ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಅರವತ್ತರ ತಿರುವಿನಲ್ಲಿ ಯಕ್ಷ ಯಾಜಿ

ಲೇಖಕರು :
ರವೀಂದ್ರ ಭಟ್ಟ
ಮ೦ಗಳವಾರ, ಡಿಸೆ೦ಬರ್ 8 , 2015

ಹೌದು, ಬಳ್ಕೂರು ಕೃಷ್ಣ ಯಾಜಿ ಅವರಿಗೆ 60 ವರ್ಷ ಆಯ್ತು. ವಯಸ್ಸಾಗಿದ್ದಕ್ಕೆ ಯಾಜಿ ಅವರಿಗೆ ಬೇಜಾರೇನಿಲ್ಲ. ಯಕ್ಷಗಾನ ರಂಗದಲ್ಲಿ 40 ವರ್ಷ ದುಡಿದ ಅವರು ಈ ರಂಗಕ್ಕೆ ಸಾಕಷ್ಟು ಕೊಟ್ಟಿದ್ದಾರೆ. ಅದಕ್ಕೂ ಹೆಚ್ಚು ಪಡೆದುಕೊಂಡಿದ್ದಾರೆ. ಅವರು ಈಗ ಮಾಗಿದ ಯಾಜಿ. ವಯಸ್ಸಿಗೆ ಸಹಜವಾದ ಗಾಂಭೀರ್ಯ ಅವರಲ್ಲಿ ತುಂಬಿದೆ. ಮಾತು ಘನವಾಗಿದೆ. ಅಭಿನಯ ಸೊಗಸಾಗಿದೆ. ಹೆಜ್ಜೆ ಬದ್ಧವಾಗಿದೆ.

ಯಾಜಿ ಯಕ್ಷಗಾನ ರಂಗಕ್ಕೆ ಬಂದು ಗತಿಸಿದ 40 ವರ್ಷಗಳಲ್ಲಿ ರಂಗದಲ್ಲಿ ಏನೆಲ್ಲ ನಡೆದು ಹೋಗಿದೆ. ಚೆಂಡೆಮದ್ದಳೆಗಳ ಅಬ್ಬರಕ್ಕೆ ಲೆಕ್ಕವೇ ಇಲ್ಲ. ಕಾಲ ಕಾಲಕ್ಕೆ ಬದಲಾಗುತ್ತಲೇ ಬಂದ ಯಕ್ಷಗಾನ ಯಾವಾಗಲೂ ಸಕಾಲಿಕವೆ. ಹೀಗಿದ್ದರೂ ಯಾಜಿಗೆ 60 ಎನ್ನುವುದು ಕೇವಲ ಸಂಭ್ರಮಕ್ಕೆ ಕಾರಣವಾಗಿಲ್ಲ. ಯಕ್ಷಗಾನ ಪ್ರೇಮಿಗಳಲ್ಲಿ ಆತಂಕಕ್ಕೂ ಕಾರಣವಾಗಿದೆ. ಯಾಜಿಗೆ 60 ವರ್ಷ ಆಯ್ತು. ಈಗಾಗಲೇ ವೃತ್ತಿ ಮೇಳವನ್ನು ಬಿಟ್ಟು 3 ವರ್ಷವಾಗಿದೆ. ಇನ್ನು ಅವರು ವೇಷ ಮಾಡಲಾರರು ಎಂಬ ಕಾರಣಕ್ಕೆ ಅಭಿಮಾನಿಗಳಿಗೆ ಆತಂಕವಲ್ಲ. ಕೃಷ್ಣ ಯಾಜಿ ಅವರು ಇನ್ನೂ ಹತ್ತಿಪ್ಪತ್ತು ವರ್ಷ ಈ ರಂಗದಲ್ಲಿ ಇರುತ್ತಾರೆ. ಆದರೆ ಬಡಗು ಯಕ್ಷಗಾನದ ಗತಿಯೇ ಬದಲಾಗಿದ್ದು ಅಭಿಮಾನಿಗಳ ಆತಂಕಕ್ಕೆ ಕಾರಣ.

ಬದಲಾಗಿದೆ ಬಡಗು ತಿಟ್ಟಿನ ಯಕ್ಷಗಾನ

ಬಡಗು ಯಕ್ಷಗಾನ ಮೊದಲು ಪ್ರಸಂಗ ಅಥವಾ ಕಥಾ ಕೇಂದ್ರಿತವಾಗಿತ್ತು. ನಂತರ ಅದು ನಟ ಕೇಂದ್ರಿತವಾಯಿತು. ಕೆರೆಮನೆ ಶಿವರಾಮ ಹೆಗಡೆ, ಶಂಭು ಹೆಗಡೆ, ಮಹಾಬಲ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಗೋಡೆ ನಾರಾಯಣ ಹೆಗಡೆ, ಕುಮಟಾ ಗೋವಿಂದ ನಾಯ್ಕ ಮುಂತಾದವರು ಸ್ಟಾರ್‌ ಕಲಾವಿದರಾಗಿ ಒಂದಷ್ಟು ದಿನ ರಂಗವನ್ನು ಆಳಿದರು. ನಂತರ ಯಕ್ಷಗಾನ ಭಾಗವತ ಕೇಂದ್ರಿತವಾಯಿತು. ಉಪ್ಪೂರು ನಾರಾಯಣ ಭಾಗವತ, ಕಾಳಿಂಗ ನಾವಡ, ಸುಬ್ರಹ್ಮಣ್ಯ ಧಾರೇಶ್ವರ ಮುಂತಾದ ಭಾಗವತರು ತಾರೆಯರಾಗಿದ್ದರು. ಈಗ ಬಡಗು ತಿಟ್ಟಿನ ಯಕ್ಷಗಾನ ನೃತ್ಯ ಕೇಂದ್ರಿತವಾಗಿದೆ. ಆಕರ್ಷಕವಾಗಿ ಕುಣಿಯಬಲ್ಲವರು ರಾತ್ರಿ ಬೆಳಗಾಗುವುದರೊಳಗೆ ತಾರೆಗಳಾಗುತ್ತಿದ್ದಾರೆ. ಕುಣಿತಕ್ಕೆ ಔಚಿತ್ಯ ಇದೆಯೋ ಇಲ್ಲವೋ ಎಂದು ಕೇಳುವ ಹಾಗಿಲ್ಲ. ಬೆವರು ಇಳಿಯುವ ಹಾಗೆ ಕುಣಿಯಬೇಕು ಮತ್ತು ಕುಣಿಯುತ್ತಲೇ ಇರಬೇಕು. ಅದೇ ಇಂದಿನ ಸ್ಟೈಲ್.

ಪರಿಸ್ಥಿತಿ ಹೀಗಿರುವಾಗ ಕೃಷ್ಣ ಯಾಜಿ ಅವರಿಗೆ 60 ವರ್ಷ ವಯಸ್ಸಾಗಿದ್ದು ಹೊಸ ಕತೆಯನ್ನು ಹೇಳುತ್ತದೆ. ಈಗ ಒಂದು ದಶಕದ ಹಿಂದಿನವರೆಗೂ ಯಕ್ಷಗಾನ ನಾಯಕ–ಪ್ರತಿ ನಾಯಕನನ್ನು ಬಯಸುತ್ತಿತ್ತು. ಯಾವುದೇ ಪ್ರಸಂಗವಾದರೂ ಸಮರ್ಥ ನಾಯಕ ಮತ್ತು ಸಮರ್ಥ ಪ್ರತಿ ನಾಯಕ ಬೇಕಾಗಿತ್ತು. ‘ಕೃಷ್ಣ ಸಂಧಾನ’ ಪ್ರಸಂಗದಲ್ಲಿ ಯಾರು ಕೃಷ್ಣ ಅಥವಾ ಯಾರು ಕೌರವ ಎನ್ನುವುದಷ್ಟೇ ಮುಖ್ಯವಾಗುತ್ತಿರಲಿಲ್ಲ. ಕೃಷ್ಣ, ಕೌರವ ಇಬ್ಬರೂ ಮುಖ್ಯವಾಗಿದ್ದರು. ಈ ಎರಡೂ ಪಾತ್ರಗಳಲ್ಲಿ ಆಗಿನ ಕಾಲದ ಪ್ರಸಿದ್ಧರೇ ಇರುತ್ತಿದ್ದರು. ಹಾಗಿದ್ದರೆ ಮಾತ್ರ ಜನರು ಬರುತ್ತಿದ್ದರು. ಈಗ ಕಾಲ ಬದಲಾಗಿದೆ. ಕೃಷ್ಣ ಅಥವಾ ಕೌರವ ಈ ಎರಡು ಪಾತ್ರಗಳಲ್ಲಿ ಯಾವುದಾದರೂ ಒಂದು ಪಾತ್ರಕ್ಕೆ ಸಮರ್ಥ ಕಲಾವಿದ ಸಿಕ್ಕರೆ ಸಾಕು ಎನ್ನುವಂತಾಗಿದೆ.

ಕೊಂಡದಕುಳಿ - ಯಾಜಿ ಸೂಪರ್‌ ಸ್ಟಾರ್‌ ಜೋಡಿಯಾಗಿತ್ತು

ಇಲ್ಲಿ ಇನ್ನೊಂದು ಮಾತನ್ನು ಹೇಳಬೇಕು. ನಾಯಕ–ಪ್ರತಿ ನಾಯಕನ ಕಾಲ ಇದ್ದಾಗ ಕೊಂಡದಕುಳಿ ರಾಮಚಂದ್ರ ಹೆಗಡೆ ಮತ್ತು ಕೃಷ್ಣ ಯಾಜಿ ಜೋಡಿ ಪ್ರಸಿದ್ಧವಾಗಿತ್ತು. 90ರ ದಶಕದಲ್ಲಿ ಈ ಜೋಡಿಯೇ ಸೂಪರ್‌ ಸ್ಟಾರ್‌ ಜೋಡಿಯಾಗಿತ್ತು. ಯಾವುದೋ ವಿಷ ಗಳಿಗೆಯಲ್ಲಿ ಈ ಜೋಡಿ ಕಳಚಿತು. ಕಳೆದ 12 ವರ್ಷಗಳಿಂದ ಈ ಇಬ್ಬರೂ ಒಟ್ಟಾಗಿ ಅಭಿನಯಿಸಿರಲಿಲ್ಲ. ಆದರೆ ಈಗ ಅವರು ಮತ್ತೆ ಒಂದಾಗಿದ್ದಾರೆ. ಸದ್ಯದ ಮಟ್ಟಿಗೆ ಇದೊಂದು ಶುಭ ಸಮಾಚಾರ.

ಈ ಎಲ್ಲ ದೃಷ್ಟಿ ಕೋನದಿಂದಲೂ ಬಳ್ಕೂರು ಕೃಷ್ಣ ಯಾಜಿ ಅವರನ್ನು ನೋಡಬೇಕಾಗಿದೆ. ಬಳ್ಕೂರು ಕೃಷ್ಣ ಯಾಜಿ ಬಡಗುತಿಟ್ಟಿನ ಶಾಸ್ತ್ರೀಯ ಯಕ್ಷಗಾನ ಕಲಾವಿದ. ಹೀಗೆ ಹೇಳಲು ಕಾರಣ ಇದೆ. ಹಿಂದೆ ಯಕ್ಷಗಾನ ಕಲಾವಿದ ಆಗಬೇಕಾದವರು ಮೊದಲು ಬಾಲಗೋಪಾಲ ವೇಷ ಮಾಡಬೇಕಿತ್ತು. ನಂತರ ಪೀಠಿಕಾ ಸ್ತ್ರೀ ವೇಷ, ಆ ನಂತರ ಒಡ್ಡೋಲಗ, ಆ ಮೇಲೆ ಪುಂಡು ವೇಷ. ಇದೆಲ್ಲಾ ತರಬೇತಿಯಾಗಿ ಬೆಳೆದರೆ ಮಾತ್ರ ಮುಖ್ಯ ವೇಷ ಸಿಗುತ್ತಿತ್ತು.

ಬಡಗುತಿಟ್ಟಿನ ಶಾಸ್ತ್ರೀಯ ಯಕ್ಷಗಾನ ಕಲಾವಿದ

ಕೃಷ್ಣ ಯಾಜಿ ಕೆರೆಮನೆ ಮೇಳದಲ್ಲಿ ಬಾಲ ಗೋಪಾಲ ಮತ್ತು ಪೀಠಿಕಾ ಸ್ತ್ರೀ ವೇಷ ಮಾಡಿದರು. ನಂತರ ಅಮೃತೇಶ್ವರಿ ಮೇಳದಲ್ಲಿ ಒಡ್ಡೋಲಗ ಪ್ರವೇಶವಾಯ್ತು. 1970ರ ದಶಕದಲ್ಲಿ ಕೆರೆಮನೆ ಮಹಾಬಲ ಹೆಗಡೆ ಅವರು ಆರಂಭಿಸಿದ ಕಾಲಮಿತಿ ಯಕ್ಷಗಾನ ಮೇಳದಲ್ಲಿ ಪುಂಡು ವೇಷ ಆಯ್ತು. ಅಲ್ಲಿಂದ ಸಾಲಿಗ್ರಾಮ ಮೇಳದಲ್ಲಿಯೂ ಇದು ಮುಂದುವರೆಯಿತು. ಆಮೇಲೆ ಮತ್ತೆ ಕೆರೆಮನೆ ಮೇಳಕ್ಕೆ ಹೋದಾಗ ಮುಖ್ಯ ವೇಷದ ರಂಗಪ್ರವೇಶ ಆಯಿತು. ಶಂಭು ಹೆಗಡೆ ಅವರ ಕೃಷ್ಣ, ಯಾಜಿ ಕೌರವ, ಯಾಜಿ ಕೃಷ್ಣ, ಶಂಬು ಹೆಗಡೆ ಕೌರವ ಹೀಗೆ ಪ್ರಮುಖ ಪಾತ್ರಗಳಲ್ಲಿ ಅವರು ಮಿಂಚಿದರು. ಯೌವನದಲ್ಲಿ ಶೃಂಗಾರ, ರೌದ್ರ, ಖಳ ಪಾತ್ರಗಳನ್ನು ಮಾಡಿ ಗೆದ್ದ ಯಾಜಿ ವಯಸ್ಸು ಮಾಗಿದ ನಂತರ ಕರುಣ ಪಾತ್ರಗಳತ್ತ ಹೊರಳಿದ್ದಾರೆ. ಒಂದು ಕಾಲದಲ್ಲಿ ಅವರು ಯಕ್ಷಲೋಕದ ನಿತ್ಯ ಕೃಷ್ಣನೂ ಆಗಿದ್ದರು.

ಈಗ ಮಾಗಿದ ಮೇಲೆ ಅವರು ರಾಮ ನಿರ್ಯಾಣದ ರಾಮ, ಲವ–ಕುಶ ಪ್ರಸಂಗದ ರಾಮ, ಪಟ್ಟಾಭಿಷೇಕದ ದಶರಥ, ಭೀಷ್ಮ ವಿಜಯ ಮತ್ತು ಪರ್ವದ ಭೀಷ್ಮ, ಕರ್ಣ ಪರ್ವದ ಕರ್ಣ ಮುಂತಾದ ಪಾತ್ರಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಇಂತಹ ಪ್ರಸಂಗ ಮಾಡಿದರೆ ಕೃಷ್ಣ ಯಾಜಿ ಅವರೇ ಬೇಕು ಎನ್ನುವ ಅಭಿಮಾನಿ ವರ್ಗವೂ ಸೃಷ್ಟಿಯಾಗಿದೆ.

ಕೆರೆಮನೆ ಮಹಾಬಲ ಹೆಗಡೆ ಅವರ ಅಪ್ಪಟ ಶಿಷ್ಯರಾಗಿರುವ ಯಾಜಿ ಕೆರೆಮನೆ ಸಂಪ್ರದಾಯವನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಬಂದಿದ್ದಾರೆ. ಕುಮಟಾ ತಾಲ್ಲೂಕಿನ ವಾಲಗಳ್ಳಿ ಗ್ರಾಮದವರಾದ ಕೃಷ್ಣ ಯಾಜಿ ಅವರದ್ದು ಅವಿಭಕ್ತ ಕುಟುಂಬ. ಭೂ ಸುಧಾರಣಾ ಕಾಯ್ದೆ ಜಾರಿಗೆ ಬರುವುದಕ್ಕೆ ಮೊದಲು ಈ ಕುಟುಂಬಕ್ಕೆ 108 ಎಕರೆ ಜಮೀನು ಇತ್ತು. ಕಾಯ್ದೆ ಜಾರಿಯಾದ ಮೇಲೆ ಉಳಿದಿದ್ದು 8 ಎಕರೆ ಮಾತ್ರ. ಮನೆಯಲ್ಲಿ 60ಕ್ಕೂ ಹೆಚ್ಚು ಜನರಿದ್ದರು. ಅದಕ್ಕೆ ಎಲ್ಲರನ್ನೂ ಓದಿಸಲು ಸಾಧ್ಯವಾಗಲಿಲ್ಲ. ಹೀಗೆ ಎಸ್‌ಎಸ್‌ಎಲ್‌ಸಿ ಮಾಡಿ ಓದು ಬಿಟ್ಟಿದ್ದು ಕೃಷ್ಣ ಯಾಜಿಗೂ ಅನುಕೂಲವಾಯಿತು. ಯಕ್ಷಗಾನ ರಂಗಕ್ಕೂ ಲಾಭವಾಯಿತು.

ಕೆರೆಮನೆ ಮಹಾಬಲಯರ ಉತ್ತರಾಧಿಕಾರಿ

ಕೆರೆಮನೆ ಮಹಾಬಲ ಹೆಗಡೆ ಅವರಲ್ಲಿ ಯಕ್ಷಗಾನ ನೃತ್ಯ ಕಲಿತ ಯಾಜಿ ಈಗಲೂ ಅವರ ಉತ್ತರಾಧಿಕಾರಿಯಂತೆಯೇ ಇದ್ದಾರೆ. ‘ಕಲಾವಿದನಿಗೆ ಅನುಕರಣೆ ತಪ್ಪಲ್ಲ. ಆದರೆ ಅನುಕರಣೆಯ ಹಂತದಲ್ಲಿಯೇ ಕಲಾವಿದ ನಿಲ್ಲಬಾರದು. ಅನುಕರಣೆ ಮೆಟ್ಟಿಲಾಗಬೇಕು. ಅದೇ ಗುರಿಯಾಗಬಾರದು’ ಎಂದು ಹೇಳುವ ಯಾಜಿ ಈಗ ತಮ್ಮದೇ ಶೈಲಿಯನ್ನು ರೂಢಿಸಿಕೊಂಡಿದ್ದಾರೆ.

ಮಹಾಬಲ ಹೆಗಡೆ ಅವರಿಗೆ ಗೌರವ ಡಾಕ್ಟರೇಟ್‌ ಬಂದಾಗ ಅವರ ಅಭಿಮಾನಿಗಳು ‘ಭೀಷ್ಮ ವಿಜಯ’ ಯಕ್ಷಗಾನ ಏರ್ಪಡಿಸಲು ಮುಂದಾದರು. ಭೀಷ್ಮನ ಪಾತ್ರವನ್ನು ತಾವೇ ಮಾಡಬೇಕು ಎಂದು ಮಹಾಬಲ ಹೆಗಡೆ ಅವರಲ್ಲಿ ಕೇಳಿಕೊಂಡರು. ಆಗ ಹೆಗಡೆ ಅವರು ‘ಈಗ ನನ್ನ ಕೈಲಿ ಭೀಷ್ಮನನ್ನು ಮಾಡಲು ಆಗುವುದಿಲ್ಲ. ನಮ್ಮ ಕೃಷ್ಣ ನನ್ನಂತೆಯೇ ಮಾಡುತ್ತಾನೆ. ಅವನಿಂದ ಮಾಡಿಸಿ’ ಎಂದರು. ಈ ಮಾತನ್ನು ನೆನಪಿಸಿಕೊಳ್ಳುವ ಯಾಜಿ ‘ಇದು ಯಾವುದೇ ಪ್ರಶಸ್ತಿಗಿಂತಲೂ ದೊಡ್ಡದು’ ಎಂದು ಭಾವುಕರಾಗುತ್ತಾರೆ.

‘ಪೌರಾಣಿಕ ಪ್ರಸಂಗದ ಭವ್ಯತೆ, ದಿವ್ಯತೆ, ರಂಗಸ್ಥಳದ ಪಾವಿತ್ರ್ಯ, ಔಚಿತ್ಯ ಪ್ರಜ್ಞೆ ಎಲ್ಲವನ್ನೂ ನಾನು ಕೆರೆಮನೆ ಮೇಳದಿಂದ ಕಲಿತಿದ್ದೇನೆ. ಯಕ್ಷಗಾನ ಕೇವಲ ಮನೋರಂಜನೆಯ ಕಲೆಯಲ್ಲ. ಅದು ಮನೋವಿಕಾಸ ಕಲೆ ಎನ್ನುವುದೂ ಅಲ್ಲಿಯೇ ಗೊತ್ತಾಯಿತು’ ಎಂದು ಅವರು ಕೃತಜ್ಞತೆಯಿಂದ ನೆನೆಯುತ್ತಾರೆ.

‘‘ಶಿವಮೊಗ್ಗದಲ್ಲಿ ಡಾ.ರತ್ನಾಕರ ಮತ್ತು ಸಂಗಡಿಗರು 24 ಗಂಟೆಯ ಯಕ್ಷಗಾನ ಏರ್ಪಡಿಸಿದ್ದರು. ಅಲ್ಲಿ ಕನಕಾಂಗಿ ಕಲ್ಯಾಣದ ಬಲರಾಮನ ಪಾತ್ರ ಮಾಡಿದ್ದೆ. ಇಡೀ ಯಕ್ಷಗಾನವನ್ನು ಮುಂದಿನ ಸಾಲಿನಲ್ಲಿಯೇ ಕುಳಿತು ನೋಡಿದ ಕೆರೆಮನೆ ಶಂಭು ಹೆಗಡೆ ಅವರು ಚೌಕಿಗೆ ಬಂದು ನನ್ನನ್ನು ಅಪ್ಪಿಕೊಂಡು ‘ಇನ್ನೇನಾದರೂ ಇಡಗುಂಜಿ ಮೇಳದ ಆಟವನ್ನು ನೋಡಬೇಕು ಎಂದರೆ ನಿನ್ನಲ್ಲಿ ಮಾತ್ರ’ ಎಂದಿದ್ದರು. ಇದನ್ನೆಲ್ಲಾ ಮರೆಯೋದು ಹೇಗೆ?’’ ಎಂದು ಅವರು ಕೇಳುತ್ತಾರೆ.

ಪೌರಾಣಿಕ ಪ್ರಸಂಗಗಳಲ್ಲದೆ ಹೊಸ ಪ್ರಸಂಗಗಳಲ್ಲಿಯೂ ಅವರ ಛಾಪು ಇದೆ. ‘ನಾಗಶ್ರೀ ಪ್ರಸಂಗ’ದ ಶಿಥಿಲ, ‘ಚಲುವೆ ಚಿತ್ರಾವತಿ’ಯ ಹೇಮಾಂಗದ, ‘ರಂಗನಾಯಕಿ’ಯ ಎಚ್ಚಮ ನಾಯಕ, ‘ಸತಿ ಸೀಮಂತಿನಿ’, ‘ಧರ್ಮ ಸಂಕ್ರಾಂತಿ’ ಮುಂತಾದ ಪ್ರಸಂಗಗಳಲ್ಲಿಯೂ ಯಾಜಿ ಮೆರೆದಿದ್ದಾರೆ.

ಲಯಸಿದ್ಧಿ, ಶ್ರುತಿ ಬದ್ಧತೆ, ಶೃಂಗಾರ, ಕರುಣ, ಭಕ್ತಿ ಮುಂತಾದ ಭಾವಗಳ ಅಭಿನಯ, ಪದ್ಯಗಳ ಎತ್ತುಗಡಿ ಎಲ್ಲದರಲ್ಲೂ ಯಾಜಿ ಸದ್ಯದ ಕಲಾವಿದರಲ್ಲಿ ಅಗ್ರಗಣ್ಯರು. ಅವರ ವಿಶೇಷತೆ ಎಂದರೆ ನಿಜ ಜೀವನಕ್ಕೆ ಹತ್ತಿರವಾಗುವ ಮಾತುಗಳನ್ನು ಪೋಣಿಸುವುದು. ಸದ್ಯದ ರಾಜಕೀಯ, ಸಾಮಾಜಿಕ ಸ್ಥಿತಿಗಳನ್ನು ರಂಗದ ಚೌಕಟ್ಟಿನ ಒಳಗೇ ವಿಮರ್ಶಿಸುವುದು ಅವರ ಹೆಚ್ಚುಗಾರಿಕೆ. ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯ ಬಗ್ಗೆ ಅವರು ಯಕ್ಷಗಾನದ ರಾಮನಾಗಿ ‘ಬೀಜ ಕೊಟ್ಟು, ಗೊಬ್ಬರ ಕೊಟ್ಟು ಜನರು ತಮ್ಮ ಅನ್ನವನ್ನು ತಾವೇ ಬೆಳೆಯುವಂತೆ ಮಾಡುವ ರಾಜ ನಾನು. ಅಕ್ಕಿ ಕೊಟ್ಟು ಬೆಳೆಯುವುದನ್ನು ಮರೆಸುವ ರಾಜನಲ್ಲ’ ಎಂದು ಹೇಳಿದಾಗ ಪ್ರೇಕ್ಷಕರ ಚಪ್ಪಾಳೆ ಸುರಿಮಳೆಯಾಗುತ್ತದೆ.

ಕೃಷ್ಣ ಯಾಜಿ ಒಂದರ್ಥದಲ್ಲಿ ನಿಜವಾದ ಜನಪದ ಕಲಾವಿದ. ‘ನೀವು ಪಾತ್ರವನ್ನು ಕಟ್ಟುವ ಪರಿ ಹೇಗೆ?’ ಎಂದು ಪ್ರಶ್ನೆ ಮಾಡಿದರೆ ಅವರಿಗೆ ಥಟ್ಟನೆ ಉತ್ತರ ಹೇಳಲು ಬರುವುದಿಲ್ಲ. ರಂಗದಲ್ಲಿ ದಶರಥನನ್ನೋ, ರಾಮನನ್ನೋ, ಕರ್ಣನನ್ನೋ ಕಟ್ಟುವ ಕಲೆಯನ್ನು ನೋಡಿಯೇ ತಿಳಿದುಕೊಳ್ಳಬೇಕು. ತನ್ನ ಮಗನನ್ನು ಕಳೆದುಕೊಂಡ ಕರ್ಣ ಕುರುಕ್ಷೇತ್ರದಲ್ಲಿ ಮಗನ ಹೆಣದ ಮುಂದೆ ಕುಳಿತು ‘ನೀನು ನನಗೆ ತರ್ಪಣ ಬಿಡಬೇಕಿತ್ತು. ನನಗಿಂತ ಮೊದಲೇ ಹೋದ ನಿನಗೆ ನಾನು ತಿಲದ ತರ್ಪಣ ಬಿಡಲು ಸಾಧ್ಯವಿಲ್ಲ. ಆದರೆ ರಕ್ತದ ತರ್ಪಣ ಬಿಡಬಲ್ಲೆ’ ಎನ್ನುವಾಗ ಪ್ರೇಕ್ಷಕರ ಕಣ್ಣಂಚಿನಲ್ಲಿಯೂ ನೀರು ಹರಿಯುತ್ತದೆ.

ಯುದ್ಧಕ್ಕೆ ಹೊರಟು ನಿಂತ ಸುಧನ್ವ ತನ್ನ ತಂಗಿ, ತಾಯಿ ಮತ್ತು ಪತ್ನಿಯ ಜೊತೆ ಮಾತನಾಡಬೇಕಾಗುತ್ತದೆ. ಆಗ ತಂಗಿಗೆ ಅಣ್ಣನಾಗಿ, ತಾಯಿಗೆ ಮಗನಾಗಿ, ಪತ್ನಿಗೆ ಗಂಡನಾಗಿ ನಟಿಸುವ ಅವರ ಪರಿ ವಿಶೇಷ. ಅದು ಅವರಿಗೆ ಒಲಿದ ಕಲೆ.

ರ೦ಗದ ರಾಜನ ಬೆನ್ನೆಲುಬಾಗಿದ್ದಾರೆ ಪತ್ನಿ ಶಾ೦ತಿ

‘ಕಲಾವಿದ ತನ್ನ ದೋಷವನ್ನು ತಾನು ತಿಳಿದಾಗ ರಂಗದಲ್ಲಿ ಹೆಚ್ಚು ಕಾಲ ಬದುಕುತ್ತಾನೆ’ ಎಂದು ಅವರು ಯಾವಾಗಲೂ ಹೇಳುತ್ತಾರೆ. ಯಾಜಿ ಅವರಿಗೆ ತಮ್ಮ ದೋಷ ಮತ್ತು ಶ್ರೇಷ್ಠತೆ ಎರಡೂ ಗೊತ್ತಿದೆ. ಅದಕ್ಕೇ ಅವರು ಇನ್ನಷ್ಟು ಕಾಲ ರಂಗದ ರಾಜನಾಗಿಯೇ ಇರುತ್ತಾರೆ. 40 ವರ್ಷದಿಂದ ಯಕ್ಷರಂಗದಲ್ಲಿಯೇ ಇರುವ ಕೃಷ್ಣ ಯಾಜಿ ಅವರ ಯಶಸ್ಸಿನ ಹಿಂದೆ ಅವರ ಪತ್ನಿ ಶಾಂತಿ ಕೊಡುಗೆ ಬಹಳ ಇದೆ. ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಮೂವರು ಮೊಮ್ಮಕ್ಕಳಿದ್ದಾರೆ. ಒಬ್ಬ ಮೊಮ್ಮಗ ಈಗಾಗಲೇ ರಂಗದಲ್ಲಿ ದೂಳು ಹಾರಿಸುತ್ತಿದ್ದಾನೆ.

ರಾಜನಾಗಿ ರಂಗದಲ್ಲಿ ಯಾಜಿ ಹೇಳುವ ಮಾತು ‘ಮಗಳನ್ನು ಕೊಟ್ಟು ಮಗನನ್ನು ಪಡೆದೆ’ ಎಂದು. ನಿಜ ಜೀವನದಲ್ಲಿಯೂ ಅವರು ಅಳಿಯಂದಿರ ಬಗ್ಗೆ ಇದೇ ಮಾತನ್ನು ಹೇಳುತ್ತಾರೆ. ಯಾಜಿ ಪತ್ನಿ ಶಾಂತಿ ಅವರಿಗೆ ಆಸ್ತಿ, ಒಡವೆ ಒಂದೂ ಬೇಕಿಲ್ಲವಂತೆ. ಯಾರಾದರೂ ಅಭಿಮಾನಿಗಳು ಇಂದು ಯಾಜಿ ಅವರ ಪಾತ್ರ ಅದ್ಭುತವಾಗಿತ್ತು ಎಂದರೆ ಅವರಿಗೆ 10 ಗ್ರಾಂ ಚಿನ್ನ ಪಡೆದಷ್ಟು ಖುಷಿಯಂತೆ. ಯಾಜಿ ಈಗ 60ರಲ್ಲಿ ಕಾಲಿಟ್ಟಿದ್ದಾರೆ. ಕಲಾವಿದನಾಗಿ ಇನ್ನಷ್ಟು ಮಾಗಿದ್ದಾರೆ. ಗಟ್ಟಿಯಾಗಿದ್ದಾರೆ. ಇನ್ನು ಮುಂದೆ ಶಾಂತಿ ಅವರಿಗೆ ದಿನವೂ 100 ಗ್ರಾಂ ಚಿನ್ನ ಸಿಗಬಹುದು.

*********************
ಕೃಪೆ : prajavani


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ