ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಯಕ್ಷಗಾನ ಕ್ಷೇತ್ರದಲ್ಲಿ - ಹಕ್ಕುಸ್ವಾಮ್ಯ ಅಥವಾ ಕೃತಿಸ್ವಾಮ್ಯ

ಲೇಖಕರು :
ಕಟೀಲು ಸಿತ್ಲ ರಂಗನಾಥ ರಾವ್
ಭಾನುವಾರ, ಒಕ್ಟೋಬರ್ 4 , 2015

ನಾಗರಿಕ ಜಗತ್ತಿನಲ್ಲಿ ನಾವು ನಿಯಮಕ್ಕೊಳಪಟ್ಟೇ ಬದುಕಬೇಕಾದ ಅನಿವಾರ್ಯತೆ ಇದೆ. ನಿಯಮಗಳನ್ನು ಮೀರಿ ಬದುಕಲಾರದು ಮತ್ತು ಬದುಕಕೂಡದು. ಈ ನಿಯಮಾವಳಿಗಳಿಂದಲಾಗಿಯೇ ನಾವು ಬದುಕಿ ಬಾಳುತ್ತಿರುವ ಈ ಸಮಾಜ ನಾಗರಿಕ ಸಮಾಜ ಎಂದೆನ್ನಿಸಲ್ಪಟ್ಟಿದೆ. ಅದಲ್ಲವಾದರೆ ಅದು ಅನಾಗರಿಕ ಸಮಾಜ ಎಂದೆನ್ನಿಸಲ್ಪಡುತ್ತದೆ. ಈ ನೀತಿ ನಿಯಮಾವಳಿಗಳೂ ಕೂಡ ಸಮಷ್ಟಿಯ ಹಿತದೃಷ್ಠಿಯನ್ನು ಒಳಗೊಂಡಿರುವಂಥದ್ದಾಗಿರಬೇಕು. ಸರ್ವಾಧಿಕಾರಿ ಧೋರಣೆಗಳು, ಅಂಧಾಚರಣೆಯ ನಿಯಮಗಳು ಮತ್ತೆ ಅನಾಗರಿಕ ಸಮಾಜವನ್ನೇ ಸೃಷ್ಟಿ ಮಾಡುತ್ತದೆ. ಇದಕ್ಕೆ ಉದಾಹರಣೆಗಳು ಸಾಕಷ್ಟು ಪ್ರಮಾಣದಲ್ಲಿ ನಮಗೆ ಲಭಿಸುತ್ತದೆ. (ಭಯೋತ್ಪಾದನೆ, ಮತ್ತು ಭಯೋತ್ಪಾದಕರ ನಿಯಮಾವಳಿಗಳು ಒಂದು ಅಂಧಾನುಚರಣೆ ಮತ್ತು ಅಂಧಶೃದ್ಧೆಯ ದ್ಯೋತಕ).

ನಾವು ಮೂರು ರೀತಿಯ ನಿಯಮಕ್ಕೊಳಪಟ್ಟು ಬದುಕಬೇಕಾಗುತ್ತದೆ. ಯಾವುದದು?
  • ಧಾರ್ಮಿಕವಾದ ನಿಯಮಾವಳಿಗಳು
  • ಸಮಾಜದಲ್ಲಿ ರೂಢಿಗತವಾದ ನಿಯಮಾವಳಿಗಳು
  • ನಮ್ಮ ರಾಷ್ಟ್ರದ ಸಂವಿಧಾನಬದ್ಧವಾದ ನಿಯಮಾವಳಿಗಳು.
ಉದಾಹರಣೆಗೆ ಬ್ರಾಹ್ಮಣನಾದವನು ಮಾಂಸ ಮತ್ತು ಮಧುಪಾನ ಮಾಡಕೂಡದು ಎನ್ನುವಂಥದ್ದು ಧಾರ್ಮಿಕ ಮತ್ತು ಸಮಾಜದ ರೂಢಿಗತ ನಿಯಮ. ಇದನ್ನು ಉಲ್ಲಂಘಿಸಿದರೆ ಏನಾಗುತ್ತದೆ? ಆತ ಧರ್ಮಿಷ್ಟನಲ್ಲ ಎಂದಾಗುತ್ತದೆ ಹಾಗೂ ಸಮಾಜವನ್ನೂ ಗಣನೆಗೆ ತೆಗೆದುಕೊಳ್ಳದ ಉದ್ಧಟ ಎಂದಾಗುತ್ತದೆ. ಆದರೆ ಸಂವಿಧಾನಾತ್ಮಕವಾಗಿ ಅದು ತಪ್ಪೇ ಅಲ್ಲ. ಅದು ಆ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯ. ಅವನಿಗೆ ಇಷ್ಟ ಆಗುವುದನ್ನು ಅವನು ಸೇವಿಸಬಹುದು. ಧಾರ್ಮಿಕ ನಿಯಮಾವಳಿಗಳು ಮನುಷ್ಯನ ನಂಬಿಕೆಗೆ ಸಂಬಂಧಿಸಿರುವಂಥದ್ದು. ಕೆಟ್ಟದ್ದು ಮಾಡಿದರೆ ಕೆಟ್ಟದ್ದಾಗುತ್ತದೆ ಎನ್ನುವ ವಿಶ್ವಾಸ, ನಂಬಿಕೆ ಅಷ್ಟೆ. ಇಲ್ಲಿ ಆ ಕೂಡಲೇ ಶಿಕ್ಷೆ ಇಲ್ಲ.

ಇನ್ನು ಸಾರ್ವಜನಿಕವಾಗಿ ಧೂಮಪಾನ ಮಾಡುವುದು ಧಾರ್ಮಿಕವಾಗಿ ಮತ್ತು ಸಾಮಾಜಿಕವಾಗಿ ಅಂಥಾ ತಪ್ಪೇನಲ್ಲ. ಆದರೆ ಸಂವಿಧಾನಾತ್ಮಕವಾಗಿ ಅದು ತಪ್ಪು ಮತ್ತು ಅದಕ್ಕೆ ದಂಡನೆಯನ್ನೂ ವಿಧಿಸಬಹುದು. ಇದನ್ನು ಮತ್ತು ಇಂತಹ ತಹರೇವಾರಿ ಉದಾಹರಣೆಗಳನ್ನು ಅವಲೋಕಿಸಿದಾಗ ನಮಗೆ ಸುಸ್ಪಷ್ಟವಾಗುವುದು ಏನೆಂದರೆ ಧಾರ್ಮಿಕ ಮತ್ತು ಸಮಾಜದ ರೂಢಿಗತ ನಿಯಮಾವಳಿಗಳಿಗಿಂತಲೂ ಅಧಿಕವಾಗಿ ನಾವು ಬದುಕುತ್ತಿರುವ ರಾಷ್ಟ್ರದ ಸಂವಿಧಾನಬದ್ಧವಾದ ನಿಯಮಾವಳಿಗಳಿಗೆ ಒಳಪಟ್ಟು ಬದುಕಬೇಕು.

ಒಂದೊಮ್ಮೆಗೆ ಧಾರ್ಮಿಕ ಹಾಗೂ ಸಾಮಾಜಿಕ ರೂಢಿಗತ ನಿಯಮಾವಳಿಗಳನ್ನು ಪಾಲಿಸಲು ಅಸಾಧ್ಯವಾದರೂ ದೇಶದ ಕಾನೂನನ್ನು ಪಾಲಿಸತಕ್ಕದ್ದು. ಅದಲ್ಲವಾದರೆ ಪಾಲಿಸದೇ ಇದ್ದುದಕ್ಕೆ ತಕ್ಕ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಈ ಮೊದಲೇ ಹೇಳಿದಂತೆ ಮೂರೂ ರೀತಿಯ ನಿಯಮಾವಳಿಗೊಳಪ್ಪಟ್ಟು ಬದುಕುವ ವ್ಯಕ್ತಿ ಮತ್ತು ಸಮಾಜವೇ ನಾಗರಿಕ ಸಮಾಜ.

ಮೂಲಭೂತವಾಗಿ ಸ್ವಯಂ ನಾವೇ ಸರಿಯಾದ ದಾರಿಯಲ್ಲಿ ಅಂದರೆ ಋಜು ಮಾರ್ಗದಲ್ಲಿ ಪ್ರವರ್ತಿಸಬೇಕು. ಹಾಗೆ ಆಗದೇ ಇದ್ದ ಕಾರಣವೇ ಹತ್ತು ಹಲವು ನಿಯಮಾವಳಿಗಳು, ಕಾನೂನುಗಳು ಮತ್ತು ದಂಡನೆಗಳು. ಆ ಕಾನೂನು ಮತ್ತು ದಂಡನೆಗೆ ಭಯಪಟ್ಟಾದರೂ ನಿಯಮ ಪಾಲಿಸಲಿ ಮತ್ತು ಅಮಾಯಕನಾದವನಿಗೆ, ಬದ್ಧತೆಯಿಂದ ಬಾಳುವ ವ್ಯಕ್ತಿಗೆ ಅನ್ಯಾಯವಾಗದಿರಲಿ ಎನ್ನುವುದು ಕಾನೂನುಗಳ ಹಿಂದಿರುವ ಆಶಯ. ಹತ್ತು ಹಲವು ವ್ಯಾವಹಾರಿಕ ವಿಷಯಗಳಿಗಾಗುವಾಗ ನಮ್ಮ ದೇಶದ ಕಾನೂನಿನ ಚೌಕಟ್ಟಿನಲ್ಲಿ ನಾವು ವ್ಯವಹರಿಸಬೇಕಾಗುತ್ತದೆ. ಅದರಲ್ಲಿ ಒಂದು ಕೃತಿ ಸ್ವಾಮ್ಯ (Copyright)

ಭಾರತೀಯ ಸಂವಿಧಾನದಲ್ಲಿ ಕೃತಿ ಸ್ವಾಮ್ಯ (Copyright) ಎಂಬುದನ್ನು ಬಹಳ ವಿವರವಾಗಿ ವ್ಯಾಖ್ಯಾನಿಸಲಾಗಿದೆ. 1957 ರ ಭಾರತೀಯ ಕೃತಿಸ್ವಾಮ್ಯ ಕಾಯ್ದೆಯ ಸರಳ ವ್ಯಾಖ್ಯಾನ ಹೀಗಿದೆ. The exclusive and assignable legal right, given to the originator for a fixed number of years, to print, publish, perform, film, or record literary, artistic, or musical material. ಈ ಕೃತಿಸ್ವಾಯಕ್ಕೆ ಒಳಪಡುವ ಕ್ಷೇತ್ರಗಳು ಸಂಗೀತ, ಸಾಹಿತ್ಯ, ಛಾಯಾಗ್ರಹಣ, ಚಲನಚಿತ್ರ ಎಲ್ಲವೂ ಕೂಡ. ಅಂದರೆ ಒಂದು ಕೃತಿಯ ಜನಕನಾದವನಿಗೆ ಒಂದು ನಿರ್ದಿಷ್ಠ ಸಂಖ್ಯೆಯ ವರ್ಷಗಳ ಕಾಲ ತನ್ನ ಕೃತಿಯನ್ನು ಮುದ್ರಿಸಲು, ಪ್ರಕಟಿಸಲು, ನಿರ್ವಹಿಸಲು, ಸಂವಿಧಾನ ನೀಡಿರಬಹುದಾದ ವಿಶೇಷ ಹಕ್ಕು.

ಇದು ಬಹಳ ವಿಸ್ತಾರವಾದ ಕ್ಷೇತ್ರ ಮತ್ತು ಬಹಳ ವಿಸ್ತಾರವಾಗಿ ವಿವರಿಸಲಾಗಿದೆ. ಈ ಕೃತಿಸ್ವಾಮ್ಯವನ್ನು ಯಕ್ಷಗಾನ ಕ್ಷೇತ್ರಕ್ಕೆ ಅಳವಡಿಸಿಕೊಂಡು ನೋಡುವ ಒಂದು ನೋಟವಷ್ಟೆ. ನಾನು ಕಾನೂನು ಪಂಡಿತನಲ್ಲ. ಆದರೆ 1957 ರ ಭಾರತೀಯ ಸಂವಿಧಾನದ ಕೃತಿ ಸ್ವಾಮ್ಯವನ್ನು ಓದಿ ನಾನು ತಿಳಿದ ವಿಷಯವನ್ನಿಲ್ಲಿ ವಿಷದೀಕರಿಸುವ ಯತ್ನವನ್ನು ಮಾಡುತ್ತಿದ್ದೇನೆ.

ಯಾವುದೇ ಒಂದು ಕೃತಿ ನಿರ್ಮಾಣವಾಗುವಲ್ಲಿಯವರೆಗೆ ಅದರ ಸ್ವಾಮ್ಯ ಯಾರದ್ದೂ ಅಲ್ಲ. ಅದೇಕೆಂದರೆ ಅದೇ ಮಾದರಿಯ ಪ್ರಯತ್ನಗಳನ್ನು ಇತರರೂ ಮಾಡುತ್ತಿದ್ದಿರಬಹುದು. ಆದ ಕಾರಣ ಕೃತಿ ನಿರ್ಮಾಣವಾದ ಮೇಲೆಯೇ ಅದರ ಹಕ್ಕುಸ್ವಾಮ್ಯದ ಪ್ರಶ್ಣೆ ಬರುವುದು. ಒಂದು ಕೃತಿ ನಿರ್ಮಾಣವಾದ ಮೇಲೆ ಅದರ ಸಂಪೂರ್ಣ ಹಕ್ಕು ರಚೈತನಿಗೆ ಎನ್ನುವುದು ನಿರ್ವಿವಾದ.

ಒಂದು ಕೃತಿಯನ್ನು ಅಂದರೆ ಉದಾಹರಣೆಗೆ ಒಂದು ಯಕ್ಷಗಾನದ ಧ್ವನಿಮುದ್ರಣ ಅಥವಾ ಅದರ ವೀಡಿಯೋ ಎಂದು ಇಟ್ಟುಕೊಂಡು ಮುಂದುವರೆಯೋಣ. ಕೃತಿಯನ್ನು ಒಬ್ಬ ಯಾ ಒಂದು ಸಂಸ್ಥೆ ಬಿಡುಗಡೆಗೊಳಿಸುತ್ತದೆ. ಅದನ್ನು ಮಾರಾಟಮಾಡಿ ಹಣ ಸಂಪಾದನೆಯ ಉದ್ದೇಶದಿಂದ. ಅದನ್ನು ನಾವು ಕ್ರಯಕೊಟ್ಟು ಖರೀದಿಸಿ ಆಸ್ವಾದಿಸಬೇಕು. ಖರೀದಿಸಿದ ವ್ಯಕ್ತಿ ಆ ಕೃತಿಯನ್ನು ಹಣ ಮಾಡುವ ಉದ್ದೇಶದಿಂತಂತೂ ಪರರಿಗೆ ಮಾರಾಟ ಮಾಡುವಂತೆಯೇ ಇಲ್ಲ. ಒಬ್ಬ ಖರೀದಿಸಿ ಅದನ್ನು ಆತ ಎಲ್ಲರಿಗೂ ಧರ್ಮಾರ್ಥವಾಗಿಯೂ ಹಂಚುವಂತಿಲ್ಲ. ಅಷ್ಟು ಮಾತ್ರವಲ್ಲದೇ ಆ ಕೃತಿಯ ತುಣುಕನ್ನೂ ಕೂಡ 20 ಜನರಿಗಿಂತ ಹೆಚ್ಚು ಜನರಿಗೆ ಆತ ಧರ್ಮಾರ್ಥವಾಗಿಯೂ ಹಂಚುವಂತಿಲ್ಲ. (ಈ Facebook, whatsappa ಗಳಲ್ಲಿ ಸಂಸ್ಥೆಗಳು ಬಿಡುಗಡೆಗೊಳಿಸಿದ ತುಣುಕುಗಳನ್ನು ಹಂಚುವುದೂ ಕೂಡ ಅಪರಾಧವೇ ಕಾನೂನಿನ ದೃಷ್ಟಿಯಲ್ಲಿ). ಯಾಕೆ ಎಂದರೆ ಆ ಸಂಸ್ಥೆ ಬಂಡವಾಳವನ್ನು ಹೂಡಿ ಆ ಕೃತಿಯನ್ನು ಬಿಡುಗಡೆ ಮಾಡಿರುವುದು ಅದರಿಂದ ಹಣ ಸಂಪಾದನೆಯನ್ನು ಮಾಡುವುದಕ್ಕೋಸ್ಕರವಾಗಿ. ಅದರ ಬಂಡವಾಳ ಆ ಕೃತಿಯಲ್ಲಿ ಇದೆ.

ಇನ್ನು ಒಂದೈವತ್ತು ವರ್ಷಗಳ ಹಿಂದೆ ಒಂದು ಕೃತಿಯನ್ನು ಒಂದು ಸಂಸ್ಥೆ ಬಿಡುಗಡೆ ಮಾಡಿದೆ ಎಂದಿಟ್ಟುಕೊಳ್ಳೋಣ. ಅದು ಮತ್ತೆ ಬಿಡುಗಡೆ ಆಗುತ್ತಿಲ್ಲ. ಆಗ ಓರ್ವ ಪುಣ್ಯಾತ್ಮ ತನ್ನ ಸಮಯವನ್ನೂ, ಶ್ರಮವನ್ನೂ, ತನ್ನಲ್ಲಿರಬಹುದಾದ ತಂತ್ರಜ್ಞಾನವನ್ನೂ ಬಳಸಿ ಆ ಕೃತಿಯನ್ನು ಕಾಪಿಟ್ಟುಕೊಳ್ಳುವ ಕೆಲಸ ಮಾಡುತ್ತಾನೆ. ಆಗ ಆ ಕೃತಿಯ ಹಕ್ಕುಸ್ವಾಮ್ಯ ಆತನದ್ದೇ ಆಗುತ್ತದೆ. ಯಾಕೆಂದರೆ ಈ ಮೊದಲೇ ಹೇಳಿದಂತೆ ಅದನ್ನು ಕಾಪಿಡಲು ಶ್ರಮಪಟ್ಟಿದ್ದಾನೆ. ಅದರ ಹಕ್ಕುಸ್ವಾಮ್ಯ ಆತನದ್ದೇ ಆದರೂ ಕೂಡ ಆ ಕೃತಿಯನ್ನು ಆತ ಮಾರಾಟ ಮಾಡುವಂತಿಲ್ಲ. ಮಾರಾಟ ಮಾಡಬೇಕೆಂದರೆ ಮೂಲದಲ್ಲಿ ಕೃತಿಯನ್ನು ಬಿಡುಗಡೆಗೊಳಿಸಿದ ಸಂಸ್ಥೆಯ ಪರವಾನಗಿ ಬೇಕು. ಹಾಗೆಂದು ಅದನ್ನು ಆತ ಇದೊಂದು ಐತಿಹಾಸಿಕ ದಾಖಲೆ ಎಂಬುದಾಗಿ ಭಾವಿಸಿ ತನ್ನಲ್ಲಿ ಇಟ್ಟುಕೊಳ್ಳಲೂಬಹುದು ಹಾಗೂ ಅದನ್ನು ಉಚಿತವಾಗಿ ಹಂಚಿಕೊಳ್ಳಲೂಬಹುದು. ಈ ರೀತಿ ಉಚಿತವಾಗಿ ಹಂಚುವಾಗಲೂ ಆತ ಮೂಲ ಕೃತಿಯನ್ನು ಬಿಡುಗಡೆಗೊಳಿಸಿದ ಸಂಸ್ಥೆಯ ಹೆಸರನ್ನು ನಮೂದಿಸಬೇಕು ಆತನಿಗೆ ತಿಳಿದಿದ್ದರೆ. ತಿಳಿದಿಲ್ಲವಾದರೆ ತನಗೆ ಸಿಕ್ಕಿದ್ದು ಎಂಬುದಾಗಿಯಾದರೂ ಹೇಳಬೇಕು. ಇಲ್ಲಿ ಮೂಲ ಕೃತಿಯನ್ನು ಬಿಡುಗಡೆಗೊಳಿಸಿದ ಸಂಸ್ಥೆಯಿಂದ ಆ ಹಕ್ಕುಸ್ವಾಮ್ಯ ಕಾಪಿಟ್ಟುಕೊಂಡ ವ್ಯಕ್ತಿಗೆ ಬಂದಿದೆ. ಆತ ಅದನ್ನು ಧರ್ಮಾರ್ಥವಾಗಿ ಹಂಚಿದಾಗ (ಮಾರಾಟ ಮಾಡುವಂತೆ ಇಲ್ಲ, ಅದು ಅಪರಾಧವಾಗುತ್ತದೆ) ಅದನ್ನು ಧರ್ಮಾರ್ಥವಾಗಿ ಪಡೆದವರು ಅದನ್ನು ಹಣಕ್ಕೆ ಮಾರಾಟಮಾಡುವಂತಿಲ್ಲ. ಭಾರತೀಯ ಸಂವಿಧಾನದ ಕೃತಿಸ್ವಾಮ್ಯದ ಪ್ರಕಾರ ಅದು ದಂಡನೀಯ ಅಪರಾಧವಾಗಿ ಪರಿಣಮಿಸುತ್ತದೆ. ಆದರೆ ಆತ ಅದನ್ನು ಉಚಿತವಾಗಿ ಹಂಚಬಹುದು ಅದೂ ಕೂಡ ಶ್ರಮಪಟ್ಟು ಜತನ ಮಾಡಿ ಹಂಚಿಕೊಂಡಿರುವವನ ಹೆಸರನ್ನು ನಮೂದಿಸಿ. ಕಾಪಿಟ್ಟವನ ಹೆಸರನ್ನು ನಮೂದಿಸದೇ ಉಚಿತವಾಗಿ ಹಂಚಿದಾಗಲೂ ಕೂಡ ಆ ಕಾಪಿಟ್ಟ ವ್ಯಕ್ತಿ ಆಕ್ಷೇಪವೆತ್ತಿದರೆ ಅದು ಭಾರತೀಯ ಸಂವಿಧಾನದ ಕೃತಿಸ್ವಾಮ್ಯದ ಪ್ರಕಾರ ಅದು ದಂಡನೀಯ ಅಪರಾಧವಾಗಿ ಪರಿಣಮಿಸುತ್ತದೆ.

ಒಂದೆರಡು ಉದಾಹರಣೆಗಳ ಮೂಲಕ ಈ ಕೃತಿಸ್ವಾಮ್ಯವನ್ನು ಅರ್ಥೈಸಿಕೊಳ್ಳೋಣ.

ಉದಾಹರಣೆ 1 – ದೃಶ್ಯ 1

ಒಂದು ಮಹಾನಗರದಲ್ಲಿ ಪೌರಾಣಿಕ ಯಕ್ಷಗಾನ ಆಖ್ಯಾನ. ನಾಡಿನ ಹೆಸರಾಂತ ಕಲಾವಿದರೆಲ್ಲಾ ಆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಟಿಕೇಟಿನ ಪ್ರದರ್ಶನ. ಪ್ರೇಕ್ಷಕರು ಟಿಕೇಟು ಕೊಟ್ಟು ಪ್ರದರ್ಶನ ನೋಡುವವರು. ಟಿಕೇಟು ಕೊಟ್ಟಿದ್ದೇನೆ ಎನ್ನುವ ಕಾರಣಕ್ಕೆ ಅಲ್ಲಿ ಛಾಯಾಚಿತ್ರವನ್ನು ತೆಗೆಯುವುದಾಗಲೀ, ವೀಡಿಯೋ ಮಾಡುವುದಾಗಲೀ ಮಾಡುವಂತಿಲ್ಲ. ಟಿಕೇಟು ಕೇವಲ ಆ ಪ್ರದರ್ಶನವನ್ನು ನೋಡಿ ಆನಂದಿಸುವುದಕ್ಕಷ್ಟೇ ಸೀಮಿತ. ಒಂದು ವೇಳೆ ಪ್ರದರ್ಶನದ ವ್ಯವಸ್ಥಾಪರು ಅನುಮತಿ ಕೊಟ್ಟಿದ್ದೇ ಹೌದಾದರೆ ಆಗ ಆತ ಅದನ್ನು ಚಿತ್ರೀಕರಿಸಿಕೊಳ್ಳಬಹುದು. ಹಾಗೆಂದು ಮಾರಾಟ ಮಾಡುವಂತಿಲ್ಲ. ಉಚಿತವಾಗಿ ಹಂಚಿಕೊಳ್ಳಬಹುದು ಆ ಪ್ರದರ್ಶನದ ವ್ಯವಸ್ಥಾಪಕರ ಹೆಸರನ್ನು ಉಲ್ಲೇಖಿಸಿ.

ಉದಾಹರಣೆ 1 – ದೃಶ್ಯ 2

ಇಲ್ಲಿ ವ್ಯವಸ್ಥಾಪಕನೇ ಖುದ್ದಾಗಿ ಅದರ ವೀಡಿಯೋ ಚಿತ್ರೀಕರಣದ ಮತ್ತು ಪ್ರಸಾರದ ಹಕ್ಕನ್ನು ಒಂದು ಪ್ರತಿಷ್ಠಿತ ಸಂಸ್ಥೆಗೆ ಕೊಡುತ್ತಾನೆ ಒಂದು ಮೊತ್ತಕ್ಕೆ. ಆಗ ಆ ವ್ಯವಸ್ಥಾಪಕ ಭಾಗವಹಿದ ಕಲಾವಿದರಿಗೆಲ್ಲರಿಗೂ ಪ್ರದರ್ಶನದ ಸಂಭಾವನೆಯ ಜತೆಗೆ ಚಿತ್ರೀಕರಣದ ಹಕ್ಕನ್ನು ಸಂಸ್ಥೆಗೆ ಕೊಡಮಾಡಿದ ಮೊತ್ತದಲ್ಲಿಯೂ ಒಂದು ಅಂಶವನ್ನು ಕಲಾವಿದರಿಗೆಲ್ಲರಿಗೂ ಸಂಭಾವನೆಯಾಗಿ ಕೊಡಬೇಕು. ಹಾಗೂ ಆಗ ಆ ಚಿತ್ರೀಕರಣದ ಹಕ್ಕನ್ನು ಪಡೆದ ಸಂಸ್ಥೆ ಅದನ್ನು ಚಿತ್ರೀಕರಿಸಿ ಆ ಚಿತ್ರೀಕರಣವನ್ನು ಮಾರಾಟ ಮಾಡಬಹುದು. ಒಂದು ವೇಳೆ ವ್ಯವಸ್ಥಾಪಕ ಭಾಗವಹಿಸಿದ ಕಲಾವಿದರುಗಳಿಗೆ ಚಿತ್ರೀಕರಣದ ಹಕ್ಕಿನ ಮೊತ್ತವನ್ನು ಕೊಡದೇ ಇದ್ದ ಸಮಯ ಭಾಗವಹಿಸಿದ ಕಲಾವಿದರು ಚಿತ್ರೀಕರಣದ ಹಕ್ಕನ್ನು ಪಡೆದ ಸಂಸ್ಥೆಯಿಂದ ಹಾಗೂ ಪ್ರದರ್ಶನದ ವ್ಯವಸ್ಥಾಪಕ ಇಬ್ಬರಲ್ಲಿಯೂ ಪರಿಹಾರವನ್ನು ಕೇಳಬಹುದು.

ಉದಾಹರಣೆ 1 – ದೃಶ್ಯ 3

ಪ್ರದರ್ಶನದ ವ್ಯವಸ್ಥಾಪಕನಲ್ಲಿ ಒಬ್ಬ ಕಲಾವಿದ ಒಂದು ಸಂದರ್ಭದ ದೃಶ್ಯವನ್ನು ಮತ್ತು ಅದರ ಹಕ್ಕನ್ನು ತನಗೆ ನೀಡಬೇಕು, ಅದಕ್ಕೆ ಪ್ರತಿಯಾಗಿ ತನಗೆ ಕೊಡಮಾಡಲ್ಪಡುವ ಪ್ರದರ್ಶನದ ಸಂಭಾವನೆಯನ್ನೂ ಹಾಗೂ ಚಿತ್ರೀಕರಣದ ಹಕ್ಕನ್ನು ಕೊಡಮಾಡಿದ್ದರಿಂದ ಲಭಿಸಿದ ಮೊತ್ತದ ಅಂಶದ ಸಂಭಾವನೆಯನ್ನೂ ಕೊಡಬೇಕಾಗಿಲ್ಲ ಎಂದು ಪ್ರಸ್ತಾಪಿಸಿದರೆ ವ್ಯವಸ್ಥಾಪಕನಿಗದು ಒಪ್ಪಿತವಾದರೆ ಆಗ ಆ ಸಂದರ್ಭದ ದೃಶ್ಯವನ್ನು ಚಿತ್ರೀಕರಣದ ಹಕ್ಕನ್ನು ಪಡೆದ ಸಂಸ್ಥೆ ಚಿತ್ರೀಕರಣ ಮಾಡುವಂತಿಲ್ಲ ಹಾಗೂ ಪ್ರಸಾರ ಮಾಡಿ ಹಣ ಸಂಪಾದನೆ ಮಾಡುವಂತಿಲ್ಲ. ಅಂತಹ ಸಂದರ್ಭದಲ್ಲಿ ಚಿತ್ರೀಕರಣದ ಮತ್ತು ಪ್ರಸಾರದ ಹಕ್ಕಿಗಾಗಿ ಕೊಡುವ ಮೊತ್ತದಲ್ಲಿ ಸ್ವಲ್ಪ ಕಡಿತಗೊಳಿಸಿ ಕೊಡಬಹುದು. ಇದು ಪುನಃ ಮೂರೂ ಪಕ್ಷಗಳು ಪರಸ್ಪರ ಒಡಂಬಡಿಕೆಯಿಂದ ಒಪ್ಪಬೇಕಾದ ಸನ್ನಿವೇಶ.

ಈ ಸನ್ನಿವೇಶದಲ್ಲಿ, ಪರಿಣಾಮದಲ್ಲಿ ಏನಾಗುತ್ತದೆ ಎಂದರೆ

ಆ ಒಂದು ದೃಶ್ಯವನ್ನು ಬಿಟ್ಟು ಚಿತ್ರೀಕರಣದ ಮತ್ತು ಪ್ರಸಾರದ ಹಕ್ಕನ್ನು ಪಡೆದಿರುತ್ತದೆ. ಹಾಗೂ ಆ ಒಂದು ದೃಶ್ಯವನ್ನು ಬಿಟ್ಟು ಆ ಸಂಸ್ಥೆ ಆ ಪ್ರದರ್ಶನದ ವೀಡಿಯೋ ಮಾಡಿ ಮಾರಾಟ ಮಾಡಬಹುದು. ಯಾಕೆಂದರೆ ಅದರ ಬೆಲೆಯನ್ನು ಈ ಸಂಸ್ಥೆ ಕೊಡಮಾಡಿದೆ.

ಆ ಒಂದು ದೃಶ್ಯದ ಹಕ್ಕನ್ನು ಪಡೆದ ಕಲಾವಿದ ಆ ಒಂದು ದೃಶ್ಯವನ್ನು ತಾನು ಎಲ್ಲಿ ಬೇಕಾದರೂ ಪ್ರದರ್ಶನ ನೀಡಬಹುದು. ಯಾಕೆಂದರೆ ಅದರ ಬೆಲೆಯನ್ನು ಈ ಕಲಾವಿದ ಕೊಡಮಾಡಿದ್ದಾನೆ. (ಆ ಕಲಾವಿದ ತಾನು ಅಂದಿನ ಪ್ರದರ್ಶನದಲ್ಲಿ ಸಂಭಾವನೆಯನ್ನೂ, ಚಿತ್ರೀಕರಣದ ಮೊತ್ತದ ಅಂಶವನ್ನೂ ಪಡೆದುಕೊಂಡಿಲ್ಲದ ಕಾರಣ)

ಉದಾಹರಣೆ 1 – ದೃಶ್ಯ 4

ಅಂದಿನ ದಿನದ ಪ್ರದರ್ಶನದ ವೀಡಿಯೋ ಚಿತ್ರೀಕರಣದ ಹಕ್ಕನ್ನು ಪಡೆದ ಸಂಸ್ಥೆ ಸ್ವಲ್ಪ ಕಾಲದ ಬಳಿಕ ಅದರ ಹಾಡುಗಳ ಧ್ವನಿಮುದ್ರಿಕೆಯನ್ನು ಹೊರತಂದು ಮಾರಾಟವನ್ನು ಮಾಡುತ್ತದೆ. ಆಗ ಅಂದಿನ ದಿನದ ಪ್ರದರ್ಶನದ ವ್ಯವಸ್ಥಾಪಕರು ಅದಕ್ಕೆ ಆಕ್ಷೇಪವನ್ನು ಮಾಡುತ್ತಾರೆ. ಯಾಕೆಂದರೆ ಇಲ್ಲಿ ಹಕ್ಕುಸ್ವಾಮ್ಯದ ಉಲ್ಲಂಘನೆಯಾಗಿದೆ. ಹೇಗೆಂದರೆ ಆ ವ್ಯವಸ್ಥಾಪಕ ಅಂದಿನ ಪ್ರದರ್ಶನದ ವೀಡಿಯೋ ಹಕ್ಕುಗಳನ್ನು ಮಾತ್ರ ಕೊಟ್ಟಿರುವುದು. ಪ್ರತ್ಯೇಕವಾಗಿ ಆಡಿಯೋವನ್ನು ಮಾತ್ರ ಮಾರಾಟ ಮಾಡುವಂತಿಲ್ಲ. ಈ ಆಡಿಯೋವನ್ನು ಆ ಸಂಸ್ಥೆ ಮಾರಾಟ ಮಾಡಿದ್ದರ ಪರಿಣಾಮವಾಗಿ ಆ ವ್ಯವಸ್ಥಾಪಕನಿಗೆ ಪರಿಹಾರರೂಪವಾಗಿ ಒಂದು ಮೊತ್ತವನ್ನು ನೀಡಬೇಕಾಗುತ್ತದೆ ಮಾತ್ರವಲ್ಲದೇ ನೀಡಿದೆ.

ಇದು ಯಕ್ಷಗಾನ ಪ್ರದರ್ಶನಕ್ಕೆ ಸಂಬಂಧಿಸಿದ ಉದಾಹರಣೆ. ಇನ್ನೊಂದು ಉದಾಹರಣೆಯನ್ನು ನೋಡೋಣ. ಇದು ಭರತನಾಟ್ಯ, ಸಂಗೀತ ಈ ಕ್ಷೇತ್ರಕ್ಕೆ ಸಂಬಂಧಿಸಿದ್ದು

ಉದಾಹರಣೆ 2 – ದೃಶ್ಯ 1

ಒಂದು ಬಹುಪ್ರಸಿದ್ಧ ಪುಣ್ಯಕ್ಷೇತ್ರದಲ್ಲಿ ಭರತನಾಟ್ಯ ಕಾರ್ಯಕ್ರಮ. ಆ ಭರತನಾಟ್ಯ ಕಾರ್ಯಕ್ರಮ ನೀಡುತ್ತಿರುವವರು ಅಂತಾರಾಷ್ಟ್ರೀಯ ಖ್ಯಾತಿಯುಳ್ಳ ಕಲಾವಿದೆ. ಆಕೆ ಅಲ್ಲಿ ಪ್ರದರ್ಶನ ನೀಡುತ್ತಿರಬೇಕಾದರೆ ಸಭೆಯಲ್ಲಿ ಕುಳಿತ ಓರ್ವ ಆ ಪ್ರದರ್ಶನದ ವೀಡಿಯೋ ಮಾಡುತ್ತಿದ್ದಾನೆ. ಅದನ್ನು ಗಮನಿಸಿದ ಕಲಾವಿದೆ ಮೈಕಿನ ಬಳಿ ಬಂದು ಸುಮ್ಮನೇ ನಿಂತುಕೊಳ್ಳುತ್ತಾರೆ. ಬಳಿಕ ಹೇಳುತ್ತಾರೆ ಈ ಪ್ರದರ್ಶನದ ವೀಡಿಯೋ ದಯಮಾಡಿ ಚಿತ್ರೀಕರಿಸದಿರಿ. ನನ್ನ ಎಲ್ಲಾ ಪ್ರದರ್ಶನದ ವೀಡಿಯೋ ಚಿತ್ರೀಕರಣದ ಹಕ್ಕನ್ನು ತಾನು ಒಂದು ಸಂಸ್ಥೆಗೆ ಮಾರಾಟ ಮಾಡಿದ್ದೇನೆ. ಸಭೆಯಲ್ಲಿದ್ದ ಆ ವ್ಯಕ್ತಿ ಮತ್ತೂ ಮತ್ತೂ ಅದ್ನ್ನೇ ಮುಂದುವರೆಸಿದಾಗ ವ್ಯವಸ್ಥಾಪಕರಲ್ಲಿ ಹೇಳಿ ಆತನನ್ನು ಸಭೆಯಿಂದ ಹೊರಕಳುಹಿಸಲಾಗುತ್ತದೆ. ಇಲ್ಲಿ ಪ್ರದರ್ಶನ ಟಿಕೇಟಿನದ್ದೇ ಆದರೂ ಅದರ ಹಕ್ಕು ಆ ಪ್ರದರ್ಶನವನ್ನು ನೋಡಿ ಮನರಂಜನೆ ಪಡೆಯುವುದಕ್ಕಷ್ಟೇ ಸೀಮಿತ. ಇನ್ನು ಉಚಿತ ಪ್ರದರ್ಶನವಾದರೂ ಅಷ್ಟೆ.

ಉದಾಹರಣೆ 2 – ದೃಶ್ಯ 2

ಈ ಕಲಾವಿದೆ ಅಂತಾರಾಷ್ಟ್ರೀಯ ಮಟ್ಟದ ಕಲಾವಿದೆಯಾದ್ದರಿಂದ ಅಲ್ಲಿ ಅವರ ಪ್ರದರ್ಶನದ ಸಂಪೂರ್ಣ ಹಕ್ಕು ಅವರದ್ದೇ ಆಗಿದೆ. ಇದು ಯಕ್ಷಗಾನದಂತೆ ಒಂದು ತಂಡದ ಪ್ರದರ್ಶನವಲ್ಲ. ಒಭ್ಭ ವ್ಯಕ್ತಿಯ ಪ್ರದರ್ಶನ. ಹಾಗೂ ಆ ವ್ಯಕ್ತಿ ತನ್ನೊಂದಿಗೆ ತಂಡವನ್ನು ಕಟ್ಟಿಕೊಂಡು ಹೋಗಬಹುದು. ತಂಡಕ್ಕೆ ಸಂಭಾವನೆಯನ್ನೂ ಆ ವ್ಯಕ್ತಿಯೇ ನೀಡುವುದು. ಹಾಗಿದ್ದ ಕಾರಣ ಆ ವ್ಯಕ್ತಿಯ ಪ್ರದರ್ಶನ ಸಂಪೂರ್ಣ ಆತನದ್ದೇ ಕೃತಿ. ಆದ ಕಾರಣ ಆ ವ್ಯಕ್ತಿ ತಾನು ಜಗತ್ತಿನಲ್ಲಿ ಎಲ್ಲಿ ಪ್ರದರ್ಶನ ಮಾಡಿದರೂ ಅದರ ಚಿತ್ರೀಕರಣ ಮತ್ತು ಪ್ರಸಾರದ ಹಕ್ಕನ್ನು ಒಂದು ಮೊತ್ತಕ್ಕೆ ಒಂದು ಸಂಸ್ಥೆಗೆ ಕೊಡಮಾಡಿದ್ದಾರೆ. ಅಷ್ಟು ಮಾತ್ರವಲ್ಲದೇ ಪ್ರದರ್ಶನ ನೀಡುವ ಯಾವುದೇ ಸ್ಥಳದಲ್ಲಿಯೂ ಪ್ರದರ್ಶನದ ಸಂಭಾವನೆ ಈ ಚಿತ್ರೀಕರಣದ ಹಕ್ಕಿನ ಮೊತ್ತವನ್ನು ಸೇರಿ ಇರುವುದಿಲ್ಲ. ಇದು ಕಾರಣದಿಂದ ಚಿತ್ರೀಕರಣದ ಮತ್ತು ಪ್ರಸಾರದ ಹಕ್ಕು ಕೇವಲ ಆ ಸಂಸ್ಥೆಗೆ ಮಾತ್ರ. ಇತರರು ಮಾಡ ಹೊರಟರೆ ಅದು ಕೃತಿಸ್ವಾಮ್ಯದ ಉಲ್ಲಂಘನೆಯಾಗುತ್ತದೆ.

ಉದಾಹರಣೆ 2 – ದೃಶ್ಯ 3

ಪ್ರದರ್ಶನವನ್ನು ಆಯೋಜಿಸಿದವರಿಗೆ ಈ ಅಂತಾರಾಷ್ಟ್ರೀಯ ಖ್ಯಾತಿಯ ನೃತ್ಯಪಟುವಿನ ನಾಟ್ಯದ ಇಂದಿನ ಪ್ರದರ್ಶನದ ವೀಡಿಯೋ ತಾವೇ ಮಾಡಿ ಅದನ್ನು ಪ್ರಸಾರ ಮಾಡಬೇಕೆಂದಿದ್ದರೆ ಆಗ ಚಿತ್ರೀಕರಣದ ಹಕ್ಕನ್ನು ಪಡೆದಿರುವ ಸಂಸ್ಥೆಗೆ ಒಂದು ಮೊತ್ತವನ್ನು ಪ್ರತ್ಯೇಕವಾಗಿ ನೀಡಬೇಕು. ನಾಟ್ಯ ತಂಡಕ್ಕೆ ಕೊಡುವ ಸಂಭಾವನೆಯನ್ನು ಹೊರತುಪಡಿಸಿ. ಆಗ ಆ ಒಂದು ಪ್ರದರ್ಶನದ ಸಂಪೂರ್ಣ ಚಿತ್ರೀಕರಣದ ಹಾಗೂ ಪ್ರಸಾರ ಮಾಡಿ ಮಾರಾಟ ಮಾಡುವ ಹಕ್ಕು ಪ್ರದರ್ಶನ ಆಯೋಜಕರಿಗೆ ಬರುತ್ತದೆ. ಈ ಸಂದರ್ಭದಲ್ಲಿ ಚಿತ್ರೀಕರಣದ ಮತ್ತು ಪ್ರಸಾರದ ಹಕ್ಕನ್ನು ಪಡೆದಿದ್ದ ಸಂಸ್ಥೆ ಈ ಪ್ರದರ್ಶನವನ್ನು ಚಿತ್ರೀಕರಿಸುವಂತಿಲ್ಲ ಮತ್ತು ಮಾರಾಟ ಮಾಡುವಂತಿಲ್ಲ. ಪ್ರದರ್ಶನದ ಆಯೋಜಕರು ಸಂಸ್ಥೆಗೆ ಪ್ರತ್ಯೇಕ ಹಣವನ್ನು ಕೊಟ್ಟಿದ್ದಾರೆ. ಮಾಡಿದರೆ ಅದು ಕೃತಿಸ್ವಾಮ್ಯದ ಉಲ್ಲಂಘನೆ.

ಉದಾಹರಣೆ 3

ಭಾರತೀಯ ಸರ್ವೋಚ್ಛ ನ್ಯಾಯಾಲಯ ಪ್ರಕರಣ ಸಂಖ್ಯೆ 389 / 2008 ಯಕ್ಷಗಾನ ಕೇಂದ್ರ ಮತ್ತು ಬಿ. ಮಾಲಿನಿ ಮಯ್ಯ ಅವರ ಪ್ರಕರಣದ ಇತ್ಯರ್ಥವನ್ನು ಮಾಡಿ ತೀರ್ಪಿತ್ತಿದೆ.

ಪ್ರಕರಣದ ಹಿನ್ನೆಲೆ: ಡಾ| ಶಿವರಾಮ ಕಾರಂತರು ಯಕ್ಷಗಾನ ಬ್ಯಾಲೆಯನ್ನು ಸೃಜಿಸಿ ಅದರ ಮೂಲಕ 7 ಯಕ್ಷಗಾನ ಪ್ರಸಂಗಗಳನ್ನು ತಮ್ಮ ಬ್ಯಾಲೆಯ ಮೂಲಕ ಆಡಿಸುತ್ತಿದ್ದರು. ಭೀಷ್ಮ ವಿಜಯ, ನಳ ದಮಯಂತಿ, ಕನಕಾಂಗಿ ಕಲ್ಯಾಣ, ಅಭಿಮನ್ಯು, ಬಭ್ರುವಾಹನ ಕಾಳಗ, ಪಂಚನಟಿ ಮತ್ತು ಗಂಗಾ ಚರಿತ್ರೆ ಎಂಬುವುದು ಈ ಪ್ರಸಂಗಳು. ಡಾ| ಶಿವರಾಮ ಕಾರಂತರು ತಮ್ಮ ಆಸ್ತಿಪತ್ರ ವಿಲೇವಾರಿಯಲ್ಲಿ ಈ ಪ್ರಸಂಗಗಳ ಹಕ್ಕನ್ನು ಬಿ. ಮಾಲಿನಿ ಮಯ್ಯರಿಗೆ ನೀಡಿರುತ್ತಾರೆ. ಡಾ| ಶಿವರಾಮ ಕಾರಂತರು ತೀರಿಕೊಂಡ ಬಳಿಕ ಈ ಏಳು ಪ್ರಸಂಗಗಳಲ್ಲಿ ಒಂದನ್ನು ದೆಹಲಿಯಲ್ಲಿ ಒಂದು ತಂಡ ಪ್ರದರ್ಶನ ಮಾಡುತ್ತದೆ. ಅದನ್ನು ಆಕ್ಷೇಪಿಸಿ ಅಥವಾ ಪ್ರಶ್ನಿಸಿ ಬಿ. ಮಾಲಿನಿ ಮಯ್ಯರು ಅದರ ಕೃತಿಸ್ವಾಮ್ಯ ತನ್ನದೆಂದೂ ಹಾಗೂ ಈ ಏಳು ಪ್ರಸಂಗಗಳನ್ನು ತನ್ನ ಪೂರ್ವಾನುಮತಿಯಿಲ್ಲದೇ ಯಾರೊಬ್ಬರೂ ಪ್ರದರ್ಶಿಸಕೂಡದೆಂದೂ ಆಗ್ರಹಿಸುತ್ತಾರೆ.

ಪ್ರಕರಣ ನ್ಯಾಯಾಲಯದ ಮೆಟ್ಟಿಲೇರುತ್ತದೆ. ವಾದ ಪ್ರ್ರತಿವಾದಗಳನ್ನು ಆಲಿಸಿದ ಭಾರತದ ಸರ್ವೋಚ್ಛ ನ್ಯಾಯಾಲಯ ಯಕ್ಷಗಾನ ಕೇಂದ್ರ, ಎಂ. ಜಿ. ಎಂ. ಉಡುಪಿ ಈ ಸಂಸ್ಥೆಯ ಪರವಾಗಿ ತೀರ್ಪನ್ನೀಯುತ್ತದೆ. ಅಂದರೆ ಈ ಏಳು ಪ್ರಸಂಗಗಳನ್ನು ಯಾರು ಬೇಕಾದರೂ ಆಡಬಹುದು. ಅದು ಕೃತಿಸ್ವಾಮ್ಯದ ಉಲ್ಲಂಘನೆಯಾಗುವುದಿಲ್ಲ ಎಂಬ ತೀರ್ಪನ್ನಿತ್ತಿದೆ.

ಯಕ್ಷಗಾನ ಕ್ಷೇತ್ರದ ಸರ್ವರೂ ಯಕ್ಷಗಾನ ಕೇಂದ್ರಕ್ಕೆ ಕೃತಜ್ಞತೆಯನ್ನು ಸಲ್ಲಿಸಬೇಕು. ಅವರು ಅಂದು ಕಾನೂನಾತ್ಮಕ ಹೋರಾಟ ಮಾಡಿದ್ದರ ಫಲವಾಗಿ ಆ ಏಳೂ ಪ್ರಸಂಗಗಳನ್ನು ಇಂದಿಗೂ ನಮಗೆ ಆಡಲೂ, ಆಸ್ವಾದಿಸಲೂ ಸಾಧ್ಯವಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿರುವ ಸರ್ವ ಮಾಹಿತಿ ಅಂದರೆ ಪ್ರಕರಣದ ತೀರ್ಪು ಸಹಿತ ಇಂಟರ್ನೆಟ್ ನಲ್ಲಿ ಲಭ್ಯವಿದೆ. ಅದರ ಲಿಂಕನ್ನು ಈ ಕೆಳಗೆ ಕೊಡಮಾಡಿದ್ದೇನೆ. ಆಸಕ್ತರು ಓದಿಕೊಳ್ಳಬಹುದು.

ಪ್ರಕರಣದ ತೀರ್ಪು

ಈ ಉದಾಹರಣೆಗಳನ್ನು ಸರಿಯಾಗಿ ಅರ್ಥೈಸಿಕೊಂಡಾಗ ಕೃತಿಸ್ವಾಮ್ಯದ ಆಳ, ವಿಸ್ತಾರ ತಿಳಿಯುತ್ತದೆ. ಇನ್ನು ಇದನ್ನು ಯಕ್ಷಗಾನ ಪ್ರದರ್ಶನಕ್ಕಾಗುವಾಗ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದನ್ನು ನೋಡೋಣ.

ಒಂದು ತಾಳಮದ್ದಳೆ ಅಥವಾ ಯಕ್ಷಗಾನ ಪ್ರದರ್ಶನದ ಹಕ್ಕುಸ್ವಾಮ್ಯ ಯಾರದ್ದು? ಕಲಾವಿದರದ್ದೋ? ಸಂಘಟಕರದ್ದೋ? ಪ್ರೇಕ್ಷಕರದ್ದೋ? ಮೇಳದ್ದೋ? ಅಥವಾ ಕಾರ್ಯಕ್ರಮವನ್ನು ಏರ್ಪಡಿಸಿದವರದ್ದೋ?

ಕಲಾವಿದರದ್ದಾಗುವುದಿಲ್ಲ ಯಾಕೆಂದರೆ ಅವರಿಗೆಲ್ಲಾ ಸಂಭಾವನೆಯನ್ನು ಮೇಳ ಅಥವಾ ಸಂಘಟಕರು ಕೊಡುತ್ತಾರೆ. ಇನ್ನು ಸಂಘಟಕ ಅಥವಾ ಮೇಳದ್ದೋ ಅಂದರೆ ಅವರದ್ದಲ್ಲ. ಯಾಕೆಂದರೆ ಮೇಳಕ್ಕೆ ಹಾಗೂ ಸಂಘಟಕರಿಗೆ ಕಾರ್ಯಕ್ರಮ ಏರ್ಪಡಿಸಿದ ಸಂಸ್ಥೆ ಯಾ ವ್ಯಕ್ತಿ ಅದರ ಸಂಪೂರ್ಣ ಖರ್ಚನ್ನು ಕೊಡುತ್ತಾನೆ. ಆದುದರಿಂದ ಆ ಪ್ರದರ್ಶನದ ಸಂಪೂರ್ಣ ಹಕ್ಕುಗಳು ಕಾರ್ಯಕ್ರಮವನ್ನೇರ್ಪಡಿಸಿದ ಸಂಸ್ಥೆ ಯಾ ವ್ಯಕ್ತಿಯದ್ದಾಗಿರುತ್ತದೆ. ಅವರು ಈ ಹಕ್ಕುಸ್ವಾಮ್ಯವನ್ನು ಉಪಯೋಗಿಸಿಕೊಂಡು ಉದಾಹರಣೆ 1 ರಂತೆ ಅದರ ವಿಲೇವಾರಿ ಮಾಡಬಹುದಾಗಿದೆ. ಆದರೆ ಗಮನಿಸಬೇಕಾದ್ದು ಚಿತ್ರೀಕರಿಸಿ ಮಾರಾಟ ಮಾಡುವುದೇ ಆದಲ್ಲಿ ಕಲಾವಿದರು, ಸಂಘಟಕರಿಗೆ ಒಂದು ಮೊತ್ತವನ್ನು ಪ್ರತ್ಯೇಕವಾಗಿ ಕೊಡಬೇಕು. ಹಾಗಲ್ಲದೇ ಚಿತ್ರೀಕರಿಸಿ ಉಚಿತವಾಗಿ ಹಂಚುವುದಾದಲ್ಲಿ ಪ್ರತ್ಯೇಕ ಮೊತ್ತವನ್ನು ಕೊಡುವ ಆವಶ್ಯಕತೆ ಇಲ್ಲ.

ಇನ್ನು ಒಂದು ಯಕ್ಷಗಾನ ಬಯಲಾಟ ನಡೆಯುತ್ತಿದೆ. ಸಾರ್ವಜನಿಕ ಬಯಲಾಟ, ಹರಕೆಯ ಬಯಲಾಟ ಎಂದಿಟ್ಟುಕೊಂಡಾಗ ಯಾರು ಬೇಕಾದರೂ ಮಾರಾಟದ ಉದ್ದೇಶವಿಲ್ಲದೇ ಚಿತ್ರೀಕರಿಸಬಹುದು ಮತ್ತು ಅದನ್ನು ಧಾರಾಳವಾಗಿ ಉಚಿತವಾಗಿ ಹಂಚಬಹುದು. ಆದರೆ ಇಲ್ಲಿಯೂ ಕೂಡ ಯಾರು ಆ ಪದರ್ಶನವನ್ನು ಏರ್ಪಡಿಸಿದ್ದಾರೆಯೋ ಅವರ ಹೆಸರನ್ನು ನಮೂದಿಸತಕ್ಕದ್ದು ಮತ್ತು ಅವರಿಗೆ ಅದರ ಶ್ರೇಯವನ್ನು ಕೊಡತಕ್ಕದ್ದು. ಮಾರಾಟವಂತೂ ಮಾಡಲೇ ಕೂಡದು ಅದು ಭಾರತೀಯ ಕೃತಿಸ್ವಾಮ್ಯದ ಕಾನೂನಿನ ಪ್ರಕಾರ ದಂಡನೀಯ ಅಪರಾಧ. ಇದು ಯಕ್ಷಗಾನ ತಾಳಮದ್ದಳೆಗೂ ಅನ್ವಯಿಸುತ್ತದೆ.

ಇಲ್ಲಿ ಮತ್ತೊಂದು ಗಹನವಾದ ಅಂಶವೆಂದರೆ ಮಾರಾಟ ಮಾಡಿ ಹಣ ಸಂಪಾದನೆಯ ಉದ್ದೇಶದಿಂದಂತೂ ಖಂಡಿತವಾಗಿಯೂ ಯಾವುದೇ ಪ್ರದರ್ಶನದ ಚಿತ್ರೀಕರಣವನ್ನು ಮತ್ತು ಪ್ರಸಾರವನ್ನು ಮಾಡುವುದು ದಂಡನೀಯ ಅಪರಾಧವಾಗುತ್ತದೆ ಸಂಬಂಧಪಟ್ಟವರು ದೂರು ದಾಖಲಿಸಿದರೆ. ಧರ್ಮಾರ್ಥವಾಗಿ ಹಂಚುವಲ್ಲಿಯೂ ಕೂಡ ಒಂದೋ ಚಿತ್ರೀಕರಣದ ಮೊದಲು ಸಂಬಂಧಪಟ್ಟವರ ಅನುಮತಿ ಪಡೆಯಬೇಕು. ಅಲ್ಲವಾದರೆ ಅದನ್ನು ಹಂಚಿಕೊಳ್ಳುವಾಗ ಸಂಬಂಧಪಟ್ಟವರಿಗೆ ಶ್ರೇಯವನ್ನು ನೀಡಬೇಕು. ಇವೆರಡೂ ಮಾಡಿಲ್ಲವಾದರೆ ಧರ್ಮಾರ್ಥವಾಗಿ ಹಂಚುವುದೂ ಕೂಡ ಕಾನೂನಿನ ದೃಷ್ಟಿಯಲ್ಲಿ ಅಪರಾಧವೇ ಹೌದು.

ಇನ್ನು ಹತ್ತು ಹಲವು ವ್ಯಕ್ತಿಗಳು ಯಕ್ಷಗಾನ ಪ್ರದರ್ಶನದ, ತಾಳಮದ್ದಳೆ ಪ್ರದರ್ಶನದ ಛಾಯಾಫಟಗಳನ್ನು ತೆಗೆಯುತ್ತಾರೆ. ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಾರೆ. ಇದು ಕೇವಲ ಯಕ್ಷಗಾನ ಕಲೆಯ ಪ್ರಸಾರ ಮತ್ತು ಪ್ರಚಾರಕ್ಕಾಗಿ ಮಾತ್ರ. ಇವುಗಳನ್ನು ಮಾಡುವುದರಿಂದ ವೈಯಕ್ತಿಕವಾಗಿ ಅವರಿಗೇನೇನೂ ಲಾಭವಿಲ್ಲ. ಈ ಛಾಯಾಪಟಗಳನ್ನು ಪತ್ರಿಕೆಯವರು ಉಪಯೋಗಿಸಿಕೊಳ್ಳುವಾಗ ಸೌಜನ್ಯಕ್ಕಾಗಿಯಾದರೂ ಛಾಯಾಪಟವನ್ನು ಕ್ಲಿಕ್ಕಿಸಿದವರ ಹೆಸರನ್ನು ನಮೂದಿಸಬೇಕು. ಪತ್ರಿಕೋದ್ಯಮದಲ್ಲಿ ಇದು ಮುಖ್ಯವೂ ಕೂಡ. ಸಾರ್ವಜನಿಕವಾಗಿ ಯಾರು ಬೇಕಾದರೂ ಬಳಸಬಹುದೆಂಬ ಉದ್ದೇಶದಿಂದ ಆ ಛಾಯಾಪಟಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು ಹೌದಾದರೂ ಮತ್ತು ಈ ನಿರ್ದಿಷ್ಟ ಪ್ರಕರಣದಲ್ಲಿ ಕೃತಿಸ್ವಾಮ್ಯದ ಉಲ್ಲಂಘನೆಯಾಗುವುದಿಲ್ಲವಾದರೂ ನಾಗರಿಕ ಸಮಾಜದ ಸುಸಂಸ್ಕೃತ ನಾಗರಿಕನಾಗಿ ಮಾತ್ರವಲ್ಲದೇ ಓರ್ವ ಪತ್ರಿಕಾ ಸಂಪಾದಕನಾಗಿಯೂ ಸೌಜನ್ಯಕ್ಕಾಗಿಯಾದರೂ ಛಾಯಾಚಿತ್ರಗ್ರಾಹಕರ ಹೆಸರನ್ನು ನಮೂದಿಸಲೇ ಬೇಕು. ಅದಲ್ಲವಾದರೆ ನಾವು ಸುಸಂಸ್ಕೃತರು ಮತ್ತು ನಾಗರಿಕ ಸಮಾಜದ ನಾಗರಿಕರು ಎನ್ನುವುದಕ್ಕೆ ಅರ್ಥವೇ ಉಳಿಯುವುದಿಲ್ಲ ಎನ್ನುವುದು ಸಾರ್ವಜನಿಕವಾಗಿ ಎಲ್ಲರೂ ಒಪ್ಪಬಹುದಾದ ಅಭಿಪ್ರಾಯ.

ಈ ಲೇಖನಕ್ಕೆ ವಿಶೇಷ ಮಾಹಿತಿಯನ್ನು ಒದಗಿಸಿದ ಶ್ರೀ ವಾಸುದೇವ ರಂಗಾ ಭಟ್ಟರು, LLB ಪದವೀಧರರು ಹಾಗೂ ಖ್ಯಾತ ಯಕ್ಷಗಾನ ಕಲಾವಿದರು
ಇದು ಕೇವಲ ವೀಡಿಯೋ ಆಡಿಯೋಗಳಿಗೆ ಮಾತ್ರ ಸೀಮಿತವಲ್ಲ. ಇದರ ವ್ಯಾಪ್ತಿ ಬಹಳ ವಿಸ್ತಾರವುಳ್ಳದ್ದಾಗಿದೆ. ಎಂದೋ ಓದಿದ ಲೇಖನವನ್ನು ಲೇಖಕರ ಗಮನಕ್ಕೆ ತಾರದೇ ಪ್ರಕಟಿಸುವುದು, (ಲೇಖರ ಹೆಸರನ್ನು ಪ್ರಸ್ತಾಪಿಸುತ್ತಾರೆ) ಒಂದು ಲೇಖನದಲ್ಲಿರುವ ಸ್ಥಳ ನಾಮಗಳನ್ನು. ಹೆಸರುಗಳನ್ನು ಬದಲಿಸಿ ಅದೇ ಲೇಖನವನ್ನು ತಮ್ಮ ಹೆಸರಿನಲ್ಲಿ ಪ್ರಕಟಿಸಿಕೊಳ್ಳುವುದದು ಇವೆಲ್ಲಾ ಕಾನೂನಾತ್ಮಕವಾಗಿ ಹೋರಾಟ ಮಾಡಿ ಸಾಬೀತು ಮಾಡಲು ಆಗದಿದ್ದರೂ ತಪ್ಪು ತಪ್ಪೇ ಅಲ್ಲವೇ? ಓದುಗರಿಗೆ ತಿಳಿದಿರುತ್ತದೆ ಇಂತಹ ಪುಸ್ತಕದಿಂದ ಕದ್ದು ಬರೆದಿರುವುದು ಎಂಬುದಾಗಿ.

ಕೊನೆಯದಾಗಿ ಹೇಳುವುದಾದರೆ, ಪ್ರಾಮಾಣಿಕತನವೆನ್ನುವುದು 84 ಲಕ್ಷ ಕೋಟಿ ಜೀವರಾಶಿಗಳಲ್ಲಿ ಸರ್ವಶ್ರೇಷ್ಠನೆನ್ನಿಸಿದ ಮತ್ತು ವಿಶೇಷ ಚಿಂತನಾ ಸಾಮರ್ಥ್ಯವುಳ್ಳ ಮಾನವನಲ್ಲಿ ಇರಬೇಕು. ನಾವು ಒಬ್ಬರಿಗೆ ಶ್ರೇಯವನ್ನು ಕೊಡುವುದರಲ್ಲಿ ಅಥವಾ ಗುರುತಿಸುವುದರಲ್ಲಿ ಕಳೆದುಕೊಳ್ಳುದೇನಿದೆ? ಇಂಥಹವರ ಛಾಯಾಪಟವನ್ನು ಉಪಯೋಗಿಸಿಕೊಂಡಿದ್ದೇನೆ ಅಥವಾ ಇಂತಹ ವೀಡಿಯೋವನ್ನು ಬಳಸಿಕೊಂಡಿದ್ದೇನೆ, ಇಂತಹ ಲೇಖಕರ ಇಂತಹಾ ಕೃತಿಯಿಂದ ವಿಷಯ ತೆಗೆದುಕೊಂಡಿದ್ದೇನೆಂದು ಆ ವ್ಯಕ್ತಿಗೆ ಅಥವಾ ಸಂಸ್ಥೆಗೆ ಶ್ರೇಯವನ್ನು ಕೊಡುವುದರಿಂದ ಆಗಬಹುದಾದ ನಷ್ಟವೇನು? ತಾನೋರ್ವನೇ ಹೆಸರು ಪಡೆಯಬೇಕು ಅಥವಾ ಒಂದು ಕಾರ್ಯದ ಶ್ರೇಯವೆಲ್ಲವೂ ತಾನೋಬ್ಬನೇ ಅನುಭವಿಸಬೇಕೆನ್ನುವ ಕುತ್ಸಿತವಾದ, ಕೀಳು ಮಟ್ಟದ, ಸಣ್ಣ ಬುದ್ಧಿ ಯಾಕೆ?

ಪ್ರತಿಯೊಬ್ಬರಿಗೂ ಅವರದ್ದಾದ ಹಕ್ಕನ್ನು ಅನುಭವಿಸಗೊಟ್ಟು ನಾವು ನಮ್ಮ ಜವಾಬ್ದಾರಿಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದರೆ ಜೀವನವೂ ಉಜ್ವಲವಾಗುತ್ತದೆ, ಸಮಾಜವೂ ಸುಸಂಸ್ಕೃತವಾಗಿ ಉತ್ತಮ ಸಮಾಜವೆಂದೆನ್ನಿಸಲ್ಪಡುತ್ತದೆ, ಅಷ್ಟು ಮಾತ್ರವಲ್ಲದೇ ಹಲವು ವಿನಾ ಕ್ಲೇಶಗಳಿಗೆ ಆಸ್ಪದವಿಲ್ಲದಂತಾಗುತ್ತದೆ. ಅಲ್ಲವೇ?

(ವಿಶೇಷ ಮಾಹಿತಿಯನ್ನು ಒದಗಿಸಿದ ಶ್ರೀ ವಾಸುದೇವ ರಂಗಾ ಭಟ್ಟರು, LLB ಪದವೀಧರರು ಹಾಗೂ ಖ್ಯಾತ ಯಕ್ಷಗಾನ ಕಲಾವಿದರು ಇವರಿಗೆ ಹೃತ್ಪೂರ್ವಕ ಧನ್ಯವಾದಗಳು)

*********************


ಫೋಟೋ ಕೃಪೆ : ಅ೦ತರ್ಜಾಲದ ಅನಾಮಿಕ ಯಕ್ಷಾಭಿಮಾನಿಗಳು

ಲೇಖನ ಕೃಪೆ : rangasyaksharanga.blogspot


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Sachidananda v NAYAK belpatre (10/6/2015)
Very good article .. When we are all trying to do something for the welfare of mankind and for self realisation we can use any knowledge or article or theme of a writting as source of knowledge is not at all a Krati chawrya Or blackmail of anyone. We have to give respect to the knowledge and the power of the knoledge as we call any water by name Gangaajal




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ