ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಯಕ್ಷಸಾಧಕರಿಗೆ ಸಮ್ಮಾನ

ಲೇಖಕರು :
ಎಂ. ಶಾಂತಾರಾಮ ಕುಡ್ವ
ಶುಕ್ರವಾರ, ಜುಲೈ 24 , 2015
ಮೂಡುಬಿದಿರೆಯ ಯಕ್ಷಸಂಗಮ ಕಳೆದ 15 ವರ್ಷಗಳಿಂದ ಪ್ರತಿವರ್ಷ ಇಬ್ಬರು ಯಕ್ಷಗಾನ ಕಲಾವಿದರನ್ನು ಸಮ್ಮಾನಿಸುತ್ತ ಬಂದಿದೆ. 16ನೇ ವರ್ಷದ ಈ ಸಾಲಿನ ಕಾರ್ಯಕ್ರಮ ಜು.25, 2015ರಂದು ರಾತ್ರಿ 9.00ಕ್ಕೆ ನಡೆಯಲಿದ್ದು , ಸುಪ್ರಸಿದ್ಧ ಅಗರಿ ರಘುರಾಮ ಭಾಗವತರು ಹಾಗೂ ಹಿರಿಯ ಬಣ್ಣದ ವೇಷಧಾರಿ ದಾಸನಡ್ಕ ರಾಮ ಕುಲಾಲ್‌ ಇವರನ್ನು ಸಮ್ಮಾನಿಸಲಿದೆ.

ಅಗರಿ ರಘುರಾಮ ಭಾಗವತರು

ತೆಂಕುತಿಟ್ಟಿನ ಸುಪ್ರಸಿದ್ಧ ಭಾಗವತ, ಪ್ರಾತಃಸ್ಮರಣೀಯ ರಂಗ ನಿರ್ದೇಶಕ ರಾದ ಅಗರಿ ಶ್ರೀನಿವಾಸ ಭಾಗವತರು - ರುಕ್ಮಿಣಿ ಅಮ್ಮ ದಂಪತಿಯ ಸುಪುತ್ರ ಅಗರಿ ರಘುರಾಮ ಭಾಗವತರು ತಂದೆಯವರನ್ನು ಗುರುವಾಗಿ ಸ್ವೀಕರಿಸಿ ಭಾಗವತಿಕೆ ಕಲಿತರು. ವಿದ್ಯಾ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರೂ ಯಕ್ಷಗಾನದ ಸೆಳೆತ ತೀವ್ರವಾದ ಕಾರಣ 9 ವರ್ಷಗಳ ದುಡಿಮೆಗೆ ರಾಜೀನಾಮೆ ನೀಡಿ ಅಂದಿನ ಕಾಲದ ಸುಪ್ರಸಿದ್ಧ ಮೇಳವಾದ ಕಸ್ತೂರಿ ಪೈ ಸಹೋದರರ ಸುರತ್ಕಲ್‌ ಮೇಳದ ಪ್ರಧಾನ ಭಾಗವತರಾಗಿ ಸೇರಿದರು.

ಅಗರಿ ರಘುರಾಮ ಭಾಗವತರು ಅಗರಿ ಶೈಲಿಯ ಸಮರ್ಥ ಉತ್ತರಾಧಿಕಾರಿ. ರಘುರಾಮ ಭಾಗವತರ ಭಾಗವತಿಕೆಯಲ್ಲಿ ಸಾಹಿತ್ಯ ಶುದ್ಧಿ, ಸಂಗೀತ ಸಿದ್ಧಿ, ಶ್ರುತಿ- ರಾಗ - ಲಯಗಳಲ್ಲಿ ಪ್ರಭುತ್ವ ಇತ್ತು. ಸಾಹಿತ್ಯಾಂಶದ ರಸಪೋಷಣೆ, ರಸಭಾವ ಹೊಂದಿಕೊಂಡು ರಾಗ ಸಂಯೋಜನೆ, ಸ್ಪಷ್ಟ ಉಚ್ಚಾರ, ಅರ್ಥಾಭಿವ್ಯಕ್ತಿಯುಕ್ತ ಯತಿ ವಿನ್ಯಾಸ, ತಾಳಶುದ್ಧಿ, ಪರಂಪರೆಗೆ ಮಾನ್ಯತೆ, ಸ್ವರಗಳ ಸೂಕ್ತ ಏರಿಳಿತಗಳ ಸಮಪಾಕ ದೊಂದಿಗೆ ಇವರ ಭಾಗವತಿಕೆ ಶ್ರೋತೃಗಳನ್ನು ಆಕರ್ಷಿಸುತ್ತದೆ. ಅಶು ಕವಿಗಳಾದ ರಘುರಾಮ ಭಾಗವತರು ತಮ್ಮ ತಂದೆಯವರಂತೆ ಕಂಠ ಪಾಠದಲ್ಲೇ ಪದ್ಯ ಹೇಳುತ್ತಿದ್ದು, ಉತ್ತಮ ಸ್ಮರಣ ಶಕ್ತಿ, ಕವಿತಾ ಶಕ್ತಿ ಹೊಂದಿದ್ದರು. ತನ್ನ ಕಾಲದಲ್ಲಿ ಹೊಸ ಪ್ರಸಂಗಗಳು ರಂಗಕ್ಕೆ ಬರಲಾರಂಭಿ ಸಿದಾಗ ಆ ಪ್ರಸಂಗಗಳು ಯಕ್ಷಗಾನಕ್ಕೆ ಹೊಂದುವಂತೆ ನಿರ್ದೇಶನವನ್ನು ನೀಡುತ್ತಿದ್ದುದು ಇವರ ಕಲಾಶಕ್ತಿಗೆ ಉದಾಹರಣೆ. ಇವರು ಸುರತ್ಕಲ್‌ ಒಂದೇ ಮೇಳದಲ್ಲಿ 35 ವರ್ಷಗಳ ಕಾಲ ದುಡಿದು ನಿವೃತ್ತರಾದರು.

ದಾಸನಡ್ಕ ರಾಮ ಕುಲಾಲ್‌

ತೆಂಕುತಿಟ್ಟಿನಲ್ಲಿ ಬಣ್ಣದ ವೇಷಕ್ಕೊಂದು ಪ್ರತ್ಯೇಕ ಸ್ಥಾನವಿದೆ. ಅರ್ಧ ಅಥವಾ ಒಂದು ಗಂಟೆ ಮಾತ್ರ ರಂಗದಲ್ಲಿ ಇರುವ ಈ ಪಾತ್ರಕ್ಕೆ ಬಣ್ಣ ಹಚ್ಚಲು ನಾಲ್ಕರಿಂದ ಐದು ಗಂಟೆಗಳಷ್ಟು ಸಮಯ ಬೇಕೆನ್ನುವುದು ಆಶ್ಚರ್ಯದ ಸಂಗತಿ. ಬಣ್ಣದ ವೇಷ ಮಾಡುವುದು ಎಲ್ಲರಿಗೂ ಸಿದ್ಧಿಸುವ ಕಲೆಯಲ್ಲ. ಅದಕ್ಕೆ ಏಕಾಗ್ರತೆ ಹಾಗೂ ಕಠಿನ ಪರಿಶ್ರಮ ಅಗತ್ಯ.

ಈಗಿನ ಬಣ್ಣದ ವೇಷಧಾರಿ ಕಲಾವಿದರಲ್ಲಿ ಅಗ್ರಗಣ್ಯರು ದಾಸನಡ್ಕ ರಾಮ ಕುಲಾಲ್‌. ಕುಂಞ ಮೂಲ್ಯ -ಅಪ್ಪು ದಂಪತಿಯ ಸುಪುತ್ರರಾಗಿ ಜನಿಸಿದ ಕುಲಾಲರು ಕುಂಬಳೆ ಬಳಿಯ ಚೇವಾರು ಶಾಲೆಯಲ್ಲಿ 8ನೇ ತರಗತಿವರೆಗೆ ವಿದ್ಯಾಭ್ಯಾಸ ಮುಗಿಸಿ ಯಕ್ಷಗಾನದತ್ತ ಹೊರಳಿದರು. ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಮಧೂರು ತಿಮ್ಮಪ್ಪರ ಶಿಷ್ಯತ್ವ ಸ್ವೀಕರಿಸಿದ ಕುಲಾಲರು, ಯಕ್ಷಗಾನದ ಪ್ರಾಥಮಿಕ ಹೆಜ್ಜೆ, ಮಾತುಗಾರಿಕೆ ಅಭ್ಯಸಿಸಿದರು. ತಮ್ಮ 18ರ ಹರೆಯದಲ್ಲೇ ಕುತ್ಯಾಳ ಗೋಪಾಲಕೃಷ್ಣ ದೇವರ ಸಮ್ಮುಖದಲ್ಲಿ ಗೆಜ್ಜೆ ಕಟ್ಟಿ ಯಕ್ಷಗಾನಕ್ಕೆ ಪೂರ್ಣಪ್ರಮಾಣದಲ್ಲಿ ಸೇರ್ಪಡೆಯಾದರು. ಕೂಡ್ಲು, ಧರ್ಮಸ್ಥಳ, ಭಗವತಿ, ನಂದಾವರ, ಕೊಲ್ಲೂರು, ಸುಂಕದ ಕಟ್ಟೆ, ಚೌಡೇಶ್ವರಿ (ಮಡಿಕೇರಿ), ಸ್ವರ್ನಾಡು ಮುಂತಾದ ಮೇಳಗಳಲ್ಲಿ ದುಡಿದು ಅಪಾರ ಪ್ರಸಿದ್ಧಿಗಳಿಸಿದರು. ಮುಂದೆ ಕಟೀಲು ಮೇಳ ಸೇರಿದ ಕುಲಾಲರು 20 ವರ್ಷಗಳ ತಿರುಗಾಟ ನಡೆಸಿ 2012ರಲ್ಲಿ ನಿವೃತ್ತ ರಾದರು. ಕುಲಾಲರ ಬಣ್ಣದ ವೇಷ ನೋಡಲು ಆಕರ್ಷಕ. ಘೋರ ಗರುಡ, ವಜ್ರದುಂಬಿ, ಮಹಿಷಾಸುರ ಮುಂತಾದ ಪಾತ್ರಗಳಲ್ಲಿ ಕುಲಾಲರು ಬಣ್ಣಗಾರಿಕೆಯಲ್ಲಿ ಹೊಸ ಹೊಸ ಆವಿಷ್ಕಾರ ಮಾಡಿದವರು.

ದೈತ್ಯ ಪಾತ್ರಗಳಲ್ಲಿ ಮಿಂಚಿ ಆ ಪಾತ್ರಗಳ ಕ್ರೂರ ಭಾವವನ್ನು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸುವ ಕುಲಾಲರು ನಿಜ ಜೀವನದಲ್ಲಿ ಸಾತ್ವಿಕ, ಸರಳ, ಮುಗ್ಧ ಸ್ವಭಾವದವರು. ಸಹಕಲಾವಿದರನ್ನು ಹೊಂದಿಕೊಂಡು, ಮಾರ್ಗದರ್ಶನ ನೀಡುವ ಕುಲಾಲರು ಮೇಳದಲ್ಲಿ ಸಭ್ಯ ಕಲಾವಿದರೆಂದೇ ಗುರುತಿಸಲ್ಪಟ್ಟ ವರು. ನಿರಂತರ 52 ವರ್ಷಗಳ ಯಕ್ಷಗಾನ ತಿರುಗಾಟ ನಡೆಸಿದ ಕುಲಾಲರಿಗೆ ಈಗಲೂ ಬಣ್ಣಹಚ್ಚುವ ಆಶೆಯಿದ್ದರೂ ಆರೋಗ್ಯವೇ ತೊಡಕಾಗಿ ನಿವೃತ್ತರಾಗಿ ಮನೆಮಂದಿಯೊಂದಿಗಿದ್ದಾರೆ.

ಕೃಪೆ : http://www.udayavani.com


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ