ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಸಮಗ್ರ ಲೇಖನ : ಯಕ್ಷಗಾನ ಶಿಕ್ಷಣ ಹೇಗಿರಬೇಕು? (ಭಾಗ-2)

ಲೇಖಕರು :
ಕಡತೋಕಾ ಗೋಪಾಲಕೃಷ್ಣ ಭಾಗವತ
ಶನಿವಾರ, ಜುಲೈ 4 , 2015

ಸಾಂಪ್ರದಾಯಿಕ ಅಂಶಗಳಿಗೆ ಮಹತ್ವವಿಲ್ಲವಾಗಿ ಪಾರಂಪರಿಕ ಪದ್ಧತಿಗಳನ್ನು ಹೇಗೆ ಬೇಕಾದರೂ ಪ್ರಸ್ತುತಪಡಿಸಬಹುದೆಂಬ ಸ್ಥಿತಿ ಕಲೆಯ ಮುಖ್ಯ ವಾಹಿನಿಯಲ್ಲಿದ್ದಾಗ ಅದನ್ನು ಗಂಭೀರವಾಗಿ ಕಲಿಯಬೇಕಾದ ಅನಿವಾರ್ಯತೆ ಆಸಕ್ತರಿಗೆ ಉಂಟಾಗುವುದಿಲ್ಲ. ಯಕ್ಷಗಾನದಂತಹ ಕಲೆಗಳಲ್ಲಿ ಗುರುಮುಖೆನ ಕಲಿಯುವುದಕ್ಕಿಂತಲೂ ಅನುಭವದಿಂದ ಗಳಿಸುವುದು ಬಹಳವಿದೆ ಎಂಬ ಮನೋಧರ್ಮವು ವ್ಯವಸ್ಥಿತವಾದ ಕಲಿಕೆಯು ಅನವಶ್ಯಕವೆಂಬ ಮನೋಭಾವವನ್ನು ಬೆಳೆಸುತ್ತದೆ. ಯಕ್ಷಗಾನದ ಕಲಿಕಾ ವಲಯದಲ್ಲಿಯೂ ಸರಿಸುಮಾರು ಇಂತಹದ್ದೇ ಮನೋಧರ್ಮ ಪ್ರಚಲಿತದಲ್ಲಿರುವಂತೆ ಕಾಣುತ್ತದೆ. ಆದ್ದರಿಂದಲೇ ಯಕ್ಷಗಾನ ಕಲಿಯುವುದೆಂದರೆ ನೃತ್ಯದ ಹೆಜ್ಜೆಗಾರಿಕೆಯನ್ನು ಕಲಿಯುವುದು ಮಾತ್ರ ಎಂಬ ಕಲ್ಪನೆ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮತ್ತು ಬದಲಾದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಹಿನ್ನೆಲೆಯಲ್ಲಿ ಯಕ್ಷಗಾನ ಶಿಕ್ಷಣದ ಸವಾಲುಗಳನ್ನು ವಿಶ್ಲೇಷಿಸಬೇಕಾಗುತ್ತದೆ.

ಶಿಕ್ಷಕರ ಕೊರತೆ

ಇಂದು ಎಲ್ಲಿ ನೋಡಿದರಲ್ಲಿ ಯಕ್ಷಗಾನದ ಕಲಿಕೆ ನಡೆಯುತ್ತಿದೆ. ನಗರಗಳಲ್ಲಿಯಂತೂ ಕಲಿಯುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಆದರೆ ಕಲಿಕೆಯ ಗುಣಮಟ್ಟ ಸಮಾಧಾನಕರವಾಗಿಲ್ಲದಿರುವುದಕ್ಕೆ ಕಲಿಕೆಯ ಪಠ್ಯ, ಕಲಿಕೆಯ ವಿಧಾನದಲ್ಲಿರುವ ದೋಷಗಳ ಜೊತೆಗೆ ಶಿಕ್ಷಕರ ಅನರ್ಹತೆಯೂ ಒಂದು ಕಾರಣ ಎಂಬ ಅಂಶವನ್ನು ಕಡೆಗಣಿಸುವಂತಿಲ್ಲ. ಕಲಾವಿದರು ಬಿಡುವಿನ ವೇಳೆಯಲ್ಲಿ ಹೆಚ್ಚಿನ ಆರ್ಥಿಕ ಗಳಿಕೆಗಾಗಿ ಯಕ್ಷಗಾನ ಕಲಿಸುವ ಕಾಯಕಕ್ಕೆ ತೊಡಗುವುದೇ ಹೆಚ್ಚು.

ಬಡಗು ತಿಟ್ಟಿನ ಹಿರಿಯ ಯಕ್ಷಗಾನ ಗುರು ಸ೦ಜೀವ ಸುವರ್ಣರು
ಯಕ್ಷಗಾನ ಕಲಿಯುವುದೆಂದರೆ ಹೆಜ್ಜೆಗಾರಿಕೆಯನ್ನು ಕಲಿಯುವುದೆಂಬ ಸೀಮಿತ ದೃಷ್ಟಿಕೋನವಿರುವುದರಿಂದ ನೃತ್ಯಬಲ್ಲವರೆಲ್ಲ ಶಿಕ್ಷಕರಾಗಲು ಅರ್ಹರೆಂಬ ತಪ್ಪು ಕಲ್ಪನೆ ಮನೆಮಾಡಿದೆ. ವಾಸ್ತವವಾಗಿ ಯಕ್ಷಗಾನದಲ್ಲಿ ಎಲ್ಲ ಲಲಿತ ಕಲೆಗಳ ಅಂಶವೂ ಇದೆ. ಸಂಗೀತ, ಸಾಹಿತ್ಯ, ನೃತ್ಯ-ಅಭಿನಯ, ಚಿತ್ರಕಲೆ-ಹೀಗೆ ಎಲ್ಲವೂ ಸಮಾಹಿತವಾಗಿರುವಾಗ ಇದನ್ನು ಕಲಿಸಲು ಕೇವಲ ನೃತ್ಯವೊಂದು ತಿಳಿದಿದ್ದರೆ ಸಾಕೆ? ಅಂದರೆ ಎಲ್ಲ ವಿಭಾಗಗಳಲ್ಲಿ ಪರಿಣತನಾದವನು ಮಾತ್ರ ಅರ್ಹ ಎಂದು ಅರ್ಥವಲ್ಲವಾದರೂ ಈ ಎಲ್ಲ ವಿಭಾಗಗಳ ಪ್ರಾಥಮಿಕ ಜ್ಞಾನವಿರುವವನಾದರೂ ಆತನು ಆಗಿದ್ದರೆ ಉತ್ತಮ. ವ್ಯವಸ್ಥಿತವಾಗಿ ಕಲಿಯದ ಶಿಕ್ಷಕ ವ್ಯವಸ್ಥಿತವಾಗಿ ಕಲಿಸುವುದು ಹೇಗೆ ಸಾಧ್ಯ? ಈ ನಿಟ್ಟಿನಲ್ಲಿ ಅಗತ್ಯವಿದ್ದಷ್ಟು ಸಮರ್ಥ ಶಿಕ್ಷಕರು ಯಕ್ಷಗಾನ ಕ್ಷೇತ್ರದಲ್ಲಿಲ್ಲವಾದ್ದರಿಂದ ಮೊದಲು ಅರ್ಹ ಶಿಕ್ಷಕರ ದಂಡನ್ನು ಸೃಷ್ಟಿ ಮಾಡಿಕೊಳ್ಳುವುದೊಂದು ಸವಾಲೇ ಸರಿ.

ಏಕರೂಪದ ಪಠ್ಯ ಮತ್ತು ಪ್ರಾದೇಶಿಕ ಪರಂಪರೆಯ ಗೊಂದಲ

ಯಕ್ಷಗಾನದಲ್ಲಿ ವ್ಯವಸಾಯೀ ಮೇಳಗಳ ಕಾರಣದಿಂದ ತಿಟ್ಟಗಳ ಸಮನ್ವಯವಾಗಿ ಪ್ರಾದೇಶಿಕ ಪರಂಪರೆಗಳು ಪರಸ್ಪರ ಸಮ್ಮಿಳಿತವಾಗಿದೆ. ಮುಖ್ಯವಾಹಿನಿಯ ವೃತ್ತಿರಂಗಭೂಮಿಯಲ್ಲಿ ಯಕ್ಷಗಾನ ಪ್ರದರ್ಶನವನ್ನು ನೀಡುವಾಗ ಇದರಿಂದ ಯಾವ ತೊಡಕೂ ಉಂಟಾಗದಿದ್ದದರೂ ಪ್ರಾಥಮಿಕ ಕಲಿಕೆಯ ಪಠ್ಯದ ಆಯ್ಕೆಯ ಸಂದರ್ಭದಲ್ಲಿ ಅನೇಕ ಸಮಸ್ಯೆ ಮತ್ತು ಗೊಂದಲವನ್ನು ಉಂಟುಮಾಡುತ್ತದೆ. ಯಕ್ಷಗಾನಕ್ಕೆ ಹೊಸಬರಾಗಿ ಇನ್ನೂ ಪ್ರವೇಶ ಮಾಡುತ್ತಿರುವ ವಿದ್ಯಾರ್ಥಿಯ ದಿಕ್ಕು ತಪ್ಪಿಸುವಲ್ಲಿ ಈ ಗೊಂದಲಗಳು ಮುಖ್ಯ ಪಾತ್ರವಹಿಸುತ್ತದೆ. ಇಂದು ಒಬ್ಬೊಬ್ಬ ಶಿಕ್ಷಕರು ಒಂದೊಂದು ಪಠ್ಯವನ್ನು ಬಳಸಿ ಕಲಿಸುತ್ತಿದ್ದಾರೆ ಇದರಿಂದ ಬೇರೆ ಬೇರೆ ಶಿಕ್ಷಕರಿಂದ ತರಬೇತಿ ಹೊಂದಿದವರ ನಡುವೆ ಹೊಂದಾಣಿಕೆ ಕಷ್ಟವಾಗಿ ಹೆಚ್ಚಿನ ಸಾಂಪ್ರದಾಯಿಕ ಪದ್ಧತಿಗಳನ್ನು ರಂಗದಲ್ಲಿ ಪ್ರಾಯೋಗಿಕವಾಗಿ ಪ್ರದರ್ಶಿಸಲು ಸಾಧ್ಯವಾಗುವುದಿಲ್ಲ.

ಹಿಂದೂಸ್ಥಾನೀ ಸಂಗೀತದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲಿ ಹೋದರೂ ತೀನ್ತಾಲ್ನ ಬೋಲ್ ಅಥವಾ ತತ್ಕಾರ -ಧಾ ಧಿನ್ ದಿನ್ ಧಾ| ಧಾ ಧಿನ್ ಧಿನ್ ದಾ | ಧಾ ತಿನ್ ತಿನ್ ತಾ| ತಾ ಧಿನ್ ದಿನ್ ಧಾ| ಎಂದು ಒಂದೇ ಆಗಿರುತ್ತದೆ. ಆದರೆ ಯಕ್ಷಗಾನದಲ್ಲಿ ಮಾತ್ರ ಒಂದು ಕಡೆ ಝಂಪೆ ತಾಳದ ಮುಕ್ತಾಯಕ್ಕೆ 'ತಾತಾಕಡ್ತಕ ತಾಗಡತದ್ದಿನ್ನಕ್ಕ ತೋಂ. ತಕತಧಿಗಿಣ' ಎಂದು ಹೇಳಿದರೆ, ಇನ್ನೊಂದು ಕಡೆ 'ತಾಧೇಂತರಿಕಿಟ ಧಿಂತರಿಕಿಟತಕ ತರಿಕಿಟ ಧೀಂತಕ ತಧಿಗಿಣ' ಎಂದು ಹೇಳಲಾಗುತ್ತದೆ. ಮಾತ್ರೆಗಳ ಲೆಕ್ಕ, ತಾಳದ ವ್ಯಾಕರಣ ತಿಳಿದ ಬಲ್ಲವರಿಗೆ ಇವೆರಡೂ ಒಂದೇ ಎಂದು ತಿಳಿದಿರುತ್ತದೆ. ಆದರೆ ಯಕ್ಷಗಾನಕ್ಕೆ ಇದೀಗ ತಾನೇ ಪ್ರವೇಶಿಸುತ್ತಿರುವವರಿಗೆ ಇದೆಲ್ಲ ವಿಚಿತ್ರವಾಗಿ ಕಂಡು ಯಕ್ಷಗಾನದಲ್ಲಿ ಯಾವುದೂ ನಿರ್ದಿಷ್ಟವಾಗಿಲ್ಲ ಎಂಬ ಭಾವನೆಯನ್ನು ಮೂಡಿಸುತ್ತದೆ. ಇದರಿಂದ ವಿದ್ಯಾರ್ಥಿಯು ಯಕ್ಷಗಾನದ ಅಂಗೋಪಾಂಗಗಳನ್ನು ಅಗತ್ಯವಿದ್ದಷ್ಟು ಗಂಭೀರವಾಗಿ ಸ್ವೀಕರಿಸುವುದಿಲ್ಲ. ಇದು ತಾಳವೊಂದೇ ಅಲ್ಲ ಯಕ್ಷಗಾನದ ಎಲ್ಲ ಅಂಗೋಪಾಂಗಗಳಿಗೂ ಅನ್ವಯಿಸುತ್ತದೆ. ಇದಕ್ಕಾಗಿ ಏಕರೂಪಕದ ಕಲಿಕೆಯ ಪಠ್ಯವನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ.

ಏಕರೂಪದ ಪಠ್ಯವನ್ನು ಸರ್ಕಾರದಂತಹ ಕಾಯಿದೆಬದ್ಧ ಪ್ರಾಧಿಕಾರವೇ ಜಾರಿಯಲ್ಲಿ ತರಬೇಕಲ್ಲದೇ ಖಾಸಗೀ ಸಂಘ-ಸಂಸ್ಥೆಗಳು ಪ್ರಚಲಿತದಲ್ಲಿ ತರಲು ಸಾಧ್ಯವಿಲ್ಲ. ಏಕರೂಪದ ಪಠ್ಯವು ರಂಗಭೂಮಿಯನ್ನು ಏಕಸ್ವರೂಪಗೊಳಿಸುವುದರ ಜೊತೆಗೆ ಮುಂದಿನ ವಿಕಾಸಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸುತ್ತದೆ. ಇದರಿಂದ ಪ್ರಾದೇಶಿಕ ಒಳ ಪರಂಪರೆಗಳು ಅಸ್ತಿತ್ವವನ್ನು ಕಳೆದಕುಕೊಳ್ಳಬಹುದಾದರೂ ಅಂತಹ ಪರಂಪರೆಗಳು ಅವ್ಯವಸ್ಥಿತವಾಗಿ ಈಗಿನಂತೆ ಸಮ್ಮಿಶ್ರಗೊಳ್ಳುವುದಕ್ಕಿಂತ ವ್ಯವಸ್ಥಿತವಾದ ಏಕರೂಪವು ಒಳ್ಳೆಯದು.

ಮೊದಲು ಸರ್ಕಾರವು ಪರಿಣತರ ತಂಡದಿಂದ ಏಕರೂಪದ ಪಠ್ಯವನ್ನು ಸಿದ್ಧಪಡಿಸಿಕೊಂಡು ಸೆಕೆಂಡರಿ ಎಜ್ಯುಕೇಶನ್ ಬೋರ್ಡ್ ನಂತಹ ಪರೀಕ್ಷಾ ಮಂಡಳಿಯನ್ನು ಸ್ಥಾಪಿಸಿ ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯಗಳಿಗಿದ್ದಂತೆ ಪರೀಕ್ಷೆಗಳನ್ನು ನಡೆಸಬೇಕು. ಯಕ್ಷಗಾನದಲ್ಲಿಯೂ ಜ್ಯೂನಿಯರ್, ಸೀನಿಯರ್ ಮತ್ತು ವಿದ್ವತ್ ಪರೀಕ್ಷೆಗೆ ಹಾಜರಾಗಲು ಅವಕಾಶವಿರಬೇಕು. ಈ ಪರೀಕ್ಷೆಗಳಲ್ಲಿ ಸಿದ್ಧಪಡಿಸಲ್ಪಟ್ಟ ಏಕರೂಪದ ಪಠ್ಯಕ್ಕನುಗುಣವಾಗಿಯೇ ಮೌಲ್ಯಮಾಪನ ನಡೆಯಬೇಕು. ಹೀಗೆ ನಡೆಯುವ ಪರೀಕ್ಷೆಯಲ್ಲಿ ತೇರ್ಗಡೆಯಾದವರು ನಡೆಸುವ ಯಕ್ಷಗಾನ ತರಬೇತಿ ಕೇಂದ್ರಗಳಿಗೆ, ಅಥವಾ ಹಾಗೆ ತೇರ್ಗಡೆಯಾದ ಶಿಕ್ಷಕರ ಮೂಲಕ ಯಕ್ಷಗಾನ ತರಬೇತಿ ಕೊಡಿಸುವ ಸಂಘ-ಸಂಸ್ಥೆಗಳಿಗೆ ಸರ್ಕಾರವು ಯಕ್ಷಶಿಕ್ಷಣಕ್ಕಾಗಿ ಹೆಚ್ಚಿನ ಆರ್ಥಿಕ ಅನುದಾನವನ್ನು ಸಂಸ್ಕೃತಿ ಇಲಾಖೆಯ ಮೂಲಕ ಕೊಡಬೇಕು. ಅಂತಹ ತರಬೇತಿ ಕೇಂದ್ರಗಳಲ್ಲಿ ಅಧಿಕೃತ ಏಕರೂಪ ಪಠ್ಯಕ್ಕನುಗುಣವಾಗಿಯೇ ಯಕ್ಷಶಿಕ್ಷಣವನ್ನು ನೀಡಬೇಕು. ಇದರಿಂದ ಏಕರೂಪದ ಪಠ್ಯಕ್ಕೆ ಅದರದ್ದೇ ಆದ ಮಹತ್ವ ಮತ್ತು ಬೇಡಿಕೆ ಬಂದು ಎಲ್ಲರೂ ಅನಿವಾರ್ಯವಾಗಿ ಏಕರೂಪದ ಪಠ್ಯವನ್ನು ಅನುಸರಿಸಲೇಬೇಕಾಗುತ್ತದೆ. ಇದರಿಂದ ಒಂದು ಹತ್ತು ವರ್ಷಗಳಲ್ಲಿ ರಂಗಭೂಮಿಯೂ ತಾಂತ್ರಿಕವಾಗಿ ಏಕರೂಪಕ್ಕೆ ಬರಬಹುದು. ಅರ್ಹನಲ್ಲದ ಶಿಕ್ಷಕನು ಕೂಡ ಅರ್ಹತೆಯನ್ನು ಪಡೆದುಕೊಳ್ಳಲು ಮುಂದಾಗುವನು ಮತ್ತು ಏಕರೂಪದ ಪಠ್ಯಕ್ಕನುಗುಣವಾಗಿಯೇ ಕಲಿಸಲು ಕೂಡ ತೊಡಗುವನು. ಅನರ್ಹ ಶಿಕ್ಷಕರು ಹಿಂದೆ ಸರಿಯುವುದರಿಂದ ಕಲಿಕೆಯು ಒಂದು ಶಿಸ್ತಿಗೆ ಒಳಪಟ್ಟು ಈ ಶಿಸ್ತು ಮುಂದೆ ರಂಗಭೂಮಿಯ ಮುಖ್ಯ ವಾಹಿನಿಯಲ್ಲೂ ಸಮಾನಾಂತರವಾದ ಶಿಸ್ತು ಜಾರಿಯಲ್ಲಿ ಬರಲು ಪ್ರಚೋದಕವಾಗಬಹುದು.

ಶಿಕ್ಷಣದ ಸ್ವರೂಪ

ಯಕ್ಷಗಾನವನ್ನು ಕಲಿಯುವ ಉತ್ಸಾಹಿಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಕಲಿಸುವುದು ಒಂದು ವೃತ್ತಿಯಾಗಿ ಅದೂ ವ್ಯಾಪಾರೀಕರಣದ ಹಾದಿ ಹಿಡಿದಿರುವುದು ಆತಂಕದ ಅಂಶ. ಈ ಅನಿಷ್ಠ, ಸಂಗೀತ, ನೃತ್ಯದಂತಹ ಶಾಸ್ತ್ರೀಯ ಕಲೆಗಳ ಸಂದರ್ಭದಲ್ಲಿ ಬಂದು ವಕ್ಕರಿಸಿಕೊಂಡು ಬಹಳ ಕಾಲವಾಯಿತಾದರೂ ಯಕ್ಷಗಾನದಲ್ಲಿ ಇದೀಗ ತಾನೇ ಪ್ರಾರಂಭವಾಗಿರುವುದನ್ನು ಗಮನಿಸಬಹುದು. ಕಲಿಕೆ ವೃತ್ತಿಯಾದಾಗ ಶಿಕ್ಷಣದ ಸ್ವರೂಪವೂ ಆ ಉದ್ದೇಶಕ್ಕನುಗುಣವಾಗಿ ವಿರೂಪಗೊಳ್ಳುವುದು ಸಹಜ. ಇಂದು ಗಂಭೀರವಾದ ಆಸಕ್ತಿಯಿಂದ ಯಕ್ಷಗಾನ ಕಲಿಯುವವರಿಗಿಂತಲೂ ಈ ಕಲೆಗೆ ದಕ್ಕುತ್ತಿರುವ ಸಾಮಾಜಿಕ ಮನ್ನಣೆ ಮತ್ತು ಜನಪ್ರಿಯತೆಯನ್ನು ಕಂಡು ಮುಂದೆ ಬರುವವರೇ ಹೆಚ್ಚಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ಮಕ್ಕಳೋ ಮಹಿಳೆಯರೋ ಅಥವಾ ಹವ್ಯಾಸಿಗಳೊ ಒಂದೋ ಎರಡೋ ಪ್ರದರ್ಶನಕ್ಕೆ ಬೇಕಾದ ನೃತ್ಯ-ಅಭಿನಯವನ್ನು ಕಲಿತುಕೊಂಡು ಯಕ್ಷಗಾನವನ್ನು ಕಲಿತೆನೆಂಬಂತೆ ವ್ಯವಹರಿಸುವುದನ್ನು ಕಾಣುತ್ತೇವೆ. ಪ್ರಾಥಮಿಕ ತಂತ್ರಗಳನ್ನು ತಾಳ್ಮೆಯಿಂದ ಕಲಿತು ನಿಧಾನವಾಗಿ ವೇಷಧಾರಿಯಾಗುವ ವ್ಯವಧಾನ ಯುವಕರಲ್ಲಿ ಇಲ್ಲವಾಗುತ್ತಿರುವುದಕ್ಕೆ ವೃತ್ತಿ ಸ್ವರೂಪ ಪಡೆದಿರುವ ಯಕ್ಷಶಿಕ್ಷಣವು ಮೂಲ ಕಾರಣವಾಗಿದೆ. ಕಲಿಸುವಿಕೆಯನ್ನು ಹೆಚ್ಚಿನ ಗಳಿಕೆಯ ಮಾರ್ಗವಾಗಿಸಿಕೊಂಡಿರುವ ಶಿಕ್ಷಕರು ಕಲಿಯುವವರಿಗೆ ಬೇಕಾದಂತೆ ಕಲಿಸುತ್ತಿದ್ದಾರೆಯೇ ಹೊರತೂ ಕಲಿಸಬೇಕಾದ ರೀತಿಯಲ್ಲಿ ಕಲಿಸುತ್ತಿಲ್ಲ. ಈ ಕಾರಣಕ್ಕಾಗಿಯೇ ಕಲಿತ ಅಭ್ಯರ್ಥಿಗಳ ಪ್ರದರ್ಶನಲ್ಲಿ ವಿಕೃತ ಹೆಜ್ಜೆಗಾರಿಕೆ, ಅಸಮರ್ಪಕ ಮತ್ತು ಅಯಕ್ಷಗಾನೀಯ ಸಂಭಾಷಣೆ, ಅನೌಚಿತ್ಯ ಎದ್ದು ಕಾಣುತ್ತದೆ.

ರಾಮಾಯಣ, ಮಹಾಭಾರತ, ಅಥವಾ ಪುರಾಣದ ಒಂದು ಕಥೆ ಯಕ್ಷಗಾನದಲ್ಲಿ ಪ್ರದರ್ಶಿತವಾಗಬೇಕಾಗುತ್ತದೆ. ಇಲ್ಲಿಯ ನೃತ್ಯವಾಗಲೀ-ಅಭಿನಯವಾಗಲೀ ಭಾರತನಾಟ್ಯದಂತೆ ತನ್ನಷ್ಟಕ್ಕೆ ಪ್ರದರ್ಶಿತವಾಗುವುದಲ್ಲ. ಕಲಿತ ಅಭ್ಯರ್ಥಿ-ಅದು ಸಣ್ಣದಿರಲಿ ದೊಡ್ಡದಿರಲಿ, ಒಂದು ಪೂರ್ವಕಥೆಯ ಪಾತ್ರವಾಗಿ ಆ ಪಾತ್ರಕ್ಕೆ ನ್ಯಾಯ ಒದಗಿಸಬೇಕಾಗುತ್ತದೆ. ಪುರಾಣದ ಪಾತ್ರಗಳಿಗೆಲ್ಲ ಅವುಗಳದ್ದೇ ಆದ ವ್ಯಕ್ತಿತ್ವ, ಚರಿತ್ರೆ ಮತ್ತು ಚಾರಿತ್ರ್ಯವಿದೆ. ಆದ್ದರಿಂದ ಯಕ್ಷಗಾನದ ಕಲಿಕೆ ಮೊದಲು ಪುರಾಣದ ಕಥೆಗಳ ಅಧ್ಯಯನದೊಂದಿಗೆ ಪ್ರಾರಂಭವಾಗಬೇಕು. ಅಧ್ಯಯನ ಎಂದಷ್ಟಕ್ಕೆ ಆಳವಾದ ಅಧ್ಯಯನ ಎಂದೇ ಅರ್ಥವಲ್ಲ. ಪುರಾಣದ ಕಥೆಗಳನ್ನು ಪೂರ್ಣವಾಗಿ ಯಕ್ಷಗಾನ ಕಲಾವಿದನೊಬ್ಬ ತಿಳಿದಿರಲೇಬೇಕಾಗುತ್ತದೆ. ಕಥೆಯ ಪೂರ್ವಾಪರವನ್ನು ಸರಿಯಾಗಿ ತಿಳಿದಾಗ ಮಾತ್ರ ಕಲಾವಿದ ಆ ಪಾತ್ರಕ್ಕೆ ಅನೌಚಿತ್ಯವಿಲ್ಲದೇ ನ್ಯಾಯ ಒದಗಿಸಬಲ್ಲ. ಆ ಕಾರಣಕ್ಕಾಗಿಯೇ ಯಕ್ಷಗಾನವನ್ನು ಕಲಿಯಲು ಉತ್ಸುಕನಾದ ಪ್ರತಿಯೊಬ್ಬನಿಗೂ ಅದರ ಮಹತ್ವ ತಿಳಿಯಬೇಕಾದರೆ ಕಲಿಕೆ ಅಲ್ಲಿಂದಲೇ ಪ್ರಾರಂಭವಾಗಬೇಕಾಗುತ್ತದೆ. ನಂತರ ಪ್ರಸಂಗದ ಪದ್ಯಗಳನ್ನು ಲಯಬದ್ಧವಾಗಿ ಓದುವ ಅಭ್ಯಾಸ ನಡೆಯಬೇಕು. ನಂತರ ಶ್ರುತಿಬದ್ಧವಾಗಿ ಯಕ್ಷಗಾನದ ಶೈಲಿಯಲ್ಲಿ ಮಾತನಾಡುವ ತರಬೇತಿ ದೊರೆಯಬೇಕು. ಕೊಟ್ಟ ಪದ್ಯದ ಅರ್ಥವನ್ನು ತನ್ನದೇ ಆದ ಭಾಷೆಯಲ್ಲಿ ಯಕ್ಷಗಾನದ ಶೈಲಿಯಲ್ಲಿ ಪ್ರಸ್ತುತಪಡಿಸಲು ವಿದ್ಯಾರ್ಥಿಯು ಮೊದಲು ಕಲಿಯಬೇಕು. ಇದಕ್ಕೆ ಅನುಕೂಲವಾಗುವಂತೆ ಕುಮಾರ ವ್ಯಾಸ ಮತ್ತು ತೊರವೆ ರಾಮಾಯಣದ ಪಠಣ ಮತ್ತು ಭಾಷೆಯ ಕಲಿಕೆಯನ್ನು ವಿದ್ಯಾರ್ಥಿಗಳಲ್ಲಿ ಪ್ರೋತ್ಸಾಹಿಸುವ ತಂತ್ರಗಳನ್ನು ಅಳವಡಿಸಿಕೊಳ್ಳಬಹುದು. ಇದರ ಜೊತೆಗೆ ತಾಳವೂ ನೃತ್ಯದ ಹೆಜ್ಜೆಗಳೂ ಕರಗತವಾಗುವಂತೆ ಕಲಿಕೆಯ ಸ್ವರೂಪವಿರಬೇಕು.

ಅಂಗೋಪಾಂಗಗಳ ಅಸಮತೋಲನವು ಇಂದಿನ ರಂಗಸ್ಥಳದ ಬಲುದೊಡ್ಡ ಸಮಸ್ಯೆ. ಪದ್ಯವೊಂದಕ್ಕೆ ಹತ್ತು ನಿಮಿಷ ವೈವಿಧ್ಯಮಯವಾಗಿ ನರ್ತಿಸಿ ಅಭಿನಯಿಸುವ ಕಲಾವಿದ ಅದೇ ಪದ್ಯಕ್ಕೆ ಪದ್ಯದ ಸರಳಾನುವಾದ ಎನ್ನುವಷ್ಟು ಕೂಡ ಮಾತನಾಡುವುದಿಲ್ಲ. ಆಶುಸಂಭಾಷಣೆಯ ಯಕ್ಷಗಾನದ ಅನನ್ಯ ತಂತ್ರವು ಯಕ್ಷಗಾನಕ್ಕೆ ವಿಶಿಷ್ಟವಾದದ್ದು. ಆದರೆ ಆಧುನಿಕ ತಲೆಮಾರಿನ ಕಲಾವಿದರು ಈ ಅಂಗವನ್ನು ನಿರ್ಲಕ್ಷಿಸುವುದರಿಂದ ಈ ರಂಗಭೂಮಿಯ ಪ್ರಮುಖ ಅಂಗವನ್ನೇ ಕಡೆಗಣಿಸಿ ಕಲೆಯನ್ನು ಬಡವಾಗಿಸಿದಂತಿದೆ. ಈ ಅವಗಣನೆಗೆ ಮುಖ್ಯ ಕಾರಣ ಕಲಿಕೆಯ ಸಂದರ್ಭದಲ್ಲಿ ಮಾತಿಗೆ ಸಿಗಬೇಕಾದ ಮಹತ್ವ ಸಿಗದಿರುವುದೇ ಆಗಿದೆ. ಪೂರ್ಣ ಪ್ರಮಾಣದ ಕಲಿಕಾ ಕೇಂದ್ರಗಳಲ್ಲಿಯೂ ಕೂಡ ನೃತ್ಯವನ್ನು ಕಲಿಸುವುದಕ್ಕೆ ಶಿಕ್ಷಕರಿರುತ್ತಾರಾದರೂ ಮಾತಿನ ತರಬೇತಿಗೆ ಯಾವ ಪರಿಣತರನ್ನೂ ಅವಲಂಬಿಸುವುದಿಲ್ಲ ಮತ್ತು ಪ್ರತ್ಯೇಕ ಶಿಕ್ಷಕರೂ ಇರುವುದಿಲ್ಲ. ಇದು ವಾಚಿಕವನ್ನು ರಂಗದಲ್ಲಿ ಎಷ್ಟರ ಮಟ್ಟಿಗೆ ನಿರ್ಲಕ್ಷಿಸಲಾಗುತ್ತಿದೆಯೆಂಬುದಕ್ಕೆ ಸಾಕ್ಷಿ.

ನಾಟಕ ರಂಗಭೂಮಿಯಲ್ಲಿ ತರಬೇತಿಯ ಸಂದರ್ಭದಲ್ಲಿ ಸಂಭಾಷಣೆಯ ತಂತ್ರವನ್ನು ಮುತುವರ್ಜಿಯಿಂದ ಹೇಳಿಕೊಡಲಾಗುತ್ತದೆ. ಯಕ್ಷಗಾನದಲ್ಲಿ ತರಬೇತಿದಾರನ ಕೈಚೀಲದಲ್ಲಿ ಯಾರೋ ಬರೆದುಕೊಟ್ಟ ಪ್ರಸಂಗದ ಅರ್ಥಗಳ ಕೈಬರಹದ ಪ್ರತಿಯಿರುತ್ತದೆ. ಪ್ರಸಂಗವೊಂದನ್ನು ಪ್ರದರ್ಶಿಸಬೇಕೆಂದಾದರೆ ಗುರುವು ತನ್ನ ಕೈಚೀಲದಲ್ಲಿರುವ ಪಟ್ಟಿಯನ್ನು ತೆಗೆದು ಸಂಭಾಷಣೆಯನ್ನು ಉರು ಹೊಡೆಯಲು ಹೇಳಿದಂತೆ ಬಾಯಿಪಾಠ ಮಾಡಿ ಸಮರ್ಪಿಸಲಾಗುತ್ತದೆ. ಈ ಸಂಭಾಷಣೆಯು ಎಷ್ಟೋ ಬಾರಿ ರಂಗದ ಹಿಂದು ಮುಂದು ತಿಳಿಯದ ಊರಿನ 'ಭಾಷಾಕೋವಿದ' ತಾಳಮದ್ದಳೆಯ ಅರ್ಥಧಾರಿಗಳ ಕೈಕಸುಬಿನ ಕೂಸಾಗಿರುವುದೇ ಹೆಚ್ಚು. ಯಕ್ಷಗಾನದಲ್ಲಿ ನೃತ್ಯ ಅಭಿನಯದಲ್ಲಿ ವೈಯಕ್ತಿಕ ಶೈಲಿ ಇದೆಯೆಂದು ಜನಸಾಮಾನ್ಯರಿಗೂ ಗೊತ್ತಿದೆಯಾದರೂ ರಂಗದಲ್ಲಿ ಯಕ್ಷಗಾನೀಯವಾಗಿ ಮಾತನಾಡುವುದಕ್ಕೂ ವ್ಯಕ್ತಿ ವಿಶಿಷ್ಟ ಶೈಲಿಗಳಿವೆ ಎಂಬ ಸಂಗತಿಯೇ ಕಲಾವಿದರ ಗಮನಕ್ಕೆ ಬಂದಂತಿಲ್ಲ.

ಇಂದು ರಂಗದ ಮೇಲೆ ಆಡುವ ಯಕ್ಷಗಾನದ ಶೈಲಿಯ ಮಾತುಗಾರಿಕೆಯು ಏಕ ಸ್ವರೂಪವನ್ನು ಹೊಂದಿ ಏಕತಾನತೆಯನ್ನು ಉಂಟುಮಾಡುತ್ತಿರುವುದಕ್ಕೆ ಈ ವೈಯಕ್ತಿಕ ಶೈಲಿಯ ವೈವಿಧ್ಯತೆಯನ್ನು ಅನುಸರಿಸುವ ಅಥವಾ ಕೊನೆಯ ಪಕ್ಷ ಅನುಕರಣೆ ಮಾಡುವ ಪ್ರಯತ್ನವನ್ನೂ ಕಲಾವಿದರು ಮಾಡದಿರುವುದೇ ಮುಖ್ಯ ಕಾರಣವಾಗಿದೆ ಎನ್ನಬಹುದು. ಇದು ಕಲಿಕೆಯ ಹಂತದ ಮಾತಿನ ನಿರ್ಲಕ್ಷದಿಂದಲೇ ಬೆಳೆದ ಧೋರಣೆಯಲ್ಲದೆ ಬೇರಲ್ಲ. ಯಕ್ಷಗಾನದ ಇತಿಹಾಸದಲ್ಲಿ ಆಗಿ ಹೋದ ಅನೇಕ ಹಿರಿಯ ಕಲಾವಿದರು ಮಾತುಗಾರಿಕೆಯಲ್ಲಿ [ಇಲ್ಲಿ ಮಾತುಗಾರಿಕೆಯೆಂದರೆ ಶೇಣಿ-ಸಾಮಗರ ತಾಳಮದ್ದಳೆಯ ಅರ್ಥಗಾರಿಕೆಯಲ್ಲ-ಬದಲಿಗೆ ಶ್ರುತಿ, ಸ್ವರ ಮತ್ತು ಲಯಬದ್ಧವಾಗಿ ಹಾಗೂ ರಸಾನುಗುಣವಾಗಿ ವೇಷಕಟ್ಟಿ 'ರಂಗಗುಣ' ಹೊಂದಿರುವ ಮಾತನಾಡುವ ಶೈಲಿ ಎಂದು ಮಾತ್ರ ಅರ್ಥ] ಹೊಸ ಆವಿಷ್ಕಾರ ಮಾಡಿದವರಿದ್ದಾರೆ. ಉದಾಹರಣೆಗೆ ಕೆರೆಮನೆ ಮಹಾಬಲ ಹೆಗಡೆ, ಶಂಭು ಹೆಗಡೆ, ಚಿಟ್ಟಾಣಿ, ಜಲವಳ್ಳಿ ವೆಂಕಟೇಶ ರಾವ್, ಕೆ. ಗೋವಿಂದ ಭಟ್ ಮೊದಲಾದವರು ರಂಗದಲ್ಲಿ ಮಾತನಾಡುವ ಪರಿಯು ಶ್ರುತಿ, ಲಯ ಬದ್ಧ ಹಾಗೂ ಪಾತ್ರೋಚಿತವಾಗಿ ಯಕ್ಷಗಾನದ ಆವರಣವನ್ನು ನಿರ್ಮಾಣಮಾಡುವಂತಹುದಾಗಿದೆ. ಶಂಭು ಹೆಗಡೆ ಚಿಟ್ಟಾಣಿಯವರ ನರ್ತನವನ್ನು ಅನುಕರಿಸುವವರೂ ಮಾತನಾಡಲು ತೊಡಗಿದರೆ ಮತ್ತೆ ತಮ್ಮ ಎಂದಿನ ಸವಕಲು ಶೈಲಿಯಲ್ಲಿಯೇ ಶುರುವಿಟ್ಟುಕೊಳ್ಳುವುದನ್ನು ಯಾರು ಬೇಕಾದರೂ ಗಮನಿಸಬಹುದು.

ಯಕ್ಷಗಾನ ತಾಳಮದ್ದಳೆಯ ದಿಗ್ಗಜರು - ಶೇಣಿ ಗೋಪಾಲಕೃಷ್ಣ ಭಟ್ ಮತ್ತು ಮಲ್ಪೆ ರಾಮದಾಸ ಸಾಮಗರು
ಪ್ರಬುದ್ಧ ಕಲಾವಿದನ ಮಾತಿನಲ್ಲಿ ಮಾತು ಮತ್ತು ಧಾತು ಎರಡೂ ಬೇರ್ಪಡಿಸಲಾಗದಂತೆ ಒಂದರೊಳಗೊಂದು ಬೆಸದುಕೊಂಡಿದ್ದು ಇದು ಅನುಕರಣೆಗೆ ನಿಲುಕುವುದಲ್ಲ ಮತ್ತು ಅನುಸರಿಸಲು ಕೂಡ ಸೂಕ್ಷ್ಮ ಸಂವೇದನಾ ಶೀಲತೆ ಮತ್ತು ಅಧ್ಯಯನ ಇವೆರಡರ ಅಗತ್ಯವೂ ಇರುವುದರಿಂದ ಈ ವಿಭಾಗ ನಿರ್ಲಕ್ಷಕ್ಕೆ ಒಳಗಾಗಿದೆ ಎಂದು ಬಗೆಯಬಹುದು. ಕಲಿಕೆಯ ಉದ್ದೇಶಕ್ಕಾಗಿ ಹಾಗೂ ಸಂಶೋಧನೆಯ ಆಕರವಾಗಿಯೂ ಈ ಎಲ್ಲ ಕಲಾವಿದರ ಮಾತಿನ ಶೈಲಿಯನ್ನು ಸಂಗ್ರಹಿಸಿ ವ್ಯವಸ್ಥಿತವಾಗಿ ದಾಖಲಿಸುವ ಅಗತ್ಯವಿದೆ. ಈ ಶೈಲಿಗಳನ್ನು ಪ್ರಯತ್ನಪೂರ್ವಕವಾಗಿ ಯಕ್ಷಗಾನದ ವಿದ್ಯಾರ್ಥಿಗಳು ಅಳವಡಿಸಿಕೊಳ್ಳುವಂತೆ ಸೂಕ್ತ ಒತ್ತಡವು ಯಕ್ಷಗಾನದ ಪ್ರಾಥಮಿಕ ಕಲಿಕೆಯ ಹಂತದಲ್ಲಿಯೇ ಬರಬೇಕಾದ ಅಗತ್ಯ ಸರ್ವಥಾ ಇದೆ.

ಆಧುನಿಕ ತಲೆಮಾರಿನ ಯುವ ಕಲಾವಿದರಲ್ಲಿ-ಅವರು ಮಕ್ಕಳಿರಲಿ, ಮಹಿಳೆಯರಿರಲಿ, ವೃತ್ತಿ ಅಥವಾ ಹವ್ಯಾಸೀ ಕಲಾವಿದರಿರಲಿ ಅಧ್ಯಯನದ ಕೊರತೆ ಎದ್ದು ತೋರುತ್ತದೆ. ಇದಕ್ಕೆ ಕಾರಣ ಪ್ರಾಯೋಗಿಕ ತಂತ್ರಾಂಶಗಳ ಕಲಿಕೆಯ ಜೊತೆಜೊತೆಗೆ ಅಧ್ಯಯನಶೀಲತೆಯನ್ನು ಉದ್ದೀಪಿಸುವ ಯಕ್ಷಶಿಕ್ಷಣ ಇಲ್ಲದಿರುವುದೇ ಆಗಿದೆ. ಕಲಾವಿದನೊಬ್ಬ ತನ್ನ ಕಲಾ ಜೀವನದ ಯಾವುದೋ ಒಂದು ಹಂತದಲ್ಲಿ ಅಧ್ಯಯನದಲ್ಲಿ ಆಸಕ್ತಿ ಬೆಳೆಸಿಕೊಳ್ಳಲಾರ; ಅದು ಅವನ ಕಲಿಕೆಯ ಪ್ರಾರಂಭದಿಂದಲೇ ಬೆಳೆಸಲ್ಪಡಬೇಕಾಗುತ್ತದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಯಕ್ಷಶಿಕ್ಷಣದ ಸ್ವರೂಪ ಅಮೂಲಾಗ್ರ ಬದಲಾವಣೆಯನ್ನು ನಿರೀಕ್ಷಿಸುತ್ತಿದೆ.

ಉನ್ನತ ತರಬೇತಿ

ವೃತ್ತಿ ಮೇಳಗಳಲ್ಲಿ ಮತ್ತು ಹವ್ಯಾಸಿಗಳಲ್ಲಿ ಅನೇಕ ಕಲಾವಿದರು ಒಂದು ಹಂತದವರೆಗೆ ಭರವಸೆಯನ್ನು ಮೂಡಿಸಿ ಜನಪ್ರಿಯರಾಗುತ್ತಾರೆ ಆದರೆ ಮುಂದೆ ಅವರ ಬೆಳವಣಿಗೆಯು ನಿಂತುಹೋಗುವುದನ್ನು ನಾವು ಕಾಣುತ್ತಿದ್ದೇವೆ. ಒಂದು ಹಂತದಲ್ಲಿ ವೃತ್ತಿಯಲ್ಲಿ ಮನ್ನಣೆ ದೊರೆತ ಮೇಲೆ ಮುಂದೆ ತಮ್ಮ ಸಾಮರ್ಥ್ಯವನ್ನು ವರ್ಧಿಸಿಕೊಳ್ಳುವುದು ಅಗತ್ಯವಿಲ್ಲದಿರುವುದು ಇದಕ್ಕೆ ಒಂದು ಕಾರಣವಾದರೆ ಹೆಚ್ಚಿನ ತರಬೇತಿಯ ಅವಕಾಶವಿಲ್ಲದಿರುವುದು ಇದಕ್ಕೆ ಇನ್ನೊಂದು ಕಾರಣ. ರಂಗಭೂಮಿಯ ಸಿದ್ಧಮಾದರಿಯನ್ನು ಮುರಿದು ಕಲೆಯ ಸ್ವರೂಪದ ಚೌಕಟ್ಟಿನೊಳಗೆ ಪ್ರಬುದ್ಧವಾದ ಭಿನ್ನ ಮಾದರಿಯನ್ನು ಕೊಡುವುದಕ್ಕೆ ಹೆಚ್ಚಿನ ಮಾರ್ಗದರ್ಶನ ಮತ್ತು ಸಾಮರ್ಥ್ಯದ ಅಗತ್ಯವಿದೆ. ಹಿಂದಿನ ತಲೆಮಾರುಗಳಲ್ಲಿ ಹಿರಿಯ ಕಲಾವಿದರ ನಿರಂತರ ಒಡನಾಟದಲ್ಲಿ ಇದು ಅಂದಿನ ಉದಯೋನ್ಮುಖರಿಗೆ ಸಾಧ್ಯವಾಗುತ್ತಿತ್ತು. ಇಂದು ಪ್ರದರ್ಶನದ ಸ್ವರೂಪ ಬದಲಾಗಿರುವುದರಿಂದ ಬಾಹ್ಯ ಉನ್ನತ ತರಬೇತಿ ಮತ್ತು ಮಾರ್ಗದರ್ಶನದಿಂದ ಮಾತ್ರ ಇದು ಸಾಧ್ಯ.

ಈಗಾಗಲೇ ನೃತ್ಯ ಅಭಿನಯ ಮೊದಲಾದ ತಾಂತ್ರಿಕ ಅಂಶಗಳಲ್ಲಿ ಸಾಕಷ್ಟು ಪರಿಣತಿಯನ್ನು ಸಾಧಿಸಿದ ಉದಯೋನ್ಮುಖರಿಗೆ ಹೆಚ್ಚಿನ ತರಬೇತಿಯನ್ನು ನೀಡುವ ಅಗತ್ಯವಿದೆ. ಈ ತರಬೇತಿಯು 'ರೆಪರ್ಟರಿ' ಮಾದರಿಯಲ್ಲಿ ಕಲಾವಿದರು ಒಂದು ಕಡೆ ದುಡಿಯುತ್ತ ಇನ್ನೊಂದು ಕಡೆ ಹೆಚ್ಚಿನ ತರಬೇತಿಯನ್ನೂ ಪಡೆಯುವಂತಿರಬೇಕಾದುದು ಅನಿವಾರ್ಯ. ಯಕ್ಷಗಾನದಲ್ಲಿಯೂ ನಿರ್ದೇಶನದ ಅಗತ್ಯವಿದೆ ಎಂಬ ಕೂಗು ಇತ್ತೀಚೆಗೆ ಕೇಳಿಬರುತ್ತಿದ್ದು ನಿರ್ದೇಶನಕ್ಕೆ ಒಗ್ಗಿಕೊಳ್ಳುವ ಮನೋಧರ್ಮವನ್ನು ಬೆಳೆಸುವಂತೆ ಕೂಡ ಈ ಉನ್ನತ ತರಬೇತಿಯ ವ್ಯವಸ್ಥೆಯನ್ನು ಕಲ್ಪಿಸಬಹುದು. ಉನ್ನತ ತರಬೇತಿಯ ವ್ಯವಸ್ಥೆಯನ್ನು ತಜ್ಞರ ಅಭಿಮತದಂತೆ ರೂಪಿಸುವ ಅಗತ್ಯವಿದೆ.

ಶಿಕ್ಷಣದಲ್ಲಿ ಯಕ್ಷಗಾನ

ಯಕ್ಷಗಾನವು ಕನ್ನಡ ಸಂಸ್ಕೃತಿ ಸಮುದಾಯದ ಪ್ರಾತಿನಿಧಿಕ ರಂಗಕಲೆಯಾದುದರಿಂದ ಪ್ರಾಥಮಿಕ ಶಾಲಾ ಹಂತದಲ್ಲಿಯೇ ಯಕ್ಷಗಾನದ ಕುರಿತು ಮಾಹಿತಿಯನ್ನು ನೀಡುವ ಪಾಠಗಳನ್ನು ಅಳವಡಿಸಿ ಕಲೆಯ ಕುರಿತು ಅರಿವನ್ನು ಮೂಡಿಸುವ ಯೋಜನೆಯು ಸರ್ಕಾರದ ಮುಂದಿದೆ. ಇದರಿಂದ ಯಕ್ಷಗಾನವು ಪ್ರಚಲಿತವಿಲ್ಲದ ಕಡೆಗಳಲ್ಲಿಯೂ ಯಕ್ಷಗಾನದ ಕುರಿತು ಮಾಹಿತಿ ಪ್ರಸರಣವಾಗಿ ಈ ರಂಗಭೂಮಿಗೆ ಹೆಚ್ಚಿನ ಮಾನ್ಯತೆ ದೊರೆಯಬಹುದು. ಇದರ ಜೊತೆಯಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ಪಠ್ಯದಲ್ಲಿ ಐಚ್ಛಿಕ ವಿಷಯವಾಗಿ ಯಕ್ಷಗಾನವನ್ನು ಕಲಿಸುವ ಪ್ರಸ್ತಾವನೆಯೂ ಸರ್ಕಾರದ ಮುಂದಿದೆ. ಈ ಹಂತದಲ್ಲಿ ವಿವರಿಸಿದಂತೆ ಅರ್ಹ ಶಿಕ್ಷಕರನ್ನು ಮೊದಲು ತರಬೇತುಗೊಳಿಸಿಕೊಂಡು ಸರ್ಕಾರ ಮುಂದುವರಿಯಬೇಕಿದೆ. ಅದಲ್ಲವಾದರೆ ಸರ್ಕಾರಿ ನೌಕರಿಯೆಂದು ಅನರ್ಹರೂ ವಾಮ ಮಾರ್ಗದಿಂದ ಶಿಕ್ಷಕರಾಗಿ ಯಕ್ಷಶಿಕ್ಷಣದ ಗುಣಮಟ್ಟ ಕೆಡಬಹುದು. ಈ ಅಪಾಯವು ಕೆಲ ಮಟ್ಟಿಗೆ ಸಂಗೀತ-ನೃತ್ಯದ ಸಂದರ್ಭದಲ್ಲಿ ಘಟಿಸಿದುದನ್ನು ಇಲ್ಲಿ ಗಮನಿಸುವುದು ಅಗತ್ಯ.

ವಿಶ್ವವಿದ್ಯಾಲಯ ಮತ್ತು ಯಕ್ಷಗಾನ

ಶಾಸ್ತ್ರೀಯ ಸಂಗೀತ ಮತ್ತು ಶಾಸ್ತ್ರೀಯ ನೃತ್ಯವನ್ನು ವಿಶ್ವವಿದ್ಯಾಲಯ ಮಟ್ಟದಲ್ಲಿ ಅಳವಡಿಸಿ ಆ ವಿಭಾಗಗಳಲ್ಲಿ ಸ್ನಾತಕೋತ್ತರ ಪಡವಿಯನ್ನು ಕೊಡುವ ವ್ಯವಸ್ಥೆಯನ್ನು ಕಲ್ಪಿಸಿ ಬಹಳ ಕಾಲವಾಯಿತು. ಇದೇ ಮಾದರಿಯಲ್ಲಿ ಯಕ್ಷಗಾನಕ್ಕೂ ಸ್ಥಾನ ಕಲ್ಪಿಸುವುದಕ್ಕೆ ಇನ್ನೂ ಕಾಲ ಪರಿಪಕ್ವವಾದಂತೆನಿಸುವುದಿಲ್ಲ. ಯಕ್ಷಗಾನವು ಮೇಳಕಲೆಯಾಗಿರುವುದರಿಂದ ವಿಶ್ವವಿದ್ಯಾಲಯದ ಸ್ನಾತಕೋತ್ತರ ಮಾದರಿಯ ಶಿಕ್ಷಣಕ್ಕೆ ಇದು ಒಗ್ಗಿಕೊಳ್ಳಬಹುದೇ ಎಂಬ ಅಂಶವನ್ನು ಶಿಕ್ಷಣ ತಜ್ಞರು ಮತ್ತು ಯಕ್ಷಗಾನದಲ್ಲಿ ಗತಿಯಿರುವ ಪ್ರಾಜ್ಞರು ಕುಳಿತು ಮೊದಲು ಚರ್ಚಿಸಬೇಕಾಗಿದೆ. ಅಂತಹ ಪದವಿಗೆ ಬೇಕಾದ ಪಠ್ಯದ ರಚನೆ, ತರಬೇತಿದಾರರ ಅಥವಾ ಉಪನ್ಯಾಸಕರ ನೇಮಕ, ಮೂಲಭೂತ ಸೌಕರ್ಯ, ವಿಶ್ವವಿದ್ಯಾಲಯ ಅನುದಾನ ಸಮಿತಿಯ ಮಾನ್ಯತೆ-ಇವೆಲ್ಲ ತುಂಬ ಗಹನವಾದ ವಿಚಾರವಾಗಿದ್ದು ಅವಸರದಲ್ಲಿ ತೀರ್ಮಾನಿಸುವಂತಹದಲ್ಲ.

ಇದರ ಬದಲಿಗೆ ಮೊದಲು ವಿಶ್ವವಿದ್ಯಾಲಯಕ್ಕೆ ಅಧೀನವಾಗಿ ಯಕ್ಷಗಾನ ಅಧ್ಯಯನ ಕೇಂದ್ರವನ್ನು ಸರ್ಕಾರ ರಚಿಸಬಹುದು ಮತ್ತು ಹಾಗೆ ರಚಿಸುವಂತೆ ಯಕ್ಷಗಾನದ ಕಲಾವಿದ ಸಮುದಾಯ, ಸಂಘ-ಸಂಸ್ಥೆಗಳು ಸರ್ಕಾರವನ್ನು ಒತ್ತಾಯಿಸಬಹುದು. ಇಂತಹ ಅಧ್ಯಯನ ಕೇಂದ್ರಗಳಲ್ಲಿ ಮೊದಲಿಗೆ ಯಕ್ಷಗಾನದ ವಿವಿಧ ಅಂಗೋಪಾಂಗಗಳ ಮೇಲೆ ಸ್ನಾತಕೋತ್ತರ ಡಿಪ್ಲೋಮಾ ತರಗತಿಯನ್ನು ಪ್ರಾರಂಭಿಸಬಹುದು. ಹಾಗೆ ಡಿಪ್ಲೋಮಾ ಪ್ರಮಾಣಪತ್ರವನ್ನು ಪಡೆದವರು ಯಕ್ಷಗಾನ ತರಬೇತಿಯನ್ನು ನೀಡಲೂ, ಶಿಕ್ಷಕರಾಗಲೂ ಅರ್ಹರೆಂಬಂತೆ ನಿಯಮ ರೂಪಿಸಬಹುದು. ಈಗಾಗಲೇ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಅಧೀನವಾಗಿ 'ಡಾ. ದಯಾನಂದ ಪೈ ಮತ್ತು ಶ್ರೀ ಸತೀಶ ಪೈ ಯಕ್ಷಗಾನ ಅಧ್ಯಯನ ಕೇಂದ್ರ'ವು ಸ್ಥಾಪಿತವಾಗಿದ್ದು ಅಲ್ಲಿ ಇಂತಹ ಉನ್ನತ ಯಕ್ಷಶಿಕ್ಷಣದ ಪ್ರಯೋಗಗಳನ್ನು ಮೊದಲಿಗೆ ಕೈಗೊಂಡು ಸಾಧಕ ಬಾಧಕಗಳನ್ನು ಗಮನಿಸಿ ಮುಂದುವರಿಯಬಹುದು.

ಅದೇ ರೀತಿಯಲ್ಲಿ ಶಿವಮೊಗ್ಗಾ ಜಿಲ್ಲೆಯ ಕುವೆಂಪು ವಿಶ್ವವಿದ್ಯಾಲಯದಿಂದ ಸಾಗರದಂತಹ ಯಕ್ಷಗಾನದ ಗಂಡುಮೆಟ್ಟಿನ ಸ್ಥಳದಲ್ಲಿಯೂ ಧಾರವಾಡ ವಿಶ್ವವಿದ್ಯಾಲಯಕ್ಕೆ ಅಧೀನವಾಗಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಂತಹ ಕೇಂದ್ರ ಸ್ಥಾನದಲ್ಲಿಯೂ ಯಕ್ಷಗಾನ ಅಧ್ಯಯನ ಪೀಠವನ್ನು ಸ್ಥಾಪಿಸುವಂತೆ ಪ್ರಯತ್ನ ನಡೆಯಬೇಕಾಗಿದೆ. ಜಾತಿ ಪಂಥಗಳಿಗೆ ಸಂಬಂಧಿಸಿದಂತೆ ಅಗತ್ಯವಿರಲಿ ಇಲ್ಲದಿರಲಿ ಪ್ರತಿಷ್ಠೆಗಾಗಿ ಅನೇಕ ಅಧ್ಯಯನ ಪೀಠಗಳನ್ನು ರಚಿಸಿರುವ ಸರ್ಕಾರವನ್ನು, ಪಶ್ಚಿಮ ಕರ್ನಾಟಕದಾದ್ಯಂತ ಜನಮನದ ಸಾಂಸ್ಕೃತಿಕ ಜೀವನಾಡಿಯಾಗಿರುವ ಜೀವಂತ ರಂಗಕಲೆಯೊಂದರ ಪುನರುಜ್ಜೀವನಕ್ಕಾಗಿ ಅಧ್ಯಯನ ಪೀಠವನ್ನು ಸ್ಥಾಪಿಸುವಂತೆ, ಯಕ್ಷಗಾನದ ಪ್ರದೇಶವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ಮನಸ್ಸು ಮಾಡಿದರೆ, ಒತ್ತಾಯಿಸಿ ಮಣಿಸುವುದು ಕಷ್ಟದ ಕೆಲಸವೇನೂ ಅಲ್ಲ. ಆದರೆ ಈ ಸಂದರ್ಭದಲ್ಲಿ ಜಿಲ್ಲೆ, ಪ್ರದೇಶ ಮೊದಲಾದ ಸಂಕುಚಿತ ದೃಷ್ಟಿಯನ್ನು ಹತ್ತಿಕ್ಕಿ ಉದಾರ ಮನೋಭಾವದಿಂದ ಪ್ರಯತ್ನಿಸುವ ಉತ್ಸಾಹ ಯಕ್ಷಗಾನ ಸಮುದಾಯಕ್ಕಿರಬೇಕಾಗುತ್ತದೆ.

ಯಕ್ಷಗಾನ ರಂಗಭೂಮಿಯು ಇಂದು ದೇಶ ವಿದೆಶಗಳಲ್ಲಿ ಮನ್ನಣೆಯನ್ನು ಪಡೆಯುತ್ತಿದ್ದರೂ ತನ್ನ ತವರು ನೆಲದಲ್ಲಿ ಸೊರಗುತ್ತಿರುವುದು ವಿಷಾದನೀಯ. ಇದಕ್ಕೆ ಸಮುದಾಯದ ಅವಜ್ಞೆ, ಅತಿವ್ಯಾಪಾರೀಕರಣ, ದೂರದರ್ಶಿತ್ವದ ಕೊರತೆ, ಸಮರ್ಥ ಸಾಂಸ್ಕೃತಿಕ ನಾಯಕತ್ವದ ಕೊರತೆ, ಅವ್ಯವಸ್ಥಿತ ಯಕ್ಷಶಿಕ್ಷಣ ಎಲ್ಲವೂ ಕಾರಣವಾಗಿದೆ. ಯಕ್ಷಶಿಕ್ಷಣದ ಸವಾಲುಗಳನ್ನು ಸಮರ್ಥವಾಗಿ ಎದರಿಸುವುದರ ಮೂಲಕ ಈ ರಂಗಭೂಮಿಯ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಅದಕ್ಕೆ ಪ್ರಬಲ ಇಚ್ಛಾಶಲ್ತಿ ಮತ್ತು ಸಂಘಟಿತ ಪ್ರಯತ್ನದ ಅಗತ್ಯವಿದೆ. ಇತ್ತೀಚೆಗೆ ಸರ್ಕಾರ ಯಕ್ಷಶಿಕ್ಷಣ ಕೊಡುವ ಯೋಜನೆಯನ್ನು ಸಿದ್ಧಪಡಿಸಿದೆ ಆದರೆ ಸ್ವರೂಪ, ಸಾಧಕ, ಬಾಧಕಗಳನ್ನು ಇನ್ನೂ ತಿಳಿಯಬೇಕಷ್ಟೆ.

****************
ಸಮಗ್ರ ಲೇಖನ : ಯಕ್ಷಗಾನ ಶಿಕ್ಷಣ ಹೇಗಿರಬೇಕು? (ಭಾಗ-1)



Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
prashanth(7/15/2015)
Thank you for your detailed Yaksha Shikshana.... article. My son is 6 year old and has been interested (Particularly in Badagutittu) in Yakshagana. Could you please provide me the address & contact numbers of who have teaching yakhagana in Mangalore.




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ