ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸ೦ದರ್ಶನ
Share
ನನ್ನ ಉಸಿರಿರುವವರೆಗೂ ಯಕ್ಷಗಾನಕ್ಕಾಗಿ ಕೆಲಸ ಮಾಡಿಯೇ ಮಾಡುತ್ತೇನೆ : ಹೊಸ್ತೋಟ

ಲೇಖಕರು :
ಕಡತೋಕಾ ಗೋಪಾಲಕೃಷ್ಣ ಭಾಗವತ
ಬುಧವಾರ, ಜುಲೈ 29 , 2015

ಯಕ್ಷಗಾನದ ಭೀಷ್ಮ ಎಂದೇ ಖ್ಯಾತರಾಗಿರುವ ಎಪ್ಪತ್ತೊಂದರ ಹರೆಯದ ಹೊಸ್ತೋಟ ಮಂಜುನಾಥ ಭಾಗವತರು ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ ವಿಜೇತ ಯಕ್ಷಗುರು. ಅರ್ಧ ಶತಮಾನಕ್ಕಿಂತ ಹೆಚ್ಚುಕಾಲ ಯಕ್ಷಗಾನದ ಗುರುವಾಗಿ, ಪ್ರಸಂಗಕರ್ತರಾಗಿ, ಸಂಶೋಧಕರಾಗಿ ಅಥವಾ ಯಕ್ಷಗಾನದ ಎಲ್ಲವೂ ಆಗಿ ದುಡಿದ ಹೊಸ್ತೋಟರು ಬ್ರಹ್ಮಚಾರಿ. ಅವಿವಾಹಿತರಾಗಿದ್ದೇ ಊರೂರು ಅಲೆದು ಯಕ್ಷಗಾನ ಕಲಾಭಿಮಾನಿಗಳ ಮನೆ ಮನೆಗೆ ತಿರುಗಿ ಅವಧೂತನಂತೆ ಸಹಸ್ರಾರು ಜನರಿಗೆ ಯಕ್ಷಗಾನವನ್ನು ಕಲಿಸಿದ ಹೊಸ್ತೋಟರು ಒಬ್ಬ ಜನಪ್ರಿಯ ಕಲಾವಿದರೂ ಅಲ್ಲ, ಜನಪ್ರಿಯ ಭಾಗವತರೂ ಅಲ್ಲ ಆದರೂ ಯಕ್ಷಗಾನದ ಪ್ರೇಕ್ಷಕ ವರ್ಗಕ್ಕೆ ಅವರೆಂದರೆ ಅಚ್ಚು ಮೆಚ್ಚು ಮತ್ತು ಗೌರವ.

ತಮ್ಮದೆಂಬ ಆಸ್ತಿಪಾಸ್ತಿ ಹೆಂಡತಿ ಮಕ್ಕಳು ಯಾವುದೂ ಇಲ್ಲದ ಹೊಸ್ತೋಟರಿಗೆ ತಮ್ಮದೇ ಆದ ಮನೆಯೂ ಇರಲಿಲ್ಲ. ಅದರೆ ಇತ್ತೀಚೆಗೆ ಹೊಸ್ತೋಟರು 'ಎಲ್ಲೋ ಕಾಡಿನಲ್ಲಿ ಆಶ್ರಮ ಕಟ್ಟಿಕೊಂಡು ವಾನಪ್ರಸ್ಥವನ್ನು ಕೈಗೊಳ್ಳುತ್ತಾರಂತೆ' 'ಅವರಿನ್ನು ಹೊರಪ್ರಪಂಚಕ್ಕೆ ಬರುವುದಿಲ್ಲವಂತೆ..', 'ಅವರು ಸ್ವಂತ ಮನೆ ಮಾಡಿದ್ದಾರಂತೆ..' ಹೀಗೆ ಅಂತೆ ಕಂತೆಗಳ ನಡುವೆ ಹೊಸ್ತೋಟರು ಸುದ್ದಿಯಾಗಿದ್ದರು. ಈ ಕುರಿತು ಜನರಿಗಿರುವ ಗೊಂದಲವನ್ನು ಹೋಗಲಾಡಿಸಲು ಮತ್ತು ಸ್ವತಃ ಹೊಸ್ತೋಟರ ಜೀವನದ ಬಲು ಮುಖ್ಯವಾದ ಈ ಸಂದರ್ಭದಲ್ಲಿ ಹೊಸ್ತೋಟರನ್ನು ಆಪ್ತವಾಗಿ ಮಾತನಾಡಿಸಿ ಅದರ ಬರಹರೂಪವನ್ನು ಪ್ರಕಟಿಸಿದ್ದೇವೆ.

ಇಷ್ಟು ದಿನ ಸ್ವಂತ ವಾಸ್ತವ್ಯದ ಮನೆಯನ್ನು ಹೊಂದಿರದ ಹೊಸ್ತೋಟರು ಇದೀಗ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಅಚವೆ ಎಂಬ ಊರಿನ ಸಮೀಪದ ಪರ್ವತದಲ್ಲಿರುವ ಮೋತಿಗುಡ್ಡ ಎನ್ನುವಲ್ಲಿ ತಮ್ಮದೇ ಆದ ವಾಸ್ತವ್ಯದ ಸಣ್ಣ ಮನೆಯೊಂದನ್ನು ಕಟ್ಟಿಕೊಂಡು ವಾಸ್ತವ್ಯ ಮಾಡಲು ಪ್ರಾರಂಭಿಸಿದ ಅಂಶ ಅದರ ಹಿನ್ನೆಲೆ ಮುನ್ನೆಲೆ ಬಹಳ ಜನರಿಗೆ ತಿಳಿದಿರಲಿಕ್ಕಿಲ್ಲ. ಅದಕ್ಕಾಗಿ ಈ ಸಂವಾದ-ಸಂದರ್ಶನ.

ಬೆಳಿಗ್ಗೆ ಹೊಸ್ತೋಟರು ಉಳಿದುಕೊಳ್ಳುವ ಮೋತಿಗುಡ್ಡಕ್ಕೆ ಹೋಗಿ ಅವರ ಕುಟೀರದ ಒಳ-ಹೊರಗುಗಳನ್ನು ಉತ್ಸಾಹದಿಂದ ತೋರಿಸಿದರು. ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಎತ್ತರವಾದ ಪರ್ವತವಾಗಿರುವ ಮೋತಿಗುಡ್ಡದ ತುದಿಗೊಂದು ಶಾಲೆ. ಈ ಶಾಲೆಯ ಎದುರು ಒಂದು ಬ್ರಹತ್ತಾದ ಅಶ್ವತ್ಥ ಮರ. ಅದರ ಬುಡದಲ್ಲಿಯೇ ಭಾಗವತರ ನೂತನ ಕುಟೀರ ಹಂಚಿನಂದ ನಿರ್ಮಿತವಾಗಿದೆ. ಕನಿಷ್ಟ ಆಧುನಿಕ ಸೌಕರ್ಯ ಹೊಂದಿರುವ ಈ ಕುಟೀರದ ಎದುರು ಮತ್ತು ಮರದ ಅಡಿಯಲ್ಲಿ ಒಂದು ಸಣ್ಣ ವೇದಿಕೆ. ತಾನು ಈ ವೇದಿಕೆಯ ಮೇಲೆ ಪ್ರತಿ ದಿನ ಬೆಳಗಿನ ಜಾವ 4 ಗಂಟೆಗೆ ಎದ್ದು ಎರಡು ತಾಸು ಓಂಕಾರದ ಧ್ಯಾನವನ್ನು ಮಾಡುವುದಾಗಿಯೂ ನಂತರ ಎರಡು ಮೈಲಿ ಪರ್ವತದ ಕೆಳಗಿಳಿದು ವಾಕಿಂಗ್ ಹೋಗುವ ರೂಢಿ ಇಟ್ಟುಕೊಂಡಿರುವುದಾಗಿ ಭಾಗವತರು ಹೇಳಿದರು!

ಹತ್ತಿರದಲ್ಲಿಯೇ ಹವ್ಯಕ ಸಮುದಾಯಕ್ಕೆ ಸೇರಿದವರ ಮನೆಯಲ್ಲಿ ಎರಡು ಹೊತ್ತು ಊಟೋಪಚಾರಕ್ಕೆ ಹೊಸ್ತೋಟರ ಅಭಿಮಾನಿಗಳು ಮತ್ತು ಶಿಷ್ಯರೆಲ್ಲ ಸೇರಿ ವ್ಯವಸ್ಥೆ ಮಾಡಿದ್ದಾರೆ. ವಾರಕ್ಕೊಂದು ಬಾರಿ ಉಪವಾಸ; ಪ್ರತಿ ರಾತ್ರಿ ಉಪವಸದೊಂದಿಗೆ ಕನಷ್ಟ ದಿನಬಳಕೆಯ ವಸ್ತುಗಳನ್ನು ಮಾತ್ರ ಹೊಂದಿರುವ ಹೊಸ್ತೋಟರೆಂಬ ಯಕ್ಷಪರಿವ್ರಾಜಕರ 'ವಾನಪ್ರಸ್ಥಾಶ್ರಮ' ನಮ್ಮ ಮುಂದೆ ಅನಾವರಣಗೊಳ್ಳುತ್ತಿದ್ದಂತೆ ಅವರೊಂದಿಗೆ ಸಂವಾದಕ್ಕೆ ತೊಡಗಿದೆವು.


*********************

ಸ೦ದರ್ಶಕರು : ಕಡತೋಕಾ ಗೋಪಾಲಕೃಷ್ಣ ಭಾಗವತಪ್ರಶ್ನೆ : ತಮಗೆ ರಾಷ್ಟ್ರ ಪ್ರಶಸ್ತಿ ಅಂದರೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಬಂತಲ್ಲ ಅದರ ಬಗ್ಗೆ ತಮ್ಮ ಅನಿಸಿಕೆ ಏನು?

ಹೊಸ್ತೋಟ : ಹಾಂ. ಒಂದು ರಾಜ್ಯ ಮಟ್ಟದ ಪ್ರಶಸ್ತಿ ಅಂದರೆ 'ನಾಡೋಜ'ದಂತಹದು ಬಂದರೆ ಅದು ನಮ್ಮ ನಾಡಿನ ಪ್ರಶಸ್ತಿ ಅಂತ ಹೆಮ್ಮೆ, ಹಾಗೆಯೇ ರಾಷ್ಟ್ರ ಪ್ರಶಸ್ತಿ ಬಂದರೆ ನಮ್ಮ ದೇಶದ ಅಂದರೆ ರಾಷ್ಟ್ರಮಟ್ಟದ ಗೌರವ ಬಂತೆಂದು ಹೆಮ್ಮೆಯೆನಿಸುವುದು ಸಹಜ. ಆದರೆ ಈ ಪ್ರಶಸ್ತಿ 75ರ ಈ ಇಳಿ ವಯಸ್ಸಿನಲ್ಲಿ ಬರುವುದಕ್ಕಿಂತ 65ರಲ್ಲಿ ಬಂದಿದ್ದರೆ- ಯಾಕೆಂದರೆ 75ರ ನಂತರ ಸಾಮಾನ್ಯವಾಗಿ ವೈರಾಗ್ಯ ಬರುತ್ತದೆ, ಯಾವ ಜವಾಬ್ದಾರಿಯನ್ನೂ ನಿರ್ವಹಿಸುವ ಉತ್ಸಾಹ ಇರುವುದಿಲ್ಲ- ಅದರ ಬದಲು 65ರ ಆಸುಪಾಸಿನಲ್ಲಿ ಬಂದರೆ ರಾಷ್ಟ್ರಪ್ರಶಸ್ತಿ ಪಡೆದವ ಎಂಬ ಕಾರಣಕ್ಕಾಗಿ ಅವನ ಮಾತನ್ನು ಒಪ್ಪಿಕೊಳ್ಳುವವರ ಸಂಖ್ಯೆ ಹೆಚ್ಚಿರುತ್ತದೆ. ಅದರಿಂದ

ಪ್ರಶ್ನೆ : ಇನ್ನೂ ಹೆಚ್ಚಿನ ರಚನಾತ್ಮಕ ಕೆಲಸ ಮಾಡಲು ಬೆಂಬಲ ದೊರೆಯುತ್ತದೆ ಅಂತ?

ಹೊಸ್ತೋಟ : ಹಾಂ ಹೌದು. ಆದರೆ ಅದಕ್ಕಾಗಿ ಕೊರಗುವುದಿಲ್ಲ. ಯಾಕೆಂದರೆ ನಾನು ಯಾವುದೇ ಬಾಹ್ಯ ಬೆಂಬಲವನ್ನು ನಿರೀಕ್ಷಿಸಿ ಈ ವರೆಗೆ ಯಾವುದೇ ಕೆಲಸ ಮಾಡಿದವನಲ್ಲ. ಆದ್ದರಿಂದ ಇನ್ನೂ ನನ್ನ ಉಸಿರಿರುವವರೆಗೂ ಯಕ್ಷಗಾನಕ್ಕಾಗಿ ಕೆಲಸ ಮಾಡಿಯೇ ಮಾಡುತ್ತೇನೆ.

ಪ್ರಶ್ನೆ : ಇತ್ತೀಚೆಗೆ ಪ್ರಶಸ್ತಿಗಳೆಲ್ಲ ವಿವಾದಾಸ್ಪದವಾಗುತ್ತಿವೆ. ಅಲ್ಲವಾ?

ಹೊಸ್ತೋಟ : ಪ್ರಶಸ್ತಿ ವಿವಾದಾಸ್ಪದ ಅಗುವುದಕ್ಕೆ ಕಾರಣ ಅಂದ್ರೆ ಒಂದು ರಾಜಕೀಯ, ಇನ್ನೊಂದು ಅಭಿಮಾನಿಗಳ ಗುಂಪುಗಾರಿಕೆ. ಮತ್ತೆ ಪ್ರಶಸ್ತಿಯನ್ನು ಹೇಗಾದರೂ ಪಡೆದೇತೀರಬೇಕು ಅನ್ನುವ ತೀಟೆಯೂ ಪ್ರಶಸ್ತಿ ವಿವಾದಾಸ್ಪದ ಆಗುವುದಕ್ಕೆ ಕಾರಣ. ಈ ಪ್ರಶಸ್ತಿ ಪಡೆಯುವುದಕ್ಕೆ ನಾನು ಏನೂ ಪ್ರಯತ್ನ ಮಾಡಿಲ್ಲ ಎಂದು ಹೇಳಬಹುದಾದರೂ ನಾನು ಮಾಡದಿದ್ದರೂ ನನ್ನ ಅಭಿಮಾನಿಗಳು ನನ್ನ ಪರವಾಗಿ ಕೆಲಸಮಾಡಿರಬಹುದು; ಇನ್ನು ಪ್ರಶಸ್ತಿ ಕಮೀಟಿಯಲ್ಲಿರುವವರು. ನನ್ನ ಜೊತೆಗೆ ನೀನಾಸಂನ ಅಕ್ಷರರಿಗೆ ಹಾಗೂ ಚಿದಂಬರ ಜಂಬೆಯವರಿಗೂ ಬಂದಿದೆ- ಅವರಿಗೂ ನನ್ನ ಕುರಿತು ಗೌರವ ಇರುವುದರಿಂದ ಅವರೂ ನನ್ನ ಬಗ್ಗೆ ಒಳ್ಳೆಯ ಶಿಫಾರಸ್ಸಿನ ಮಾತು ಹೇಳಿರಬಹುದು. ಏನೇ ಆದರೂ ರಾಷ್ಟ್ರ ಮಟ್ಟದ ಪ್ರಶಸ್ತಿ ಬಂದದ್ದು ಹೆಮ್ಮೆಯೇ ಸರಿ. ನಾನು ಎನೋ ದೊಡ್ಡ ಕೆಲಸ ಮಾಡಿದ್ದೇನೆ ಅಂತ ಅಲ್ಲ..

ಪ್ರಶ್ನೆ : ತಮ್ಮ ಯಕ್ಷ ಯಾತ್ರೆ ಪ್ರಾರಂಭವಾದ ಬಗ್ಗೆ ಸ್ವಲ್ಪ ಹೇಳಿ

ಹೊಸ್ತೋಟ : ಮೂರನೇ ತರಗತಿಯಲ್ಲಿರುವಾಗಲೇ ವೇಷ- ಅಂದರೆ ಕಂಸವಧೆಯ ಕೃಷ್ಣ, ಅಭಿಮನ್ಯು ಕಾಳಗದ ಅಭಿಮನ್ಯು ಮೊದಲಾದ ಬಾಲ ಪಾತ್ರ ಮಾಡತಾ ಇದ್ದೆ. ಕ್ರಮೇಣ ಕೆರೆಮನೆ ಶಿವರಾಮ ಹೆಗಡೆ, ಯಾಜಿ ಭಾಗವತರು, ಹಾಗೆಯೇ ಕಡತೋಕಾ ಭಾಗವತರು-ಅವರು ಶಿರಸಿಯಲ್ಲಿ ಶಿಕ್ಷಕರಾಗಿರುವಾಗ- ಇಂತಹ ದಿಗ್ಗಜರ ಸಹವಾಸದಲ್ಲಿ ಮುಂದುವರಿಯುತ್ತಾ ಇದ್ದೆ.

ಪ್ರಶ್ನೆ : ನಿಮಗೆ ಒಬ್ಬ ಗುರು ಅಂತ ಯಾರಾದರೂ ಇದ್ದಿದ್ದರೇ?

ಹೊಸ್ತೋಟ : ಹಾಗೇನೂ ಇಲ್ಲ ಹೆಚ್ಚಿನಂಶ ನೋಡಿಯೇ ಕಲಿತದ್ದು. ಹಾಗೇ ನೋಡಿದರೆ ನಾನು ಚಿಕ್ಕವನಿರುವಾಗ ಕೆಲಶಿ ಮಾದೇವ ಅಂತ ಒಬ್ಬ ನಮ್ಮ ಮನೆಯ ಹತ್ತಿರ ಇದ್ದ-ಕ್ಷೌರಿಕ ವೃತ್ತಿಯವನು. ಅವನು ರಾತ್ರಿ ಮದ್ದಳೆ ತನಗೆ ತಿಳಿದಂತೆ ಬಾರಿಸ್ತಾ ಇದ್ದ. ಶಿರಸಿ ಸಮೀಪ ಹನಮಂತಿಯ ಹೊಸ್ತೋಟದ ನಮ್ಮ ಮನೆಯಲ್ಲಿ ಹಿರಿಯರಿಗೆ ತಿಳಿಯದಂತೆ ರಾತ್ರಿ ಆ ಮಾದೇವನ ಮನೆಗೆ ಹೋಗಿ ಮದ್ದಳೆ ಬಾರಿಸ್ತಿದ್ದೆ. ನಂತರ ಕೊಡಗಿಪಾಲ ಶಿವರಾಮ ಹೆಗಡೆಯವರ ಸಂಗಡ ಅವರ ಮೇಳದಲ್ಲಿ ಗದಾಯುದ್ಧದ ಕೃಷ್ಣನಂತಹ ವೇಷ ಮಾಡುತ್ತಿದ್ದೆ; ಜೊತೆಯಲ್ಲಿ ಭಾಗವತಿಕೆ ಮಾಡುವುದು, ಮದ್ದಳೆ ಬಾರಿಸುವುದು-ಹೀಗೆ ಯಕ್ಷಗಾನದ ಎಲ್ಲ ಅಂಗಗಳಲ್ಲಿಯೂ ಕೈಯಾಡಿಸುತ್ತಿದ್ದೆ.

ಪ್ರಶ್ನೆ : ತಾವು ಪ್ರಸಂಗ ರಚನೆಯ ಸಾಹಸ ಪ್ರಾರಂಭಿಸಿದ್ದು ಹೇಗೆ.

ಹೊಸ್ತೋಟ : ಐದನೇ ಕ್ಲಾಸಿನಲ್ಲಿರುವಾಗ ಶಾಲೆಯಲ್ಲಿ 'ನಹುಷ ವಿಜಯ' ಅನ್ನುವ ನಾಟಕವನ್ನು ನಾವು ಹುಡುಗರು ಆಡುತ್ತಿದ್ದೆವು; ಅದರಲ್ಲಿ ನಾನು ನಾರದನ ಪಾತ್ರ ಮಾಡುತ್ತಿದ್ದೆ. ಆಗಲೇ ನಾನು ನಹುಷ ವಿಜಯವನ್ನು ಯಕ್ಷಗಾನ ಪ್ರಸಂಗವಾಗಿ ಬರೆಯಬೇಕೆಂದು ಕೆಲವು ಪದ್ಯಗಳನ್ನೂ ಬರೆದಿಟ್ಟಿದ್ದೆ. ಕೆಲವು ಕಾಲದ ನಂತರ ಅದನ್ನು ಯಾವುದೋ ಸಂದರ್ಭದಲ್ಲಿ ಕೆರೆಮನೆ ಮಹಾಬಲ ಹೆಗಡೆಯವರಿಗೆ ತೋರಿಸಿದಾಗ ಅವರು 'ಚಲೋ ಇದ್ದಲೋ.. ನೀನು ಎಲ್ಲ ಪದ್ಯನೂ ಸರಿ ಬರದ್ದೆ ಹೇಳಲ್ಲ ಆದರೆ ಒಂದು ಯಕ್ಷಗಾನದ ಪ್ರಸಂಗಕರ್ತ ಅಪ್ಪ ಲಕ್ಷಣ ಎಲ್ಲಾ ಇದ್ದು' ಅಂತ ಮೊಟ್ಟ ಮೊದಲಿಗೆ ನನ್ನ ಕವಿ ಪ್ರತಿಭೆಯನ್ನು ಗುರುತಿಸಿದರು.

ಕಡತೋಕಾ ಮಂಜುನಾಥ ಭಾಗವತರು
ಆನಂತರ ಶಿರಸಿಯಲ್ಲಿ ಪ್ರಸಂಗ ರಚನಾ ಸ್ಪರ್ಧೆ ಆಗಿತ್ತು. ಅದರಲ್ಲಿ ನಾನು ಪಾಂಡು ವಿಜಯ ಎಂಬ ಪ್ರಸಂಗ ಬರೆದುಕೊಟ್ಟೆ. ಮುದ್ದಣನ ಕೃತಿಯನ್ನೆಲ್ಲ ಅಭ್ಯಾಸ ಮಾಡಿ ಪ್ರಾಸವನ್ನೆಲ್ಲ ಹಾಕಿ ಬರೆದಿದ್ದೆ. ಅದಕ್ಕೆ ನಿರ್ಣಾಯಕರಾಗಿ ಕಡತೋಕಾ ಮಂಜುನಾಥ ಭಾಗವತರು, ವಿ.ಟಿ.ಶೀಗೇಹಳ್ಳಿಯವರು ಎಲ್ಲಾ ಇದ್ದರು. ಗಂಗಾಜಿಯವರ 'ಗರುಡವಿಜಯ' ಪ್ರಸಂಗಕ್ಕೆ ಪ್ರಥಮ ಬಹುಮಾನ ಬಂತು-ಒಂದೇ ಬಹುಮಾನ ಇತ್ತು. ಆದರೆ ನನಗೆ ನಿರಾಸೆ ಆಗಲಿಲ್ಲ ಯಾಕೆಂದರೆ ಆ ಕಾಲದ ಜನಪ್ರಿಯ ಪ್ರಸಂಗ ಹರಿಶ್ಚಂದ್ರ, ಮಾರುತಿ ಪ್ರತಾಪ ಎಲ್ಲ ಬರೆದ ಜಾನಕೈ ತಿಮ್ಮಪ್ಪ ಹೆಗಡೆಯವರೂ ಭಾಗವಹಿಸಿದ್ದರು ಮತ್ತು ಅವರಿಗೂ ಬಹುಮಾನ ಸಿಕ್ಕಿರಲಿಲ್ಲ-ಹಾಗಾಗಿ.

ಹೀಗೆ ಬರೀತಾ ಬರೀತಾ ಇನ್ನೂರೈವತ್ತಕ್ಕೂ ಹೆಚ್ಚು ಪ್ರಸಂಗಗಳನ್ನು ಬರೆದೆ. ರೇಡಿಯೋ ಕಾರ್ಯಕ್ರಮಕ್ಕಾಗಿ ರಾಮ ನಿರ್ಯಾಣ ಬರೆದೆ; ಕೆಪ್ಪೆಕೆರೆಯವರು ಕೊಟ್ಟ ಭಾಸವತಿ ಕಥೆಯನ್ನು ಕೆರೆಮನೆ ಶಿವರಾಮ ಹೆಗಡೆ, ಗಜಾನನ ಹೆಗಡೆ ಇವರೊಟ್ಟಿಗೆ ಸಮಾಲೋಚನೆ ಮಾಡಿಕೊಂಡು ಬರೆದೆ. ಭಾಸವತಿಯನ್ನು ಬರೆಯುವುದಕ್ಕಿಂತ ಮೊದಲೇ ನಾನು ಬರೆದ ಮೂಲಕಾಸುರಕಾಳಗ ಪ್ರಸಂಗದಲ್ಲಿ ಪದ್ಯ ಹೇಳಿದ ಸ್ವತಃ ಪ್ರಸಂಗಕರ್ತರೂ ಆದ ಕಡತೋಕಾ ಮಂಜುನಾಥ ಭಾಗವತರು 'ಈ ಪದ್ಯ ಲಾಯಕ್ಕಿದ್ದರೋ.. ಭಾಗವತಂಗೆ ಕಾಣಸ್ಕಂಬಲೆ ಒಳ್ಳೇ ಅವಕಾಶ ಇದ್ದು..' ಎಂದು ಅಭಿಪ್ರಾಯಪಟ್ಟು ಹುರಿದುಂಬಿಸಿದ್ದರು. ನಾನು ಬರೆದ 'ಪಾಹಿಮಾಂ ಸತತಂ ಶ್ರೀವಿನಾಯಕ..' ಎಂಬ ವಾರಣವದನದ ಮಾದರಿಯಲ್ಲಿ ಬರೆದ ಗಣಪತಿ ಸ್ತುತಿಯ ಪದ್ಯವನ್ನು ಕಡತೋಕರು ನನಗೆ ಪ್ರಚಾರ ಸಿಗಲಿ ಎಂದು ತೆಂಕಿನಲ್ಲಿ, ತಾಳಮದ್ದಳೆಯಲ್ಲಿ ಎಲ್ಲ ಹಾಡಿ ಜನಪ್ರಿಯಗೊಳಿಸಿದ್ದರು. ಹೀಗೆ ರಾಮಾಯಣ, ಭಾಗವತ, ಭಾರತದ ಎಲ್ಲ ಪ್ರಸಂಗ ಬರೆಯುತ್ತಾ ಹೋದೆ.

ಪ್ರಶ್ನೆ : ಈಗ ತಾವು ಬರೆದ ಕೆಲವು ಪ್ರಸಂಗಗಳು ಬಸವೇಶ್ವರ, ನಿಸರ್ಗ ಸಂಧಾನದಂತಹ ಪ್ರಸಂಗಗಳು ಯಕ್ಷಗಾನಕ್ಕೆ ಒಗ್ಗುವುದಿಲ್ಲ-ಹೊಸ್ತೋಟದಂತಹವರೇ ಇಂಥಹ ಪ್ರಸಂಗ ಬರೆಯಬಹುದೇ ಅಂತ ಕೆಲವರು ಟೀಕಿಸಿದ್ದಿದೆ- ಅದನ್ನು ತಾವು ಹೇಗೆ ಸಮರ್ಥಿಸಿಕೊಳ್ಳುತ್ತೀರಿ?

ಹೊಸ್ತೋಟ : ಆದರೆ ನಾನು ಬರೆದ ನಿಸರ್ಗ ಸಂಧಾನದಂತಹ ಪ್ರಸಂಗದಲ್ಲಿ ಯಕ್ಷಗಾನದ ಆವರಣಕ್ಕೆ ಒಗ್ಗುವಂತೇ ಬರೆದಿದ್ದೇನೆ. ಉದಾಹರಣೆಗೆ 'ಪ್ರಯೋಗ' ಎನ್ನುವವನು ಒಬ್ಬ ರಾಜ, 'ಪ್ರಗತಿ' ಎನ್ನುವವಳು ಅವನ ಹೆಂಡತಿ. ದುಷ್ಟಬುದ್ಧಿ ಎನ್ನುವವನು ಅವನ ಮಂತ್ರಿ. ಮಾಯಾ ಪ್ರಗತಿಯ ಮೂಲಕ ಸಂಘರ್ಷ ಪ್ರಾರಂಭವಾಗುವಂತೆ ಅಂದರೆ ಯಕ್ಷಗಾನದ ಕಿರೀಟ, ಕೇದಗೆ ಮುಂದಲೆಯಂತಹ ಯಕ್ಷಗಾನದ ವೇಷಭೂಷಣವನ್ನು ತೊಟ್ಟುಕೊಂಡೇ ಪ್ರದರ್ಶನ ಮಾಡಲಿಕ್ಕೆ ಬರುವಂತೆಯೇ ರಚಿಸಿದ್ದೇನೆ.

ಪ್ರಶ್ನೆ : ಆದರೆ ಬಸವೇಶ್ವರದಲ್ಲಿ ಬಸವೇಶ್ವರ ಕ್ಯಾಲೆಂಡರಿನ ವೇಷ ತೊಟ್ಟುಕೊಂಡು ಬರುತ್ತಾನಲ್ಲಾ? ಇದು ಸರಿಯಾ?

ಹೊಸ್ತೋಟ : ಬಸವೇಶ್ವರದಲ್ಲಿ ಮೊದಲ ಸನ್ನಿವೇಶಗಳಲ್ಲಿ ಕೇದಗೇ ಮುಂದಲೆಯೊಂದಿಗೇ ಬಸವೇಶ್ವರ ಬರುತ್ತಾನೆ. ಕೊನೆಗೆ ಅವನು ಪ್ರೌಢಾವಸ್ಥೆಗೆ ಹೋದಾಗ ಯಕ್ಷಗಾನದ ಶಿಖೆ ಕಟ್ಟಿ ಬಸವಣ್ಣನನ್ನು ಮಾಡಬೇಕು. ಅದಕ್ಕೆ ಯಕ್ಷಗಾನದ ವೇಷಭೂಷಣದ ಪದ್ಧತಿಯನ್ನು ವೀರಶೈವ ಸಮುದಾಯಕ್ಕೆ ಮನವರಿಕೆ ಮಾಡಿಕೊಡಬೇಕು. ಒಟ್ಟಿನಲ್ಲಿ ಯಕ್ಷಗಾನ ಪ್ರದರ್ಶನ ಮಾಡುವ ತಂಡದವನ್ನು ಯಕ್ಷಗಾನದ ಆವರಣಕ್ಕೆ ಒಗ್ಗದ ವೇಷತೊಟ್ಟುಕೊಂಡು ಬಂದರೆ ಅದಕ್ಕೆ ಪ್ರಸಂಗಕರ್ತ ಜವಾಬ್ದಾರನಲ್ಲ.

ಅ೦ಧ ಮಕ್ಕಳಿ೦ದ ನಡೆದ ಯಕ್ಷಗಾನ ಪ್ರದರ್ಶನ (ಸಾ೦ಧರ್ಭಿಕ ಚಿತ್ರ)

ಪ್ರಶ್ನೆ : ತಾವು ಅಂಧರಿಗೆ ಯಕ್ಷಗಾನ ಕಲಿಸಿ ಯಶಸ್ವೀ ಪ್ರದರ್ಶನ ನೀಡಿದಿರಿ. ಆದು ತಮಗೆ ರಾಷ್ಟ್ರ ಮಟ್ಟದಲ್ಲಿ ಮನ್ನಣೆಯನ್ನು ತಂದುಕೊಟ್ಟಿತು, ಕಲಿಕೆಯ ಸಾಧ್ಯತೆಯನ್ನು ತಾವು ವಿಸ್ತರಿಸಿದಿರಿ ಅದು ಸಾಧ್ಯವಾದದ್ದು ಹೇಗೆ?

ಹೊಸ್ತೋಟ : ಅದು ಶಿವಮೊಗ್ಗಾದ ಶಾರದಾದೇವಿ ಅಂಧರ ಶಾಲೆಯ ಮಕ್ಕಳಿಗೆ ನಾನು ಯಕ್ಷಗಾನ ಕಲಿಸಿದ್ದು. ಕುರುಡರು ನೆಲದಿಂದ ಕಾಲು ಎತ್ತದೆ ನಡೆಯುವವರಾದ್ದರಿಂದ ಕಾಲೆತ್ತಿ ಮಾಡಬೇಕಾದ ನೃತ್ಯವನ್ನು ಕಲಿಸುವುದು ಒಂದು ಸವಾಲಾಗಿತ್ತು. ಪ್ರಾರಂಭದಲ್ಲಿ ಮಕ್ಕಳ ಕಂಕುಳಲ್ಲಿ ಕೈ ಹಾಕಿ ಎತ್ತಿ ನೆಲ ಬಿಟ್ಟು ಅವರು ಹೆಜ್ಜೆ ಹಾಕುವಂತೆ ಪ್ರಯಾಸದಿಂದ ತರಬೇತಿ ನೀಡಲಾಯಿತು. ಆ ಸಮಯದಲ್ಲಿ ನನ್ನ ಕಲಿಕೆಯ ಸೂತ್ರಗಳು ನನ್ನ ಸಹಾಯಕ್ಕೆ ಬಂದವು. ಕಣ್ಣು ಕಾಣದ್ದರಿಂದ ಮಕ್ಕಳು ಹಾಗೂ ಹೀಗು ಹೆಜ್ಜೆ ಹಾಕುವುದನ್ನು ಕಲಿತರೂ ಕುಣಿಯುತ್ತ ರಂಗದಲ್ಲಿ ಎತ್ತಲೋ ನಡೆದುಬಿಡುತ್ತಿದ್ದರು.

ಇದಕ್ಕೆ ಪರಿಹಾರವಾಗಿ ನಾನು ಚಚ್ಚೌಕವಾಗಿ ರಂಗಸ್ಥಳದ ಸುತ್ತಲೂ ಬಟ್ಟೆ ಒಂದು ಅಡಿ ಎತ್ತರದ ಬಟ್ಟೆಯನ್ನು ಸಣ್ಣ ಕೋಲುಗಳಿಗೆ ಕಟ್ಟುವ ವ್ಯವಸ್ಥೆ ಮಾಡಿದೆ. ಇದರಿಂದ ಕಾಲಿಗೆ ಬಟ್ಟೆ ತಾಗಿದಾಕ್ಷಣ ಅವರು ಹಿಂದೆ ಬರಬೇಕೆಂದು ಸೂಚಿಸಿದೆ. ಇದರಲ್ಲಿ ಒಂದು ನಿರ್ದಿಷ್ಟ ವ್ಯಾಪ್ತಿಯಲ್ಲಿಯೇ ಕುಣಿಯುವುದು ಅವರಿಗೆ ರೂಢಿಯಾಯಿತು. ಕುರುಡರಿಗೆ ಕಣ್ಣು ಕಾಣಿಸದಿದ್ದರೂ ಉಳಿದ ಗ್ರಹಿಕೆ ಸೂಕ್ಷ್ಮವಾಗಿರುತ್ತದೆ, ಅವರ ಈ ಗ್ರಹಿಕೆಯ ಸಾಮಥ್ರ್ಯವನ್ನು ಯಕ್ಷಗಾನ ಕಲಿಕೆ ಸುಲಭವಾಗುವಂತೆ ಉಪಾಯದಿಂದ ಅವರಿಗೆ ಕಲಿಸಲಾಯಿತು. ಅದು ನನಗೆ ಅತ್ಯಂತ ಧನ್ಯತೆಯನ್ನು ತಂದ ಪ್ರಯೋಗ. ಈಗಲೂ ನನ್ನ ಶಿಷ್ಯ ಐನಬೈಲು ಪರಮೇಶ್ವರ ಹೆಗಡೆ ಅಲ್ಲಿ ಹೋಗಿ ಕುರುಡರಿಂದ ಯಕ್ಷಗಾನ ತಾಳಮದ್ದಳೆ ಮಾಡಿಸುವುದನ್ನೆಲ್ಲ ಮಾಡುತ್ತಾನೆ. ಅಲ್ಲಿ ಪದ್ಮನಾಭನ್ ಅಂತ ಒಬ್ಬ ಉತ್ಸಾಹೀ ಶಿಕ್ಷಕರಿದ್ದರು ಅವರು ಅಪಘಾತದಲ್ಲಿ ನಿಧನರಾದ ಮೇಲೆ ಕುರುಡರಿಗೆ ಯಕ್ಷಗಾನ ಕಲಿಸುವ ಕಾಯಕಕ್ಕೆ ಹಿನ್ನಡೆಯಾಯಿತು.

ಪ್ರಶ್ನೆ : ಇನ್ನು ತಮ್ಮ ಯಕ್ಷಗಾನ ಕಲಿಸುವಿಕೆಯ ಬಗ್ಗೆ

ಹೊಸ್ತೋಟ : ಕಲಿಸುವಿಕೆ ಬಂದಾಗ 'ಇದು ನಮ್ಮಲ್ಲಿಯ ಕುಣಿತ', 'ಇದು ಅವರಲ್ಲಿಯ ಕುಣಿತ' ಇತ್ಯಾದಿ ಕುಣಿತ ಪ್ರಧಾನವಾದ ಪ್ರಾದೇಶಿಕತೆಯಿದೆ. ನಾನು ಅದಕ್ಕೆ ಒಂದು ಸಾಮಾನ್ಯ ಸ್ವರೂಪವನ್ನು ಕೊಟ್ಟೆ. ಕುಣಿತಕ್ಕೆ ಒಂದು ಆಕಾರ ಬೇಕು ಮತ್ತು ವ್ಯವಸ್ಥೆ ಬೇಕು- ಅದನ್ನು ನಾನು ತರುವ ಪ್ರಯತ್ನವನ್ನು ಮಾಡಿದ್ದೇನೆ. ಯಕ್ಷಗಾನ ಕಲಿಕೆಗೆ ಸಂಬಂಧಿಸಿದಂತೆ ಸೋಂದಾ ಕೃಷ್ಣ ಭಂಡಾರಿಯವರ ಕೈ ಪಿಡಿ ಉಪ್ಪೂರರು ಮತ್ತು ನೀಲಾವರದವರ ಕೈಪಿಡಿಗಿಂತ ಹೆಚ್ಚು ಅಧಿಕೃತವಾಗಿದೆ. ಸೋಂದಾ ಕೃಷ್ಣ ಭಂಡಾರಿಯವರು ಸಮರ್ಥ ಮದ್ದಳೆಗಾರರಾದ್ದರಿಂದ ಅವರು ಮದ್ದಳೆಯ ಪೆಟ್ಟುಗಳ ಸ್ಥಾನವನ್ನೆಲ್ಲ ಸೂಕ್ಷ್ಮವಾಗಿ ತೋರಿಸಿದ್ದಾರೆ - ಅದು ಕಲಿಕೆಗೆ ಒಂದು ಉಪಯುಕ್ತವಾದ ಕೈಪಿಡಿಯಾಗಿದೆ.

ಪ್ರಶ್ನೆ : ಈಗ.. ತಮ್ಮಿಂದ ತಯಾರಾದ ತಮ್ಮ ಶಿಷ್ಯರು ಕೆಲವರ ಹೆಸರು ಹೇಳಬಹುದೋ?

ಹೊಸ್ತೋಟ : ಹಾಂ. ಐನಬೈಲು ಪರಮೇಶ್ವರ ಹೆಗಡೆ, ಸೌಮ್ಯ ಗೋಟಗಾರು, ಗೀತಾ ಹೆಗಡೆ, ಥಂಡೀಮನೆ ಶ್ರೀಪಾದ ಭಟ್ಟ, ಕಾರ್ತಿಕ ಚಿಟ್ಟಾಣಿ. ನಾಗರಾಜ ಜೋಶಿ ಸೋಂದಾ ಹೀಗೆ ಅನೇಕರಿದ್ದಾರೆ.

ಥಂಡೀಮನೆ ಶ್ರೀಪಾದ ಭಟ್ಟ

ಪ್ರಶ್ನೆ : ತಮ್ಮ ಶಿಷ್ಯರ ಪ್ರಸ್ತುತಿ ತಮಗೆ ಸಮಾಧಾನ ತಂದಿದೆಯಾ?

ಹೊಸ್ತೋಟ : ಹೆಜ್ಜೆ ಮತ್ತು ಆಕಾರದಲ್ಲಿ ನಾನು ಕಲಿಸಿದ್ದನ್ನು ಇಟ್ಟುಕೊಂಡಿದ್ದಾರೆ. ಆದರೆ ಉಳಿದಂತೆ ಪಾತ್ರ ಕಟ್ಟುವದಕ್ಕೆ ಬೇಕಾದ ಸರಕನ್ನು ಸ್ವಂತ ಅಧ್ಯಯನದಿಂದ ಸಂಪಾದನೆ ಮಾಡದಿದ್ದರೆ ಅವರ ನೃತ್ಯ-ಅಭಿನಯ ಬೊಂಬೆಯಾಟದಂತಾಗಬಹುದು.

ಪ್ರಶ್ನೆ : ಯಕ್ಷಗಾನದಲ್ಲಿ ಇದೀಗ ಅಭಿನಯ ಕುಣಿತ ಅತಿಯಾಗಿದೆ ಅಂತ ಒಂದು ಕೂಗಿದೆ..?

ಹೊಸ್ತೋಟ : ಯಾವುದೇ ಒಂದು ಕ್ಲಿಷ್ಟವಾದ ಸಂಗತಿಯನ್ನು ವಿವರಿಸುವಾಗ ಪುನರಾವರ್ತನೆ ಅಗತ್ಯ ಮತ್ತು ಅನಿವಾರ್ಯ-ಯಾಕೆಂದರೆ ಅದನ್ನು ಜನರಿಗೆ ಅರ್ಥಮಾಡಿಕೊಡುವುದಕ್ಕೆ ಮತ್ತೆ ಮತ್ತೆ ಹೇಳಿದ್ದನ್ನೇ ಹೇಳಬೇಕಾಗುತ್ತದೆ. ಆದರೆ ಸರಳವಾಗಿ ಅರ್ಥವಾಗುವ ಒಂದು ಪದ್ಯದ ಭಾಗವನ್ನೂ ಕೂಡ ಮತ್ತೆ ಮತ್ತೆ ಅಭಿನಯಿಸುವುದು ಆಭಾಸ.

ಪ್ರಶ್ನೆ : ತಾವು ಆಧ್ಯಾತ್ಮದಲ್ಲಿ ಒಲವನ್ನು ಪ್ರಾರಂಭದಿಂದಲೂ ಹೊಂದಿದ್ದಿರಿ?

ಹೊಸ್ತೋಟ : ಹೌದು..ನೋಡಿ ಸ್ವಾತಂತ್ರ್ಯ ಬರುವಾಗ ನನಗೆ ಏಳು ವರ್ಷ. ಆಗಿನಿಂದಲೇ ನನಗೆ ಸ್ವಾತಂತ್ರ್ಯ ಅಂದರೆ ಹಕ್ಕಲ್ಲ ಅದು ಸಿದ್ಧಿ ಅಂತ ಅನಿಸ್ತಾ ಇತ್ತು. ಸತ್ಯ ಮತ್ತು ಅಹಿಂಸೆ ಇದರ ಪ್ರಧಾನ ಮೌಲ್ಯಗಳು. ಇದನ್ನೇ ಆಧಾರವಾಗಿಟ್ಟುಕೊಂಡು ನಾನು ಎಲ್ಲಾ ಹೋರಾಟ ಮಾಡಿದ್ದೇನೆ. ಹಾಗಾಗಿಯೇ ನಾನು ಯಾರಿಗೂ ನೋಯಿಸಲಿಲ್ಲ; ಎಲ್ಲಿಯೂ ವೃತ್ತಿ ಮಾಡಲಿಲ್ಲ; ಯಕ್ಷಗಾನ ಕಲಿಸಿದರೂ ಬಸ್ ಚಾರ್ಜ್ ಮಾತ್ರ ಪಡೆದುಕೊಂಡಿದ್ದೇನೆ. ಸಮಾಜದ ಅನ್ನವನ್ನು ನಾನು ಪುಕ್ಕಟೆಯಾಗಿ ಉಣ್ಣಲೇ ಇಲ್ಲ. ಇದರಿಂದ ನಾನು ಇಂದಿಗೂ ನಿಜವಾದ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇನೆ ಮತ್ತು ಇದರಿಂದ ನನಗೆ ತೃಪ್ತಿ ಇದೆ. ಇದಕ್ಕೆ ನನ್ನ ರಾಮಕೃಷ್ಣಾಶ್ರಮದ ಸಹವಾಸ ಕಾರಣ ಅಂತ ತಿಳಿದುಕೊಂಡಿದ್ದೇನೆ.

ಪ್ರಶ್ನೆ : ಶಾಸ್ತ್ರೀಯ ಸಂಗೀತ ಮತ್ತು ನೃತ್ಯವನ್ನು ಕಲಿಯುವುದರಿಂದ ಯಕ್ಷಗಾನ ವಿದ್ಯಾರ್ಥಿಗೆ ಪ್ರಯೋಜನ ಆಗುತ್ತದೆ ಅನ್ನುತ್ತೀರಾ?

ಹೊಸ್ತೋಟ : ಹೌದು. ಶಾಸ್ತ್ರೀಯ ಕಲೆಗಳಲ್ಲಿ ಕಲಿಕೆ ಒಂದು ವ್ಯವಸ್ಥಿತ ರೂಪವನ್ನು ಈಗಾಗಲೇ ಪಡೆದಿದೆ. ಇದರಿಂದ ಮೂಲಭೂತವಾಗಿ ತಾಳ ಅಂದರೆ ಏನು? ರಾಗ ಅಂದರೆ ಏನು? ಸ್ವರ ಅಂದರೆ ಏನು? ಹಾಗೆಯೇ ನೃತ್ಯ ಅಂದರೆ ಏನು ? ಅಭಿನಯ ಅಂದರೆ ಏನು? ಇವುಗಳನ್ನೆಲ್ಲ ಶಾಸ್ತ್ರೀಯ ಕಲೆಗಳ ಕಲಿಕೆಯಿಂದ ವೈಜ್ಞಾನಿಕವಾಗಿ ತಿಳಿದುಕೊಳ್ಳಲು ಸಾಧ್ಯ. ಹಾಗೆ ತಿಳಿದುಕೊಂಡ ಮೇಲೆ ಯಕ್ಷಗಾನದ ಸ್ವರೂಪಕ್ಕೆ ವ್ಯತ್ಯಯವಾಗದಂತೆ ಯಕ್ಷಗಾನವನ್ನು ಪ್ರದರ್ಶಿಸಿಸಲು ಸಾಧ್ಯವಿದೆ.

ಪ್ರಶ್ನೆ : ಇದೀಗ ಸರ್ಕಾರ ಯಕ್ಷಗಾನಕ್ಕೆ ಏಕರೂಪದ ಪಠ್ಯವನ್ನು ಸಿದ್ಧಪಡಿಸಿದೆ. ಆ ಸಮಿತಿಯಲ್ಲಿ ತಾವೂ ಇದ್ದೀರಿ. ಏಕರೂಪದ ಪಠ್ಯದಿಂದ ಪ್ರಾದೇಶಿಕ ಪರಂಪರೆಗಳೆಲ್ಲ ನಾಶಹೊಂದಿ, ಯಕ್ಷಗಾನದ ಬಹುತ್ವ ಅಳಿಯುವ ಅಪಾಯ ಇದೆ ಅಂತ ಒಂದು ಕೂಗಿದೆಯಲ್ಲ?

ಹೊಸ್ತೋಟ : ಅಂತಹ ಒಂದು ಕೂಗಿದೆ ನಿಜ. ಆದರೆ ನಾನು ಒಂದು ಹೇಳುತ್ತೇನೆ-ಭಾಷೆಯಲ್ಲಿ ಪ್ರತಿ ಹತ್ತು ಮೈಲಿಗೆ ಅದನ್ನು ಅದನ್ನು ಜನರು ಬಳಸುವ ರೀತಿ ಬೇರೆ ಬೇರೆ ಇರುತ್ತದೆ ಅಂತ ಭಾಷಾಶಾಸ್ತ್ರಜ್ಞರು ಹೇಳುತ್ತಾರೆ. ಇದನ್ನೇ ಜನರ ಆಡು ಭಾಷೆ ಅಂತ ಹೇಳುತ್ತಾರೆ. ಜನರಾಡುವ ಆಡು ಭಾಷೆಯೇ ಭಾಷೆಯೊಂದು ಸಮುದಾಯದ ಜೀವನಾಡಿಯಾಗಿ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿ. ಆದರೂ ಇಡಿಯ ಕನ್ನಡ ಭಾಷೆಗೆ ಒಂದು ಸಮಾನವಾದ ವ್ಯಾಕರಣ ಪದ್ಧತಿ ಇಲ್ಲವೇನು? ವ್ಯಾಕರಣವನ್ನು ಅಭ್ಯಾಸ ಮಾಡಿದಾಕ್ಷಣ ಮನೆ ಮಾತು ಮರೆಯುತ್ತದೆಯೇನು? ಜನರು ಮನೆಮಾತನ್ನು ಅಥವಾ ಪ್ರಾದೇಶಿಕ ಸೊಗಡಿನ ಮಾತನ್ನು ಅವಜ್ಞೆ ಮಾಡಿದರೆ ಅದಕ್ಕೆ ತಾನು ಶಿಷ್ಟನಾಗಿ ಕಾಣಬೇಕು ಎಂಬ ತೆವಲು ಕಾರಣವೇ ಹೊರತೂ ವ್ಯಾಕರಣದ ಅಭ್ಯಾಸವಲ್ಲ ತಾನೆ? ಏಕರೂಪಕದ ಪಠ್ಯ ಎಂದರೆ ಯಕ್ಷಗಾನದ ತಂತ್ರಾಂಶಗಳ ವ್ಯಾಕರಣ ಇದ್ದ ಹಾಗೆ. ಪ್ರಾದೇಶಿಕ ಪದ್ಧತಿ ಪರಂಪರೆಗಳೆಂದರೆ ಭಾಷೆಯಲ್ಲಿ ಜನರಾಡುವ ಮನೆ ಮಾತಿದ್ದಂತೆ. ಆದ್ದರಿಂದ ಏಕರೂಪದ ಪಠ್ಯದಿಂದ ಬಹುತ್ವಕ್ಕೆ ಅಪಾಯವಿದೆ ಎಂಬ ಆಕ್ಷೇಪದಲ್ಲಿ ಹುರುಳಿಲ್ಲ.

ಪ್ರಶ್ನೆ : ಯಕ್ಷಗಾನ ಸಂಶೋಧನೆ-ಪೀಎಚ್ಡಿಗಳ ಬಗೆಗೆ

ಹೊಸ್ತೋಟ : ಪೀಎಚ್ಡಿಯಲ್ಲಿ ಆಕರ ಗ್ರಂಥದಿಂದ ಉಲ್ಲೇಖಿಸಿ ಸಂಶೋಧನೆ ಅಂತ ಹೇಳಲಾಗುತ್ತದೆ. ಕೆಲವು ಪೀಎಚ್ಡಿಗಳು ಮೌಲಿಕವಾಗಿದೆ. ಆದರೆ. ಕಲೆಯ ಯಾವುದೋ ಒಂದು ವಿಭಾಗವನ್ನು ಶೋಧಿಸುವ ಸಂಶೋಧನೆ ಹೆಚ್ಚು ಪ್ರಯೋಜನಕಾರಿ. ಉದಾಹರಣೆಗೆ ಶಿವರಾಮ ಕಾರಂತರು ಕೈಗೊಂಡ ಸಂಶೋಧನೆಗಳು. ಯಕ್ಷಗಾನದಲ್ಲಿ ಇದರ ಪ್ರಾಯೋಗಿಕ ವಿಭಾಗಗಳ ಕುರಿತು ಅಂದರ ನೃತ್ಯ, ಅಭಿನಯ, ಭಾಗವತಿಕೆ ಮೊದಲಾದ ತಾಂತ್ರಿಕ ಅಂಶಗಳ ಕುರಿತು ಸಂಶೋಧನೆ ಆದರೆ ಅದರಿಂದ ಯಕ್ಷಗಾನಕ್ಕೆ ಪ್ರಯೋಜನವಾಗಬಹುದು. ಆದರೆ ಒಂದುಂಟು ಯಕ್ಷಗಾನ ಗೊತ್ತಿದ್ದವರಿಗೆ ಯಕ್ಷಗಾನದ ಬಗೆಗೆ ಗೊತ್ತಿಲ್ಲ; ಯಕ್ಷಗಾನದ ಬಗೆಗೆ ಗೊತ್ತಿದ್ದವರಿಗೆ ಯಕ್ಷಗಾನ ಗೊತ್ತಿಲ್ಲ ಎಂಬ ಪರಿಸ್ಥಿತಿ ಯಕ್ಷಗಾನದಲ್ಲಿದೆ ಏನು ಮಾಡೋಣ.

ಪ್ರಶ್ನೆ : ತಾವು ಅವಿವಾಹಿತರು. ಕೆಲವರಂತೂ ತಾವು ಸನ್ಯಾಸಿಗಳೆಂದೇ ತಿಳಿದಿದ್ದಾರೆ, ಈ ಬ್ರಹ್ಮಚರ್ಯವನ್ನು ತಾವು ಉದ್ದೇಶಪೂರ್ವಕವಾಗಿಯೇ ಸ್ವೀಕರಿಸಿದರೆ?

ಹೊಸ್ತೋಟ : ಇಲ್ಲ.. ಇಲ್ಲ. ನಾನು ರಾಜಕಾರಣಿಯಲ್ಲದೇ ಇರುವುದರಿಂದ ಇದ್ದದ್ದನ್ನು ಇದ್ದಂತೆ ಹೇಳಲು ನನಗೆ ಯಾವ ಮುಜುಗರವೂ ಇಲ್ಲ. ನನಗೆ ಬಾಲ್ಯದಲ್ಲಿ ನನ್ನದೇ ಆದ ಭೂಮಿ ಕಾಣಿ ಇರಲಿಲ್ಲ. ಅನಾಥ ಬಾಲಕನಂತೆ ಕಂಡವರ ಮನೆಯಲ್ಲಿ ಬೆಳೆದವನು ನಾನು. ನನಗೂ ವಿವಾಹಿತನಾಗಿ ಗ್ರಹಸ್ಥ ಜೀವನ ನಡೆಸಬೇಕೆಂಬ ಕನಸಿತ್ತು-ಒಂದು ಕಾಲದಲ್ಲಿ ನನ್ನ ತಾರುಣ್ಯದ ಕಾಲದಲ್ಲಿ ಇಂತಹ ತರುಣರಿಗಾಗಿಯೇ ಒಂದು ವ್ಯವಸ್ಥೆ ಇತ್ತು- ಅದೇ 'ಮನೆಯಳಿಯತನ'. ಗಂಡು ಸಂತಾನವಿಲ್ಲದ ಮನೆಯಲ್ಲಿ ಮನೆಯ ಮಗಳನ್ನು ಮದುವೆಯಾಗಿ ಮಾವನ ಮನೆಯ ಯಜಮಾನಿಕೆ ನೋಡಿಕೊಳ್ಳುವುದು. ಕೆಲವರು ಅಂತಹ ಸಂಬಂಧವನ್ನು ಸೂಚಿಸಿಯೂ ಇದ್ದರು. ಆದರೆ ಸ್ವಾಭಿಮಾನಿಯಾದ ನನಗೆ ಪರರ ಹಂಗಿನಲ್ಲಿ ಬದುಕುವ ಈ ವ್ಯವಸ್ಥೆ ಯಾಕೋ ಸರಿ ಕಾಣಲಿಲ್ಲ.

ನಂತರ ಏನೇ ಆಗಲಿ ನನ್ನದೇ ಆದ ಆಸ್ತಿ ಮಾಡಬೇಕೆಂದು ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಮಂಚಿಕೇರಿ ಸಮೀಪ ಕೆರೆಹೊಸಳ್ಳಿ ಎನ್ನುವಲ್ಲಿ ಸರ್ಕಾರೀ ಜಮೀನಿನ ಒತ್ತುವರಿ ಮಾಡಿ ಸ್ವಂತ ಮೆಹನತ್ತಿನಿಂದ ಕೆಲವು ಕಾಲ ಸಾಗುವಳಿಯನ್ನೂ ಮಾಡಿದೆ. ಅದಿನ್ನೇನು ನನಗೆ ಮಂಜೂರಾಗಬೇಕಿದೆ ಎನ್ನುವಾಗ ಆ ಜಮೀನು ಮುಳುಗಡೆಯಾಗುತ್ತದೆ ಎಂದಾಯಿತು. ಇದರಿಂದ ನನಗೆ ಜಿಗುಪ್ಸೆ ಆಯ್ತು. ಈ ಆಸ್ತಿ, ಹೆಂಡತಿ-ಮಕ್ಕಳು ಇವೆಲ್ಲ ನಮ್ಮಂತಹವರಿಗಲ್ಲ ಎಂಬ ಭಾವ ಮೂಡಿತು ಹಾಗಾದದ್ದೇ ಕಾರವಾರದ ರಾಮಕೃಷ್ಣಾಶ್ರಮ [ಬೇಲೂರಿನ ಅಧಿಕೃತ ರಾಮಕೃಷ್ಣಾಶ್ರಮಕ್ಕೆ ಸಂಬಂಧಿಸಿದ್ದಲ್ಲ] ಕ್ಕೆ ಹೋಗಿ ಅಲ್ಲಿನ ಸ್ವಾಮಿ ಪ್ರಭನಂದಜೀಯವರ ಬಳಿ ಮಾರ್ಗದರ್ಶನಕ್ಕೆ ತಲೆಬಾಗಿದೆ. ಅವರು ನನಗೆ ಅಭಯಚೈತನ್ಯ ಎಂಬ ಹೆಸರನ್ನು ಕೊಟ್ಟು ಎಂತದ್ದೋ ಒಂದು ಹೋಮ ಮಾಡಿ ಆಹುತಿಯನ್ನೆಲ್ಲ ಕೊಟ್ಟು ಬ್ರಹ್ಮಚರ್ಯದ ದೀಕ್ಷೆ ಕೊಟ್ಟರು.

ಇದೇ ಸಂದರ್ಭದಲ್ಲಿ ಅಸಂಗ್ರಹ, ಸತ್ಯವನ್ನೇ ಹೇಳುವುದು, ಆಧ್ಯಾತ್ಮದಲ್ಲಿಯೇ ಜೀವನ ಕಳೆಯುವುದು ಮೊದಲಾದ ಪ್ರತಿಜ್ಞೆಯನ್ನೂ ಮಾಡಿಸಿಕೊಂಡರು. ಆದರೆ ಒಂದೇ ವರ್ಷದಲ್ಲಿ ರಾತ್ರೋರಾತ್ರಿ ಯಾರಿಗೂ ಹೇಳದೇ ಅಲ್ಲಿಂದ ನಾನು ಹೊರಬಂದೆ. ದರಿದ್ರನಿಗೆ ಅನ್ನ ಹಾಕುವುದು ನಮ್ಮ ಪಾರಂಪರಿಕ ಮೌಲ್ಯ ಆದರೆ ಮಠ ಮಾನ್ಯಗಳನ್ನು ನಡೆಸುವುದಕ್ಕೆ ಬೇಕಾಗಿ ಶ್ರೀಮಂತರಿಗೆ ವಿಶೇಷ ಮಣೆ ಹಾಕಿ ಗೌರವಿಸುವದನ್ನು ಕಂಡು ನನಗೆ ಬೇಸರವಾಯಿತು. ಅದಕ್ಕೆ ಅಲ್ಲಿಂದ ಒಡಿ ಬಂದೆ ಎಂದು ಹೇಳಬಹುದು. ಬಂದವನಿಗೆ ನಾನು ಬದುಕುವದಕ್ಕಾಗಿ ಒಂದು ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕೆಂದೆನಿಸಿತು. ಆಗ ನನ್ನ ಮುಂದಿದ್ದ ಆಯ್ಕೆ ಯಕ್ಷಗಾನವೇ ಆಗಿತ್ತು. ಕಾರವಾರದಿಂದ ಬಂದ ನನಗೆ ಬಾಳೆಹದ್ದದ ಕೃಷ್ಣ ಭಾಗವತರು ಎರಡು ವರ್ಷ ಆಶ್ರಯ ಕೊಟ್ಟರು. ಇದೇ ಕಾಲಾವಧಿಯಲ್ಲೇ ನಾನು ಯಕ್ಷಗಾನದ ಛಂದಸ್ಸನ್ನು ಚಿಕಿತ್ಸಕ ಬುದ್ಧಿಯಿಂದ ಅಧ್ಯಯನ ಮಾಡಲು ತೊಡಗಿದೆ. ಆಗ ನನಗೆ ಹೊಳೆದದ್ದು ಯಕ್ಷಗಾನ ತಾಳಗಳ ಕಲಿಕಾ ಸೂತ್ರಗಳು. ಮಕ್ಕಳ ಮಗ್ಗಿಯನ್ನು ಹೋಲುವ ಈ ಸೂತ್ರಗಳನ್ನು ಸಣ್ಣ ಪುಸ್ತಕ ರೂಪದಲ್ಲಿ ಹೊರತಂದೆ. ಅಭ್ಯಾಸವೇ ಈ ಪುಸ್ತಕದ ಬೆಲೆ ಎಂದು ಮುದ್ರಿಸಿ ಎಲ್ಲರಿಗೂ ಕೊಟ್ಟೆ. ಅದರ ಪ್ರಯೋಜನವನ್ನು ಯಾರು ಯಾರು ಪಡೆದುಕೊಂಡರೋ ನನಗೆ ಗೊತ್ತಿಲ್ಲ.

ಕಾರವಾರದ ರಾಮಕೃಷ್ಣಾಶ್ರಮ

ಪ್ರಶ್ನೆ : ತಮ್ಮ ಮೂಲ ಕುಟುಂಬದ ಸದಸ್ಯರು ಯಾರಾದರೂ ಇದ್ದಾರೆಯೇ? ಇದ್ದರೆ ಅವರ ಸಂಪರ್ಕ ಈಗಲೂ ಉಂಟೇ?

ಹೊಸ್ತೋಟ : ಇದ್ದಾರೆ.. ಹೇಳ್ತೇನೆ. ನನಗೆ ಒಂದು ಅಕ್ಕ ಮತ್ತು ಎರಡು ಜನ ತಮ್ಮಂದಿರು. ಅಕ್ಕ ಭವಾನಿ ವಿವಾಹಿತೆ ಆದರೆ ಮಕ್ಕಳಿಲ್ಲ; ಅವಳು ಗಂಡನಿಂದ ದೂರವಾಗಿ ನರ್ಸ ತರಬೇತಿ ಹೊಂದಿ ಅದೇ ವೃತ್ತಿಯಲ್ಲಿ ಈಗ ನನ್ನ ಕಿರಿಯ ತಮ್ಮ ಶಂಕರನಾರಾಯಣನ ಸಂಗಡ ಅವನ ಮನೆಯಲ್ಲಿಯೇ ಇದ್ದಾಳೆ. ನನ್ನ ತಮ್ಮ ಶಂಕರನಾರಾಯಣನು ಸಹಕಾರೀ ಸಂಘವೊಂದರಲ್ಲಿ ಉದ್ಯೋಗಿಯಾಗಿದ್ದು ಈಗ ನಿವೃತ್ತ. ಶಿರಸಿಯ ಹೊಸ ಬಸ್ ಸ್ಟಾಂಡ್ ಸಮೀಪ ಸ್ವಂತ ಮನೆ ಕಟ್ಟಿಕೊಂಡು ಇದ್ದಾನೆ. ಅವನಗೆ ಒಂದು ಮಗ, ಒಂದು ಮಗಳು ಹೀಗೆ ಎರಡು ಜನ ಮಕ್ಕಳು. ತಮ್ಮನ ಮಗ ಮಹೇಶ ವಿವಾಹಿತನಾಗಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾನೆ. ಮಗಳು ಮಹಾದೇವಿ ಅಮೇರಿಕಾಕ್ಕೆ ಹೋಗುವ ತಯಾರಿಯಲ್ಲಿದ್ದಾಳೊ ಅಥವಾ ಈಗಾಗಲೇ ಅಮೇರಿಕಾಕ್ಕೆ ಹೋಗಿದ್ದಾಳೆಯೋ-ಒಟ್ಟಿನಲ್ಲಿ ಅವಳು ಸುಶಿಕ್ಷಿತೆ. ನನ್ನ ಹಿರಿಯ ತಮ್ಮ ನನ್ನ ಹಾಗೇ ಅವಿವಾಹಿತ. ಕಳಚೆ, ಬರಬಳ್ಳಿ ಮೆಣಸೆ ಮೊದಲಾದ ಹಳ್ಳಿಯ ಕಡೆ ಮೊದಲಿನಿಂದಲೂ ಯಕ್ಷಗಾನ ಕಲಿಸುವ ಕಾಯಕದಲ್ಲಿ ತೊಡಗಿದ್ದಾನೆ. ಇವರೆಲ್ಲರ ಸಂಪರ್ಕ ಈಗಲೂ ಇದೆ ಎನ್ನಲು ಅಡ್ಡಿಯೇನಿಲ್ಲ.

ಪ್ರಶ್ನೆ : ತಾವು ಮೋತಿಗುಡ್ಡಕ್ಕೆ ಬಂದಿದ್ದೀರಿ ಎಂದಾಕ್ಷಣ ಹೊರಪ್ರಪಂಚಕ್ಕೆ ತಮ್ಮ ದರ್ಶನವಿಲ್ಲ ಎಂತ ಬಹಳಷ್ಟು ಜನ ಕಲಾಭಿಮಾನಿಗಳು ತಿಳಿದಿದ್ದಾರೆ. ಇನ್ನು ಮುಂದಿನ ತಮ್ಮ ಕಾರ್ಯಸೂಚಿ ಏನು?

ಹೊಸ್ತೋಟ : ಹಾಗೇನೂ ಇಲ್ಲ. ಈ ಸ್ಥಳ ನನ್ನ ಮುಂದಿನ ಸಾಧನೆಗೆ ಯೋಗ್ಯ ಸ್ಥಳ ಎಂತ ಮಾತ್ರ ನಾನು ಇಲ್ಲಿಗೆ ಬಂದು ವಾಸ್ತವ್ಯ ಪ್ರಾರಂಭಿಸಿದ್ದೇನೆ. ಎಂದ ಮಾತ್ರಕ್ಕೆ ಇನ್ನು ನಾನು ನನ್ನ ಯಕ್ಷಗಾನ ಚಟುವಟಿಕೆಗಳನ್ನು ಬಿಟ್ಟುಬಿಡುತ್ತೇನೆಂದು ಅರ್ಥವಲ್ಲ. ಆಗಾಗ ಯಕ್ಷಗಾನ ಗೋಷ್ಠಿ, ಸಮ್ಮೇಳನಗಳಿಗೆ, ಇತರ ಕಾರ್ಯಕ್ರಮಗಳಿಗೆ ಇನ್ನು ಮುಂದೆ ಕೂಡ ಹೋಗಿಯೇ ಹೋಗುತ್ತೇನೆ. ಇಷ್ಟೇ... ಇಷ್ಟು ಕಾಲ ಬೇರೆಯವರ ಮನೆಯಲ್ಲಿರುತ್ತಿದ್ದುದರಿಂದ ನನ್ನ ವಿಚಾರಗಳನ್ನು ನಿಷ್ಠುರವಾಗಿ ಹೇಳುವುದಕ್ಕೆ ಮುಜುಗರವಾಗುತ್ತಿತ್ತು. ಆದರೆ ಇದೀಗ ನಾನು ನನ್ನ ಮನಸ್ಸಿಗೆ ಅನಿಸಿದ್ದನ್ನು ನಿರ್ಭಿಡೆಯಿಂದ ಹೇಳಲು ಸಮರ್ಥ ಅಷ್ಟೇ.

ಪ್ರಶ್ನೆ : ತಾವು ಯಕ್ಷಗಾನದ ಅತ್ಯುನ್ನತ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತರು. ತಮಗೆ ಸರ್ಕಾರದ ಆರ್ಥಿಕ ಸಹಾಯ-ಮಾಸಾಶನ ಇತ್ಯಾದಿ ದೊರೆಯುತ್ತಿದೆಯೆ?

ಹೊಸ್ತೋಟ : ಇಲ್ಲ. ಹೇಳಿದೆನಲ್ಲ.. ಕಾರವಾರದ ರಾಮಕೃಷ್ಣಾಶ್ರಮದಲ್ಲಿ ತೆಗೆದುಕೊಂಡ ದೀಕ್ಷೆ ಅಸಂಗ್ರಹ. ಅದು ಈಗಲೂ ನನ್ನಲ್ಲಿ ಇದೆ. ನನ್ನ ಕನಿಷ್ಟ ಅಗತ್ಯಕ್ಕಿಂತ ಹೆಚ್ಚಿನದನ್ನು ಎಂದೂ ನಾನು ಸಂಗ್ರಹ ಮಾಡಿದವನಲ್ಲ. ಮಾಸಾಶನಕ್ಕಾಗಲೀ, ಇತರ ಆರ್ಥಿಕ ಸಹಾಯಕ್ಕಾಗಲೀ ನಾನು ಯಾವುದೇ ಮಾರ್ಗದಿಂದಲಾಗಲೀ ಈ ವರೆಗೆ ಸರ್ಕಾರದ ಮೊರೆ ಹೋದವನಲ್ಲ. ಹೋದರೆ ಸಿಗುತ್ತಿತ್ತೋ ಏನೋ. ನನಗೆ ಹಣ ಯಾಕೆ? ನನ್ನ ಶಿಷ್ಯರು ನನ್ನ ಕೃತಿಗಳ ಯಕ್ಷಗಾನ ಪ್ರದರ್ಶನ ಮಾಡಿ ಪ್ರತಿ ಪ್ರದರ್ಶನಕ್ಕೆ ನೂರು ಇನ್ನೂರು ರೂಪಾಯಿಯ ಕೃತಿಕಾರರ ಗೌರವಧನ ಅಂತ ತೆಗಿದಿರಿಸಿದ್ದು 10 ಸಾವಿರ ರೂಪಾಯಿ ಆಗಿತ್ತು. ಶಿಷ್ಯರು ತಂದು ನನಗೆ ಕೊಟ್ಟರು. ನಾನು ಆ ಹಣವನ್ನು ಕಾರ್ಗಿಲ್ ನಿಧಿಗೆ ಕೊಟ್ಟುಬಿಟ್ಟಿದ್ದೇನೆ. ನನಗ್ಯಾಕೆ ದುಡ್ಡು ದುಗ್ಗಾಣಿ.

ಪ್ರಶ್ನೆ : ಈಗ ತಮ್ಮ ಕೃತಿಗಳಿಗೆ ಬರೋಣ. ತಮ್ಮ ಈ ವರೆಗಿನ ಯಕ್ಷಗಾನ ಮತ್ತಿತರ ಕೃತಿಗಳ ಕುರಿತು ವಿವರಿಸುತ್ತೀರಾ?

ಹೊಸ್ತೋಟ : ನಾನು ಬರೆದ ಪ್ರಪ್ರಥಮ ಪ್ರಸಂಗ ರಾಮ ನಿರ್ಯಾಣ. ಸುಮಾರು ಎಪ್ಪತ್ತರ ದಶಕದಲ್ಲಿ ರೇಡಿಯೋ ಕಾರ್ಯಕ್ರಮಕ್ಕಾಗಿ ಬರೆದ ಈ ಪ್ರಸಂಗ ನಂತರ ಬಹಳ ಜನಪ್ರಿಯವಾಗಿರುವುದು ನಮಗೆಲ್ಲ ತಿಳಿದೇ ಇದೆ. ತಾಳಮದ್ದಳೆಯಲ್ಲಿ ಹಸರಗೋಡು ಲಕ್ಷ್ಮಿನಾರಾಯಣ ಹೆಗಡೆ, ಶೀಗೇಮನೆ ನಾರಾಯಣ ಹೆಗಡೆ, ಬಾಳೆಹದ್ದದ ಭಾಗವತರು ಇವರೆಲ್ಲ ಸೇರಿ ಪ್ರಯೋಗಕ್ಕೆ ತಂದು ಜನಪ್ರಿಯಗೊಳಿಸಿದವರು. ಜ್ವಾಲಾ ಪ್ರತಾಪ, ವೀರವರ್ಮ ವಿಜಯ, ಭಾಸವತಿ ಇವೆಲ್ಲ ನಂತರದ ಪ್ರಸಂಗಗಳು. ಭಾಸವತಿಯ ಕಥೆಯನ್ನು ಕೆಪ್ಪೆಕೆರೆ ಭಾಗವತರ ಸಹೋದರ ಕಾಲೇಜು ಉಪನ್ಯಾಸಕರೊಬ್ಬರು ಕೊಟ್ಟರು. ಅದನ್ನು ಕೆರೆಮನೆ ಶಿವರಾಮ ಹೆಗಡೆಯವರ ಮಾರ್ಗದರ್ಶನದಲ್ಲಿ ಬರೆದೆ.

ನನ್ನ ರಾಮಾಯಣ ಪ್ರಸಂಗಗಳ ಕುರಿತು ಹೇಳುವುದಾದರೆ ರಾಮನಿರ್ಯಾಣವನ್ನು ಬರೆದಾದ ಮೇಲೆ ಆ ಕಾಲದಲ್ಲಿ ಹರಕೆ ಬಯಲಾಟವಾಗಿ ಪದೇ ಪದೇ ಪ್ರದರ್ಶಿತವಾಗುತ್ತಿದ್ದ ಪುತ್ರಕಾಮೇಷ್ಟಿಯ ಹಳೆಯ ಪ್ರಸಂಗ ಪ್ರದರ್ಶನಕ್ಕೆ ತೊಡಕಾಗಿತ್ತು ಅಂತ ಕೆಲವು ಕಲಾವಿದರು ಹೇಳಿದಾಗ ರಂಗಕ್ಕೆ ಅನುಕೂಲವಾಗುವಂತೆ ಪುತ್ರಕಾಮೇಷ್ಟಿಯನ್ನೂ ಬರೆದೆ. ಪ್ರಾರಂಭದ ಪುತ್ರಕಾಮೇಷ್ಟಿ-ಕೊನೆಯ ನಿರ್ಯಾಣ ಬರೆದ ಮೇಲೆ ನಡುವಿನ ರಾಮಾಯಣವನ್ನೂ ಪ್ರಸಂಗರೂಪದಲ್ಲಿ ಬರೆದು ಮುಗಿಸಿದೆ. ಐವತ್ತು ಆಖ್ಯಾನಗಳಲ್ಲಿ ಮಹಾಭಾರತ ಪ್ರಸಂಗವನ್ನೂ ಬರೆದೆ ಮತ್ತು ಇಪ್ಪತ್ತು ಆಖ್ಯಾನಗಳಲ್ಲಿ ಭಾಗವತವನ್ನೂ ಪ್ರಸಂಗ ರೂಪದಲ್ಲಿ ಬರೆದೆ. ಇನ್ನು ಸಂಶೋಧನೆಯಲ್ಲಿ ತಾಳಸೂತ್ರ, ನೃತ್ಯಸೂತ್ರ, ಮದ್ದಳೆಯ ಕುರಿತು ಪುಸ್ತಕವನ್ನೆಲ್ಲ ಬರೆದಿದ್ದೇನೆ. ತೀರ್ಥಕ್ಷೇತ್ರ ಯಾಣದ ಕುರಿತು ಸಂಶೋಧನೆಯನ್ನು ಕೈಗೊಂಡಿದ್ದೇನೆ.

ವೀರಶೈವ ಸಾಹಿತ್ಯದಲ್ಲಿರುವ ಅನೇಕ ಶಿವಶರಣರ ಕಥೆಗಳನ್ನು ಯಕ್ಷಗಾನ ಪ್ರಸಂಗವಾಗಿ ರಚಿಸಿ ಅದು ಈಗಾಗಲೇ ಸಾಕಷ್ಟು ಪ್ರದರ್ಶನವನ್ನೂ ಕಂಡು ನಾಡಿನಾದ್ಯಂತ ಜನಪ್ರಿಯವಾಗಿದೆ. ಅವುಗಳಲ್ಲಿ ಜಗಜ್ಯೋತಿ ಬಸವೇಶ್ವರ, ಪ್ರಭುಲಿಂಗಲೀಲೆ, ಮಾಯಾಕೋಲಾಹಲ, ಅಕ್ಕಮಹಾದೇವಿ ಮೊದಲಾದವು ಪ್ರಮುಖವಾದವು. ಜಗಜ್ಯೋತಿ ಬಸವೇಶ್ವರವಂತೂ ವಿದ್ವಾನ್ ಧತ್ತಮೂರ್ತಿ ಭಟ್ಟರ ತಂಡದ ಮೂಲಕ ನಾಡಿನಾದ್ಯಂತ ಪ್ರದರ್ಶನಗೊಂಡಿದೆ. ನನ್ನ ಈ ಎಲ್ಲ ಕೃತಿಗಳಲ್ಲಿ ಮಾಯಾಕೋಲಾಹಲ, ರಾಮನಿರ್ಯಾಣ, ಭಾಸವತಿ, ಸಂಪೂರ್ಣ ರಾಮಾಯಣ, ಭಾಗವತ ಪ್ರಸಂಗಗಳು ಮಾತ್ರ ಮುದ್ರಣವಾಗಿವೆ.

ಇಡಗು೦ಜಿ ಮೇಳದ ಪ್ರಸಿಧ್ಧ ಪ್ರಸ೦ಗ 'ಶ್ರೀರಾಮ ನಿರ್ಯಾಣ'ದ ಶ್ರೀರಾಮನ ಪಾತ್ರ ನಿರ್ವಹಿಸುತ್ತಲೇ ಇಹಲೋಕ ತ್ಯಜಿಸಿದ ಕೆರೆಮನೆ ಶ೦ಭು ಹೆಗಡೆ

ಪ್ರಶ್ನೆ : ತಮ್ಮ ಈ ಎಲ್ಲ ಕೃತಿಗಳನ್ನೂ ಒಳಗೊಂಡಿರುವ ಒಂದು ಸಂಪುಟವನ್ನು ಹೊರತಂದರೆ ಅದೊಂದು ಶಾಶ್ವತ ದಾಖಲೆಯಾಗಬಹುದು. ಆ ಕುರಿತು ಏನಾದರೂ ಪ್ರಯತ್ನ ನಡೆದಿದೆಯೆ? ತಮ್ಮ ಕಾಲಾನಂತರ ಆ ಎಲ್ಲ ಕೃತಿಗಳ ಹಸ್ತ ಪ್ರತಿಯ ಪಾಡೇನು?

ಹೊಸ್ತೋಟ : ಹೌದು ಇನ್ನೂ ಪ್ರಕಟವಾಗಬೇಕಿದೆ. ಈ ಕುರಿತು ಯೋಚಿಸಿದ್ದೇನೆ ಎಲ್ಲ ಪ್ರದೇಶದ ನನ್ನ ಅಭಿಮಾನಿಗಳಿಗೆ ಪ್ರಾತಿನಿಧ್ಯ ಇರುವಂತೆ ಒಂದು ಸಮಿತಿಯನ್ನು ರಚಿಸಿ ಯಕ್ಷಗಾನಕ್ಕಾಗಿ ಪ್ರಾಮಾಣಿಕವಾಗಿ ದುಡಿಯುತ್ತಿರುವ ಸಂಘ ಸಂಸ್ಥೆಗಳಿಗೆ-ಕೇವಲ ಒಂದು ಸಂಸ್ಥೆಗಲ್ಲ-ಇವುಗಳ ಹಕ್ಕನ್ನು ಕೊಡಮಾಡಬೇಕೆಂಬ ಯೋಜನೆಯಿದೆ. ಆದರೆ ಅದಕ್ಕೆಲ್ಲ ಕಾಲ ಕೂಡಿಬರಬೇಕಷ್ಟೆ.

ಪ್ರಶ್ನೆ : ತಾವು ಯಕ್ಷಗಾನದಲ್ಲಿ ಸಹಸ್ರಾರು ಜನರಿಗೆ ಯಕ್ಷಗಾನ ಹೇಳಿಕೊಟ್ಟಿರುವ ಗುರು ಬಹುಶಃ ಹೆಚ್ಚು ಜನರಿಗೆ ಯಕ್ಷಗಾನ ಕಲಿಸುವುದು ಎನ್ನುವುದಕ್ಕೆ ಗಿನ್ನೆಸ್ ದಾಖಲೆ ಮಾಡಲು ಸಾಧ್ಯವಾದರೆ ತಮ್ಮ ಹೆಸರು ಮೊದಲು ಬರಬಹುದು. ತಮ್ಮ ಒಟ್ಟಾರೆ ಕಲಿಸುವ ಅನುಭವದ ಕುರಿತು ಹೇಳುತ್ತೀರಾ?

ಹೊಸ್ತೋಟ : ನಾನು ಮೊದಲು ಯಕ್ಷಗಾನ ಕಲಿಸಿದ್ದು ಸಿದ್ಧಾಪುರ ಕಾಲೇಜಿನಲ್ಲಿ. ಆಗ ಬಿ.ಎಚ್.ಶ್ರೀಧರರು ಇದ್ದರು. ಅವರ ಸಹಕಾರದೊಂದಿಗೆ ನಾನು ಕಾಲೇಜಿನ ಮಕ್ಕಳಿಗೆ ಮತ್ತಿತರರಿಗೆ ಕಲಿಸಿದೆ. ಆಗ ಕಲಿತವರಲ್ಲಿ ದಿ.ಡಿ.ಜಿ.ಹೆಗಡೆ ಮತ್ತು ಶಿರಳಗಿ ಭಾಸ್ಕರ ಜೋಶಿ ಪ್ರಮುಖರು. 'ಪೌಂಡ್ರಕ ವಧೆ' ಎಂಬ ಆಖ್ಯಾನವನ್ನು ನಾನು ಆಗ ಕಲಿಸಿ ನಿರ್ದೇಶಿಸಿದ್ದೆ. ಆಗಲೇ ಹೇಳಿದಂತೆ ನಾನು ಬಾಳೆಹದ್ದದವರ ಮನೆಯಲ್ಲಿರುವಾಗ ರೂಪಿಸಿದ ತಾಳಸೂತ್ರಗಳು ಕಲಿಸುವುದಕ್ಕೆ ನನಗೆ ಬಹಳ ಸಹಕಾರಿಯಾಗಿದೆ. ಮತ್ತೆ ನಾನು ತರಬೇತಿ ಕ್ಲಾಸು ಮಾಡಿದ್ದು ಇದೇ ಅಚವೆಯಲ್ಲಿ. ಅಚವೆಯಲ್ಲಿ ಕೃಷ್ಣ ಹೆಬ್ಬಾರ, ಮಾಲೆಗದ್ದೆ ಪರಮೇಶ್ವರ ಮೊದಲಾದವರಿದ್ದರು. ನೂರಾರು ಕಡೆ ನಾನು ಯಕ್ಷಗಾನ ತರಬೇತಿ ಕೊಟ್ಟಿದ್ದೇನೆ. ಸಾವಿರಾರು ಜನ ನನ್ನ ಹತ್ತಿರ ಯಕ್ಷಗಾನ ಕಲಿತಿದ್ದಾರೆ. ಪ್ರತಿವರ್ಷ ಕನಿಷ್ಟ ಹನ್ನೆರಡು ಜನರಿಗೆ ಯಕ್ಷಗಾನ ಕಲಿಸಿ ಮುಖಕ್ಕೆ ಬಣ್ಣ ಹಚ್ಚುವಂತೆ ಮಾಡಲೇಬೇಕೆಂದು ಇಪ್ಪತ್ತೈದು ವರ್ಷ ವ್ರತದಂತೆ ನಡೆಸಿಕೊಂಡು ಬಂದಿದ್ದೇನೆ.

ಶಿವಮೊಗ್ಗಾದಲ್ಲಿ ಅಂಧ ಮಕ್ಕಳ ಶಾಲೆಗೆ ಹೋಗಿ ನನ್ನ ಉಳಿದ ಆರೋಗ್ಯವಂತ ಶಿಷ್ಯರ ಸಹಾಯದಿಂದ ಪ್ರತಿಯೊಂದು ಅಂಧ ಬಾಲಕನ ಭುಜವನ್ನೂ ಹಿಡಿದುಕೊಂಡು ನೃತ್ಯದ ಆಕಾರ ಬರುವಂತೆ ಮಾಡಿ ಅವರಿಂದ ಯಶಸ್ವೀ ಯಕ್ಷಗಾನ ಪ್ರದರ್ಶನ ಕೊಡಿಸಿದ್ದೇನೆ. ಇದನ್ನು ಕಂಡು ಸ್ವತಃ ಶಿವರಾಮ ಕಾರಂತರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಎಲ್ಲ ಸಂದರ್ಭಗಳಲ್ಲಿಯೂ ನನ್ನ ತಾಳ ಸೂತ್ರಗಳು ನನ್ನ ಸಹಾಯಕ್ಕೆ ಬಂದಿದೆ.

ಇನ್ನು ನನ್ನ ಶಿಷ್ಯರಲ್ಲಿ ಐನಬೈಲು ಪರಮೇಶ್ವರ ಹೆಗಡೆ, ನಾಗರಾಜ ಜೋಶಿ, ಇಡವಾಣಿ ತ್ರಯಂಬಕ ಹೆಗಡೆ ಇನ್ನೂ ಅನೇಕರಿದ್ದಾರೆ. ಮಹಿಳೆಯರಲ್ಲಿ ಪ್ರಜ್ಞಾ ಮತ್ತಿಹಳ್ಳಿ ಮತ್ತು ಸೌಮ್ಯ ಗೋಟಗಾರು ಇವರು ಪ್ರಮುಖರು. ಮಹಿಳೆಯರಿಗೆ ಯಕ್ಷಗಾನ ಕಲಿಸುವಾಗ 'ಯಕ್ಷಗಾನ ಕಲಿತ ಮಹಿಳೆಯರು ಗರ್ಭಿಣಿಯರಾದರೆ ಯಕ್ಷಗಾನದ ಗರ್ಭ ಸಂಸ್ಕಾರ ಹುಟ್ಟುವ ಮಕ್ಕಳಿಗಾಗುತ್ತದೆ' ಎಂದು ನನ್ನ ನಿರೀಕ್ಷೆಯಾಗಿತ್ತು.

ಇನ್ನು ಈ ಎಲ್ಲ ಶಿಷ್ಯರ ರಂಗಪ್ರಸ್ತುತಿ ಸಮಾಧಾನ ತಂದಿದೆಯೇ ಎಂದು ಕೇಳಿದರೆ ಉತ್ತರ ಹೇಳುವುದು ಕಷ್ಟ. ಕೆಲವರಿಗೆ ಆರ್ಥಿಕ ಅನಿವಾರ್ಯತೆ ಎದುರಾಯಿತು. ಇನ್ನು ಕೆಲವರು ವೃತ್ತಿಗಿಳಿದರು. ನನ್ನ ತಾಳಸೂತ್ರಗಳು ಹೆಜ್ಜೆಗಾರಿಕೆಯ ಮೇಲೆ ಮತ್ತು ತಾಳದ ಮೇಲೆ ಬಲು ಬೇಗನೆ ಹಿಡಿತ ಸಾಧಿಸಲು ಶಿಷ್ಯರಿಗೆ ಅನುಕೂಲ ಒದಗಿಸಿದ್ದರಿಂದ ಅನೇಕರು ಪ್ರಥಮಿಕ ಹಂತದ ಕಲಿಕೆಯ ನಂತರ ಯಾರ್ಯಾರನ್ನೋ ಅನುಕರಣೆ ಮಾಡತೊಡಗಿದರು. ಇದರಿಂದ ನನಗೆ ಅಸಮಾಧಾನವಾದರೂ ನಾನೇನೂ ಮಾಡುವಂತಿಲ್ಲವಲ್ಲ!!

ಪ್ರಶ್ನೆ : ಬಹುಶಃ ಎಲ್ಲ ಗುರುಗಳ ಸಂದರ್ಭದಲ್ಲಿಯೂ ಇದು ಸತ್ಯ ಅಂತ ಅನಿಸುವುದಿಲ್ಲವೇ?.. ಈಗ ಉಪ್ಪೂರರ ಶಿಷ್ಯರಲ್ಲಿ ಎಷ್ಟು ಜನ ಉಪ್ಪೂರರಂತೆ ಹಾಡುತ್ತಾರೆ?

ಹೊಸ್ತೋಟ : ಹಹಹ! ಹೌದು ಹಾಗಾಗಿ ನನ್ನ ಶಿಷ್ಯರು ಅಂತಲೇ ಅಲ್ಲ ಯಕ್ಷಗಾನ ಕಲಿಯುವ ಯಾರಾದರೂ ಕಲೆಯ ಒಟ್ಟಾರೆ ಸ್ವರೂಪವನ್ನರಿತು ಸಿದ್ಧತೆಯೊಂದಿಗೆ ಬದ್ಧತೆ ಮತ್ತು ಶುದ್ಧತೆಯನ್ನು ಕಾಯ್ದುಕೊಂಡರೆ ಕಲೆಗೆ ಅಪಚಾರವಾಗುವುದಿಲ್ಲ ಎಂತ ನನ್ನೆಣಿಕೆ.

ಪ್ರಶ್ನೆ : ತಾವು ಯಕ್ಷಗಾನದ ಯಾವುದೇ ನಾಮಾಂಕಿತ ಪರಂಪರೆಯ ಕಲಾವಿದರ ಅಧಿಕೃತ ಶಿಷ್ಯರಾಗಿ ಯಕ್ಷಗಾನ ಕಲಿತವರಲ್ಲ. ಈ ಹಿನ್ನೆಲೆಯಲ್ಲಿ ತಾವು ಯಕ್ಷಗಾನದ ಪರಂಪರೆಯನ್ನು ಯಾವ ರೀತಿಯಲ್ಲಿ ಅರ್ಥೈಸುತ್ತೀರಿ?

ಹೊಸ್ತೋಟ : ಇಲ್ಲ. ಪ್ರಾರಂಭದಲ್ಲಿ ಯಕ್ಷಗಾನ ಪ್ರದರ್ಶನವನ್ನು ನೋಡುತ್ತಾ ಕೆರೆಮನೆ ಶಿವರಾಮ ಹೆಗಡೆಯವರ ಪಾತ್ರಗಳಿಂದ ಮತ್ತವರ ಒಟ್ಟಾರೆ ವ್ಯಕ್ತಿತ್ವದಿಂದ ಗಾಢ ಪ್ರಭಾವಕ್ಕೆ ಒಳಗಾದೆ. ನಂತರದಲ್ಲಿ ಮಹಾಬಲ ಹೆಗಡೆಯವರು ಮತ್ತು ಬಾಳೆಹದ್ದದ ಕೃಷ್ಣ ಭಾಗವತರು ನನ್ನಲ್ಲಿಯ ಯಕ್ಷಗಾನಕ್ಕೆ ರೂಪ ಕೊಟ್ಟವರು ಎಂದು ಹೆಳಬಹುದು. ಶಿವರಾಮ ಹೆಗಡೆಯವರ ಕಾಲದಲ್ಲಿ ಅವರ ವೇಷ ನೋಡಿ ನಾನು 'ಯಕ್ಷಗಾನ ವೇಷ ಅಂದರೆ ನಿಮ್ಮದು ಬೇರೆ ಯಾರದ್ದೂ ಅಲ್ಲ' ಅಂತೆಲ್ಲ ಹೊಗಳುತ್ತಿದ್ದೆ. ಆಗ ಅವರು ಪದೇ ಪದೇ ಹೇಳುತ್ತಿದ್ದ ಮಾತು ಪರಂಪರೆಯನ್ನು ನಾನು ಹೇಗೆ ಸ್ವೀಕರಿಸಬೇಕೆಂಬ ಮಾರ್ಗದರ್ಶನವನ್ನೂ ನನಗೆ ನೀಡಿದೆ ಅಂತ ನನಗನ್ನಿಸುತ್ತದೆ. ಅವರನ್ನು ಹೊಗಳಿದಾಗ ಅವರು ಹೇಳುತ್ತಿದ್ದರು 'ಮಂಜ್ನಾತ ಹಾಂಗೆಲ್ಲ ಹೇಳೂಲೆ ಬತ್ತಿಲ್ಲೆ. ಒಬ್ಬೊಬ್ಬರ ಹತ್ತರ ಒಂದೊಂದು ಒಳ್ಳೆದಿರ್ತು. ಒಳ್ಳೆದು ಎಲ್ಲಿದ್ರೂ ತಕಳಕಾಗ್ತು ಹೊರ್ತು ಯಾವುದೋ ಒಬ್ಬವಂಗೇ ಜೋತಬೀಳುಲಾಗ' ಎಂದು. ಇದೇ ಪರಂಪರೆಯನ್ನು ನಾನು ಅರ್ಥೈಸುವ ಮೂಲ ಆಧಾರ ತತ್ವ ಅಂತ ಹೇಳಬಹುದು ಯಕ್ಷಗಾನದ ಬೇರೆ ಬೇರೆ ಕಲಾವಿದರ ಪ್ರದರ್ಶನ ನೋಡಿದಾಗ ನನಗೆ ಯಕ್ಷಗಾನ ಪ್ರಸಂಗ ಕೃತಿಯೆ ಮೂಲ ಆಧಾರ ಅಂತ ಕಂಡುಬಂತು. ಅದರ ಆಧಾರದಲ್ಲಿಯೇ ಪರಂಪರೆಯನ್ನು ಈವರೆಗೆ ನಾನು ಅರ್ಥ ಮಾಡಿಕೊಂಡವ.

ಕೆರೆಮನೆ ಶಿವರಾಮ ಹೆಗಡೆ

ಪ್ರಶ್ನೆ : ಯಕ್ಷಗಾನದ ಪ್ರಾದೇಶಿಕ ಪರಂಪರೆ-ಪದ್ಧತಿಗಳು ಇದರ ಜೀವಂತಿಕೆಯ ದ್ಯೋತಕವಾದರೂ ಆಧುನಿಕ ಸಂದರ್ಭದಲ್ಲಿ ಯಕ್ಷಗಾನ ರಂಗಭೂಮಿಯ ಬೆಳವಣಿಗೆ, ತರಬೇತಿ, ಸಂಘಟನೆ ಮೊದಲಾದವುಗಳಿಗೆ ಈ ಪ್ರಾದೇಶಿಕತೆ ಒಂದು ತೊಡಕಾಗಿದೆ ಎಂದು ಎನಿಸುವುದಿಲ್ಲವೇ? ಇದಕ್ಕೆ ಪರಿಹಾರವೇನು?

ಹೊಸ್ತೋಟ : ಪರಿಹಾರವಿದೆ! ನೋಡಿ ಭಾಷೆಯಲ್ಲಿ ಗ್ರಂಥಸ್ಥವಾದ ಭಾಷೆ ಮತ್ತು ಜನರಾಡುವ ಭಾಷೆ ಅಂತ ಎರಡು ಇದೆ. ಆನರಾಡುವ ಭಾಷೆ ಉರೂರಿಗೆ ಒಂದೊಂದು ರೀತಿಯಿರುತ್ತದೆ ಆದರೆ ಗ್ರಂಥಸ್ಥ ಭಾಷೆ? ಒಂದು ಭಾಷೆಗೆ ಒಂದೇ ಅಲ್ಲವೇ? ಎಲ್ಲ ಪ್ರದೇಶದ ಜನರಾಡುವ ಭಾಷೆಯೂ ಕನ್ನಡವೇ ತಾನೆ? ಹಾಗೆಯೇ ಯಕ್ಷಗಾನದ ಪ್ರಾದೇಶಿಕ ಪರಂಪರೆಯು ಆಡು ಭಾಷೆಯಿದ್ದಂತೆ. ಆದರೆ ಗ್ರಂಥಸ್ಥವಾದ ಭಾಷೆಗೆ ಸಂವಾದಿಯಾದ ಶಿಷ್ಟ ಯಕ್ಷಗಾನವು ಎಲ್ಲ ಪ್ರಾದೇಶಿಕ ಪರಂಪರೆಯಲ್ಲಿದೆ. ಹಾಗಾಗಿಯೇ ಕೆರೆಮನೆಯವರ ಪ್ರದರ್ಶನ, ಕರ್ಕಿಯವರ ಪ್ರದರ್ಶನ, ಉಡುಪಿಯವರ ಪ್ರದರ್ಶನ ಹೀಗೆ ಯಾವುದನ್ನು ನೋಡಿದರೂ ಇದೆಲ್ಲ ಯಕ್ಷಗಾನವೇ ಅಂತ ನಮಗೆ ಅನಿಸುವುದು.

ನಾನು ಹೇಳುವುದೇನೆಂದರೆ ಈ ಎಲ್ಲವುಗಳಲ್ಲಿರುವ ಸಾಮಾನ್ಯ ಅಂಶಗಳನ್ನು ಗುರುತಿಸಿ ಅವುಗಳಿಂದ ಯಕ್ಷಗಾನ ಕಲಿಕೆಯ ಒಂದು ಸಾರ್ವತ್ರಿಕ ಪಠ್ಯವನ್ನು ನಾವು ಸಿದ್ಧಪಡಿಸಿಕೊಳ್ಳಬೇಕು. ನಂತರ ಆ ಪಠ್ಯದ ಆಧಾರದಲ್ಲಿಯೇ ವಿದ್ಯಾರ್ಥಿಗಳಿಗೆ ಯಕ್ಷಗಾನವನ್ನು ಕಲಿಸಬೇಕು. ಹೀಗಾದಾಗ ಮಾತ್ರ ಸಾರ್ವತ್ರಿಕವಾಗಿ ಒಪ್ಪಿತವಾಗಬಹುದಾದ ಒಂದು ಶಿಷ್ಟ ಯಕ್ಷಗಾನವನ್ನು ನಾವು ಬೆಳೆಸುವುದಕ್ಕೆ ಸಾಧ್ಯ. ಇಲ್ಲದೇ ಹೋದರೆ ಒಂದು ಪರಂಪರೆಯ ಆಧಾರದಲ್ಲಿ ಕಲಿತದ್ದನ್ನು ಇನ್ನೊಬ್ಬರು ಸರಿಯಿಲ್ಲ ಅಂತ ತಿರಸ್ಕರಿಸಲು ಸುಲಭ ಸಾಧ್ಯವಾಗಬಹುದು. ಅಥವಾ ಪ್ರತಿಯೊಂದು ಪ್ರದೇಶದವರೂ ತಮ್ಮ ಪ್ರದೇಶದ ಪರಂಪರೆ-ಪದ್ಧತಿಗಳು ಮಾತ್ರ ಸರಿಯೆಂದು ವಾದಿಸಿ ಜನರ ಮನಸ್ಸಿನಲ್ಲಿ ಗೊಂದಲ ಸೃಷ್ಟಿಸಿ ಯಕ್ಷಗಾನದ ಒಟ್ಟಾರೆ ಬೆಳವಣಿಗೆಗೆ ಅಡ್ಡಗಾಲು ಹಾಕಬಹುದು.

ಈಗ ನೋಡಿ ಯಕ್ಷಗಾನದ ಅಭ್ಯಾಸಕ್ಕೆ ಅನುಕೂಲವಾಗುವ ಪಠ್ಯವನ್ನು ಉಪ್ಪೂರರು, ನೀಲಾವರದವರು, ಸೋಂದಾ ಕೃಷ್ಣ ಭಂಡಾರಿಯವರು ಎಲ್ಲರೂ ಬರೆದಿದ್ದಾರೆ. ಒಂದೊಂದು ಯಕ್ಷಗಾನ ಕಲಿಕಾ ಕೇಂದ್ರದಲ್ಲಿ ಒಂದೊಂದು ಪಠ್ಯವನ್ನು ಕಲಿಸಿದರೆ ಗೊಂದಲವಾಗುವುದಿಲ್ಲವೇ? ಹಾಗಂತ ಅವರಲ್ಲಿ ಒಬ್ಬೊಬ್ಬರು ಬರೆದದ್ದೂ ಸರಿಯೇ. ಅವರವರ ಪದ್ಧತಿಗನುಗುಣವಾಗಿ ಬರೆದಿದ್ದಾರೆ. ಆದರೆ ವಿದ್ಯಾಥರ್ಿಗಳಿಗೆ ಕಲಿಸುವಾಗ ಒಂದು ಏಕರೂಪದ ಪಠ್ಯವಿಲ್ಲದಿದ್ದರೆ ಗೊಂದಲವಾಗುತ್ತದೆ. ಈ ಗೊಂದಲವನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ನಾವು ಯಕ್ಷಗಾನ ಬಲ್ಲ ಬೇರೆ ಬೇರೆ ಪ್ರದೇಶದ ವಿದ್ವಾಂಸರನ್ನೆಲ್ಲ ಒಂದು ಕಡೆ ಕರೆದು ಚರ್ಚೆ ಮಾಡಿ ಏಕರೂಪದ ಪಠ್ಯ ರೂಪಿಸುವ ಪ್ರಯತ್ನ ಮಾಡಿದ್ದೇವೆ. ಮಾಡಿ ಅದನ್ನು ಪ್ರಾಥಮಿಕ ಶಿಕ್ಷಣದಲ್ಲಿ ಅಳವಡಿಸುವ ಕುರಿತು ಬೇಡಿಕೆಯನ್ನು ಸಕರ್ಾರದ ಮುಂದೆ ಇಟ್ಟಿದ್ದೇವೆ. ಆದರೆ ಸಕರ್ಾರ ಈ ಕುರಿತು ಏನು ಕ್ರಮ ತೆಗೆದುಕೊಳ್ಳುತ್ತದೆಯೋ ನೋಡಬೇಕಿದೆ.
Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
A BABANNA(10/13/2015)
TAMMA JEEVANAVANNE YAKSHAGANAKKE MUDIPAGITTA MAHAAN MURTHY EVARE DEVA MAANAVARU EVARIGE NANNA SASTANGA NAMASKARA.................
Vasant Bhat(8/18/2015)
Wonderful! Hostota Majunath Bhat is a real saint! My heartfelt pranams.
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ