ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಅನುಪಮ ಚೆಂಡೆವಾದಕ ದಿವಾಣ ಭೀಮ ಭಟ್ಟ

ಲೇಖಕರು :
ಎಸ್.ಆರ್.ವಿಜಯಶ೦ಕರ
ಬುಧವಾರ, ಆಗಸ್ಟ್ 5 , 2015

ತೆಂಕುತಿಟ್ಟು ಯಕ್ಷಗಾನದ ಪ್ರಸಿದ್ಧ ಚೆಂಡೆವಾದಕ ದಿವಾಣ ಭೀಮ ಭಟ್ಟರು (1913-1993) ಯಕ್ಷಗಾನ ಕಲಾಪ್ರೇಮಿಗಳಿಗೆ ಚೆಂಡೆ ಭೀಮಣ್ಣ ಎಂದೇ ಪರಿಚಿತರು. ಸಮಗ್ರ ಯಕ್ಷಗಾನದ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಭೀಮ ಭಟ್ಟರು ಹಿಮ್ಮೇಳದ ಯಾವ ಪ್ರಕಾರದಲ್ಲೇ ಆದರೂ ಇದು ಹೀಗೆ ಎಂದು ಅಧಿಕೃತವಾಗಿ ಹೇಳಿ ನುಡಿಸಿ ತೋರಿಸಬಲ್ಲವರಾಗಿದ್ದರು. ತಮ್ಮ ಹಿಂದಿನ ನುರಿತ ಮದ್ದಳೆಗಾರರಾದ ಕೆಮ್ಮಣ್ಣು ನಾರಾಯಣಪ್ಪಯ್ಯ, ಕುದ್ರೆಕೋಡ್ಲು ರಾಮ ಭಟ್ಟ, ಶಿವ ಮದ್ಲೆಗಾರ ಇವರಂತೆ ಹಾಗೂ ಅವರ ಸಮಕಾಲೀನರಾದ ನೆಡ್ಲೆ ನರಸಿಂಹ ಭಟ್ಟ, ಚಿಪ್ಪಾರು ಕೃಷ್ಣಯ್ಯ ಬಲ್ಲಾಳರಂತೆ ಭೀಮ ಭಟ್ಟರು ಪ್ರಥಮ ಶ್ರೇಣಿಯ ಕಲಾವಿದರು. ಅನೇಕರು ಕೇವಲ ಚೆಂಡೆ ಅಥವಾ ಮದ್ದಳೆ ಯಾವುದಾದರೂ ಒಂದರಲ್ಲಿ ಪರಿಣತರು. ಆದರೆ ಭೀಮ ಭಟ್ಟರು ತಮ್ಮ 16ನೇ ವಯಸ್ಸಿನಿಂದ ಒತ್ತು ಮದ್ದಳೆಗಾರರಾಗಿ 30ನೇ ವಯಸ್ಸಿನವರೆಗೆ ದಿವಂಗತ ಬಲಿಪ ನಾರಾಯಣ ಭಾಗವತರೊಂದಿಗೆ (ಅಜ್ಜ ಬಲಿಪರು) ಬೆಳೆದವರು. ಆ ಬಳಿಕ ಚೆಂಡೆ ವಾದಕರಾಗಿ ಎರಡಲ್ಲೂ ಪ್ರಾವೀಣ್ಯ ಮೆರೆದವರು.

ಯಕ್ಷಗಾನ ಬಲ್ಲವರಿಗೆ ಚೆಂಡೆ ಹೇಗೆ ಆ ಕಲೆಯ ಜೀವಶಿಖರ ಸ್ಥಾಪಕ ಎಂಬುದು ತಿಳಿದಿರುತ್ತದೆ. ಈಚೆಗೆ ದಿವಾಣ ಭೀಮ ಭಟ್ಟ ಜನ್ಮ ಶತಮಾನೋತ್ಸವ ಸಮಿತಿಯವರು ‘ದಿವಾಣ ಸಂಪದ’ ಎಂಬ ದಿವಾಣ ಭೀಮ ಭಟ್ಟರ ಜನ್ಮ ಶತಮಾನೋತ್ಸವ ಸ್ಮೃತಿ ಸಂಚಯವನ್ನು ಹೊರತಂದಿದ್ದಾರೆ. ಪ್ರಸಿದ್ಧ ವಿದ್ವಾಂಸರೂ ಯಕ್ಷಗಾನ ಅರ್ಥದಾರಿಗಳೂ ಆದ ಡಾ.ಎಂ.ಪ್ರಭಾಕರ ಜೋಶಿ ಹಾಗೂ ಹಿರಣ್ಯ ವೆಂಕಟೇಶ್ವರ ಭಟ್ಟರು ಈ ಕೃತಿಯ ಸಂಪಾದಕರು. ಚೆಂಡೆ ಮಾರ್ಕಿನ ಅನನ್ಯ ಫೀಡ್ಸ್ ಎಂಬ ಪಶುಆಹಾರ ತಯಾರಿಸುವ ಕಂಪನಿ ಈ ಪುಸ್ತಕದ ಪ್ರಾಯೋಜಕರು.

ಸುಪ್ರಸಿಧ್ಧ ಕಲಾಸಕ್ತರು ತುಂಬಿದ್ದ ಹಳ್ಳಿಯಲ್ಲಿ ಜನನ

ದಿವಾಣ ಎಂಬುದು ಅವರ ಮನೆ ಹಾಗೂ ಬೈಲಿನ ಹೆಸರು. ಅದು ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಪಡ್ನೂರು ಗ್ರಾಮದ ಕೋಡಪದವು ಎಂಬ ಜಾಗಕ್ಕೆ ಸಮೀಪ ಒಂದು ಬೆಟ್ಟದ ಬುಡದಲ್ಲಿದೆ. ತೆಂಕುತಿಟ್ಟಿನ ಯಕ್ಷಗಾನ ಆಸಕ್ತರಿಗೆ ಕೋಡಪದವಿನ ವೀರಾಂಜನೇಯ ಸ್ವಾಮಿ ಯಕ್ಷಗಾನ ಸಂಘದ ಬಗ್ಗೆ ತಿಳಿದಿರುತ್ತದೆ. ಕಳೆದ ಶತಮಾನದ ಉತ್ತರಾರ್ಧದಲ್ಲಿ ಈ ಪುಟ್ಟ ಗ್ರಾಮದಲ್ಲಿ ಮೂವರು ಪ್ರಸಿದ್ಧ ಯಕ್ಷಗಾನ ಕಲಾವಿದರೂ ವಿದ್ವಾಂಸರೂ ವಾಸವಾಗಿದ್ದರು. ಅವರೆಂದರೆ, ಪ್ರಸಿದ್ಧ ವಿದ್ವಾಂಸ ಕುಕ್ಕಿಲ ಕೃಷ್ಣಭಟ್ಟ, ಕರ್ಗಲ್ಲು ಮಟ್ಟು ಎಂದು ಈಗ ಪ್ರಸಿದ್ಧವಾಗಿರುವ ಪ್ರಸಿದ್ಧ ಸ್ತ್ರೀ ವೇಷಧಾರಿ ಹಾಗೂ ಒಂದು ಯಕ್ಷಗುರು ಎಂದೇ ಪ್ರಸಿದ್ಧರಾದ ಕರ್ಗಲ್ಲು ವಿಶ್ವೇಶ್ವರ ಭಟ್ಟರ ತಂದೆಯವರಾದ ಕರ್ಗಲ್ಲು ಸುಬ್ಬಣ್ಣ ಭಟ್ಟರು ಹಾಗೂ ಪ್ರಸ್ತುತ ಪ್ರಸಿದ್ಧ ಚೆಂಡೆವಾದಕರಾಗಿರುವ ದಿವಾಣ ಶಂಕರ ಭಟ್ಟರ ತಂದೆಯವರಾದ ದಿವಾಣ ಭೀಮ ಭಟ್ಟರು. ಭಾಗವತರಾದ ಸರವು ಕೃಷ್ಣ ಭಟ್ಟ, ಮದ್ದಳೆ ವಾದಕರಾದ ಕಿನಿಲ ನಾರಾಯಣ ಭಟ್ಟ ಹಾಗೂ ಇನ್ನೂ ಅನೇಕ ಆಸಕ್ತ ಯಕ್ಷಗಾನ ಕಲಾವಿದರೂ, ಕಲಾಸಕ್ತರೂ ತುಂಬಿದ್ದ ಹಳ್ಳಿಯದು. ಕುಕ್ಕಿಲ ಕೃಷ್ಣ ಭಟ್ಟರ ಭಾವನವರಾದ ಪಂಡಿತ ಸೇಡಿಯಾಪು ಕೃಷ್ಣ ಭಟ್ಟರೂ ಈ ಗ್ರಾಮಕ್ಕೆ ಭೇಟಿ ಕೊಡುತ್ತಿದ್ದರು.

ಇದೇ ವಿಟ್ಲ ಪಡ್ನೂರು ಗ್ರಾಮದವರಾದ ನನ್ನ ತಂದೆ ಸರವು ರಾಮಭಟ್ಟರು ವೃತ್ತಿಯಿಂದ ವಕೀಲರು ಹಾಗೂ ಸೌರಭ ಪುತ್ತೂರು ಎಂಬ ಹೆಸರಿನಲ್ಲಿ ಲೇಖನಗಳನ್ನು ಬರೆಯುತ್ತಿದ್ದರು. ನನ್ನ ತಂದೆಯವರ ಬಗ್ಗೆ ಅವರಿಂದ ವಯಸ್ಸಿನಲ್ಲಿ 20 ವರುಷ ಹಿರಿಯರಾದ ದಿವಾಣ ಭೀಮಣ್ಣ ಆದಿಯಾಗಿ ಎಲ್ಲ ಕಲಾವಿದರಿಗೂ ವಿಶೇಷ ಪ್ರೀತಿ. ಆ ಸರವು ಮನೆಯ ಹುಡುಗನಾದ್ದರಿಂದ ನಮ್ಮ ಮನೆಗೆ ಆಗಾಗ ಬರುತ್ತಿದ್ದ ದಿವಾಣ ಭೀಮ ಭಟ್ಟರ ಹತ್ತಿರದ ಪರಿಚಯ ನನಗಿತ್ತು.
ದಿವಾಣ ಭೀಮ ಭಟ್ಟ
ಜನನ : 1913
ಜನನ ಸ್ಥಳ : ಕೋಡಪದವು, ವಿಟ್ಲ ಪಡ್ನೂರು ಗ್ರಾಮ
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ :
ಕಟೀಲು, ಕೂಡ್ಲು, ಸುರತ್ಕಲ್, ಮುಲ್ಕಿ, ಧರ್ಮಸ್ಥಳ, ಕುಂಡಾವು ಮೊದಲಾದ ಮೇಳಗಳಲ್ಲಿ ಅಪ್ರತಿಮ ಚೆ೦ಡೆವಾದಕರಾಗಿ ಸೇವೆ ಸಲ್ಲಿಸಿರುತ್ತಾರೆ

ಮರಣ ದಿನಾ೦ಕ : 1993
ಅವರು ನನ್ನ ತಂದೆಯವರೊಡನೆ ಕಲೆಯಲ್ಲಿ ಲಯದ ಮಹತ್ವದ ಕುರಿತಾಗಿ ಮಾತನಾಡುತ್ತಿದ್ದುದು ನನ್ನ ಬಾಲ್ಯದ ನೆನಪುಗಳಲ್ಲಿ ಒಂದು. ನೃತ್ಯ, ಪಾತ್ರ ಸಂಯೋಜನೆ, ಚಲನೆಯ ಗತ್ತು, ವೇಷ ಭೂಷಣ (ಆಹಾರ್ಯ) ಇವು ಎಲ್ಲವೂ ಸೇರಿದ ರಂಗದ ಶ್ರುತಿ ಲಯ ಆಧಾರಿತ ಎಂದವರು ಹೇಳುತ್ತಿದ್ದರು. ಅವರಿಗೆ ಹಿಮ್ಮೇಳ ಈ ಲಯದ ಒಂದು ಮುಖ್ಯ ಅಂಗ.

ಒಟ್ಟು ನಡೆ ಹಾಗೂ ಚೆಂಡೆ ಪೆಟ್ಟುಗಳು ಈ ಲಯಕ್ಕೆ ಪೂರಕವಾಗಿರಬೇಕು. ಅದನ್ನು ನಾನಾ ರೀತಿಯ ನಡೆಗಳಲ್ಲೂ ಸಾಧಿಸಲು ಸಾಧ್ಯ ಎಂಬುದು ಅವರ ವಿಚಾರ. ಅನೇಕ ಸಲ ಮಾತಿನ ಉತ್ಸಾಹದಲ್ಲಿ ಅವರು ಕೈ, ಬಾಯಿ ತಾಳಗಳು ಮಾತ್ರವಲ್ಲದೆ ಚೆಂಡೆ ಕೋಲಿನಿಂದ ಸಿಮೆಂಟಿನ ನೆಲಕ್ಕೆ ಚೆಂಡೆಗೆ ಬಾರಿಸುವಂತೆ ಹೊಡೆದು ತೋರಿಸುತ್ತಿದ್ದರು. ಕೆಲವೊಮ್ಮೆ ಊಟಕ್ಕೆ ಕುಳಿತುಕೊಳ್ಳುವ ಮರದ ಮಣೆಯ ಮೇಲೆ ಚೆಂಡೆ ಕೋಲಿನಿಂದ ಹೊಡೆದು ತೋರಿಸುತ್ತಿದ್ದರು. ನನ್ನ ಉದ್ದದ ಕೈ ಬೆರಳುಗಳನ್ನು ನೋಡಿ ನಿನಗೆ ಮದ್ದಳೆ ಬಾರಿಸಲು ಅನುಕೂಲ ಎಂದಿದ್ದರು. ನಾನು ಮಾತ್ರ ಚೆಂಡೆ, ಮದ್ದಳೆ ಎರಡನ್ನೂ ಬಿಟ್ಟು ಕರ್ನಾಟಕ ಸಂಗೀತದ ಮೃದಂಗವನ್ನು ಕಲಿಯಲು ಹೋಗಿ ಅಲ್ಲೂ ವಿಶೇಷ ಯಶಸ್ಸು ಸಾಧಿಸದೆ ಬಿಟ್ಟು ಬಿಟ್ಟೆ.

ಚೆಂಡೆಯನ್ನು ತಯಾರಿಸುವ ಬಗೆ

ಚೆಂಡೆಯನ್ನು ತಯಾರಿಸಲು ಮರದ ಕಾಂಡದಲ್ಲಿ ಒಳಗೆ ಟೊಳ್ಳಾಗಿಸಿದ ಕುತ್ತಿಯನ್ನು ಬಳಸುತ್ತಾರೆ. ಇದರ ಎರಡು ತುದಿಗಳಿಗೆ ಮೊದಲೇ ಬಿದಿರಿನ ಬಳೆಗಳಿಗೆ ಅಂಟಿಸಿದ ಚರ್ಮವನ್ನು ಬಿಗಿಯಬೇಕು. ಹಾಗೆ ಬಿಗಿಯಲು ಹನ್ನೆರಡು ತೂತುಗಳನ್ನು ಮಾಡಿ ಹಗ್ಗದಿಂದ ಎಳೆದು ಕಟ್ಟುವುದು. ಚೆಂಡೆಯ ಬಲಭಾಗವನ್ನು ಮಾತ್ರ ಬಾರಿಸುವುದು. ಬಾರಿಸದೇ ಇರುವ ಕೆಳಗಿನ ಎಡಭಾಗಕ್ಕೆ ಚರ್ಮಗಳ ಹಾಳೆಗಳನ್ನು ಅಂಟಿಸಿ ದಪ್ಪ ಮಾಡುವರು. ಬಾರಿಸುವ ಬಲಭಾಗಕ್ಕೆ ಹೋರಿಯ ಚರ್ಮವನ್ನು ಬಳಸುವುದು ಪದ್ಧತಿ. ಆಡಿನ ಚರ್ಮ ಬಳಸಿದರೆ ವಾತಾವರಣದ ಕಾವಿಗೆ ತಕ್ಕಂತೆ ಶ್ರುತಿಯಲ್ಲಿ ಬೇಗನೆ ಏರಿಳಿತ ಉಂಟಾಗುತ್ತದೆ. ಚೆಂಡೆ ಕುತ್ತಿಯ ತಯಾರಿಕೆಗೆ ಹೆಚ್ಚಾಗಿ ಗೋಸಂಪಗೆ ಅಥವಾ ಹಲಸಿನ ಮರದ ಬಳಕೆ ಹೆಚ್ಚು. ಅಪರೂಪಕ್ಕೆ ತೆಂಗಿನ ಮರದ ಕುತ್ತಿಯೂ ಬಳಕೆಯಾಗುವುದಿದೆ.

(ಚೆಂಡೆಯ ಹೆಚ್ಚಿನ ವಿವರಕ್ಕೆ ಡಾ.ಕೆ.ಎಂ.ರಾಘವ ನಂಬಿಯಾರರ ‘ಹಿಮ್ಮೇಳ’ ಎಂಬ ಯಕ್ಷಗಾನ ಸಂಶೋಧನಾ ಗ್ರಂಥವನ್ನು ನೋಡಿ).

ವಿವಿಧ ಮೇಳಗಳಲ್ಲಿ ಚೆ೦ಡೆಯ ಕೋಲ್ಮಿ೦ಚು

ಹೀಗೆ ತಯಾರಾದ ಚೆಂಡೆಯನ್ನು ಹೆಗಲಿಗೆ ನೇಲಿಸಿಕೊಂಡು ದಿವಾಣ ಭೀಮ ಭಟ್ಟರು ರಂಗಸ್ಥಳದ ಪ್ರವೇಶದ್ವಾರದಲ್ಲಿ ನಿಲ್ಲುವುದೇ ಒಂದು ಸೊಗಸು. ವೇಸ್ಟಿ ಎಂಬ ಹತ್ತಿಯ ಬಿಳಿ ಡಬ್ಬಲ್ ಪಂಚೆ. ಅದರ ಮೇಲೆ ಹತ್ತಿ ಬಟ್ಟೆಯ ತುಂಬು ತೋಳಿನ ಬಿಳಿ ಜುಬ್ಬ. ಹೆಗಲಿಗೊಂದು ಶಾಲು. ಅವರು ರಂಗಸ್ಥಳದಲ್ಲಿ ಬಾರಿಸುವ ಚೆಂಡೆ ಕೋಲಿನ ತುದಿಯ ಮೇಲಿನ ಅಂಚಿಗೆ ಬೆಳ್ಳಿಯ ತಗಡಿನ ಕಟ್ಟುಗಳು. ರಂಗಸ್ಥಳದ ಬೆಳಕಿನಲ್ಲಿ ಅವರ ಚೆಂಡೆ ವಾದನ ನಡೆಯುವಾಗ ಚೆಂಡೆ ಕೋಲಿನ ಬೆಳ್ಳಿಕಟ್ಟಿನ ಮಿಂಚುವ ಚಲನೆಯನ್ನು ನೋಡುವುದೇ ಒಂದು ಆನಂದ. ಅವರು ಕಟೀಲು, ಕೂಡ್ಲು, ಸುರತ್ಕಲ್, ಮುಲ್ಕಿ, ಧರ್ಮಸ್ಥಳ, ಕುಂಡಾವು ಮೊದಲಾದ ಮೇಳಗಳಲ್ಲಿ ತಿರುಗಾಟ ಮಾಡಿದವರು.

ಆದರೆ ರಂಗಸ್ಥಳದಲ್ಲಿ ಹೀಗೆ ಗಂಭೀರ ಚೆಂಡೆವಾದಕರಾಗಿ ಶುಭ್ರ ಶ್ವೇತವಸನದಲ್ಲಿ ಕಾಣಿಸುತ್ತಿದ್ದ ದಿವಾಣ ಭೀಮಭಟ್ಟರು ನಮ್ಮ ಕೋಡಪದವಿನ ಆಸುಪಾಸಿನಲ್ಲಿ ಮೇಳದ ತಿರುಗಾಟ ಇಲ್ಲದಾಗ ಕಾಣಿಸುತ್ತಿದ್ದ ರೂಪವೇ ಬೇರೆ. ಸೊಂಟದಲ್ಲಿ ಒಂದು ಕಂಬಾಯಿ (ಬಣ್ಣದ ಪಂಚೆ). ದ.ಕ.ಜಿಲ್ಲೆಯ ಎಲ್ಲ ಹಿರಿಯರಂತೆ ಅಂಗಿ ಬನಿಯನ್ ಏನೂ ಇಲ್ಲದ ಬೋಳು ಮೈ. ಹೆಗಲಿಗೊಂದು ಟವಲ್. ಯಾರೂ ಮಾತನಾಡಬಹುದಾದ ಧಾರಾಳ ಸ್ನೇಹ. ಬಿಡುವಿದ್ದಾಗ ಅವರ ಪುಟ್ಟ ಅಡಕೆ ತೋಟದಲ್ಲಿ ಕೃಷಿ ಕೆಲಸ.

ವಿಷಮ ಪೆಟ್ಟಿನ ವೀರ

1970ರ ದಶಕದಲ್ಲಿ ಭೀಮ ಭಟ್ಟರ ಚೆಂಡೆ ವಾದನ ನಮ್ಮ ತಾಲೂಕಿನ ಯಾವ ಜಾಗದಲ್ಲಿ ಇದ್ದರೂ ನಾನು ರಾತ್ರೆ ಬೇಗ ಊಟ ಮಾಡಿ ಸೈಕಲ್ ಹತ್ತಿ ಹೋಗುವುದಿತ್ತು. ಉಕ್ಕುಡ, ಬಿ.ಸಿ.ರೋಡ್ ಮೊದಲಾದ ಕಡೆ ನಡೆಯುತ್ತಿದ್ದ ಪ್ರಖ್ಯಾತ ಆಟಗಳಿಗೆ ಎಂ.ಪ್ರಭಾಕರ ಜೋಶಿಯವರೂ ಪ್ರೇಕ್ಷಕರಾಗಿ ಬರುತ್ತಿದ್ದರು. ಅವರ ಸಾಹಿತ್ಯ ಆಸಕ್ತಿಯಿಂದ ನನಗೆ ಜೋಶಿಯವರೊಡನೆ ಸಲಿಗೆ ಹೆಚ್ಚು. ಜೋಶಿಯವರು, ಕೊಂಕಣಿ, ತುಳು, ಮರಾಠಿ, ಹವ್ಯಕ, ಕನ್ನಡ, ಹಿಂದಿ, ಇಂಗ್ಲಿಷ್ ಹೀಗೆ ಅನೇಕ ಭಾಷೆಗಳಲ್ಲಿ ಸರಾಗ ಮಾತನಾಡಬಲ್ಲರು. ನನ್ನಲ್ಲಿ ಅವರು ಅಂತಹ ಆಟಗಳಲ್ಲಿ ಸಿಕ್ಕಾಗ ಆಗಾಗ, ‘‘ಅದ ನಿನ್ನ ಭೀಮಣ್ಣನ ವಿಷಮ ಪೆಟ್ಟು ಬಿತ್ತು’’ ಎನ್ನುತ್ತಿದ್ದರು. ಭೀಮ ಭಟ್ಟರು ವಿಷಮ ಪೆಟ್ಟುಗಳನ್ನು ಸಮಕ್ಕಿಂತ ಹೆಚ್ಚು ಸಲೀಸಾಗಿ ಬಾರಿಸ ಬಲ್ಲವರಾಗಿದ್ದರು ಎಂದು ಜೋಶಿಯವರು ಒಂದು ಕಡೆ ಬರೆದಿದ್ದಾರೆ.

ನನಗೆ ಯಕ್ಷಗಾನದಿಂದ ಹೊರಹೋಗಿ ಮೈಸೂರಿನಲ್ಲಿ ಸಂಗೀತ ಕೇಳುವ ಅಭ್ಯಾಸ ಬೆಳೆಯುವ ತನಕ ಈ ವಿಷಮ ಪೆಟ್ಟು ಏನು? ಎಂಬುದು ಸ್ಪಷ್ಟವಾಗಲಿಲ್ಲ. ಆಮೇಲೆ ಕ್ರಮೇಣ ಅದು ಭೀಮ ಭಟ್ಟರ ಸೃಜನಶೀಲತೆಯ ಭಾಗ. ಅವರು ತಾಳದ ಕಾಲಗತಿಯನ್ನು ತುಂಬಿಸುವಲ್ಲಿ ಮಾಡುವ ಸೃಜನಶೀಲ ಕೆಲಸ. ಅದು ಎಲ್ಲರೂ ನಡೆಯುವ ಯಕ್ಷಗಾನದ ನಿಶ್ಚಿತ ಕ್ರಮಕ್ಕಿಂತ ತುಸು ಬೇರೆಯಾದೊಡನೆ ಅವರಿಗೆ ‘ವಿಷಮ ವೀರ’ನೆಂಬ ಬಿರುದು ಎಂದು ತೋರಿತು. ಉದಾಹರಣೆಗೆ 4+2=6 ಎಂದಿರುವ ನಡೆಯನ್ನು ಸೃಜನಶೀಲವಾಗಿ ತಾಳ ತಪ್ಪದೆ 3+3=6 ಎಂದು ತುಂಬಿದರೆ ಅಥವಾ 3+1+2 ಎಂದು ಬಾರಿಸಿದರೆ ವಿಷಮವೆ ? ಎಂದು ಯೋಚಿಸುತ್ತಿದ್ದೆ. ನಮ್ಮ ಸೃಜನಶೀಲ ಭಾಗವತರಲ್ಲಿ ಒಬ್ಬರಾಗಿದ್ದ ಅಗರಿಯವರಿಗೆ ಭೀಮ ಭಟ್ಟರೆಂದರೆ ಅಚ್ಚುಮೆಚ್ಚು.

ನಾನು ಯೋಚಿಸುತ್ತಿದ್ದ ಕ್ರಮ ಸರಿಯಾದ್ದೆಂದು ನನಗೆ ಅನಿಸಿದ್ದು ಪ್ರಸಿದ್ಧ ಯಕ್ಷಗಾನ ಕಲಾವಿದ ಕೆ.ಗೋವಿಂದ ಭಟ್ಟರ ಮಾತುಗಳನ್ನು ಓದಿದಾಗ. ಅವರು ಭೀಮ ಭಟ್ಟರ ಬಗ್ಗೆ ಹೇಳುವುದು: ‘‘ಸಂಗೀತ ಶಾಸ್ತ್ರದಲ್ಲಿ ಹೇಳುವ ತ್ರಿಸ್ರ, ಚತುರಸ್ರ, ಮಿಶ್ರ, ಖಂಡ, ಸಂಕೀರ್ಣ ಜಾತಿ ಭೇದಗಳನ್ನು ಅರಿತು ಆ ನಡೆಗಳನ್ನು ಯಕ್ಷಗಾನದಲ್ಲಿ ಹೇಗೆ ಬಳಸಬಹುದು ಎಂದು ಬಲ್ಲ ಮಹಾನುಭಾವರು. ಇದರಿಂದ ಅವರ ಚಿಕಿತ್ಸಕ ಬುದ್ಧಿ, ಶೋಧನಾ ಕ್ರಮಕ್ಕೆ ಬಂದ ಹೆಸರು ‘ವಿಷಮ ವೀರ’ನೆಂದು’’.

ಈ‘ವಿಷಮ’ ಎಂದು ಪ್ರೇಕ್ಷಕರು ಹೇಳುವುದನ್ನು ವಿದ್ವಾಂಸರಾದ ಡಾ.ಕೆ.ಎಂ.ರಾಘವನ್ ನಂಬಿಯಾರ್ ಹೀಗೆ ವಿವರಿಸುತ್ತಾರೆ: ‘‘ ‘ವಿಷಮ’ ಶಬ್ದಕ್ಕೆ ನಿಜವಾದ ಅರ್ಥ ‘ಸಮಗತಿ ಅಲ್ಲದ್ದು’ ಎಂದು ಮಾತ್ರ. ಗತಿಯಲ್ಲಿ ಸಮಗತಿಯಿಂದ ಹೊರಬಿದ್ದಂತೆ ಕಾಣಿಸಿ ನಿಶ್ಚಿತ ಸ್ಥಾನದಲ್ಲಿ ಆವರ್ತನಗಳು ಜತೆಗೂಡುವ ಕೌಶಲ. ಆಟದಲ್ಲೊ, ಕೂಡದಲ್ಲೊ ಎಲ್ಲೊ ಒಂದೋ ಎರಡೋ ಕಡೆ ರಂಗದ ನಡಿಗೆಗೆ ತೊಡಕಿಲ್ಲದ ಸ್ಥಾನ ನೋಡಿ ಮದ್ದಳೆಗಾರರು ತೋರುವ ಚಳಕವಿದು’’. ದಿವಾಣರ ಈ ಸೃಜನಶೀಲ ಕೌಶಲಕ್ಕೆ ಸೃಷ್ಟಿಶೀಲ ಕಲಾವಿದರಾದ ಹಿರಿಯಡಕ ಗೋಪಾಲರಾವ್ ಮೊದಲಾದ ಅನೇಕ ಉತ್ತಮ ಮದ್ದಳೆ ವಾದಕರ ಮನ್ನಣೆ ಇತ್ತು. ಭಾಗವತರಂತೂ ತುಂಬಾ ಗಂಭೀರವಾಗಿ ಎಚ್ಚರಿರಬೇಕಿತ್ತು. ಬಹುಶಃ ದಿವಾಣರು ತಬಲಾ ವಾದಕರಾಗಿರುತ್ತಿದ್ದರೆ ಹಿಂದೂಸ್ಥಾನದ ಬಹುದೊಡ್ಡ ಸಂಗೀತಗಾರರು ಅವರನ್ನು ಮೆಚ್ಚಿ ಸಾಥಿಗೆ ಕರೆಯುತ್ತಿದ್ದರು. ಈಚೆಗೆ ಒಂದು ಸಂಗೀತ ಕಛೇರಿಯಲ್ಲಿ ಪ್ರಸಿದ್ಧ ಕೊಳಲು ವಾದಕ ರೋಣು ಮಜುಂದಾರ್ ಅವರಿಗೆ ತಬಲಾದಲ್ಲಿ ಸಾಥ್ ನೀಡಿದ್ದ ಪಂಡಿತ್ ರವೀಂದ್ರ ಯಾವಗಲ್ ಅವರ ಬೋಲುಗಳನ್ನು ಮೆಚ್ಚಿ ಅವನ್ನು ರೋಣು ಅವರು ಬಾಯಿಯಲ್ಲಿ ಹೇಳಿ ಕಛೇರಿ ನಡುವೆ ಹೊಗಳಿದಾಗ ನನಗೆ, ನಮ್ಮ ಭೀಮಣ್ಣನ ವಿಷಮ ಪೆಟ್ಟುಗಳು ಹೀಗೆ ಸೃಜನಶೀಲ ಅಲ್ಲವೇ? ಅನಿಸಿತ್ತು.

ಯಕ್ಷಗಾನದ ಆಹಾರ್ಯಗಳ ಜ್ಞಾನಭ೦ಡಾರ

ಸುಮಾರು 40 ವರುಷಗಳ ಹಿಂದೆ ಬಂಟ್ವಾಳ ತಾಲೂಕಿನ ಮಂಚಿಯಲ್ಲಿ ಎರಡು ದಿನಗಳ ಯಕ್ಷಗಾನ ಪ್ರಾತ್ಯಕ್ಷಿಕೆ ಹಾಗೂ ಕಮ್ಮಟ ನಡೆದಿತ್ತು. ನಾನು ಭಾಗವಹಿಸಿದ್ದ ಮೊದಲ ಯಕ್ಷಗಾನ ಕಮ್ಮಟ. ನಮ್ಮ ಪಡ್ನೂರು ಗ್ರಾಮದಿಂದ ಮೂರು ಬೆಟ್ಟಗಳನ್ನು ಹತ್ತಿ ಇಳಿದರೆ ಮಂಚಿ. ಕಮ್ಮಟದಿಂದ ಹಿಂತಿರುಗುವಾಗ ನಾನು ಮತ್ತಿತರ ಕೆಲವರು ಭೀಮಭಟ್ಟರೊಡನೆ ಆ ಬೆಟ್ಟದ ಕಾಲುದಾರಿಗಳಲ್ಲಿ ಇಳಿಯುತ್ತಾ ನಮ್ಮ ಹಳ್ಳಿಗೆ ವಾಪಸಾಗುತ್ತಿದ್ದೆವು. ಆಗ ನಾನು ಅವರಲ್ಲಿ ಬಾಣಾಸುರನ ವೇಷಕ್ಕೆ ಭುಜಕೀರ್ತಿಯಾಗಿ ಗಿಳಿಯೇ ಆಭರಣವಾಗಿರಬೇಕೆ ಎಂದು ಕೇಳಿದ್ದೆ. ಅವರು ವಿವರವಾಗಿ ಪೀಠಿಕೆ ವೇಷಗಳಿಗೆ ‘ಭುಜಕೀರ್ತಿ’, ಎದುರು ವೇಷಗಳಿಗೆ ‘ಭುಜ ಮುಳ್ಳು’, ರಾಜಬಣ್ಣಗಳಿಗೆ ‘ಗಿಳಿ’, ಕಟು ಬಣ್ಣಕ್ಕೆ ‘ವಿಕೃತ ಗಿಳಿ’, ಅರೆಬಣ್ಣಗಳಿಗೆ ‘ದಂಬೆ’, ಹೆಣ್ಣು ಬಣ್ಣಗಳಿಗೆ ‘ದಂಬೆ ಮುಳ್ಳು’ ಎಂದು ಯಕ್ಷಗಾನದ ವೇಷಭೂಷಣಗಳ ಆಹಾರ್ಯಕ್ಕೆ ಸಂಬಂಧಿಸಿದಂತೆ ಹೇಳಿದ್ದರು. ಅವರಿಗೆ ವೇಷಗಳು ಮುಖಕ್ಕೆ ಬಳ್ಳಿ ಮೀಸೆ ಕಟ್ಟಬೇಕಾದಲ್ಲಿ ಕ್ರೆಫೇರ್ ಮೀಸೆ ಅಂಟಿಸುವುದೂ ಇಷ್ಟವಾಗುತ್ತಿರಲಿಲ್ಲ. ಇದೇ ರೀತಿ, ಯಕ್ಷಗಾನಕ್ಕೆ ವಿಶಿಷ್ಟವಾದ ಘಂಟಾರವ, ಅಷ್ಟತಾಳ ಮತ್ತು ಅದರ ನಡೆ ಹೇಗೆಂದು ಅವರು ಬರೆದಿದ್ದಾರೆ. ಸಂಗೀತ ವಿದ್ವಾಂಸ ಎಸ್.ರಾಮನಾಥನ್ ಮತ್ತು ಡಾ.ಶಿವರಾಮ ಕಾರಂತರು ಘಂಟಾರವದ ಬಗ್ಗೆ ಉಡುಪಿಯ ಯಕ್ಷಗಾನ ಕಮ್ಮಟದಲ್ಲಿ ನಡೆಸಿದ ಸಂವಾದವೊಂದು ಯಕ್ಷಗಾನ ಆಸಕ್ತರಿಗೆ ನೆನಪಿರಬಹುದು.

ಭೀಮ ಭಟ್ಟರು ಕೌಟುಂಬಿಕ ವಿಷಯಗಳನ್ನು ಸ್ವಾರಸ್ಯಕರವಾಗಿ ವಿವರಿಸುತ್ತಿದ್ದರು. ಅವರ ಗಂಭೀರವದನದ ಒಳಗೆ ಅಡಗಿ ಕುಳಿತ ಒಂದು ಮೃದು ಹಾಸ್ಯಪ್ರಜ್ಞೆ ಅವರಿಗಿತ್ತು. ಅವರ ಮನೆಯೇ ಯಕ್ಷಗಾನ ಕೂಟ. ಅವರ ಚಿಕ್ಕಪ್ಪ ಕೇಶವ ಭಟ್ಟ ಮದ್ದಳೆಗಾರರು. ಭಾಗವತರೂ, ಅರ್ಥದಾರಿಗಳೂ ಆಗಿದ್ದ ಕೃಷ್ಣ ಭಟ್ಟರು ಮೊದಲ ಗುರು. ಮಗ ಶಂಕರ ಭಟ್ಟರೂ ಚೆಂಡೆವಾದಕ. ನಿಮ್ಮ ಮನೆಯೇ ಯಕ್ಷಗಾನ ಎಂದಾಗ ಒಮ್ಮೆ ಅವರು ಹೌದು ನನ್ನ ಹೆಂಡತಿಯೂ ಅರ್ಥದಾರಿ. ಪ್ರಶ್ನೆಗೆ ಉತ್ತರ ಅವಳ ಬಳಿ ಸಿದ್ಧ ಎಂದು ಹೇಳಿದ್ದು, ‘‘ಹೆಂಡತೀ ಪ್ರಾಣ ಹಿಂಡುತಿ ಎಂದರೆ ತತ್​ಕ್ಷಣ ಅವಳು ಗಂಡ ಬರೇ ದಂಡ’’ ಎಂದಾಳು ಎಂದಿದ್ದರು.

ಕಲೆ ಹಾಗೂ ಬದುಕಿನ ಸಂತೋಷದಲ್ಲಿ ಜೀವಮುಖಿಯಾಗಿ ಬಾಳುವುದು ಹೇಗೆ ಎಂಬುದನ್ನು ನಿತ್ಯಜೀವನದ ಹಾಗೂ ಆರ್ಥಿಕ ಒತ್ತಡಗಳ ಸಾಮಾನ್ಯ ಲಯಗಳನ್ನು ಮೀರಿ ತೋರಿಸಿಕೊಟ್ಟವರು ನಮ್ಮ ದಿವಾಣ ಚೆಂಡೆ ಭೀಮಣ್ಣನವರು.

*********************

ಕೃಪೆ : http://www.vijayavani.net


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ