ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಯಕ್ಷಪೂರ್ಣಿಮ ಸಮಾರೋಪದ ಹೈಲೈಟ್‌: ವಿಕಾರವಲ್ಲದ ವಿಕಾಸದಲ್ಲಿ ರಂಗ ಸೊಬಗು

ಲೇಖಕರು :
ನಾ.ಕಾರ೦ತ, ಪೆರಾಜೆ
ಶುಕ್ರವಾರ, ನವ೦ಬರ್ 13 , 2015
ಒಂದು ಕಾಲಘಟ್ಟದಲ್ಲಿ ಬಾಳಿದ ಮಹನೀಯರ ಬದುಕಿನ ಓದು ಆ ಕಾಲದ ಸಾಮಾಜಿಕ ಸ್ಥಿತಿಗೆ ದ್ಯೋತಕವಾಗು ತ್ತದೆ. ಭೂತಕಾಲದ ಮಹತ್ತುಗಳು ಭವಿಷ್ಯತ್ಕಾಲದಲ್ಲಿ ಮಹತ್ವ ಪಡೆದು ಅದು ವರ್ತಮಾನವನ್ನು ಪ್ರತಿನಿಧಿಸುತ್ತದೆ.

ಕಾಸರಗೋಡು ಜಿಲ್ಲೆಯ ಕೀರ್ತಿಶೇಷ ಸಿರಿಬಾಗಿಲು ವೆಂಕಪ್ಪಯ್ಯ ಮತ್ತು ದೇಶಮಂಗಲ ಕೃಷ್ಣ ಕಾರಂತರ ಬದುಕನ್ನು ಓದುವ ಕ್ಷಣವೊಂದು ಸಮನಿಸಿತ್ತು. ಮಧೂರು ಪರಕ್ಕಿಲ ಶ್ರೀ ಮಹಾದೇವ ಸನ್ನಿಧಿಯಲ್ಲಿ ಜರಗಿದ (ಅ.24) ದಿನ ಪೂರ್ತಿ ಕಲಾಪವು ಇವರ ಸಾಧನೆ ಮತ್ತು ವ್ಯಕ್ತಿತ್ವಕ್ಕೆ ಬೆಳಕು ಹಾಯಿಸಿತ್ತು.

ಸಿರಿಬಾಗಿಲು ವೆಂಕಪ್ಪಯ್ಯನವರ ಚಿರಂಜೀವಿ ರಾಮಕೃಷ್ಣ ಮಯ್ಯ. ಶ್ರೀ ಧರ್ಮಸ್ಥಳ ಮೇಳದ ಕಲಾವಿದ. ತಂದೆಯವರ ನೆನಪಿನಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ವನ್ನು ರೂಪಿಸಿದ್ದಾರೆ. ನಾಡಿನಾದ್ಯಂತ ತಾಳಮದ್ದಳೆ, ಪೂರ್ವರಂಗ, ಪ್ರದರ್ಶನಗಳನ್ನು ಹಮ್ಮಿಕೊಂಡಿದ್ದಾರೆ. ವೆಂಕಪ್ಪಯ್ಯನವರ ಭಾವ ದೇಶಮಂಗಲ ಕೃಷ್ಣ ಕಾರಂತರು.

ಪ್ರತಿಷ್ಠಾನವು ಕಾರಂತರ ಜನ್ಮಶತಮಾನೋತ್ಸವವನ್ನು ಅರ್ಥವತ್ತಾಗಿ ಆಚರಿಸಿತ್ತು. ಯಕ್ಷಪೂರ್ಣಿಮ ಶೀರ್ಷಿಕೆಯಡಿ 12 ತಾಳಮದ್ದಳೆಗಳ ಪ್ರಸ್ತುತಿ. 13ನೇ ಕೂಟಕ್ಕೆ ವಿಚಾರಗೋಷ್ಠಿ, ಸಮ್ಮಾನಗಳು ಮತ್ತು ದೊಂದಿಯಾಟಗಳ ಮಿಳಿತ. ಮೆದುಳಿಗೆ ಮೇವನ್ನು ನೀಡುವ ಗಟ್ಟಿ ಹೂರಣ. ಸ್ಥಳೀಯರಲ್ಲದೆ ದೂರದೂರಿನ ಯಕ್ಷಗಾನ ಪ್ರಿಯರನ್ನು ಆಕರ್ಷಿಸಿತ್ತು.

ಹಿರಿಯ ವಿದ್ವಾಂಸ ಡಾ| ಪ್ರಭಾಕರ ಜೋಶಿಯವರು ಗೋಷ್ಠಿಯ ಸಾರಥ್ಯ ವಹಿಸಿದ್ದರು. ಕಳೆದರ್ಧ ಶತಮಾನದಿಂದ ಯಕ್ಷಗಾನಕ್ಕೆ ಪ್ರೋತ್ಸಾಹ, ಬೆಂಬಲವಿಲ್ಲ ಎಂದು ಹೇಳುತ್ತಲೇ ಬಂದಿದ್ದೇವೆ. ಈ ಮನಃಸ್ಥಿತಿಯನ್ನು ಒತ್ತಾಯಪೂರ್ವಕವಾಗಿ ಬಿಡಬೇಕು. ಯಕ್ಷಗಾನದ ಸರ್ವಾಂಗೀಣ ಸೌಂದರ್ಯದ ಹೊಳಪಿಗೆ ಇನ್ನಷ್ಟು ಅಕಾಡೆಮಿಕ್‌ ಚಿಂತನೆಗಳಾಗಬೇಕು. ವಾಸ್ತವಿಕ ರಂಗಭೂಮಿಯನ್ನು ರಮ್ಯದ್ಭುತ ಕಲ್ಪನೆಗೆ ಜೋಡಿಸುವ ಕೆಲಸವಾಗಬೇಕು. ರಂಜನೆಯು ಉಪ್ಪಿನಕಾಯಿಯಂತಿದ್ದರೆ ಕಲಾ ಸೊಗಸು. ವಿಕಾರವಲ್ಲದ ವಿಕಾಸ ಸ್ವೀಕಾರಾರ್ಹ ಎಂದರು. ಅರ್ಥಧಾರಿಯಾಗಿ ದೇಶಮಂಗಲ ಕಾರಂತರನ್ನು ಡಾ| ಜೋಷಿ ನೆನಪಿಸಿಕೊಂಡರು.

ಆಧುನಿಕ ಯಕ್ಷಗಾನದಲ್ಲಿ ಪ್ರಸಂಗ ಸಾಹಿತ್ಯದ ಮಹತ್ವದ ಕುರಿತು ಸಾಹಿತಿ ಶ್ರೀಧರ ಡಿ. ಎಸ್‌., ತಾಳಮದ್ದಳೆಯ ಬೆಳವಣಿಗೆಯಲ್ಲಿ ಪ್ರೇಕ್ಷಕರ ಹೊಣೆಗಾರಿಕೆ ವಿಚಾರವನ್ನು ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್‌ ಪ್ರಸ್ತುತಪಡಿಸಿದರು. ತಾಳ ಮದ್ದಳೆ ಪ್ರಸ್ತುತಿ, ಸಂಘಟಕರ ಧೋರಣೆಗಳು, ಪ್ರೇಕ್ಷಕನ ಹೊಣೆಗಾರಿಕೆ, ಕಲಾ ಆಸ್ವಾದನೆ... ಮೊದಲಾದ ವಿಚಾರಗಳಲ್ಲಿ ಪ್ರತ್ಯೇಕ ಗೋಷ್ಠಿ ಮಾಡುವಷ್ಟು ಒಳಸುರಿಗಳಿದ್ದುವು. ತಾಳ ಮದ್ದಳೆಗೆ 200ರಿಂದ 300 ಮಂದಿ ಪ್ರೇಕ್ಷಕರು ಸಾಕು. ಸಂಖ್ಯೆ ಹೆಚ್ಚಾದರೆ ಆಸ್ವಾದನೆ ಕಷ್ಟ - ರಾಧಾಕೃಷ್ಣ ಕಲ್ಚಾರ್‌ ಅವರ ಅಭಿಪ್ರಾಯ ಮನನೀಯ. ಶ್ರೀಧರ್‌ ಡಿ.ಎಸ್‌. ಹೇಳುತ್ತಾರೆ- ಯಕ್ಷಗಾನ ಕವಿಗಳನ್ನು ಗುರುತಿಸುವ ಹೊಸ ಪರಂಪರೆ ರೂಪುಗೊಳ್ಳಬೇಕು.

ವಿಚಾರಗೋಷ್ಠಿ, ಕಮ್ಮಟಗಳು ಬಹುಕಾಲದಿಂದ ನಡೆಯುತ್ತಿವೆ. ಸೀಮಿತವಾಗಿ ಪ್ರೇಕ್ಷಕರೂ ಭಾಗವಹಿಸುತ್ತಾರೆ. ಅನ್ಯಾನ್ಯ ಕಾರಣಗಳಿಂದ ಕಲಾವಿದರ ಉಪಸ್ಥಿತಿ ಅಷ್ಟಕ್ಕಷ್ಟೇ. ಕಲಾವಿದರನ್ನು ಹೊರತುಪಡಿಸಿದ ಮಾತುಕತೆಗಳು ರಂಗ ವನ್ನು ತಲುಪಲಾರವು. ಹಾಗಾಗಿ ಗೋಷ್ಠಿ ಅಂದಾಗ ಬಹು ತೇಕರು ಹಗುರವಾಗಿ ಮಾತನಾಡುವುದನ್ನು ಕೇಳಿದ್ದೇನೆ. ಈ ಹಿನ್ನೆಲೆಯಲ್ಲಿ ಡಾ| ಜೋಷಿಯವರೆಂದಂತೆ ರಂಗಕ್ಕೆ ಅಕಾಡೆ ಮಿಕ್‌ ಚಿಂತನೆಗಳ ಸ್ಪರ್ಶ ಕೊಡುವ ಕೆಲಸವಾಗಬೇಕು. ಮಾಮೂಲಿ ಕಲಾಪಕ್ಕಿಂತ ಭಿನ್ನ ವ್ಯವಸ್ಥೆ ಬೇಕಾಗಬಹುದೇನೋ.

ಭಾಗವತ ಹಂಸ ಪುತ್ತಿಗೆ ರಘುರಾಮ ಹೊಳ್ಳರ ಸಾರಥ್ಯ ದಲ್ಲಿ ಕೃಷ್ಣ ಸಂಧಾನ ತಾಳಮದ್ದಳೆ. ಕಲೆ, ಕಲಾವಿದರಿಗೆ ಆಶ್ರಯ ನೀಡಿದ ಸರ್ವಾದರಣೀಯರಾದ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರಿಗೆ ದೇಶಮಂಗಲ ಕಾರಂತರ ನೆನಪಿನಲ್ಲಿ ಯಕ್ಷಪೂರ್ಣಿಮ ಪ್ರಶಸ್ತಿ ಪ್ರದಾನ. ಹಿರಿಯ ಕಲಾವಿದ ಪೆರುವಡಿ ನಾರಾಯಣ ಭಟ್ಟರಿಗೆ ಕಾರಂತರ ಸ್ಮತಿ ಗೌರವ. ಜಾಲತಾಣಗಳ ಮೂಲಕ ಯಕ್ಷಗಾನದ ಬೆರಗನ್ನು ಜಗತ್ತಿಗೆ ಬಿತ್ತರಿಸಿದ ಸಾಧಕ ರಾಧಾಕೃಷ್ಣ ಕೊಂಗೋಟ್‌ ಮತ್ತು ಮದೆಗಾರ ಗೋಪಾಲಕೃಷ್ಣ ನಾವಡ ಮಧೂರು ಇವರಿಗೆ ಸಮ್ಮಾನ. ಜಗಜಟ್ಟಿ ಬಾಚ-ಸಿರಿಬಾಗಿಲು ವೆಂಕಪ್ಪಯ್ಯರ ಮೂಲಕಥೆಗೆ ಮಧೂರು ವೆಂಕಟಕೃಷ್ಣರು ಪ್ರಸಂಗ ರಚನೆ ಮಾಡಿದ ಕೃತಿ ಅನಾವರಣ. ಹೀಗೆ ಸಮೃದ್ಧ, ಅರ್ಥವತ್ತಾದ ವೈಚಾರಿಕ ಸಂಪನ್ನ.

ಅಪರೂಪವಾದ ದೊಂದಿ ಬೆಳಕಿನ ಪ್ರದರ್ಶನ. ಪ್ರಸಂಗ: ಕದಂಬ ಕೌಶಿಕೆ. ಕುತೂಹಲಿ ಅಭಿಮಾನಿಗಳಿಗೆ ಖುಷಿ! ಭಾಗವತ ಸಿರಿಬಾಗಲು ರಾಮಕೃಷ್ಣ ಮಯ್ಯರ ಕನಸು. ಹಿರಿಯರನ್ನು ನೆನಪಿಸುವ, ಅವರ ಸಾಧನೆಯನ್ನು ಸಾರಸ್ವತ ಲೋಕಕ್ಕೆ ಪರಿಚಯಿಸುವ ದೊಡ್ಡ ಹೆಜ್ಜೆ ಮೂಡಿಸಿದ್ದಾರೆ. ತನ್ನ ವೃತ್ತಿ ಗಳಿಕೆಯಲ್ಲಿ ಬಹುಪಾಲು ವ್ಯಯಿಸಿದ್ದಾರೆ. ಇವರು ಪ್ರಚಾರಕ್ಕಾಗಿ ತೆರೆದುಕೊಳ್ಳದ ಭಾಗವತ. ತನ್ನ ಮಿತಿಯ ವ್ಯಾಪ್ತಿಯಲ್ಲಿ ಕಾಸರಗೋಡು ನೆಲದಲ್ಲಿ ಕಲೆಯ ಮೂಲಕ ಕನ್ನಡವನ್ನು ಉಳಿಸುವ, ಬೆಳೆಸುವ ಕೈಂಕರ್ಯ ಮಾಡುತ್ತಿದ್ದಾರೆ. ಓರ್ವ ಯಕ್ಷಗಾನದ ಕಲಾವಿದನ ಪ್ರತಿಭೆಯೊಂದಿಗೆ ಸಾಮಾಜಿಕ ಬದ್ಧತೆಯೂ ಮಿಳಿತವಾದರೆ ಕಲೆಯೊಂದಿಗೆ, ಕಲಾವಿದರೂ ಮಾನ್ಯತೆ ಪಡೆಯುತ್ತಾರೆ ಎನ್ನುವುದಕ್ಕೆ ಮಯ್ಯರು ದೃಷ್ಟಾಂತ.


*********************
(ಚಿತ್ರಗಳು : ಉದಯ ಕಂಬಾರು, ನೀರ್ಚಾಲು)


ಕೃಪೆ : udayavani


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
     ತಾಜಾ ಲೇಖನಗಳು
   
  ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
  ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
  ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
   
  © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ