ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ವಿದ್ಯಾಧರ ಜಲವಳ್ಳಿ - ಬೆಳವಣಿಗೆ ಬಳ್ಳಿ

ಲೇಖಕರು : ಸುರೇಖಾ ಹೆಗಡೆ
ಶನಿವಾರ, ಒಕ್ಟೋಬರ್ 3 , 2015

ವಸ್ತ್ರವಿನ್ಯಾಸದ ಮೆರುಗು, ಕುಣಿತದ ಶ್ರೀಮಂತಿಕೆ, ಮಾತುಗಾರಿಕೆಯ ಅಬ್ಬರದಲ್ಲಿ ಪ್ರೇಕ್ಷಕರನ್ನು ರಂಜಿಸುವ ಕಲೆಯ ಮತ್ತೊಂದು ಹೆಸರೇ ಯಕ್ಷಗಾನ. ಕಳೆದ 25 ವರ್ಷಗಳಿಂದ ಯಕ್ಷಗಾನವನ್ನೇ ವೃತ್ತಿಯಾಗಿಸಿಕೊಂಡು ತಮ್ಮದೇ ವಿಶೇಷ ಶೈಲಿಯ ಮೂಲಕ ಜನಪ್ರಿಯತೆ ಗಳಿಸಿದ ಕಲಾವಿದ ವಿದ್ಯಾಧರ ರಾವ್‌ ಜಲವಳ್ಳಿ. ರಂಗದಲ್ಲಿ ಸದಾ ಹೊಸತನ್ನು ನೀಡುವ ಅವರ ಅರ್ಥಗಾರಿಕೆ ಚೆಂದ. ಕುಣಿತ ಇನ್ನೂ ಅಂದ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಜಲವಳ್ಳಿಯ ವಿದ್ಯಾಧರ ಅವರ ಯಕ್ಷಗಾನ ಬದುಕಿಗೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ‘ಜಲವಳ್ಳಿ ಯಕ್ಷ ಜೀವನದ 25’ ಕಾರ್ಯಕ್ರಮ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು (ಅಕ್ಟೋಬರ್‌ 3) ನಡೆಯಲಿದೆ. ಇದೇ ಹಿನ್ನೆಲೆಯಲ್ಲಿ ಅವರು ತಮ್ಮ ವೃತ್ತಿ ಪಯಣದ ಕುರಿತು ಮಾತನಾಡಿದ್ದಾರೆ.

ತ೦ದೆಯೇ ಪ್ರಥಮ ಪರೋಕ್ಷ ಗುರು

ತಂದೆ ವೆಂಕಟೇಶ್‌ ರಾವ್‌ ಯಕ್ಷಗಾನ ಕಲಾವಿದ. ಶಾಲೆಗೆ ರಜೆ ಇದ್ದಾಗಲೆಲ್ಲಾ ಅವರೊಂದಿಗೆ ಯಕ್ಷಗಾನ ನೋಡಲು ಹೋಗುತ್ತಿದ್ದೆ. ಆ ಕುಣಿತ, ವೇಷಭೂಷಣ, ಮದ್ದಳೆ–ಚೆಂಡೆ ಸಪ್ಪಳ, ಮಾತುಗಾರಿಕೆಯ ಅಬ್ಬರ ನನ್ನನ್ನು ಸೆಳೆಯುತ್ತಲೇ ಇದ್ದವು. ನಾನೂ ಯಕ್ಷಗಾನದ ಪಾತ್ರವಾಗಬೇಕು ಎನಿಸುತ್ತಿತ್ತು. ಯಕ್ಷಗಾನ ನೋಡೋಕೆ ಚೆಂದ. ಆದರೆ ಪ್ರದರ್ಶನಕ್ಕಾಗಿ ತಿರುಗಾಟಕ್ಕೆ ಹೊರಟರೆ ಎಷ್ಟೋ ದಿನ ಮನೆಗೆ ಬರುವ ಅವಕಾಶವೇ ಇರುತ್ತಿರಲಿಲ್ಲ. ಇಂಥ ಅನೇಕ ಕಷ್ಟಗಳನ್ನು ಕಂಡು ಅನುಭವಿಸಿದ್ದ ಅಪ್ಪನಿಗೆ ನಾನು ಕಲಾವಿದನಾಗುವುದು ಇಷ್ಟವಿರಲಿಲ್ಲ.

ಕೇವಲ ಎರಡನೇ ತರಗತಿ ಓದಿದ್ದ ಅಪ್ಪನ ಮಾತುಗಾರಿಕೆ, ಜನಪ್ರಿಯತೆ, ಅವರಿಗೆ ಸಂದ ಪ್ರಶಸ್ತಿಗಳನ್ನು ಕಂಡು ನನ್ನಲ್ಲಿಯ ಯಕ್ಷಗಾನ ಕಲಾವಿದ ಗಟ್ಟಿಯಾಗಿ ರೂಪುಗೊಳ್ಳುತ್ತಾ ಹೋದ. ಚಿಕ್ಕಂದಿನಲ್ಲಿ ಶಾಲೆ, ಕಾರ್ಯಕ್ರಮಗಳು ಎಂದು ಅಲ್ಲಲ್ಲಿ ಯಕ್ಷಗಾನ ಪಾತ್ರವನ್ನು ನಾನು ಹಾಕಿ ಸಂಭ್ರಮಿಸಿದ್ದೆ. ಆದರೆ ವೃತ್ತಿ ಮೇಳ ಎಂದು ಸೇರಿಕೊಂಡಿದ್ದು ಗುಂಡಬಾಳ ಮೇಳವನ್ನು. ಯಾವುದೇ ಗುರುವಿನ ಬಳಿ ಶಾಸ್ತ್ರೀಯವಾಗಿ ಯಕ್ಷಗಾನವನ್ನು ನಾನು ಕಲಿತಿಲ್ಲ. ತಂದೆಯನ್ನೇ ಗುರುವಾಗಿಟ್ಟುಕೊಂಡು ಕಲಾಪ್ರೀತಿ ಬೆಳೆಸಿಕೊಂಡ ನನಗೆ ವೃತ್ತಿಯ ಪ್ರಾರಂಭದಲ್ಲಿ ಕಪ್ಪೆಕೆರೆ ಸುಬ್ರಾಯ ಭಾಗವತರಿಂದ ಒಳ್ಳೆಯ ಮಾರ್ಗದರ್ಶನ ಸಿಕ್ಕಿತು. ಸುಮಾರು ಒಂದು ವರ್ಷ ಅದೇ ಮೇಳದಲ್ಲಿದ್ದ ನನಗೆ ಬಹು ಬೇಗನೆ ಮುಖ್ಯ ಪಾತ್ರಗಳೂ ಲಭಿಸಿದವು.

ಮುಖ್ಯ ಪಾತ್ರ ನಿರ್ವಹಿಸುತ್ತಿದ್ದ ತೋಟಿ ಗಣಪತಿ ಹೆಗಡೆ ತಮ್ಮ ಜೊತೆಯಲ್ಲೇ ಪ್ರಧಾನ ಪಾತ್ರ ನಿರ್ವಹಿಸುವ ಅವಕಾಶಗಳನ್ನು ನೀಡಿದರು. ನೃತ್ಯ, ಮಾತುಗಾರಿಕೆಯ ಮೂಲಕ ಜನರನ್ನು ರಂಜಿಸುತ್ತಿದ್ದ ನಾನು ದಕ್ಷಿಣ ಕನ್ನಡದ ಗೋಳಿ ಗರಡಿ, ಕಮಲಶಿಲೆ ಮೇಳದಲ್ಲಿ ಕಲಾವಿದನಾದೆ. 13 ವರ್ಷ ಪೆರ್ಡೂರು ಮೇಳ, ನಾಲ್ಕು ವರ್ಷ ಸಾಲಿಗ್ರಾಮ ಮೇಳದಲ್ಲಿದ್ದೆ.

ಚಿಟ್ಟಾಣಿ, ಗೋಡೆ, ಚನ್ನಪ್ಪ ಶೆಟ್ಟಿ, ಕೊಂಡದಕುಳಿ, ಯಾಜಿ, ಗೋಪಾಲ ಶೆಟ್ಟಿ, ಹಳ್ಳಾಡಿ ರಮೇಶ ಭಂಡಾರಿ ಮುಂತಾದ ಅನೇಕ ಕಲಾವಿದರ ಜೊತೆ ಅಭಿನಯ ಖುಷಿ ಹಂಚಿಕೊಳ್ಳುವ ಅವಕಾಶ ನನಗೆ ಸಿಕ್ಕಿತು.

``ಕಲಾಧರ ಯಕ್ಷರಂಗ ಬಳಗ ಜಲವಳ್ಳಿ`` ತಂಡ

ಸುಮಾರು 21 ವರ್ಷಗಳ ಕಾಲ ಮೇಳದ ಮೂಲಕ ದೇಶದ ನಾನಾ ಕಡೆ ಯಕ್ಷಗಾನ ಪ್ರದರ್ಶನ ನೀಡಿ ಇದೀಗ ನಾಲ್ಕು ವರ್ಷಗಳಿಂದ 12 ಸದಸ್ಯರಿರುವ ‘ಕಲಾಧರ ಯಕ್ಷರಂಗ ಬಳಗ ಜಲವಳ್ಳಿ’ ಎಂಬ ನನ್ನದೇ ಒಂದು ತಂಡ ಕಟ್ಟಿಕೊಂಡಿದ್ದೇನೆ. ಅತಿಥಿ ಕಲಾವಿದರನ್ನೂ ಸೇರಿಸಿ ಅನೇಕ ಕಡೆ ಯಕ್ಷಗಾನ ಪ್ರದರ್ಶನ ನೀಡುತ್ತೇವೆ.

ಇತ್ತೀಚೆಗೆ ಯಕ್ಷಗಾನ ಕಲಾವಿದರಿಗೆ ಹೆಚ್ಚಿನ ಬೇಡಿಕೆ ಇದೆ. ತುಸು ಖ್ಯಾತಿ ಪಡೆದಿದ್ದರೆ ಮನೆಗೇ ಬಂದು ಕರೆದುಕೊಂಡು ಹೋಗುತ್ತಾರೆ. ಆದರೆ ಹಿಂದೆ ತೀರಾ ಕಷ್ಟವಿತ್ತು. ಸಂಭಾವನೆಯು ತುಂಬಾ ಚೆನ್ನಾಗಿದೆ. ಅಲ್ಲದೆ ಸಾರಿಗೆ ವ್ಯವಸ್ಥೆ ಇರುವುದರಿಂದ ಓಡಾಟಕ್ಕೂ ಯಾವುದೇ ತೊಂದರೆ ಇಲ್ಲ ಎಂಬುದು ಬದಲಾವಣೆಯ ಖುಷಿಗೆ ಕಾರಣ.

ನಿರಂತರ ಅಧ್ಯಯನ

ನಾನು ಓದಿದ್ದು 8ನೇ ತರಗತಿ. ಆದರೂ ಮಾತುಗಾರಿಕೆಯಲ್ಲಿ ನೈಪುಣ್ಯ ಗಳಿಸಿದ್ದು ಹೇಗೆ ಎಂದು ಅನೇಕರು ಕೇಳುವುದುಂಟು. ನಿರಂತರ ಚಿಂತನೆ ಹಾಗೂ ಅಧ್ಯಯನವೇ ಈ ಕ್ಷೇತ್ರದಲ್ಲಿ ಗೆಲ್ಲುವ ದಾರಿಯನ್ನು ಸುಲಭ ಮಾಡಿದೆ. ಪುರಾಣ, ಯಕ್ಷಗಾನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಸಿಕ್ಕಾಪಟ್ಟೆ ಓದುತ್ತಿದ್ದೆ. ಶೇಣಿ ಮುಂತಾದ ಮೇರು ಕಲಾವಿದರ ಯಕ್ಷಗಾನ ಕ್ಯಾಸೆಟ್‌ ಹಚ್ಚಿಕೊಂಡು ಸದಾ ಕೇಳುತ್ತಿದ್ದೆ. ಯಕ್ಷಗಾನಕ್ಕೆ ಸಂಬಂಧಿಸಿದಂತೆ ಏನೇ ಸಿಕ್ಕರೂ ಕುಳಿತು ಅಧ್ಯಯನ ನಡೆಸುತ್ತಿದ್ದೆ. ಇದೇ ನನ್ನ ಇಂದಿನ ಸಾಧನೆಗೆ ಕಾರಣವಾಯಿತು.

ಹೊಸತನ ಬೇಕೇಬೇಕು

ನೋಡಿದ್ದನ್ನೇ ನೋಡುವುದು ಎಂದರೆ ಯಾರಿಗೂ ಇಷ್ಟವಿರುವುದಿಲ್ಲ. ಪ್ರತಿದಿನ ರಂಗದಲ್ಲಿ ಹೊಸತನ್ನು ಕೊಡುತ್ತೇನೆ ಎನ್ನುವುದೇ ನನ್ನ ಪ್ಲಸ್‌ ಪಾಯಿಂಟ್‌. ಇಂದು ಹೇಳಿದ್ದನ್ನು ನಾಳೆ ಹೇಳುವುದಿಲ್ಲ. ಅಲ್ಲದೆ ಯಾರನ್ನೂ ನಾನು ಅನುಕರಿಸುವುದಿಲ್ಲ. ಬಡಗುತಿಟ್ಟಿನಲ್ಲಿ ಜನಪ್ರಿಯವಾದ ಮಂಡಿ ಕುಣಿತ ಮಾಡುವುದಿಲ್ಲ. ಯಾವುದೇ ಹೊಸ ಪಾತ್ರವನ್ನು ಮಾಡುವಾಗಲೂ ಹಿರಿಯರನ್ನು ಭೇಟಿ ಮಾಡಿ ಅದಕ್ಕೆ ಸಂಬಂಧಿಸಿದ ಪ್ರಯೋಗಗಳ ಅಧ್ಯಯನ ಮಾಡುತ್ತೇನೆ. ಹಳೆಯ ಪ್ರಯೋಗಗಳನ್ನು ಆದರ್ಶವಾಗಿಟ್ಟುಕೊಂಡು ನನ್ನದೇ ಆದ ವಿಭಿನ್ನ ಶೈಲಿಯಲ್ಲಿ ಅದನ್ನು ಪ್ರಸ್ತುತಪಡಿಸುತ್ತೇನೆ. ಒಂದು ಪಾತ್ರ, ಸನ್ನಿವೇಶ, ಯಾವ ರೀತಿಯ ವೇಷ ಎಂಬುದರ ಮೇಲೆ ಮಾತುಗಾರಿಕೆ ಹಾಗೂ ಕುಣಿತದ ಅಬ್ಬರವನ್ನು ನಿರ್ಧರಿಸುತ್ತೇನೆ. ಇದನ್ನು ಜನ ಮೆಚ್ಚಿದರು ಎಂಬುದೇ ಖುಷಿ. ಯಕ್ಷಗಾನ ಕಲೆಗೆ ಏನೋ ವಿಶೇಷ ಸೆಳೆತವಿದೆ. ಪ್ರತಿ ಪಾತ್ರ ನಿರ್ವಹಣೆಗೂ ಮುಂಚೆ ನಿರಂತರ ಚಿಂತನೆ ಬೇಕು. ಪಾತ್ರಕ್ಕೆ ತಕ್ಕಂತೆ ಮೇಕಪ್‌ ಕಲೆಯನ್ನೂ ಅರಿತಿರಬೇಕು. ವೇಷಭೂಷಣ ತಿಳಿದಿರಬೇಕು.

ರಂಗದಲ್ಲಿ ನೃತ್ಯದ ಮೂಲಕ ಜನರನ್ನು ರಂಜಿಸಬೇಕು. ಹಾಡು, ತಾಳವಾದ್ಯಗಳಿಗೆ ಹೆಜ್ಜೆ ಇಟ್ಟಾಗುತ್ತಿದ್ದಂತೆಯೇ ಮಾತಿನ ಓಘಕ್ಕೆ ತೆರೆದುಕೊಳ್ಳಬೇಕು. ಸುಸ್ತು, ಏದುಸಿರನ್ನು ಮರೆಸುತ್ತಾ ಪ್ರೇಕ್ಷಕರನ್ನು ರಂಜಿಸಬೇಕು. ನಮ್ಮ ಈ ಪ್ರಯತ್ನಕ್ಕೆ ವೀಕ್ಷಕರಿಂದ ಪ್ರತಿಕ್ರಿಯೆ ಬರುತ್ತಿದ್ದಂತೆ ಎಲ್ಲಾ ಸುಸ್ತು ಕ್ಷಣಾರ್ಧದಲ್ಲಿ ಮಾಯವಾಗಿ ಬಿಡುತ್ತದೆ. ಚಪ್ಪಾಳೆಯ ಸದ್ದು ಮೊಳಗುತ್ತಿದ್ದಂತೆ ಮೈಯಲ್ಲಿ ಉತ್ಸಾಹದ ಚಿಲುಮೆ ಭುಗಿಲೇಳುತ್ತದೆ. ಇತ್ತೀಚೆಗೆ ಸಿನಿಮಾ ಕಥೆಗಳನ್ನೂ ಯಕ್ಷಗಾನ ರೂಪಕ್ಕಿಳಿಸಲಾಗುತ್ತಿದೆ. ಜನರೂ ಅದನ್ನೇ ಬಯಸುತ್ತಿದ್ದಾರೆ. ಕಾಲದೊಂದಿಗೆ ಬದಲಾದರೆ ಮಾತ್ರ ಕಲೆಯೂ ಉಳಿಯುತ್ತದೆ. ಆದರೆ ಎರಡು ವರ್ಷದಿಂದೀಚೆಗೆ ಮತ್ತೆ ಪೌರಾಣಿಕ ನಾಟಕಗಳತ್ತಲೇ ಆಸಕ್ತಿ ಬೆಳೆಯುತ್ತಿದೆ.

ಬೆಂಗಳೂರಿನ ಜನ ತುಂಬ ಚುರುಕು

ಅನೇಕ ಕಡೆ ನಾನು ಯಕ್ಷಗಾನ ಪ್ರದರ್ಶನ ನೀಡಿದ್ದೇನೆ. ಆದರೆ ಬೆಂಗಳೂರಿನ ಪ್ರೇಕ್ಷಕರು ಕಲಾವಿದರಿಗಿಂತ ಹೆಚ್ಚು ಚುರುಕಾಗಿದ್ದಾರೆ. ಅವರಿಗೇನು ಬೇಕೊ ಅದನ್ನು ಕಲಾವಿದರಿಂದ ಪಡೆಯುವ ಕಲೆ ಅವರಿಗೆ ಚೆನ್ನಾಗಿ ಗೊತ್ತು. ಇಷ್ಟವಾದರೆ ಖುಷಿಯಿಂದ ಪ್ರೋತ್ಸಾಹಿಸುತ್ತಾರೆ. ಪ್ರಚಾರ ನೀಡುತ್ತಾರೆ. ಇಷ್ಟವಾಗಿಲ್ಲ ಎಂದರೆ ಅಷ್ಟೇ ನಿಷ್ಠುರವಾಗಿ ಟೀಕಿಸುತ್ತಾರೆ ಕೂಡ.

ಕಾರ್ಯಕ್ರಮದ ವಿವರಗಳು

ಶ್ರೀ ಸಾಲಿಗ್ರಾಮ ಮೇಳ ಮತ್ತು ಅತಿಥಿ ಕಲಾವಿದರಿಂದ ‘ದುಷ್ಟಬುದ್ಧಿ’, ‘ಲವಕುಶ’ ಹಾಗೂ ‘ಕಾಳಿದಾಸ’ ಯಕ್ಷಗಾನ ಪ್ರದರ್ಶನ. ಇದೇ ಸಂದರ್ಭದಲ್ಲಿ ವಿದ್ಯಾಧರ ಜಲವಳ್ಳಿ ಅವರಿಗೆ ಸನ್ಮಾನ ಕಾರ್ಯಕ್ರಮವೂ ಇದೆ. ಹಿಮ್ಮೇಳ– ಕೇಶವ ಹೆಗಡೆ ಕೊಳಗಿ, ಸುರೇಶ ಶೆಟ್ಟಿ ರಾಘವೇಂದ್ರ ಮಯ್ಯ, ರಾಮಕೃಷ್ಣ ಹಿಲ್ಲೂರು, ಆನಂದ ಅಂಕೋಲ (ಭಾಗವತಿಕೆ). ಚಂಡೆ– ಕೋಟ ಶಿವಾನಂದ. ಮದ್ದಲೆ– ಪರಮೇಶ್ವರ ಭಂಡಾರಿ. ಮುಮ್ಮೇಳ– ವಿದ್ಯಾಧರ ಜಲವಳ್ಳಿ, ಸುಬ್ರಹ್ಮಣ್ಯ ಚಿಟ್ಟಾಣಿ, ಗಣಪತಿ ಭಟ್‌ ಕಣ್ಣಿಮನೆ, ಹಳ್ಳಾಡಿ, ರಮೇಶ ಭಂಡಾರಿ. ಕೃಷ್ಣಯಾಜಿ, ಪ್ರಸನ್ನ ಶೆಟ್ಟಿಗಾರ್‌, ಮಂಕಿ, ಉಳ್ಳೂರು, ರಾಜೇಶ್‌ ಭಂಡಾರಿ, ಚಂದ್ರಹಾಸ ಗೌಡ, ತುಂಬ್ರಿ. ಆಯೋಜನೆ– ಮಣೂರು ಮಯ್ಯ ಯಕ್ಷಕಲಾ ಪ್ರತಿಷ್ಠಾನ.

ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಟಿಕೆಟ್‌ ದರ ₹300, ₹200.

*********************

*********************


ಫೋಟೋ ಕೃಪೆ : ಅ೦ತರ್ಜಾಲದ ಅನಾಮಿಕ ಯಕ್ಷಾಭಿಮಾನಿಗಳು

ಕೃಪೆ : prajavani


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
     ತಾಜಾ ಲೇಖನಗಳು
   
  ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
  ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
  ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
   
  © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ