ಯಾನದ ಯಶಸ್ಸಿಗೆ ದೊಡ್ಡ ಕಾಣಿಕೆ ನೀಡಿದ್ದಾರೆ. ಮಧೂರು ರಾಧಾಕೃಷ್ಣ ನಾವಡರು ಪುಳ್ಕೂರು ಬಾಚನ ಪಾತ್ರಕ್ಕೆ ಜೀವ ನೀಡಿದ್ದಾರೆ. ಜಯಪ್ರಕಾಶ ಶೆಟ್ಟಿ ಪೆರ್ಮುದೆ ಮಾಯಿಪ್ಪಾಡಿ ಅರಸರಾಗಿ, ಶ್ರೀಧರ ಭಂಡಾರಿ ಪುತ್ತೂರು ಅವರು ಪಾಂಡ್ಯ ರಾಜ ನಾಗಿ, ಉಬರಡ್ಕ ಉಮೇಶ ಶೆಟ್ಟಿಯವರು ಜಯ ಸಿಂಹ ನಾಗಿ ತಮ್ಮತನ ಮೆರೆದಿದ್ದಾರೆ. ಉಳಿ ದಂತೆ ಅನೇಕ ವೃತ್ತಿಪರ ಕಲಾವಿದರು ಬೇರೆ ಬೇರೆ ಪಾತ್ರಗಳಿಗೆ ಜೀವಂತಿಕೆ ತುಂಬಿದ್ದಾರೆ. ಸಿರಿಬಾಗಿಲು ಶ್ರೀಮುಖ ಮಯ್ಯ ಸಹಿತ ಬಾಲ ಕಲಾವಿದರೂ ವಿವಿಧ ಪಾತ್ರಗಳಲ್ಲಿ ಪ್ರಸಂಗಕ್ಕೆ ಕಳೆ ತುಂಬಿದ್ದಾರೆ.

ಯಕ್ಷಗಾನ ಕ್ಷೇತ್ರದಲ್ಲಿ ಒಂದು ವಿನೂತನ ಪ್ರಯತ್ನವನ್ನು ಕಲಾರಸಿಕರು ಎರಡೂ ಕೈಗಳಿಂದ ಸ್ವೀಕರಿಸಿದ ಅಪರೂಪದ ಸನ್ನಿವೇಶವಿದು. ವೈವಿಧ್ಯ ಮಯ, ವಿಭಿನ್ನತರವಾದ ಜೀವ ಸಂದರ್ಭಗಳ, ನಾನಾ ನಡವಳಿಕೆಗಳ, ಅನೇಕಾನೇಕ ಋಜು-ವಕ್ರ ಸ್ವಭಾವಗಳ ಅಂದಿನ ವ್ಯಕ್ತಿಗಳ ಕಥಾರೂಪಿ ಸ್ವಾರಸ್ಯ ಗಳೊಂದಿಗೆ ವರ್ಣರಂಜಿತ ಯಕ್ಷಗಾನ ವರ್ಣನೆ ಈ ಪ್ರಸಂಗ.ಕೃಪೆ : http://udayavani.com

Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
     ತಾಜಾ ಲೇಖನಗಳು
   
  ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
  ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
  ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
   
  © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ