ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಅವಿಸ್ಮರಣೀಯ ಯಕ್ಷೋತ್ಸವ ರಜತ ಸಂಭ್ರಮ

ಲೇಖಕರು : ಗಂಗಾಧರ ಮಟ್ಟಿ
ಶನಿವಾರ, ನವ೦ಬರ್ 28 , 2015
ನಾಡಿನಾದ್ಯಂತ ಕಲಾರಸಿಕರನ್ನು ಸೆಳೆಯುತ್ತ ಬಂದಿರುವ ಸಂಪಾಜೆ ಯಕ್ಷೋತ್ಸವಕ್ಕೆ ಈ ಬಾರಿ ರಜತ ಸಂಭ್ರಮ. ಅದಕ್ಕಾಗಿಯೇ ಈ ಬಾರಿ ಹತ್ತು ಹಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಸರಣಿ ತಾಳಮದ್ದಲೆ ವರ್ಷದುದ್ದಕ್ಕೂ ಅಲ್ಲಲ್ಲಿ ನಡೆದು ರಜತೋತ್ಸವ ಸಂಭ್ರಮಕ್ಕೆ ನಾಂದಿ ಹಾಡುತ್ತಾ ಬಂತು. ರಜತ ಸಂಭ್ರಮ ಕ್ಕಾಗಿ ಮೂರು ರಂಗಸ್ಥಳದಲ್ಲಿ ಶ್ರೀದೇವಿ ಮಹಾತ್ಮೆಯನ್ನು ಆಯೋಜಿಸಿದ್ದರೆ ವಾರದ ಅನಂತರ ಯಕ್ಷೋತ್ಸವವನ್ನು ಇನ್ನಷ್ಟು ವೈಭವಯುತವಾಗಿ ನಡೆಸಲಾಯಿತು. ಪ್ರತಿಷ್ಠಾನದ ವತಿಯಿಂದ 367 ಮಂದಿಗೆ ಆರ್ಥಿಕ ನೆರವು ನೀಡಲಾಯಿತು.

ಕಲಾಪೋಷಕ ಡಾ| ಕೀಲಾರು ಗೋಪಾಲಕೃಷ್ಣಯ್ಯ ಅವರು ಆರಂಭಿಸಿದ ಯಕ್ಷೋತ್ಸವವನ್ನು ಅವರ ಕಾಲಾನಂತರ ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಆಶ್ರಯದಲ್ಲಿ ಅವರ ಅಳಿಯ, ಕಲಾವಿದರ ಕಲ್ಪವೃಕ್ಷ ಟಿ. ಶ್ಯಾಮ ಭಟ್‌ ನೇತೃತ್ವದಲ್ಲಿ ಅದ್ದೂರಿ ಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.

ಮೂರಾಟ ಪ್ರದರ್ಶನ ಮೂರು ರಂಗಸ್ಥಳಗಳಲ್ಲಿ ಏಕಕಾಲಕ್ಕೆ ಶ್ರೀದೇವಿ ಮಹಾತ್ಮೆ ಪ್ರದರ್ಶನ ಯಕ್ಷಲೋಕಕ್ಕೆ ಹೊಸತು. ಹಿಂದೆಂದೂ ಕಂಡರಿಯದಂತೆ ಯಕ್ಷಲೋಕ ವಿಜೃಂಭಿಸಿತು. 20 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಈ ವೈಭವಕ್ಕೆ ಸಾಕ್ಷಿಯಾದರು.

ಚಂಡಮುಂಡ, ಮಧುಕೈಟಭ, ಮಹಿಷ, ಶುಂಭ-ನಿಶುಂಭರ ಅಬ್ಬರದ ಪ್ರವೇಶ ಬಹುದೂರದಿಂದಲೇ ಆರಂಭವಾಗಿ ವೇದಿಕೆ ಏರುವವರೆಗೆ ಬೆರಗು ಮೂಡಿಸಿತು. ಪ್ರೇಕ್ಷಕರು ಕುತೂಹಲ ಮತ್ತು ವಿಸ್ಮಯದಿಂದ ವೀಕ್ಷಿಸಿದರು. 12 ಮಂದಿ ಭಾಗವತರು ಮತ್ತು ಅಷ್ಟೇ ಮಂದಿ ಚೆಂಡೆ ಮತ್ತು ಮದ್ದಲೆವಾದಕರು ಪಾತ್ರಧಾರಿಗಳನ್ನು ಹುರಿದುಂಬಿಸಿದರು.

ಇನ್ನು ಅತಿರಥ ಮಹಾರಥರಿಂದ ಹಿಡಿದು ವೃತ್ತಿಪರ, ಹವ್ಯಾಸಿ, ನಿವೃತ್ತ ಹಾಗೂ ಯುವ ಕಲಾವಿದರು ಈ ಪ್ರದರ್ಶನಗಳನ್ನು ಕಟ್ಟಿಕೊಟ್ಟರು.

ಮತ್ತೆ ದಾಖಲೆಯ ಸುತ್ತು ಕುಣಿತ ಕಳೆದ ಬಾರಿಯ ಯಕ್ಷೋತ್ಸವದಲ್ಲಿ ಧಿಗಿಣ ದಾಖಲೆ ಮಾಡಿದ ದಿವಾಕರ ರೈ ಸಂಪಾಜೆ ಮತ್ತು ಚಂದ್ರಶೇಖರ ಧರ್ಮಸ್ಥಳ ಅವರು ಸುತ್ತು ಕುಣಿತದ ಮೂಲಕ ಈ ಬಾರಿಯೂ ದಾಖಲೆ ಮಾಡಲು ಹೊರಟರು. ಕಳೆದ ಬಾರಿ ಒಂದೇ ರಂಗಸ್ಥಳದಲ್ಲಿ ಧಿಗಿಣ ಹಾಕಿದ್ದರೆ ಈ ಬಾರಿ ಬೇರೆ ಬೇರೆ ವೇದಿಕೆಗಳಲ್ಲಿ ಇವರು ಸುತ್ತು ಕುಣಿತ ಹಾಕತೊಡಗಿದರು. ಕಳೆದ ಬಾರಿ 20 ನಿಮಿಷಗಳ‌ ಸುತ್ತು ಕುಣಿತ ನಡೆದಿದ್ದರೆ ಈ ಬಾರಿ ಅದು 25 ನಿಮಿಷಗಳಿಗೆ ವಿಸ್ತರಿಸಿತು, ದಾಖಲೆ ಸೇರಿತು.

ಆತಂಕ ಕಳೆಯಿತು ರಜತ ಸಂಭ್ರಮವನ್ನು ವಿಶಿಷ್ಟವಾಗಿ ಆಚರಿ ಸಲು ಸಿದ್ಧತೆ ನಡೆದಿದ್ದರೂ ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಹೊರಡಿಸಲಾಗಿತ್ತು. ಇದು ಯಕ್ಷೊàತ್ಸವಕ್ಕೆ ಅಡ್ಡಿಯಾಗಬಹುದೇ ಎಂಬ ಆತಂಕದ ನಡುವೆ ವಿಶೇಷ ಅನುಮತಿ ದೊರೆಯಿತು. ಪ್ರೇಕ್ಷಕರ ಸಂಖ್ಯೆ ಕುಗ್ಗಬಹುದೆಂಬ ಕಳವಳವೂ ಹುಸಿಯಾಯಿತು. ಸಭಾ ಕಾರ್ಯಕ್ರಮ ಸೇರಿ ಒಟ್ಟು 27 ತಾಸು ಕಾಲ ನಡೆದುದು ಯಕ್ಷೋತ್ಸವದ ಇನ್ನೊಂದು ದಾಖಲೆ.

ಯಕ್ಷೋತ್ಸವದಲ್ಲಿ ಅಷ್ಟಾಕ್ಷರಿ ಮಹಿಮೆ, ರತ್ನಾವತಿ ಕಲ್ಯಾಣ, ಗಂಧರ್ವ ಕನ್ಯೆ, ಶ್ರೀದೇವಿ ಮೂಕಾಂಬಿಕೆ ಮತ್ತು ಮಾಯಾ ಮಾರುತೇಯ ಎಂಬ ಐದು ಪ್ರಸಂಗಗಳನ್ನು ಜೋಡಿಸಿಕೊಳ್ಳ ಲಾಗಿತ್ತು. ಒಟ್ಟು 150 ಮಂದಿ ಕಲಾವಿದರು ರಂಗದಲ್ಲಿ ಮಿಂಚಿದರು.

ಮೂರು ರಂಗಸ್ಥಳಗಳಲ್ಲಿ ನಡೆದ ಶ್ರೀದೇವಿ ಮಹಾತ್ಮೆಯನ್ನು ಪೇಜಾವರ ಶ್ರೀಗಳವರು ಉದ್ಘಾಟಿಸಿದರೆ, ಡಾ| ಕೀಲಾರು ಸಂಸ್ಮರಣೆ ದಿನ ಯಕ್ಷೋತ್ಸವ ರಜತ ಸಂಭ್ರಮವನ್ನು ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು. ಎಡನೀರು ಶ್ರೀ ಮತ್ತು ಸುಬ್ರಹ್ಮಣ್ಯ ಶ್ರೀಗಳವರು ಆಶೀರ್ವಚನ ನೀಡಿದರು.

ಡಾ| ಕೀಲಾರು ಗೋಪಾಲಕೃಷ್ಣಯ್ಯ ಸಂಸ್ಮರಣ ಗ್ರಂಥ ಸಮನ್ವಯ, 25ರ ಸವಿ ನೆನಪಿನ ರಜತ ಸಂಭ್ರಮ ಗ್ರಂಥ ಬಿಡುಗಡೆ ಗೊಳಿಸಲಾಯಿತು. ಇದಲ್ಲದೆ ವೇ|ಮೂ| ಪರಕ್ಕಜೆ ಗಣಪತಿ ಭಟ್ಟರ ಅಭಿನಂದನ ಗ್ರಂಥ, ಕೆ. ಗೋವಿಂದ ಭಟ್ಟ ಅಭಿನಂದನ ಗ್ರಂಥ, ವಿ| ಹಿರಣ್ಯ ವೆಂಕಟೇಶ್ವರ ಭಟ್ಟ ವಿರಚಿತ ಋಷಿ ಪರಂಪರೆ ಗ್ರಂಥ ಮತ್ತು ರವಿಶಂಕರ ವಳಕುಂಜ ವಿರಚಿತ ಯಕ್ಷಪಾತ್ರ ದೀಪಿಕಾ ಲೋಕಾರ್ಪಣೆಗೊಂಡವು. ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ 12 ಮಂದಿ ಸಾಧಕರಿಗೆ ರಜತ ಸಂಭ್ರಮ ಪ್ರಶಸ್ತಿ ಪ್ರದಾನ, 25 ವರ್ಷಗಳ ಯಕ್ಷೋತ್ಸವದಲ್ಲಿ ಭಾಗವಹಿಸಿದ ಕಲಾವಿದರಿಗೆ ಸಮ್ಮಾನ, ಕೊಲ್ಲೂರು ಕ್ಷೇತ್ರದ ಡಾ| ನರಸಿಂಹ ಅಡಿಗರಿಗೆ ಸಮ್ಮಾನ, ಹಾಸ್ಯ ಕಲಾವಿದ ಸೀತಾರಾಮ ಕುಮಾರ್‌ ಅವರಿಗೆ ಸಮ್ಮಾನ, ಅಗರಿ ರಘುರಾಮ ಭಾಗವತರಿಗೆ ಶೇಣಿ ಪ್ರಶಸ್ತಿ ಪ್ರದಾನ ಇವೆಲ್ಲ ರಜತ ಸಂಭ್ರಮಕ್ಕೆ ಮೆರುಗು ನೀಡಿದವು.

*********************

ಕೃಪೆ : udayavani


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ