ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಕುಂಜಾಲು ಶೈಲಿ ಭಾಗವತಿಕೆಯ ಶ್ರೇಷ್ಠ ಪ್ರಾತಿನಿಧಿಕ : ಹೆರಂಜಾಲು ಗೋಪಾಲ ಗಾಣಿಗ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಶುಕ್ರವಾರ, ಮಾರ್ಚ್ 25 , 2016

ಬಡಗುತಿಟ್ಟು, ಅದರಲ್ಲೂ ನಡುತಿಟ್ಟಿನ ಸಮಕಾಲೀನ ಭಾಗವತರಲ್ಲಿ ಪರಂಪರೆಯ ಹಳೆಯ ಶೈಲಿಯಲ್ಲಿ ಭಾಗವತರಾಗಿ ಗುರುತಿಸಿಕೊಂಡ ಹಿರಿಯ ಭಾಗವತ ಹೆರಂಜಾಲು ಗೋಪಾಲ ಗಾಣಿಗರು ತೀವ್ರತರವಾದ ವಾಹನ ಅಫ಼ಘಾತಕ್ಕೆ ಸಿಲುಕಿ ನಾಲ್ಕಾರು ಆಪರೇಶನ್ ಆಗಿ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಕಳೆದು ಸದ್ಯ ಯಕ್ಷತಿರುಗಾಟಕ್ಕೆ ವಿದಾಯ ಹೇಳಿದ್ದಾರೆ. ಸದ್ಯ ಅಮೃತೇಶ್ವರಿ ಮೇಳದ ಪ್ರಧಾನ ಭಾಗವತರಾದ ಅವರಿಗೆ ಇದು ಯಕ್ಷಗಾನ ತಿರುಗಾಟದ 35ನೇ ವರ್ಷ. ಲಕ್ಷಗಟ್ಟಳ ಹಣವನ್ನು ಆಸ್ಪತ್ರೆಗೆ ಸುರಿದು ಸದ್ಯ ತಿರುಗಾಟವೂ ಇಲ್ಲದೆ ತೊಂದರೆಯಲ್ಲಿರುವ ಅವರಿಗೆ ಅವರ ಅಭಿಮಾನಿಗಳು ಅವರ 35ರ ತಿರುಗಾಟದ ಸಂಭ್ರಮ ಆಚರಿಸಿ ನಿಧಿ ಅರ್ಪಿಸಲು ನಿರ್ಧರಿಸಿದ್ದಾರೆ. ಇದೇ ‌ಎಪ್ರಿಲ್ 16 ಶನಿವಾರ ಕುಂದಾಪುರದಲ್ಲಿ ಗೋಪಾಲ ಗಾಣಿಗರ ಕನಸಿನ ಕೂಸು ಹೆರಂಜಾಲು ಪ್ರತಿಷ್ಟಾನದ ವಾರ್ಷಿಕೋತ್ಸವ ಹಿರಿಯ ಭಾಗವತರಿಗೆ ಪ್ರಶಸ್ತಿ ಪ್ರದಾನ ಮತ್ತು ಸಾಲಿಗ್ರಾಮ ಮೇಳದ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ.

ಸಮಕಾಲೀನ ಬಡಗುತಿಟ್ಟಿನ ದಶಾವತಾರಿ

ಸಮಕಾಲೀನ ಬಡಗುತಿಟ್ಟಿನ ದಶಾವತಾರಿ ಎಂದು ಗುರುತಿಸಲ್ಪಟ್ಟ ಗೋಪಾಲ ಗಾಣಿಗರು ಪೌರಾಣಿಕ ಪ್ರಸಂಗಗಳನ್ನು ಅದರ ಆಶಯಕ್ಕನುಗುಣವಾಗಿ ಆಡಿಸುವ ರಂಗತಂತ್ರವನ್ನು ಮೈಗೂಡಿಸಿಕೊಂಡವರು. ಅವರ ತಂದೆ ಹೆರಂಜಾಲು ವೆಂಕಟರಮಣ ಗಾಣಿಗರು ಮತ್ತು ಗುರು ವೀರಭದ್ರ ನಾಯಕರು ಈ ಹಿಂದೆ ದಶಾವತಾರಿ ಎಂದು ಗುರುತಿಸಿಕೊಂಡವರು. ಹಾಗೆ ಗುರುತಿಸಿಕೊಳ್ಳಲು ಕಲಾವಿದರಿಗೆ ಭಾಗವತಿಕೆ ಚೆಂಡೆ ಮದ್ದಳೆ ವಾದನ, ಕುಣಿತ ಸ್ತ್ರೀವೇಷ, ಹಾಸ್ಯ ಇತರ ವೇಷಗಳಲ್ಲಿ ಪರಿಪೂರ್ಣತೆ ಬೇಕಾಗುತ್ತದೆ. ಗಾಯನ ವಾದನ ಹಾಗೂ ನರ್ತನದಲ್ಲಿ ಇದಮಿಥಂ ಎಂದು ಹೇಳಬಲ್ಲ ಗೋಪಾಲ ಗಾಣಿಗರು ಪೌರಾಣಿಕ ಪ್ರಸಂಗಕ್ಕೆ ಅನಿವಾರ್ಯ ಭಾಗವತರು. ಭಾಗವತಿಕೆಗೆ ಸವಾಲೊಡ್ಡುವ ರಾಮಾಯಣದ ಪಾರ್ತಿಸುಬ್ಬ ವಿರಚಿತ ಪ್ರಸಂಗಗಳಲ್ಲಿ ಅಪಾರ ಸಿದ್ದಿ ಇದ್ದ ಇವರು ರಾಮಾಯಾಣ ಪ್ರಸಂಗಗಳ ಮಟ್ಟು ವೈವಿದ್ಯತೆಗಳನ್ನು ಗುರುಮುಖೇನ ಕಲಿತು ಅದರಲ್ಲಿ ಅಪಾರ ಯಶಸ್ಸನ್ನು ಹೊಂದಿದವರು. ಕಿವಿಗಿಂಪು ನೀಡುವ ಮಂಜುಳ ಶಾರೀರದಲ್ಲಿ ಸ್ವಂತಿಕೆಯ ಛಾಪು ಮೂಡಿಸುವ ಪ್ರೌಢ ಭಾಗವತಿಕೆಯಲ್ಲಿ ಯಾರ ಅನುಕರಣೆಯೂ ಇಲ್ಲದಿರುವುದು ಅವರ ಹೆಚ್ಚುಗಾರಿಕೆ.

ಹಳೆತರ ಮಟ್ಟನ್ನೂ ಹೊಸತರ ಗುಟ್ಟನ್ನೂ ಮೈಗೂಡಿಸಿಕೊಂಡ ಸಮರ್ಥ ಭಾಗವತರಾದ ಇವರು ಅಪಾರ ಪ್ರಸಂಗಾನುಭವ, ರಂಗವನ್ನು ಎಬ್ಬಿಸುವ ರಂಗತಂತ್ರ, ಸಶಕ್ತ ಕವಿತಾಶಕ್ತಿ ಅತ್ಯಂತ ಏರು ಶ್ರುತಿಯಲ್ಲೂ ಹಾಡಬಲ್ಲ ಸ್ವರಭಾರದಿಂದ ಪ್ರೇಕ್ಷಕರಿಗೂ ಕಲಾವಿದರಿಗೂ ಬೇಕಾದ ಭಾಗವತರು. ಕಲಾವಿದರ ಸಾಮರ್ಥ್ಯ, ವೇಷಗಳ ವೈವಿಧ್ಯ, ಪಾತ್ರಗಳ ವಯಸ್ಸಿಗಣುಗುಣವಾಗಿ ಹಾಡುವ ಇವರು ಮರವಂತೆ ನರಸಿಂಹ ದಾಸರ ನಂತರ ಬಡಗುತಿಟ್ಟು ಕಂಡ ಅಪ್ರತಿಮ ಭಾಗವತರು. ಕುಂಜಾಲು ಶೇಷಗಿರಿ ಕಿಣಿಯವರಿಂದ ಪ್ರಾರಂಭಗೊಂಡು ಜಾನುವಾರುಕಟ್ಟೆ ಭಾಗವತರು, ಗುಂಡ್ಮಿ ರಾಮಚಂದ್ರ ನಾವಡರು, ನೀಲಾವರ ರಾಮಕೃಷ್ಣಯ್ಯ, ಗೋರ್ಪಾಡಿ ವಿಠಲ ಪಾಟೀಲ್. ನೆಲ್ಲೂರು ಮರಿಯಪ್ಪ ಆಚಾರ್, ಕಾಳಿಂಗ ನಾವಡರಂತ ಪ್ರಾತಸ್ಮರಣೀಯ ಭಾಗವತರಿಂದ ಪ್ರೇಕ್ಷಕರಿಗೆ ತಲುಪಿದ ಬಡಗಿನ ಸಮರ್ಥ ಹಾಡುಗಾರಿಕೆಯ ಕುಂಜಾಲು ಶೈಲಿಯ ಈ ತಲೆಮಾರಿನ ಪ್ರಾತಿನಿಧಿಕ ಭಾಗವತರಿವರು.

ಬಾಲ್ಯ, ಶಿಕ್ಷಣ ಹಾಗೂ ಯಕ್ಷಗಾನ ಪಾದಾರ್ಪಣೆ

ಕುಂದಾಪುರ ತಾಲೂಕು ನಾಗೂರು ಎಂಬಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕ್ರತ ಹೆರಂಜಾಲು ವೆಂಕಟರಮಣ ಗಾಣಿಗ ಗಣಪು ಗಾಣಿಗ ದಂಪತಿಗಳ ಪುತ್ರನಾಗಿ 1963ರಲ್ಲಿ ಜನಿಸಿದ ಗಾಣಿಗರು ನಾಲ್ಕನೇ ತರಗತಿ ಶೈಕ್ಷಣಿಕ ಅರ್ಹತೆ ಪಡೆದವರು. ತಂದೆ ವೆಂಕಟರಮಣ ಗಾಣಿಗರು ಯಕ್ಷಗಾನ ಪರಂಪರೆಯ ಪ್ರಸಿದ್ದ ವೇಷಧಾರಿ. ಚಿಕ್ಕಪ್ಪ ಸುಬ್ಬಣ್ಣ ಗಾಣಿಗರು ಆ ಕಾಲದ ಪ್ರಸಿದ್ದ ಸ್ತ್ರೀ ವೇಷಧಾರಿ. ಮೂರು ತಲೆಮಾರಿನ ಇತಿಹಾಸ ಇರುವ ಗೋಪಾಲ ಗಾಣಿಗರ ಪುತ್ರ ಪಲ್ಲವ ಗಾಣಿಗರೂ ಭಾಗವತರಾಗಿ ಮುಂದುವರಿಯುತಿದ್ದಾರೆ.

ಹೆರಂಜಾಲು ಗೋಪಾಲ ಗಾಣಿಗ
ಜನನ : 1963
ಜನನ ಸ್ಥಳ : ನಾಗೂರು
ಕುಂದಾಪುರ ತಾಲೂಕು
ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ:
35 ವರ್ಷಗಳ ಕಾಲ ಮಾರಣಕಟ್ಟೆ, ಮಂದಾರ್ತಿ. ಸಾಲಿಗ್ರಾಮ, ಸಿರಸಿ ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ ಗೊಪಾಲ ಗಾಣಿಗರು ಕು೦ಜಾಲು ಶೈಲಿ ಭಾಗವತಿಕೆಯ ಪ್ರಸ್ತುತ ಶ್ರೇಷ್ಠ ಪ್ರಾತಿನಿಧಿಕರು.
ಪ್ರಶಸ್ತಿಗಳು:
ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ ಹಾಗೂ ಪ್ರಶಸ್ತಿಗಳು
ಸಮರ್ಥ ಕಲಾ ಅಧ್ಯಾಪಕರಾದ ತಂದೆಯಿಂದಲೇ ನೃತ್ಯ ಅಭ್ಯಾಸ ಮಾಡಿದ ಗೋಪಾಲರು ಎಳೆವೆಯಲ್ಲೇ ಅಭಿಮನ್ಯು, ಪ್ರಹ್ಲಾದ, ಕೃಷ್ಣ, ವೃಷಸೇನ ಮುಂತಾದ ಪಾತ್ರಗಳಿಂದ ಜನಪ್ರೀಯರಾದರು. ಗಾಣಿಗರು ಮುಂದೆ ಭಾಗವತಿಕೆಗೆ ಉಡುಪಿ ಯಕ್ಷಗಾನ ಕೇಂದ್ರವನ್ನು ಆಯ್ಕೆ ಮಾಡಿಕೊಂಡರು. ಯಕ್ಷಗಾನ ಪರಂಪರೆಯ ಒಂದು ಶೈಲಿಯಾದ ಕುಂಜಾಲು ಶೈಲಿಯ ಪರಂಪರೆಯ ಭಾಗವತನಾಗಿ ಮೂಡಿಬರಲು ಇದು ಅವರಿಗೆ ಸಹಾಯಕವಾಯಿತು. ಆಗ ಕೇಂದ್ರದಲ್ಲಿ ಗುರುಗಳಾದ ನೀಲಾವರ ರಾಮಕೃಷ್ಣಯ್ಯನವರಿಂದ ಭಾಗವತಿಕೆ, ಮಹಾಬಲ ಕಾರಂತರಿಂದ ಮದ್ದಳೆ ತಂದೆಯಿಂದ ನೃತ್ಯ ಕಲಿತ ಇವರು ಪರಿಪೂರ್ಣ ಕಲಾವಿದರಾಗಿ ಮೂಡಿ ಬಂದರು. ಮಾರಣಕಟ್ಟೆ ಮೇಳದಲ್ಲಿ ತಾಳ ಹಿಡಿದು ಬಳಿಕ ಒಂದೇ ಮೇಳವಾಗಿದ್ದ ಮಂದಾರ್ತಿ ಮೇಳಕ್ಕೆ ಸಹ ಭಾಗವತರಾಗಿ ಸೇರಿಕೊಂಡರು.

35 ವರ್ಷಗಳಿ೦ದ ನಿರ೦ತರ ಕಲಾಸೇವೆ

ಸಾಲಿಗ್ರಾಮ ಮೇಳದಲ್ಲಿ ಕಾಳಿಂಗ ನಾವಡರ ನಿಧನ ನಂತರದ ವರ್ಷ ನಾರಾಯಣ ಶಬರಾಯರಿಗೆ ಸಹಭಾಗವತರಾಗಿ ಎರಡು ವರ್ಷ ಸೇವೆ ಸಲ್ಲಿಸಿ ಆಗ ತಾನೆ ಹೊಸದಾಗಿ ಪ್ರಾರಂಭವಾದ ಸಿರಸಿ ಮೇಳಕ್ಕೆ ಪ್ರಧಾನ ಭಾಗವತರಾಗಿ ಸೇರಿಕೊಂಡರು. ಘಟಾನುಗಟಿ ಕಲಾವಿದರಿದ್ದ ಸಿರಸಿಮೇಳದಲ್ಲಿ ಕೆ. ಪಿ. ಹೆಗಡೆ, ಸದಾಶಿವ ಅಮೀನ್ ಮತ್ತು ಗಾಣಿಗರ ಹಿಮ್ಮೇಳದಲ್ಲಿ ಅನೇಕ ಹೊಸ ಪ್ರಸಂಗಗಳು ರಂಜಿಸಿದವು. ಬಳಿಕ ದೀರ್ಘಕಾಲ ಮಂದಾರ್ತಿ ಮೇಳದಲ್ಲಿ ಸೇವೆ ಸಲ್ಲಿಸಿದ ಇವರ ಪುನಹ ಸಾಲಿಗ್ರಾಮ ಮೇಳದ ಸೇರ್ಪಡೆ ಯಕ್ಷಗಾನದ ಸುವರ್ಣಯುಗ . ಕೊಳಗಿ ಕೇಶವ ಹೆಗಡೆಯವರ ಸಹಭಾಗವತರಾಗಿ ಅಂದು ಜಯಬೇರಿ ಬಾರಿಸಿದ ``ರಂಗನಾಯಕಿ`` ಪ್ರಸಂಗದ ದಿ. ಹೊಸಂಗಡಿ ಜಯರಾಮ ಗಾಣಿಗರ ರಂಗನಾಯಕಿ ಪಾತ್ರಕ್ಕೆ ಇವರು ಹಾಡಿದ “ಕನ್ನಡದ ಕುಲತಿಲಕ ಕಂಠೀರವ” ಆಧುನಿಕ ಶೈಲಿಯ ಹಾಡು ಅಪಾರ ಜನಮನ್ನಣೆ ಪಡೆದದ್ದು ಮಾತ್ರವಲ್ಲದೆ ಗಾಣಿಗರು ಆಧುನಿಕ ಪ್ರಸಂಗಕ್ಕೂ ಸಮರ್ಥ ಭಾಗವತರು ಎನ್ನುವುದನ್ನು ತೋರಿಸಿಕೊಟ್ಟಿತು.

ಬಳಿಕ ಪುನಹ ಮಂದಾರ್ತಿ ಮೇಳ ಸೇರಿದ ಅವರು ಆಗ ನಿರಂತರ ನೆಡೆಯುತಿದ್ದ ಮಂದಾರ್ತಿ-ಮಾರಣಕಟ್ಟೆ ಮೇಳಗಳ ಜೋಡಾಟದಲ್ಲಿ ಮಂದಾರ್ತಿ ಮೇಳದ ರೂವಾರಿಯಾಗಿದ್ದು ಕಲಾವಿದರಿಗೆ ಜೋಡಾಟದ ತಂತ್ರಗಾರಿಕೆಯನ್ನು ತಿಳಿಸಿಕೊಟ್ಟು ಯಶಸ್ವಿ ಭಾಗವತರಾಗಿ ಕಾಣಿಸಿಕೊಂಡರು. ತನ್ನ 35 ವರ್ಷದ ವೃತ್ತಿ ಜೀವನದಲ್ಲಿ ಚಿಟ್ಟಾಣಿ, ಗೋಡೆ, ಮಹಾಬಲ ಹೆಗಡೆ, ಜಲವಳ್ಳಿ, ಯಾಜಿ, ಐರೋಡಿ, ಅರಾಟೆ, ಕೊಂಡದಕುಳಿಯವರಿಂದ ಮೊದಲ್ಗೊಂಡು ಕೋಟ, ಸುರೇಶ, ಕೊಳಾಲಿ ಮುಂತಾದ ಇಂದಿನ ಯುವ ಕಲಾವಿದರ ವರೆಗೆ ಮೂರು ತಲೆಮಾರಿನ ಕಲಾವಿದರನ್ನು ಅವರ ಸಾಮರ್ಥ್ಯಕ್ಕನುಗುಣವಾಗಿ ಕುಣಿಸಿದ ಕೀರ್ತಿ ಇವರಿಗಿದೆ.

ರಾಗದ ಬಗ್ಗೆ ಅಪಾರ ಹಿಡಿತವಿದ್ದ ಇವರ ಸಾಲಿಗ್ರಾಮ ಮೇಳದ ಯಶಸ್ವಿ ಪ್ರಸಂಗ ಈಶ್ವರಿ-ಪರಮೇಶ್ವರಿಯಲ್ಲಿ ಯಲಗುಪ್ಪ ಸುಬ್ರಮಣ್ಯ ಹೆಗಡೆಯವರಿಗೆ ವಾಸಂತಿ ರಾಗದಲ್ಲಿ ಹಾಡಿದ ಜಂಪೆತಾಳದ ಪದ್ಯ “ತಡವಾಗಿ ಹೋಯ್ತು ಗೆಳೆಯ ಪದ್ಯ” ಅಪಾರ ಯಶಸ್ಸನ್ನು ಗಳಿಸಿ ಇಂದಿಗೂ ಯಕ್ಷಗಾನ ಪ್ರೀಯರ ಮೊಬೈಲ್ ರಿಂಗ್ ಟೋನ್ ಆಗಿ ರಿಂಗುಣಿಸುತ್ತಿದೆ. ವರಕವಿ ಬೇಂದ್ರೆಯವರ ``ಶ್ರಾವಣ ಬಂತು ನಾಡಿಗೆ`` ಎಂಬ ಹಾಡನ್ನು ಯಕ್ಷಗಾನ ಶೈಲಿಯಲ್ಲಿ ಹಾಡಿ ಮನೆ ಮಾತಾದರು.

ಹೆರಂಜಾಲು ಯಕ್ಷಗಾನ ಕೇಂದ್ರದಲ್ಲಿ ಅಪಾರ ಶಿಷ್ಯರಿಗೆ ತರಬೇತಿ

ಸ್ವತಹ ಯಕ್ಷಗಾನ ಗುರುಗಳಾದ ಇವರು ಅಪಾರ ಶಿಷ್ಯರಿಗೆ ನೃತ್ಯ ತರಬೇತಿ ನೀಡಿದ್ದಾರೆ ಇಂದಿನ ಖ್ಯಾತನಾಮರಾದ ಅನೇಕರು ಅವರ ಶಿಷ್ಯರು. ಶಶಿಕಾಂತ ಶೆಟ್ಟಿ, ನೀಲ್ಕೋಡು ಶಂಕರ ಹೆಗಡೆ, ಯಲಗುಪ್ಪ ಸುಬ್ರಮಣ್ಯ ಹೆಗಡೆ ಸೇರಿದಂತೆ ಅನೇಕ ಶಿಷ್ಯರು ಹೆರಂಜಾಲು ಯಕ್ಷಗಾನ ಕೇಂದ್ರದಲ್ಲಿ ವಿದ್ಯಾಬ್ಯಾಸ ಮಾಡಿದ್ದಾರೆ. ಉತ್ತರ ಕನ್ನಡದ ಭಾವಾಭಿನಯ, ದಕ್ಷಿಣ ಕನ್ನಡದ ವೀರಾಭಿನಯಕ್ಕನುಗುಣವಾಗಿ ಹಾಡುವ ಇವರನ್ನು ಎರಡೂ ತಿಟ್ಟಿನ ಕಲಾವಿದರು ಬಯಸುತ್ತಾರೆ.

ತಂದೆಯ ಹೆಸರಿನಲ್ಲಿ ಹೆರಂಜಾಲು ಯಕ್ಷ ಪ್ರತಿಷ್ಟಾನ ಸ್ಥಾಪಿಸಿ ಯಕ್ಷಗಾನ ಸಂಬಂಧಿ ಅನೇಕ ಗೋಷ್ಟಿ, ಕಮ್ಮಟ, ಭಾಗವತಿಕೆ ಶಿಬಿರ ಅಲ್ಲದೆ ಆಸಕ್ತರಿಗೆ ಶಿಕ್ಷಣ ನೀಡುತಿದ್ದಾರೆ. ಇವರ ಪುತ್ರ ಭಾಗವತಿಕೆಯಲ್ಲೂ, ತಮ್ಮ ಬಾಲಕೃಷ್ಣ ಗಾಣಿಗ ಮದ್ದಳೆಯಲ್ಲೂ ಸಹಕರಿಸುತಿದ್ದಾರೆ. ಪತ್ನಿ ಸಾವಿತ್ರಿ ಮಕ್ಕಳಾದ ಪಲ್ಲವ, ರಮ್ಯ ಇವರ ಚಟುವಟಿಕೆಗೆ ಪೂರ್ಣ ಸಹಕಾರ ನೀಡುತಿದ್ದಾರೆ. ಇತ್ತೀಚೆಗೆ ಭೀಕರ ವಾಹನ ಅಫ಼ಘಾತದಿಂದ ಹಾಸಿಗೆ ಹಿಡಿದಿರುವ ಇವರ ಕಲಾ ಸಂಬಂದಿ ಚಟುವಟಿಕೆಗಳು ಅರ್ಧಕ್ಕೆ ನಿಂತಿವೆ. ಈ ನಿಟ್ಟಿನಲ್ಲಿ ಕಲಾಸಕ್ತರ ಪೂರ್ಣ ಸಹಕಾರ ಈ ಮೇರು ಕಲಾವಿದರಿಗೆ ಇಂದು ತುರ್ತಾಗಿ ಬೇಕಾಗಿದೆ

****************

ಹೆರಂಜಾಲು ಗೋಪಾಲ ಗಾಣಿಗರವರ ಭಾಗವತಿಕೆಯ ಕೆಲವು ದೃಶ್ಯಾವಳಿಗಳು

ಕರುನಾಡ ಕಣ್ಮಣಿಯೆ ಕ೦ಠೀರವ




ಕುಲದೇವಿ ಮೀನಾಕ್ಷಿ ಸಲಹೆನ್ನನು




ಕವಲು ಮನವ ಬಿಟ್ಟು ತವಕದಿ ದಯವಿಟ್ಟು




ಸುಮಾರು 10-15 ವರ್ಷಗಳ ಹಿ೦ದಿನ ದೃಶ್ಯಾವಳಿ (ರಾಘವೇ೦ದ್ರ ಮಯ್ಯರೊ೦ದಿಗೆ ದ್ವ೦ದ್ವ)




****************

ಹೆರಂಜಾಲು ಗೋಪಾಲ ಗಾಣಿಗರವರ ಕೆಲವು ಭಾವಚಿತ್ರಗಳು

( ಚಿತ್ರ ಕೃಪೆ : ಅ೦ತರ್ಜಾಲದ ಅನಾಮಿಕ ಮಿತ್ರರು )

ಪ್ರಶಸ್ತಿ ಫಲಕಗಳೊ೦ದಿಗೆ ಗೋಪಾಲ ಗಾಣಿಗರು



ಚೌಕಿ ಪೂಜೆಯಲ್ಲಿ ಗೋಪಾಲ ಗಾಣಿಗರು



ಗೋಪಾಲ ಗಾಣಿಗರು ಹಾಗೂ ಸುಪುತ್ರ ಪಲ್ಲವ ಗಾಣಿಗ






Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ